Share

ಕಾದಂಬಿನಿ ಕಾಲಂ | ಅಂಬೇಡ್ಕರ್ ಎಂದರೆ ಈ ಪರಿ ಹಗೆಯೇಕೆ?

 

 

 

 

 

 

 

 

 

ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು.

ಗ ಕೆಲವು ವರ್ಷಗಳ ಹಿಂದಷ್ಟೇ ಅದುವರೆಗೂ ಏಪ್ರಿಲ್ ಹತ್ತರಂದು ಪರೀಕ್ಷಾ ಫಲಿತಾಂಶಗಳನ್ನು ನೀಡಿ ಮಕ್ಕಳಿಗೆ ರಜೆ ಘೋಷಿಸುತ್ತಿದ್ದ ಶಾಲೆಗಳಲ್ಲಿ ಏಪ್ರಿಲ್ 14ರ ತನಕ ಶಾಲೆಗಳಿಗೆ ಬೇಸಿಗೆ ರಜೆ ಘೋಷಿಸಬಾರೆದೆಂದು ಏಪ್ರಿಲ್ 14ರಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರರ ಜನ್ಮದಿನಾಚರಣೆಯ ನಂತರ ರಜೆ ಕೊಡತಕ್ಕದ್ದೆಂದು ಸೂಚನೆ ಹೊರಡಿಸಲಾಗಿತ್ತು. ಈ ನಿರ್ಧಾರದಿಂದ ಪೋಷಕರು, ಕೆಲ ಪತ್ರಿಕೆಯವರು ಕನಲಿ ಕೂತಿದ್ದರು. ಶಾಲೆಗೆ ಒಂದು ದಿನ ರಜೆ ಕೊಟ್ಟರೆ ಹೇಗಪ್ಪಾ ಮಕ್ಕಳನ್ನು ಸಂಬಾಳಿಸುವುದು ಎಂದು ಗೋಳಾಡುವ, ಬೇಸಗೆ ದಸರಾ ರಜೆಗಳಲ್ಲಿ ಕೋಚಿಂಗ್ ಕ್ಲಾಸ್, ಬೇಸಿಗೆ ಶಿಬಿರ, ಟ್ಯೂಷನ್ ಮುಂತಾದವುಗಳಿಗೆ ದೂಡುವ ಪೋಷಕರಿಗೆ ಸರಕಾರದ ನಿರ್ದೇಶನದಿಂದ ಇದ್ದಕ್ಕಿದ್ದಂತೆ ಮಕ್ಕಳ ಬಾಲ್ಯ, ಅವರ ಆಟ, ಅವರನ್ನು ಊರಿಗೆ ಕಳಿಸುವವರಿಗೆ ಅವರ ಅಜ್ಜ ಅಜ್ಜಿ ಮಡಿಲಿನ ಸುಖದಿಂದ ಮಕ್ಕಳನ್ನು ವಂಚಿಸುತ್ತಿರುವ ಕರುಳುಬೇನೆಗಳೆಲ್ಲ ಉಲ್ಬಣಗೊಂಡಿದ್ದವು. ಇವು ಡಾ.ಬಾಬಾ ಸಾಹೇಬ್ ಅಂಬೇಡ್ಕರರ ಮೇಲಿನ ಅಸಹನೆಯಲ್ಲದೆ ಬೇರೇನೂ ಆಗಿರಲಿಲ್ಲ. ಅಲ್ಲಿಂದ ಈಚೆಗೆ ಗಮನಿಸುತ್ತೇನೆ, ಈಗ ಸರಕಾರಿ ಶಾಲೆಗಳಲ್ಲಿ ಮಾತ್ರ ಏಪ್ರಿಲ್ 14ರವರೆಗೆ ಶಾಲೆ ನಡೆಸಿ ಅಂಬೇಡ್ಕರ್ ಜಯಂತಿ ಆಚರಿಸಿ ರಜೆ ಕೊಡುತ್ತಾರೆ. ರಜೆಯ ದಿನಗಳನ್ನೂ ರ್ಯಾಂಕಿನ ಓಟದಲ್ಲಿ ಮಕ್ಕಳನ್ನು ಓಡಿಸುವುದಕ್ಕಾಗಿ, ಉತ್ತಮ ಫಲಿತಾಂಶದಿಂದ ತಮ್ಮ ಶಾಲೆಯ ಪ್ರತಿಷ್ಠೆ ಮೆರೆಯುವ ಖಾಸಗಿ ಶಾಲೆಗಳಿಗೆ ಅಂಬೇಡ್ಕರ್ ಜಯಂತಿ ಆಚರಿಸುವುದು ಬೇಕಿಲ್ಲ. ನಾನು ಯೋಚಿಸುತ್ತೇನೆ, ನಮ್ಮ ಸಂವಿಧಾನಶಿಲ್ಪಿಯ ಜನ್ಮದಿನ ಆಚರಣೆಯ ನಂತರವೇ ಶಾಲೆಗೆ ರಜೆ ಕೊಡುವ ನಿಯಮವೊಂದನ್ನು ರೂಪಿಸಬೇಕೆಂದು ಯೋಚಿಸಲು ಅಷ್ಟು ತಡವೇಕಾಯಿತು? ಈ ನಿಯಮ ಜಾರಿಯಾದ ಮೇಲೂ ಖಾಸಗಿ ಶಾಲೆಗಳ ಮೇಲೆ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ಆದೇಶವೇಕಿಲ್ಲ? ಎಂದು.

ಸ್ವಾತಂತ್ರ್ಯಾನಂತರದ ಇಷ್ಟು ವರ್ಷಗಳಲ್ಲಿ ಸಂವಿಧಾನಶಿಲ್ಪಿ ಡಾ. ಅಂಬೇಡ್ಕರರು ವಿಶ್ವಮಾನ್ಯರಾದರೂ ಭಾರತದಲ್ಲಿ ಗಾಂಧೀಜಿ ಮತ್ತು ಉಳಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದರೆ ಸಿಕ್ಕ ಗೌರವ, ಮನ್ನಣೆ ತೀರ ಕಡಿಮೆ. ಈ ನಿರಂತರ ಉಪೇಕ್ಷೆಯ ಹಿಂದಿನ ಕಾರಣ ತಿಳಿಯದ್ದೇನಲ್ಲ. ಇದರ ನಡುವೆ ಕೆಲವರು ಅಂಬೇಡ್ಕರ್ ಸಂವಿಧಾನವನ್ನೇ ರಚಿಸಲಿಲ್ಲ, ಅದನ್ನು ಬರೆದವರು ಇಂತಿಂಥವರು ಎಂದೊಂದು ಸುಳ್ಳನ್ನು ವ್ಯಾಪಕವಾಗಿ ಹಬ್ಬಿಸಿದರು. ಯಾವಾಗ ಸುಳ್ಳನ್ನು ಸಾಬೀತು ಮಾಡಲು ಅಸಾಧ್ಯವಾಯಿತೋ, ತೀವ್ರ ವಿರೋಧ ಕಂಡುಬಂದಿತೋ ಆಗ ಅಂಬೇಡ್ಕರರನ್ನು ಗೌರವಿಸುವ ನಾಟಕವಾಗಿ ಅಂಬೇಡ್ಕರ್ ವಾದಿಗಳನ್ನೂ, ಸಂವಿಧಾನದ ಆಶಯಗಳಲ್ಲಿ ನಂಬಿಕೆ ಇಟ್ಟವರನ್ನೂ ತಣ್ಣಗಾಗಿಸುವ ಕೆಲಸ ಪ್ರಧಾನಿಗಳಿಂದ ಹಿಡಿದು ಅವರ ಅನುಯಾಯಿಗಳವರೆಗೂ ನಡೆಯಿತು. ಆ ನಂತರ ಅದೇ ಬುಡದಿಂದಲೇ ಸಂವಿಧಾನವನ್ನು ಕಿತ್ತೊಗೆಯಬೇಕೆಂಬ ಹೇಳಿಕೆಗಳೂ ಬಂದವು.

ಈ ನಡುವೆ ಭಾರತದಲ್ಲಿ ಅಂಬೇಡ್ಕರ್ ಪ್ರತಿಮೆ ನಿಲ್ಲಿಸಿ, ಅಂಬೇಡ್ಕರ್ ಭವನಗಳನ್ನು ಕಟ್ಟಿಸುವುದು, ರಸ್ತೆಗಳಿಗೆ, ವೃತ್ತಗಳಿಗೆ ಅಂಬೇಡ್ಕರ್ ಹೆಸರಿಡುವುದು ಇಷ್ಟು ಮಾಡಿ ಕೈ ತೊಳೆದುಕೊಳ್ಳುವ ಕೆಲಸವಾಗಿದೆ. ಇಷ್ಟು ಮಾಡಿದರೆ ಅಂಬೇಡ್ಕರ್ ವಿಚಾರಧಾರೆಗೆ ಪೂರಕ ಕೆಲಸ ಮಾಡಿದಂತೆ ಎಂದು ಸರಕಾರಗಳೂ ನಂಬಿಕೊಂಡಂತಿದೆ. ಅಂಬೇಡ್ಕರರ ವಿಚಾರಧಾರೆಗಳನ್ನು ಅರಿತು ಮೈಗೂಡಿಸಿಕೊಳ್ಳದ ಸಮಾಜದಲ್ಲಿ ಅಂಬೇಡ್ಕರರ ಮೇಲಿನ ಹಗೆಯಿಂದ ಅವರ ಸಮಾನತೆಯ ಕನಸಿಗೆ ಧಕ್ಕೆಯುಂಟುಮಾಡುವವರನ್ನು ಬೆಳೆಯಗೊಟ್ಟು, ಇದು ಎಲ್ಲಿಯವರೆಗೆ ನಡೆಯುತ್ತದೋ ಅಲ್ಲಿಯವರೆಗೂ ಮೂಲಭೂತವಾದಿ ಮನಃಸ್ಥಿತಿಯವರು ಅಂಬೇಡ್ಕರ್ ಪ್ರತಿಮೆಗಳನ್ನು ಭಗ್ನಗೊಳಿಸುವುದೂ ಪ್ರತಿಮೆಗೆ ಕೇಸರಿ ಬಣ್ಣ ಬಳಿಯುವುದೂ ಅವರ ಹೆಸರನ್ನು ವಿರೂಪಗೊಳಿಸಲು ಯತ್ನಿಸುವುದೂ ನಡೆಯುತ್ತಿದೆ. ಸಮಾಜದಲ್ಲಿ ಅಶಾಂತಿಯನ್ನು ಉಲ್ಬಣಗೊಳಿಸುವುದೇ ಅವರ ಕಾರ್ಯತಂತ್ರವಾಗಿರುವಾಗ ಜನತೆ ಇದಕ್ಕೆ ವಿಚಲಿತರಾಗಿರುವಾಗ ಅಂಬೇಡ್ಕರರ ವಿಚಾರಗಳಿಂದ ಸಮಾಜವನ್ನು ಪ್ರಭಾವಿತಗೊಳಿಸುವ ವಿಚಾರ ಹಿನ್ನೆಲೆಗೆ ಸರಿಯುತ್ತದೆ.

ಹಾಗಾದರೆ ಅಂಬೇಡ್ಕರರನ್ನು ಮತ್ತವರು ಅಹೋರಾತ್ರಿ ಶ್ರಮಿಸಿ ರಚಿಸಿದ ಸಂವಿಧಾನವನ್ನೂ, ಅವರ ವೈಚಾರಿಕ ಕೃತಿಗಳನ್ನೂ ಕಂಡರೆ ಈ ಪರಿ ದ್ವೇಷ ಏಕೆ? ಡಾ.ಬಾಬಾ ಸಾಹೇಬ್ ಅಂಬೇಡ್ಕರರು ಈ ಶ್ರೇಣೀಕೃತ ಜಾತಿ ವ್ಯವಸ್ಥೆಯ ಅತ್ಯಂತ ಕೆಳ ಸ್ಥರದ, ಆಸ್ಪೃಶ್ಯತೆಯ ಆಚರಣೆಗೆ ಗುರಿಯಾದ ಸಮುದಾಯದಲ್ಲಿ ಹುಟ್ಟಿದವರು. ಅವರ ಚಿಂತನೆಗಳನ್ನು ಆಶಯಗಳನ್ನು ಅಪ್ಪಿಕೊಳ್ಳುವುದು, ಒಪ್ಪಿಕೊಳ್ಳುವುದು ಹಿಂದೂ ಮೂಲಭೂತವಾದಿ ಮನಃಸ್ಥಿತಿಗೆ ಎಂದೂ ಒಪ್ಪಿತವಿಲ್ಲ. ಇವರಿಗೆ ಶಿಕ್ಷಣ ನಿಷಿದ್ಧವಾಗಿರುವಾಗಲೂ ಶಿಕ್ಷಣವನ್ನು ಪಡೆದು ಸಂವಿಧಾನವನ್ನು ರಚಿಸಿ, ಈ ದೇಶಕ್ಕೆ ಕಂಟಕವಾದ ಶ್ರೇಣೀಕೃತ ಜಾತಿವ್ಯವಸ್ಥೆಯನ್ನೂ ಅದರಲ್ಲೇ ಬೆಸೆದುಕೊಂಡ ವರ್ಗ ತಾರಮ್ಯವನ್ನೂ ನಿವಾರಿಸಬೇಕು, ಸರ್ವರಿಗೂ ಸಮಪಾಲು ಸಮಬಾಳು ಪರಿಕಲ್ಪನೆಯಡಿಯ ಸಮಾನತೆ ಸೃಷ್ಟಿಯಾಗಬೇಕು ಎಂದು ಕನಸಿದ್ದು, ಈ ಕನಸು ಈ ದೇಶದ ಮೇಲೆ ಹಿಡಿತ ಸಾಧಿಸಲು ಬಯಸುವ ಹಿಂದೂ ಪುರೋಹಿತಶಾಹಿ ಮತ್ತು ಬ್ರಾಹ್ಮಣವಾದಿ ಚಿಂತನೆಯ ಮೂಲಕ್ಕೇ ಕೊಡಲಿಪೆಟ್ಟು ಬೀಳುವುದರಿಂದ ಬಾಬಾ ಸಾಹೇಬರ ಮೇಲೆ ಇನ್ನಿಲ್ಲದ ದ್ವೇಷ. ಈ ದೇಶದಿಂದ ಬಾಬಾ ಸಾಹೇಬರ ಚಿಂತನೆಗಳನ್ನೂ, ಈ ಚಿಂತನೆಗಳು ಬೇರೂರಲು ಅವಕಾಶ ಕಲ್ಪಿಸುವ ಸಂವಿಧಾನವನ್ನೂ ಕಿತ್ತೊಗೆದಲ್ಲಿ ತಮ್ಮ ಹಿಂದೂ ಮೂಲಭೂತವಾದವನ್ನು ನೆಲೆಗೊಳಿಸಬಹುದು ಎಂಬುದು ಅಂಬೇಡ್ಕರ್ ವಿರೋಧಿ ಮತ್ತು ಸಂವಿಧಾನ ವಿರೋಧಿಗಳ ಲೆಕ್ಕಾಚಾರ.

ನಾನು ಒಂದು ಕಛೇರಿಗೆ ಹೋದಾಗ ಇಂಥದ್ದೇ ಮನಃಸ್ಥಿತಿಯ ಕೆಲ ಅಧಿಕಾರಿಗಳು ಖುಷಿಯಿಂದ ಜೋರು ಜೋರಾಗಿ ಕೇಕೆ ಹಾಕಿ ನಗುತ್ತ ಸಂಭ್ರಮಿಸುವುದು ಕಂಡಿತು. ಸಂಭ್ರಮಕ್ಕೆ ಎರಡು ಕಾರಣಗಳಿದ್ದವು. ಮೊದಲನೇದಾಗಿ ಪರಿಶಿಷ್ಟ ಜಾತಿ ಪಂಗಡದವರಿಗೆ ಉದ್ಯೋಗದಲ್ಲಿ ಹಿಂಬಡ್ತಿ ಆದೇಶವಾಗಿದ್ದುದು ಒಂದಾದರೆ, ಅವರ ಕಛೇರಿಯಲ್ಲಿ ನಿಷ್ಠೆ, ಪ್ರಾಮಾಣಿಕತೆಗೆ ಹೆಸರಾದ ನಿಷ್ಟುರ ವ್ಯಕ್ತಿತ್ವದ ಮಹಿಳಾ ಅಧಿಕಾರಿಯೊಬ್ಬರಿಗೂ ಇದೇ ಆದೇಶದ ಹಿನ್ನೆಲೆಯಲ್ಲಿ ಹಿಂಬಡ್ತಿಯಾಗಿತ್ತು. ಈ ಕಾರಣದಿಂದ ಆಕೆ ಸ್ವಯಂ ನಿವೃತ್ತಿ ಪಡೆದಿದ್ದರು. ಇದರಿಂದ, ಒಂದು ಜನಾಂಗದ ಏಳಿಗೆಯ ವಿರುದ್ಧದ ತಮ್ಮ ಹಗೆಯ ಬೆಂಕಿಗೆ ತುಪ್ಪ ಸುರಿದಂತಾಗಿತ್ತು ಮತ್ತು ಈಕೆಯ ನಿರ್ಗಮನದಿಂದ ತಮ್ಮ ಲಂಚಗುಳಿತನಕ್ಕೆ ಇದ್ದ ಅಡ್ಡಿ ಆತಂಕಗಳೆಲ್ಲ ಕೊನೆಗೊಂಡಿದ್ದವು.

ದೇಶದೆಲ್ಲೆಡೆ ದಲಿತರನ್ನೂ, ಅಂಬೇಡ್ಕರ್ ವಿಚಾರಧಾರೆಯ ಕಡೆ ಒಲವುಳ್ಳವರನ್ನೂ, ಸಂವಿಧಾನದ ಮೇಲೆ ನಂಬುಗೆ ಉಳ್ಳವರನ್ನೂ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ದನಿಯೆತ್ತಿದವರ ಸದ್ದಡಗಿಸಲಾಗುತ್ತಿದೆ. ಹಿಂಸೆಯ ರಕ್ತಸಿಕ್ತ ಚರಿತ್ರೆಯೊಂದು ಒಬ್ಬ ರಾಜ, ಒಂದು ಧರ್ಮ, ಒಂದು ಸಂಸ್ಕೃತಿ ಇರಬೇಕೆಂದು ಬಯಸುವವರ ಒಂದು ಬಣ್ಣದ ಹಾಸಿನಡಿ ಬರೆಯಲ್ಪಡುತ್ತಿದೆ. ಈ ಎಲ್ಲವನ್ನೂ ಕಂಡರೆ ಸರಕಾರವೊಂದು ಇಂಥ ಮೂಲಭೂತವಾದವನ್ನು ಪೋಷಿಸುತ್ತ ಸರ್ವಾಧಿಕಾರಿ ನೀತಿಯತ್ತ ಧಾಪುಗಾಲಿಡುವುದು ಕಣ್ಣಿಗೆ ರಾಚತೊಡಗಿದೆ.

ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳೆಂಬ ಮೂರು ತತ್ವಗಳಲ್ಲಿ ನಂಬಿಕೆಯಿಟ್ಟು 1935ರಲ್ಲಿಯೇ ‘ನಾನು ಹಿಂದೂ ಆಗಿ ಸಾಯಲಾರೆ’ ಎಂದು ಹೇಳಿದ ಬಾಬಾ ಸಾಹೇಬ್ ಅಂಬೇಡ್ಕರ್, ಹಿಂದೂ ಧರ್ಮದಲ್ಲಿ ಆತ್ಮಸಾಕ್ಷಿ, ವಿವೇಕಶೀಲತೆ ಮತ್ತು ಸ್ವತಂತ್ರ ಚಿಂತನೆಯೊಡಗೂಡಿದ ಅಭಿವೃದ್ಧಿಗೆ ಅವಕಾಶವೇ ಇಲ್ಲವೆನ್ನುತ್ತಾರೆ. ಸಾಮಾಜಿಕ ಅಸಮಾನತೆ ಆಧಾರಿತ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯನ್ನು ಮಡಿಲಲ್ಲಿಟ್ಟುಕೊಂಡು ಬೆಳೆಸುತ್ತ ಬಂದಿರುವ ಹಿಂದೂ ಧರ್ಮದ ಮೌಢ್ಯ ಮತ್ತು ಕಂದಾಚಾರಗಳ ವಿರುದ್ಧ ಸಮರವನ್ನೇ ಸಾರಿದ ಗೌತಮ ಬುದ್ಧರ ‘ಸಮಪಾಲು ಸಮಬಾಳು’ ಪರಿಕಲ್ಪನೆಯ ಬೌದ್ಧ ಧರ್ಮ ಅಂಬೇಡ್ಕರರ ಪರ್ಯಾಯ ಆಯ್ಕೆಯಾಗಿತ್ತು. ಲಿಂಗತಾರತಮ್ಯ, ಕರ್ಮ ಸಿದ್ಧಾಂತ, ಪಾಪಪುಣ್ಯ ಪರಿಕಲ್ಪನೆ, ಸ್ವರ್ಗ ನರಕ, ಪುನರ್ಜನ್ಮ, ಮೇಲು ಕೀಳು, ಚಾತುರ್ವರ್ಣ್ಯ, ಸ್ಪೃಶ್ಯ ಅಸ್ಪೃಶ್ಯ ಇತ್ಯಾದಿಗಳನ್ನು ಪೋಷಿಸಿಕೊಂಡು ಬಂದ ಪುರೋಹಿತಶಾಹಿ ಮತ್ತು ಬ್ರಾಹ್ಮಣವಾದವನ್ನು ವಿರೋಧಿಸಿ ಸಮಾನತೆಯ ಆಧಾರಿತ ಸಮಾಜವೊಂದರ ನಿರ್ಮಾಣಕ್ಕೆ ಯತ್ನಿಸಿದ ಬೌದ್ಧಧರ್ಮಕ್ಕೆ ಅವರು ಮತಾಂತರ ಹೊಂದಲು ಬಯಸಿದರು.

ಅಂಬೇಡ್ಕರ್ ಅವರು ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಡಾ. ಗೋಲ್ಡನ್ ವೈಜ್ ಅವರ ಮನಃಶಾಸ್ತ್ರ ವಿಚಾರಸಂಕಿರಣದಲ್ಲಿ ಪದವಿ ವಿದ್ಯಾರ್ಥಿಯಾಗಿ ಮಂಡಿಸಿದ ‘ಕಾಸ್ಟ್ ಇನ್ ಇಂಡಿಯಾ – ದಿ ಮೆಕ್ಯಾನಿಜಂ, ಜೆನಿಸಿಸಂ ಅಂಡ್ ಡೆವಲಪ್ ಮೆಂಟ್’ ಎನ್ನುವ ಪ್ರಬಂಧದಲ್ಲಿ ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಹೇಗೆ ಘನೀಕರಿಸಿತು ಎನ್ನುವುದನ್ನು ವಿಶದವಾಗಿ ವಿವರಿಸುತ್ತಾರೆ. ಈ ಇಡೀ ವ್ಯವಸ್ಥೆಯ ಮೂಲ ಲಕ್ಷಣ ‘ಒಳ ಬಾಂಧವ್ಯ ವಿವಾಹ’ ಎಂದು ಹೇಳುತ್ತಾರೆ. ಮೊದಲು ಬ್ರಾಹ್ಮಣ ಅನುಸರಿಸಿದ ಈ ‘ಒಳಬಾಂಧವ್ಯ ವಿವಾಹ’ ಪದ್ಧತಿಯನ್ನೇ ಮುಂದೆ ಎಲ್ಲಾ ಜಾತಿಗಳವರು ಅನುಸರಿಸಿದ್ದರಿಂದ ಈ ಶ್ರೇಣೀಕೃತ ಜಾತಿವ್ಯವಸ್ಥೆ ಕಗ್ಗಂಟಾಯಿತು. ಹೀಗೆ ಒಂದಕ್ಕೊಂದು ಸಂಸರ್ಗದಲ್ಲಿ ತೊಡಗದಂತಹ ಸಾಮಾಜಿಕ ಸನ್ನಿವೇಶದಲ್ಲಿ ಸಮಾಜವು ನೂರೆಂಟು ಜಾತಿಗಳಲ್ಲಿ ಛಿದ್ರಗೊಂಡು ಮೇಲು ಕೀಳು ಉಂಟಾಗಿ ಕಟ್ಟಕಡೆಯ ಸ್ಥಾನದ ತುಚ್ಛೀಕರಿಸಲ್ಪಟ್ಟ, ಸಮಾಜದ ಅಂಚಿಗೆ ತಳ್ಳಲ್ಪಟ್ಟ ಜಾತಿಗಳು ಅನುಭವಿಸಿದ ಅಪಮಾನ, ನೋವು ಯಾತನೆ, ಹಿಂಸೆ, ಶೋಷಣೆಯನ್ನು ಚಿತ್ರಿಸುವ ಅಂಬೇಡ್ಕರ್, ಜಾತಿಯಿಂದ ಮುಕ್ತಿಯಾಗದ ಹೊರತು ಹಿಂದೂ ಧರ್ಮಕ್ಕೆ ಉಳಿಗಾಲವಿಲ್ಲವೆನ್ನುತ್ತಾರೆ. ಆದರೆ ಹೀಗೆ ಹೇಳಿದ ಅಂಬೇಡ್ಕರ್ 1935ರ ಅಕ್ಟೋಬರ್ 13ರಂದು ಮಹಾರಾಷ್ಟ್ರಾದ ಇಯೋಲಾದಲ್ಲಿ ನಡೆದ ಸಭೆಯಲ್ಲಿ, ‘ಹಿಂದೂ ಸಮಾಜವನ್ನು ಸುಧಾರಿಸುವ ಎಲ್ಲ ಭರವಸೆಗಳನ್ನು ಕಳೆದುಕೊಂಡಿದ್ದೇನೆ. ಸ್ಪೃಶ್ಯರ ಮನೋಭಾವದಲ್ಲಿ ಏನೂ ಬದಲಾವಣೆಯಾಗಿಲ್ಲ, ಅವರು ನಮ್ಮ ಜೊತೆ ಪ್ರೀತಿ-ಆದರ ಮತ್ತು ಬಾಂಧವ್ಯದಿಂದ ನಡೆದುಕೊಳ್ಳಲು ಸಿದ್ಧರಿಲ್ಲ. ಹೀಗಾಗಿ ನಾವು ಹಿಂದೂಗಳಿಂದ ಪ್ರತ್ಯೇಕವಾಗಲು ತೀರ್ಮಾನಿಸಿದ್ದೇವೆ’ ಎನ್ನುತ್ತಾರೆ.

ದೀಕ್ಷಾಭೂಮಿ ಸ್ತೂಪ, ನಾಗ್ಪುರ್: ಅಂಬೇಡ್ಕರರು ತಮ್ಮ ಸಾವಿರಾರು ಅನುಯಾಯಿಗಳೊಂದಿಗೆ ಬೌದ್ಧಧರ್ಮಕ್ಕೆ ಮತಾಂತರಗೊಂಡ ಸ್ಥಳ

ಹೀಗೆ ಹಿಂದೂ ಧರ್ಮದಿಂದ ಪ್ರತ್ಯೇಕಗೊಳ್ಳಲು ಅವರು ಬಯಸಲು ಕಾರಣಗಳು ಹೀಗಿವೆ, ವರ್ಗ ಮತ್ತು ಜಾತಿ ತಾರತಮ್ಯದ ಶ್ರೇಣೀಕೃತ ಜಾತಿವ್ಯವಸ್ಥೆಯಿಂದ ಕೂಡಿದ ಭಾರತದಲ್ಲಿ ಒಬ್ಬ ವ್ಯಕ್ತಿಯ ಅರ್ಹತೆ ಮತ್ತು ಆತನ ವೃತ್ತಿಗಳ ನಡುವೆ ಹೊಂದಾಣಿಕೆಯಾಗದ ಸ್ಥಿತಿ ನಿರ್ಮಾಣ ಮಾಡುವುದರಿಂದ ಸಾಮಾಜಿಕ ಅದಕ್ಷತೆಗೆ ಕಾರಣವಾಗುತ್ತದೆ. ಒಬ್ಬನ ಕ್ರಿಯಾಶೀಲತೆಗೂ ಊನ ಉಂಟುಮಾಡುತ್ತದೆ. ಇದು ದೇಶದ ಆರ್ಥಿಕತೆಗೂ ಹಿನ್ನಡೆ ಉಂಟುಮಾಡುತ್ತದೆ ಎನ್ನುತ್ತಾರೆ. ಡಾ. ಅಂಬೇಡ್ಕರರ ವಾದ ಸರಣಿಯು ವೈಜ್ಞಾನಿಕ ಮತ್ತು ವೈಚಾರಿಕ ನೆಲೆಗಟ್ಟಿನ ಮೇಲೆ ನಿಂತಿದೆ. ಅವರ ಪ್ರಕಾರ ‘ಹಿಂದೂ ಧರ್ಮವೆನ್ನುವುದು ಒಂದು ಆಲದ ಮರವಿದ್ದಂತೆ. ಇದರ ಅಡಿಯಲ್ಲಿ ಮತ್ತೊಂದು ಮರ ಬೆಳೆಯುವ ಅವಕಾಶವೇ ಇಲ್ಲ. ಸ್ವತಂತ್ರವಾಗಿ ಬೆಳೆಯುವುದಕ್ಕೆ ಸೂರ್ಯರಶ್ಮಿಯ ಅವಶ್ಯಕತೆಯಿದೆ’ ಎಂದು.

ಅಂಬೇಡ್ಕರ್ ದೇಶಕ್ಕೆ ಸ್ವಾತಂತ್ರ್ಯ ಎಷ್ಟು ಮುಖ್ಯವೋ ಈ ದೇಶದಲ್ಲಿನ ಅಸ್ಪೃಶ್ಯರಿಗೆ ಸ್ವಾತಂತ್ರ್ಯ ಲಭಿಸುವುದೂ ಅಷ್ಟೇ ಮುಖ್ಯವೆಂದು ಭಾವಿಸಿದ್ದರು. ಅಸ್ಪೃಶ್ಯತೆಯನ್ನು ಆಚರಿಸುವುದು ಹಿಂದೂ ಕಾನೂನಿನ ಪರಮಾಧಿಕಾರ ಎಂದು ಉಲ್ಲೇಖಿಸುವ ಮನುಸ್ಮೃತಿಯನ್ನು ಸಾರ್ವಜನಿಕವಾಗಿ ಸುಟ್ಟುಹಾಕುವ ಬಾಬಾ ಅಂಬೇಡ್ಕರರು, ಅಸ್ಪೃಶ್ಯರ ಸ್ಥಾನಮಾನಗಳು ಅತ್ಯಂತ ದಯನೀಯವಾಗಿರುವ ಭಾರತದಲ್ಲಿ ಸಮಾಜದ ಮೂಲ ಸೌಕರ್ಯಗಳಿಂದ, ಸಾಮಾಜಿಕ ಸ್ಥಾನಮಾನಗಳಿಂದ ವಂಚಿತರಾದ ಸಮುದಾಯಗಳನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸಿ ಸ್ವತಂತ್ರ ಘಟಕಗಳೆಂದು ಪರಿಗಣಿಸಿ ಕೋಮುವಾರು ಪ್ರಾತಿನಿದ್ಯವನ್ನು ನೀಡುವಂತೆ ಬ್ರಿಟೀಷ್ ಸರಕಾರಕ್ಕೆ ಮನವಿ ಸಲ್ಲಿಸಿದರು. ಅಂಬೇಡ್ಕರ್ ದುಂಡು ಮೇಜಿನ ಸಮ್ಮೇಳನದಲ್ಲಿ ಒತ್ತಾಯ ಇದೇ ಆಗಿತ್ತು.

ಅಂಬೇಡ್ಕರ್ ಒಂದೆಡೆ ಮಹಾತ್ಮ ಗಾಂಧೀಜಿ ಮತ್ತು ಕಾಂಗ್ರೆಸ್ ಕುರಿತು ಹೀಗೆ ಬರೆಯುತ್ತಾರೆ: ‘ಅಸ್ಪೃಶ್ಯರು ಹಿಂದೂ ಸಮಾಜದ ಭಾಗವೆಂದು ವಾದಿಸುವ ಮಹಾತ್ಮ ಗಾಂಧೀಜಿಗೆ ಅಸ್ಪೃಶ್ಯರ ಉದ್ಧಾರ ಬೇಕಿಲ್ಲ, ಅಸ್ಪೃಶ್ಯರು ಹಿಂದೂ ಧರ್ಮದ ಭಾಗವೆಂದು ಹೇಳಿಕೊಂಡು ಅದರ ಲಾಭ ಪಡೆಯುವುದು ಅವರ ಉದ್ದೇಶ. ಮಹಾತ್ಮರು ಕ್ಷಣಿಕ ಅತ್ಮಗಳ ಧೂಳು ಒರೆಸಬಲ್ಲರು. ಆದರೆ ಅಸ್ಪೃಶ್ಯರ ಜೀವನಮಟ್ಟವನ್ನು ಎತ್ತರಿಸಲಾರರು. ಕಾಂಗ್ರೆಸ್ ಏಕೆ ನಮ್ಮ ಚಳುವಳಿಯನ್ನು ವಿರೋಧಿಸುತ್ತಿದೆ? ನನ್ನನ್ನು ಏಕೆ ದೇಶದ್ರೋಹಿ ಎಂದು ಕರೆಯುವರು?’ ಎಂದು. ಅಸ್ಪೃಶ್ಯರ ಸ್ವಾಂತಂತ್ರ್ಯ ಮತ್ತು ವಿಮೋಚನೆಯ ಹೋರಾಟದಲ್ಲಿ ಗಾಂಧೀಜಿ ಮತ್ತು ತಮ್ಮ ನಡುವಿನ ಸಂಘರ್ಷದಲ್ಲಿ ತೀವ್ರವಾಗಿ ನೊಂದುಕೊಂಡ ಅಂಬೇಡ್ಕರ್ ಮುಂದೆ ತಾವು ಬೌದ್ಧ ಧರ್ಮಕ್ಕೆ ಮತಾಂತರವಾಗುವ ಘೋಷಣೆ ಮಾಡಿದಾಗ ಗಾಂಧೀಜಿಯವರು ಅಸೋಸಿಯೇಟೆಡ್ ಪ್ರೆಸ್ ಪ್ರತಿನಿಧಿ ನಡೆಸಿದ ಸಂದರ್ಶನದಲ್ಲಿ ತೀವ್ರವಾಗಿ ಪ್ರತಿಕ್ರಿಯಿಸುತ್ತಾರೆ. ಇದರ ಪ್ರಕಾರ ‘ಅಂಬೇಡ್ಕರ್ ಪಿತ್ರಾರ್ಜಿತ ಧರ್ಮದ ಅರ್ಹತೆಗಳನ್ನು ಮನಗಾಣಬೇಕೆನ್ನುತ್ತಾರೆ. ಮತಾಂತರದಿಂದ ಅವರ ಉದ್ದೇಶವು ಈಡೇರುವುದಿಲ್ಲವೆಂದು ನಾನು ಮನಗಂಡಿದ್ದೇನೆ. ಅಸ್ಪೃಶ್ಯ ಜನರ ಬದುಕು ಒಳ್ಳೆಯದಕ್ಕಾಗಿಯೋ ಕೆಟ್ಟದ್ದಕ್ಕಾಗಿಯೋ ಹಿಂದೂಗಳೊಂದಿಗೆ ಬೆಸೆದುಕೊಂಡಿರುವುದರಿಂದ ಅಸಂಖ್ಯಾತ ಅಶಿಕ್ಷಿತ, ಅಸಂಸ್ಕೃತ ಹರಿಜನರು ಅವರ ಮಾತು ಕೇಳುವುದಿಲ್ಲವೆಂದು ನನ್ನ ಅಭಿಮತವಾಗಿದೆ’ ಎಂದು.

ಅಂಬೇಡ್ಕರರ ಅಸ್ಪೃಶ್ಯರ ವಿಮೋಚನೆಯ ಚಳುವಳಿಯು ಗಾಂಧೀಜಿಯನ್ನು ಮಾತ್ರವಲ್ಲದೆ ಕಾಂಗ್ರೆಸನ್ನು ಕೂಡ ಬೆಚ್ಚಿಬೀಳುವಂತೆ ಮಾಡಿತ್ತು. ಕಾಂಗ್ರೆಸ್ ನವರಲ್ಲಿ ಇರುವಂತೆ ತಮ್ಮಲ್ಲಿ ಹಣವಿಲ್ಲದಿದ್ದರೂ ನೂರು ವರ್ಷಗಳಲ್ಲಿ ಸಾಧ್ಯವಾಗದ ಬದಲಾವಣೆಗಳನ್ನು ಹತ್ತು ವರ್ಷಗಳಲ್ಲಿ ಕಂಡುಕೊಂಡಿದ್ದರು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳೆಂಬ ತತ್ವದಲ್ಲಿ ನಂಬಿಕೆಯಿಟ್ಟು ಅಸ್ಪೃಶ್ಯರ ವಿಮೋಚನೆಗೆ ಹೊರಟ ಅಂಬೇಡ್ಕರರನ್ನು ಗಾಂಧೀಜಿ ಅದೇಕೆ ವಿರೋಧಿಸಿದ್ದರೋ! ಅಂಥ ಗಾಂಧೀಜಿಯವರನ್ನು ಹಿಂದೂ ಧರ್ಮದ ಮತಾಂಧರಲ್ಲಿ ಒಬ್ಬಾತ ಗುಂಡಿಕ್ಕಿ ಹತ್ಯೆ ಮಾಡುತ್ತಾನೆ. ಹೀಗೆ ಕಾಲ ಸರಿಯುತ್ತಾ ಹೋದಂತೆ ಗಾಂಧೀಜಿಯವರನ್ನು ಕೆಳಕ್ಕೆ ದಬ್ಬಿ ಆ ಕೊಲೆಗಡುಕನನ್ನೇ ಮೇಲೆ ಎತ್ತಿಹಿಡಿಯಲಾಗುತ್ತಿದೆ. ಇನ್ನೂ ವಿಚಿತ್ರವೆಂದರೆ ಒಂದು ಕಾಲದಲ್ಲಿ ಯಾವ ಕಾಂಗ್ರೆಸ್ಸಿನಲ್ಲಿ ಹಣವಿದೆಯೆಂದು ಅಂಬೇಡ್ಕರ್ ಹೇಳಿದ್ದರೋ ಅದೇ ಕಾಂಗ್ರೆಸ್ ಪ್ರಜಾಪ್ರಭುತ್ವ ರಾಷ್ಟ್ರವೊಂದರ ಬಲಾಢ್ಯ ರಾಷ್ಟ್ರೀಯ ಪಕ್ಷವಾಗಿ ಈಗ ಹಿಂದುತ್ವವನ್ನು ಪ್ರತಿಪಾದಿಸುವ ಪಕ್ಷವೊಂದರೆದುರು ದುರ್ಬಲವಾಗಿ ಸೋತು ನಿಂತಿರುವಂತೆ ಕಾಣುತ್ತಿದೆ. ಅಂದು ಕಾಂಗ್ರೆಸ್ ನಿಜವಾದ ಅರ್ಥದಲ್ಲಿ ಸಂವಿಧಾನದ ಆಶಯಗಳನ್ನು ಎತ್ತಿಹಿಡಿದಿದ್ದಲ್ಲಿ ಇವತ್ತು ಇಂಥ ದಿನಗಳನ್ನು ಭಾರತ ನೋಡಬೇಕಿರಲಿಲ್ಲ ಎನ್ನುವುದು ಸತ್ಯ. ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು.

(ಗ್ರಂಥ ಋಣ: ನಾನು ಹಿಂದೂವಾಗಿ ಸಾಯಲಾರೆ : ಡಾ. ಅಂಬೇಡ್ಕರ್, ಸದಾಶಿವ ಮರ್ಜಿ)

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ವಾಸ. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಕೆಲವು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ.

Share

Leave a comment

Your email address will not be published. Required fields are marked *

Recent Posts More

 • 1 week ago No comment

  ನಮ್ಮ ಕಣ್ಣುಗಳೇಕೆ ಭಾರವಾಗುತ್ತಿವೆ?

        ಕವಿಸಾಲು           ತಿರುಕನ ಕನಸಲ್ಲ ನನ್ನದು ತಿರುಕನಲ್ಲ ಕಣ್ರಿ ನಾನು ನಿಮ್ಮ ಮರುಕ ಗಿರುಕ ಎಲ್ಲಾ ನನಗೆ ಹಿಡಿಸಲ್ಲ ಅವ್ರು ಕೋಟೆ ಕಟ್ಟಿ ನ್ಯಾಯ ನೀತಿಗಳ ತಮ್ಮಲ್ಲೆ ಬಚ್ಚಿಟ್ಟು ಒಳಗೆ ಬೆಚ್ಚಗೆ ಕೂತಿರಬಹುದು ನ್ಯಾಯಕ್ಕೆ ಕನ್ನ ಹಾಕೋ ನಾನು ತಿರುಕ ಹೇಗೆ ಆಗಬೇಕು? ತಿರುಕನದೇನೋ ಕನಸಿತ್ತು ನನ್ನದು ಕೂಡಾ ಕನಸೆಂದು ಆ ಕೋಟೆ ಒಳಗಿರುವವರು ಕನವರಿಸುತ್ತಿರಬಹುದು ಬೂದಿ ಮುಚ್ಚಿದ ...

 • 1 week ago No comment

  ಕೊಂಕಣಿ ಪ್ರತಿಭೆಯನ್ನರಸಿ ಕರ್ನಾಟಕಕ್ಕೆ ಬಂದ ಪ್ರಶಸ್ತಿ

      ಅತಿಥಿ           ಈ ಬಾರಿ ಕರ್ನಾಟಕವು ಎರಡು ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು ಎಂದರೆ ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಪ್ರಮಾದವೇನಾದರೂ ಆಯಿತೇ? ಒಂದೇ ಪುರಸ್ಕಾರವನ್ನು ಇಬ್ಬರಿಗೆ ಹಂಚಿರಬಹುದೇ? ಎಂದೆಲ್ಲ ಯೋಚಿಸಿ ತಲೆ ಕೆರೆದುಕೊಳ್ಳುತ್ತಿದ್ದೀರಾ? ಇಲ್ಲಿದೆ ನೋಡಿ ಉತ್ತರ. ಕನ್ನಡಕ್ಕೆ 2018ರ ಕೇಂದ್ರಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಘೋಷಣೆಯಾದಾಗಲೇ ಕರ್ನಾಟಕದ ಕೊಂಕಣಿ ಕವಯತ್ರಿ ವಿಲ್ಮಾ ...

 • 2 weeks ago No comment

  ಸಾಹಸದ ಆ ನಿಮಿಷಗಳು

          ಮೊದಲ ಬಾರಿಯಾದ್ದರಿಂದ ಕೆಲವೇ ನಿಮಿಷಗಳ ಈ ಜಿಗಿತದ ರೋಚಕತೆ ಒಂದು ತಿಂಗಳ ಕಾಲ ನನ್ನನ್ನು ಆವರಿಸಿದ್ದು ಸುಳ್ಳಲ್ಲ.         ಬ್ಯಾಂಕರುಗಳು, ಅಕೌಂಟೆಂಟುಗಳು ವರ್ಷದ ಮೊದಲಿಂದ ಹಿಡಿದು ಮಾರ್ಚಿ ತಿಂಗಳವರೆಗೆ ಭಾರೀ ಬ್ಯುಸಿಯಾಗುವಂತೆ ಇಂಗ್ಲೆಂಡಿನ ಸರ್ಕಾರೀ ದಂತ ವೈದ್ಯಕೀಯ ರಂಗದಲ್ಲೂ ಧಾವಂತ ಕಾಣಿಸಿಕೊಳ್ಳುತ್ತದೆ. ಸರ್ಕಾರದಿಂದ ಗುತ್ತಿಗೆ ಪಡೆದ ಕೆಲಸವನ್ನು ಮಾರ್ಚಿಯ ಕೊನೆಗೆ ಪೂರ್ತಿಗೊಳಿಸದಿದ್ದರೆ ಮುಂದಿನ ವರ್ಷದ ಕಾಂಟ್ರಾಕ್ಟ್ ನ್ನು ಕಳೆದುಕೊಳ್ಳುವ ...

 • 3 weeks ago No comment

  ಪ್ರಸಾದ್ ಪಟ್ಟಾಂಗ | ಫಿಫಾ ಫಿವರ್

  ಅಂದು ಎಲ್ಲರ ಕಣ್ಣುಗಳೂ ಬೇರೇನನ್ನೋ ದಿಟ್ಟಿಸುತ್ತಿದ್ದವು. ಅದೊಂದು ಸುಂದರ ರೆಸ್ಟೊರೆಂಟ್. ಆವರಣದ ಒಳಗೂ ಹೊರಗೂ ಬಂದವರಿಗೆ ಕುಳಿತುಕೊಳ್ಳಲು ಸಾಕಷ್ಟು ಜಾಗವಿರುವಂಥದ್ದು. ಜೊತೆಗೇ ಒಂದು ಪುಟ್ಟ ಮೈದಾನದಂತಿರುವ ಜಾಗವನ್ನೂ, ಈಜುಕೊಳವನ್ನೂ ಹೊಂದಿರುವ ಸುಸಜ್ಜಿತ ರೆಸ್ಟೊರೆಂಟ್. ನಾನು ಪ್ರತೀ ತಿಂಗಳು ಲುವಾಂಡಾಗೆ ಬಂದಿಳಿದಾಗಲೆಲ್ಲಾ ಇಲ್ಲಿಯ ಸಿಬ್ಬಂದಿಯೇ ನನಗೆ ಅನ್ನದಾತರು. ಹೀಗಾಗಿ ಎಲ್ಲೆಲ್ಲೂ ನನಗೆ ಪರಿಚಿತ ಮುಖಗಳೇ. ಅಂದು ಮಾತ್ರ ಸಿಬ್ಬಂದಿಯೊಬ್ಬ ಗಡಿಬಿಡಿಯಲ್ಲಿ ನನ್ನ ಆರ್ಡರ್ ಬರೆದುಕೊಂಡು ಅಷ್ಟೇ ಅವಸರದಲ್ಲಿ ಖಾದ್ಯಗಳನ್ನು ತಂದಿಟ್ಟು ...

 • 3 weeks ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ದಾರಿಯೇ ದೈವ… ವೈಷ್ಣೋದೇವಿ

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...


Editor's Wall

 • 11 May 2018
  2 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

 • 10 May 2018
  2 months ago No comment

  ಒಂದು ಪುಸ್ತಕ; ವಾರವಿಡೀ ಬಿಡುಗಡೆ!

  ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

 • 03 May 2018
  2 months ago No comment

  ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                    ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

 • 30 April 2018
  3 months ago No comment

  ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

  ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

 • 28 April 2018
  3 months ago No comment

  ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

  ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...