Share

ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

 

 

 

 

 

 

 

 

 

ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.

 

ನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ಮೂಕಕ್ಕ ಎಂದರೆ ಆಕೆಯ ಹೆಸರು ಮೂಕಾಂಬಿಕೆ ಇರಬಹುದು ಅಂತ ನೀವಂದುಕೊಳ್ಳಬಹುದು. ನಿಜ ಹೇಳಬೇಕೆಂದರೆ ನನಗಾಗಲೀ ನಮ್ಮೂರಿನವರಿಗಾಗಲೀ ಆಕೆಯ ಹೆಸರೇನಿತ್ತು ಅನ್ನುವುದೇ ಗೊತ್ತಿಲ್ಲ. ಈಕೆಗೆ ಕಿವಿ ಕೇಳುತ್ತಿರಲಿಲ್ಲವಾದ್ದರಿಂದ ಮೂಗಿಯಾಗಿದ್ದರು. ಹೆಚ್ಚಿನ ಸಮಯ ನನ್ನ ಮನೆಯಲ್ಲಿ ಕಳೆಯುತ್ತಿದ್ದ ಈ ಹೆಂಗಸು ಕೈಸನ್ನೆ ಮಾಡುತ್ತಾ ಒಡಕು ಗಂಟಲಿನ ದೊಡ್ಡ ದನಿಯಲ್ಲಿ ಸದ್ದು ಹೊರಡಿಸಿ ಸಂವಹನ ನಡೆಸುತ್ತಿದ್ದರು. ಅವರು ಮನೆಗೆ ಬಂದ ಕೂಡಲೇ ನಾನು ಒಂದು ಮುಚ್ಚಳ ಕೊಬ್ಬರಿ ಎಣ್ಣೆ ಕೊಡಬೇಕು. ಇಲ್ಲವೆಂದರೆ ಹೊಡೆಯಲು ಬಂದಂತೆ ಜೋರುಮಾಡುತ್ತಿದ್ದರು. ಅಲ್ಲೇ ನಮ್ಮ ಮನೆಯ ಬೆಂಚಿನ ಮೇಲೆ ಅಡ್ಡಾಗಿ ಎಣ್ಣೆಯನ್ನು ಕಿವಿಗೆ ಹುಯ್ದುಕೊಳ್ಳುತ್ತಿದ್ದರು. ನಾನು ಈ ಮೂಕಕ್ಕನನ್ನು ನೋಡುತ್ತಾ ಆಕೆ ಮಾಡುವ ಸನ್ನೆಗಳನ್ನೇ ನಾನೂ ಮಾಡಲು ಅಭ್ಯಾಸ ಮಾಡುತ್ತಿದ್ದೆ. ಈಕೆಯ ಸನ್ನೆಗಳು ವಿಚಿತ್ರವಾಗಿರುತ್ತಿದ್ದವು. ಮುಂದೆ ಇದೇ ಸನ್ನೆಗಳನ್ನು ನಾನು ದೂರದರ್ಶನದ ಮೂಕರ ವಾರ್ತೆಗಳನ್ನು ನೋಡುವಾಗ ನೋಡಿದೆ. ವಿಚಿತ್ರವೆನಿಸುತ್ತಿತ್ತು, ಎಲ್ಲಿಯ ಹಳ್ಳಿಯ ಮೂಕಕ್ಕ, ಎಲ್ಲಿಯ ದೂರದರ್ಶನ? ಹೇಗೆ ಇವರೆಲ್ಲ ಒಂದೇ ತರಹ ಸನ್ನೆ ಮಾಡುತ್ತಾರೆ ಎಂದು.

ಒಂದು ದಿನ ಮೂಕಕ್ಕ ಹುಷಾರಿಲ್ಲದೆ ಹಾಸಿಗೆ ಹಿಡಿದುಬಿಟ್ಟರು. ಆಕೆಯ ಇಬ್ಬರು ಅಣ್ಣಂದಿರ ಮನೆಯಲ್ಲಿ ಇಲ್ಲಿಂದ ಓಡಿಸಿದರೆ ಆ ಮನೆಯಲ್ಲಿ, ಆ ಮನೆಯಿಂದ ಓಡಿಸಿದರೆ ಈ ಮನೆಯಲ್ಲಿ ಬಿದ್ದುಕೊಂಡು ನರಳಿ ನರಳಿ ನರಳಿ ತೀರಿಹೋದರು. ಹಾಸಿಗೆಯಲ್ಲಿರುವಾಗ ಆಕೆಗೆ ಏನಾಗುತ್ತಿದೆ ಎಂದು ಹೇಳಲೂ ಬಾಯಿಯಿರಲಿಲ್ಲ. ಡಾಕ್ಟರು ಹೇಳಿದ್ದು, ಆಕೆಗೆ ಗಂಟಲ ಕ್ಯಾನ್ಸರ್ ಆಗಿದೆಯೆಂದು. ಈಗಿನಂತೆ ಆಗ ಕ್ಯಾನ್ಸರಿಗೆ ಮದ್ದೂ ಇರಲಿಲ್ಲವೆಂದು ಕಾಣುತ್ತದೆ. ಮದ್ದು ಇದ್ದಿದ್ದರೂ ಅದಕ್ಕೆ ಹಣ ಖರ್ಚು ಮಾಡಿ ಆಕೆಯನ್ನು ಬದುಕಿಸಿಕೊಳ್ಳುವಷ್ಟು ಹಣವಾಗಲೀ, ಬದುಕಿಸಿಕೊಳ್ಳಬೇಕೆಂಬ ಬಯಕೆಯಾಗಲೀ ಆಕೆಯ ಅಣ್ಣಂದಿರಲ್ಲಿ ಇರಲಿಲ್ಲ. ಆಕೆ ನರಳುತ್ತಾ ಬಿದ್ದಿದ್ದರೆ ನಾನು ಆಕೆಯ ತಲೆಯ ಬಳಿ ಕೂರುತ್ತಿದ್ದೆ.

ಹೀಗೇಯೇ ಯೋಚಿಸುತ್ತಿದ್ದೆ. ಈ ಮೂಕಕ್ಕ ದೊಡ್ಡ ಗಂಟಲು ತೆಗೆದು ಎಲ್ಲರ ಹತ್ತಿರ ಗಂಟಲು ಹರಿದುಹೋಗುವ ತನಕ ಜಗಳ ಆಡದಿದ್ದರೆ ಆಕೆಗೆ ಈ ಗಂಟಲ ಕ್ಯಾನ್ಸರ್ ಬರುತ್ತಿರಲಿಲ್ಲವೇನೋ ಎಂದು. ಮೂಕಕ್ಕೆ ಈಗ ಬರಿದೆ ಕಂಬನಿ ಸುರಿಸುತ್ತಿದ್ದರು. ನಾನು ಚಿಕ್ಕ ಹುಡುಗಿ ಏನು ಮಾಡಬಲ್ಲವಳಾಗಿದ್ದೆ? ಆಗೆಲ್ಲ ಕರ್ನಾಟಕ ರಾಜ್ಯ ಸರಕಾರದ ಲಾಟರಿ ಮಾರಾಟಕ್ಕೆ ಬರುತ್ತಿದ್ದವು. ನನ್ನಲ್ಲಿ ಲಾಟರಿ ಕೊಳ್ಳುವಷ್ಟು ಹಣವೇ ಇರುತ್ತಿರಲಿಲ್ಲ. ಆದರೂ ಲಾಟರಿಯ ಬಂಪರ್ ಬಹುಮಾನ ನನಗೇ ಬಂದಂತೆ, ಆ ಹಣದಲ್ಲಿ ಈ ಮೂಕಕ್ಕನನ್ನು ದೊಡ್ಡ ನಗರಗಳ ಆಸ್ಪತ್ರೆಗೆ ಕರೆದೊಯ್ದು ಹುಷಾರು ಮಾಡಿಕೊಂಡು ಬರುವ ಕನಸು ಹಗಲು ರಾತ್ರಿ ಕಾಣುತ್ತಿದ್ದೆ. ಆದರೆ ನನಗೆ ಲಾಟರಿ ಹೊಡೆಯಲಿಲ್ಲ. ಮೂಕಕ್ಕನನ್ನು ನಾನು ಉಳಿಸಿಕೊಳ್ಳಲಾಗಲಿಲ್ಲ.

ಮೈಸೂರಿನ ಯೂನಿವರ್ಸಿಟಿಯ ಕ್ಯಾಂಟೀನಿನಲ್ಲಿ ಕಾಫಿ ಕುಡಿಯುತ್ತಿದ್ದೆ. ನನ್ನ ಪಕ್ಕದ ಟೇಬಲ್ಲಿನಲ್ಲಿ ಕೂತ ಹುಡುಗರು ಮದುವೆ ಆದ್ರೆ ಇವರನ್ನು ಮದುವೆ ಆಗಬೇಕು ಗುರೂ. ಮನೆಯಲ್ಲಿ ಜಗಳವೇ ಇರಲ್ಲ ಎಂದ ಒಬ್ಬ. ಇನ್ನೊಬ್ಬ ‘ಒಂದು ತಗೊಂಡ್ರೆ ಇನ್ನೊಂದು ಫ್ರೀ ಇದ್ದಂಗೆ ಮೂಕಿನ ಮದುವೆ ಆದ್ರೆ ಅವಳ ಟೀಚರ್ ಫ್ರೀ ನೋಡು. ಒಂದು ಕೈ ಟ್ರೈ ಮಾಡು’ ಅಂದದ್ದೇ ನನ್ನ ಬೆನ್ನ ಹಿಂದೆ ನೋಡಿದೆ. ಇಬ್ಬರು ಚಂದನೆಯ ಹುಡುಗಿಯರು ಸನ್ನೆಯ ಭಾಷೆ ಮಾತಾಡುತ್ತಿದ್ದರು. ಅದರಲ್ಲಿ ಒಬ್ಬಾಕೆಗೆ ಮಾತು ಬರುತ್ತಿತ್ತು. ಅದಕ್ಕೇ ಅವಳನ್ನು ಈ ಮಾತು ಬಾರದ ಹುಡುಗಿಯ ಟೀಚರ್ ಎಂದು ಭಾವಿಸಿ ಹುಡುಗರು ಆ ತರಹದ ಸಂಭಾಷಣೆ ನಡೆಸಿದ್ದರು. ನಾನು ಈ ಹುಡುಗಿಯರ ಮೌನದ ಸನ್ನೆಗಳನ್ನೇ ಗಮನಿಸಿದೆ. ಮೂಕಕ್ಕನ ಗಲಾಟೆಗಿಂತ ಇವರ ಮೌನ ಇರಿದು ಕೊಲ್ಲತೊಡಗಿತು. ಮತ್ತೆ ನನ್ನಿಂದ ಅಲ್ಲಿ ಕೂರಲಾಗಲಿಲ್ಲ. ನಾನಾ ಪಾಟೇಕರ್ ಮತ್ತು ಮನಿಷಾ ಕೊಯಿರಾಲಾ ನಟನೆಯ ‘ಖಾಮೋಶಿ’ ಸಿನೆಮಾ ನೋಡುವಾಗ ಕೂಡ ಮೂಕಕ್ಕನ ಚಿತ್ರವೇ ಕಣ್ಣಮುಂದೆ ಸುಳಿಯುತ್ತ ಬಹಳ ಕಾಡಿತ್ತು.

ಇತ್ತೀಚೆ ಒಂದು ಕಾರ್ಯಕ್ರಮಕ್ಕೆಂದು ಗುಜರಾತಿಗೆ ಹೋಗಿದ್ದೆ. ಅಲ್ಲಿ ನಮಗೆ ಉಳಿಯಲು ಒಂದು ಕಡೆ ವ್ಯವಸ್ಥೆ ಮಾಡಿದ್ದರು. ನಡು ರಾತ್ರಿ ಮಂದ ಬೆಳಕಲ್ಲಿ ನಾವು ದೊಡ್ಡ ಹಾಲ್ ಒಂದರ ತುಂಬ ಪಕ್ಕ ಪಕ್ಕದಲ್ಲೇ ಜೋಡಿಸಿಟ್ಟ ಸಾಲು ಸಾಲು ಮಂಚಗಳಿದ್ದವು. ಒಂದೊಂದು ಮಂಚದಲ್ಲಿ ಮೇಲೆ ಮತ್ತು ಕೆಳಗೆ ಎರಡೆರಡು ಹಾಸಿಗೆ. ಮೊದಲಿಗೆ ಇಲ್ಲಿ ಯಾರೂ ಇಲ್ಲ ಎಂದುಕೊಂಡೆ. ನಂತರ ನಮ್ಮಂತೆ ಕಾರ್ಯಕ್ರಮಕ್ಕೆ ಬಂದ ಜನ ಮಲಗಿದ್ದು ಗೊತ್ತಾಯಿತು. ಮುಂಜಾನೆ ಕಣ್ಣು ತೆರೆದಾಗ ಏನು ನೋಡುವುದು? ಇಡೀ ಹಾಲಿನ ತುಂಬ ಸಾವಿರಾರು ಪುಟ್ಟ ಪುಟ್ಟ ಹೆಣ್ಣು ಮಕ್ಕಳು ಮತ್ತು ಹೆಪ್ಪುಗಟ್ಟಿದ ಮೌನ! ಈ ಮಕ್ಕಳು ಹೂವುಗಳಂತೆ ಅಥವಾ ಚಿಟ್ಟೆಗಳಂತೆ ಸನ್ನೆಯ ಭಾಷೆಯಲ್ಲಿ ಗಾಢ ಮೌನದಲ್ಲಿ. ಅಯ್ಯೋ ದೇವರೇ! ಇದೆಲ್ಲಿ ಬಂದು ಸಿಕ್ಕಿಬಿದ್ದೆ ನಾನು ಎಂದು ನನ್ನ ಮನಸ್ಸು ಚೀರುತ್ತಿತ್ತು. ನಾವು ಕೆಲ ಗಂಟೆ ಆ ಮಕ್ಕಳ ಜೊತೆ ಕಳೆದೆವು. ಚಿಲಿಪಿಲಿ ಕಲರವದಲ್ಲಿ ಚಿಟ್ಟುಹಿಡಿಸಬೇಕಿದ್ದ ಮಕ್ಕಳು ಈ ಪರಿ ಸೂಜಿ ಬಿದ್ದರೂ ಕೇಳಿಸಬಹುದಾದ ಮೌನದಲ್ಲಿಯೇ ಸ್ನಾನ, ತಲೆ ಬಾಚಿಕೊಳ್ಳುವುದು, ಶಿಸ್ತಾಗಿ ಸಮವಸ್ತ್ರ ಧರಿಸಿ ಶಾಲೆಗೆ ಸಜ್ಜಾಗುವುದು ಮಾಡುತ್ತಿದ್ದರೆ, ಎಲ್ಲವನ್ನೂ ನೋಡುತ್ತಾ ಘೋರ ಯುದ್ಧವೊಂದು ಎದೆಯಲ್ಲಿ ನಡೆಯುತ್ತಿರುವಂತೆ ಉದ್ವೇಗಗೊಳ್ಳುತ್ತ ಕಣ್ಣ ಹನಿ ಯಾರಿಗೂ ಕಾಣಗೊಡದಂತೆ ಪರಿಶ್ರಮಿಸತೊಡಗಿದ್ದೆ.

ನಮ್ಮ ಮನೆಯ ಪಕ್ಕದಲ್ಲಿ ಒಬ್ಬ ಕೊಂಕಣಿಗರ ಮನೆ. ಅವರ ಮನೆಯಲ್ಲಿ ತಂದೆ ಇರಲಿಲ್ಲ. ಮುದಿ ತಾಯಿ. ದೊಡ್ಡ ದೊಡ್ಡ ಇನ್ನೂ ಮದುವೆಯಾಗದ ಸುಮಾರು ಹೆಣ್ಣು ಮಕ್ಕಳಿದ್ದರು. ಗಂಡುಮಕ್ಕಳಲ್ಲಿ ಒಬ್ಬರು ಹೋಟೆಲ್ ನಡೆಸುತ್ತಿದ್ದರು. ಇನ್ನೊಬ್ಬರಿಗೆ ಒಂದು ಕಾಲಿರಲಿಲ್ಲ. ಈ ಕಾಲಿಲ್ಲದ ಮನುಷ್ಯನಿಗೆ ಮಕ್ಕಳೆಂದರೆ ತುಂಬ ಪ್ರೀತಿ. ನನ್ನನ್ನು ಎತ್ತಿಕೊಂಡು ಮುದ್ದುಮಾಡುತ್ತಿದ್ದರೆ ನನಗದು ಯಾಕೋ ಅಸಹ್ಯವಾಗುತ್ತಿತ್ತು. ಅವನಿಗೆ ಅನಂತು ಎಂಬ ಹೆಸರಿದ್ದರೂ ಎಲ್ಲರೂ ಕುಂಟ ಎಂದೇ ಕರೆಯುತ್ತಿದ್ದರು. ನೋಡ ನೋಡುತ್ತ ಒಂದು ದಿನ ಈ ಕುಂಟನಿಗೆ ಅದೇನೋ ಕಾಯಿಲೆ ಶುರುವಾಯಿತು. ಹಾಸಿಗೆಯಲ್ಲಿ ತುಂಬ ಕಾಲ ನರಳಿದ. ವೈದ್ಯರು ಬಂದು ಇನ್ನು ಇವನು ಬದುಕುವುದಿಲ್ಲ, ನೆಂಟರಿಷ್ಟರನ್ನು ಕರೆಸಿಬಿಡಿ. ನೋಡುವವರು ನೋಡಿಕೊಂಡು ಹೋಗಿಬಿಡಲಿ ಎಂದರಂತೆ. ಹಾಗಾಗಿ ನನ್ನ ಮನೆಯವರೆಲ್ಲ ಅವನನ್ನು ನೋಡಲು ಹೋದರೆ ನಾನು ಮಾತ್ರ ಹೋಗಲಿಲ್ಲ. ಜೀವ ಹೋಗುವ ಕೊನೆಯ ಕ್ಷಣದಲ್ಲೂ ಅವನು ನನ್ನ ಹೆಸರು ಹೇಳಿ ಎಲ್ಲಿ ಎಲ್ಲಿ ಎಂದು ಕೇಳಿದನಂತೆ. ನೋಡಲು ಹೋದ ನನ್ನ ಮನೆಯ ಜನ ಹಿಂದಿರುಗಿ ಬಂದು ನನ್ನನ್ನು ಕರೆದೊಯ್ಯುವಷ್ಟು ಹೊತ್ತಿಗೆ ಅವನ ಪ್ರಾಣ ಹೋಗಿಯಾಗಿತ್ತು!

ಇನ್ನೊಬ್ಬ ವ್ಯಕ್ತಿ ನಮ್ಮ ಮನೆಯ ಸಮೀಪವೇ ವಾಸವಿದ್ದ. ಓಣಿ ಮಾತ್ರ ಬೇರೆ ಬೇರೆ. ಇವನು ಗದಗಕ್ಕೆ ಹೋಗಿ ಗವಾಯಿಗಳಲ್ಲಿ ಹಿದೂಸ್ಥಾನಿ ಸಂಗೀತ ಕಲಿತು ಬಂದಿದ್ದ. ಹಾರ್ಮೋನಿಯಮ್, ಕೊಳಲು, ಮೌತ್ ಆರ್ಗನ್, ತಬಲ ಇತ್ಯಾದಿ ಅತ್ಯಂತ ಮಧುರವಾಗಿ ನುಡಿಸುತ್ತಿದ್ದ. ಇವನ ಕೊರಳೋ.. ಕೊಳಲನ್ನೇ ಒಳಗಿರಿಸಿಕೊಂಡಿದ್ದಿರಬೇಕು. ಇವನು ಹಾಡತೊಡಗಿದನೆಂದರೆ ನಾನು ಹುಚ್ಚೇರಿದ ಭಾವದಲೆಗಳ ಮೇಲೆ ಪಯಣಿಸುತ್ತಿದ್ದೆ. ನನ್ನ ಕಾಲುಗಳು ನನಗರಿವಿಲ್ಲದೆಯೇ ನರ್ತಿಸುತ್ತಿದ್ದವು. ಹೃದಯ ಹಕ್ಕಿಯಾಗಿ ಗರಿಗೆದರುತ್ತಿತ್ತು. ಇವನ ಬಳಿ ನಾನು ಹಿಂದೂಸ್ಥಾನಿ ಹಾಡುಗಾರಿಕೆ ಮತ್ತು ಹಾರ್ಮೋನಿಯಮ್ ಕಲಿಯಲು ಹೋಗುತ್ತಿದ್ದೆ. ಕೆಲ ಕಾಲದಲ್ಲೇ ನಮ್ಮೂರಿನ ಒಬ್ಬಾಕೆಯೊಂದಿಗೆ ಇವನಿಗೆ ಕ್ರಶ್ ಆಗಿ ಅವಳ ಆಸೆಯ ಮೇರೆಗೆ ನನಗೆ ಸಂಗೀತ ಕಲಿಸುವುದನ್ನು ನಿಲ್ಲಿಸಿದ್ದ. ಈ ಬೇಸರ ನನ್ನಲ್ಲಿದ್ದರೂ ಇವನು ಸಾಯುವ ತನಕವೂ ಮತ್ತು ಈಗಲೂ ಇವನ ಮೇಲೆ ನನಗೆ ವಿಶೇಷ ಗೌರವ ಪ್ರೀತಿ ಉಳಿದುಬಿಟ್ಟಿತು.

ಇವನು ಬೆಳಿಗ್ಗೆ ಕಾಫಿ ತಿಂಡಿ ಮುಗಿಸಿದ್ದೇ ಸೀದಾ ಸರಾಗ ನಡೆದು ನಮ್ಮ ಮನೆಗೆ ಬರುತ್ತಿದ್ದ. ನಾನು ಇವನಿಗೆ ಎಲ್ಲೋ ಚೂರು ಕಣ್ಣ ಕಾಣುತ್ತದೆ. ಇಲ್ಲವೆಂದರೆ ಹೀಗೆ ಸರಾಗ ಕತ್ತು ವಾರೆ ಮಾಡಿಕೊಂಡು ನೇರ ನಮ್ಮ ಮನೆಗೇ ಬರುವುದು ಹೇಗೆ ಸಾಧ್ಯವಾಗುತ್ತದೆ? ಎಂದು ಅವನಿಗೆ ನಾನಾ ತರಹದ ಪರೀಕ್ಷೆಗಳನ್ನು ಒಡ್ಡುತ್ತಿದ್ದೆ. ನಾನು ಯಾವ ಬಣ್ಣ ಇದ್ದೇನೆ ಹೇಳು? ಅಂದರೆ ‘ಬೆಳ್ಳಗೆ’ ಅನ್ನನುತ್ತಿದ್ದ. ನಿನ್ನ ತಂಗಿ ಯಾವ ಬಣ್ಣ? ಎಂದರೆ ‘ಕಪ್ಪು’ ಅನ್ನುತ್ತಿದ್ದ. ರೂಪಾಯಿಯ ನೋಟಿನ ಆಕಾರಕ್ಕೇ ಕಾಗದವನ್ನಿಟ್ಟು ಕತ್ತರಿಸಿ ತಗೋ ರೂಪಾಯಿ ಎಂದರೆ ಇದು ಕಾಗದ ಎಂದು ಮುದ್ದೆ ಮಾಡಿ ಬಿಸಾಡುತ್ತಿದ್ದ. ನಾವು ಆಗೆಲ್ಲ ನಮ್ಮ ಅಂಗಳದಲ್ಲಿ ಕಣ್ಣು ಕಟ್ಟಾಟ ಆಡುತ್ತಿದ್ದೆವು. ಆಗ ನಮ್ಮೆಲ್ಲರಿಗೂ ಕಳ್ಳರಾದರೆ ಕಣ್ಣಿಗೆ ಪಟ್ಟಿ ಕಟ್ಟಲಾಗುತ್ತಿತ್ತು. ಇವನಿಗೆ ಮಾತ್ರ ಇವನಿಗೆ ಹೇಗೂ ಕಣ್ಣು ಕಾಣುವುದಿಲ್ಲವಲ್ಲ ಎಂದು ಕಣ್ಪಟ್ಟಿ ಕಟ್ಟದಿದ್ದರೆ ನನ್ನದು ಜೋರು ಗಲಾಟೆ. ಇಲ್ಲ ಇವನಿಗೆ ಕಣ್ಣು ಕಾಣುತ್ತದೆ. ಸುಳ್ಳು ಹೇಳುತ್ತಾನೆ ಎಂದು.

ಆದರೂ ಅವನಿಗೆ ಕಣ್ಣಿಲ್ಲ ಎಂದು ಒಂದು ಮನಸ್ಸು ಹೇಳುತ್ತಿತ್ತು. ಒಳಗೊಳಗೇ ಇವನ ಕಷ್ಟಕ್ಕೆ ಮರುಗುತ್ತಿದ್ದೆ. ಮತ್ತೆ ಗಂಟೆಗಟ್ಟಲೆ ಕೂತು ಇವನ ಕಣ್ಣಿನ ಆಪರೇಷನ್ ಮಾಡಿಸುವ ಸಲುವಾಗಿ ಲಾಟರಿ ಹೊಡೆಯುವ ಕನಸು ಕಾಣುತ್ತಿದ್ದೆ. ಒಂದು ದಿನ ಇವನಪ್ಪ ದೊಡ್ಡ ಡಾಕ್ಟರರ ಹತ್ತಿರ ಕರೆದೊಯ್ದರು. ಅವರೇ ಪ್ರಸಿದ್ಧ ನೇತ್ರ ತಜ್ಞ ಮೋದಿಯವರು. ಈ ಕಣ್ಣಿಲ್ಲದ ನನ್ನ ಸಂಗೀತ ಗುರುವಿಗೆ ಚಿಕ್ಕ ಹುಡುಗನಾಗಿರುವಾಗ ಕಣ್ಣಿನ ಆಪರೇಷನ್ ಮಾಡಿಸಲೆಂದು ಕರೆದೊಯ್ದಿದ್ದರಂತೆ. ಆಗ ಇವನು ದೊಡ್ಡವನಾದ ಮೇಲೆ ಮಾಡಬೇಕು. ಈಗ ಆಗುವುದಿಲ್ಲ ಎಂದಿದ್ದರಂತೆ. ಈಗ ಮೋದಿ ಎನ್ನುವ ಜನಪ್ರಿಯ ನೇತ್ರ ತಜ್ಞರು ಖಂಡಿತವಾಗಿ ಇವನಿಗೆ ಕಣ್ಣು ಕೊಡುತ್ತಾರೆ ಎಂದು ತಿಳಿದ ನಾನು, ಇವನಿಗೆ ನೂರಾರು ಪ್ರಶ್ನೆ ಕೇಳುತ್ತಿದ್ದೆ. ನಿನಗೆ ಕಣ್ಣು ಬರುತ್ತಲ್ವಾ ಆಗ ನೀನು ಪಟ್ಟಿ ಬಿಚ್ಚಿದ ಕೂಡಲೇ ಯಾರನ್ನು ನೋಡಲು ಬಯಸುತ್ತೀ? ಎಂದರೆ ಮೊದಲು ನನ್ನ ತಂಗಿಯನ್ನು ನಂತರ ನನ್ನ ಮಮ್ಮಿ ಪಪ್ಪನನ್ನು ಆಮೇಲೆ ನಿನ್ನನ್ನು ಎನ್ನುತ್ತಿದ್ದ. ಸಿನಿಮೀಯ ರೀತಿಯಲ್ಲಿ ಇವೆಲ್ಲ ನಡೆದುಬಿಡುತ್ತದೆ ಎಂದು ನನ್ನ ಯೋಚನೆ. ಆದರೆ ವೈದ್ಯರು ಕಣ್ಣಿನ ನರ ತುಂಬ ದುರ್ಬಲವಾಗಿರುವ ಕಾರಣ ಅಪರೇಷನ್ ಸಾಧ್ಯವೇ ಇಲ್ಲ ಎಂದು ಕಳಿಸಿಬಿಟ್ಟಿದ್ದರು. ಇದರಿಂದ ನಾನು ಹತಾಶಳಾಗಿ ಅದೆಷ್ಟು ಅತ್ತೆನೋ.

ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ. ದೇವರು ಕೊಡಬಹುದಾದ ಮೂರು ವರಗಳಲ್ಲಿ ಒಂದು ವರ ಇವನಿಗೆ ಕಣ್ಣು ಬರಿಸುವುದಾಗಿತ್ತು. ಹೀಗೆ ಒಬ್ಬ ಮೂಕಿ, ಒಬ್ಬ ಕುಂಟ, ಮತ್ತೊಬ್ಬ ಕುರುಡ ನನ್ನ ಬಾಲ್ಯವನ್ನು ಹಿಂಡಿಹಾಕುತ್ತಿದ್ದರು. ನಾನು ಒಬ್ಬಳೇ ಇದ್ದಾಗೆಲ್ಲ ಸನ್ನೆಯ ಭಾಷೆಯಲ್ಲಿ ಮಾತಾಡುವುದನ್ನೂ ಕುಂಟುತ್ತಾ ಒಂದು ಕಾಲಲ್ಲಿ ನಡೆಯುವುದನ್ನೂ ಕಣ್ಣು ಮುಚ್ಚಿಕೊಂಡೇ ಓಡಾಡುವುದನ್ನೂ ಹಟ ಯೋಗದಂತೆ ಅಭ್ಯಾಸ ಆಡುತ್ತಿದ್ದೆ. ಸ್ಪರ್ಶಜ್ಞಾನ ಮತ್ತು ಸದ್ದಿನಿಂದ ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತಿದ್ದೆ. ನಾಳೆ ದಿನ ನನ್ನ ಕಣ್ಣು ಹೋದರೆ, ನನ್ನ ಮಾತು ನಿಂತರೆ, ನಾನು ಕಾಲು ಕಳೆದುಕೊಂಡರೆ ಆಗಲೂ ಬದುಕಬೇಕು. ಆಗ ಇದೆಲ್ಲವೂ ಉಪಯೋಗಕ್ಕೆ ಬಂದೇ ಬರುತ್ತದೆ ಎಂದು ಯೋಚಿಸುತ್ತಿದ್ದೆ.

ನಾನು ಹೈಸ್ಕೂಲಿನಲ್ಲಿರುವಾಗಲೇ ಕನ್ನಡಕ ಬಂತು. ಈಗಲೂ ಕನ್ನಡಕವಿಲ್ಲದೆ ಓದಲಾರೆ. ಇದರ ನಡುವೆ ಆಗಾಗ ತೀವ್ರವಾದ ಅಲರ್ಜಿಯಾಗುತ್ತದೆ. ಹೀಗಾದಾಗ ಕಣ್ಣು ಮಂಜಾಗುತ್ತವೆ. ಮತ್ತು ಅವರ ನೆನಪು ಮಂಜುಗಣ್ಣನ್ನು ಆವರಿಸುತ್ತದೆ. ಹೌದು, ಏನಿಲ್ಲದಿದ್ದರೂ ಬದುಕು ದೂಡಬೇಕು. ಹೌದು ಹೀಗೆಯೇ ಅಂದುಕೊಳ್ಳುತ್ತೇನೆ.

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ವಾಸ. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಪತ್ರಿಕೆಗಳು, ವೆಬ್ ಪೋರ್ಟಲ್ ಗಳಲ್ಲಿ ಬರಹಗಳು ಪ್ರಕಟವಾಗಿವೆ. ‘ಹಲಗೆ ಮತ್ತು ಮೆದುಬೆರಳು’ ಅವರ ಮೊದಲ ಕಾವ್ಯಸಂಕಲನ.

Share

Leave a comment

Your email address will not be published. Required fields are marked *

Recent Posts More

 • 13 hours ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 week ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 2 weeks ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...

 • 2 weeks ago No comment

  ಕಲರವ | ಒಂದು ಸಿನಿಮಾ ನೋಡಿದ ಕಥೆ…

      ಕಲರವ           “ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ಸಿನಿಮಾ ನೋಡು” ಎಂದಳು ಭಾರತದ ನನ್ನ ಅಕ್ಕ. “ಹೌದಲ್ಲವಾ” ಅಂತ ನಮ್ಮೂರಿನಲ್ಲಿ ನಡೆಯುತ್ತಿದ್ದ ಸಿನಿಮಾ ಪಟ್ಟಿ ನೋಡಿದೆ. ಪ್ರೀತಿ –ಪ್ರೇಮ, ಫೈಟಿಂಗ್ ಗಳ ಚಲನಚಿತ್ರವನ್ನು ನೋಡುವುದೆಂದರೆ, ‘ನೋಡಿದ್ದನ್ನೇ ನೋಡುವ’ ಕಷ್ಟ. ವೈಚಾರಿಕ ಸಿನಿಮಾಗಳು ಜಾಸ್ತಿ ಓಡದ ಕಾಲವಿದು. ಇನ್ನು ಸಾಂಸಾರಿಕ ಚಿತ್ರಗಳು ಬರುವುದು ನಿಂತ ಮೇಲೆ ಸಂಸಾರಗಳು ಒಟ್ಟಿಗೆ ...

 • 3 weeks ago No comment

  ಕವಿಸಾಲು | ಅಲೆಗಳೆದ್ದ ಕೊಳ…

      ಕವಿಸಾಲು         ಅಲೆಗಳೆದ್ದ ಕೊಳವಿದು, ಕಲ್ಲು ತೂರಿದ ಕಾಯಕವಷ್ಟೇ ನಿನ್ನದು ಎದ್ದ ಅಲೆಗಳ ಮೇಲಿಲ್ಲ ನಿನಗೆ ಇನಿತು ಅಧಿಕಾರವು ದೂರಿಲ್ಲ ನನ್ನಲ್ಲಿ, ಬೇಡಿಕೆ ತಾನೇ ಏಕೆ? ತುಂಬಿದ ಮನದಿ ಹೊಕ್ಕ ಹರ್ಷಕೆ ಪುರಾವೆಗಳ ಹಂಗಿಲ್ಲ, ನಕ್ಕ ನಗುವಿನಲಿ ನೋವಿಲ್ಲ, ತುಂಬಿವೆ ನೂರು ಭಾವಾರ್ಥ ಮುಚ್ಚಟೆಯಿಂದ ಬಚ್ಚಿಟ್ಟುಕೊಂಡು ಬೇಕಾದ ಪರಿಭಾಷೆಯಲಿ ದಿರಿಸಿಟ್ಟು ಸಿಂಗರಿಸಿ ನೋಡುತ್ತ ನಿನ್ನ ಅನುಪಸ್ಥಿತಿಯಲ್ಲೂ ಸಿಗುವ ಅನುಪಮ ಭಾವದಿ ದೊರಕಿದ್ದು ...


Editor's Wall

 • 31 August 2018
  3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  3 weeks ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  4 weeks ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  4 weeks ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  1 month ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...