Share

ಧ್ರುವೀಕರಣಗೊಳ್ಳುತ್ತಿರುವ ಮೇಲ್ವರ್ಗಗಳು ಮತ್ತು ಟಾರ್ಗೆಟ್ ಸಿದ್ದರಾಮಯ್ಯ
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

 

ಮತ್ತೆ ಅಧಿಕಾರದ ಗದ್ದುಗೆಗೆ ಏರುವ ಹವಣಿಕೆಯಲ್ಲಿರುವ ಮೇಲ್ವರ್ಗಗಳಿಗೆ ಸದ್ಯಕ್ಕೆ ಸಿದ್ದರಾಮಯ್ಯನವರೇ ಪ್ರಬಲ ಎದುರಾಳಿಯಾಗಿರುವುದರಿಂದ ಅವರನ್ನು ಸೋಲಿಸಲು ವಿರೋಧಪಕ್ಷಗಳು ತಮ್ಮ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನೂ ಹೂಡಿ ನಿಂತಿವೆ.

 

 

ಬಾರಿಯ ಕರ್ನಾಟಕ ರಾಜ್ಯ ಚುನಾವಣೆಗಳಲ್ಲಿ ಒಂದು ವಿಷಯ ಸಾಮಾನ್ಯ ಜನರಿಗೂ ಅರ್ಥವಾಗುವಷ್ಟರ ಮಟ್ಟಿಗೆ ಎದ್ದುಕಾಣುತ್ತಿರುವ ಏಕೈಕ ವಿಷಯವೆಂದರೆ ಇದೇ! ಅಧಿಕೃತ ವಿರೋಧಪಕ್ಷವಾದ ಬಿಜೆಪಿ ಮತ್ತು ಜಾತ್ಯತೀತ ಜನತಾದಳ ಮಾತ್ರವಲ್ಲದೆ ರಾಜ್ಯದ ಮೇಲ್ವರ್ಗಗಗಳ ಹಿತಾಸಕ್ತಿಗಳನ್ನು ಕಾಯಲು ಕಟಿಬದ್ಧವಾಗಿರುವ ಎಲ್ಲಾ ಶಕ್ತಿಗಳು ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದರ ಜೊತೆಗೇ, ಸಿದ್ದರಾಮಯ್ಯನವರನ್ನು ಸೋಲಿಸುವುದೇ ಬಹುಮುಖ್ಯವೆಂಬಂತೆ ತಮ್ಮ ತಂತ್ರಗಾರಿಕೆಗಳನ್ನು ಮಾಡುತ್ತಿವೆ. ಅಹಿಂದ ರಾಜಕಾರಣದ ವಿರುದ್ಧ ಸೃಷ್ಟಿಯಾಗುತ್ತಿರುವ ಮೇಲ್ವರ್ಗದ ರಾಜಕಾರಣದ ಹೆಜ್ಜೆಗಳನ್ನು ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆಯ ದೃಷ್ಟಿಯಿಂದ ಇದನ್ನು ಬರೆಯಲೆಬೇಕಾಗಿದೆ.

ಕಳೆದ ಐದು ವರ್ಷಗಳಿಂದ ಅಂದರೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಕ್ಷಣದಿಂದಲೇ ಹುಟ್ಟಿಕೊಂಡ ಅಹಿಂದಕ್ಕೆ ಪರ್ಯಾಯವಾದ ಒಂದು ರಾಜಕಾರಣ ಯಾವುದೇ ಗೊತ್ತು ಗುರಿಯಿಲ್ಲದೆ ನಡೆಯುತ್ತ ಬಂದಿದ್ದು, ಇದುವರೆಗೂ ಒಂದು ಪ್ರಬಲ ಪರ್ಯಾಯವಾಗಿ ಬೆಳೆದಿರಲಿಲ್ಲ. ಆದರೆ ವಿಧಾನಸಭಾ ಚುನಾವಣೆಗಳು ಹತ್ತಿರವಾಗತೊಡಗಿದಂತೆ ಅಹಿಂದವನ್ನು ವಿರೋಧಿಸುವ ರಾಜಕೀಯ ಶಕ್ತಿಗಳಿಗೆ ತಾವು ಒಂದಾಗಿ ರಾಜಕೀಯ ಮಾಡುವ ಅನಿವಾರ್ಯತೆ ಎದುರಾಗಿದ್ದು, ಆ ನಿಟ್ಟಿನಲ್ಲಿ ಆ ಶಕ್ತಿಗಳು ಕೆಲಸ ಮಾಡತೊಡಗಿವೆ.

ಇದು ಕರ್ನಾಟಕದ ಮಟ್ಟಿಗೆ ಹೊಸ ಬೆಳವಣಿಗೆ ಏನಲ್ಲ. ಎಪ್ಪತ್ತರ ದಶಕದಲ್ಲಿ ಕಾಂಗ್ರೆಸ್ಸಿನ ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸು ಅವರು ಜಾರಿಗೆ ತಂದ ಹಲವಾರು ಜನಪರ ಯೋಜನೆಗಳು ತಮ್ಮ ಆರ್ಥಿಕ, ಸಾಮಾಜಿಕ, ರಾಜಕೀಯ ಹಿತಾಸಕ್ತಿಗಳಿಗೆ ಮಾರಕವಾಗಿ ಪರಿಣಮಿಸಿದಾಗ ರಾಜ್ಯದ ಮೇಲ್ವರ್ಗಗಳು ಜನತಾ ಪರಿವಾರದ ರೂಪದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾದ ಒಂದು ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಲು ಕಾರಣವಾಗಿದ್ದವು. ಅರಸರು ತಂದಂತಹ ತಳಸ್ತರದ ಜನತೆಯ ಪರವಾದ ಹಲವಾರು ಯೋಜನೆಗಳು ತಲೆತಲಾಂತರದಿಂದ ರಾಜ್ಯದ ಬಹುತೇಕ ಭೂಮಿಯನ್ನು ತಮ್ಮ ಮುಷ್ಟಿಯಲ್ಲಿಟ್ಟುಕೊಂಡಿದ್ದ ಮೇಲ್ಜಾತಿಗಳ ಕೆಂಗಣ್ಣಿಗೆ ಗುರಿಯಾಯಿತು. ಉಳುವವನೇ ಒಡೆಯ ಎಂಬಂತಹ ಕಾನೂನುಗಳು ಮೇಲ್ಜಾತಿಗಳ ಜಮೀನ್ದಾರಿಕೆಯನ್ನು ಇಲ್ಲವಾಗಿಸಿದವು. ದಲಿತರಿಗೆ ಮತ್ತು ಹಿಂದುಳಿದ ವರ್ಗಗಳಿಗೆ ಕಲ್ಪಿಸಲಾದ ಮೀಸಲಾತಿಯಿಂದಾಗಿ ಸಹಜವಾಗಿ ಮೇಲ್ಜಾತಿಗಳು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದ ಸರಕಾರಿ ನೌಕರಿಗಳು ಕೆಳಸ್ತರದ ಜನರ ಪಾಲಾಗತೊಡಗಿದವು. ಇದರ ಜೊತೆಗೆ ರಾಜ್ಯದ ರಾಜಕಾರಣವನ್ನು ತಮ್ಮಿಚ್ಛೆಗೆ ತಕ್ಕಂತೆ ನಡೆಸುತ್ತಿದ್ದ ಮೇಲ್ವರ್ಗಗಳು ತಳಜಾತಿಗಳ ಜೊತೆ ಆ ಅಧಿಕಾರವನ್ನು ಹಂಚಿಕೊಳ್ಳಬೇಕಾದ ಸನ್ನಿವೇಶ ಸೃಷ್ಠಿಯಾಯಿತು. 1980ರ ವೇಳೆಗೆ ಇಂತಹ ಬೆಳವಣಿಗೆಗಳಿಂದ ಆತಂಕಕ್ಕೆ ಈಡಾದ ಮೇಲ್ವರ್ಗಗಳು ಪರ್ಯಾಯ ರಾಜಕೀಯ ಶಕ್ತಿಯೊಂದನ್ನು ಸೃಷ್ಟಿಸಿಕೊಂಡು ಅಧಿಕಾರವನ್ನು ಹಿಡಿಯದೆ ಹೋದರೆ ತಮಗೆ ಉಳಿಗಾಲ ಇಲ್ಲವೆಂಬ ನಿರ್ಧಾರಕ್ಕೆ ಬಂದಿದ್ದವು.

ಇದೇ ಸಮಯದಲ್ಲಿ ಅರಸುರವರ ನಂತರ ಅಧಿಕಾರಕ್ಕೆ ಬಂದಿದ್ದ ಗುಂಡೂರಾಯರ ಬೇಜವಾಬ್ದಾರಿ ಆಳ್ವಿಕೆ ಸಮಾಜದ ಎಲ್ಲ ಸ್ಥರಗಳ ಜನತೆಯಲ್ಲೂ ನಿರಾಸೆಯನ್ನು ಉಂಟುಮಾಡಿತ್ತು. ತಮಗೆ ಮುಖ್ಯಮಂತ್ರಿ ಕುರ್ಚಿ ದೊರೆಯಲಿಲ್ಲವೆಂಬ ಏಕೈಕ ಕಾರಣದಿಂದಾಗಿ ಕ್ರಾಂತಿರಂಗವನ್ನು ಕಟ್ಟಿದ್ದ ಬಂಗಾರಪ್ಪನವರಿಗೂ ಕಾಂಗ್ರೆಸ್ಸನ್ನು ಸೋಲಿಸಿ ತಮ್ಮ ಬಲವನ್ನು ತೋರಿಸಬೇಕೆಂಬ ಹಟವಿತ್ತು. ಈ ಅವಧಿಯಲ್ಲಿ ಭುಗಿಲೆದ್ದ ರೈತ ಚಳುವಳಿ, ದಲಿತ ಚಳುವಳಿ ಮತ್ತು ಗೋಕಾಕ್ ಚಳುವಳಿಗಳು ಕಾಂಗ್ರೆಸ್ ಸರಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾದವು. ಕಾಂಗ್ರೆಸ್ ಸರಕಾರದ ಅಹಿಂದ ಪರವಾದ ಆಡಳಿತದ ವಿರುದ್ಧ ಕೋಪಗೊಂಡಿದ್ದ ಮೇಲ್ವರ್ಗಗಳು ಇಂತಹದೊಂದು ಅವಕಾಶಕ್ಕಾಗಿ ಕಾಯುತ್ತಿದ್ದವು. ಆಗ ಜನತಾ ಪಕ್ಷದ ಜೊತೆಗೆ ಹೊಸದಾಗಿ ಹುಟ್ಟಿಕೊಂಡಿದ್ದ ಬಿಜೆಪಿಯ ಬೆಂಬಲಕ್ಕೆ ನಿಂತ ಮೇಲ್ವರ್ಗಗಳು 1983ರ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಲು ಬೇಕಾದ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಲು ಶುರು ಮಾಡಿದವು. ಈ ಹಂತದಲ್ಲಿ ಅದು ಹಿಂದುಳಿದ ವರ್ಗಗಳ ನಾಯಕರಾದ ಬಂಗಾರಪ್ಪನವರನ್ನು ಸಹ ತನ್ನ ಆಯುಧವನ್ನಾಗಿ ಬಳಸಿಕೊಂಡಿತು. ರಾಜ್ಯದ ಎಲ್ಲ ಪ್ರಗತಿಪರ ಚಳುವಳಿಗಳನ್ನು ತನ್ನ ಆಯುಧಗಳನ್ನಾಗಿ ಬಳಸಿಕೊಂಡ ಮೇಲ್ವರ್ಗಗಳು ಜನತಾ ಪಕ್ಷ ಮತ್ತು ಬಿಜೆಪಿಯ ಹೆಸರಲ್ಲಿ ಒಂದಾಗತೊಡಗಿದವು.

ದುರಂತವೆಂದರೆ ಅಂದಿನ ಬಹುತೇಕ ಪ್ರಗತಿಪರರು, ಬರಹಗಾರರು ಸಹ ಕಾಂಗ್ರೆಸ್ಸಿನ ಭ್ರಷ್ಟತೆಯ, ಜಡತೆಯ ವಿರುದ್ಧ ಹೋರಾಟದ ನೆಪದಲ್ಲಿ ಜನತಾ ಪರಿವಾರದ ಬೆಂಬಲಕ್ಕೆ ನಿಂತರು. ಇವನ್ನೆಲ್ಲ ಕ್ರೋಢೀಕರಿಸಿ ತನ್ನ ಅನುಕೂಲಕ್ಕೆ ಬಳಸಿಕೊಂಡ ಮೇಲ್ವರ್ಗ 1983ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಕಾರಣವಾಯಿತು. ಬಿಜೆಪಿಯ ಬಾಹ್ಯ ಬೆಂಬಲ ಪಡೆದ ಜನತಾಪಕ್ಷ ರಾಮಕೃಷ್ಣ ಹೆಗಡೆಯವರ ನೇತೃತ್ವದಲ್ಲಿ ಸರಕಾರ ರಚಿಸಿತು. ಅಚ್ಚರಿಯೆಂದರೆ ಯಾವ ಅಹಿಂದ ವರ್ಗದ ಮೇಲಿನ ಅಸಹನೆಯನ್ನು ಬಳಸಿಕೊಂಡು ಅಧಿಕಾರ ಹಿಡಿದ ಅದೇ ಜನತಾ ಪರಿವಾರವೇ ಮುಂದೆ ಹಲವು ದಲಿತ ಮತ್ತು ಹಿಂದುಳಿದ ವರ್ಗಗಳ ಹಲವು ನಾಯಕರುಗಳನ್ನು ಸೃಷ್ಟಿಸಿದ್ದು. ಇವತ್ತಿನ ಅಹಿಂದ ನಾಯಕರಾದ ಸಿದ್ದರಾಮಯ್ಯನವರು ಸಹ ಅದೇ ಜನತಾ ಪರಿವಾರದ ಕೂಸೆಂಬುದನ್ನು ನಾವು ಮರೆಯಬಾರದು.

2006 ಮತ್ತು 2008ರಲ್ಲಿ ತಮ್ಮ ಅಧಿಕಾರದ ಕನಸನ್ನು ಜನತಾದಳ ಮತ್ತು ಬಿಜೆಪಿಯ ರೂಪದಲ್ಲಿ ಈಡೇರಿಸಿಕೊಂಡ ಮೇಲ್ವರ್ಗಗಳು 2013ರ ನಂತರ ಮತ್ತೆ ಹಸಿದಿವೆ. ತಮ್ಮನ್ನು ಅಹಿಂದ ಮುಖ್ಯಮಂತ್ರಿ ಎಂದು ಘೋಷಿಸಿಕೊಂಡ ಸಿದ್ದರಾಮಯ್ಯನವರು ಸಹಜವಾಗಿಯೇ ಮೇಲ್ವರ್ಗಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಅಹಿಂದ ವರ್ಗಗಳ ಪರವಾಗಿ ಅವರು ಜಾರಿಗೊಳಿಸಿದ ಹಲವಾರು ಯೋಜನೆಗಳನ್ನು ಕಟುವಾಗಿ ಟೀಕಿಸುತ್ತ ಪರೋಕ್ಷವಾಗಿ ಮೇಲ್ವರ್ಗಗಳ ಅಸಹನೆಯನ್ನು ಜನತಾದಳ ಮತ್ತು ಬಿಜೆಪಿ ಹೊರಹಾಕುತ್ತಿವೆ. ಮೇಲ್ನೋಟಕ್ಕೆ ಜನತಾದಳ ಮತ್ತು ಬಿಜೆಪಿ ದೂರವಿರುವಂತೆ ಕಂಡರೂ, ಆಳದಲ್ಲಿ ಅಂದರೆ ಸಿದ್ದರಾಮಯ್ಯನವರನ್ನು ಅವರು ಪ್ರತಿನಿಧಿಸುವ ಅಹಿಂದವನ್ನು ಹೀಗಳೆಯುವ ವಿಚಾರದಲ್ಲಿ ಮಾತ್ರ ಅವು ಎಂದಿಗೂ ಒಂದೇನೇ. ಅವುಗಳ ರಾಜಕೀಯ ಹೋರಾಟವೂ ಇದೇ ಧಾಟಿಯಲ್ಲಿ ನಡೆಯುತ್ತಿದೆ.

ಅಹಿಂದ ವರ್ಗಗಳ ಹಿತ ಕಾಯಬಲ್ಲಂತಹ ರಾಜಕಾರಣವನ್ನು ಸಹಿಸಿಕೊಳ್ಳದ ಮೇಲ್ವರ್ಗಗಳು ಕಾಂಗ್ರೆಸ್ಸಿಗೆ ಪರ್ಯಾಯ ರಾಜಕಾರಣ ಎಂಬಂತೆ ಮಾತಾಡುತ್ತ ಅಹಿಂದ ವಿರುದ್ದ ಮೇಲ್ವರ್ಗಗಳ ಬೆಂಬಲಕ್ಕೆ ನಿಲ್ಲಬಲ್ಲ ಬಲಪಂಥೀಯ ರಾಜಕೀಯ ಪಕ್ಷವೊಂದರ ಪರವಾಗಿ ನಿಲ್ಲತೊಡಗಿವೆ.

ಟಾರ್ಗೆಟ್ ಸಿದ್ದರಾಮಯ್ಯ!

ರಾಜ್ಯದ 224 ಕ್ಷೇತ್ರಗಳಲ್ಲಿನ ಫಲಿತಾಂಶ ಏನೇ ಇರಲಿ, ಸಿದ್ದರಾಮಯ್ಯನವರು ಸ್ಪರ್ಧಿಸಲಿರುವ ಮೈಸೂರಿನ ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಅರ್ಥಾಥ್ ಸಿದ್ದರಾಮಯ್ಯ ಅವರನ್ನು ಸೋಲಿಸಲೇಬೇಕೆಂಬ ಹಟಕ್ಕೆ ಬಿದ್ದಂತೆ ನಡೆದುಕೊಳ್ಳುತ್ತಿರುವ ವಿರೋಧಪಕ್ಷಗಳು ಮತ್ತವುಗಳ ನಾಯಕರುಗಳನ್ನು ನೋಡುತ್ತಿದ್ದೇವೆ. ವಿರೋಧಪಕ್ಷಗಳ ಇಂತಹ ತಂತ್ರಗಾರಿಕೆಗಳಿಗೆ ಕಾಂಗ್ರೆಸ್ಸಿನ ಒಳಗಿರಬಹುದಾದ ಕೆಲವು ಸಿದ್ದರಾಮಯ್ಯ ವಿರೋಧಿ ಶಕ್ತಿಗಳೂ ಕೈಜೋಡಿಸಿರುವುದನ್ನೂ ಕಾಣಬಹುದಾಗಿದೆ.

ಈ ಹಿನ್ನೆಲೆಯಲ್ಲಿ ಯಾಕೆ ಬಿಜೆಪಿ ಮತ್ತು ಜನತಾದಳಗಳು ಸಿದ್ದರಾಮಯ್ಯನವರನ್ನೇ ಗುರಿಯಾಗಿಸಿಟ್ಟುಕೊಂಡು ಅವರ ಕ್ಷೇತ್ರಗಳನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸಿವೆಯೆಂದು ನೋಡುತ್ತಾ ಹೋದರೆ ಆಯಾ ಪಕ್ಷಗಳಿಗೆ ಅವುಗಳದೇ ಆದ ಕಾರಣಗಳಿರುವುದನ್ನು ಗಮನಿಸಬಹುದಾಗಿದೆ.

ಬಿಜೆಪಿ

ಬಹುಶಃ ರಾಷ್ಟ್ರದ ಹಲವು ರಾಜ್ಯಗಳ ಚುನಾವಣೆಗಳಲ್ಲಿ ಅನುಭವಿಸಿದ ಸತತ ಸೋಲಿನಿಂದ ಕಂಗೆಟ್ಟಂತಿದ್ದ ಕಾಂಗ್ರೆಸ್ ಹೈಕಮಾಂಡಿಗೆ ಕಳೆದ ಐದು ವರ್ಷಗಳಲ್ಲಿ ಬಿಜೆಪಿಯನ್ನು ಕಾಲೂರಿನಿಂತು ಗಟ್ಟಿದ್ವನಿಯಲ್ಲಿ ಎದುರಿಸುವಂತಹ ಪ್ರಾದೇಶಿಕ ನಾಯಕರುಗಳೇ ಕಾಣದಂತಾಗಿದ್ದುದು ನಿಜ. ಈ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನಾಟಕದ ಮಟ್ಟಿಗೆ ಬಿಜೆಪಿಯನ್ನು ಎದುರಿಸಲು ಬೇಕಾಗಿದ್ದ ಎದೆಗಾರಿಕೆಯನ್ನು ತೋರಿಸುತ್ತ, ಅಗತ್ಯವಿದ್ದ ತಂತ್ರಗಾರಿಕೆಯನ್ನು ಮಾಡುತ್ತ ಬಂದರು. ಬಹುಶಃ ರಾಜ್ಯದ ಮುಖ್ಯಮಂತ್ರಿ ಕುರ್ಚಿಯಲ್ಲಿ ಸಿದ್ದರಾಮಯ್ಯನವರನ್ನು ಹೊರತುಪಡಿಸಿ ಬೇರಿನ್ಯಾರೇ ಇದ್ದಿದ್ದರೂ ಈ ಮಟ್ಟಿಗೆ ಬಿಜೆಪಿಯನ್ನು ಎದುರಿಸಿ ನಿಲ್ಲಲು ಕಾಂಗ್ರೆಸ್ಸಿಗೆ ಸಾಧ್ಯವಾಗುತ್ತಿರಲಿಲ್ಲವೆಂಬುದು ಸತ್ಯ. ಬಹುಶಃ ಇಡೀ ಇಂಡಿಯಾದಲ್ಲಿ ಪ್ರದಾನಿಯನ್ನು, ಅವರ ನೀತಿಗಳನ್ನು ಸತತವಾಗಿ ಟೀಕಿಸುತ್ತ, ಆ ಪಕ್ಷದ ರಾಷ್ಟ್ರಾದ್ಯಕ್ಷರಾದ ಅಮಿತ್ ಶಾ ಪ್ರತಿ ಮಾತಿಗೂ ಉತ್ತರಿಸುತ್ತ ಬಂದಿದ್ದು ಸಿದ್ದರಾಮಯ್ಯನವರೊಬ್ಬರೆ. ಯಾಕೆಂದರೆ ಬಿಜೆಪಿಯ ಆಡಳಿತವನ್ನು ಟೀಕಿಸುತ್ತಲೇ ಬಂದ ದೆಹಲಿಯ ಮುಖ್ಯಮಂತ್ರಿ ಕೇಜ್ರೀವಾಲಾರಾಗಲಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಾಗಲಿ ಯಾವತ್ತಿಗೂ ಆ ವಿಚಾರದಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡು ಬಂದವರಲ್ಲ. ಜೊತೆಗೆ ಬಿಜೆಪಿಯನ್ನು ಟೀಕಿಸಿದರೂ, ಅವರ ಅನಿಶ್ಚಿತ ನಡವಳಿಕೆಗಳಿಂದ ಮಾಧ್ಯಮಗಳೂ ಅವನ್ನು ಗಂಭೀರವಾಗಿ ಪರಿಗಣಿಸಲಿಲ್ಲ.

ಬಿಜೆಪಿಯನ್ನು ಬಲವಾಗಿ ವಿರೋಧಿಸಲು ಕಾಂಗ್ರೆಸ್ಸಿಗೆ ಬೇಕಾದ ಬಲವನ್ನು ತುಂಬಲು ಕಂಕಣಬದ್ಧರಾಗಿ ನಿಂತ ಸಿದ್ದರಾಮಯ್ಯನವರು ಬಿಜೆಪಿಯ ಎಲ್ಲ ತಂತ್ರಗಳನ್ನು ವಿಫಲಗೊಳಿಸುತ್ತ ಬಂದಿದ್ದು ಬಿಜೆಪಿ ಮಟ್ಟಿಗೆ ಆಘಾತಕಾರಿ ವಿಷಯವಾಗಿತ್ತು. ಇದರ ಜೊತೆಗೆ ಬಿಜೆಪಿಯ ಸಾಂಪ್ರದಾಯಿಕ ಮತಬ್ಯಾಂಕ್ ಎನ್ನಲಾದ ಲಿಂಗಾಯಿತರನ್ನು ಸ್ವತಂತ್ರ ಧರ್ಮದ ಹೆಸರಲ್ಲಿ ವಿಭಜಿಸಲು ಸಿದ್ದರಾಮಯ್ಯನವರು ಮಾಡಿದ್ದಾರೆ ಎನ್ನಲಾದ ತಂತ್ರಗಳ ಬಗ್ಗೆಯೂ ಬಿಜೆಪಿಗೆ ಆಕ್ರೋಶವಿದೆ. ಲಿಂಗಾಯಿತ ಮತಬ್ಯಾಂಕ್ ಒಡೆದರೆ ತಾನು ನಷ್ಟವನ್ನು ಅನುಭವಿಸುವುದು ನಿಶ್ಚಿತ ಎಂಬುದನ್ನು ಅರಿತಿರುವ ಬಿಜೆಪಿ, ಒಂದು ರೀತಿಯ ಹತಾಶೆಯ ಸ್ಥಿತಿಯಲ್ಲಿ ನಿಂತಿದೆ. ಹೀಗಾಗಿಯೇ ಅದು ಹೇಗಾದರೂ ಮಾಡಿ ಸಿದ್ದರಾಮಯ್ಯನವರನ್ನು ಸೋಲಿಸಿದರೆ ಕಾಂಗ್ರೆಸ್ ಸಹ ಸಹಜವಾಗಿಯೇ ಬಲಗುಂದುತ್ತದೆಯೆಂಬ ನಿರೀಕ್ಷೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನತಾ ದಳಕ್ಕೆ ಅನುಕೂಲವಾಗುವ ರೀತಿಯಲ್ಲಿಯೇ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಅವರನ್ನು ಕಣಕ್ಕಿಳಿಸುತ್ತಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನತಾದಳಕ್ಕೆ ಅನುಕೂಲವಾದ ರೀತಿಯ ನಡೆಗೆ ಪ್ರತಿಯಾಗಿ ಬಾದಾಮಿಯಲ್ಲಿ ಜನತಾದಳದ ಆಂತರಿಕ ಬೆಂಬಲ ಕೇಳುವ ಯೋಚನೆ ಬಿಜೆಪಿಯದ್ದು.

ಜಾತ್ಯತೀತ ಜನತಾದಳ

ಸಿದ್ದರಾಮಯ್ಯನವರು ಒಂದು ಕಾಲದಲ್ಲಿ ಜನತಾ ಪರಿವಾರದಲ್ಲಿದ್ದು ಉಪಮುಖ್ಯಮಂತ್ರಿಯಾಗಿದ್ದು, ದೇವೇಗೌಡರ ರಾಜಕೀಯದ ಬಗ್ಗೆ ಮುನಿಸಿಕೊಂಡು ಹೊರಬಂದು ಕಾಂಗ್ರೇಸ್ ಸೇರಿ ಮುಖ್ಯಮಂತ್ರಿಯಾದವರು. ತಮ್ಮ ಪಕ್ಷ ತೊರೆದು ಹೋದವರೊಬ್ಬರು, ತಮ್ಮ ಪಕ್ಷವನ್ನೇ ಎದುರಿಸಿ ನಿಂತು ಮುಖ್ಯಮಂತ್ರಿ ಪದವಿಗೆ ಏರಿದ್ದು ಜನತಾದಳದ ನಾಯಕರಲ್ಲಿ ಆಕ್ರೋಶವನ್ನುಂಟು ಮಾಡಿದೆ. ತಮ್ಮ ಪಕ್ಷವನ್ನು ತೊರೆದುಹೋದ ಯಾರೂ ರಾಜಕೀಯವಾಗಿ ಬೆಳೆಯಬಾರದೆಂಬ ರಾಜಕಾರಣ ಅದರಲ್ಲಿ ಅಡಗಿದೆ. ಆದರೆ ಸಿದ್ದರಾಮಯ್ಯನವರನ್ನು ಸೋಲಿಸಬೇಕೆಂಬ ಒಂದೇ ಕಾರಣಕ್ಕೆ ಜನತಾದಳ ತನ್ನ ಜಾತ್ಯತೀತ ತತ್ವಗಳನ್ನೂ ಗಾಳಿಗೆ ತೂರಿ ಆಂತರ್ಯದಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಿರುವುದು ಮಾತ್ರ ಆಶ್ಚರ್ಯಕರವಾಗಿದೆ ಹಾಗೂ ಆಘಾತಕಾರಿಯಾಗಿದೆ!

ಒಟ್ಟಿನಲ್ಲಿ ಹೇಗಾದರೂ ಮಾಡಿ ಈ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಿ, ಮತ್ತೆ ಅಧಿಕಾರದ ಗದ್ದುಗೆಗೆ ಏರುವ ಹವಣಿಕೆಯಲ್ಲಿರುವ ಮೇಲ್ವರ್ಗಗಳಿಗೆ ಸದ್ಯಕ್ಕೆ ಸಿದ್ದರಾಮಯ್ಯನವರೇ ಪ್ರಬಲ ಎದುರಾಳಿಯಾಗಿರುವುದರಿಂದ ಅವರನ್ನು ಸೋಲಿಸಲು ವಿರೋಧಪಕ್ಷಗಳು ತಮ್ಮ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನೂ ಹೂಡಿ ನಿಂತಿವೆ. ಒಂದು ರೀತಿಯಲ್ಲಿ ಈ ಚುನಾವಣೆ ಅಹಿಂದ ಮತ್ತು ಇತರೆಯವರ ನಡುವಿನ ಕಾದಾಟವೆಂದರೂ ತಪ್ಪಾಗಲಾರದು!

Share

Leave a comment

Your email address will not be published. Required fields are marked *

Recent Posts More

  • 15 hours ago No comment

    ಕ್ರೈಸ್ತರ ಪ್ರಾರ್ಥನಾ ಅಭಿಯಾನದ ಕರೆಯ ಸುತ್ತಮುತ್ತ

        ಪ್ರಸ್ತಾಪ     ಹುಸಿ ರಾಷ್ಟ್ರ ಭಕ್ತಿಯಲ್ಲಿ ಆರ್ಭಟಿಸುವ ಹಿಂದುತ್ವದ ಸ್ವಘೋಷಿತ ವಾರಸುದಾರರು ಮಾತೆತ್ತಿದರೆ ಕ್ರೈಸ್ತರನ್ನು ಈ ದೇಶದವರಲ್ಲ, ಅವರನ್ನು ದೇಶದಿಂದ ಒದ್ದೋಡಿಸಬೇಕು ಎನ್ನುವಂತೆ ವರ್ತಿಸುತ್ತಾರೆ. ಆದರೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹೀಗೆ ಪ್ರತಿ ರಾಷ್ಟ್ರೀಯ ಹಬ್ಬಗಳನ್ನೂ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿ ಆಚರಿಸಿಯೇ ಧಾರ್ಮಿಕ ಚಟುವಟಿಕೆಯನ್ನು ಶುರುಮಾಡುವ ಕ್ರೈಸ್ತರಿಂದ ಕಲಿಯುವುದು ಬೇಕಾದಷ್ಟಿದೆ. ಆಸ್ಪತ್ರೆ, ಶಿಕ್ಷಣ, ಸಮಾಜ ಸುಧಾರಣೆಯ ಕಾರ್ಯಗಳಲ್ಲಿ ಕ್ರೈಸ್ತ ಸಂಸ್ಥೆಗಳು ಮಾಡುವ ಸೇವೆಯನ್ನು ...

  • 16 hours ago No comment

    ಚಿತ್ರದಲ್ಲಿನ ಹೆಂಗಸು

      ಕವಿಸಾಲು               ತಲೆಮಾರುಗಳ ಸ್ಥಿರತೆ ಕಮಾನ ಬಿಲ್ಲಿನಂತೆ ಬಾಗಿದ ಹುಬ್ಬುಗಳಲಿ ತೂಗಿ ಕಂದು ಕಣ್ಣುಗಳ ಆಳದಲ್ಲೆಲ್ಲೋ ಅಡಗಿದ ಇನಿತಿನಿತು ಬಾಲ್ಯದ ಭಯಗಳ ನಡುವೆ ಇಣುಕುವ ವಿನಯದಿ ವಿಧೇಯ ಹೆಂಗಸಿದ್ದಾಳೆ, ಆಳಲ್ಲ ಬಾಯೆಂಬ ಬಾಯಿ ಅಚ್ಚುಕಟ್ಟಾಗಿ ಪಳಗಿ ಸರಿಯೆಂಬುದ ದಿಟ್ಟವಾಗಿ ಅರುಹಿ ಉದ್ದುದ್ದ ಭಾಷಣಗಳ ಕಟ್ಟಿಟ್ಟು ತೂಗಿ ಬಿಡಿಸಲಾಗದ ಒಗಟಿನ ಜೀವನ ಸೌಂದರ್ಯವ ಆಸ್ವಾದಿಸುವಲ್ಲಿ ಜೀವಂತವಿದ್ದಾಳೆ, ಕಳೆಯಿಲ್ಲ ಶಿರವೆಂಬ ಶಿಖರವ ...

  • 7 days ago No comment

    ಕೊನಾರ್ಕ್ ‘ಕಾಲ ದೇಗುಲ’

      ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ ...

  • 1 week ago No comment

    ಅಳಿದುಳಿದ ಊರಿನ ಹೂದೋಟದೊಳಗೆ

      ಕವಿಸಾಲು       ಯಾವ ಕತ್ತಿಯೂ ಕತ್ತರಿಸದಿರಲಿ! ಹಗಲು ಸೂರ್ಯನ ಬಿಸಿಲ ಕುಣಿಕೆ ಬಿಗಿಬಿಗಿ ಉರಿಯುವ ನಿಗಿನಿಗಿ ಕೆಂಡ ಭಸ್ಮವಾಗಿಬಿಡುವ ಭಯದ ಕಂಪನ ಬಿಸಿಯುಸಿರೂ ಧಗೆಯಾಗಿ ಅರಳಿದ ಮಲ್ಲೆಹೂಗಳು ಸುಟ್ಟು ಕರಕಲಾಗಿ ರಕ್ಕಸ ಗಣಕೊ ಭಾರೀ ಭೋಜನದೌತಣ ಭವಿಷ್ಯದ ಕಂದಮ್ಮಗಳ ಕತ್ತು ಹಿಚುಕಿ ಭ್ರೂಣಗಳ ಕಲೆಸಿಹಾಕಿ ಕಟ್ಟಬಯಸಿದ ಭವ್ಯ ಸೌಧಗಳ ಬುನಾದಿಗಳಡಿಯಲ್ಲಿ ಅಸ್ಥಿಪಂಜರಗಳ ರಾಶಿ ಒರೆಯಲ್ಲವಿತ ಕತ್ತಿಗಳು ಬಯಲಿಗೆ ಬಂದು ಒಳಕೋಣೆಯ ಸಂಚುಗಳು ಹೊಂಚುಹಾಕಿ ಕೊಲ್ಲುವ ...

  • 2 weeks ago No comment

    ಕಾದಂಬಿನಿ ಕಾಲಂ | ಜಾನೂ ಎಂದು ಕರೆಯುತ್ತೇನೆ!

                      ನಾನು ಸಾಹಿತಿಯಾಗುವ ಕನಸನ್ನು ಕಣ್ಣಿಗೆ ಮೆತ್ತಿಕೊಂಡು ಬೆಳೆದವಳಲ್ಲ. ಜಗತ್ತಿನೊಡನೆ ಒಡನಾಡುವಾಗ ನನ್ನೊಳಗೆ ನಡೆಯುವ ಯುದ್ಧವನ್ನು ಅಭಿವ್ಯಕ್ತಿಸಲು ಬರಹ ಅನಿವಾರ್ಯವಾಗಿತ್ತಷ್ಟೇ!   ಬಾಲ್ಯದಲ್ಲಿ ಪ್ರಾಣಿ ಪಕ್ಷಿ, ಮಕ್ಕಳ ಅಥವಾ ಕಾರ್ಟೂನು ಚಿತ್ರಗಳು ಊರಿನ ಸಿನೆಮಾ ಟೆಂಟಿಗೆ ಬಂದಾಗ ಶಿಕ್ಷಕರು ವಿದ್ಯಾರ್ಥಿಗಳನ್ನು ಕರೆದೊಯ್ದು ಕಡಿಮೆ ದುಡ್ಡಿನಲ್ಲಿ ಸಿನೆಮಾ ತೋರಿಸುತ್ತಿದ್ದರು. ಇಲ್ಲವೇ ರಜೆಯಲ್ಲಿ ನನ್ನ ಮಾಮನ ಥಿಯೇಟರಿನಲ್ಲಿ ಅಂಥ ಸಿನೆಮಾ ...


Editor's Wall

  • 11 May 2018
    2 weeks ago No comment

    ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

    ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

  • 10 May 2018
    2 weeks ago No comment

    ಒಂದು ಪುಸ್ತಕ; ವಾರವಿಡೀ ಬಿಡುಗಡೆ!

    ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

  • 03 May 2018
    3 weeks ago No comment

    ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                      ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

  • 30 April 2018
    4 weeks ago No comment

    ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

    ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

  • 28 April 2018
    4 weeks ago No comment

    ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

    ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...