Share

ಕಾಂಗ್ರೆಸ್ ಬೆಂಬಲಕ್ಕೆ ಆರೆಸ್ಸೆಸ್ ಇರಲಿಲ್ಲ ಎಂದಿದ್ದೂ ಅದೇ ಪುರೋಹಿತ್!
ಕನೆಕ್ಟ್ ಕನ್ನಡ

ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.

 

ದೇಶದ ಇತಿಹಾಸದಲ್ಲೇ ಪ್ರಚಂಡ ಜಯವೆನ್ನಿಸಿದ್ದ ಫಲಿತಾಂಶವನ್ನು ದಾಖಲಿಸಿದ್ದು 1984ರ ಚುನಾವಣೆ. ಇಂದಿರಾ ಗಾಂಧಿ ಸಾವಿನ ಬಳಿಕ ಏಳೇ ವಾರಗಳ ಅಂತರದಲ್ಲಿ ನಡೆದಿದ್ದ ಆ ಚುನಾವಣೆಯಲ್ಲಿ 543 ಕ್ಷೇತ್ರಗಳಲ್ಲಿ 415 ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಳ್ಳುವುದರೊಂದಿಗೆ, ರಾಜೀವ್ ಗಾಂಧಿ ಪ್ರಧಾನಿ ಪಟ್ಟಕ್ಕೇರಿದ್ದರು. ಆ ಗೆಲುವಿನ ಹಿಂದೆ ಕಾಂಗ್ರೆಸ್‍ಗೆ ಆರೆಸ್ಸೆಸ್ ಬೆಂಬಲವಿತ್ತು ಎಂದು ವಾದಿಸುವುರೊಂದಿಗೆ ಪತ್ರಕರ್ತ ರಶೀದ್ ಕಿದ್ವಾಯಿ ಬರೆದಿರುವ ’24 Akbar Road: A Short History Of The People Behind The Fall And The Rise Of The Congress’ ಪುಸ್ತಕ ಸುದ್ದಿಯಾಗಿದೆ. ಆದರೆ ವಾಸ್ತವ ಅದಲ್ಲ ಎಂಬುದನ್ನು ನಿರೂಪಿಸುವಂಥ ಸಂಗತಿಗಳೂ ಸಿಗುತ್ತವೆ, ಹತ್ತು ವರ್ಷಗಳಷ್ಟು ಹಳೆಯ ವರದಿಗಳನ್ನು ಗಮನಿಸಿದರೆ.

ಕಿದ್ವಾಯಿ ತಮ್ಮ ಪುಸ್ತಕದಲ್ಲಿ ಇಂದಿರಾ ಹತ್ಯೆಯನ್ನು ಪ್ರಸ್ತಾಪಿಸುತ್ತ ಕೊಡುವ ವಿವರಗಳಲ್ಲಿ ಅನಂತರದ ರಾಜಕೀಯ ಬೆಳವಣಿಗೆಗಳ ಚಿತ್ರಣವಿದೆ. ರಾಜೀವ್ ಅವರನ್ನು ರಾಜಕೀಯಕ್ಕೆ ಬರುವಂತೆ ಒಪ್ಪಿಸುವ ಕೆಲಸ ಆಗ ಸರ್ಕಾರದ ಪ್ರಿನ್ಸಿಪಲ್ ಸೆಕ್ರೆಟರಿಯಾಗಿದ್ದ ಪಿ ಸಿ ಅಲೆಕ್ಷಾಂಡರ್ ಮತ್ತಿತರ ನಿಷ್ಠರಿಂದ ಆಗುತ್ತದೆ. ರಾಜೀವ್ ರಾಜಕೀಯಕ್ಕೆ ಬರುವುದು ಕೊಂಚವೂ ಇಷ್ಟವಿರದ ಸೋನಿಯಾ ಅವರ ಅಸಮ್ಮತಿಯ ನಡುವೆಯೂ ರಾಜೀವ್ ರಾಜಕೀಯಕ್ಕಿಳಿಯುವ ನಿರ್ಧಾರಕ್ಕೆ ಬರುತ್ತಾರೆ.

1984ರ ಅಕ್ಟೋಬರ್ 31ರಂದು ಇಂದಿರಾ ಗಾಂಧಿ ಹತ್ಯೆಯಾದರೆ, ಚುನಾವಣೆ ನಡೆದದ್ದು ಅದೇ ಡಿಸೆಂಬರ್ 24 ಮತ್ತು 27ರ ಅವಧಿಯಲ್ಲಿ ಚುನಾವಣೆ ನಿಗದಿಯಾಗುತ್ತದೆ. ಇದ್ದ ಅತ್ಯಲ್ಪ ಸಮಯದಲ್ಲೇ ರಾಜೀವ್ ಬಿರುಸಿನ ಪ್ರಚಾರ ಕೈಗೊಳ್ಳುತ್ತಾರೆ. 25 ದಿನಗಳಲ್ಲಿ 50 ಸಾವಿರ ಕಿಲೋ ಮೀಟರುಗಳಿಗೂ ಅಧಿಕ ದೂರವನ್ನು ಕ್ರಮಿಸಿ ಮತ ಯಾಚಿಸುತ್ತಾರೆ. ಇಂದಿರಾ ಸಾವಿನ ಅನುಕಂಪದ ಅಲೆ ರಾಜೀವ್ ಬೆನ್ನಿಗಿರುತ್ತದೆ. ಬೆಕ್ಕಸ ಬೆರಗಾಗುವಂಥ ಗೆಲುವು ಕಾಂಗ್ರೆಸ್‍ಗೆ ದಕ್ಕುತ್ತದೆ. ಅದು ಇಂದಿರಾ ಅವಧಿಯಲ್ಲಾಗಲೀ ನೆಹರೂ ಅವಧಿಯಲ್ಲಾಗಲೀ ಕಾಂಗ್ರೆಸ್‍ಗೆ ಸಾಧ್ಯವಾಗಿರದ ಗೆಲುವಾಗಿರುತ್ತದೆ.

ಕಿದ್ವಾಯಿ ಎತ್ತುವ ವಿಚಾರ, ಆ ಅತ್ಯಲ್ಪ ಅವಧಿಯಲ್ಲಿ ಚುನಾವಣೆಗೆ ಸಿದ್ಧಗೊಳ್ಳುತ್ತಿದ್ದ ಹಂತದಲ್ಲೇ ಆದದ್ದೆನ್ನಲಾಗುವ ಒಂದು ಬೆಳವಣಿಗೆಯ ಕುರಿತದ್ದು. ಕಾಂಗ್ರೆಸ್‍ಗೆ ಅಂಟಿದ್ದ ಹಿಂದುತ್ವ ಧೋರಣೆಯಿಂದ ದೂರವೆಂಬ ಹಣೆಪಟ್ಟಿಯನ್ನು ತೆಗೆಯಬೇಕು ಮತ್ತು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಹಿಂದುತ್ವ ಪರ ನೆಲೆಯಲ್ಲಿ ಲಾಭ ಪಡೆಯಬೇಕು ಎಂದು ಯೋಚಿಸುವ ರಾಜೀವ್, ಆರೆಸ್ಸೆಸ್ ಬೆಂಬಲ ಕೇಳುವುದಕ್ಕೆ ಮುಂದಾಗುತ್ತಾರೆ ಎಂಬುದು ಆ ವಿಚಾರ. ಆಗ ಆರೆಸ್ಸೆಸ್ ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್ ದೇವರಸ್ ಅವರೊಂದಿಗೆ ರಾಜೀವ್ ಮಾತುಕತೆ ನಡೆಸಿದರು ಮಾತ್ರವಲ್ಲ, ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲಲು ಆರೆಸ್ಸೆಸ್ ಕೂಡ ಸಮ್ಮತಿಸಿದೆ ಎಂಬ ವದಂತಿಗಳು ಹರಡಿದ್ದರ ಬಗ್ಗೆ ಬರೆಯುವ ಕಿದ್ವಾಯಿ, ಅಂಥ ವದಂತಿಗಳನ್ನು ಬಿಜೆಪಿ ನಿರಾಕರಿಸಿತ್ತು ಎಂತಲೂ ಹೇಳುತ್ತಾರೆ.

ಇಲ್ಲಿ ಬರುವ ಎರಡು ಪ್ರಸ್ತಾಪಗಳು ಗಮನೀಯ. ಒಂದು, 1970ರ ಉಪಚುನಾವಣೆಯೊಂದರ ಉಲ್ಲೇಖ. ಮುಂಬೈ ಉಪವಲಯದ ಕಮ್ಯುನಿಸ್ಟ್ ಪಕ್ಷದ ಶಾಸಕರಾಗಿದ್ದ ಕೃಷ್ಣ ದೇಸಾಯಿ ಕೊಲೆ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಮೃತ ದೇಸಾಯಿ ಪತ್ನಿ ಸರೋಜಿನಿಯವರನ್ನೇ ಕಮ್ಯುನಿಸ್ಟ್ ಪಕ್ಷ ಕಣಕ್ಕಿಳಿಸುತ್ತದೆ. ಕಾಂಗ್ರೆಸ್ ಸೇರಿದಂತೆ 9 ಪಕ್ಷಗಳು ಅವರನ್ನು ಬೆಂಬಲಿಸುತ್ತವೆ. ಆದರೆ ಆರೆಸ್ಸೆಸ್ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಶಿವಸೇನೆ ಆ ಸ್ಥಾನ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಆರೆಸ್ಸೆಸ್ ನಾಯಕ ಮೊರೊಪಂಥ್ ಪಿಂಗಳೆ, ಶಿವಸೇನೆ ಪರವಾಗಿ ಮತ ಯಾಚಿಸಿರುತ್ತಾರೆ. ಈ ಸಂಗತಿ ಆರೆಸ್ಸೆಸ್ ಬೆಂಬಲದ ಅಗತ್ಯವನ್ನು ರಾಜೀವ್ ಭಾವಿಸಿದ್ದಕ್ಕೆ ಪ್ರೇರಣೆ ಎಂಬಂತಿದೆ. ಯಾಕೆಂದರೆ, ಆ ಹೊತ್ತಲ್ಲಿ ಕಾಂಗ್ರೆಸ್ಸೇತರ ಅಥವಾ ಬಿಜೆಪಿಯೇತರ ಪಕ್ಷವನ್ನು ಬೆಂಬಲಿಸುವುದಕ್ಕೆ ಆರೆಸ್ಸೆಸ್ ವಿರೋಧವಿದ್ದಿರಲಿಲ್ಲ.

ಕಿದ್ವಾಯಿ ಪುಸ್ತಕದಲ್ಲಿನ ಮತ್ತೊಂದು ಪ್ರಸ್ತಾಪ, ರಾಜೀವ್ ಮತ್ತು ಆರೆಸ್ಸೆಸ್ ಸರಸಂಘಚಾಲಕ ಬಾಳಾಸಾಹೇಬ್ ದೇವರಸ್ ಮಧ್ಯದ ಮಾತುಕತೆಗೆ ಸೇತುವೆಯಾಗಿದ್ದರ ಬಗ್ಗೆ ಕಾಂಗ್ರೆಸ್ ಮಾಜಿ ನಾಯಕ ಮತ್ತು ಸಂಸದರಾಗಿದ್ದ ಬನ್ವಾರಿಲಾಲ್ ಪುರೋಹಿತ್ 2007ರಲ್ಲಿ ನೀಡಿದ್ದ ಹೇಳಿಕೆ. ವಿವಾದಿತ ಸ್ಥಳದಲ್ಲಿ ರಾಮಂದಿರ ಶಿಲಾನ್ಯಾಸ ಸಮಾರಂಭ ವಿಚಾರವಾಗಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಆರೆಸ್ಸೆಸ್ ಮಧ್ಯೆ ರಹಸ್ಯ ಒಪ್ಪಂದ ನಡೆದಿತ್ತು ಎಂದು ಪುರೋಹಿತ್ ನೀಡಿದ್ದ ಹೇಳಿಕೆಯನ್ನು ಕಣಜದ ಗೂಡಿಗೆ ಕಲ್ಲೆಸೆದಿರುವಂಥ ಬೆಳವಣಿಗೆ ಎಂದೇ ಪತ್ರಿಕೆಗಳು ಬಣ್ಣಿಸಿದ್ದಿತ್ತು. 1993ರಲ್ಲಿ ಗಾಂಧಿ ಮನೆತನದವರೊಬ್ಬರು ಆಳ್ವಿಕೆ ನಡೆಸುತ್ತಿದ್ದುದೇ ಆಗಿದ್ದಲ್ಲಿ ಬಾಬ್ರಿ ಮಸೀದಿ ಧ್ವಂಸ ಆಗುತ್ತಿರಲಿಲ್ಲ ಎಂದು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಪುರೋಹಿತ್ ಅಂಥದೊಂದು ಹೇಳಿಕೆ ಕೊಟ್ಟುಬಿಟ್ಟಿದ್ದರು. ದೇಶದ ಹಿತಾಸಕ್ತಿಯ ಕಾರಣದಿಂದ ಬಯಲು ಮಾಡದೇ ಇರುವ ಅನೇಕ ವಿಚಾರಗಳು ರಾಹುಲ್ ಅವರಿಗೆ ಗೊತ್ತಿಲ್ಲ ಎಂದೂ ಹೇಳಿದ್ದರು.

ರಾಮಮಂದಿರ ಶಿಲಾನ್ಯಾಸ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಆರೆಸ್ಸೆಸ್ ನಡುವೆ ನಡೆದ ಮಾತುಕತೆಗೆ ತಾವೇ ಮಧ್ಯವರ್ತಿಯಾಗಿದ್ದುದನ್ನು ಪುರೋಹಿತ್ ಬಹಿರಂಗಪಡಿಸಿದ್ದರು. ಪುರೋಹಿತ್ ಅವತ್ತು ನೀಡಿದ್ದ ಹೇಳಿಕೆ ಪ್ರಕಾರ, ಅವರನ್ನು ಕರೆಯಿಸಿಕೊಂಡಿದ್ದ ರಾಜೀವ್ ಗಾಂಧಿಯವರು, ನಾಗ್‍ಪುರಕ್ಕೆ ಸೇರಿದವರಾಗಿದ್ದರಿಂದ ಅವರಿಗೆ ಆರೆಸ್ಸೆಸ್ ಮುಖ್ಯಸ್ಥ ಬಾಳಾಸಾಹೇಬ್ ದೇವರಸ್ ಗೊತ್ತಿರಬಹುದಲ್ಲವೇ ಎಂದು ಕೇಳಿದ್ದರು. ತುಂಬ ಚೆನ್ನಾಗಿ ಗೊತ್ತು ಎಂದಿದ್ದಕ್ಕೆ ರಾಮಜನ್ಮಭೂಮಿ ಶಿಲಾನ್ಯಾಸಕ್ಕೆ ಅನುಮತಿ ಕೊಟ್ಟರೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಆರೆಸ್ಸೆಸ್ ಬೆಂಬಲ ನೀಡೀತೇ ಎಂದು ತಿಳಿದುಕೊಳ್ಳಲಿಚ್ಛಿಸಿದ್ದರು. ಇದಾದ ಬಳಿಕ ಆರೆಸ್ಸೆಸ್ ನಾಯಕರೊಂದಿಗೆ ಚರ್ಚಿಸಿದ್ದ ಪುರೋಹಿತ್, ಅಂತಿಮವಾಗಿ ರಾಜೀವ್ ಮತ್ತು ಬಾಳಾಸಾಹೇಬ್ ದೇವರಸ್ ನಡುವೆ ರಹಸ್ಯ ಮಾತುಕತೆ ನಿಗದಿಗೊಳಿಸಿದ್ದರು. ಕಾಂಗ್ರೆಸ್ ಪ್ರಸ್ತಾಪಕ್ಕೆ ಆರೆಸ್ಸೆಸ್ ಒಪ್ಪಿಯೂಬಿಟ್ಟಿತ್ತು.

ತಮ್ಮ ಪುಸ್ತಕದಲ್ಲಿ ಕಿದ್ವಾಯಿ ಉಲ್ಲೇಖಿಸುವ ಪುರೋಹಿತ್ ಅವರ 2007ರ ಹೇಳಿಕೆಯಲ್ಲೇ ಮತ್ತೂ ಒಂದು ವಿಚಾರವಿದೆ. ಅದರ ಪ್ರಕಾರ, ರಹಸ್ಯ ಒಪ್ಪಂದದ ಬಳಿಕ ವಿವಾದಿತ ಜಾಗದಲ್ಲಿ ಶಿಲಾನ್ಯಾಸ ನೆರವೇರುತ್ತಿದ್ದಂತೆ ಮತ್ತೊಂದು ಮಹತ್ವದ ಬೆಳವಣಿಗೆ ಆಯಿತು. ರಾಜೀವ್ ಗಾಂಧಿಯನ್ನು ತಕ್ಷಣವೇ ಭೇಟಿಯಾದ ಮುಸ್ಲಿಂ ನಾಯಕರ ಗುಂಪು, ಈ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ಮುಸ್ಲಿಂ ಮತದಾರರು ಕಾಂಗ್ರಸ್‍ಗೆ ವಿಮುಖರಾಗುವಂತೆ ಮಾಡುವ ಬೆದರಿಕೆಯನ್ನೂ ಒಡ್ಡಿದರು. ಇದರ ಪರಿಣಾಮವಾಗಿ ಇಡೀ ಸಂದರ್ಭವೇ ಬದಲಾಯಿತು. ವಿವಾದಿತ ಸ್ಥಳದಲ್ಲಿನ ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ರಾಜೀವ್ ಆದೇಶಿಸಿದರು. ರಾಜೀವ್ ತಾವು ನೀಡಿದ್ದ ಭರವಸೆ ಉಳಿಸಿಕೊಳ್ಳದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‍ನ್ನು ಆರೆಸ್ಸೆಸ್ ಬೆಂಬಲಿಸಲಿಲ್ಲ ಎಂಬುದನ್ನೂ ಅದೇ ಪುರೋಹಿತ್ ಹೇಳಿದ್ದರೆಂಬುದು ಆಗಿನ ವರದಿಗಳಲ್ಲಿದೆ.

ಬನ್ವಾರಿಲಾಲ್ ಪುರೋಹಿತ್ ಎರಡು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾಗಿದ್ದವರು. ರಾಮಮಂದಿರ ನಿರ್ಮಾಣದ ಪರವಾಗಿದ್ದ ಅವರು ಅದೇ ಕಾರಣಕ್ಕಾಗಿಯೇ ಕಾಂಗ್ರೆಸ್ ತ್ಯಜಿಸಿ 1991ರಲ್ಲಿ ಬಿಜೆಪಿ ಸೇರಿದರು. 1996ರಲ್ಲಿ ಬಿಜೆಪಿ ಸಂಸದರಾಗಿದ್ದ ಅವರು, ಪ್ರಮೋದ್ ಮಹಾಜನ್ ಜೊತೆಗಿನ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ 1998ರಲ್ಲಿ ಬಿಜೆಪಿಯನ್ನೂ ಬಿಟ್ಟರು. ಅವರು 2007ರ ಏಪ್ರಿಲ್‍ನಲ್ಲಿ ಅಂದರೆ ಹನ್ನೊಂದು ವರ್ಷಗಳ ಹಿಂದೆ ನೀಡಿದ್ದ ಹೇಳಿಕೆ ಮತ್ತೂ ಜೀವತುಂಬಿಕೊಳ್ಳುತ್ತಲೇ ಇದೆಯೆಂಬುದಕ್ಕೆ ಕಿದ್ವಾಯಿ ಪುಸ್ತಕ ಉದಾಹರಣೆ.

Share

Leave a comment

Your email address will not be published. Required fields are marked *

Recent Posts More

 • 1 week ago No comment

  ನಮ್ಮ ಕಣ್ಣುಗಳೇಕೆ ಭಾರವಾಗುತ್ತಿವೆ?

        ಕವಿಸಾಲು           ತಿರುಕನ ಕನಸಲ್ಲ ನನ್ನದು ತಿರುಕನಲ್ಲ ಕಣ್ರಿ ನಾನು ನಿಮ್ಮ ಮರುಕ ಗಿರುಕ ಎಲ್ಲಾ ನನಗೆ ಹಿಡಿಸಲ್ಲ ಅವ್ರು ಕೋಟೆ ಕಟ್ಟಿ ನ್ಯಾಯ ನೀತಿಗಳ ತಮ್ಮಲ್ಲೆ ಬಚ್ಚಿಟ್ಟು ಒಳಗೆ ಬೆಚ್ಚಗೆ ಕೂತಿರಬಹುದು ನ್ಯಾಯಕ್ಕೆ ಕನ್ನ ಹಾಕೋ ನಾನು ತಿರುಕ ಹೇಗೆ ಆಗಬೇಕು? ತಿರುಕನದೇನೋ ಕನಸಿತ್ತು ನನ್ನದು ಕೂಡಾ ಕನಸೆಂದು ಆ ಕೋಟೆ ಒಳಗಿರುವವರು ಕನವರಿಸುತ್ತಿರಬಹುದು ಬೂದಿ ಮುಚ್ಚಿದ ...

 • 1 week ago No comment

  ಕೊಂಕಣಿ ಪ್ರತಿಭೆಯನ್ನರಸಿ ಕರ್ನಾಟಕಕ್ಕೆ ಬಂದ ಪ್ರಶಸ್ತಿ

      ಅತಿಥಿ           ಈ ಬಾರಿ ಕರ್ನಾಟಕವು ಎರಡು ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು ಎಂದರೆ ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಪ್ರಮಾದವೇನಾದರೂ ಆಯಿತೇ? ಒಂದೇ ಪುರಸ್ಕಾರವನ್ನು ಇಬ್ಬರಿಗೆ ಹಂಚಿರಬಹುದೇ? ಎಂದೆಲ್ಲ ಯೋಚಿಸಿ ತಲೆ ಕೆರೆದುಕೊಳ್ಳುತ್ತಿದ್ದೀರಾ? ಇಲ್ಲಿದೆ ನೋಡಿ ಉತ್ತರ. ಕನ್ನಡಕ್ಕೆ 2018ರ ಕೇಂದ್ರಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಘೋಷಣೆಯಾದಾಗಲೇ ಕರ್ನಾಟಕದ ಕೊಂಕಣಿ ಕವಯತ್ರಿ ವಿಲ್ಮಾ ...

 • 2 weeks ago No comment

  ಸಾಹಸದ ಆ ನಿಮಿಷಗಳು

          ಮೊದಲ ಬಾರಿಯಾದ್ದರಿಂದ ಕೆಲವೇ ನಿಮಿಷಗಳ ಈ ಜಿಗಿತದ ರೋಚಕತೆ ಒಂದು ತಿಂಗಳ ಕಾಲ ನನ್ನನ್ನು ಆವರಿಸಿದ್ದು ಸುಳ್ಳಲ್ಲ.         ಬ್ಯಾಂಕರುಗಳು, ಅಕೌಂಟೆಂಟುಗಳು ವರ್ಷದ ಮೊದಲಿಂದ ಹಿಡಿದು ಮಾರ್ಚಿ ತಿಂಗಳವರೆಗೆ ಭಾರೀ ಬ್ಯುಸಿಯಾಗುವಂತೆ ಇಂಗ್ಲೆಂಡಿನ ಸರ್ಕಾರೀ ದಂತ ವೈದ್ಯಕೀಯ ರಂಗದಲ್ಲೂ ಧಾವಂತ ಕಾಣಿಸಿಕೊಳ್ಳುತ್ತದೆ. ಸರ್ಕಾರದಿಂದ ಗುತ್ತಿಗೆ ಪಡೆದ ಕೆಲಸವನ್ನು ಮಾರ್ಚಿಯ ಕೊನೆಗೆ ಪೂರ್ತಿಗೊಳಿಸದಿದ್ದರೆ ಮುಂದಿನ ವರ್ಷದ ಕಾಂಟ್ರಾಕ್ಟ್ ನ್ನು ಕಳೆದುಕೊಳ್ಳುವ ...

 • 3 weeks ago No comment

  ಪ್ರಸಾದ್ ಪಟ್ಟಾಂಗ | ಫಿಫಾ ಫಿವರ್

  ಅಂದು ಎಲ್ಲರ ಕಣ್ಣುಗಳೂ ಬೇರೇನನ್ನೋ ದಿಟ್ಟಿಸುತ್ತಿದ್ದವು. ಅದೊಂದು ಸುಂದರ ರೆಸ್ಟೊರೆಂಟ್. ಆವರಣದ ಒಳಗೂ ಹೊರಗೂ ಬಂದವರಿಗೆ ಕುಳಿತುಕೊಳ್ಳಲು ಸಾಕಷ್ಟು ಜಾಗವಿರುವಂಥದ್ದು. ಜೊತೆಗೇ ಒಂದು ಪುಟ್ಟ ಮೈದಾನದಂತಿರುವ ಜಾಗವನ್ನೂ, ಈಜುಕೊಳವನ್ನೂ ಹೊಂದಿರುವ ಸುಸಜ್ಜಿತ ರೆಸ್ಟೊರೆಂಟ್. ನಾನು ಪ್ರತೀ ತಿಂಗಳು ಲುವಾಂಡಾಗೆ ಬಂದಿಳಿದಾಗಲೆಲ್ಲಾ ಇಲ್ಲಿಯ ಸಿಬ್ಬಂದಿಯೇ ನನಗೆ ಅನ್ನದಾತರು. ಹೀಗಾಗಿ ಎಲ್ಲೆಲ್ಲೂ ನನಗೆ ಪರಿಚಿತ ಮುಖಗಳೇ. ಅಂದು ಮಾತ್ರ ಸಿಬ್ಬಂದಿಯೊಬ್ಬ ಗಡಿಬಿಡಿಯಲ್ಲಿ ನನ್ನ ಆರ್ಡರ್ ಬರೆದುಕೊಂಡು ಅಷ್ಟೇ ಅವಸರದಲ್ಲಿ ಖಾದ್ಯಗಳನ್ನು ತಂದಿಟ್ಟು ...

 • 3 weeks ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ದಾರಿಯೇ ದೈವ… ವೈಷ್ಣೋದೇವಿ

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...


Editor's Wall

 • 11 May 2018
  2 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

 • 10 May 2018
  2 months ago No comment

  ಒಂದು ಪುಸ್ತಕ; ವಾರವಿಡೀ ಬಿಡುಗಡೆ!

  ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

 • 03 May 2018
  2 months ago No comment

  ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                    ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

 • 30 April 2018
  3 months ago No comment

  ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

  ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

 • 28 April 2018
  3 months ago No comment

  ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

  ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...