Share

ಸವಿತಾ ನಾಗಭೂಷಣ ಪ್ರವಾಸ ಕಥನ | ಗಂಗೆಯ ಒಡಲಲ್ಲಿ, ಕಾಳಿಯ ಮಡಿಲಲ್ಲಿ

 

ಪ್ರವಾಸಿ ಸವಿತಾ ಕಂಡ ಇಂಡಿಯಾ

 

 

 

ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ಸಂಚಿಕೆಯಿಂದ ‘ಹೊಸ ಮನುಷ್ಯ’ ಎಂದು ಪುನರ್ನಾಮಕರಣಗೊಂಡಿತು) 2011ರ ಸೆಪ್ಟಂಬರಿನಿಂದ 2012ರ ಆಗಸ್ಟ್ ಸಂಚಿಕೆಗಳವರೆಗೆ ಧಾರಾವಾಹಿಯಾಗಿ ಪ್ರಕಟವಾಗಿತ್ತು.

-ಸವಿತಾ ನಾಗಭೂಷಣ, ಶಿವಮೊಗ್ಗ

 

ಭಾಗ-3

ನಾವು ರಾತ್ರಿಯೆಲ್ಲಾ ಬಸ್ಸಿನಲ್ಲಿ ಪಯಣಿಸಿ ಬೆಳಿಗ್ಗೆ ಸುಮಾರು ಏಳೂವರೆ ಗಂಟೆಗೆ ಕೊಲ್ಕೊತ್ತಾ ಪ್ರವೇಶಿಸಿದೆವು. ಕೊಲ್ಕೊತ್ತಾ ಕೊಲ್ಕೊತ್ತಾ ಎಂದು ಹುರುಪಿನಿಂದ ಕಿಟಿಕಿಯಲ್ಲಿ ಕಣ್ಣು ಹಾಕಿ ಕುಳಿತೆವು. ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಕೊಲ್ಕೊತ್ತಾಗೆ ವಿಶಿಷ್ಟ ಸ್ಥಾನ ಇದೆಯಷ್ಟೆ. ಆದರೆ ಪುರಾತನ ಕಾಲದ ಪಾಳುಬಿದ್ದ ಮನೆಗಳು, ಇಕ್ಕಟ್ಟಾದ ಬೀದಿಗಳು, ಧೂಳು, ಕೊಳಕು ನೋಡಿ ಗಾಬರಿಯಾದೆವು. ಟ್ರಾಫಿಕ್ ಭರಾಟೆ ಎಷ್ಟಿತ್ತೆಂದರೆ, ನಮ್ಮ ಬಸ್ಸು ಆಮೆ ವೇಗದಲ್ಲಿ ಮುಂದುವರೆಯುತ್ತಿತ್ತು. ಕೊಲ್ಕತ್ತೆಯ ಬಗ್ಗೆ ನನ್ನ ಮನಸ್ಸಿನಲ್ಲಿ ಏನೆಲ್ಲ ಕಲ್ಪನಾ ಚಿತ್ರಗಳಿದ್ದವೋ ಅವೆಲ್ಲ ಒಂದು ಚಣ ಚಿಂದಿಯಾದರೂ, ಹೂಗ್ಲಿ ನದಿ, ಹೌರಾ ಸೇತುವೆ, ಮೆಟ್ರೋ, ಜೀವನೋತ್ಸಾಹದಿಂದ ಓಡಾಡುತ್ತಿದ್ದ ಜನತೆ ಗುಂಪು ಗುಂಪಾಗಿ ಗೂಡಂಗಡಿಗಳ ಮುಂದೆ ನೆರೆದು ಬೆಳಗಿನ ಚಹಾ ಸವಿಯುತ್ತಿದ್ದ ದೃಶ್ಯ ನೋಡುತ್ತಿರುವಂತೆಯೇ ರಾಮಕೃಷ್ಣ ಪರಮಹಂಸ, ಮಾಸ್ಟರ್ ಮಹಾಶಯ, ವಿವೇಕಾನಂದ, ಟಾಗೋರ್, ಶರಶ್ಚಂದ್ರ, ಮದರ್ ತೆರೇಸಾ, ಸತ್ಯಜಿತ್ ರಾಯ್, ಜ್ಯೋತಿ ಬಸು, ಮಮತಾ ದೀದಿ ಯಾರೆಲ್ಲ ನೆನಪಿಗೆ ಬಂದು ಚೇತರಿಸಿಕೊಂಡೆನು.

‘ಈಗ ನಮ್ಮ ಪಯಣ ಬೇಲೂರು ಮಠದೆಡೆಗೆ, ರಾಮಕೃಷ್ಣ ಪರಮಹಂಸರ ನೆನಪಿನಲ್ಲಿ ವಿವೇಕಾನಂದರು ಸ್ಥಾಪಿಸಿದ ಮಠವಿದು. ಇಲ್ಲಿಯೇ ಸ್ನಾನ. ಗಂಗೆಯ ಘಾಟಿದೆ, ಸ್ನಾನಗೃಹಗಳಿವೆ. ಸ್ನಾನ ಮುಗಿಸಿ ಮಠ ನೋಡಿಕೊಂಡು ಸರಿಯಾಗಿ ಹತ್ತು ಘಂಟೆಗೆ ತಿಂಡಿಗೆ ಬನ್ನಿ. ಅಲ್ಲಿಯವರೆಗೂ ನೀವು ಫ್ರೀ!’ ಎಂದು ಟೂರ್ ಮ್ಯಾನೇಜರ್ ಉದ್ಘೋಷಿಸಿ ನಮ್ಮನ್ನು ಬಸ್ಸಿನಿಂದ ಇಳಿಸಿದ. ನೀರು ಕಂಡಲ್ಲಿ ಮುಳುಗುವ ಹವ್ಯಾಸವಿದ್ದ ನಾವು ಲಗುಬಗೆಯಿಂದ ಘಾಟಿನತ್ತ ಹೆಜ್ಜೆ ಹಾಕಿದೆವು. ಘಾಟಿನ ಮೆಟ್ಟಿಲುಗಳಿಂದ ಇಳಿದು ನದಿ ಪ್ರವೇಶಿಸಲು ಕಣ್ಣು ಹಾಯಿಸಿದರೆ, ಹೆಜ್ಜೆ ಹಾಕಲು ಸಾದ್ಯವಿಲ್ಲ; ಅಷ್ಟು ಕೊಚ್ಚೆ-ಕೆಸರು. ಗಂಗೆ ಅದೆಷ್ಟು ಕಪ್ಪಗೆ ಹರಿಯುತ್ತಿದ್ದಳೆಂದರೆ, ‘ಥೂ ಕೊಚ್ಚೆ!’ ಎಂದು ಎಲ್ಲರೂ ಹಿಂದೆಗೆದರು. ‘ಈ ಕೆಸರಿನಲ್ಲಿ ಮೀಯುವುದೇ? ಸಾಧ್ಯವೇ ಇಲ್ಲ!’ ಎಂದು ಹಲವರು ಸ್ನಾನಗೃಹದತ್ತ ತೆರಳಿದರು.

ನನ್ನ ಸಹಯಾತ್ರಿ ಮನೋರಮಾ ‘ನನಗೆ ನೀರೆಂದರೆ ಭಯ!’ ಎಂದು ಮೆಟ್ಟಿಲುಗಳ ಮೇಲೇ ಕುಳಿತರು. ನಮ್ಮ ಗುಂಪಿನ ರುಕ್ಮಿಣಿ, ಗೌರಿ, ಲಲಿತಾ ಮುಂದೇನು ಎನ್ನುವಂತೆ ನನ್ನತ್ತ ನೋಡಿದರು. ನಾನಂತೂ ಈ ನೀರಿನಲ್ಲಿ ಮೀಯುವವಳೇ ಎಂದು ಬಾಯ್ದುಂಬಿ ಹೇಳಿದೆನಾದರೂ, ಮುಂದೆ ಒಂದು ಹೆಜ್ಜೆಯೂ ಇಡಲಾರದವಳಾಗಿ, ಘಾಟಿನ ಮೆಟ್ಟಿಲುಗಳ ಮೇಲೆ ಚಿಂತಾಕ್ರಾಂತಳಾಗಿ ನಿಂತೇ ಇರಲು, ನನ್ನ ದೃಷ್ಟಿ ಶುಭ್ರವಾದ ಕೊಕ್ಕರೆಬಿಳಿ ಸೀರೆಯನ್ನುಟ್ಟು ಘಾಟಿನ ಮೆಟ್ಟಿಲುಗಳ ಮೇಲೆ ಅಪಾರ ಪ್ರೀತಿಯಿಂದ ಗಂಗೆಯನ್ನು ನೋಡುತ್ತಾ ಕುಳಿತಿದ್ದ ವೃದ್ಧ ಮಹಿಳೆಯತ್ತ ಹರಿಯಿತು. ನಾನಿದ್ದ ಆವರಣದ ಪ್ರಭಾವದಿಂದ ನನ್ನ ಯೋಚನಾ ಲಹರಿಯೂ ನಿಲುಗಡೆಯಿಲ್ಲದ ನದಿಯಂತೆಯೇ ಹರಿಯುತ್ತಿತ್ತು.

ದೇಹದಲ್ಲಿ-ಮನಸ್ಸಿನಲ್ಲಿ ಮಲಸಂಚಯ ಮಾಡಿಕೊಂಡ ಮನುಷ್ಯ ಒಳಗಣ ಮಲಿನತೆಗಿಂತ ಹೊರಗಣ ಮಲಿನತೆಯನ್ನು ಕಂಡು ಅಂಜುವ ಪರಿ ವಿಚಿತ್ರದ್ದಾಗಿದೆ ಎಂದು ನನಗೆ ನಾನೇ ಹೇಳಿಕೊಂಡೆನು. ಅರ್ಧ ರಾತ್ರಿಯಲ್ಲಿ ಎದ್ದು ಚಾಂಡಾಲನ ಮನೆಯನ್ನು ಯಾರಿಗೂ ತಿಳಿಯದಂತೆ ಪ್ರವೇಶಿಸಿ, ಅವನ ಕಕ್ಕಸ್ಸು ಮನೆಯನ್ನು ಗುಡಿಸಿ ಕೇಶರಾಶಿಯಿಂದ ಅದನ್ನು ಒರೆಸಿದ ದೀನರಲ್ಲಿ ದೀನರಾಗಬೇಕೆಂದು ಇಚ್ಛಿಸಿದ ಪರಮಹಂಸ ಮತ್ತು ಅವರ ಪಾದಗಳನ್ನು ಶಿರದಲ್ಲಿ ಧರಿಸಿ ‘ನಾನು ಹೊಲೆಯನಾಗಿದ್ದರೆ ಇನ್ನೂ ಹೆಚ್ಚು ಸಂತೋಷಪಡುತ್ತಿದ್ದೆ’ ಎಂದ ವಿವೇಕಾನಂದ ಇವರನ್ನೆಲ್ಲ ಎದೆಯಲ್ಲಿಟ್ಟುಕೊಂಡಿರುವೆ ಎಂದು ನಂಬಿರುವ ನನ್ನ ಬಗ್ಗೆಯೇ ನನಗೆ ನಾಚಿಕೆಯೆನಿಸಿತು.

ಈ ಮಹಾ ಕೊಚ್ಚೆಯನ್ನು ನೊಡಿ ಹೇಗಪ್ಪಾ ಇದನ್ನು ದಾಟುವುದು ಎಂದು ಯೋಚನೆಯಲ್ಲೇ ಮುಳುಗಿರಲು, ತಮಗಾದ ಅನ್ಯಾಯವನ್ನು ಪ್ರತಿಭಟಿಸಲು ದಾರಿಗಾಣದೆ ಮೈಮೇಲೆ ಮಲವನ್ನು ಸುರಿದುಕೊಂಡ ಸವಣೂರಿನ ಭಂಗಿಗಳ ನೆನಪೂ ಕಲೆಸಿಕೊಂಡು ಕಕ್ಕಾಬಿಕ್ಕಿಯಾಗಿ ನಿಂತೇ ಇರಲು, ಕೊಕ್ಕರೆಬಿಳಿ ಸೀರೆಯನ್ನುಟ್ಟ ಆ ವೃದ್ಧ ಮಹಿಳೆ ಪರಮ ಭಕ್ತಿಯಿಂದ ನನ್ನ ಕಣ್ಮುಂದೆಯೇ ಕೊಚ್ಚೆಯ ಮೇಲೆ ಹಂಸದಂತೆ ನಡೆದು ಗಂಗೆಯಲ್ಲಿ ಮುಳುಗಿದಳು. ಇನ್ನೂ ಮೆಟ್ಟಿಲುಗಳ ಮೇಲೆಯೇ ಹೊಯ್ದಾಡುತ್ತಾ ನಿಂತಿದ್ದ ನನ್ನನ್ನು ಉದ್ದೇಶಿಸಿ ಆ ವೃದ್ಧ ಮಹಿಳೆ ಬಂಗಾಳಿಯಲ್ಲಿ, ‘ನೀರು ಕಪ್ಪಗೆ ಕಾಣುತ್ತದೆಯಷ್ಟೆ. ಇಲ್ಲಿನ ಮಣ್ಣು ಕಪ್ಪು ಹಾಗೂ ಅಂಟಿನದು. ಕಪ್ಪು ಮಣ್ಣು ಕಲೆಸಿಕೊಂಡು ರಾಡಿಯಾಗಿದೆ. ಕೊಚ್ಚೆಯಲ್ಲ… ನೀರು ಒಳಹೋದಂತೆ ಸೊಂಪಾಗಿದೆ, ಶುಭ್ರವಾಗಿದೆ. ಮೀಯದೆ ಹೋಗದಿರಿ. ಬನ್ನಿ, ನೀರು ತಂಪಾಗಿದೆ’ ಎಂದು ಅಕ್ಕರೆಯಿಂದ ಕರೆದಳು. ಸುಮಾರು ಎಪ್ಪತ್ತರ ಅಂಚಿನಲ್ಲಿದ್ದ ಆ ವೃದ್ಧೆ ಮಹಿಳೆಯ ಮಾತಿಗೆ ತಲೆದೂಗಿ, ಈ ನೀರಿನಲ್ಲಿ ಅದೆಷ್ಟು ಸಲ ಇವಳು ಮಿಂದಿರುವಳೋ ಎಂದು ಮನಸ್ಸಿನೊಳಗೆ ಅಂದುಕೊಳ್ಳುತ್ತಾ ನಾನೂ ನೀರಿಗಿಳಿದೆ. ಕುರಿಯ ಹಿಂದೆ ಮಂದೆ ಎನ್ನುವಂತೆ ಈಗ ನನ್ನ ಸಹಯಾತ್ರಿಕರು ಒಬ್ಬರ ಹಿಂದೆ ಒಬ್ಬರು ನೀರಿಗೆ ಬಿದ್ದರು.

ನಾವೆಲ್ಲ ಅದೆಷ್ಟೋ ಹೊತ್ತು ನೀರಿನಲ್ಲಿ ಬಿದ್ದುಕೊಂಡಿದ್ದೆವು. ಊರ ದೇವತೆ ಕಾಳಿಯಾಗಿರುವುದರಿಂದ, ನೀರೂ ಕಪ್ಪಗಿದ್ದುದರಿಂದ ನಾನು ಕಾಳಿಯ ಮಡಿಲಲ್ಲಿ ಇರುವಂತೆ ಕಲ್ಪಿಸಿಕೊಂಡು ಸಂತೋಷಪಟ್ಟೆನು. ನಾವೆಲ್ಲ ನೀರಿನಲ್ಲಿ ಮುಳುಗಿಕೊಂಡೇ ದಡದ ಮೇಲಿದ್ದ ಸ್ವಾಮಿ ವಿವೇಕಾನಂದರ ಕೂಸಾದ ಬೇಲೂರು ಮಠವನ್ನು ಕಣ್ಣು ತುಂಬಿಕೊಂಡೆವು. ರಾಮಕೃಷ್ಣರ ನಿಧನಾನಂತರ ಅನಾಥರಾದ ಅವರ ಶಿಷ್ಯರು ವಿವೇಕಾನಂದರ ನೇತೃತ್ವದಲ್ಲಿ ರಾಮಕೃಷ್ಣರ ಆಧ್ಯಾತ್ಮಿಕ ಪರಂಪರೆಯನ್ನು ಮುಂದುವರೆಸಲು ಸಂಘಟಿತರಾಗಿ ಸ್ಥಾಪಿಸಿಕೊಂಡ ಮಠದ ಕಟ್ಟಡವಿದು. ಸ್ವಾಮಿ ವಿವೇಕಾನಂದರ ವಿದೇಶಿ ಶಿಷ್ಯೆಯರೂ ಕೈಸ್ತಮತ ಅನುಯಾಯಿಗಳೂ ಆಗಿದ್ದ ಮಿಸ್ ಹೆನ್ರಿಟಾ ಮುಲ್ಲರ್ ಮತ್ತು ಶ್ರೀಮತಿ ಸಾರಾಬುಲ್ ಅವರ ಹಣಕಾಸಿನ ಸಹಾಯದಿಂದ ಕಟ್ಟಲ್ಪಟ್ಟ ಭವ್ಯ ಕಟ್ಟಡವದು.

‘ಸಮಯವಾಯಿತು. ಮಠದ ಬಾಗಿಲು ಹಾಕುತ್ತಾರೆ’ ಎಂದು ಸಹ ಯಾತ್ರಿಕರೊಬ್ಬರು ನಮ್ಮನ್ನು ಎಚ್ಚರಿಸಿದಾಗ ಲಗುಬಗೆಯಿಂದ ನೀರಿನಿಂದ ಹೊರಬಂದು ಸನಿಹದಲ್ಲೇ ಇದ್ದ ಸ್ವಾಮಿ ವಿವೇಕಾನಂದರು ಮಹಾ ಸಮಾಧಿ ಹೊಂದಿದ ಕೊಠಡಿ ಮತ್ತು ಶಾರದಾ ದೇವಿ ಆಗಾಗ್ಗೆ ಬಂದು ಉಳಿದುಕೊಳ್ಳುತ್ತಿದ್ದ ಕೊಠಡಿ ಎಲ್ಲವನ್ನೂ ನೋಡಿಕೊಂಡು ರಾಮಕೃಷ್ಣ ಪೂಜಾಗೃಹ ಹೊಕ್ಕಾಗ ನಮ್ಮನ್ನು ಕಪ್ಪು ಗಂಗೆಯಲ್ಲಿ ಮೀಯಿಸಿದ ಆ ವೃದ್ಧ ಮಹಿಳೆ ಪರಮಹಂಸರ ಪಟದ ಮುಂದೆ ಧ್ಯಾನಸ್ಥಳಾಗಿ ಕುಳಿತಿದ್ದಳು.

ಬೇಲೂರು ಮಠ ಹೊರನೋಟಕ್ಕೆ ಭವ್ಯ ಅನಿಸಿದರೂ, ಒಳಗೆ ತುಂಬಾ ಸರಳವಾಗಿದ್ದು, ಮೈಸೂರಿನ ರಾಮಕೃಷ್ಣಾಶ್ರಮದಂತೆಯೇ ಇತ್ತು. ಮೈಸೂರಿನ ಆಶ್ರಮದ ದಟ್ಟ ಹೂದೋಟ ಕಣ್ಣ ಮುಂದೆ ಬಂದು ಇದಕ್ಕಿಂತ ಅದೇ ಚೆಂದ ಎಂದು ಮನ ತರ್ಕಿಸಿತು. ಅದರೂ ಅದು ವಿವೇಕಾನಂದ ಮತ್ತು ಅವರ ಸಹ ಸನ್ಯಾಸಿಗಳು ನಡೆದಾಡಿದ, ಚರ್ಚಿಸಿದ, ಧ್ಯಾನ ಮಾಡಿದ, ಹೊಸ ಭಾರತದ ಕನಸು ಕಂಡ ಜಾಗ. ಅಲ್ಲಿನ ಆ ಘನವಾದ ಮೌನದಲ್ಲಿ ಕರಗುತ್ತಾ ಇನ್ನೂ ಅಲ್ಲೇ ಇರಬೇಕೆಂದು ಹೃದಯ ಬಯಸುತ್ತಿರುವಂತೆಯೇ ‘ಹೊರಡು, ಹೊತ್ತಾಯಿತು’ ಎಂದು ಮಠದ ಘಂಟೆ ಎಚ್ಚರಿಸಿತು.

 

Share

Leave a comment

Your email address will not be published. Required fields are marked *

Recent Posts More

 • 1 day ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ದಾರಿಯೇ ದೈವ… ವೈಷ್ಣೋದೇವಿ

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...

 • 6 days ago One Comment

  ಅಜ್ಜಿಗೇನು ಬೇಕು ಅಂತ ಅಜ್ಜಂಗೇನು ಗೊತ್ತು!

          ಕಥನ         ಅಜ್ಜ ಪೆನ್ಷನ್ ತರೋದಕ್ಕೆ ಅಂತ ಪೇಟೆಗೆ ಹೋಗಿದ್ದ. ಅಷ್ಟರಲ್ಲಿ ಮನೆ ಬಾಗಿಲಲ್ಲಿ ಕಾರು ಬಂದು ನಿಂತಿತು. ಕಾರಲ್ಲಿ ಅಜ್ಜಿಯ ಮಗ, ಸೊಸೆ ಮತ್ತೆ ಆರು ವರ್ಷದ ಮೊಮ್ಮಗ ಬಂದಿದ್ರು. ಅಜ್ಜಿಗೆ ಖುಷಿ ತಡೆಯಕ್ಕಾಗದೇ ಅಡಿಗೆ ಮನೆ ಸಂದಿ ಮೂಲೇನೆಲ್ಲಾ ಹುಡುಕಿದ್ಲು. ದಡಾ ಬಡಾ ಸದ್ದು ಮಾಡಿದ್ಲು, ಸರಾಪರಾ ಸದ್ದು ಮಾಡಿದ್ಲು. ಅಡುಗೆ ಮನೆಯಿಂದ ಕೊತಾಕೊತಾ ಸದ್ದು ...

 • 1 week ago No comment

  ವಸಂತದ ನೆನಪು; ಮಾಗುವ ಹುರುಪು!

    ಜಗತ್ತಿನ ಬಗ್ಗೆ ತಿಳಿಯುತ್ತ ಸಾಗಿ, ನಮಗೆ ಈ ಜಗತ್ತು ಹೀಗೆ ನಡೆಯುತ್ತಿದೆ ಅಂತ ಅರಿತುಕೊಳ್ಳುವವರೆಗಿನದು ಮಧ್ಯವಯಸ್ಸಿನ ಕಾಲ. ನಾವು ಅಲ್ಲಿಯವರೆಗೆ, ಕಲಿತದ್ದು, ಕೇಳಿದ್ದು, ನಮಗೆ ತಿಳಿದಿದ್ದು ಎಲ್ಲವೂ ಬದಲಾಗುವ ವೇಳೆಗೆ ನಮಗೆ ವಯಸ್ಸಾಗಿಬಿಟ್ಟಿರುತ್ತದೆ. ಕಾಲದಲ್ಲಿ ಹೊಸ ಚಿಗುರು ಟಿಸಿಲೊಡೆದಿರುತ್ತದೆ.     ಕುಣಿದಾಡುವಷ್ಟು ಚೈತನ್ಯವಿರುವ ಯೌವನಕ್ಕೂ, ಕುಂದಿದ ಶಕ್ತಿಯ ಇಳಿಗಾಲದ ವೃದ್ಧಾಪ್ಯಕ್ಕೂ ನಡುವೆ ಬರುವುದು ಮಧ್ಯವಯಸ್ಸು! ಹುಟ್ಟು, ಬದುಕು ,ಸಾವು ಎಲ್ಲರಿಗೂ ಬರುತ್ತದೆ. ಬದುಕನ್ನು ಹಲವರು ಸಾಧನೆಗಳ ...

 • 1 week ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ಬಂಗಾರದ ಹೊಳಪು, ಬೇಗುದಿಯ ನೆನಪು…

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...

 • 2 weeks ago No comment

  ಪ್ರಸಾದ್ ನಾಯ್ಕ್ ಪಟ್ಟಾಂಗ | ನನಗೂ ಒಬ್ಬ ಗೆಳೆಯ ಬೇಕು…

  ಆ ಘಟನೆಯನ್ನು ನೆನಪಿಸಿಕೊಂಡಾಗಲೆಲ್ಲಾ ಈಗಲೂ ನಗು ಉಕ್ಕುಕ್ಕಿ ಬರುತ್ತದೆ. ಅಂದು ವಿಚಿತ್ರ ಘಟನೆಯೊಂದು ನಡೆದಿತ್ತು. ಅವು ನನ್ನ ಕಾಲೇಜಿನ ದಿನಗಳು. ಮಂಗಳೂರಿನ ಶಾಪಿಂಗ್ ಮಾಲ್ ಒಂದಕ್ಕೆ ಮಧ್ಯಾಹ್ನದ ಊಟಕ್ಕೆಂದು ಬಂದಿದ್ದ ನಾನು ಫುಡ್ ಕೋರ್ಟಿನಲ್ಲಿ ಸುಮ್ಮನೆ ಅಡ್ಡಾಡುತ್ತಿದ್ದೆ. ಎತ್ತ ಹೋಗಬೇಕೆಂದು ತಿಳಿಯದೆ ಸುಮ್ಮನೆ ಒಂದು ಕೌಂಟರಿನತ್ತ ನಡೆದು ಬೇಕಿದ್ದದ್ದನ್ನು ಆರ್ಡರ್ ಮಾಡಿದೆ. ಕೆಲಸವಿಲ್ಲದೆ ನೊಣ ಹೊಡೆಯುತ್ತಿದ್ದ ಆ ಹೆಂಗಸಿಗೆ ನನ್ನ ಆಗಮನವು ಅಂಥಾ ಉತ್ಸಾಹವೇನೂ ತರಲಿಲ್ಲವಾದರೂ ನಾನು ಹೇಳಿದ್ದನ್ನೆಲ್ಲಾ ...


Editor's Wall

 • 11 May 2018
  1 month ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

 • 10 May 2018
  2 months ago No comment

  ಒಂದು ಪುಸ್ತಕ; ವಾರವಿಡೀ ಬಿಡುಗಡೆ!

  ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

 • 03 May 2018
  2 months ago No comment

  ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                    ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

 • 30 April 2018
  2 months ago No comment

  ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

  ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

 • 28 April 2018
  2 months ago No comment

  ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

  ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...