Share

ಓಟಿನ ಗೌಜುಗದ್ದಲವೂ ಹೊಸತನವೂ
ಪ್ರಸಾದ್ ನಾಯ್ಕ್ ಕಾಲಂ

‘ನನ್ನ ರಾಜ್ಯವು ಚುನಾವಣೆಗೆ ತಯಾರಾಗುತ್ತಿದೆ’, ಅಂಗೋಲನ್ ಗೆಳೆಯನೊಬ್ಬನ ಬಳಿ ನಾನು ಹೇಳಿದೆ. ನಾನು ಹೇಳಿದ್ದಕ್ಕೆ ಏನಾದರೂ ಪ್ರತಿಕ್ರಿಯಿಸಲೇಬೇಕು ಎಂಬ ಸಂಕೋಚಕ್ಕೆ ಬಿದ್ದವನಂತೆ ಆತ ಸುಮ್ಮನೆ ಹೂಂಗುಟ್ಟಿದ. ಆ ಪ್ರತಿಕ್ರಿಯೆಯು ನನಗೆ ಅನಿರೀಕ್ಷಿತವೇನೂ ಆಗಿರಲಿಲ್ಲ. ಚುನಾವಣೆಯೆಂಬುದು ಈ ದೇಶಕ್ಕೆ ಒಂದು ಕಾಟಾಚಾರದ ಕೆಲಸವಷ್ಟೇ. ಕಳೆದ ಬಾರಿ ರಾಷ್ಟ್ರಾಧ್ಯಕ್ಷರ ಹುದ್ದೆಗೆ ನಡೆದ ಚುನಾವಣೆಯಲ್ಲಿ ಈ ಸಂಗತಿಯು ನನ್ನ ಗಮನಕ್ಕೆ ಬಂದಿತ್ತು. ನಾಲ್ಕೈದು ಪಕ್ಷಗಳ ಅಭ್ಯರ್ಥಿಗಳು ಚುನಾವಣೆಯ ರೇಸಿನಲ್ಲಿದ್ದರೂ ಗೆಲ್ಲುವುದು ಯಾರೆಂಬುದು ಬಹುತೇಕ ಎಲ್ಲರಿಗೂ ತಿಳಿದಿತ್ತು. ಗಲ್ಲಿಗಲ್ಲಿಗಳಲ್ಲೂ ಒಂದೇ ಪಕ್ಷದ ಬಾವುಟಗಳು, ಭಿತ್ತಿಪತ್ರಗಳು ಗೋಚರಿಸುತ್ತಿದ್ದು, ಇದೊಂದು ಏಕಪಕ್ಷೀಯ ಚುನಾವಣೆಯೆಂದು ಮೊದಲ ನೋಟಕ್ಕೇ ಯಾರಾದರೂ ಹೇಳಬಹುದಿತ್ತು. ನಿರೀಕ್ಷೆಯಂತೆ ಅದೇ ಪಕ್ಷವು ಚುನಾವಣೆಯನ್ನು ಗೆದ್ದು ಅಧಿಕಾರಕ್ಕೆ ಬಂದಿತು ಕೂಡ. ಜಾಗತಿಕ ಮಟ್ಟದ ಶಕ್ತಿಗಳ ಕಣ್ಣಿಗೆ ಮಣ್ಣೆರಚಲು ಪ್ರಜಾಪ್ರಭುತ್ವದ ಹೆಸರಿನಲ್ಲಿ ಇಂಥದ್ದೊಂದು ಚುನಾವಣೆಯನ್ನು ನಡೆಸಲಾಯಿತು ಎಂಬುದು ಇಲ್ಲಿ ಎಲ್ಲರಿಗೂ ತಿಳಿದಿರುವ ಆದರೆ ಯಾರಲ್ಲೂ ಬಾಯಿಬಿಡದಿರುವ ಒಂದು ವಿಚಿತ್ರ ಸತ್ಯ.

ಮಾಧ್ಯಮ, ಟೆಲಿಕಾಂ, ವಜ್ರ, ತೈಲೋದ್ಯಮ… ಇತ್ಯಾದಿಗಳನ್ನು ತನ್ನ ಕಪಿಮುಷ್ಠಿಯಲ್ಲಿರಿಸಿಕೊಂಡ, ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚಿನ ಕಾಲ ದೇಶವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುವ ರಾಜಕೀಯ ಪಕ್ಷವೊಂದು ಚುನಾವಣೆಯನ್ನು ಗೆದ್ದಿತು ಎಂಬುದು ಅಂಗೋಲನ್ನರಿಗೆ ಒಂದು ಸಂಗತಿಯೇ ಆಗಿರಲಿಲ್ಲ. ಇದೊಂಥರಾ ಈಗಾಗಲೇ ಮುಗಿದಿರುವ ಏಕದಿನ ಕ್ರಿಕೆಟ್ ಪಂದ್ಯವನ್ನು ಹೈಲೈಟ್ಸ್ ಪ್ರಸಾರದಲ್ಲಿ ವೀಕ್ಷಿಸಿದಂತೆ. ದಾವೂದ್ ಇಬ್ರಾಹಿಂನ ಬಂಗಲೆಯಾದ ‘ವೈಟ್ ಹೌಸ್’ನ ವಿಳಾಸವು ಇಡೀ ಜಗತ್ತಿಗೇ ಗೊತ್ತಿದ್ದರೂ ಆತ ಎಲ್ಲಿದ್ದಾನೆ ಎಂಬುದರ ಬಗ್ಗೆ ವಿಶ್ವದ ಯಾವ ಮಹಾ ಭದ್ರತಾ ಏಜೆನ್ಸಿಗಳಿಗೂ ಗೊತ್ತಿಲ್ಲದಿರುವಂತೆ. ಅಷ್ಟಕ್ಕೂ ಅಂಗೋಲಾದಂತಹ ದೇಶಗಳಲ್ಲಿ ಅಸಲಿ ಕುತೂಹಲಗಳು ಶುರುವಾಗುವುದು ಚುನಾವಣೆಯ ನಂತರದ ದಿನಗಳಲ್ಲೇ. ಏಕೆಂದರೆ ಸೋತ ರಾಜಕೀಯ ಪಕ್ಷಗಳು ಸೋಲನ್ನೊಪ್ಪಿಕೊಳ್ಳದೆ ಆಟದಲ್ಲಿ ಸೋತು ಸಿಟ್ಟಿಗೇಳುವ ಮಗುವಿನಂತೆ ರೊಚ್ಚಿಗೇಳುತ್ತವೆ. ಇತ್ತೀಚೆಗೆ ಕೀನ್ಯಾದಲ್ಲಿ ಅಧ್ಯಕ್ಷೀಯ ಚುನಾವಣಾ ನಂತರದ ದಿನಗಳಲ್ಲಿ ನಡೆದ ಗಲಭೆಗಳು ಇದಕ್ಕೊಂದು ಉತ್ತಮ ನಿದರ್ಶನ.

ಹಾಗೆ ನೋಡಿದರೆ ಚುನಾವಣೆಯ ಕಾವು ನಮ್ಮಲ್ಲೇ ಬಲು ಸ್ವಾರಸ್ಯಕರವೂ, ಕುತೂಹಲಕಾರಿಯೂ ಆಗಿರುವಂಥದ್ದು. ಭಾರತದ ಜನಸಂಖ್ಯೆಯೇನು? ಅದೆಷ್ಟು ಮತಗಟ್ಟೆಗಳು, ಮತಯಂತ್ರಗಳು? ನಮ್ಮಲ್ಲಿ ಪ್ರಚಾರ-ಪ್ರಣಾಳಿಕೆಗಳ ಗದ್ದಲಗಳೇನು? ಆರೋಪ-ಪ್ರತ್ಯಾರೋಪಗಳ ಅಬ್ಬರವೇನು? ಟಿಕೆಟ್ ಹಂಚಿಕೆಯಿಂದ ಹಿಡಿದು ಫಲಿತಾಂಶದ ಕೊನೆಯ ಕ್ಷಣದವರೆಗೂ ನಮ್ಮಲ್ಲಿ ಅದೆಂಥಾ ಕೌತುಕ? ಬಹುಶಃ ಚುನಾವಣೆಯಷ್ಟು ದೊಡ್ಡಮಟ್ಟಿನಲ್ಲಿ ನಡೆಯುವ ಮಹಾ ಕಸರತ್ತು ಭಾರತದಲ್ಲಿ ಬೇರೊಂದು ಇರಲಿಕ್ಕಿಲ್ಲ. ಸದ್ಯ ಚುನಾವಣೆಯ ಹುರುಪಿನಲ್ಲಿರುವ ಕರ್ನಾಟಕದಲ್ಲೂ ಕೂಡ ಇಂಥಾ ಲೆಕ್ಕಾಚಾರಗಳು, ಬಿರುಸಿನ ಬೆಳವಣಿಗೆಗಳು ನಡೆಯುತ್ತಿದ್ದು ಕ್ಷಣಗಣನೆಯು ಶುರುವಾಗಿಬಿಟ್ಟಿದೆ. ಎಲ್ಲಾ ಪ್ರಮುಖ ಪಕ್ಷಗಳೂ ಗೆಲುವು ನಮ್ಮದೇ ಎಂದು ಹೇಳುತ್ತಿವೆ. ಆದರೆ ತೆರೆಮರೆಯಲ್ಲಿ ‘ಪ್ಲಾನ್ – ಎ’, ‘ಪ್ಲಾನ್ – ಬಿ’ಗಳಂತಹ ಕಸರತ್ತುಗಳೂ ನಡೆಯುತ್ತಿರುವುದು ಸುಸ್ಪಷ್ಟ.

ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಎದುರಾಳಿಗಳನ್ನು ಟೀಕಿಸುತ್ತಾ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಭರದಲ್ಲಿ ಬಳಸಿದ ಚುನಾವಣಾ ಪ್ರಚಾರದ ಘೋಷಣೆಗಳು ತೀರಾ ಕೆಳಮಟ್ಟವನ್ನು ತಲುಪಿ ಜನಸಾಮಾನ್ಯರಲ್ಲೂ ಮುಜುಗರವನ್ನು ತಂದಿದ್ದು ಸತ್ಯ. ರಾಜಕೀಯ ಪಕ್ಷಗಳೆಂದರೆ ಆರೋಪ-ಪ್ರತ್ಯಾರೋಪಗಳು ಇರುವಂಥದ್ದೇ. ಆದರೆ ದ್ವೇಷದ ಕಿಡಿಯನ್ನು ಕಾರುವ ಭಾಷಣಗಳು, ಚುನಾವಣಾ ತಂತ್ರಗಳು ಕಳೆದ ಕೆಲವು ವರ್ಷಗಳಿಂದ ತೀರಾ ಹೆಚ್ಚಾಗಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬೆದರಿಕೆಯೊಡ್ಡುತ್ತಿರುವಂತೆ ಕಾಣುತ್ತಿರುವುದು ವಿಷಾದನೀಯ. ಈ ಬಾರಿಯಂತೂ ತಮ್ಮ ಹೆಸರಿನ, ಹುದ್ದೆಯ, ಪಕ್ಷದ, ಚುನಾವಣಾ ಪ್ರಕ್ರಿಯೆಯ, ಪ್ರಜಾಪ್ರಭುತ್ವ ವ್ಯವಸ್ಥೆಯ, ಕೊನೆಗೆ ಈ ದೇಶದ ಸಂವಿಧಾನದ ಘನತೆಯನ್ನೂ ಮರೆತವರಂತೆ ಜನಪ್ರತಿನಿಧಿಗಳಿಂದ ಚುನಾವಣಾ ಪ್ರಚಾರಗಳಲ್ಲಿ ಮಾತುಗಳು ಹರಿದುಬಂದವು. ಇದು ರಾಜಕೀಯ ಪಕ್ಷಗಳ ಕರಪತ್ರಗಳಂತೆ ಬದಲಾಗಿರುವ ಕೆಲ ಪತ್ರಿಕೆಗಳಿಗೂ, ವಕ್ತಾರರಂತೆ ಆಡುತ್ತಿರುವ ಕೆಲ ಸುದ್ದಿವಾಹಿನಿಗಳಿಗೂ ಅನ್ವಯವಾಗುವಂಥದ್ದು.

ಚುನಾವಣಾ ಪ್ರಚಾರ ಎಂದಾಗಲೆಲ್ಲಾ ನನಗೆ ನೆನಪಾಗುವುದು 1932ರಲ್ಲಿ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಅಮೆರಿಕಾದ ರಾಷ್ಟ್ರಾಧ್ಯಕ್ಷರ ಹುದ್ದೆಗೆ ಸ್ಪರ್ಧಿಸುತ್ತಿದ್ದಾಗ ನಡೆದ ಘಟನೆಗಳು. ಆಗ ರೂಸ್ವೆಲ್ಟ್ ರ ಚುನಾವಣಾ ಪ್ರಚಾರದ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದವರು ಜಿಮ್ ಫಾರ್ಲೆ ಎಂಬಾತ. ಡೆಮಾಕ್ರಟಿಕ್ ನ್ಯಾಷನಲ್ ಕಮಿಟಿಯ ಅಧ್ಯಕ್ಷರಾಗಿಯೂ, ಪೋಸ್ಟ್ ಮಾಸ್ಟರ್ ಜನರಲ್ ಆಫ್ ಯುನೈಟೆಡ್ ಸ್ಟೇಟ್ಸ್ ಆಗಿಯೂ ಹತ್ತಾರು ಆಯಕಟ್ಟಿನ ಹುದ್ದೆಗಳನ್ನು ನಿಭಾಯಿಸಿದ್ದ ಧುರೀಣ. ಖ್ಯಾತ ಲೇಖಕ ಡೇಲ್ ಕಾರ್ನಿಗಿ ಒಮ್ಮೆ ಫಾರ್ಲೆಯವರನ್ನು ಅವರ ಯಶಸ್ಸಿನ ಗುಟ್ಟಿನ ಬಗ್ಗೆ ಸಂದರ್ಶನವೊಂದರಲ್ಲಿ ಹೀಗೆ ಕೇಳಿದ್ದರಂತೆ: “ಮಿ. ಫಾರ್ಲೆ, ನನಗೆ ಗೊತ್ತಿರುವಂತೆ ನೀವು ಹತ್ತುಸಾವಿರ ಜನರನ್ನು ಅವರ ಮೊದಲ ಹೆಸರಿನಿಂದಲೇ ಕರೆಯಬಲ್ಲಿರಿ. ಹೌದಲ್ವೇ?” ಈ ಪ್ರಶ್ನೆಗೆ ಉತ್ತರಿಸುತ್ತಾ “ನೀವಂದಿದ್ದು ತಪ್ಪು. ನಾನು ಐವತ್ತು ಸಾವಿರ ಜನರನ್ನು ಅವರ ಮೊದಲ ಹೆಸರಿನಿಂದಲೇ ಕರೆಯಬಲ್ಲೆ” ಎಂದಿದ್ದರು ಫಾರ್ಲೆ. ಅಂತಹ ಚಾಣಾಕ್ಷ, ಮೇಧಾವಿ, ತೀಕ್ಷ್ಣಮತಿಯ ವ್ಯಕ್ತಿಯಾಗಿದ್ದರು ಜಿಮ್ ಫಾರ್ಲೆ. ಅಷ್ಟೊಂದು ಹೆಸರುಗಳನ್ನು ನೆನಪಿನಲ್ಲಿಡುವ ಸಾಮಥ್ರ್ಯ ಫಾರ್ಲೆಯವರಿಗೆ ಹೇಗೆ ಸಿದ್ಧಿಸಿತ್ತು ಎಂಬುದನ್ನು ಬರೆಯಹೋದರೆ ಅದೇ ಒಂದು ದೊಡ್ಡ ಲೇಖನವಾಗಬಹುದು. ಇರಲಿ, ಮತ್ತೆ ಚುನಾವಣಾ ಪ್ರಚಾರಕ್ಕೆ ಮರಳಿ ಬರೋಣ.

ರಾಷ್ಟ್ರಾಧ್ಯಕ್ಷರ ಚುನಾವಣೆಗೆ ಚುನಾವಣಾ ಪ್ರಚಾರವು ಶುರುವಾಗುವ ಹಲವು ತಿಂಗಳುಗಳ ಹಿಂದೆಯೇ ಅಮೆರಿಕಾದ ಪಶ್ಚಿಮ ಮತ್ತು ವಾಯುವ್ಯ ಭಾಗದ ಸ್ಟೇಟ್ ಗಳ ನಾಗರಿಕರಿಗೆ ಖುದ್ದು ಪತ್ರಗಳನ್ನು ಬರೆಯುತ್ತಿದ್ದರು ಫಾರ್ಲೆ. ಒಂದಲ್ಲ, ಎರಡಲ್ಲ, ದಿನವೊಂದಕ್ಕೆ ನೂರಾರು ಪತ್ರಗಳು. ನಂತರ ರೈಲು ಹತ್ತಿದ ಫಾರ್ಲೆ ಇಪ್ಪತ್ತು ದಿನಗಳಲ್ಲಿ ಬರೋಬ್ಬರಿ ಹತ್ತೊಂಭತ್ತು ಸ್ಟೇಟ್ ಗಳನ್ನು ತಲುಪಿ ರೂಸ್ವೆಲ್ಟ್ ಗಾಗಿ ಪ್ರಚಾರವನ್ನು ಮಾಡಿದ್ದರು. ಈ ದಿನಗಳಲ್ಲಿ ರೈಲು, ದೋಣಿಗಳನ್ನೂ ಒಳಗೊಂಡಂತೆ ಅವರು ಪ್ರಯಾಣಿಸಿದ ವಾಹನಗಳ ಬಗೆಗಳು ಹಲವು. ಪ್ರತೀ ಸ್ಟೇಟ್ ಗೂ ತೆರಳಿ ಅಲ್ಲಿಯ ನಾಗರಿಕರೊಂದಿಗೆ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟ ಇತ್ಯಾದಿಗಳನ್ನು ಜೊತೆಯಲ್ಲೇ ಕುಳಿತು ಸವಿಯುತ್ತಿದ್ದರು ಫಾರ್ಲೆ. ಹೀಗೆ ಬಹುತೇಕ ಪ್ರತೀ ಮನೆಗೂ ತೆರಳಿ ನಾಗರಿಕರೊಂದಿಗೆ ವೈಯಕ್ತಿಕವಾಗಿ ಚರ್ಚೆಗಳನ್ನು ನಡೆಸುವ ಉದ್ದೇಶವು ಅವರದ್ದಾಗಿತ್ತು.

ಇನ್ನು ಈ ಯಾತ್ರೆಗಳನ್ನು ಮುಗಿಸಿ ಮರಳಿ ಬಂದ ನಂತರ ತಾನು ಯಾರ್ಯಾರ ಮನೆಗೆ ತೆರಳಿದ್ದೆನೋ ಅವರೆಲ್ಲರಿಗೂ ಫಾರ್ಲೆ ಖುದ್ದಾಗಿ ಪತ್ರಗಳನ್ನು ಬರೆಯುತ್ತಿದ್ದರು. ಈ ಸಮಾಲೋಚನೆಗಳಲ್ಲಿ ಹೊರಗಿನಿಂದ ಬಂದವರೂ ಸೇರಿದ್ದರೆ ಅವರ ಹೆಸರು ಮತ್ತು ವಿಳಾಸಗಳನ್ನು ತರಿಸಿಕೊಂಡು ಅವರಿಗೂ ಪತ್ರಗಳನ್ನು ಬರೆಯಲಾಯಿತು. ಹೀಗೆ ಪಟ್ಟಿಯು ಉದ್ದಕ್ಕೆ ಬೆಳೆಯುತ್ತಾ ಸಾವಿರಗಟ್ಟಲೆ ಹೆಸರು ಮತ್ತು ವಿಳಾಸಗಳು ಅದರಲ್ಲಿ ಸೇರಿಕೊಂಡಿದ್ದವಂತೆ. ಅಷ್ಟಿದ್ದರೂ ‘ಡಿಯರ್ ಜೇಮ್ಸ್’, ‘ಡಿಯರ್ ಮೇರಿ’ ಎಂದು ಆಯಾ ಹೆಸರುಗಳನ್ನು ಸಂಬೋಧಿಸಿಯೇ ಪ್ರತಿಯೊಬ್ಬರಿಗೂ ಪತ್ರಗಳನ್ನು ಬರೆಯುತ್ತಿದ್ದರು ಫಾರ್ಲೆ. ‘ಜಿಮ್’ ಎಂಬ ಹಸ್ತಾಕ್ಷರವನ್ನು ಹೊಂದಿದ್ದ ಪ್ರತೀ ಪತ್ರವೂ ಆಯಾ ಮನೆಗಳಿಗೆ ತಲುಪಿದಾಗ ಸಹಜವಾಗಿಯೇ ಅಚ್ಚರಿ, ರೋಮಾಂಚನಗಳು ನಾಗರಿಕರಿಗೆ ಒಟ್ಟೊಟ್ಟಿಗೇ ಆಗಿದ್ದವು. ಫಾರ್ಲೆಯವರ ಈ ವಿಭಿನ್ನ ನಡೆಯು ಅಮೆರಿಕನ್ನರ ಮನಸ್ಸನ್ನು ತಟ್ಟಿದ್ದು ಸುಳ್ಳಲ್ಲ. ಇವೆಲ್ಲದರ ಫಲವೇ ನವೆಂಬರ್ 08, 1932ರಲ್ಲಿ ಹೊರಬಿದ್ದ ಚುನಾವಣಾ ಫಲಿತಾಂಶ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ತಮ್ಮ ಎದುರಾಳಿಯಾಗಿದ್ದ ಹರ್ಬರ್ಟ್ ಹೂವರ್ ರನ್ನು ಪರಾಭವಗೊಳಿಸಿ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಚುನಾವಣಾ ಪ್ರಚಾರಕ್ಕಾಗಿ ಇಂಥದ್ದೊಂದು ವಿಭಿನ್ನವಾದ ಸಕಾರಾತ್ಮಕ ಮನೋಭಾವವುಳ್ಳ ನಡೆಯನ್ನು ಬರೋಬ್ಬರಿ ಎಂಭತ್ತು ವರ್ಷಗಳ ಹಿಂದೆಯೇ ಹುಟ್ಟುಹಾಕಿದ್ದರು ಜಿಮ್ ಫಾರ್ಲೆ. ಆದರೆ ನಮ್ಮ ಚುನಾವಣೆಗಳಲ್ಲಿ ನಡೆಯುವ ಪ್ರಚಾರದ ಶೈಲಿಗಳನ್ನು ನೋಡುತ್ತಿದ್ದರೆ ಹೊಸತನದ ಎಲ್ಲಾ ಬಾಗಿಲುಗಳೂ ರಾಜಕೀಯ ಪಕ್ಷಗಳಿಗೆ ಮುಚ್ಚಿಹೋಗಿರುವಂತೆ ಕಾಣುತ್ತಿವೆ. ಹಾಗೆಂದು ನಮ್ಮಲ್ಲಿ ಪ್ರಯತ್ನಗಳು ಆಗಿಲ್ಲವೆಂದೂ ಹೇಳುವಂತಿಲ್ಲ. ಉದಾಹರಣೆಗೆ ಕೆಲವರ್ಷಗಳ ಹಿಂದೆ ಗ್ರಾಮವಾಸ್ತವ್ಯದ ಪರಿಕಲ್ಪನೆಯು ತಕ್ಕಮಟ್ಟಿಗೆ ಜನಪ್ರಿಯತೆಯನ್ನು ಪಡೆದಿತ್ತು. ‘ಇಂಡಿಯಾ ಶೈನಿಂಗ್’ ಕೊಂಚ ಸದ್ದು ಮಾಡಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವೊಂದು ಐಟಿ ಲೋಕಕ್ಕೆ ಲಗ್ಗೆ ಹಾಕಿ ಸಾಮಾಜಿಕ ಜಾಲತಾಣಗಳ ಜನ್ಮಜಾಲಾಡಿದ್ದೂ ಆಯಿತು. ಆದರೆ ಜನರಲ್ಲಿ ನಿಜಕ್ಕೂ ಒಂದೊಳ್ಳೆಯ ಆಶಾವಾದವನ್ನು ತರುವಂತಹ ಯಾವ ಘೋಷಣೆಗಳೂ ಅಷ್ಟಾಗಿ ಬರಲಿಲ್ಲ. ಆಗೊಮ್ಮೆ ಈಗೊಮ್ಮೆ ಅಚಾನಕ್ಕಾಗಿ ಬಂದರೂ ಹಲವು ಕಾರಣಗಳಿಂದಾಗಿ ತನ್ನ ಹೊಳಪನ್ನು ಉಳಿಸಿಕೊಳ್ಳಲು ಒಟ್ಟಾರೆಯಾಗಿ ವಿಫಲವಾದವು.

ಇಂದು ನಮ್ಮ ಹತ್ತು ಮತದಾರರಲ್ಲಿ ಇಬ್ಬರಾದರೂ ಪಕ್ಷವೊಂದರ ಪ್ರಣಾಳಿಕೆಯನ್ನು ಸಂಪೂರ್ಣವಾಗಿ ಓದಿದರೆ ಅದೇ ದೊಡ್ಡ ಮಾತು. ಪ್ರಾಸಬದ್ಧ ಘೋಷಣೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಶಗಳೂ ಒಬ್ಬರಿಂದೊಬ್ಬರು ನಕಲು ಹೊಡೆದಂತಿವೆ. ಬಡತನ, ನಿರುದ್ಯೋಗಗಳಂತಹ ಅಂಶಗಳು ಸ್ವಾತಂತ್ರ್ಯ ಸಿಕ್ಕಿ ಎಪ್ಪತ್ತು ವರ್ಷಗಳಾದರೂ ನಮ್ಮ ಚುನಾವಣೆಯ ಮುಖ್ಯ ಅಜೆಂಡಾಗಳಿಯೇ ಉಳಿದಿವೆ. ಹೊಸದಾಗಿ ಹೊರಬರುತ್ತಿರುವ ವೀಡಿಯೋಗಳು ಸಮಸ್ಯೆ-ಪರಿಹಾರಗಳ ಬಗ್ಗೆ ಮಾತನಾಡುವ ಬದಲು ಎದುರಾಳಿಗಳನ್ನು ಹಣಿಯಲೆಂದೇ ಚಿತ್ರೀಕರಿಸಿದಂತಿವೆ. ಭ್ರಷ್ಟಾಚಾರದ ಆರೋಪವನ್ನು ಹೊತ್ತಿರುವವರಿಗೆ ಹೋದ ಟಿಕೆಟ್ಟುಗಳು ಭ್ರಷ್ಟಾಚಾರದ ಚರ್ಚೆಗಳನ್ನೇ ಕ್ಷುಲ್ಲಕವಾಗಿಸಿವೆ. ಮತದಾರನಿಗೆ ಆಮಿಷವೊಡ್ಡುವ ಅದೇ ಹಳಸಲು ವಾಮಮಾರ್ಗದ ವಿಧಾನ ಈಗಲೂ ಚಾಲ್ತಿಯಲ್ಲಿದೆ. ಯಾವ ಬಗೆಯ ಜನಾದೇಶಕ್ಕೆ ರಾಜ್ಯವು ಈ ಬಾರಿ ತೆರೆದುಕೊಳ್ಳಲಿದೆ ಎಂಬ ಕುತೂಹಲವೊಂದನ್ನು ಬಿಟ್ಟರೆ ಮಿಕ್ಕಿರುವ ಬಹುತೇಕ ಎಲ್ಲವೂ ‘ಅದೇ ರಾಗ, ಅದೇ ತಾಳ’.

ಪ್ರಜಾಪ್ರಭುತ್ವವು ನಮಗೆ ನೀಡಿರುವ ಅಮೂಲ್ಯವಾದ ಹಕ್ಕು ಮತದಾನ. ಹೀಗಾಗಿ ದೂರುಗಳೇನೇ ಇದ್ದರೂ ಮತ ಹಾಕುವುದು ಮಾತ್ರ ಪ್ರತಿಯೊಬ್ಬನೂ ಜವಾಬ್ದಾರಿಯುತ ನಾಗರಿಕನಾಗಿ ಮಾಡಬೇಕಾಗಿರುವ ಕರ್ತವ್ಯವಲ್ಲದೆ ಇನ್ನೇನೂ ಇಲ್ಲ. “ಸೋಲು-ಗೆಲುವು ಯಾರದ್ದೇ ಆಗಿರಲಿ. ಚುನಾವಣಾ ಸಮಯವು ಮಾತ್ರ ಆಶಾವಾದಕ್ಕೆ ಮತ್ತು ಹೊಸ ಹೊಸ ಯೋಚನಾವಿಧಾನಗಳಿಗೆ, ಮಾರ್ಗಗಳಿಗೆ ಸಾಕ್ಷಿಯಾಗಬೇಕು” ಎನ್ನುತ್ತಾರೆ ಅಮೆರಿಕನ್ ಲೇಖಕರೂ, ರಾಜಕಾರಣಿಯೂ ಆಗಿರುವ ಗ್ಯಾರಿ ಜಾನ್ಸನ್. ಅಂಥದ್ದೊಂದು ಆಶಾವಾದ ಮತ್ತು ಹೊಸತನದ ತಲಾಶೆಯು ಎಲ್ಲರಂತೆ ನನ್ನದೂ ಕೂಡ.

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರು. ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 2 days ago No comment

  ಈ ಸಂಜೆಯೊಳಗೆ

    ಕವಿಸಾಲು       ಈ ಸಂಜೆಯೊಳಗೆ ಗರಿಗೆದರುತ್ತವೆ ಮೌನದಲ್ಲೆ ಗರಬಡಿದ ಮಾತುಗಳು ಹೊಸ ಬಟ್ಟೆಯ ತೊಟ್ಟ ಮಗುವಂತೆ ಸಮುದ್ರದ ದಂಡೆಯಲಿ ದೂರ ಉಳಿದ ಭಾವಗಳು ಅಲೆಗಳಾಗಿ ಬಂದು ಪಾದಮುಟ್ಟಿ ತಮಾಷೆ ಮಾಡುತವೆ ಆಪ್ತ ಗೆಳೆಯನಂತೆ ಗೂಡಿಗೆ ಹೊರಟ ಹಕ್ಕಿಗಳು ತಿರುಗಿ ನೋಡಿವೆ ಬರುವಾಗ ಏನೋ ತಂದಿದ್ದು ಮರೆತು ಬಂದನೋ ಎಂಬಂತೆ ಅಪ್ಪನಿಲ್ಲದ ಮಕ್ಕಳು ಕೂಲಿಗೆ ಹೋದ ತಾಯಿಯ ದಾರಿಯ ಕಣ್ಣು ಮಿಟುಕಿಸದೇ ನೋಡುತಿವೆ ಅರ್ಧದಲೇ ಮರೆತ ...

 • 5 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 6 days ago No comment

  ಹುಲ್ಲಿನ ಕಡ್ಡಿ

    ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

 • 2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 2 weeks ago No comment

  ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

    ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...


Editor's Wall

 • 15 August 2018
  5 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 09 August 2018
  2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 01 August 2018
  3 weeks ago No comment

  ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                      ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

 • 25 July 2018
  4 weeks ago No comment

  ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                      ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

 • 11 May 2018
  3 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...