Share

ಸವಿತಾ ನಾಗಭೂಷಣ ಪ್ರವಾಸ ಕಥನ | ತಾಯಿ ದುರ್ಗೆಯ ನಿಜವನರಿಯುವ ಧೀರರಾರೋ ಜಗದೊಳು!

 

ಪ್ರವಾಸಿ ಸವಿತಾ ಕಂಡ ಇಂಡಿಯಾ

 

 

 

ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ಸಂಚಿಕೆಯಿಂದ ‘ಹೊಸ ಮನುಷ್ಯ’ ಎಂದು ಪುನರ್ನಾಮಕರಣಗೊಂಡಿತು) 2011ರ ಸೆಪ್ಟಂಬರಿನಿಂದ 2012ರ ಆಗಸ್ಟ್ ಸಂಚಿಕೆಗಳವರೆಗೆ ಧಾರಾವಾಹಿಯಾಗಿ ಪ್ರಕಟವಾಗಿತ್ತು.

-ಸವಿತಾ ನಾಗಭೂಷಣ, ಶಿವಮೊಗ್ಗ

ಭಾಗ-4

‘ಅಗೋ ಅದೇ ದಕ್ಷಿಣೇಶ್ವರದ ಕಾಳಿ ದೇವಾಲಯ’ ಎಂದು ನಮ್ಮ ಟೂರ್ ಮ್ಯಾನೇಜರ್ ಕೈದೋರಿದ. ಅವನು ತೋರಿದ ದಾರಿಯತ್ತ ಹೆಜ್ಜೆ ಹಾಕಿದರೆ, ಎದುರುಗೊಂಡದ್ದು ಭರ್ಜರಿ ಮಾರಾಟ ಮೇಳ! ಭೇಲ್ ಪುರಿ, ಪಾನಿಪುರಿ, ಪೆಪ್ಸಿ-ಮಿರಿಂಡಾದಿಂದ ಹಿಡಿದು ಹೂವು-ಕುಂಕುಮ-ಕರ್ಪೂರದವರೆಗೆ ಲೋಕದ ಸಕಲೆಂಟು ವಸ್ತುಗಳೂ ಅಲ್ಲಿ ಬಿಕರಿಗಿದ್ದವು. ಈ ಹೊತ್ತಿನ ದೇವಾಲಯಗಳೆಂದರೆ ಇವೇ ಇರಬೇಕು ಎಂದುಕೊಳ್ಳುತ್ತಾ, ಅದನ್ನೇ ಹೊಕ್ಕು ಬಳಸಿ ಮುನ್ನಡೆದಾಗ ಮಾರಾಟ ಮೇಳದ ಗುಡಾರಗಳ ಮರೆಯಲ್ಲಿ ರಾಣಿ ರಾಸಮಣಿ ಕಟ್ಟಿಸಿದ ಕಾಳಿ ದೇವಾಲಯ ಗೋಚರಿಸಿತು!

ಸಿಮೆಂಟಿನ ನೆಲ ಕಾದು ಕೊಂಡದಂತಾಗಿತ್ತಷ್ಟೆ. ನಾವು ರಣಬಿಸಿಲಿನಲ್ಲಿ ಕೊಂಡ ಹಾಯುವಂತೆ ಮೆಟ್ಟಿಲುಗಳ ಮೇಲೆ ಹಾರುತ್ತಾ ಸುಡು ಪಾದಗಳನ್ನೆತ್ತಿಕೊಂಡು ಕಾಳಿ ಮಾತೆಯ ಮುಂದೆ ಹೋಗಿ ನಿಂತೆವು. ದೇವಿಯ ದರುಶನ ಪಡೆಯಲು ಜನಸ್ತೋಮ ಯರ್ರಾಬಿರ್ರಿಯಾಗಿ ಚಲಿಸುತ್ತಿತ್ತು. ಸಕ್ಕರೆಗೆ ಇರುವೆಗಳು ಮುತ್ತಿಕೊಂಡಂತೆ ಭಕ್ತರು ದೇವಿಯನ್ನು ಸುತ್ತುವರೆದಿದ್ದರು. ದೇವಿಯೇನು ಓಡಿ ಹೋಗುವಳೇ? ಇದೇಕೆ ಜನ ಅವಳನ್ನು ಸುತ್ತುವರೆದಿದ್ದಾರೋ ಎಂದು ಮನಸ್ಸಿನಲ್ಲಿ ಅಂದುಕೊಂಡರೂ, ಹತ್ತಿರ ಹೋಗಿ ನೋಡುವ ಹಂಬಲದಿಂದ ಮುನ್ನುಗ್ಗಿದೆನು. ನನ್ನ ಪ್ರಯತ್ನವಿಲ್ಲದೆಯೇ ಭಕ್ತರೇ ನೂಕಿ ನೂಕಿ ನನ್ನನ್ನು ದೇವಿಯ ಮುಂದೆ ನಿಲ್ಲಿಸಿದರು! ಅವಳು ದುರು ದುರು ಎಂದೂ ನೋಡುತ್ತಿದ್ದಳು, ನಾಲಿಗೆ ಚಾಚಿ ಬೆಚ್ಚಿ ಬೀಳಿಸುತ್ತಿದ್ದಳು. ನೆರೆದ ಭಕ್ತರೆಲ್ಲ ತಾಯ ಮುಂದೆ ನಿಂತ ಮಕ್ಕಳಂತೆ ಎತ್ತಿಕೋ ಎತ್ತಿಕೋ ಎಂದು ಆರ್ತನಾದ ಮಾಡುತ್ತಿರುವಂತೆ ಅನಿಸುತ್ತಿತ್ತು.

ಹೌದು, ವ್ಯಾಕುಲತೆಯಿಂದ ಪ್ರಾರ್ಥಿಸಬೇಕು. ಪರಮಹಂಸರ ನುಡಿಗಳು ನನ್ನೊಳಗೆ ಅನುರಣಿಸುತ್ತಿದ್ದವು. ಭಕ್ತರ ಚೇಷ್ಟೆಗಳನ್ನು ಕುತೂಹಲದಿಂದ ವೀಕ್ಷಿಸುವುದರಲ್ಲೇ ಆಸ್ಥೆ ಇದ್ದ ನನಗೆ ವ್ಯಾಕುಲತೆಯಾದರೂ ಎಲ್ಲಿಂದ ಬರಬೇಕು? ಲೇಶ ಭಕುತಿಯಾದರೂ ಇದ್ದಿದ್ದರೆ! ನಂಬದೆ ನೆಚ್ಚದೆ ಬರಿದೇ ಕರೆಯುತ್ತಿರುವೆನೆ? ‘ಕಪಟಿಯ ಲೆಕ್ಕಾಚಾರದ ಬುದ್ಧಿಯಿಂದ ಭಗವಂತನನ್ನು ಪಡೆಯಲಾಗುವುದಿಲ್ಲ. ಶ್ರದ್ಧಾವಂತನಾಗಿಯೂ ಇರಬೇಕು. ಯಾವ ರೀತಿ ಮಗು ತನ್ನ ತಾಯಿಯನ್ನು ಕಾಣದೆ ದಿಗ್ಭ್ರಮೆಗೊಂಡು, ಅದರ ಬಾಯಿಗೆ ಸಕ್ಕರೆ ಮಿಠಾಯಿ ಹಾಕಿದರೂ ಅದೊಂದೂ ಅದಕ್ಕೆ ಬೇಡವಾಗಿ; ಏನೂ ಬೇಡ, ನಾನು ತಾಯಿಯ ಹತ್ತಿರ ಹೋಗಬೇಕು ಅಂತ ಹಂಬಲಿಸುವುದೋ ಅದೇ ರೀತಿ ಭಗವಂತ£ಗಾಗಿ ಮನುಷ್ಯ ವ್ಯಾಕುಲ ಪಡಬೇಕು. ಆಹಾ! ಎಂತಹ ಅವಸ್ಥೆ! ಯಾವುದರಿಂದಲೂ ಅದು ತನ್ನ ತಾಯಿಯನ್ನು ಮರೆಯದು! ಯಾರಿಗೆ ಈ ಜಗತ್ತಿನ ಹಣ-ಹೆಸರು-ಸುಖಭೋಗಳು ರುಚಿಸವೋ, ಆತ/ಆಕೆ ಹೃತ್ಪೂರ್ವಕವಾಗಿ ಭಗವಂತನ ದರ್ಶನಕ್ಕಾಗಿ ಹಂಬಲಿಸುವನು. ಅಂತಹವರಿಗಾಗಿ ಭಗವತಿ ತನ್ನ ಎಲ್ಲ ಕೆಲಸಗಳನ್ನೂ ಬಿಟ್ಟೇ ಓಡಿ ಬರಬೇಕಾಗುತ್ತದೆ’. ಈ ಗುರು ವಾಕ್ಯದಲ್ಲಿ ವಿಶ್ವಾಸ ಬರಲು ಇನ್ನೂ ಎಷ್ಟು ಜನ್ಮಗಳನ್ನು ಎತ್ತಬೇಕೋ ಎಂದುಕೊಳ್ಳುತ್ತಾ ಸುಮ್ಮನೆ ತಲೆ ಬಾಗಿಸಿ ಕೈಮುಗಿದು ನಿಂತೆನು.

ತಾಯಿ ದುರ್ಗೆಯ ನಿಜವನರಿಯುವ
ಧೀರರಾರೋ ಜಗದೊಳು!
ಆರು ದರುಶನ ವೇದಶಾಸ್ತ್ರ
ಪುರಾಣವರಿಯದು ಅವಳನು
ಕುಬ್ಜನಾದವ ಮುಗಿಲ ಚಂದ್ರನ
ಹಿಡಿವ ಯತ್ನದ ತೆರೆದಲಿ
ಬುದ್ಧಿಯರಿತರೂ ಹೃದಯವರಿಯದು
ತಾಯಿ ದುರ್ಗೆಯ ನಿಜವನು!

ನೆನಪಿನ ಗಣಿಯಿಂದ ಈ ಹಾಡನ್ನು ಹೆಕ್ಕಿ ತೆಗೆದು ಮೆಲುಕು ಹಾಕಿದೆನು. ರಾಮಕೃಷ್ಣ ಪರಮಹಂಸರು ಪ್ರೇಮೋನ್ಮತ್ತರಾಗಿ ಭವತಾರಿಣಿಯ ಮುಂದೆ ಮತ್ತೆ ಮತ್ತೆ ಹಾಡುವ ಹಾಡಿದು ಎಂದು ಮಾಸ್ಟರ್ ಮಹಾಶಯ ‘ವಚನವೇದ’ದಲ್ಲಿ ದಾಖಲಿಸಿರುವನಷ್ಟೆ. ಈ ಕವಿತೆಯ ಚುಂಬಕ ಶಕ್ತಿಯೇ ನಾನು ಇಂದು ಇಲ್ಲಿ ಹೀಗೆ ನಿಂತಿರುವುದಕ್ಕೆ ಕಾರಣ ಎಂದು ಆ ಕ್ಷಣ ನನಗೆ ಬೋಧೆಯಾಯಿತು. ಕಾಳಿಯ ಬಗ್ಗೆ ಇರುವ ವ್ಯಾಕುಲತೆಗಿಂತ ಕವಿತೆಯನ್ನು ಬೆನ್ನಟ್ಟುವ ಹಂಬಲವೇ ಹೆಚ್ಚು ಪ್ರಿಯವಾದದ್ದು ಎಂದೂ ನನಗೆ ಸ್ಪಷ್ಟವಾಯಿತು.

ಅವ್ವಾ ನನ್ನನ್ನು ಎತ್ತಿಕೋ
ನಿನ್ನ ಹೆಗಲ ಮೇಲೆ ಹಾಕಿಕೋ
ಒಂದು ಮುತ್ತುಕೊಡು ಸಾಕು
ಜೀವ ಬಿಡುವೆನು…

‘ಜೀವ್ ಸೊಡ್ತಾ’ ಎಂದು ತಾಯ ಮುಂದೆ ತಾಯಿ ಭಾಷೆಯಲ್ಲೇ ಮಾತು ಪೋಣಿಸಿದ್ದೆ. ಎದೆಯ ಭಾಷೆಯೇ ಎದೆಯ ಹಾಲಿನಂತೆ ಮಿಗಿಲೆಂದು ತಿಳಿಯಲು ತಜ್ಞರ ಸಮಿತಿ, ಕೋರ್ಟು-ಕಛೇರಿ ಬೇಕಾಗಿಲ್ಲವಷ್ಟೆ! ಬಾಯಿಂದ ರಕ್ತದ ಕೋಡಿ, ಕೊರಳಿಗೆ ರುಂಡಮಾಲೆ, ಸೊಂಟಕ್ಕೆ ನರಹಸ್ತಗಳ ಒಡ್ಯಾಣ! ನಾನು ಕಾಳಿಯನ್ನು ನೋಡುತ್ತಾ ಮೈಮರೆತೆ. ಈ ಕಾಳಿಯೇ ಅಲ್ಲವೇ, ರಾಮಕೃಷ್ಣರನ್ನು ಹರಸಿದ್ದು? ಈ ಕಾಳಿಯೇ ಅಲ್ಲವೇ, ವಿವೇಕಾನಂದರನ್ನು ಪೊರೆದದ್ದು? ಈ ಕಾಳಿಯೇ ಅಲ್ಲವೇ ಕುವೆಂಪು ಅವರನ್ನು ಕರೆದದ್ದು? ಅವರನ್ನು ನೋಡಿದ ಆ ಕಣ್ಣುಗಳೇ ನನ್ನನ್ನೂ ನೋಡುತ್ತಿರುವುದು? ತರತಮವಿಲ್ಲದ ತಾಯಿಭಾವ… ಯಾವ ದೇಶ, ಯಾವ ಕಾಲ? ಜೀವನ ಪ್ರವಾಹದಲ್ಲಿ ಈ ಚಣವೂ ಒಂದು ಬಿಂದು! ಏನೆಲ್ಲ ಅಂದುಕೊಳ್ಳುತ್ತಾ ಸುತ್ತಮುತ್ತ ನೋಡಿದೆ. ಭಕ್ತಿ ಪರಾಕಾಷ್ಠೆಯ ವಿವಿಧ ಭಾವ ಭಂಗಿಗಳು ಭಕ್ತಿಯ ಹೊಳೆಯಲ್ಲಿ ಹೂಗಳಂತೆ ತೇಲುತ್ತಾ ಕಾಳಿ ನದಿಯನ್ನು ಸೇರುತ್ತಿದ್ದವು. ಭವತಾರಿಣಿಗೆ ನಮಸ್ಕರಿಸಿ ಭಕ್ತರಿಂದ ನೂಕಿಸಿಕೊಳ್ಳುತ್ತಲೇ ಹೊರಬಂದು ಹಗಲೂ ಇರುಳೂ ಜಪತಪಗೈದ ಕಾಳಿಯನ್ನು ಧೇನಿಸಿದ ಶಿಷ್ಯರನ್ನೂ ಭಕ್ತರನ್ನೂ ಸೇವಿಸಿದ ಪರಮಹಂಸರ ಕೊಠಡಿಗೆ ಹೋಗಿ ಒಂದು ಮೂಲೆಯಲ್ಲಿ ಕುಳಿತೆನು. ನನ್ನ ಜೀವನದಲ್ಲೇ ಆ ದಿನ ಸ್ಮರಣೀಯ ದಿನ. ಪರಮಹಂಸರ ಕೊಠಡಿಯ ಎದುರಲ್ಲೇ ಶಾರಾದಾದೇವಿಯವರ ಪುಟ್ಟ ಕೊಠಡಿಯೂ(ನಹಬತ್ ಖಾನೆ) ಇತ್ತು. ಶಾರದಾ ದೇವಿಯನ್ನು ಪರಮಹಂಸರು ಜಗನ್ಮಾತೆಯೆಂದು ಪೂಜಿಸುತ್ತಿದ್ದರಷ್ಟೆ. ಆ ಅರ್ಥದಲ್ಲಿ ಅದು ಜಗನ್ಮಾತೆಯ ಕೊಠಡಿ. ಸರಿಯಾಗಿ ಗಾಳಿ ಬೆಳಕಿಲ್ಲದ, ಕೈಕಾಲು ಚಾಚಲೂ ಸಾಧ್ಯವಾಗದಂತಹ ಕೊಠಡಿ ಎಂದು ಕುವೆಂಪು ವಿಷಾದದಿಂದ ‘ನೆನಪಿನ ದೋಣಿ’ಯಲ್ಲಿ ದಾಖಲಿಸುತ್ತಾರೆ. ಜಗನ್ಮಾತೆಯಾದರೆ ಏನಂತೆ? ಅವಳು ಕೊನೆಗೂ ಹೆಣ್ಣು ಎಂದುಕೊಳ್ಳುತ್ತಾ, ಕಿರಿದಾದರೂ ಸರಿಯೇ, ಸದ್ಯ ಅವಳಿಗೆ ತನ್ನದೇ ಆದ ಜಾಗ ಇತ್ತಲ್ಲ ಎಂದು ಸಮಾಧಾನಪಟ್ಟುಕೊಂಡು ಅಲ್ಲಿಂದ ಹೊರಬಂದೆನು.

Share

Leave a comment

Your email address will not be published. Required fields are marked *

Recent Posts More

 • 2 weeks ago No comment

  ಕವಿಸಾಲು | ಇಂಡೋನೇಶಿಯಾ

      ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ಜಲ, ಉಸಿರ ಗಾಳಿ ಹುಚ್ಚೆದ್ದು ಕುಣಿದು ಅಪ್ಪಳಿಸಿದ ಆಘಾತಕ್ಕೆ ಕಂಗೆಟ್ಟು ತತ್ತರಿಸಿವೆ ಪ್ರಾಣಿ, ಮನುಜ ಕುಲ ಮಾಡು ಹಾರಿ, ಕಂಬಗಳು ಕುಸಿದು ನೆಲಕಚ್ಚಿವೆ ಮಾನವನ ಬೀಡು ಕತ್ತರಿಸಿ ...

 • 2 weeks ago No comment

  ಕವಿಸಾಲು | ತಡವಿಲ್ಲದಿರಲಿ ಇನ್ನು…

      ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ತಡೆಯ ದಾಟಿ ತಲುಪಬೇಕಿದೆಯಷ್ಟೆ ಬಯಕೆ ಗುರಿಯನ್ನು ದಟ್ಟ ಹಸಿರಿನ ಕಾಡು, ಆಗಸದ ನೀಲಿ ಬಿಳಿಯ ಮೋಡಗಳ, ಬಿಸಿಲ ಬೆಳಕಿನ ನಡುವೆ ಬಯಲ ಸ್ವೇಚ್ಛೆಯ, ತಿಳಿಗಾಳಿ ತವಕದಲಿ ಬಂಧನಗಳ ...

 • 1 month ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 month ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 month ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...


Editor's Wall

 • 31 August 2018
  2 months ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  2 months ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  2 months ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  2 months ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  2 months ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...