Share

‘ನಿರುದ್ಯೋಗ ತಂದಿಟ್ಟ ಸರ್ಕಾರದ ನೀತಿಗಳ ವಿರುದ್ಧ ಯುಜನತೆ ಹೋರಾಟ’
ಕನೆಕ್ಟ್ ಕನ್ನಡದ ಜೊತೆ ಮುತ್ತುರಾಜ್ ಮಾತು

ಇತ್ತೀಚಿನ ವರ್ಷಗಳಲ್ಲಿ ಉದ್ಯೋಗ ಸೃಷ್ಟಿ ತೀವ್ರ ಕುಸಿತ ಕಂಡಿರುವುದು ದೇಶದ ಯುವಜನತೆಯನ್ನು ಕಂಗೆಡಿಸಿದೆ. ಇಂಥ ಹೊತ್ತಲ್ಲಿ ಯುವಜನತೆಯ ಪರವಾಗಿ ನಿಲ್ಲಬೇಕಿದ್ದ ರಾಜಕಾರಣ, ಹುನ್ನಾರದ ದಾರಿಯನ್ನೇ ಆಯ್ದುಕೊಂಡು ಅವರನ್ನು ದಿಕ್ಕು ತಪ್ಪಿಸುತ್ತ, ಸುಳ್ಳು ಭರವಸೆಗಳನ್ನಷ್ಟೇ ಕೊಡುತ್ತ, ತನ್ನ ಬೇಳೆ ಬೇಯಿಸಿಕೊಳ್ಳುವಲ್ಲಿ ಮಗ್ನವಾಗಿದೆ. ಇದನ್ನು ನೋಡಿಯೇ ತಾಳ್ಮೆ ತಪ್ಪಿದಂತಾಗಿರುವ ಯುವಕರು ಈಗ ಜಾಗೃತರಾಗಿದ್ದಾರೆ. ಉದ್ಯೋಗಕ್ಕಾಗಿ ಸಾತ್ವಿಕ ಹೋರಾಟ ಶುರುಮಾಡಿದ್ದಾರೆ. ರಾಜಕೀಯ ಪಕ್ಷಗಳ ಮುಂದೆ ನಿಂತು, ನೀವು ಮಾಡಿರುವುದೇನು ಎಂದು ಕೇಳತೊಡಗಿದ್ದಾರೆ. ಮತಬ್ಯಾಂಕ್ ರಾಜಕಾರಣವನ್ನು ನೆಚ್ಚಿರುವ ಈ ವ್ಯವಸ್ಥೆಗೆ ಅದನ್ನೇ ಪ್ರತಿ ಮುಳ್ಳಾಗಿ ತಿರುಗಿಸಿರುವ ಯುವಜನತೆಗೆ ಆಳುವವರು, ಆಳಹೊರಟವರು ಉತ್ತರಿಸಬೇಕಾಗಿದೆ. ಮತ್ತು ಉದ್ಯೋಗ ಸೃಷ್ಟಿ ವಿಚಾರದಲ್ಲಿ ಸಾಧ್ಯವಾದಷ್ಟೂ ಪ್ರಾಮಾಣಿಕವಾಗಿರಬೇಕಾಗಿದೆ.

ಯುವಕರ ಹೋರಾಟ ತೀವ್ರಗೊಂಡಿರುವ ಹೊತ್ತಲ್ಲಿ, ಉದ್ಯೋಗಕ್ಕಾಗಿ ಯುವಜನರು ವೇದಿಕೆಯ ಸಂಚಾಲಕ ಮುತ್ತುರಾಜು ಅವರು ಕನೆಕ್ಟ್ ಕನ್ನಡದ ಆನ್ಲೈನ್ ಸಂದರ್ಶನದಲ್ಲಿ ಹಂಚಿಕೊಂಡಿರುವ ವಿಚಾರಗಳು ಇಲ್ಲಿವೆ:

‘ನೋ ಜಾಬ್ ನೋ ವೋಟ್’ ಘೋಷಣೆಯೊಂದಿಗೆ ಉದ್ಯೋಗಕ್ಕಾಗಿ ಹೋರಾಡುವ ಪರಿಕಲ್ಪನೆ ಮೂಡಿದ ಸಂದರ್ಭ?

ಉದ್ಯೋಗದ ವಿಚಾರಕ್ಕೆ ನಾವು ಹೋರಾಟ ಮಾಡಬೇಕೆಂದು ಹಲವು ವರ್ಷಗಳಿಂದ ಮಾತಾಡಿಕೊಳ್ಳುತ್ತಿದ್ದೆವು. ಆದರೆ ಹೇಗೆ ಮಾಡಬೇಕೆಂಬ ನಿರ್ದಿಷ್ಟತೆ ಇರಲಿಲ್ಲ. ತದನಂತರ ರೂಪುಗೊಂಡ ಜನಾಂದೋಲನಗಳ ಮಹಾಮೈತ್ರಿಯ ಹಲವು ಸಭೆಗಳಲ್ಲಿ ಇದು ಚರ್ಚೆಗೆ ಬಂತು. ಅಲ್ಲಿ ಸ್ಪಷ್ಟವಾಗಿ ಕೃಷಿಬಿಕ್ಕಟ್ಟು ಮತ್ತು ನಿರುದ್ಯೋಗ ಈ ದೇಶದ ದೊಡ್ಡ ಸಮಸ್ಯೆಗಳು. ಹಾಗಾಗಿ ರೈತರನ್ನು ಮತ್ತು ಯುವಜನರನ್ನು ಸಂಘಟಿಸಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು. ಆದರೆ ಶ್ರಮ ಮತ್ತು ಸಂಪನ್ಮೂಲದ ಕೊರತೆ ಇತ್ತು. ತದನಂತರ ಕರ್ನಾಟಕ ಜನಶಕ್ತಿ ಮತ್ತು ಕರ್ನಾಟಕ ವಿದ್ಯಾರ್ಥಿ ಸಂಘಟನೆ ಈ ವಿಚಾರದಲ್ಲಿ ಗಂಭೀರತೆಯಿಂದ ಅಧ್ಯಯನ ನಡೆಸಿ ಹಲವು ಸಂಘ-ಸಂಸ್ಥೆಗಳ ಸಲಹೆ ಸಹಕಾರ ಕೋರಲಾಯಿತು. ಆ ಸಂದರ್ಭದಲ್ಲಿ ಓರಿಸ್ಸಾದಿಂದ ಬಂದಿದ್ದ ಚಂದ್ರಮಿಶ್ರಾ ಎನ್ನುವವರು ಈ ಆಂದೋಲನವನ್ನು ಚುನಾವಣೆಯೊಂದಿಗೆ ಬೆಸೆಯುವ ಮತ್ತು ನೋ ಜಾಬ್ ನೋ ವೋಟ್ ಐಡಿಯಾ ಕೊಟ್ಟರು. ಅದೇ ಸಂದರ್ಭದಲ್ಲಿ ಕೆಲವು ಯುವಜನರು ಉದ್ಯೋಗ ಸಿಗದೇ ಆತ್ಮಹತ್ಯೆ ಮಾಡಿಕೊಂಡ ಸುದ್ದಿಗಳು ಮಾಧ್ಯಮದಲ್ಲಿ ಪ್ರಕಟಗೊಂಡವು. ಇದು ನಮಗೆ ಆಕ್ರೋಶ ಮತ್ತು ಸಿಟ್ಟು ತರಿಸಿತು. ನಮ್ಮ ಅಧ್ಯಯನದಿಂದ ನಿರುದ್ಯೋಗ ಮತ್ತು ಅರೆಉದ್ಯೋಗದ ಕರಾಳ ರೂಪ ಅನಾವರಣಗೊಂಡಿತ್ತು. ಈ ಸಂದರ್ಭದಲ್ಲಿ ನಾವು ಉದ್ಯೋಗಕ್ಕಾಗಿ ಯುವಜನರು ವೇದಿಕೆ ಹುಟ್ಟುಹಾಕಿ, ನೋ ಜಾಬ್ ನೋ ವೋಟ್ ಆಂದೋಲನ ಆರಂಭಿಸಿದೆವು.

ಉದ್ಯೋಗಕ್ಕಾಗಿ ಯುವಜನತೆ ವೇದಿಕೆ ಕನ್ನಡದ ಸಂದರ್ಭದಲ್ಲಿ ಹೋರಾಡುತ್ತಿರುವ ರೀತಿ, ದೇಶಾದ್ಯಂತದ ಈ ಆಂದೋಲನಕ್ಕಿಂತ ಹೇಗೆ ಭಿನ್ನ?

ಇಂದು ಭಾರತದ ಜನಸಂಖ್ಯೆಯಲ್ಲಿ ಶೇ.50 ಯುವಜನತೆಯಿದ್ದಾರೆ. ಇದರಲ್ಲಿ ಅರ್ಧದಷ್ಟು ಯುವಜನರಿಗೆ ಅವರ ಸಾಮರ್ಥ್ಯ ಮತ್ತು ನಿರೀಕ್ಷೆಗೆ ತಕ್ಕ ಉದ್ಯೋಗವಿಲ್ಲ. ಇಷ್ಟೊಂದು ದೊಡ್ಡ ಸಂಖ್ಯೆಯ ಯುವಜನರನ್ನು ಒಳಗೊಳ್ಳದೇ ದೇಶದ ಅಭಿವೃದ್ಧಿ ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಆಳುವ ಸರ್ಕಾರಗಳು ಮರೆತಿವೆ. ಇಂತಹ ಸಂದರ್ಭದಲ್ಲಿ ಉದ್ಯೋಗದ ವಿಚಾರಕ್ಕೆ ಯುವಜನರನ್ನು ಒಟ್ಟುಗೂಡಿಸಿ, ಈ ಸಮಸ್ಯೆಯನ್ನು ಚುನಾವಣೆಯೊಂದಿಗೆ ಬೆಸೆದಿರುವುದು ನಮ್ಮ ವಿಶೇಷತೆ. ಜೊತೆಗೆ ಸರ್ಕಾರವನ್ನು ಟೀಕಿಸಿ ಅದರ ವಿರುದ್ಧ ಹೋರಾಡುವುದರ ಜೊತೆಗೆ ರಚನಾತ್ಮಕವಾಗಿಯೂ ನಾವು ಕೆಲಸ ಮಾಡುತ್ತಿದ್ದೇವೆ. ಸಿಂಗಲ್ ವಿಂಡೋದಲ್ಲಿ ಉದ್ಯೋಗಗಳ ಮಾಹಿತಿ ನೀಡುವ ಮೈ ಜಾಬ್ ಮೊಬೈಲ್ ಆ್ಯಪ್ ತಯಾರಿಸಿದ್ದು ಒಂದಾದರೆ, ಕರ್ನಾಟಕದಲ್ಲಿ ಇರುವ ಒಂದು ಕೋಟಿ ಉದ್ಯೋಗಗಳನ್ನು ಸುಭದ್ರಗೊಳಿಸುವುದು ಮತ್ತು 50 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿ ಹೇಗೆ ಸಾಧ್ಯ ಎಂಬುದನ್ನು ವಿವರಿಸುವ ‘ಯುವಜನರ ಪ್ರಣಾಳಿಕೆ’ಯೊಂದನ್ನು ವಿವರವಾದ ಅಧ್ಯಯನದಿಂದ ತಯಾರಿಸಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಮತ್ತು ಸರ್ಕಾರಗಳಿಗೆ ನೀಡಿ ಅದನ್ನು ಜಾರಿ ಮಾಡಲು ಒತ್ತಾಯಿಸುತ್ತಿದ್ದೇವೆ. ಎಲ್ಲಾ ರಾಜಕೀಯ ಪಕ್ಷಗಳನ್ನು ಸಮಾನವಾಗಿ ನೋಡುತ್ತಾ ಅವರನ್ನು ಎಡೆಬಿಡದೇ ಪ್ರಶ್ನಿಸುತ್ತಿದ್ದೇವೆ. ಚುನಾವಣೆಗಳು ಜಾತಿ, ಧರ್ಮ, ಹಣ, ಹೆಂಡಗಳಂತಹ ಆಮಿಷಗಳ ಮೇಲೆ ನಡೆಯಬಾರದು ಜನರ ನೈಜ ಸಮಸ್ಯೆಗಳ ಆಧಾರದಲ್ಲಿ ನಡೆಯಬೇಕೆಂಬ ಪ್ರಚಾರ ಮಾಡಿದ್ದೇವೆ. ಈ ಆಂದೋಲನದಿಂದ ಸ್ಫೂರ್ತಿ ಪಡೆದು ಈಗಾಗಲೇ ದೆಹಲಿ ಮತ್ತು ಹರಿಯಾಣದಲ್ಲಿ ಇದೇ ರೀತಿಯ ಆಂದೋಲನಕ್ಕೆ ತಯಾರಿ ನಡೆಯುತ್ತಿದೆ. ಇಂತಹ ಹತ್ತು ಹಲವು ಕಾರಣಗಳಿಗಾಗಿ ಈ ಆಂದೋಲನ ಭಿನ್ನವಾಗಿದೆ.

ಕರ್ನಾಟಕದಲ್ಲಿನ ನಿರುದ್ಯೋಗ ಸ್ಥಿತಿಯ ಸ್ವರೂಪ ಎಂಥದು ಮತ್ತು ಹತ್ತಿರ ಹತ್ತಿರ ಒಂದು ಕೋಟಿಯಷ್ಟಿರುವ ಇಲ್ಲಿನ ನಿರುದ್ಯೋಗಿ ಯುವಕರ ಭವಿಷ್ಯ ಏನೆನ್ನುತ್ತೀರಿ?

ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಇಲ್ಲಿನ ಕಾಂಗ್ರೆಸ್ ಸರ್ಕಾರ ಕ್ಲೈಮ್ ಮಾಡಿಕೊಳ್ಳುತ್ತಿದೆ. ಜೊತೆಗೇನೆ 13.91 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದ್ದೇವೆ ಎಂದು ದೊಡ್ಡ ದೊಡ್ಡ ಜಾಹಿರಾತುಗಳನ್ನು ನೀಡುತ್ತಿದೆ. ಆದರೆ ಈ ಲೆಕ್ಕ ಕೊಡಿ ಎಂದು ಕಾಂಗ್ರೆಸ್ ಕಚೇರಿ ಮುಂದೆ ಉದ್ಯೋಗಕ್ಕಾಗಿ ಯುವಜನರು ಪ್ರಶ್ನೆ ಮಾಡಿದರೆ ಅವರ ಬಳಿ ಲೆಕ್ಕವೂ ಇಲ್ಲ ಉತ್ತರವೂ ಇಲ್ಲ. ಸದ್ಯ ಭಾರತದಲ್ಲಿರುವ ಒಟ್ಟು ಜನಸಂಖ್ಯೆಯಲ್ಲಿ ಶೇ.65 ಜನರು 35 ವರ್ಷದೊಳಗಿನ ಯುವಜನರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿಯೇ 2013ರ ಕರ್ನಾಟಕ ರಾಜ್ಯ ವಿಧಾನಸಭೆಗೂ ಮುಂಚೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಉದ್ಯೋಗ ಸೃಷ್ಟಿಯ ಬಗ್ಗೆ ಸ್ಪಷ್ಟವಾಗಿ ಬರೆದುಕೊಂಡಿದ್ದರು. ಅಧಿಕಾರಕ್ಕೆ ಬಂದರೆ 50 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಕಾಂಗ್ರೆಸ್, 30 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಜೆಡಿಎಸ್ ಮತ್ತು 5 ಲಕ್ಷ ಕುಟುಂಬಗಳಿಗೆ ಉದ್ಯೋಗ ನೀಡುವುದಾಗಿ ಬಿಜೆಪಿ ಹೇಳಿತ್ತು. ಈಗ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಅವರು ಕೊಟ್ಟಿದ್ದ 50 ಲಕ್ಷದ ಭರವಸೆಯನ್ನು ಮರೆತಿದ್ದಾರೆ. ಅಷ್ಟೆ ಅಲ್ಲ, ಅವರು ಸೃಷ್ಟಿಸಿದ್ದ ಉದ್ಯೋಗಗಳು ಬಹುಪಾಲು ಅಭದ್ರ ಉದ್ಯೋಗಗಳಾಗಿದ್ದವು. ಅಂದರೆ ಸರ್ಕಾರಿ ವಲಯದ ನೂರಾರು ಇಲಾಖೆಗಳಲ್ಲಿ ಖಾಯಂ ನೌಕರರನ್ನು ನೇಮಿಸಿಕೊಳ್ಳುವ ಬದಲು ಗುತ್ತಿಗೆ, ತಾತ್ಕಾಲಿಕ ಆಧಾರದಲ್ಲಿ ನೇಮಿಸಿಕೊಂಡು ಅವರಿಗೆ ನಿಯಮಿತ ವೇತನ, ಸಮಾನ ವೇತನ ನೀಡದೇ ಆಧುನಿಕ ಜೀತಪದ್ದತಿಯನ್ನು ಪೋಷಿಸಿಕೊಂಡು ಬರುತ್ತಿದೆ. ಹೆಚ್ಚು ಸುಭದ್ರ ಉದ್ಯೋಗ ಸೃಷ್ಟಿಸಬಹುದಾಗಿದ್ದ ಸರ್ಕಾರವೇ ಗುತ್ತಿಗೆ ಶಿಕ್ಷಕರನ್ನು, ಆರೋಗ್ಯ ಸಹಾಯಕಿಯರ ರೀತಿಯ ಹಲವು ಅಭದ್ರ ಉದ್ಯೋಗಿಗಳನ್ನು ನೇಮಿಸಿಕೊಂಡು ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಇದರಿಂದಾಗಿ ಕರ್ನಾಟಕದಲ್ಲಿ ಒಂದು ಕೋಟಿ ಹೆಚ್ಚಿರುವ ಯುವಜನರು ಮತ್ತಷ್ಟು ಅಭದ್ರತೆಯಲ್ಲಿ ಬಳಲುವಂತಾಗಿದೆ. ರಾಜ್ಯದಲ್ಲಿ ಒಟ್ಟು 7.20 ಲಕ್ಷ ಸರ್ಕಾರಿ ಹುದ್ದೆಗಳಿದ್ದು ಅದರಲ್ಲಿ 4.40 ಹುದ್ದೆಗಳನ್ನು ಮಾತ್ರ ನೇಮಕ ಮಾಡಿದ್ದು, ಇನ್ನು 2.80 ಲಕ್ಷ ಖಾಲಿ ಇವೆ. ಕರ್ನಾಟಕದ ಜನಸಂಖ್ಯೆ 7 ಕೋಟಿ ತಲುಪುತ್ತಿರುವ ಸಂದರ್ಭದಲ್ಲಿ ಇನ್ನಷ್ಟು ಹೊಸ ಸರ್ಕಾರಿ ಹುದ್ದೆಗಳನ್ನು ಸೃಷ್ಟಿಸಬೇಕಿದ್ದ ಸರ್ಕಾರ ಖಾಲಿ ಇರುವ ಹುದ್ದೆಗಳನ್ನೇ ತುಂಬುತ್ತಿಲ್ಲ ಎಂದರೆ ಇವರನ್ನು ನಂಬರ್ ಒನ್ ಎಂದು ಹೇಗೆ ಒಪ್ಪುವುದು?

ಪ್ರತಿವರ್ಷ ಸುಮಾರು 8 ಲಕ್ಷದಷ್ಟು ನಿರುದ್ಯೋಗಿಗಳು ಹೊಸದಾಗಿ ಸೇರ್ಪಡೆಯಾಗುತ್ತಿರುವ ಕರ್ನಾಟಕದಲ್ಲಿ ಸಮಸ್ಯೆಗೆ ಪರಿಹಾರ ಹೇಗೆನ್ನುತ್ತೀರಿ?

2013ರ ಕೇಂದ್ರ ಸರ್ಕಾರದ ಎನ್ಎಸ್ಡಿಸಿ ವರದಿಯ ಪ್ರಕಾರ ಕರ್ನಾಟಕದಲ್ಲಿ 95 ಲಕ್ಷ ಜನ ನಿರುದ್ಯೋಗಿಗಳು ಅಥವಾ ಅರೆ ಉದ್ಯೋಗಿಗಳು ಇದ್ದಾರೆ. ಅಲ್ಲದೇ ಪ್ರತಿ ವರ್ಷ 8 ಲಕ್ಷ ಜನ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಅರಸಿ ಮಾರುಕಟ್ಟೆ ಪ್ರವೇಶಿಸುತ್ತಿದ್ದಾರೆ. ನಿರುದ್ಯೋಗ ಎಂಬುದು ವ್ಯಕ್ತಿಗತ ಸಮಸ್ಯೆಯಲ್ಲ. ಬದಲಿಗೆ ಸಾಮಾಜಿಕ, ರಾಜಕೀಯಾರ್ಥಿಕ ಸಮಸ್ಯೆಯಾಗಿದೆ. ಇದಕ್ಕೆ ಸರ್ಕಾರದ ನೀತಿಗಳು ಕಾರಣವೇ ಹೊರತು ಯಾರದೋ ಹಣೆಬರಹ, ಕೌಟುಂಬಿಕ ಹಿನ್ನೆಲೆ ಸರಿ ಇಲ್ಲದಿರುವುದು, ಕೌಶಲ್ಯ ಇಲ್ಲದಿರುವುದು ಕಾರಣವಲ್ಲ ಎಂಬುದನ್ನು ಮೊದಲು ಯುವಜನರು ಅರ್ಥ ಮಾಡಿಕೊಳ್ಳಬೇಕು. ಹಾಗಂತ ಎಲ್ಲರಿಗೂ ಸರ್ಕಾರವೇ ನೇರವಾಗಿ ಉದ್ಯೋಗ ಕೊಡಬೇಕು ಎಂದು ಹೇಳುವುದಲ್ಲ. ಬದಲಿಗೆ ಸರ್ಕಾರ ಉದ್ಯೋಗ ಸೃಷ್ಟಿಯಾಗುವಂತಹ ನೀತಿಗಳನ್ನು ತರಬೇಕು, ಸುಲಭವಾಗಿ ಉದ್ಯೋಗ ಸಿಗುವಂತಹ ವಾತಾವಾರಣ ನಿರ್ಮಿಸಬೇಕು ಎಂದು ಒತ್ತಾಯಿಸಬೇಕಾಗಿದೆ. ಹಾಗಾಗಿ ಉದ್ಯೋಗಕ್ಕಾಗಿಯ ಯುವಜನರ ಚಳವಳಿ ತುರ್ತಿನದ್ದಾಗಿದೆ. ಅಷ್ಟೆ ಅಲ್ಲ, ಅದೊಂದು ರಾಷ್ಟ್ರೀಯ ಅಗತ್ಯವಾಗಿದೆ. ಈ ಆಂದೋಲನವೇ ಉದ್ಯೋಗ ಸೃಷ್ಟಿಯ ಬಹುದೊಡ್ಡ ಸಾಧ್ಯತೆಯಾಗಿದೆ. ಏಕೆಂದರೆ ಕರ್ನಾಟಕದಲ್ಲಿ ಒಟ್ಟು ಮತದಾರರಲ್ಲಿ ಶೇ.52% ಮತದಾರರು 18 ವರ್ಷದಿಂದ 39 ವರ್ಷದೊಳಗಿನ ಯುವಜನರೇ ಆಗಿದ್ದು ಈ ಪಕ್ಷಗಳ ಗೆಲುವು ಸೋಲಿನಲ್ಲಿ ಯುವಜನರ ಮತಗಳೇ ನಿರ್ಣಾಯಕ ಪಾತ್ರವಹಿಸುತ್ತಾರೆ ಎಂಬುದು ಎಲ್ಲಾ ಪಕ್ಷಗಳಿಗೂ ತಿಳಿದಿದೆ. ಹಾಗಾಗಿ ಚುನಾವಣಾ ಸಂದರ್ಭದಲ್ಲಿ ಈ ಆಂದೋಲನಕ್ಕೆ ಮಹತ್ವದ ಪಾತ್ರ ಒದಗಿಬಂದಿದೆ.

ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರಗಳ ವೈಫಲ್ಯದ ಮೂಲವೆಲ್ಲಿದೆ ಮತ್ತು ಇದಕ್ಕೆ ದುಷ್ಟ ರಾಜಕಾರಣದ ಕೊಡುಗೆ ಎಷ್ಟು?

ದೊಡ್ಡ ದೊಡ್ಡ ಬಂಡವಾಳಿಗರಿಗೆ ಮತ್ತಷ್ಟು ಮಗದಷ್ಟು ಸಾಲ ನೀಡುವುದು, ತೆರಿಗೆ ವಿನಾಯಿತಿಗಳನ್ನು ನೀಡುವುದು ಮತ್ತು ಹೆಚ್ಚಿನ ಹೂಡಿಕೆಗೆ ಬೇಕಾದ ನೀತಿಗಳನ್ನು ಮಾಡುವುದರಿಂದ ದೇಶ ಅಭಿವೃದ್ಧಿಯಾಗುತ್ತದೆ ಎಂಬ ಭ್ರಮೆಯಲ್ಲಿರುವ ಸರ್ಕಾರಗಳು ಯುವಜನರ ಪರವಾದ ಒಂದೂ ನೀತಿಗಳನ್ನು ತರುತ್ತಿಲ್ಲ. ಇದರಿಂದಾಗಿ ಇಂದು ಭಾರತದಲ್ಲಿ ನಿರುದ್ಯೋಗವೆಂಬುದು ನಂಬರ್ ಒನ್ ಸಮಸ್ಯೆಯಾಗಿ ಬೆಳೆದುನಿಂತಿದೆ. 2013ರಿಂದ ಆರಂಭಗೊಂಡ ಉತ್ಪಾದನಾ ಕ್ಷೇತ್ರದಲ್ಲಾದ ಕುಸಿತ ಇನ್ನೂ ಚೇತರಿಕೆ ಕಂಡಿಲ್ಲ. ಇತರೆ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಿ, ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸದಿದ್ದರೆ ಉತ್ಪಾದನಾ ಕ್ಷೇತ್ರ ಚೇತರಿಕೆ ಕಾಣುವುದಿಲ್ಲ ಎಂಬ ಸರಳ ಸತ್ಯ ಸರ್ಕಾರಗಳಿಗೆ ಗೊತ್ತಿಲ್ಲವೆಂದಲ್ಲ. ಆದರೆ ಜಾಬ್ಲೆಸ್ ಗ್ರೋಥ್ ಅನ್ನೇ ತಮ್ಮ ಪ್ರಧಾನ ಅಜೆಂಡ ಮಾಡಿಕೊಂಡಿರುವ ಈ ಸರ್ಕಾರಗಳಿಗೆ, ಸಾಲ ಮರುಪಾವತಿ ಮಾಡುವುದೂ ಸೇರಿ ಹೂಡಿಕೆಗೆ ತಕ್ಕ ಉದ್ಯೋಗ ಸೃಷ್ಟಿಸುವಂತೆ ಉದ್ಯಮಿಗಳನ್ನು ತಾಕೀತು ಮಾಡುವ ಇಚ್ಛಾಶಕ್ತಿ ಇಲ್ಲದಿರುವುದು ಇಂದಿನ ನಿರುದ್ಯೋಗ ಸಮಸ್ಯೆಯ ಮೂಲ ಕಾರಣವಾಗಿದೆ. ಜೊತೆ ಜೊತೆಗೆ ಬೇಕಂತಲೇ ಕೃಷಿಯನ್ನು ಹಳ್ಳ ಹಿಡಿಸಿರುವುದು, ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ನಿರ್ಲಕ್ಷ್ಯ, ಮುಂದಾಲೋಚನೆಯಿಲ್ಲದ ನೋಟು ಅಮಾನ್ಯೀಕರಣ ಮತ್ತು ಜಿಎಸ್ಟಿ ತೆರಿಗೆ ನೀತಿ ಇವೆಲ್ಲವೂ ನಿರುದ್ಯೋಗದ ಪ್ರಮಾಣ ಹೆಚ್ಚಳಗೊಳ್ಳಲು ಪ್ರಮುಖ ಕಾರಣಗಳಾಗಿವೆ.

ಇನ್ನು ರಾಜಕಾರಣಿಗಳು ಯುವಜನರಿಗೆ ಉದ್ಯೋಗ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಿತ್ತು. ಆದರೆ ಅವರು ಚುನಾವಣೆಯನ್ನು ಜಾತಿ, ಧರ್ಮ, ಹಣ ಮತ್ತು ಹೆಂಡದ ಆಧಾರದಲ್ಲಿ ಗೆಲ್ಲಲು ಬಯಸಿದ್ದಾರೆ. ಹಾಗಾಗಿ ಅವರು ಯುವಜನರನ್ನು ಕಾಲಾಳುಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಕೋಮುದಳ್ಳುರಿಗಳಿಗೆ ತಳ್ಳುತ್ತಿದ್ದಾರೆ. ನಿಮಗೆ ಕೌಶಲ್ಯವಿಲ್ಲ ಹಾಗಾಗಿ ಉದ್ಯೋಗ ಸಿಗುತ್ತಿಲ್ಲ ಎಂದು ನಂಬಿಸುತ್ತಿದ್ದಾರೆ.

ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲವೆಂಬ ವಾಸ್ತವ ಗೊತ್ತಿದ್ದೂ ಮೀಸಲಾತಿ ವಿಚಾರ ಮುಂದೆ ಮಾಡುವ ಸರ್ಕಾರಗಳು ಯುವಕರ ನಡುವೆಯೇ ಸಂಘರ್ಷಕ್ಕೆಡೆ ಮಾಡಿ ದಾರಿ ತಪ್ಪಿಸುತ್ತಿವೆ ಎನ್ನಿಸುತ್ತದೆಯೇ?

ಮೀಸಲಾತಿಯಿಂದ ಎಲ್ಲರಿಗೂ ಉದ್ಯೋಗ ಸಿಗುತ್ತಿಲ್ಲ ಎಂಬ ದೊಡ್ಡ ಸುಳ್ಳನ್ನು ಇಂದು ಎಲ್ಲೆಡೆ ಹರಿಯಬಿಡಲಾಗುತ್ತಿದೆ. ಇದರ ಹಿಂದೆ ಜಾತಿವಾದಿಗಳ, ಯಥಾಸ್ಥಿತಿವಾದಿಗಳ ಕೈವಾಡ ಇದೆ. ಇಂದು ಹೊಸ ಉದ್ಯೋಗ ಸೃಷ್ಟಿಯೇ ಆಗುತ್ತಿಲ್ಲ. ಇದರಿಂದ ಹೆಚ್ಚು ತೊಂದರೆಗೊಳಗಾಗುತ್ತಿರುವವರು ದಲಿತರು, ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾತರೇ ಆಗಿದ್ದಾರೆ. ಅಂದರೆ ಶೋಷಿತ ಸಮುದಾಯಗಳೇ ಮತ್ತಷ್ಟು ಶೋಷಣೆಗೆ ಒಳಗಾಗುತ್ತಿದ್ದಾರೆ. ಅವರ ಮೇಲೆಯೇ ಮೀಸಲಾತಿಯ ಸುಳ್ಳು ಆರೋಪವನ್ನು ಹೊರಿಸುವುದು ಮಹಾನ್ ತಪ್ಪು. ಹೆಚ್ಚು ಉದ್ಯೋಗ ಸೃಷ್ಟಿಯ ಸಾಧ್ಯತೆಯಿರುವ ಕೃಷಿಯನ್ನು ಮೇಲಕ್ಕೆತ್ತುವುದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಮೇಲೆ ಹೆಚ್ಚಿನ ಸಾರ್ವಜನಿಕ ಹೂಡಿಕೆಯಿಂದ ಮಾತ್ರ ಹೆಚ್ಚಿನ ಉದ್ಯೋಗ ಸೃಷ್ಟಿ ಸಾಧ್ಯ. ಆಗ ಮಾತ್ರ ಎಲ್ಲರಿಗೂ ಉದ್ಯೋಗ ಸಿಗಲು ಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಆದರು ತಮ್ಮ ಜಾತಿಗ್ರಸ್ಥ ಮನಃಸ್ಥಿತಿಯಿಂದ ಮೀಸಲಾತಿ ಮುಂದೆ ತಂದು ನಮ್ಮನಮ್ಮಲ್ಲೇ ಗಲಭೆ ಹಚ್ಚಲು ಮುಂದಾಗಿರುವುದು ಸರಿಯಿಲ್ಲ. ಒಂದು ಉದಾಹರಣೆ ಹೇಳುವುದಾದರೆ 2015ರಲ್ಲಿ ಕೆಪಿಎಸ್ಸಿ ವತಿಯಿಂದ ನಡೆದ ಎಸ್ಡಿಎ ಮತ್ತು ಎಫ್ಡಿಎ ಪರೀಕ್ಷೆಯ 2,463 ಹುದ್ದೆಗಳಿಗೆ 18ಲಕ್ಷದ 65ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದರು. ಕೊನೆಗೆ 2,463 ಜನ ಆಯ್ಕೆಯಾದರು. ಇದರಲ್ಲಿ ಮೀಸಲಾತಿಯ ಆಧಾರದಲ್ಲಿ ಆಯ್ಕೆಯಾದವರು ಕೇವಲ 1,232 ಜನ ಮಾತ್ರ. ಆದರೆ ಉದ್ಯೋಗ ಸಿಗದ 18ಲಕ್ಷದ 62 ಸಾವಿರ ಜನರೂ ಮೀಸಲಾತಿಯಿಂದ ನಮಗೆ ಉದ್ಯೋಗ ಸಿಕ್ಕಿಲ್ಲ ಎಂದರೆ ನಗು ಬರುವುದಿಲ್ಲವೇ?

ಇನ್ನೇನು ಚುನಾವಣೆ ಬಂದೇಬಿಡುತ್ತಿದೆ. ಚುನಾವಣೆ ಮುಗಿದೂ ಹೋಗುತ್ತದೆ. ಉದ್ಯೋಗಕ್ಕಾಗಿ ಹೋರಾಟದ ಮುಂದಿನ ದಾರಿ ಏನು?

ನಮ್ಮ ಉದ್ಯೋಗಕ್ಕಾಗಿ ಯುವಜನರ ಆಂದೋಲನ ರಚನಾತ್ಮಕ ಹೋರಾಟವಾಗಿದ್ದು, ಚುನಾವಣೆಯ ನಂತರವೂ ಇದೇ ಬಿರುಸಿನಿಂದ ನಡೆಯುತ್ತದೆ. ಭಾರತದಂತಹ ಬೃಹತ್ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಯುವಜನರಿಗೆ ಏಕಾಏಕಿ ಒಟ್ಟಿಗೆ ಉದ್ಯೋಗ ಸೃಷ್ಟಿಸಲು ಸಾಧ್ಯವಿಲ್ಲ. ಹಾಗಾಗಿ ಆಳುವ ಸರ್ಕಾರಗಳ ಮೇಲೆ ನಿರಂತರ ಒತ್ತಡ ತರುವ ಕೆಲಸವನ್ನು, ಯುವಜನರಲ್ಲಿ ಜಾಗೃತಿಯನ್ನುಂಟು ಮಾಡುವುದನ್ನು ನಾವು ಮುಂದುವರೆಸುತ್ತೇವೆ. ಆದರೆ ಈ ಚುನಾವಣೆಯಲ್ಲಿ ನಮ್ಮ ಯುವ ಪ್ರಣಾಳಿಕೆಯನ್ನು ಯಾವ ಪಕ್ಷ ಯಥಾವತ್ತಾಗಿ ತಮ್ಮ ಪಕ್ಷದ ಪ್ರಣಾಳಿಕೆಯನ್ನಾಗಿ ಮಾಡುಕೊಂಡು ಕಾಲನಿಗದಿತವಾಗಿ ಜಾರಿಗೊಳಿಸುವ ನೀಲನಕ್ಷೆಯನ್ನು ಯಾವ ಪಕ್ಷ ಪ್ರಕಟಿಸುತ್ತದೆಯೋ ಅದಕ್ಕೆ ಮಾತ್ರ ನಮ್ಮ ಬೆಂಬಲ ಎಂದು ಘೋಷಿಸಿದೆ. ಇಲ್ಲವಾದರೆ ನಿಜಕ್ಕೂ ಉದ್ಯೋಗ ಸೃಷ್ಟಿಸಬಲ್ಲ ಪರ್ಯಾಯ ಯೋಜನೆಯನ್ನಾದರೂ ಈ ಪಕ್ಷಗಳು ಮುಂದಿಡಬೇಕು. ನಮ್ಮ ಬೆಂಬಲ ಘೋಷಿಸುವ ಮುನ್ನ ಆ ಪಕ್ಷಗಳ ಇದುವರೆಗಿನ ಸಾಧನೆಯ ಟ್ರ್ಯಾಕ್ ರೆಕಾರ್ಡ್, ಈ ಯುವ ಆಂದೋಲನವನ್ನು ಅವರು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಇತ್ಯಾದಿ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ ಒಂದು ಪಕ್ಷ ಸಂಪೂರ್ಣವಾಗಿ ಒಪ್ಪಿ ನಮ್ಮ ಬೆಂಬಲ ಪಡೆದು ಗೆದ್ದ ನಂತರ ಈಡೇರಿಸದಿದ್ದರೆ ನಾವು ಆಂದೋಲನವನ್ನು ತೀವ್ರಗೊಳಿಸುತ್ತೇವೆ ಮತ್ತು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷದ ವಿರುದ್ಧ ಮತ ಚಲಾಯಿಸುವುದಾಗಿ ಎಚ್ಚರಿಕೆ ನೀಡುತ್ತೇವೆ.

ಯುವಜನರು ಇವತ್ತು ಕೋಮುವಾದ, ಮೂಲಭೂತವಾದದ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ನಿರುದ್ಯೋಗವೇ ಅವರು ಹಾದಿ ತಪ್ಪಲು ಕಾರಣವಾಗಿರುವಾಗ, ರಾಜಕೀಯದವರಿಂದಲೂ ಅವರ ದುರ್ಬಳಕೆಯಾಗುತ್ತಿದೆ. ಈ ಸ್ಥಿತಿಯಲ್ಲಿ ಅವರನ್ನು ನಿಮ್ಮ ಹೋರಾಟದ ಜೊತೆ ಹಿಡಿದಿಟ್ಟುಕೊಳ್ಳಲು ನೀವು ಕಂಡುಕೊಂಡ ದಾರಿಯೇನು?

ಇಂದು ಪಕ್ಷಭೇದವಿಲ್ಲದೇ ಎಲ್ಲಾ ಸರ್ಕಾರಗಳು ನಿರುದ್ಯೋಗವನ್ನು ಸೃಷ್ಟಿಸುತ್ತಿವೆ. ಕಾಂಗ್ರೆಸ್ ಅನ್ನು ಬೆಂಬಲಿಸುವ ಯುವಜನರು ಸಂಕಷ್ಟದಲ್ಲಿದ್ದಾರೆ. ಅದೇ ರೀತಿ ಬಿಜೆಪಿ ಅಥವಾ ಇನ್ಯಾವುದೋ ರಾಜಕೀಯ ಪಕ್ಷಗಳನ್ನು ಬೆಂಬಲಿಸುವ ಯುವಜನರು ಕೂಡ ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಈ ಆಂದೋಲನವು ಜಾತಿ, ಧರ್ಮ, ಲಿಂಗ, ಪಕ್ಷ ಭೇಧವಿಲ್ಲದೇ ಎಲ್ಲರನ್ನೂ ಒಳಗೊಳ್ಳುವ ಸೆಕ್ಯುಲರ್ ವಿಷಯವಾಗಿದೆ ಮತ್ತು ಮುಖ್ಯವಾಗಿ ಯುವಜನರನ್ನು ಒಳಗೊಳ್ಳುತ್ತದೆ. ಹಾಗೂ ಈ ಯುವಜನರು ಮತದಾರರಾಗಿರುತ್ತಾರೆ ಎಂಬುದು ಮಹತ್ವದ ವಿಷಯವಾಗಿದೆ. ರಾಜಕೀಯ ಪಕ್ಷಗಳು ಜನರ ನಿಜವಾದ ಸಮಸ್ಯೆಗಳನ್ನು ಮರೆಮಾಚಿ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು ಚರ್ಚೆ ನಡೆಸುತ್ತಿದ್ದಾರೆ. ಆದರೆ ಇದು ಹೆಚ್ಚು ದಿನ ನಡೆಯದು. ಇದೇ ರೀತಿ ನಿರುದ್ಯೋಗದ ಸಮಸ್ಯೆ ಮುಂದುವರೆದರೆ 2020ರ ವೇಳೆಗೆ ಭಾರತದಲ್ಲಿ ಉದ್ಯೋಗಕ್ಕಾಗಿ ದಂಗೆ ಹೇಳುವ ಸಂದರ್ಭ ಬರುತ್ತದೆ ಎಂಬುದನ್ನು ಈಗಾಗಲೇ ಹಲವು ಅರ್ಥಶಾಸ್ತ್ರಜ್ಞರು ಮತ್ತು ನೊಬೆಲ್ ಪ್ರಶಸ್ತಿ ಪಡೆದವರು ಎಚ್ಚರಿಸುತ್ತಾ ಬಂದಿದ್ದಾರೆ. ಹಾಗಾಗಿ ಇಂದಿನ ಸರ್ಕಾರದ ನೀತಿಗಳು ಬಂಡವಾಳಶಾಹಿಗಳ ಪರವಿವೆ. ಅವು ಉದ್ಯೋಗ ಸೃಷ್ಟಿಸುತ್ತಿಲ್ಲ. ಹಾಗಾಗಿ ಈ ನೀತಿಗಳ ವಿರುದ್ಧ ಯುವಜನರು ಅನಿವಾರ್ಯವಾಗಿ ಹೋರಾಡಲೇಬೇಕಾದ ಪರಿಸ್ಥಿತಿ ಬಂದಿದೆ. ಹಾಗಾಗಿ ಈ ಆಂದೋಲನ ದೊಡ್ಡ ಮಟ್ಟಕ್ಕೆ ಬೆಳೆಯುತ್ತದೆ ಮತ್ತು ಯುವಜನರು ಇದರ ನಾಯಕತ್ವ ವಹಿಸುತ್ತಾರೆ ಎಂಬ ಭರವಸೆ ನಮಗಿದೆ.

ಕಡೆಯದಾಗಿ, ಈ ಹೋರಾಟ ಯಾವ ರೀತಿಯಲ್ಲಿ ಗುಣಾತ್ಮಕ ಬದಲಾವಣೆಗೆ ಕಾರಣವಾದೀತೆಂದು ನಿಮಗೆ ಅನ್ನಿಸುತ್ತದೆ?

ನಾವು ಕೇವಲ ಉದ್ಯೋಗ ಕೇಳುತ್ತಿಲ್ಲ, ರಾಷ್ಟ್ರನಿರ್ಮಾಣದಲ್ಲಿ ನಮ್ಮ ಪಾಲು ಕೇಳುತ್ತಿದ್ದೇವೆ ಎಂಬ ಆಶಯ ಹೊಂದಿರುವ ಈ ಯುವಾಂದೋಲನವು ರಾಷ್ಟ್ರನಿರ್ಮಾಣದ ಮೂಲಕ ನಮ್ಮ ವ್ಯಕ್ತಿಗತ ಕೇರಿರ್ ನಿರ್ಮಾಣ ಎಂದು ಘೋಷಿಸಿದೆ. ಜಾತಿ, ಧರ್ಮ, ಹಣ ಮತ್ತು ಹೆಂಡದ ಆಧಾರದಲ್ಲಿ ನಡೆಯುತ್ತಿರುವ ಇಂದಿನ ಚುನಾವಣೆಗಳನ್ನು ಬದಲಿಸಿ ಉದ್ಯೋಗ ಮತ್ತು ದೇಶದ ಅಭಿವೃದ್ಧಿಯ ಆಧಾರದಲ್ಲಿ ನಡೆಸಬೇಕು, ಮತ್ತು ಈ ಬಾರಿಯ ಚುನಾವಣೆಯ ವಿಷಯ ಜನರ ನೈಜ ಬದುಕಿನ ಸಮಸ್ಯೆಯಾದ ನಿರುದ್ಯೋಗವೇ ಆಗಿರಬೇಕೆಂಬುದು ನಮ್ಮ ಅಭಿಮತ. ನಾವು ಎಲ್ಲೋ ಕೆಲವೊಂದಿಷ್ಟು ಉದ್ಯೋಗಗಳನ್ನು ಸೃಷ್ಟಿಸಿ, ಸಂಬಳ ಹೆಚ್ಚಿಸಿ, ಸೌಲಭ್ಯಗಳನ್ನು ನೀಡಿ ಎಂದು ಕೇಳುತ್ತಿಲ್ಲ. ಬದಲಿಗೆ ಸರ್ಕಾರದ ನೀತಿಗಳಲ್ಲಿ ಬದಲಾವಣೆ ತಂದು ದೊಡ್ಡ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸಿ ಎಂದು ಕೇಳುತ್ತಿದ್ದೇವೆ. ಈ ರೀತಿ ಪಾಲಿಸಿಯಲ್ಲಿ ಬದಲಾವಣೆ ಬೇಕಾದರೆ ಅದಕ್ಕೆ ದೊಡ್ಡ ರಾಜಕೀಯ ಆಂದೋಲನವೇ ನಡೆಯಬೇಕೆಂದು ತಿಳಿದಿದ್ದೇವೆ. ಒಟ್ಟಾರೆಯಾಗಿ ಯುವಜನರನ್ನು ಕಡೆಗಣಿಸಿರುವ ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳಿಗೆ ಬಿಸಿಮುಟ್ಟಿಸಲು, ಅವರು ವಾಸ್ತವವಾಗಿ ಯೋಚಿಸುವಂತೆ ಮಾಡಲು ಇಂತಹ ಆಂದೋಲನದ ಅಗತ್ಯ ಇದ್ದೇ ಇದೆ. ಅದೇ ರೀತಿ ರಾಜಕಾರಣಿಗಳನ್ನು ಕುರುಡಾಗಿ ಅನುಸರಿಸುವುದು ಬಿಟ್ಟು ಅವರನ್ನು ಪ್ರಶ್ನಿಸುವುದನ್ನು ಇಂದಿನ ಯುವಜನತೆಗೆ ಕಲಿಸಬೇಕಿದೆ. ಒಮ್ಮೆ ಅವರು ಪ್ರಶ್ನಿಸುವುದನ್ನು ಕಲಿತರೆ ಆಗ ಬದಲಾವಣೆ ತನ್ನಿಂದ ತಾನೇ ಆರಂಭವಾಗುತ್ತದೆ. ಪ್ರಶ್ನಿಸುವುದು ಪ್ರಜಾಪ್ರಭುತ್ವದ ಸುಂದರ ಗುಣ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲಿಕ್ಕೆ, ಸುಂದರ ಗೌರವಯುತ ಜೀವನ ಎಲ್ಲರಿಗೂ ಸಾಧ್ಯವಾಗಿಸುವುದಕ್ಕಾಗಿ ನಡೆಯುತ್ತಿರುವ ಈ ಆಂದೋಲನವನ್ನು ನೀವು ಬೆಂಬಲಿಸಿ.

Share

Leave a comment

Your email address will not be published. Required fields are marked *

Recent Posts More

 • 1 week ago No comment

  ನಮ್ಮ ಕಣ್ಣುಗಳೇಕೆ ಭಾರವಾಗುತ್ತಿವೆ?

        ಕವಿಸಾಲು           ತಿರುಕನ ಕನಸಲ್ಲ ನನ್ನದು ತಿರುಕನಲ್ಲ ಕಣ್ರಿ ನಾನು ನಿಮ್ಮ ಮರುಕ ಗಿರುಕ ಎಲ್ಲಾ ನನಗೆ ಹಿಡಿಸಲ್ಲ ಅವ್ರು ಕೋಟೆ ಕಟ್ಟಿ ನ್ಯಾಯ ನೀತಿಗಳ ತಮ್ಮಲ್ಲೆ ಬಚ್ಚಿಟ್ಟು ಒಳಗೆ ಬೆಚ್ಚಗೆ ಕೂತಿರಬಹುದು ನ್ಯಾಯಕ್ಕೆ ಕನ್ನ ಹಾಕೋ ನಾನು ತಿರುಕ ಹೇಗೆ ಆಗಬೇಕು? ತಿರುಕನದೇನೋ ಕನಸಿತ್ತು ನನ್ನದು ಕೂಡಾ ಕನಸೆಂದು ಆ ಕೋಟೆ ಒಳಗಿರುವವರು ಕನವರಿಸುತ್ತಿರಬಹುದು ಬೂದಿ ಮುಚ್ಚಿದ ...

 • 1 week ago No comment

  ಕೊಂಕಣಿ ಪ್ರತಿಭೆಯನ್ನರಸಿ ಕರ್ನಾಟಕಕ್ಕೆ ಬಂದ ಪ್ರಶಸ್ತಿ

      ಅತಿಥಿ           ಈ ಬಾರಿ ಕರ್ನಾಟಕವು ಎರಡು ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು ಎಂದರೆ ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಪ್ರಮಾದವೇನಾದರೂ ಆಯಿತೇ? ಒಂದೇ ಪುರಸ್ಕಾರವನ್ನು ಇಬ್ಬರಿಗೆ ಹಂಚಿರಬಹುದೇ? ಎಂದೆಲ್ಲ ಯೋಚಿಸಿ ತಲೆ ಕೆರೆದುಕೊಳ್ಳುತ್ತಿದ್ದೀರಾ? ಇಲ್ಲಿದೆ ನೋಡಿ ಉತ್ತರ. ಕನ್ನಡಕ್ಕೆ 2018ರ ಕೇಂದ್ರಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಘೋಷಣೆಯಾದಾಗಲೇ ಕರ್ನಾಟಕದ ಕೊಂಕಣಿ ಕವಯತ್ರಿ ವಿಲ್ಮಾ ...

 • 2 weeks ago No comment

  ಸಾಹಸದ ಆ ನಿಮಿಷಗಳು

          ಮೊದಲ ಬಾರಿಯಾದ್ದರಿಂದ ಕೆಲವೇ ನಿಮಿಷಗಳ ಈ ಜಿಗಿತದ ರೋಚಕತೆ ಒಂದು ತಿಂಗಳ ಕಾಲ ನನ್ನನ್ನು ಆವರಿಸಿದ್ದು ಸುಳ್ಳಲ್ಲ.         ಬ್ಯಾಂಕರುಗಳು, ಅಕೌಂಟೆಂಟುಗಳು ವರ್ಷದ ಮೊದಲಿಂದ ಹಿಡಿದು ಮಾರ್ಚಿ ತಿಂಗಳವರೆಗೆ ಭಾರೀ ಬ್ಯುಸಿಯಾಗುವಂತೆ ಇಂಗ್ಲೆಂಡಿನ ಸರ್ಕಾರೀ ದಂತ ವೈದ್ಯಕೀಯ ರಂಗದಲ್ಲೂ ಧಾವಂತ ಕಾಣಿಸಿಕೊಳ್ಳುತ್ತದೆ. ಸರ್ಕಾರದಿಂದ ಗುತ್ತಿಗೆ ಪಡೆದ ಕೆಲಸವನ್ನು ಮಾರ್ಚಿಯ ಕೊನೆಗೆ ಪೂರ್ತಿಗೊಳಿಸದಿದ್ದರೆ ಮುಂದಿನ ವರ್ಷದ ಕಾಂಟ್ರಾಕ್ಟ್ ನ್ನು ಕಳೆದುಕೊಳ್ಳುವ ...

 • 3 weeks ago No comment

  ಪ್ರಸಾದ್ ಪಟ್ಟಾಂಗ | ಫಿಫಾ ಫಿವರ್

  ಅಂದು ಎಲ್ಲರ ಕಣ್ಣುಗಳೂ ಬೇರೇನನ್ನೋ ದಿಟ್ಟಿಸುತ್ತಿದ್ದವು. ಅದೊಂದು ಸುಂದರ ರೆಸ್ಟೊರೆಂಟ್. ಆವರಣದ ಒಳಗೂ ಹೊರಗೂ ಬಂದವರಿಗೆ ಕುಳಿತುಕೊಳ್ಳಲು ಸಾಕಷ್ಟು ಜಾಗವಿರುವಂಥದ್ದು. ಜೊತೆಗೇ ಒಂದು ಪುಟ್ಟ ಮೈದಾನದಂತಿರುವ ಜಾಗವನ್ನೂ, ಈಜುಕೊಳವನ್ನೂ ಹೊಂದಿರುವ ಸುಸಜ್ಜಿತ ರೆಸ್ಟೊರೆಂಟ್. ನಾನು ಪ್ರತೀ ತಿಂಗಳು ಲುವಾಂಡಾಗೆ ಬಂದಿಳಿದಾಗಲೆಲ್ಲಾ ಇಲ್ಲಿಯ ಸಿಬ್ಬಂದಿಯೇ ನನಗೆ ಅನ್ನದಾತರು. ಹೀಗಾಗಿ ಎಲ್ಲೆಲ್ಲೂ ನನಗೆ ಪರಿಚಿತ ಮುಖಗಳೇ. ಅಂದು ಮಾತ್ರ ಸಿಬ್ಬಂದಿಯೊಬ್ಬ ಗಡಿಬಿಡಿಯಲ್ಲಿ ನನ್ನ ಆರ್ಡರ್ ಬರೆದುಕೊಂಡು ಅಷ್ಟೇ ಅವಸರದಲ್ಲಿ ಖಾದ್ಯಗಳನ್ನು ತಂದಿಟ್ಟು ...

 • 3 weeks ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ದಾರಿಯೇ ದೈವ… ವೈಷ್ಣೋದೇವಿ

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...


Editor's Wall

 • 11 May 2018
  2 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

 • 10 May 2018
  2 months ago No comment

  ಒಂದು ಪುಸ್ತಕ; ವಾರವಿಡೀ ಬಿಡುಗಡೆ!

  ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

 • 03 May 2018
  2 months ago No comment

  ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                    ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

 • 30 April 2018
  3 months ago No comment

  ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

  ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

 • 28 April 2018
  3 months ago No comment

  ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

  ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...