Share

ಪುಸ್ತಕ ಪ್ರಸ್ತಾಪ | ಹಲಗೆ ಮತ್ತು ಮೆದುಬೆರಳು
ಕಾದಂಬಿನಿ ಕಾವ್ಯಸಂಕಲನದ ಮುನ್ನುಡಿ

ಫೇಸ್ಬುಕ್ಕಿನಲ್ಲಿ ಕಳೆದ ನಾಲ್ಕು ವರ್ಷಗಳ ಕೆಳಗೆ ಬರೆಯಲು ಆರಂಭಿಸಿದ ಕಾದಂಬಿನಿ ಅವರು ತಮ್ಮ ಬರವಣಿಗೆಯಿಂದಾಗಿಯೇ ವಿಭಿನ್ನವಾಗಿ ನಿಂತವರು. ಎಲ್ಲರನ್ನೂ ಕುತೂಹಲಿಗಳನ್ನಾಗಿ ಮಾಡಿದ್ದು ಅವರ ಕಾವ್ಯ. ಈಗ ಕಾದಂಬಿನಿಯವರು ನೂರಾರು ಕವಿತೆಗಳೊಂದಿಗೆ ಕಾವ್ಯಲೋಕದಲ್ಲಿ ನಿಂತಿದ್ದಾರೆ. ತಮ್ಮ ಚೊಚ್ಚಲ ಕಾವ್ಯಸಂಕಲನವನ್ನು ಎಲ್ಲರೆದುರಿಗೆ ಇಡುತ್ತಿದ್ದಾರೆ. ಸಂಕಲನದ ಹೆಸರು ‘ಹಲಗೆ ಮತ್ತು ಮೆದುಬೆರಳು’. (ಪ್ರಕಾಶಕರು: ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ, ಮೊಬೈಲ್: 9449886390, 9916197291).

ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿರುವ 384 ಪುಟಗಳ ಕಾವ್ಯಸಂಕಲನ ಇದು. ಜ್ವಾಲಮಾಲಾ, ಕಿಡಿ ಚುಕ್ಕೆ ಸಾಲು ಮತ್ತು ಸುಡುಸುಯ್ಲು ಎಂಬ ಮೂರು ಭಾಗಗಳಲ್ಲಿ 162 ಕವಿತೆಗಳನ್ನು ಇದು ಒಳಗೊಂಡಿದೆ. ಕವನಸಂಕಲನವೊಂದು, ಅದರಲ್ಲೂ ಕವಿಯೊಬ್ಬರ ಮೊದಲ ಸಂಕಲನ ಇಷ್ಟು ಗಾತ್ರದಲ್ಲಿ ಬಂದಿರುವುದು ಕನ್ನಡದಲ್ಲಿ ಬಹುಶಃ ಇದೇ ಮೊದಲನೆಯದಿರಬೇಕು.

ಪುಸ್ತಕಕ್ಕೆ ಹಿರಿಯ ವಿಮರ್ಶಕ ಡಾ.ಕೆ ಸಿ ಶಿವಾರೆಡ್ಡಿ ಬರೆದ ಮುನ್ನುಡಿ ಕಾದಂಬಿನಿಯವರ ಕವಿತೆಗಳ ಬಗ್ಗೆ ಹಲವು ಒಳನೋಟಗಳನ್ನು ಕೊಡುತ್ತದೆ. ಆ ಮುನ್ನುಡಿ ಇಲ್ಲಿ ನಿಮ್ಮ ಓದಿಗಾಗಿ.

*

ಮುನ್ನುಡಿ : ಡಾ.ಕೆ ಸಿ ಶಿವಾರೆಡ್ಡಿ, ಕುಪ್ಪಳಿ

ಫೇಸ್ಬುಕ್ ಎಂಬುದು ಮಾಯಾಜಾಲ. ಈ ಮಾಯಾಜಾಲ ಎಂಥವರನ್ನೂ ತನ್ನ ತೆಕ್ಕೆಗೆ ಸೆಳೆದುಬಿಡುತ್ತದೆ. ಈ ಆಕರ್ಷಣೆಯ ಜೊತೆಯಲ್ಲಿಯೇ ಕೀರ್ತಿಶನಿ, ಸ್ವಪ್ರೀತಿ, ಸ್ವ ಪ್ರದರ್ಶನಕ್ಕೆ ಒಡ್ಡಿಬಿಡುತ್ತದೆ. ಎಷ್ಟೋ ಕವಿಗಳು ಇಂಥ ಜಾಲದಲ್ಲಿ ಸಿಕ್ಕಿ ಕವಿಗಳೆಂಬ ಭ್ರಮೆಯಲ್ಲಿ ಹಾಸ್ಯಾಸ್ಪದರಾಗಿ ಕಾಣುತ್ತಿರುವುದೇ ಅಧಿಕ. ಆದರೂ ಅಲ್ಲಲ್ಲಿ ಗಂಭೀರವಾಗಿ ಬರೆಯುವ ವೇದಿಕೆ ಇಲ್ಲದ ಕವಿಗಳಿಗೆ ಇದೊಂದು ಪ್ರಭಾವಿ ವೇದಿಕೆ. ಅದರ ಸರಿಯಾದ ಬಳಕೆ ಮತ್ತು ದುರ್ಬಳಕೆಯ ಹೊಣೆಯೂ ಇದನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿ ಬಳಸುವ ಕವಿಗಳ ಮೇಲೆಯೇ ಇದೆ.

ಕೆಲವು ವರ್ಷಗಳ ಹಿಂದೆ ಫೇಸ್ಬುಕ್ ನೋಡುತ್ತಿದ್ದಾಗ ಸಮಕಾಲೀನ ಕನ್ನಡ ಕಾವ್ಯ ರಚನೆಯ ಬಗೆಗೆ ಕುತೂಹಲ ಮೂಡಿ ಕವಿತೆಗಳನ್ನೂ ಓದಿದ್ದೆ. ಆಗ ಕಾದಂಬಿನಿ ಎಂಬ ಹೆಸರಿನಲ್ಲಿ ಪ್ರಕಟಗೊಳ್ಳುತ್ತಿದ್ದ ಕೆಲವು ಕವಿತೆಗಳನ್ನೂ ಸಹ ಕುತೂಹಲದಿಂದ ಗಮನಿಸಿದ್ದೆ. ಫೇಸ್ಬುಕ್ನಲ್ಲಿ ಕವಿತೆಗಳೆಂದು ಪ್ರಕಟಗೊಳ್ಳುವ ಹಲವು ರಚನೆಗಳಲ್ಲಿ ಹಸಿ ಹಸಿ ಸಾಲುಗಳೇ ತುಂಬಿರುತ್ತಿದ್ದವು. ಅಂದರೆ ತಮಗೆ ಆ ಕ್ಷಣಕ್ಕೆ ಅನ್ನಿಸಿದ ಎಲ್ಲಾ ಭಾವನೆಗಳನ್ನು ಕವಿತೆಗಳೆಂದು ಭ್ರಮಿಸಿ ಆತುರಾತುರವಾಗಿ ಪ್ರಕಟಿಸುವುದನ್ನು ನೋಡಿ ಅವರ ಧೈರ್ಯಕ್ಕೆ ಆಶ್ಚರ್ಯಪಟ್ಟಿದ್ದೆ.

ಇಂಥ ಸಂಧರ್ಭಗಳಲ್ಲಿಯೇ ಕೆಲವು ಪ್ರಬುದ್ಧ ಕವಿತೆಗಳು ಇರುತ್ತಿದ್ದುದನ್ನು ಗಮನಿಸಿ ಓದುತ್ತಿದ್ದೆ. ಆಶ್ಚರ್ಯ ಉಂಟಾಗುವಂತೆ ಹೊಸ ಕಾವ್ಯ ಪರಂಪರೆಯೊಂದು ಇಂಥ ಕವಿತೆಗಳಲ್ಲಿ ಚಿಗುರೊಡೆಯುತ್ತಿದೆಯೆಂಬ ಖುಷಿ ಮತ್ತು ಕುತೂಹಲ ಎರಡೂ ಉಂಟಾಗುತ್ತಿತ್ತು. ಅಂಥದರಲ್ಲಿ ಗಮನ ಸೆಳೆದ ಕವಿತೆಗಳು ಕಾದಂಬಿನಿ ಹೆಸರಿನಲ್ಲಿ ಪ್ರಕಟಗೊಂಡಿದ್ದನ್ನು ಗಮನಿಸಿದ್ದೇನೆ. ಸಮಕಾಲೀನ ಘಟನೆ, ಸನ್ನಿವೇಶಗಳನ್ನು ಸರಳ ಹಾಗೂ ನೇರ ನುಡಿಗಳಲ್ಲಿ ಕಾವ್ಯವಾಗಿಸುವ ಕ್ರಮವನ್ನು ಕಂಡು ಆಕರ್ಷಿತನಾಗಿದ್ದೆ. ಅನಂತರದಲ್ಲಿ ಆಗಾಗ ಅವರ ಕವಿತೆಗಳನ್ನು ಓದುತ್ತಿದ್ದೆ. ಇದರ ನಡುವೆ ಇವರ ಕವಿತೆಗಳು ಸಂಕಲನದ ರೂಪದಲ್ಲಿ ಪ್ರಕಟಗೊಂಡಿರಬಹುದೆಂದು ಭಾವಿಸಿ ಪುಸ್ತಕದ ಅಂಗಡಿಗಳಲ್ಲಿ ಹುಡುಕಿದ್ದೂ ಉಂಟು. ಅಷ್ಟೇ ಅಲ್ಲ, ಅವರ ಕಾವ್ಯದ ಅನನ್ಯತೆಯನ್ನು ಕುರಿತು ಕೆಲವು ಯುವಕವಿಗಳೊಂದಿಗೆ ನನ್ನ ಅನಿಸಿಕೆಗಳನ್ನು ಹಂಚಿಕೊಂಡಿದ್ದೂ ಉಂಟು. ಅವರಿಂದಲೇ ಕಾದಂಬಿನಿ ಎಂಬ ಹೆಸರಿನಲ್ಲಿ ಯಾವ ಸಂಕಲನಗಳೂ ಬಂದಿಲ್ಲ ಎಂಬ ಸಂಗತಿ ತಿಳಿಯಿತು. ಅವರಿಂದಲೇ ‘ಕಾದಂಬಿನಿ’ ಎಂಬುದು ಗುಪ್ತನಾಮ ಎಂದು ತಿಳಿಯಿತು. ಇಷ್ಟೊಂದು ಒಳ್ಳೆಯ ಕಾವ್ಯವನ್ನು ಬರೆದ ಈ ಕವಿ ಇದುವರೆಗೂ ಸಂಕಲನವೊಂದನ್ನು ಹೊರತರದಿರುವುದು ನನಗೆ ವಿಸ್ಮಯ ಎನಿಸಿತ್ತು.

ಅಜ್ಞಾತ ಕವಿ ಕಾದಂಬಿನಿ ಅವರ ಕಾವ್ಯವನ್ನು ಕುರಿತು ಫೇಸ್ಬುಕ್ಕಿನಲ್ಲಿ ಕಾಲಕಾಲಕ್ಕೆ ಪ್ರಕಟವಾದ ಪ್ರತಿಕ್ರಿಯೆಗಳನ್ನು ಗಮನಿಸಿದ್ದೇನೆ. ಅಂಥ ಪ್ರತಿಕ್ರಿಯೆಗಳು ಆಶ್ಚರ್ಯವನ್ನು ಕುತೂಹಲವನ್ನು ಮೂಡಿಸುವಂತೆ ಪ್ರಕಟಗೊಂಡಿದೆ. ಈ ಕವಿಯ ಹಿನ್ನೆಲೆ, ವಯಸ್ಸು, ಧರ್ಮ, ಜಾತಿ, ವೃತ್ತಿ, ಪರಿಸರಗಳು ತಿಳಿಯದಿರುವುದರಿಂದಲೇ ಇವರ ಕಾವ್ಯಕ್ಕೆ ಇಷ್ಟೊಂದು ಪ್ರತಿಕ್ರಿಯೆಗಳು ಬಂದಿವೆ ಎನಿಸುತ್ತವೆ. ಕಾದಂಬಿನಿ ಯಾರೆಂಬುದು ತಿಳಿದಿದ್ದರೆ ಈ ಮಟ್ಟಿಗೆ ಪ್ರತಿಕ್ರಿಯೆಗಳು ಬರುತ್ತಿರಲಿಲ್ಲವೆನ್ನಬಹುದು. ಅಂದರೆ ಅಜ್ಞಾತವಾಗಿರುವ ಕಾಲದಲ್ಲಿ ಓದುಗ ವರ್ಗದಿಂದ ಬರುವ ಪ್ರತಿಕ್ರಿಯೆಗೂ ಜ್ಞಾತವಾದಾಗ ಪ್ರಕಟವಾಗುವ ಪ್ರತಿಕ್ರಿಯೆಗೂ ಅಗಾಧ ಅಂತರಗಳು ಇರುತ್ತವೆ ಎಂಬುದನ್ನು ಕನ್ನಡ ವಿಮರ್ಶೆ ಈಗಾಗಲೇ ಸಾಬೀತುಪಡಿಸಿದೆ. ‘ಲೇಖಕ ಬರೆದ ನಂತರ ಸಾಯುತ್ತಾನೆ’ ಎಂಬ ವಿಮರ್ಶಾ ಪ್ರಕ್ರಿಯೆ ಓದಿನ ಪೂರ್ವಾಗ್ರಹಗಳಿಂದ ದೂರವಾಗಿ ನಡೆಸುವ ಅನುಸಂಧಾನದ ಕುರಿತದ್ದೆನ್ನಬಹುದು.

ಹಲವು ವರ್ಷಗಳ ಹಿಂದೆ ‘ನಳಿನಿ ದೇಶಪಾಂಡೆ’ ಹೆಸರಿನಲ್ಲಿ ಪ್ರಕಟವಾದ ಕಾವ್ಯವನ್ನು ಕುರಿತು ವ್ಯಕ್ತವಾದ ಪ್ರತಿಕ್ರಿಯೆ ಇಲ್ಲಿ ನೆನಪಾಗುತ್ತದೆ. ಕವಿ ಯಾರೆಂದು ತಿಳಿದಾಗ ಸಹೃದಯ ಪ್ರಜ್ಞೆ ಹಲವು ಪೂರ್ವಾಗ್ರಹಗಳಿಂದ ಕಾವ್ಯದ ಮೌಲ್ಯಮಾಪನಕ್ಕೆ ತೊಡಗಿಬಿಡುತ್ತದೆ. ವಿಮರ್ಶಾ ವಲಯದಲ್ಲಿ ಇಂಥ ಪರಂಪರೆ ನಿರಂತರವಾಗಿ ಪ್ರಕಟವಾಗಿದೆ ಎನ್ನಬಹುದು. ಕುವೆಂಪು, ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಯು.ಆರ್. ಅನಂತಮೂರ್ತಿ, ಸಿದ್ಧಲಿಂಗಯ್ಯ, ದೇವನೂರು ಮಹದೇವ ಇಂಥವರ ಕೃತಿಗಳ ಮೌಲ್ಯಮಾಪನವೂ ಪೂರ್ವಗ್ರಹಗಳಿಂದಲೇ ನಡೆದಿದೆ. ಹಾಗಾಗಿ ಕಾದಂಬಿನಿ ಯಾರೆಂಬುದು ಜ್ಞಾತವಾದಾಗ ಅವರ ಕಾವ್ಯಕ್ಕೆ ತೋರುವ ತೀವ್ರವಾದ ಪ್ರತಿಕ್ರಿಯೆ ಈಗಿರುವಂತೆಯೇ ಮುಂದೆ ಇರಲಾರದೆನಿಸುತ್ತದೆ. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಈ ರೀತಿ ಗುಪ್ತನಾಮದಲ್ಲಿ ಬರೆದ ಒಂದು ದೊಡ್ಡ ಪರಂಪರೆಯೇ ಇದೆ.

‘ಅಜ್ಞಾತಳೊಬ್ಬಳು’ ಕವಿತೆ ಕವಿ ಅಜ್ಞಾತವಾಗಿ ಅಜ್ಞಾತ ಸ್ಥಳದಿಂದ ಯಾಕೆ ಬರೆಯುತ್ತಾಳೆಂಬ ಸಂಕಟವನ್ನು ಕಾಣಿಸುತ್ತದೆ. ಈ ಕವಿತೆಯ ನಾಯಕಿಯ ಭಯ-ಆತಂಕಗಳು ಹಾಗೆ ಬರೆಯಲು ಕಾರಣವನ್ನು ಪ್ರಕಟಿಸುತ್ತದೆ. ಸಮಕಾಲೀನ ಸಂದರ್ಭದಲ್ಲಿ ಬರಹಗಾರನೊಬ್ಬ ಅಜ್ಞಾತ ಸ್ಥಳದಿಂದ ಅಜ್ಞಾತ ನಾಮದಿಂದ ಬರೆಯುವ ಸಂದರ್ಭವೊಂದು ಏರ್ಪಡುವುದು ಆ ಸಮಾಜದ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವನ್ನು ಸೂಚಿಸುತ್ತದೆ.

‘ಹಿಟ್ಲರನೊಬ್ಬನ ಅಜ್ಞಾತ ಸ್ಥಳವೊಂದರ
ಯಾತನಾ ಶಿಬಿರದಲ್ಲಿ ಕೊಳೆಯುತ್ತಾ
ಅಕ್ಷರಗಳು ಮೂಡದ ಗಾಳಿಯ ಮೇಲೆ
ಅಜ್ಞಾತಳು ಬರೆದೇ ಬರೆಯುತ್ತಾಳೆ’

ಈ ಸಾಲುಗಳು ಕೌಟುಂಬಿಕ, ಧಾರ್ಮಿಕ, ರಾಜಕೀಯ ಹಾಗೂ ವ್ಯಕ್ತಿನಿಷ್ಠ ಕ್ರೌರ್ಯದ ನೋವಿನ ತೀವ್ರತೆಯನ್ನು ಪ್ರಕಟಿಸುತ್ತದೆ.

‘ನೋವಿನ ಈಟಿಗಳನ್ನು ಎದೆಯ ರುದಿರದೊಳು
ಅದ್ದಿ ಆ ಅಜ್ಞಾತಳು ಬರೆಯುತ್ತಾಳೆ’
ಎಂಬ ಸಾಲುಗಳು ಪ್ರಸ್ತುತ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಸಂಕಟವನ್ನು ಕಾಣಿಸುತ್ತದೆ.

ಕಾದಂಬಿನಿ ಅವರ ಕಾವ್ಯ ಪಾರಂಪರಿಕ ಎಲ್ಲಾ ಬಗೆಯ ಸಂಪ್ರದಾಯಗಳನ್ನು ಮೀರಲು ತವಕಿಸುತ್ತದೆ. ಅಂದರೆ

‘ಆಪ್ತರು ತೀರಿ ಹೋದಾಗ
ಶೋಕಸೂಚಕ ಉಡುಪು ಧರಿಸಿ
ಟಿಶ್ಶು ಪೇಪರಿನಲ್ಲಿ
ಮೂಗು ಕಂಪಾಗುವ ತನಕ
ಉಜ್ಜುತ್ತಾ ಸದ್ದೇ ಬರದ ಹಾಗೆ ಅಳುವ
ಶಿಷ್ಟಾಚಾರ ನನಗೆ ಬರಲೇ ಇಲ್ಲ’

ಎಂಬ ಸಾಲುಗಳು ಕಾದಂಬಿನಿ ಕಾವ್ಯದ ಬಗೆಯನ್ನು ಸ್ಪಷ್ಟಪಡಿಸುತ್ತದೆ. ಇಂಥ ನಿಲುವುಗಳು ಅವರ ಒಟ್ಟು ಕಾವ್ಯದಲ್ಲಿ ಮತ್ತೆ ಮತ್ತೆ ಪ್ರಕಟಗೊಳ್ಳುತ್ತವೆ. ಪ್ರೀತಿ-ಪ್ರೇಮ, ಗಂಡ-ಹೆಂಡತಿ, ಧರ್ಮ-ರಾಜಕಾರಣ, ಹುಟ್ಟು-ಸಾವು, ಪರಿಸರ-ಮನುಷ್ಯ ಸಂಬಂಧಗಳು, ಸ್ವಾತಂತ್ರ್ಯ ಕುರಿತ ನಿಲುವುಗಳು ಇಂಥ ನೆಲೆಯಿಂದಲೇ ಅಭಿವ್ಯಕ್ತಗೊಳ್ಳುತ್ತವೆ.

ವೈವಾಹಿಕ ವಿಚ್ಛೇದನವನ್ನು ಕುರಿತು ಇವರು ಪರಿಭಾವಿಸುವ ಕ್ರಮ ವಿಶಿಷ್ಟ. ‘ನನಗೆ ಈ ಕೆಲಸ ಸಿಕ್ಕಿದ್ದು’ ಕವಿತೆಯಲ್ಲಿ ಹೆಣ್ಣಾಗಿ ಹುಟ್ಟಿದ ಮೇಲೆ ಅನುಭವಿಸುವ ಸಂಕಟ, ಅದರ ಜೊತೆಯಲ್ಲಿಯೇ ಕೌಟುಂಬಿಕ ವಿಚ್ಛೇದನಗಳಿಗೆ ಕಾರಣವಾಗದೆ ಬದುಕಬೇಕಾದ ಕಲೆ ಅನಿವಾರ್ಯತೆಯನ್ನು ಈ ಕವಿತೆ ನಮ್ಮ ಮುಂದಿಡುತ್ತದೆ. ಗುಡಿಸುವ ಪೊರಕೆಯನ್ನು ಪ್ರತಿಮೆಯಾಗಿಸಿ ಕೌಟುಂಬಿಕ ಬದುಕಿನ ಸಂಬಂಧಗಳನ್ನು ಕಟ್ಟುವ ಪ್ರಕ್ರಿಯೆಯಂತೂ ಮಾರ್ಮಿಕ. ಪುರುಷನ ಅನೇಕ ಕ್ರೌರ್ಯಗಳನ್ನು ಸಹಿಸುತ್ತಾಳೆ ಹೆಣ್ಣು. ಆದರೂ ಗಂಡು ಹೆಣ್ಣಿನ ಸಂಬಂಧಗಳು ಇಂದು ಕ್ಷುಲ್ಲಕ ಕಾರಣಗಳಿಗೆ ವಿಚ್ಛೇದನಗೊಳ್ಳುತ್ತಿರುವುದನ್ನು ಈ ಕವಿತೆ ಪ್ರಶ್ನಿಸುತ್ತದೆ.

‘ಒಂದು ಕಡ್ಡಿ ಉದುರಿತು
ಕೂಡಲೇ ಅದನ್ನತ್ತಿ ಹಿಡಿಯ
ತುದಿಭಾಗದಿಂದ
ಕಟ್ಟಿನೊಳಕ್ಕೆ ತೂರಿ
ಹಿಡಿಯ ಗಟ್ಟಿಗೊಳಿಸುವುದರಲ್ಲೇ
ಅದರ ಬಾಳಿಕೆ ಅಡಗಿದೆ’

ಎಂಬ ಸಾಲುಗಳು ಹೆಣ್ಣೊಬ್ಬಳು ತನ್ನ ಕುಟುಂಬವನ್ನು ಸರಿದೂಗಿಸಿಕೊಂಡು ಹೋಗುವ ರೀತಿಗೆ ಪರಂಪರೆಯಿಂದಲೂ ಹೆಣ್ಣನ್ನು ಪಳಗಿಸಿರುವ ಏಕಮುಖಿ ಅನುಸಂಧಾನವನ್ನು ಈ ಕವಿತೆ ಪ್ರಕಟಿಸುತ್ತದೆ. ಈ ಸಂಕಲನದಲ್ಲಿರುವ ‘ದೂರದವರೆಗೂ’, ‘ಮಾಯೆಯ ಜೋಗುಳ’, ‘ಅವಳ ಮೌನದುದ್ದಕ್ಕೂ’ ಇನ್ನೂ ಇಂಥ ಅನೇಕ ಕವಿತೆಗಳು ಹಲವು ವ್ಯಂಗ್ಯಾರ್ಥಗಳಿಗೆ ಅನುವಾಗುವ ಕವಿತೆಗಳು. ಈ ಕವಿತೆಗಳಲ್ಲಿ ಬರುವ ದೂರ, ಗವಿ, ಪರಿಮಳ, ಅಶಾಂತ, ಮೌನ, ಮಾಳಬೆಕ್ಕು, ಕಾಳೋಗರದಂಥ ಚಿತ್ರಗಳು ಹಲವು ಅರ್ಥಗಳಿಗೆ ಅನುವಾಗುತ್ತವೆ.

ತನಗೆ ದೊರಕಿದ ಸ್ವಾತಂತ್ರ್ಯದಲ್ಲಿ ಬದುಕು ಕಟ್ಟಿಕೊಂಡು ಬದುಕುವ ಬಗೆಯನ್ನು ‘ಧೂಪದ ಮರ’ ಕವಿತೆ ಹೇಳುತ್ತದೆ. ದಿನೇ ದಿನೇ ಪರಿಸರ ಅವನತಿಯ ಕಡೆಗೆ ಹೊರಟಿರುವುದನ್ನು ಇವರ ಅನೇಕ ಕವಿತೆಗಳು ದಾಖಲಿಸುತ್ತವೆ. ಮಾಯಾಮೃಗದ ಕ್ರೌರ್ಯ ಅದರಿಂದ ಒದಗಬಹುದಾದ ದುರಂತಗಳು ಅಸಂಖ್ಯ. ಅಖಂಡ ಪರಿಸರವೇ ದುರಂತದ ಕಡೆಗೆ ಚಲಿಸುತ್ತಿರುವ ಕ್ರಮವಂತೂ ಭಯಾನಕ. ಹೊರಗಿನ ಈ ಮೃಗ ನಮ್ಮ ಒಳಗೇ ಇರುವ ನಮ್ಮ ಮೆದುಳೇ ಆಗಿಹೋಗಿರುವ ಅನುಭವವನ್ನು ಈ ಕವಿತೆ ಕಟ್ಟಿಕೊಡುತ್ತದೆ. ಈ ಮಾಯಾಮೃಗ ಯಾವುದು, ಅದರಿಂದ ಒದಗುವ ಪರಿಣಾಮಗಳೇನು, ಅದರ ಸಂತಾನ ವೃದ್ಧಿಯ ಭೀಕರತೆಯ ಚಿತ್ರಗಳು ಇವರ ಕಾವ್ಯದಲ್ಲಿ ಮತ್ತೆ ಮತ್ತೆ ಕಾಣಿಸುತ್ತವೆ. ಪ್ರಸ್ತುತ ಸಾಮಾಜಿಕ, ರಾಜಕೀಯ, ಧಾರ್ಮಿಕ ಮೂಲಭೂತವಾದಿಗಳ ಮನೋಭೂಮಿಕೆಯನ್ನು ಇವರ ಕಾವ್ಯ ಪರಿಣಾಮಕಾರಿಯಾಗಿ ನಮ್ಮ ಮುಂದಿಡುತ್ತದೆ.

‘ತಾವರೆಕೆರೆಯ ಅಪಾರ್ಟ್ಮೆಂಟ್’ ಕವಿತೆ ನಗರಗಳ ಬೆಳವಣಿಗೆಯ ರಾಕ್ಷಸತ್ವವನ್ನು ಒಮ್ಮೆಗೇ ಎದುರಾಗಿಸುತ್ತದೆ. ಕೆರೆ-ಕಟ್ಟೆಗಳೆಲ್ಲವೂ ನಗರ ಬೆಳವಣಿಗೆಯಿಂದಾಗಿ ಕಥೆಯಾಗುವ, ಜನಪದವಾಗುವ ಬಗೆಯನ್ನು ತೆರೆದಿಡುತ್ತದೆ ಈ ಕವಿತೆ. ಹಾಗೆಯೇ ಜೀವ ಸಮುದಾಯದ ದಿನನಿತ್ಯದ ಆಗುಹೋಗುಗಳಿಗೆ ಬಳಕೆಯಾಗುತ್ತಿದ್ದ ಕೆರೆಗಳೆಲ್ಲವೂ ಇಂದು ಕಸದ, ಕೊಳಚೆಯ ತಾಣವಾಗಿ ನಾರುತ್ತಿರುವ ವಾಸ್ತವ ಚಿತ್ರಣವನ್ನು ಬಿಚ್ಚಿಡುತ್ತದೆ. ಕೆರೆ-ಕಟ್ಟೆಗಳು ಹಣವಂತರ ಪಾಲಾಗುತ್ತಿರುವುದನ್ನು ಜನರ ಬದುಕಿಗಾಗಿ ನಮ್ಮ ಪೂರ್ವಜರು ನಿಸ್ವಾರ್ಥದಿಂದ ಕಟ್ಟಿಸಿದ ಕೆರೆಗಳು ಬಹು ಅಂತಸ್ತಿನ ಕಟ್ಟಡಗಳಾಗಿ ತಲೆಯೆತ್ತಿ ತಮ್ಮ ತಮ್ಮ ಹೆಸರುಗಳನ್ನು ಶಾಶ್ವತಗೊಳಿಸುತ್ತಿರುವ ಕ್ರಮವನ್ನು ವಿಡಂಬಿಸುತ್ತದೆ. ಸಕಲ ಜೀವ ಜಗತ್ತುಗಳಿಗೆ ಉಪಯೋಗವಾಗುತ್ತಿದ್ದ ಕೆರೆಗಳು ನಗರ ತ್ಯಾಜ್ಯಗಳ, ಬೇಡದ ಭ್ರೂಣಗಳ, ಪ್ರೇಮಿಗಳ ಕೊಳೆತ ಶವಗಳ ಆಗರವಾಗುತ್ತಿರುವುದನ್ನು ಪರಿಣಾಮಕಾರಿಯಾಗಿ ಈ ಕವಿತೆ ಚಿತ್ರಿಸುತ್ತದೆ.

‘ಕೆಲ ಸಮಯದ ಹಿಂದೆ
ನಮ್ಮೂರ ಸೂರ್ಯ
ಕೆರೆಯಾಚೆ ಮುಳುಗುತ್ತಿದ್ದ
ಈಗ ಕಟ್ಟಡದ ಹಿಂದೆ
ಅಡಗುತ್ತಾನೆ’

ಎಂಬ ಸಾಲುಗಳು ನಾಗರಿಕ ಬದುಕಿನ ದುರಂತಗಳ ಸರಮಾಲೆಯನ್ನು ನಮ್ಮ ಮುಂದಿಡುತ್ತವೆ. ಇಂಥದೇ ಪ್ರಸ್ತುತ ಅಭಿವೃದ್ಧಿಯ ಪರಿಕಲ್ಪನೆಗಳನ್ನು ‘ಅಚ್ಛೆದಿನ್ ಬರಲಿಲ್ಲ’ ಕವಿತೆ ಹೇಳುತ್ತದೆ. ಹುಸಿ ಭ್ರಮೆಗಳನ್ನು ಜನರಲ್ಲಿ ತುಂಬಿ ವಂಚಿಸುತ್ತಿರುವ ಯಶೋಗಾಥೆಯಂತಿದೆ ಈ ಕವಿತೆ. ಇಂಥದ್ದೆ ರಾಜಕೀಯ ವಿಡಂಬನೆ ‘ಊಟದ ಆಟ’ ಕವಿತೆಯಲ್ಲಿದೆ. ದಲಿತರ ಮನೆಯಲ್ಲಿ ವಾಸ್ತವ್ಯ ಹೂಡುವ ರಾಜಕೀಯ ವಿಡಂಬನೆ ಇದರದು. ಯುದ್ಧವನ್ನು ಕುರಿತ ಕವಿತೆಗಳಲ್ಲಿಯೂ ಇಂಥ ರಾಜಕೀಯ ಒಳಹುನ್ನಾರಗಳೇ ಅಭಿವ್ಯಕ್ತಗೊಂಡಿವೆ. ಮನುಷ್ಯ ವೈಚಾರಿಕತೆಯನ್ನು ಇಷ್ಟು ಪರಿಣಾಮಕಾರಿಯಾಗಿ ಹೇಳಬಹುದೇ ಎನಿಸುವಷ್ಟು ಅಚ್ಚರಿಯನ್ನು ಹುಟ್ಟಿಸುತ್ತದೆ. ‘ಕುಡಿಯಲು ನೀರು ಕೇಳಿದರೆಂದು’ ಕವಿತೆ ವಚನಗಳ ಧಾಟಿಯಲ್ಲಿ ಇರುವ ಕವಿತೆ. ಸಾಮಾಜಿಕ ಕ್ರೌರ್ಯ ಸಮಷ್ಠಿಪ್ರಜ್ಞೆಯಲ್ಲಿ ಹೇಗೆ ಮಡುಗಟ್ಟುತ್ತಿದೆ ಎಂಬುವುದನ್ನು ಬಯಲು ಮಾಡುತ್ತದೆ. ಇವರ ಸಾಮಾಜಿಕ ವಿಮರ್ಶೆಯನ್ನು ಕುರಿತ ಕವಿತೆಗಳ ವೈಶಿಷ್ಟ್ಯವೆಂದರೆ ಸಾಮಾಜಿಕ ಅನಿಷ್ಟಗಳನ್ನು ಪ್ರಶ್ನಿಸುತ್ತಾ, ಪ್ರತಿಯೊಬ್ಬರಲ್ಲೂ ತನ್ನ ಒಳಗೇ ಇರುವ ಕ್ರೌರ್ಯವನ್ನು ಅಸಹಿಷ್ಣುತೆಯನ್ನು ಸ್ವವಿಮರ್ಶೆ ಸ್ವವಿಡಂಬನೆಗಳಿಂದ ಅಭಿವ್ಯಕ್ತಿಸುವ ಕ್ರಮ ಅನನ್ಯ. ಇಂಥದೇ ಮತ್ತೊಂದು ಕವಿತೆ ‘ನನ್ನ ವ್ಯಾಲಂಟೈನ್’. ಪ್ರಸ್ತುತ ಪರಿಸರದಲ್ಲಿ ಆತಂಕಗಳನ್ನೇ ಬದುಕುವಂತೆ ನಿರ್ಮಾಣವಾಗುತ್ತಿರುವ ಸನ್ನಿವೇಶದ ಅನೇಕ ಚಿತ್ರಗಳು ಇವರ ಕಾವ್ಯದ ವಸ್ತುವಾಗಿ ಹೊಸ ಧ್ಯಾನದಲ್ಲಿ ತೊಡಗುತ್ತದೆ.

‘ಟಾಲ್ಸ್ಟಾಯ್ ಕಥೆ’, ‘ಡೆತ್ ಆಫ್ ಇವಾನ್ ಇಲ್ಲ್ಯಿಚ್’ನ ಸಾವನ್ನು ನೆನಪಿಸುವ ಕವಿತೆ ‘ಗಂಧದ ಕಟ್ಟಿಗೆ’ ಮನುಷ್ಯನ ಐಷಾರಾಮಿ ಬದುಕಿನ ನಿರರ್ಥಕತೆಯನ್ನು ಮನುಷ್ಯ ಸಂಬಂಧಗಳ ಕಡು ವಾಸ್ತವತೆಯನ್ನು ಅನಾವರಣಗೊಳಿಸುತ್ತದೆ. ಸಾಂಪ್ರದಾಯಿಕ ಸೌಂದರ್ಯ ಪ್ರಜ್ಞೆಯನ್ನು ‘ನಾನು ಸುಂದರಿಯಾಗಿರುತ್ತಿದ್ದರೆ’ ಕವಿತೆ ವಿಶಿಷ್ಟ ಬಗೆಯಲ್ಲಿ ತೆರೆದಿಡುತ್ತದೆ. ಸುಂದರವಾದದ್ದರ ಬಗ್ಗೆ ಮನುಷ್ಯನು ತೋರುವ ಆಸ್ಥೆ, ಶ್ರದ್ಧೆ, ಕರುಣೆ, ಸಾಮಾನ್ಯತೆಯ ಬಗ್ಗೆ ಕುರೂಪತೆಯ ಬಗ್ಗೆ ತೋರಲಾರದ ಬಗೆಯನ್ನು ಪಾರಂಪರಿಕ ಸೌಂದರ್ಯ ಪ್ರಜ್ಞೆಯ ಗರ್ಭಕ್ಕೆ ಈಟಿಯಂತೆ ನಾಟಿಸುತ್ತದೆ. ‘ಮರಣಶಯ್ಯೆ’ ಕವಿತೆ ಪ್ರತಿಯೊಬ್ಬನು ಬದುಕಿನಲ್ಲಿ ಏಕಾಂಗಿಯಾಗಿಯೇ ಸಾವಿನ ಕಡೆಗೆ ಚಲಿಸುವ ಸಂಗತಿಯನ್ನು ನಿರೂಪಿಸುತ್ತದೆ. ‘ಸಾವಿನಲ್ಲಿ ಎಲ್ಲರೂ ಏಕಾಂಗಿಗಳು’ ಎಂಬ ತೇಜಸ್ವಿಯವರ ಸಾಲು ಇಲ್ಲಿ ನೆನಪಾಗುತ್ತದೆ. ಕುಟುಂಬ ಸಮಾಜದ ಸಂಬಂಧಗಳ ಹುಸಿಭ್ರಮೆ ಇಲ್ಲಿ ಬಯಲಾಗುತ್ತದೆ. ‘ಕವಿತೆ ನದಿಯಂತೆ’ ಕವಿತೆಯ ಚಲನಶೀಲತೆಯ ಕಥನವನ್ನು ನದಿಯ ಹರಿವಿಗೆ ಉಪಮೆಯಾಗಿಸಿರುವ ಕ್ರಮ ವಿಶಿಷ್ಟವಾದುದು. ಬದುಕು, ಕವಿತೆ, ನದಿಯ ಚಿತ್ರಗಳನ್ನು ಅಭಿನ್ನಗೊಳಿಸುವ ಕ್ರಮವು ಅನನ್ಯ.

‘ದಾಹ ಮತ್ತು ಬಾವಿ’ ಕವಿತೆಯು ಜೀವಜಲವನ್ನು ದುರ್ಬಲಗೊಳಿಸಿದ, ವ್ಯಾಪಾರದ ಸರಕಾಗಿಸಿದ, ನೋವಿನ ಕಥನ. ‘ಕಾಯುವಿಕೆ’, ‘ಒಂದು ಸುದೀರ್ಘ ಪಯಣ’, ‘ನೀವು ಪ್ರೇಮಿಗಳನ್ನು ಕಂಡಿರೇ’, ‘ಒಲವು ಕಡಲು’, ‘ಪ್ರಿಯನಲ್ಲಿಗೆ ಹೊರಟೆಯಾ?’ ಕವಿತೆಗಳು ಪ್ರೀತಿ, ವಿರಹಗಳನ್ನು ಕುರಿತು ಇದಕ್ಕಿಂತ ಚೆನ್ನಾಗಿ ಅಭಿವ್ಯಕ್ತಿಸಲು ಸಾಧ್ಯವೇ ಎಂಬಂತಿವೆ.

ಪುರುಷ-ಸ್ತ್ರೀ, ಧರ್ಮ-ದೇವರು, ಜಾತಿ-ಮತ ಇಂಥ ವಿಚಾರಗಳನ್ನು ಈ ಹಿಂದಿನ ಕಾವ್ಯದಂತೆ ಪ್ರಸ್ತುತ ಸಂದರ್ಭಗಳಲ್ಲಿ ಅಭಿವ್ಯಕ್ತಿಗೆ ಒಳಪಡಿಸುವುದು ಆತಂಕದ ಸ್ಥಿತಿಯಾಗಿದೆ. ಇಂಥ ಕಾಲದಲ್ಲಿ ಒಬ್ಬ ಲೇಖಕ ಅಜ್ಞಾತವಾಗಿಯೋ, ಗುಪ್ತನಾಮಗಳಲ್ಲಿಯೋ ಬರೆಯಬೇಕಾದ ಅವಿವಾರ್ಯತೆ ಎದುರಾಗುತ್ತದೆಯೋ ಏನೋ. ಅಂಥ ಸ್ಥಿತಿಗತಿಗಳು ಲೇಖಕನ ಆತ್ಮಕಥನದಂತೆ ಈ ಕೆಳಗಿನ ಸಾಲುಗಳಲ್ಲಿ ಕಾಣಿಸುತ್ತವೆ.

‘ಮೊಗವಿಲ್ಲದ ಅಸತ್ಯಕ್ಕೆ ನುಣ್ಣನೆ ಮುಖವಾಡ
ಸುಖೋಲ್ಲಾಸ ವಿಲಾಸದಲಿ
ಕುಣಿದೂ ನಲಿದೂ, ತುಳಿದೂ ಥಳಿಸಿ
ಆಗೀಗ ಅಪರೂಪದ ಖಯಾಲಿಗೆ
ನೋವು, ಬೇಸರಿಕೆಯೆಳೆಯ ಜಾಡ ಹಿಡಿದರಸಿ
ನೋವು ಭರಿತ ಹಾಡುಗಳ ಗುನುಗುತ್ತ
ಒಂದಷ್ಟು ದೂರ ಚಲಿಸಿ
ಅನುಭವದ ಗಟ್ಟಿ ನೆಲೆಗಟ್ಟಿನ ಮೇಲೆ ನಾಲ್ಕು
ಕವಿತೆ ಗೀಚಿ.’

ಮನುಷ್ಯನ ಮೃಗತ್ವ, ಬದುಕಿನ ನಶ್ವರತೆ, ಜೀವನ ಪ್ರೀತಿ, ಸ್ಪೃಶ್ಯ-ಅಸ್ಪೃಶ್ಯತೆಯ ವಿಚಾರಗಳು, ಹುಟ್ಟು-ಸಾವು, ಪರಿಸರವನ್ನು ಕುರಿತ ಕಾಳಜಿ, ಮದುವೆ-ವಿಚ್ಛೇದನ, ಸಾವು-ಆಚರಣೆಗಳು, ಕೌಟುಂಬಿಕ ಕಲಹಗಳ ಚಿತ್ರಗಳು ಹಲವು ಬಗೆಯ ಅತ್ಯಾಚಾರಗಳ ಕಥನಗಳು, ಧಾರ್ಮಿಕ ಮೂಲಭೂತವಾದದ ಮೃಗತ್ವ, ಅದರಿಂದ ನಿರ್ಮಾಣವಾಗುತ್ತಿರುವ ಆತಂಕಗಳು, ಪ್ರಸ್ತುತ ರಾಜಕೀಯ ಒಳತಂತ್ರಗಳಿಂದ ಏರ್ಪಟ್ಟಿರುವ ಆತಂಕಗಳ ಚಿತ್ರಗಳು, ಸ್ವಾತಂತ್ರ್ಯ ಮತ್ತು ಬಂಧನಗಳ ಭೀತಿ, ಕನಸು-ಎಚ್ಚರ, ಹಗಲು-ಇರುಳು, ಒಂಟಿತನ ಇತ್ಯಾದಿ ವಿಷಯಗಳನ್ನು ಕುರಿತು ಕಾದಂಬಿನಿ ಕಾವ್ಯ ಗಾಢವಾಗಿ ಧ್ಯಾನಿಸಿದೆ.

ತನ್ನನ್ನು ಗಾಢವಾಗಿ ಕಲಕಿದ ಇಂಥ ಸಂಗತಿಗಳ ರೂಪಕಗೊಳಿಸುವುದು ಕಾದಂಬಿನಿ ಅವರ ಕಾವ್ಯದ ವೈಶಿಷ್ಟ್ಯಗಳಲ್ಲಿ ಒಂದು. ನಿರಾಶೆ-ಆತಂಕಗಳು ಇವರ ಕಾವ್ಯದ ಮುಖ್ಯವಾದ ಸಂಗತಿಯಾದರೂ ಅದರ ಜೊತೆಜೊತೆಯಲ್ಲಿಯೇ ಅಭಿವ್ಯಕ್ತಗೊಳಿಸುವ ಜೀವನಪ್ರೀತಿ ವಿಶಿಷ್ಟವಾದುದು. ಇವರ ಭಾಷಾ ಪ್ರಯೋಗ ನಿರೂಪಣಾ ಕ್ರಮ ವಿಶಿಷ್ಟವಾಗಿದೆ. ಹೊಸ ಕಾಲಕ್ಕೆ ಅಗತ್ಯವಾದ ಹೊಸಹೊಸ ಪದಗಳು, ಹೊಸ ಹೊಸ ಪ್ರಯೋಗಗಳನ್ನು ತಮ್ಮ ಕಾವ್ಯದಲ್ಲಿ ಕಾದಂಬಿನಿ ಮಾಡಿದ್ದಾರೆ.

ಈ ಕವಿತೆಗಳನ್ನು ಬರೆದ ಕವಿ ಯಾರೆಂದು ತಿಳಿಯದೇ ಕೇವಲ ಕಾವ್ಯದ ಓದಿಗೆ, ಓದಿನ ಆಕರ್ಷಣೆಗೆ ಸಿಲುಕಿದ್ದು ಸತ್ಯ. ಆದರೆ ನಾನು ಅವರ ಪ್ರಥಮ ಸಂಕಲನಕ್ಕೆ ಮುನ್ನುಡಿ ಬರೆಯುತ್ತೇನೆಂದು ಊಹಿಸಿಯೂ ಇರಲಿಲ್ಲ. ಇದನ್ನು ಬರೆದದ್ದು ಗಂಡೋ ಹೆಣ್ಣೋ ತಿಳಿಯದೇ ಓದಿದ್ದೇನೆ ನಾನು. ಈವರೆಗೆ ಓದಿರುವ ಕಾವ್ಯ, ಕಾವ್ಯವೇ ನನಗೆ ಕಾವ್ಯವನ್ನು ಅರಿಯಲು ಇರುವ ಮಾನದಂಡಗಳು ಆದರೂ ಅಂಥ ಮಾನದಂಡಗಳಿಂದಲೇ ನಾವು ಕಾವ್ಯಾಸ್ವಾದನೆಯನ್ನು ಮಾಡಿರುತ್ತೇವೆ. ಆದರೆ ಅನೇಕ ಸಾರಿ ಅಂಥ ನಂಬಿಕೆಗಳನ್ನು ಮೀರಿ ಸೃಷ್ಟಿಯಾಗುವ ಕಾವ್ಯ ಕಾದಂಬಿನಿಯವರದ್ದು.

ಕಾದಂಬಿನಿ ಅವರ ಕಾವ್ಯದ ಅನನ್ಯತೆ ಎಂದರೆ ಅದರಲ್ಲಿರುವ ಆಲೋಚನೆಯ ಕ್ರಮ; ಅಭಿವ್ಯಕ್ತಿಯ ಭಾಷೆ, ಸ್ಥಳೀಯ ಅನುಭವಗಳ ಚಿತ್ರಣ ಮತ್ತು ಅಂಥ ಅನುಭವಗಳನ್ನು ರೂಪಕವಾಗಿಸುವ ಕ್ರಮ, ಸರಳ, ನೇರ ಭಾಷೆಯನ್ನು ಕಾವ್ಯವಾಗಿಸುವ ಕಲೆ. ಅನೇಕ ಚಳುವಳಿಗಳು ಮುಂಚೂಣಿಯಲ್ಲಿರುವ ಸಂದರ್ಭದಲ್ಲಿ ಇವರ ಕಾವ್ಯ ಪ್ರಕಟಗೊಳ್ಳುತಿದ್ದರೂ ಯಾವುದೇ ಒಂದು ಚಳುವಳಿಯ ಸೆಳೆತಕ್ಕೆ ಸಿಲುಕದೇ ಎಲ್ಲ ಬಗೆಯ ಕ್ರೌರ್ಯಗಳನ್ನು ಸಂಕೀರ್ಣ ನೆಲೆಯಲ್ಲಿ ಇವರ ಕವಿತೆಗಳಲ್ಲಿ ಅಭಿವ್ಯಕ್ತಿಸುತ್ತಿದ್ದಾರೆ. ಹಾಗಾಗಿಯೇ ಏನೋ ಇವರ ಕಾವ್ಯ ನನಗೆ ಇಷ್ಟವಾಗಿರಬೇಕು ಅನಿಸುತ್ತದೆ.

ಈಗಿನ ಸಾಂಸ್ಕೃತಿಕ ಪರಿಸರವು ಸ್ವಾರ್ಥ ಮತ್ತು ರಾಜಕೀಯ ಹಿತಾಸಕ್ತಿಗಳಲ್ಲಿ ಮಗ್ನವಾಗಿದೆ. ಸಾಂಸ್ಕೃತಿಕ ಪರಿಸರ ಗುಂಪು ಗುಂಪುಗಳಾಗಿ ಛಿದ್ರಗೊಂಡು ತಮ್ಮ ತಮ್ಮ ಹಿತಾಸಕ್ತಿಗಳಲ್ಲಿ ಮುಳುಗಿರುವ ಸಂದರ್ಭದಲ್ಲಿ ಇವರ ಕಾವ್ಯ ಈ ಎಲ್ಲವುಗಳಿಂದ ದೂರ ನಿಂತು ಧ್ಯಾನಿಸುವ ಮುಖಾಮುಖಿಯಾಗುವ ಕ್ರಮವು ವಿಶೇಷ. ಪ್ರಸ್ತುತ ಸಂದರ್ಭದಲ್ಲಿ ಹೊಸ ಬಗೆಯ ಕಾವ್ಯವನ್ನು ಬರೆಯುತ್ತಿರುವ ಕೆಲವೇ ಕೆಲವರಲ್ಲಿ ಕಾದಂಬಿನಿ ಅವರು ಒಬ್ಬರು. ಸಮಕಾಲೀನ ಸಂದರ್ಭದ ಅಭಿವ್ಯಕ್ತಿಯ ಅನೇಕ ಸವಾಲುಗಳನ್ನು ಸ್ವೀಕರಿಸಿ ಇವರ ಕಾವ್ಯ ಸಮರ್ಥವಾಗಿ ರಚನೆಯಾಗುತ್ತಿದೆ. ಈ ಕಾರಣಕ್ಕಾಗಿಯೇ ಇವರ ಕವಿತೆಗಳು ಜನಮನ್ನಣೆಯನ್ನು ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.

ಸಮಕಾಲೀನ ಕಾವ್ಯವನ್ನು ಗಮನಿಸಿದರೆ 80ರ ದಶಕದ ಕಾವ್ಯ ರಚನಾ ಮಾದರಿಗಳನ್ನೇ ಅನುಸರಿಸುವುದು ಕಂಡುಬರುತ್ತದೆ. ಆದರೆ ಕಾದಂಬಿನಿ ಅವರ ಕವಿತೆಗಳು ಈ ಅನುಸರಿಸುವಿಕೆಯನ್ನು ದಾಟಿ ಹೊಸ ಮಾರ್ಗವೊಂದನ್ನು ಕಂಡುಕೊಳ್ಳುತ್ತಿರುವುದು ವಿಶೇಷ. ಇವರ ಕಾವ್ಯಕ್ಕೂ ಕೆಲವು ಮಿತಿಗಳು ಇದ್ದೇ ಇವೆ.

ಕನ್ನಡ ಕಾವ್ಯ ಓದುಗರು ಈ ಸಂಕಲನವನ್ನು ಪ್ರೀತಿಯಿಂದ ಓದುತ್ತಾರೆಂಬುದರಲ್ಲಿ ಅನುಮಾನವಿಲ್ಲ. ಈ ಕಾವ್ಯ ಸಂಕಲನಕ್ಕೆ ಮುನ್ನುಡಿಯ ಕೆಲವು ಮಾತುಗಳನ್ನು ಬರೆಯಲು ನನ್ನನ್ನು ಏಕೆ ಕೇಳಿದರೋ ನನಗೆ ತಿಳಿಯದು. ಇದಕ್ಕೆ ಅವಕಾಶ ಮಾಡಿಕೊಟ್ಟ ಪ್ರಿಯ ಕವಿ ಮಿತ್ರರಿಗೆ ಋಣಿಯಾಗಿರುತ್ತೇನೆ.

Share

One Comment For "ಪುಸ್ತಕ ಪ್ರಸ್ತಾಪ | ಹಲಗೆ ಮತ್ತು ಮೆದುಬೆರಳು
ಕಾದಂಬಿನಿ ಕಾವ್ಯಸಂಕಲನದ ಮುನ್ನುಡಿ
"

 1. Ashok gowda doddajala
  24th April 2018

  ಚೆಂದದ ಮುನ್ನುಡಿ ಬರೆದಿರುವಿರಿ ಸರ್, ಧನ್ಯವಾದಗಳು. ಕಾದಂಬಿನಿ ಅಕ್ಕನ ಕವಿತೆಗಳು ಬೆಂಕಿಯುಂಡೆಯಾಗಿಯೂ, ಅಮ್ಮನ ಮಡಿಲಾಗಿಯೂ, ನೊಂದವರ ನೆರಳಾಗಿಯೂ. ಪುಟಿಯುವ ಚೇತನವಾಗಿಯೂ ನಮ್ಮನ್ನು ಕಾಡಿವೆ. ಅದ್ಯಾಕೋ ಅವರು ತುಂಬಾ ಇಷ್ಟವಾಗುವುದು ಅವರ ಬರಹದ ಶೈಲಿ, ಮತ್ತು ನೇರ, ನಿಷ್ಟುರತೆಯಿಂದ.
  ಅವರ ಸೂಕ್ಷ್ಮ ಕಣ್ಣುಗಳಿಗೆ ತಪ್ಪಿಸಿ ಅಡಗಿಕೊಳ್ಳುವ ಯಾವ ವಸ್ತುವೂ ಇಲ್ಲವೇನೋ?
  ಅಕ್ಕನ ಮೊದಲ ಕವನ ಸಂಕಲನ ವಿಶಿಷ್ಟವಾಗಿ ಬಿಡುಗಡೆಗೊಂಡುದೂ ಅವಿಸ್ಮರಣೀಯ, ಅದನ್ನು ತಾವು ಕವಿ ಮನೆಯ ಅಂಗಳದಲ್ಲಿ ಬಿಡುಗಡೆಗೊಳಿಸಿದ್ದು ತುಂಬಾ ಅರ್ಥಪೂರ್ಣ.
  ಅಕ್ಕನಿಗೆ ಶುಭಾಶಯ ಕೋರುತ್ತಾ ಅವರ ಇನ್ನಷ್ಟು ಕವನ ಸಂಕಲನಗಳು ಪ್ರಕಟಗೊಳ್ಳಲಿ ಎಂದು ಆಶಿಸುವೆ.

  Reply

Leave a comment

Your email address will not be published. Required fields are marked *

Recent Posts More

 • 2 weeks ago No comment

  ಕವಿಸಾಲು | ಇಂಡೋನೇಶಿಯಾ

      ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ಜಲ, ಉಸಿರ ಗಾಳಿ ಹುಚ್ಚೆದ್ದು ಕುಣಿದು ಅಪ್ಪಳಿಸಿದ ಆಘಾತಕ್ಕೆ ಕಂಗೆಟ್ಟು ತತ್ತರಿಸಿವೆ ಪ್ರಾಣಿ, ಮನುಜ ಕುಲ ಮಾಡು ಹಾರಿ, ಕಂಬಗಳು ಕುಸಿದು ನೆಲಕಚ್ಚಿವೆ ಮಾನವನ ಬೀಡು ಕತ್ತರಿಸಿ ...

 • 2 weeks ago No comment

  ಕವಿಸಾಲು | ತಡವಿಲ್ಲದಿರಲಿ ಇನ್ನು…

      ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ತಡೆಯ ದಾಟಿ ತಲುಪಬೇಕಿದೆಯಷ್ಟೆ ಬಯಕೆ ಗುರಿಯನ್ನು ದಟ್ಟ ಹಸಿರಿನ ಕಾಡು, ಆಗಸದ ನೀಲಿ ಬಿಳಿಯ ಮೋಡಗಳ, ಬಿಸಿಲ ಬೆಳಕಿನ ನಡುವೆ ಬಯಲ ಸ್ವೇಚ್ಛೆಯ, ತಿಳಿಗಾಳಿ ತವಕದಲಿ ಬಂಧನಗಳ ...

 • 1 month ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 month ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 month ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...


Editor's Wall

 • 31 August 2018
  2 months ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  2 months ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  2 months ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  2 months ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  2 months ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...