Share

ಅಡಿಕೆ ಚಪ್ಪರದ ನೆನಪಾಗಿ…
ಎಲ್‌ ಸಿ ಸುಮಿತ್ರ

ಭೂಮಿ ಹುಣ್ಣಿಮೆಯ ದಿನ ಅಮ್ಮನ ಮನೆಗೆ ಹೋಗಿದ್ದೆ. ಭೂಮಿ ಹುಣ್ಣಿಮೆಗಾಗಿಯೆ ಮಾಡುವ ಕೆಸುವಿನ ಕೊಟ್ಟೆಕಡುಬು ವರ್ಷ ಕ್ಕೊಮ್ಮೆಯೆ ತಿನ್ನಲು ಸಿಗುವುದು. ಅಡಿಕೆ ಕೊಯಿಲು ನಡೆದಿತ್ತು. ಆದರೆ ಪ್ರತಿವರ್ಷ ಮನೆಯ ಮುಂದಿರುತ್ತಿದ್ದ ಅಡಿಕೆ ಚಪ್ಪರ ಮಾತ್ರ ಇರಲಿಲ್ಲ. ಏನೋ ಖಾಲಿ ಆದ ಅನುಭವ. ಅಂಗಳದ ನೆಲದ ಮೇಲೆ, ಕಬ್ಬಿಣದ ಟ್ರೇ ಗಳಲ್ಲಿ ಅಡಿಕೆ ಒಣಗಿಸಿದ್ದರು.

ಮಲೆನಾಡಿನ ರೈತರ ಮನೆಯಂಗಳದ ಅವಿಭಾಜ್ಯ ಅಂಗವಾಗಿ ಇತ್ತೀಚಿನವರೆಗೂ ಅಡಿಕೆ ಒಣಗಿಸುವ ಚಪ್ಪರ ವರ್ಷದ ಆರು ತಿಂಗಳೂ ಇರುತ್ತಿತ್ತು. ವಿಜಯದಶಮಿಯ ಸಮಯದಲ್ಲಿ ಈ ಚಪ್ಪರ ಮೇಲೆರಿದರೆ ಮತ್ತೆ ಮೇ ತಿಂಗಳ ಕೊನೆಯವರೆಗೂ ಅಂಗಳಕ್ಕೆ ನೆರಳಾಗಿರುತ್ತಿತ್ತು. ಮದುವೆಯಂತಹ ಮಂಗಳ ಕಾರ್ಯಗಳು ಈ ಚಪ್ಪರದ ಕೆಳಗೆ ನಡೆಯುತ್ತಿದ್ದವು. ಅಡಿಕೆ ಕೊಯಿಲು ಮುಗಿದ ಮೇಲೆ ಸೀಗೆ ಕಾಯಿ, ಅಂಟುವಾಳ ಕಾಯಿ, ಗೇರುಬೀಜ, ವಾಟೆ ಹುಳಿ,ಜೀರಕನ ಹುಳಿ , ಏಲಕ್ಕಿ, ಕಾಳು ಮೆಣಸು, ಕಾಫೀಬೀಜ ಒಣಗಿಸಲು ಈ ಚಪ್ಪರ ಅನುಕೂಲವಾಗಿರು ತಿತ್ತು. ಚಪ್ಪರದ ಆದಾರ ಸ್ಥಂಭಗಳಾಗಿ ಕಲ್ಲು ಕಂಬಗಳು ಪರ್ಮನೆಂಟಾಗಿ ಅಂಗಳದಲ್ಲಿ ನಿಂತಿರುತ್ತಿದ್ದವು. ಮಳೆಗಾಲದಲ್ಲಿ ಪ್ರತಿ ಕಂಬದ ಬುಡದಲ್ಲಿ ಒಂದು ಡೇರೆ ಗಿಡ ಹೂವರಳಿಸುತ್ತಿತ್ತು. ಅಡಿಕೆ ಒಣಗಿಸಲು ಚಪ್ಪರ ಹಾಕುವಾಗಲೇ ಅಡಿಕೆಗೆ ಬಣ್ಣ ಕಟ್ಟುವ ಚೊಗರು ಎಂಬ ಬಣ್ಣವೂ ನೇರಿಳೆ ಮರದ ತೆಪ್ಪೆಯನ್ನು ನೆನೆಸಿ ಬೇಯಿಸಿ ತಯಾರಿಸಲ್ ಪಡುತ್ತಿತ್ತು. ಒಣಗಿಸಲು ಬೇಕಾದ ಬಿದಿರಿನಿಂದ ಮಾಡಿದ ತಟ್ಟಿಗಳು ಪೇಟೆಯಿಂದ ಬರುತ್ತಿದ್ದವು. ಕೆಲವರು ತಾವೇ ವಾಟೆಬಿದಿರಿನಿಂದ ತಟ್ಟಿ ನೇಯುತ್ತಿದ್ದರು. ನಮ್ಮಮನೆ ಹತ್ತಿರ ಹೀಗೆ ತಟ್ಟಿ ಮಾಡುವವರೊಬ್ಬರು ತೆಲ್ಲನೆ ಬಿದಿರು ಸಲಕಿನಿಂದ ಬುಟ್ಟಿಯನ್ನು ಮಾಡುತ್ತಿದ್ದರು. ಆ ಹೆಣಿಗೆ ಮಾಡಲು ಆಸೆಯಾಗಿ ನಾವೂ ನಾನೂ ಹೆಣೀತೇನೆ ಎಂದು ಪೈಪೋಟಿಯಿಂದ ಮಾಡುತ್ತಿದ್ದೆವು. ಹಸಿ ಬಿದಿರಿನಿಂದಲೇ ಈ ತಟ್ಟಿ ಬುಟ್ತಿಗಳೆಲ್ಲ ಆಗಬೇಕಿತ್ತು . ಒಣ ಬಿದಿರು ಈ ಯಾವ ಕೆಲಸಕ್ಕೂಬರುತ್ತಿರಲಿಲ್ಲ.ಹೀಗೆ ಹಸಿ ಬಿದಿರಿನ ತಟ್ಟಿಗಳು ಕೆಳಭಾಗದಲ್ಲಿ ಹಸಿರು ಬಣ್ಣ ಮೇಲ್ಭಾಗದಲ್ಲಿ ಹಳದೀ ಚಾಯೆಯ ಬಿಳೀ ಬಣ್ಣ ಹೊಂದಿರುತ್ತಿದ್ದವು. ಹಸಿ ಬಿದಿರಿನ ಪರಿಮಳ ಬೇರೆ ಇರುತ್ತಿತ್ತು.

ಬದಲಾವಣೆ ಅನಿವಾರ್ಯ ವೆಂಬಂತೆ ಕೃಷಿಕಾರ್ಮಿಕರ ಅಭಾವದಿಂದಾಗಿ ಈ ಚಪ್ಪರ ಗತಕಾಲದ ವೈಭವವಾಗಿದೆ. ಚಪ್ಪರ ಏರಿಸಲು ಕೆಲಸದವರಿಗೆ ಕೊಡುವ ಹಣ ಜಾಸ್ತಿ, ಸಮಯಕ್ಕೆ ಜನ ಸಿಗುವುದೂ ಇಲ್ಲ. ಎಂಬ ಕಾರಣಗಳ ಜತೆಗೆ ಬೇಯಿಸಿದ ಅಡಿಕೆಯನ್ನು ಚಪ್ಪರಕ್ಕೆ ಸಾಗಿಸುವುದೂ ಒಣಗಿದ ಮೇಲೆ ಕೆಳಗೆ ತರುವುದೂ ಶ್ರಮದಾಯಕ ಕೆಲಸಗಳು. ಈ ರಗಳೆಯೇ ಬೇಡವೆಂದು ಅಡಿಕೆ ಒಣಗಿಸಲು ಕಾಲಿರುವ ಕಬ್ಬಿಣದ ತಟ್ಟಿಗಳನ್ನು ತಯಾರಿಸಿ ಅವುಗಳನ್ನು ಅಂಗಳದ ನೆಲದ ಮೇಲೆ ಇರಿಸಿ ಅಡಿಕೆ ಒಣಗಿಸುತ್ತಾರೆ, ಯಂತ್ರದಲ್ಲಿ ಅಡಿಕೆ ಸುಲಿಯುವುದರಿಂದ ಅದನ್ನು ಎರಡು ಹೋಳು ಮಾಡುವುದಿಲ್ಲ. ಹೀಗೆ ಹೋಳು ಮಾಡಲು ಮತ್ತೆ ಕೆಲಸಗಾರರು ಬೇಕು. ಬೆಲೆ ಕಡಿಮೆಯಾದರೂ ಪರವಾಗಿಲ್ಲ ಎಂದು ಉಂಡೆಯಾಗಿಯೇ ಬೇಯಿಸುತ್ತಾರೆ.

ಈ ಅಡಿಕೆ ಚಪ್ಪರ ನನ್ನ ಬಾಲ್ಯದ ಹಲವು ಸ್ಮೃತಿಗಳನ್ನು ಒಳಗೊಂಡಿದೆ. ಅಲ್ಲಿ ಒಣಗಿಸಲು ಹಾಕಿದ ಜೀರ್ಕನ ಹುಳಿಯನ್ನು ತಿನ್ನಲು, ಅಥವ ಜೀರ್ಕನ ಹಣ್ಣಿಗೆ ಬೆಲ್ಲ ಜೀರಿಗೆ ಮೆಣಸು ಸೇರಿಸಿ ತಿನ್ನಲು, ಮನೆಯಾಟ ಆಡಲು , ಒಂದು ಬದಿಯಲ್ಲಿ ಬೀಳುತ್ತಿದ್ದ ಮಾವಿನ ಮರದ ನೆರಳಲ್ಲಿ ಕುಳಿತು ಕಥೆಪುಸ್ತಕ ಓದಲು, ಹೀಗೆ ಚಪ್ಪರದ ಮೇಲಿನ ಪ್ರಪಂಚ ಒದಗುತ್ತಿತ್ತು. ಚಪ್ಪರದ ಕೆಳಗೆ ಕಟ್ಟಿದ ಜೋಕಾಲೆ [ಜೋಕಾಲಿ ಅಥವಾ ಉಯ್ಯಾಲೆ] ಕುಳಿತು ಜೀಕಿಕೊಳ್ಳಲು ಮಂಗಾಟ ಆಡಲು ಆಗುತ್ತಿತ್ತು. ಚಳಿಗಾಲದ ಬಿಸಿಲಿನ ಬಲೆಬಲೆ ನೆರಳು ಸೆಗಣಿ ಸಾರಿಸಿದ ಅಂಗಳದಲ್ಲಿ ಚಿತ್ರ ಬರೆದಂತಿರುತ್ತಿತ್ತು. ಅಡಕೆ ಸುಲಿಯಲು ಬರುತ್ತಿದ್ದ ಎಂಕಕ್ಕ ,ಚೆನ್ನಿ , ಊರ ಸುದ್ದಿ ಹಳೆಕಾಲದ ನೆನಪುಗಳನ್ನು ಅಜ್ಜನ ಬಳಿ ಆಡುತ್ತಿದ್ದುದು ಹೋಮ್‌ವರ್ಕ್ ಮಾಡುತ್ತಿದ್ದರೂ ಕಿವಿ ಮೇಲೆ ಬೀಳುತ್ತಿತ್ತು. ಡಿಸೆಂಬರ್ ತಿಂಗಳ ಚಳಿರಾತ್ರಿಯಲ್ಲಿ ಮಧ್ಯೆ ಬೆಂಕಿ ಉರಿಯುತ್ತಿದ್ದರೆ ಸುತ್ತಲೂ ಅಡಿಕೆ ಸುಲಿಯುವವರು ಕುಳಿತು ಹಾಡು ಕಥೆ ಹೇಳಿಕೊಂಡು ಬೇಸರ ಕಳೆಯುತ್ತಾ ಅಡಿಕೆ ಸುಲಿಯು ತ್ತಿದ್ದರು. ಮಧ್ಯಾಹ್ನ ಬಂದವರಿಗೆ ಸಾಯಂಕಾಲ ಕಾಫಿ, ಸಂಜೆ ಬಂದು ರಾತ್ರಿಯವರೆಗೆ ಸುಲಿಯುವವರಿಗೆ ರಾತ್ರಿ ಒಂಬತ್ತಕ್ಕೆ ತಿಂಡಿ ಕಾಫಿ ಸರಬರಾಜಾಗುತ್ತಿತ್ತು. ಆಮೇಲಾಮೇಲೆ ಟಿ ವಿ ನೋಡುತ್ತಾ ಸುಲಿತ ನಡೆಯಿತು. ಈಗ ಅಡಿಕೆ ಸುಲಿಯಲು ಜನವಿಲ್ಲದೆ ಯಂತ್ರದ ಮೊರೆ ಹೋಗಬೇಕಾಗಿದೆ. ಸಮುದಾಯದ ಬದುಕು ಕಳೆದು ಹೋಗಿದೆ. ಹಳ್ಳಿಯ ಮನೆಗಳಲ್ಲಿದ್ದ ಅಜ್ಜ ಅಜ್ಜಿಯರಿಗೆ ಅಡಿಕೆ ಕೊಯಿಲಿನ ಕಾಲ ಸಂಭ್ರಮದ ಕಾಲವಾಗಿತ್ತು. ಕೊಯಿಲಿನ ಮೂರ್ನಾಲ್ಕು ತಿಂಗಳು ಅಂಗಳದಲ್ಲಿ ಜನವಿದ್ದೇ ಇರುತ್ತಿದ್ದರು. ಕಷ್ಟ ಸುಖ ಹಂಚಿಕೊಳ್ಳಲು, ಹರಟೆ ಹೊಡೆಯಲು, ಊರ ಸುದ್ಧಿ ತಿಳಿಯಲು ಸಹಾಯಕವಾಗಿರುತ್ತಿತ್ತು.

ಟಿ ವಿ ಇಲ್ಲದೇ ಇದ್ದುದರಿಂದ ಮನುಷ್ಯಸಂಬಂಧಗಳು ಸಮೀಪವಾಗಿದ್ದವು. ಮಧ್ಯಾಹ್ನ ಊಟದ ನಂತರ ಸುತ್ತಮುತ್ತಲಿಂದ ಕೆಲವು ಹೆಂಗಸರು ಅಡಿಕೆ ಸುಲಿಯಲು ಬರುತ್ತಿದ್ದರು. ಅವರ ಮನೆಯಲ್ಲೂ ಸ್ವಲ್ಪ ತೋಟ ಗದ್ದೆ ಇದ್ದರೂ ಹೀಗೆ ಅಡಿಕೆ ಸುಲಿದು ಗಳಿಸುವ ಹಣ ಕೈಖರ್ಚು ಗಳಿಗೆ ಒದಗುತ್ತಿತ್ತು. ಅದು ಬರೀ ಕೆಲಸವೂ ಆಗಿರುತ್ತಿರಲಿಲ್ಲ, ಆ ಮನೆಯ ಜನಗಳ ಜತೆ ವಿಚಾರ ವಿನಿಮಯ ಕಷ್ಟ ಸುಖಗಳ ಮಾತುಕಥೆ ಆಗಿರುತ್ತಿತ್ತು. ಹಾಡು, ಕಥೆಗಳ ಮನರಂಜನೆಯೂ ಆಗಿರುತ್ತಿತ್ತು. ಸೆಗಣಿಯಿಂದ ಸಾರಿಸಿದ ಅಂಗಳದ ನೆಲ ರಂಗೋಲಿಯಿಂದ ಅಲಂಕೃತವಾಗಿರುತ್ತಿತ್ತು. ಹಸಿ ಅಡಕೆ ಸಿಪ್ಪೆಯ ಗಂಧ, ಬೇಯುತ್ತಿದ್ದ ಅಡಕೆಯ ಚೊಗರಿನ ಪರಿಮಳಗಳಿಂದ ಚಳಿಗಾಲದ ಬೆಳಗುಗಳು ಆಪ್ಯಾಯಮಾನವಾಗಿರುತ್ತಿದ್ದವು. ದಿಸೆಂಬರ್, ಜನವರಿಯ ಚಳಿಗಾಲದ ರಾತ್ರಿ ಚಳಿ ತಡೆಯಲಾಗದೆ ಅಂಗಳದ ಮಧ್ಯೆ ಬೆಂಕಿ ಉರಿಸಿ ಸುತ್ತಲೂ ಅಡಿಕೆ ಸುಲಿಯಲು ಕುಳಿತುಕೊಳ್ಳುತ್ತಿದ್ದರು.ನೋಡಲು ಅದೊಂದು ಖುಷಿಯ ದೃಶ್ಯವಾಗಿತ್ತು. ರಾತ್ರಿ ಹನ್ನೊಂದು, ಹನ್ನೆರಡು ಗಂಟೆಯವರೆಗೆ ಅಡಿಕೆ ಸುಲಿದವರು ಅಡಿಕೆ ಸಿಪ್ಪೆಯ ರಾಷಿಯನ್ನು ಕುಳಿತಲ್ಲೆ ಬಿಟ್ಟು ಹೋಗಿರುತ್ತಿದ್ದರು. ಬೆಳಿಗ್ಗೆ ಮೊದಲು ಮಾಡುವ ಕೆಲಸ ಸಿಪ್ಪೆಯಲ್ಲಿ ಅಡಿಕೆ ಕಾಯಿಗಳು,ಸುಲಿಯುವವರ ಕೈತಪ್ಪಿ ಬಿದ್ದ ಸುಲಿದ ಅಡಕೆಗಳು ಇವೆಯೆ ಎಂದು ನೋಡಿ ಸಿಪ್ಪೆಯನ್ನು ಬುಟ್ಟಿಗೆ ತುಂಬಿ ಎಸೆಯುವುದು. ಈ ಕೆಲಸದಲ್ಲಿ ನಾವೂ ಸಹಾಯ ಮಾಡುತ್ತಿದ್ದೆವು. ಅಡಕೆ ಕೊಯಿಲಿನ ಸಮಯದಲ್ಲಿ ಹೀಗೆ ಒಂಟಿಮನೆಗಳ ಏಕಾಂತ ಸ್ವಲ್ಪ ಕಡಿಮೆಯಾಗುತ್ತಿತ್ತು. ಈಗ ಸುಲಿಯುವ ಯಂತ್ರವನ್ನು ನಿರ್ವಹಿಸಲು ಇಬ್ಬರು ಸಾಕು. ಚಪ್ಪರವೇ ಇಲ್ಲದಿರುವುದರಿಂದ ಚಪ್ಪರದ ನೆರಳಲ್ಲಿ ಕುಳಿತು ಮಾತುಕತೆಯಾಡುವುದು ಇಲ್ಲವೇ ಇಲ್ಲ.

ಹಸಿರು ಸೆಗಣಿಗೆ ಸುಟ್ಟ ಕರಿ ಮಿಶ್ರ ಮಾಡಿ ಬಳಿದ ಅಂಗಳದಲ್ಲಿನ ಬಿಳಿಯ ರಂಗೋಲಿಯ ಚಿತ್ರದ ಮೇಲೆ ಬಿಸಿಲ ಕೋಲುಗಳು, ಗೆರೆಗೆರೆಯಾಗಿ ವಿನ್ಯಾಸಗಳನ್ನು ರಚಿಸಿದಂತೆ ಕಾಣುತ್ತಿದ್ದವು. ಆ ನೆರಳು ಬೆಳಕಿನ ಅಂಗಳದಲ್ಲಿ ಕಂಬದಾಟ, ಕುಂಟಾಪಿಲ್ಲಿ ಗಳು ನಡೆಯುತ್ತಿದ್ದವು. ಆಗ ಡಿಸೆಂಬರ್ ಕೊನೆವಾರ ಕ್ರಿಸ್‌ಮಸ್ ರಜೆಯಿರುತ್ತಿತ್ತು. ಅಂಗಳದಲ್ಲಿ ಅಡಿಕೆಕೊಯಿಲಿನ ಸಡಗರವಿರುತ್ತಿತ್ತು. ಚಳಿಗಾಲ ಮುಗಿಯುವುದರ ಜತೆಗೆ ಅಡಿಕೆ ಕೊಯಿಲೂ ಮುಗಿಯುತ್ತಿತ್ತು. ಫೆಬ್ರವರಿಯ ನಂತರ ಚಪ್ಪರದ ಮೇಲೆ ಒಣಗಲು ಹಾಕಿದ್ದ ಹಣ್ಣಡಕೆಗಳು ಒಂದೆಡೆಯಾದರೆ ಇನ್ನುಳಿದ ಜಾಗದಲ್ಲಿ ಹೆಚ್ಚಿದ ವಾಟೆ ಹುಳಿ, ಜೀರ್ಕದ ಹಣ್ಣು, ಸೀಗೆ ಕಾಯಿ, ಕಾಳುಮೆಣಸು, ಏಲಕ್ಕಿ, ಬೇಸಿಗೆಯ ಕೊನೆಗೆ ಗೇರುಬೀಜ, ಬಾಳೇಕಾಯಿ ಹಪ್ಪಳ, ಹಲಸಿನಹಪ್ಪಳ, ಅಕ್ಕಿ ಹಪ್ಪಳ, ಗೆಣಸಿನ ಹಪ್ಪಳ, ಹೀಗೆ ತರಹೆವಾರಿ ವಸ್ತುಗಳು ಇರುತ್ತಿದ್ದವು. ಚಪ್ಪರ ಏರಿದರೆ ತಿನ್ನಲು ಏನಾದರೊಂದು ವಸ್ತು ಸಿಗುತ್ತಿತ್ತು . ಅರ್ಧ ಒಣಗಿದ ಜೀರ್ಕದ ಹಣ್ಣಿನ ಹೋಳು ಅಥವ ಹಲಸಿನ ಹಪ್ಪಳ, ಹಣ್ಣಾದ ಹಲಸಿನ ಹಪ್ಪಳವಾದರೆ ಇನ್ನೂ ಖುಷಿ. ಚೂಯಿಂಗ್ ಗಮ್ ತರಹ ನಿಧಾನವಾಗಿ ಅಗಿದಗಿದು ತಿನ್ನುತ್ತಿದ್ದೆವು. ಚಪ್ಪರದ ಕೆಳಗೆ ದಪ್ಪ ಹಗ್ಗದಿಂದ ಕಟ್ಟಿದ ಜೋಕಾಲಿ. ಒಬ್ಬರು ಇಳಿದ ನಂತರ ಇನ್ನೊಬ್ಬರು ಕುಳಿತು ಜೀಕುವುದು ಮನೆಯ ಹಿರಿಯರು ಯಾರಾದರೂ ಬೈದು ಕರೆಯುವವರೆಗೂ ನಡೆದೇ ಇರುತ್ತಿತ್ತು. ಬೇಸಿಗೆ ರಜೆಯ ಮಧ್ಯಾಹ್ನಗಳು ತಣ್ಣನೆಯ ಅಂಗಳದಲ್ಲಿ ಕುಳಿತು ಚೆನ್ನೆಮಣೆ ಅಥವಾ ಚೌಕಾಭಾರ ಆಡುತ್ತಿದ್ದೆವು. ಆ ಜಾಗ ಮನೆಯ ಒಳಗೂ ಅಲ್ಲ ಹೊರಗೂ ಅಲ್ಲದ ಒಂದುಬಗೆಯಲ್ಲಿ ಮಕ್ಕಳ ಆಟಕ್ಕೆಂದೇ ಹೇಳಿ ಮಾಡಿಸಿದ ಜಾಗವಾಗಿತ್ತು. ತೋಟದಿಂದ ಅಡಿಕೆಗೊನೆ ತುಂಬಿದ ಗಾಡಿ ಬಂದಾಗ ಗೊನೆಗಳನ್ನು ಇಳಿಸಿ ವೃತ್ತಾಕಾರವಾಗಿ ಜೋಡಿಸಲೂ ಸಹಾಯ ಮಾಡುತ್ತಿದ್ದೆವು.

a2

ದೀಪಾವಳಿಯ ಮಧ್ಯಾಹ್ನ ಅಥವಾ ರಾತ್ರಿ ಬರುತ್ತಿದ್ದ ಕೋಲಾಟದವರೂ ಇದೇ ಚಪ್ಪರದ ಕೆಳಗೆ ವೃತ್ತಾಕಾರದಲ್ಲಿ ಕೋಲಾಟವಾಡುತ್ತಿದ್ದರು. ಮನೆಯ ಹಿರಿಯರ ವಂಶಾವಳಿಯನ್ನು ಹೇಳುವ ಹಾಡಿಗೆ ಕೋಲುಹಾಕುತ್ತಾ ಹೆಜ್ಜೆ ಹಾಕುತ್ತಿದ್ದರು. ಅಂಟಿಗೆ ಪಂಟಿಗೆಯವರೂ ಬಾಗಿಲು ತೆರೆದು ಜ್ಯೋತಮ್ಮನನ್ನು ಒಳಗೆ ಕರೆದುಕೊಳ್ಳುವವರೆಗೆ ಚಪ್ಪರದ ಕೆಳಗೇ ಹಾಡುತ್ತ ನಿಂತಿರುತ್ತಿದ್ದರು.

ಮನೆಯವರ ಆರ್ಥಿಕ ಸ್ಥಿತಿಯೂ ಚಪ್ಪರದ ಕಂಬಗಳ ಸಂಖ್ಯೆಯ ಮೇಲೆ ನಿರ್ಧಾರವಾಗುತ್ತಿತ್ತು. ಕಂಬಗಳ ಸಂಖ್ಯೆ ಜಾಸ್ತಿಯಿದ್ದು ಚಪ್ಪರ ದೊಡ್ದದಿದ್ದಷ್ಟೂ ಆದಾಯ ಜಾಸ್ತಿಯಿದೆ ಎಂದು ಭಾವಿಸಲಾಗುತ್ತಿತ್ತು.

ಬೇಸಿಗೆಯಲ್ಲಿ ಮದುವೆಗಳು ನಡೆಯುವ ಸಮಯದಲ್ಲಿ ಈಗಿನಂತೆ ಪೇಟೆಯ ಕಲ್ಯಾಣ ಮಂಟಪ ಹುಡುಕಿ ಹೋಗದೆ ಮನೆಯಂಗಳದ ಚಪ್ಪರದ ಕೆಳಗೇ ಮಂಟಪ ರೆಡಿಯಾಗುತ್ತಿತ್ತು. ಚಪ್ಪರದ ಅಡಿಕೆ ದಬ್ಬೆಗಳು ಕಾಣಬಾರದೆಂದು ಕೆಳಗಿನಿಂದ ಬಿಳಿ ಬಟ್ಟೆಯನ್ನೂ ಕಟ್ಟುತ್ತಿದ್ದರಂತೆ. ನಾನು ಅದನ್ನು ನೋಡಿಲ್ಲ. ಆದರೆ ಚಪ್ಪರದ ಕೆಳಭಾಗಕ್ಕೆ ಮಾವು, ಹಲಸು ಎಲೆಗಳೂ, ಬಾಳೆಗೊನೆಗಳೂ ಕಟ್ಟಿ ಸುಂದರವಾಗಿ ಕಾಣುತ್ತಿದ್ದುದನ್ನೂ ನೋಡಿದ್ದೇನೆ. ಬೇಸಿಗೆಯಲ್ಲೇ ಮದುವೆಗಳಾಗುತ್ತಿದ್ದುದರಿಂದ ಮೇಫ್ಲವರ್ ಹೂಗಳೂ ಚಪ್ಪರದ ಕೆಳಗೆ ತೂಗುತ್ತಿದ್ದವು. ನೆಲದ ಮೇಲೆ ಸೀಳಿದ ಅಡಕೆ ಮರಗಳನ್ನು ಹಾಸಿ ಸಾಲಾಗಿ ಕುಳಿತುಕೊಳ್ಳಲು ಅನುವು ಮಾಡಿ ಮದುವೆ ಊಟಗಳೂ ನಡೆಯುತ್ತಿದ್ದವು.

ಅಡಿಕೆ ಚಪ್ಪರದ ಕೆಳಗೆ ಬರೀ ಸಂತಸ ಮಾತ್ರವಲ್ಲ, ದುಗುಡ ಕೋಪ ತಾಪಗಳೂ ಇರುತ್ತಿದ್ದವು. ಸುಲಿತದ ಬೇಸರ ಕಳೆಯಲು ಹಾಡು ಕಥೆಗಳ ಜತೆಗೆ ಗಾಸಿಪ್ ಗಳೂ ಇರುತ್ತಿದ್ದವು. ಇದ್ದಕ್ಕಿದ್ದಂತೆ ಜಗಳವೊಂದು ಹುಟ್ಟಿ ಸ್ಫೋಟಿಸುತ್ತಿತ್ತು. ಒಮ್ಮೆ ಬಂಧುವೊಬ್ಬರ ಮನೆಗೆ ಹೋಗಿದ್ದಾಗ ಮದುವೆ ವಯಸ್ಸಿನ ಮಗಳ ಮೇಲೆ ತನ್ನ ಕೋಪವನ್ನು ಕಾರಿಕೊಳ್ಳುತ್ತಿದ್ದ ದುಷ್ಟ ತಂದೆ ಅವಳ ಜಡೆ ಹಿಡಿದು ಜಗ್ಗಿಸಿ ಅವಳ ತಲೆಯನ್ನು ಚಪ್ಪರದ ಕಂಭಕ್ಕೆ ಹೊಡೆಸಿ ಘಾಸಿಗೊಳಿಸಿದ್ದನ್ನು ನೋಡಿ ಅಲ್ಲಿಂದ ಓಡಿದ್ದೆ. ಮತ್ತೆ ಆ ಕಡೆ ತಲೆ ಹಾಕಲಿಲ್ಲ.

a3

ಮಕ್ಕಳು ಕೇಳಬಾರದೆಂದು ಹಿರಿಯರು ಭಾವಿಸಿದ್ದ ಕೆಲವು ವಿಷಯಗಳೂ ಚಪ್ಪರದ ಕೆಳಗೆ ಚರ್ಚಿಸಲ್ಪಡುತ್ತಿದ್ದವು. ನಾವೇನಾದರೂ ತಪ್ಪಿ ಆ ಕಡೆಗೆ ಸುಳಿದರೆ ಅಲ್ಲಿಂದ ಸಾಗಹಾಕುತ್ತಿದ್ದರು. ಚಪ್ಪರದ ಮೇಲೆ ಒಣಗಲು ಹರವಿದ್ದ ಅಡಕೆಯನ್ನೆಲ್ಲ ರಾಶಿ ಮಾಡಿ ಇಬ್ಬನಿ ಬೀಳದಂತೆ ಮುಚ್ಚಿಡುವುದು ಪ್ರತಿದಿನ ಸಂಜೆ ಮಾಡಬೇಕಾದ ಕೆಲಸ. ಪೂರ್ತಿ ಒಂದುವಾರ ಒಣಗಿದ ಅಡಿಕೆಯನ್ನು ಗೋಣಿಚೀಲಕ್ಕೆ ತುಂಬಿಸಿ ಕೆಳಗೆ ತಂದು ಮನೆಯೊಳಗಿಡಬೇಕು. ನವೆಂಬರ್, ಡಿಸೆಂಬರ್ ನಲ್ಲಿ ಅನಿರೀಕ್ಷಿತ ಮಳೆ ಬಂದಾಗ ಈ ಕೆಲಸ ಬಹಳ ಗಡಿಬಿಡಿಯಲ್ಲಿ ನಡೆಯುತ್ತಿತ್ತು. ಎಲ್ಲ ಕೆಲಸ ಮುಗಿದ ನಂತರ ರಾತ್ರಿ ಕಳ್ಳರು ಬರಬಾರದೆಂದು ಜಿಂಕ್ ಶೀಟ್ ಒಂದನ್ನು ಏಣಿಗೆ ಒರಗಿಸಿಡುತ್ತಿದ್ದರು. ಅದೊಮ್ಮೆ ಅಮ್ಮನ ಕಾಲ್ಬೆರಳನ್ನೇ ಕತ್ತರಿಸಿತ್ತು. ಪರಿಚಿತರೊಬ್ಬರು ಅವರ ಮನೆಯ ಚಪ್ಪರದ ಮೇಲಿಂದ ಬಿದ್ದು ಬೆನ್ನು ಮೂಳೆಗೆ ಪೆಟ್ಟಾಗಿ ಬದುಕಿರುವವರೆಗೂ ನರಳಿದರು. ಆದರೆ ನಮ್ಮ ನಾಯಿ ಟೈಗರ್ ಮಾತ್ರ ಏಣಿಯ ಮೆಟ್ಟಿಲುಗಳನ್ನು ನೆಗೆನೆಗೆದು ಹಾರಿ ಚಪ್ಪರ ಏರುತ್ತಿತ್ತು. ಮೇ ತಿಂಗಳ ಮೊದಲ ಮಳೆಯ ಹನಿ ಬೀಳುವ ಮೊದಲೇ ಈ ಚಪ್ಪರ ಬಿಚ್ಚಿ ಅಡಿಕೆ ದಬ್ಬೆಗಳನ್ನು ಮಳೆ ನೀರಿಂದ ರಕ್ಷಿಸಿಡುತ್ತಿದ್ದರು. ಚಪ್ಪರ ತೆಗೆದಾಗ ಮನೆಯೆಲ್ಲಾ ಬೆಳಕೊ ಬೆಳಕು. ಅದುವರೆಗೆ ಕತ್ತಲೆಯಿಂದ ಕೂಡಿರುತ್ತಿದ್ದ ನಡುಮನೆಯೂ ಬೆಳಕಾಗುತ್ತಿತ್ತು.

ಈಗ ಕೃಷಿಕೆಲಸದ ಸಹಾಯಕರ ಸಂಖ್ಯೆ ಕಡಿಮೆಯಾಗಿರುವುದರಿಂದ ಪ್ರತಿದಿನ ಬೇಯಿಸಿದ ಅಡಿಕೆಯನ್ನು ಚಪ್ಪರದ ಮೇಲೆ ಹೊತ್ತು ಸಾಗಿಸಲು, ಬಿದಿರು ತಟ್ಟಿಯ ಮೇಲೆ ಹರಡಲು ಜನಗಳ ಕೊರತೆಯಿದೆ. ಅದಕ್ಕೆ ಹೆಚ್ಚಿನ ರೈತರು ಚಪ್ಪರದ ಬದಲು ಕಬ್ಬಿಣದ ಟ್ರೆಗಳನ್ನು ಮಾಡಿ ನೆಲದ ಮೇಲೆ ಒಣಗಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅಡಿಕೆ ಚಪ್ಪರ ಗತಕಾಲದ ಸಂಗತಿಯಾಗುವ ದಿನ ದೂರವಿಲ್ಲ. ಕಾಲಗತಿಯಲ್ಲಿ ಇವೆಲ್ಲ ಅನಿವಾರ್ಯ ಬದಲಾವಣೆಗಳು. ಈಗ ಮಕ್ಕಳ ಆಟದ ರೀತಿನೀತಿಗಳೂ ಬದಲಾಗಿವೆ. ಅವರಿಗೆ ಅಡಿಕೆ ಚಪ್ಪರದ ಜತೆಗೆ ಭಾವನಾತ್ಮಕ ಸಂಬಂಧವೂ ಇರಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಮನೆಗೆಲ್ಲ ಒಂದೇ ಮಗು ಯಾರ ಜತೆ ಅಂಗಳದಲ್ಲಿ ಆಡುವುದು?

ಸೌಜನ್ಯ: ಭೂಮಿಗೀತ

Share

Leave a comment

Your email address will not be published. Required fields are marked *

Recent Posts More

 • 1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 2 weeks ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 2 weeks ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  4 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...