Share

ಸ್ಪಷ್ಟ ನಿಲುವೇ ಇಲ್ಲದ ಜೆಡಿಎಸ್ ಲೆಕ್ಕಾಚಾರವೇನು?
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

ಜಾತ್ಯತೀತ ಜನತಾ ದಳ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ಜನತೆಯನ್ನು ಹೀಗೆ ಗೊಂದಲದಲ್ಲಿ ಇಡುವುದರಿಂದ ತನಗೆ ಲಾಭವಾಗುತ್ತದೆಯೆಂಬ ನಿರೀಕ್ಷೆಯನ್ನು ಅದು ಬಿಡಬೇಕಿದೆ.

 

ದ್ಯದ ಮಟ್ಟಿಗೆ ಕರ್ನಾಟಕದ ಜಾತ್ಯತೀತ ಜನತಾ ದಳದಷ್ಟು ಗೊಂದಲದಲ್ಲಿರುವ ಪಕ್ಷ ಇನ್ನೊಂದಿರುವಂತೆ ಕಾಣುತ್ತಿಲ್ಲ. ತನ್ನೆಲ್ಲ ರಾಜಕೀಯ ಮೇಲಾಟಗಳ ಹೊರತಾಗಿಯೂ ಕರ್ನಾಟಕದ ಜನತೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಹೊರತಾದ ಮೂರನೇ ಆಯ್ಕೆಯೊಂದನ್ನು ತನ್ನ ಮೂಲಕ ನೀಡಿದ್ದ ಜನತಾ ದಳದ ವರ್ತಮಾನದ ರಾಜಕೀಯ ನಡವಳಿಕೆಗಳಿಂದ ರಾಜ್ಯದ ಜನತೆಗೆ ಭ್ರಮನಿರಸನವಾಗಿದೆ. ದಿನದಿಂದ ದಿನಕ್ಕೆ ತಾನು ತೆಗೆದುಕೊಳ್ಳುತ್ತಿರುವ ನಿರ್ಣಯಗಳಿಂದ ಮತ್ತು ಗೊಂದಲಪೂರ್ಣ ನಡವಳಿಕೆಯಿಂದಾಗಿ ಅದು ಒಟ್ಟು ಜನತೆಯಲ್ಲಿ ಮಾತ್ರವಲ್ಲದೆ, ತನ್ನದೇ ಕಾರ್ಯಕರ್ತರ ಪಡೆಯಲ್ಲಿಯೂ ನಿರಾಸೆಯನ್ನುಂಟು ಮಾಡಿದೆ. ಜನತಾದಳದ ಈ ಗೊಂದಲಗಳು ಇವತ್ತಿನದೇನಲ್ಲ. 2006ರಲ್ಲಿ ಹೆಚ್ ಡಿ ಕುಮಾರಸ್ವಾಮಿಯವರು ರಾತ್ರೋರಾತ್ರಿ ಬಿಜೆಪಿ ಜೊತೆ ಸೇರಿ ಸರಕಾರ ರಚಿಸಿದ ದಿನ ಶುರುವಾದ ಅದರ ಗೊಂದಲಗಳನ್ನು ನಿವಾರಿಸಿಕೊಳ್ಳಲು ಈ ವರ್ಷಗಳಲ್ಲಿ ಅದು ಪ್ರಯತ್ನವನ್ನೇನೂ ಮಾಡಿದಂತಿಲ್ಲ.

ಇದೀಗ ಹಲವು ಚುನಾವಣಾ ಪೂರ್ವ ಸಮೀಕ್ಷೆಗಳ ವರದಿಗಳು ಹೊರಬಿದ್ದಿದ್ದು, ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸುಮಾರು ಇಪ್ಪತ್ತರಿಂದ ನಲವತ್ತರಷ್ಟು ಸ್ಥಾನಗಳನ್ನು ಪಡೆಯಲಿರುವ ಜನತಾ ದಳ ಕಿಂಗ್ ಮೇಕರ್ ಆಗುವುದು ಬಹುತೇಕ ಖಚಿತವಾದಂತಿದೆ. ಇಂತಹ ಸಂದರ್ಭದಲ್ಲಿ ಜನತಾದಳ ಯಾವ ರಾಷ್ಟ್ರೀಯ ಪಕ್ಷದೊಂದಿಗೆ ಮೈತ್ರಿಗೆ ಮನಸ್ಸು ಮಾಡಬಹುದೆಂಬುದೇ ಇವತ್ತಿನ ಅತ್ಯಂತ ತುರ್ತಾದ ಪ್ರಶ್ನೆಯಾಗಿದೆ.

ಮೊನ್ನೆ ಮಾಧ್ಯಮಗಳೊಂದಿಗೆ ಮಾತನಾಡಿರುವ ದೇವೇಗೌಡರು, ತಾವು ಯಾವುದೇ ಕಾರಣಕ್ಕೂ ಮತ್ತೊಮ್ಮೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ತಮ್ಮ ಪುತ್ರ ಕುಮಾರಸ್ವಾಮಿಯವರೇನಾದರೂ ಹಾಗೆ ಮಾಡಿದರೆ ಅವರ ಜೊತೆ ಸಂಬಂದ ಮುರಿದುಕೊಳ್ಳುವುದಾಗಿ ಕಡ್ಡಿ ತುಂಡುಮಾಡಿದಂತೆ ಹೇಳಿದ್ದಾರೆ. ನಂತರ ಕುಮಾರಸ್ವಾಮಿಯವರೂ ಇದನ್ನು ಅನುಮೋದಿಸಿದ್ದಾರೆ. ಈ ವಿಚಾರದಲ್ಲಿ ನಾವು ದೇವೇಗೌಡರ ಮಾತುಗಳನ್ನು ನಂಬಬಹುದಾದರೂ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂಬ ಮಾತನ್ನು ನಂಬಲು ಯಾವುದೇ ಕಾರಣಗಳಿಲ್ಲ. ಯಾಕೆಂದರೆ ಕಳೆದ ಐದು ವರ್ಷಗಳಿಂದ ಕುಮಾರಸ್ವಾಮಿಯವರು ರಾಜ್ಯದಲ್ಲಿ ತಮ್ಮ ಪಕ್ಷವನ್ನು ಮುನ್ನಡೆಸುತ್ತಿರುವ ರೀತಿಯನ್ನು, ಅವರ ಆದ್ಯತೆಗಳನ್ನು ನೋಡುತ್ತಾ ಹೋದರೆ ಈ ಮಾತು ಅರ್ಥವಾಗುತ್ತದೆ. ಇದಕ್ಕೆ ಕಾರಣ ಪಕ್ಷದ ರಾಷ್ಟ್ರಾದ್ಯಕ್ಷರಾದ ಮಾಜಿ ಪ್ರಧಾನಿ ದೇವೇಗೌಡರು ಅಪ್ಪಟ ಜಾತ್ಯತೀತವಾದಿಯಾಗಿ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅದರ ರಾಜ್ಯಾದ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜಾತ್ಯತೀತೆಯ ಯಾವುದೇ ತತ್ವಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ ಆಯಾ ಸಂದರ್ಭಕ್ಕನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ ಹೋಗುತ್ತಿರುವುದು ಜನತಾ ದಳದ ಮೂಲ ಆಶಯಗಳ ಬಗ್ಗೆಯೇ ಅನುಮಾನ ಹುಟ್ಟಿಸುತ್ತಿದೆ.

ಕರ್ನಾಟಕದ ಮತದಾರರ ಮಟ್ಟಿಗೆ ಕಾಂಗ್ರೆಸ್ ಮತ್ತು ಬಿಜೆಪಿ ತೀರಾ ಅನಿವಾರ್ಯ ಆಯ್ಕೇಯೇನೂ ಆಗಿಲ್ಲ. ಯಾಕೆಂದರೆ ಎಂಭತ್ತರ ದಶಕದಿಂದಲೂ ಜನತಾ ಪರಿವಾರ ಒಂದಲ್ಲ ಒಂದು ರೂಪದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಅಧಿಕಾರ ಹಿಡಿಯುತ್ತ, ಮುಖ್ಯ ವಿರೋಧ ಪಕ್ಷವಾಗಿಯೂ ಕಾರ್ಯನಿರ್ವಹಿಸುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ರಾಷ್ಟ್ರಮಟ್ಟದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲವಾದ ಪೈಪೋಟಿಯಿದ್ದು, ನೇರಾನೇರ ಹಣಾಹಣಿ ನಡೆಸಿದರೂ ಕರ್ನಾಟಕಕ್ಕೆ ಬಂದರೆ ತ್ರಿಕೋನ ಸ್ಪರ್ಧೆ ಎದುರಿಸುವ ಅನಿವಾರ್ಯತೆಯಿತ್ತು. ಇದಕ್ಕೆ ತಕ್ಕ ಹಾಗೆ ರಾಜ್ಯದ ಹಿತಾಸಕ್ತಿಗನುಗುಣವಾಗಿ ಕೆಲಸ ನಿರ್ವಹಿಸುತ್ತಿಲ್ಲವೆಂಬ ಆರೋಪವನ್ನು ರಾಷ್ಟ್ರೀಯ ಪಕ್ಷಗಳ ಮೇಲೆ ಮಾಡುತ್ತಲೇ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದ ಜನತಾ ಪರಿವಾರದ ದಿಗ್ಗಜರು ರಾಜ್ಯದ ಜನತೆಯ ಮಟ್ಟಿಗೆ ಆಯ್ಕೆಯ ಮೂರನೇ ಸಾಧ್ಯತೆಯನ್ನು ನೀಡಿದ್ದರು.

ಎಂಭತ್ತರ ದಶಕದಲ್ಲಿ ಕಾಂಗ್ರೆಸ್ಸಿನ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ರಾಷ್ಟ್ರಮಟ್ಟದಲ್ಲಿ ಅಸ್ತಿತ್ವಕ್ಕೆ ಬಂದ ಜನತಾಪಕ್ಷ ಕರ್ನಾಟಕದಲ್ಲಿಯೂ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು. ಆ ದಿನಗಳಲ್ಲಿ ಅದು ಆಗತಾನೇ ಹುಟ್ಟಿದ್ದ ಭಾರತೀಯ ಜನತಾಪಕ್ಷದ ಬೆಂಬಲವನ್ನು ಸಹ ಪಡೆದಿತ್ತು. ಆದರೆ ತೊಂಭತ್ತರ ದಶಕದಲ್ಲಾದ ಕೆಲ ಘಟನೆಗಳು ಜನತಾ ಪರಿವಾರದ ಆದ್ಯತೆಗಳನ್ನು ಬದಲಾಯಿಸಿದವು. ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅದ್ವಾನಿಯವರ ರಥಯಾತ್ರೆ, ಮಂಡಲ್ ವಿರೋಧಿ ಚಳುವಳಿ, ನಂತರ ನಡೆದ ಬಾಬರಿ ಮಸೀದಿ
ಧ್ವಂಸ ಪ್ರಕರಣಗಳು ಬಿಜೆಪಿ ಕೋಮುವಾದಿ ಪಕ್ಷವೆನ್ನುವುದನ್ನು ಸಾಬೀತುಪಡಿಸಿದವು. ಎಡಪಕ್ಷಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರಿಂದ ಮತ್ತು ಜನತಾ ಪರಿವಾರದ ಬಹುತೇಕ ನಾಯಕರು ಸಮಾಜವಾದಿ ಹಿನ್ನೆಲೆಯಿಂದ ಬಂದವರಾಗಿದ್ದರಿಂದ ಕಾಂಗ್ರೆಸ್ಸಿನ ಕುಟುಂಬ ರಾಜಕಾರಣಕ್ಕಿಂತ ಬಿಜೆಪಿಯ ಮತಾಂಧ ರಾಜಕಾರಣ ಹೆಚ್ಚು ಅಪಾಯಕಾರಿಯೆಂಬುದನ್ನು ಅರ್ಥ ಮಾಡಿಕೊಂಡ ಜನತಾ ಪರಿವಾರ ಬಿಜೆಪಿ ಮತ್ತು ಕಾಂಗ್ರೆಸ್ಸನ್ನು ಏಕಕಾಲಕ್ಕೆ ವಿರೋಧಿಸುತ್ತ ರಾಜಕಾರಣ ಮಾಡತೊಡಗಿತು. ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಎದ್ದು ನಿಂತ ಜನತಾ ಪರಿವಾರದ ತೃತೀಯ ರಂಗ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಶಕ್ತವಾದರೂ, ಅದು ಹೊರಗಿನಿಂದ ಕಾಂಗ್ರೆಸ್ ಬೆಂಬಲ ಪಡೆಯಲೇಬೇಕಾಗಿ ಬಂತು.

ತದನಂತರದ ದಿನಗಳಲ್ಲಿ ನಡೆದ ಚುನಾವಣೆಗಳು ಎರಡೂ ರಾಷ್ಟ್ರೀಯ ಪಕ್ಷಗಳನ್ನು ಮೈತ್ರಿ ರಾಜಕಾರಣದ ಅನಿವಾರ್ಯತೆಗೆ ಸಿಕ್ಕಿಸಿದವು. ಅದುವರೆಗೂ ತೃತೀಯ ರಂಗದಲ್ಲಿದ್ದ ಬಹುತೇಕ ಪಕ್ಷಗಳು ಪ್ರಾದೇಶಿಕವಾಗಿ ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಬಿಜೆಪಿ ಮತ್ತು ಕಾಂಗ್ರೆಸ್ಸಿನ ಜೊತೆ ಮೈತ್ರಿಗೆ ಮುಂದಾದವು. ಹೀಗಾಗಿ 1999ರ ಹೊತ್ತಿಗೆ ತೃತೀಯ ರಂಗದ ಬಹುತೇಕ ಪಕ್ಷಗಳು ಬಿಜೆಪಿ ನೇತೃತ್ವದ ಎನ್.ಡಿ.ಎ. ಮತ್ತು ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸೇರಿಕೊಂಡವು. ಆದರೆ ಕರ್ನಾಟಕದ ಮಟ್ಟಿಗೆ 2004ರ ತನಕ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾ ದಳ ತನ್ನ ಸ್ವತಂತ್ರ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದ್ದು, ನಂತರ ನಡೆದ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ರಚನೆಯಾದ ಹಿನ್ನೆಲೆಯಲ್ಲಿ, ಕೋಮುವಾದಿ ಬಿಜೆಪಿಯನ್ನು ಅಧಿಕಾದಿಂದ ದೂರವಿಡುವ ನೆಪದಲ್ಲಿ ಕಾಂಗ್ರೆಸ್ಸಿನ ಜೊತೆಗೂಡಿ ಮೈತ್ರಿ ಸರಕಾರ ರಚಿಸಿತು. ಅದಾದ ಇಪ್ಪತ್ತೇ ತಿಂಗಳಲ್ಲಿ ಕುಮಾರಸ್ವಾಮಿಯವರು ಗುಪ್ತವಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿ ತಾವು ಮುಖ್ಯಮಂತ್ರಿಯಾದರು. ತನ್ಮೂಲಕ ಕರ್ನಾಟಕದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರದ ರುಚಿ ತೋರಿಸಿದರು. ನಂತರ ನಡೆದ ವಚನ ಭ್ರಷ್ಟತೆಯ ನಾಟಕೀಯ ಬೆಳವಣಿಗೆಗಳಿಂದ ಬಿಜೆಪಿ ಸ್ವತಂತ್ರವಾಗಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯತು. 2013ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಅವತ್ತಿನಿಂದ ಪ್ರಾರಂಭವಾದ ಜನತಾ ದಳದ ರಾಜಕೀಯ ಗೊಂದಲಗಳು ಇನ್ನೂ ನಿಂತಂತೆ ಕಾಣುತ್ತಿಲ್ಲ. ಒಂದೆಡೆ ದೇವೇಗೌಡರು ಕೋಮುವಾದವನ್ನು ವಿರೋಧಿಸುವ ಮಾತಾಡುತ್ತಿದ್ದರೆ, 2014ರಲ್ಲಿ ರಾಮನಗರದಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿಯವರನ್ನು ಬೆಂಬಲಿಸಿದ ಬಿಜೆಪಿಯೊಂದಿಗೆ ಇವತ್ತಿಗೂ ಕುಮಾರಸ್ವಾಮಿಯವರು ಗೆಳೆತನ ಹೊಂದಿರುವುದು ಅವರದೇ ಶಾಸಕರ ಪಾಲಿಗೆ ಅರ್ಥವಾಗದ ವಿಚಾರವಾಗಿದೆ.

ಕಳೆದ ವರ್ಷ ನಡೆದ ಬಿಬಿಎಂಪಿ ಚುನಾವಣೆಯ ನಂತರ ಮೇಯರ್ ಹುದ್ದೆಯ ವಿಚಾರದಲ್ಲಿ ಜನತಾ ದಳದ ಶಾಸಕರು ಪಕ್ಷದ ವರಿಷ್ಠರನ್ನು ಒಪ್ಪಿಸಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಮೈತ್ರಿಗೆ ದೇವೇಗೌಡರ ಒಪ್ಪಿಗೆಯಿದ್ದಂತೆ ಕಂಡುಬಂದರೂ ಕುಮಾರಸ್ವಾಮಿಯವರಿಗಂತೂ ಇಷ್ಟವಿರಲಿಲ್ಲವೆಂಬುದು ಅವರ ಮಾತು, ನಡವಳಿಕೆಯಿಂದ ತಿಳಿಯಬಹುದಾಗಿದೆ. ನಂತರ ನಡೆದ ವಿಧಾನಪರಿಷತ್ತಿನ ಚುನಾವಣೆಯಲ್ಲೂ ಜನತಾ ದಳ ನಿಖರವಾದ ನಿಲುವನ್ನು ತಳೆಯದೆ ಕೆಲವು ಕಡೆ ಕಾಂಗ್ರೆಸ್ಸಿಗೆ, ಇನ್ನು ಕೆಲವೆಡೆ ಬಿಜೆಪಿಗೆ ಅನುಕೂಲವಾಗುವಂತೆ ನಡೆದುಕೊಂಡಿತು. ಅದರ ಇಂತಹ ದ್ವಂದ್ವನೀತಿ ಮೂರು ವರ್ಷಗಳ ಹಿಂದೆ ನಡೆದ ಜಿಲ್ಲಾ ಪಂಚಾಯಿತಿಗಳ ಚುನಾವಣೆಗಳಲ್ಲೂ ಸ್ಪಷ್ಟವಾಗಿ ಕಾಣಿಸಿಕೊಂಡಿತ್ತು.

ರಾಜ್ಯದ ಸುಮಾರು ಹತ್ತು ಜಿಲ್ಲೆಗಳ ಜಿಲ್ಲಾ ಪಂಚಾಯಿತಿಯ ಫಲಿತಾಂಶಗಳು ಅತಂತ್ರವಾಗಿವೆ. ಅಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ಹೋರಾಟ ನಡೆಸಲಿದ್ದು ಬಹುತೇಕ ಕಡೆ ಜನತಾ ದಳದ ಪಾತ್ರ ಪ್ರಮುಖವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನತಾ ದಳ ರಾಜ್ಯಮಟ್ಟದಲ್ಲಿ ಒಂದು ಬಲವಾದ ನಿಲುವನ್ನು ತಳೆದು ಯಾವುದಾದರೊಂದು ಪಕ್ಷಕ್ಕೆ ಬೆಂಬಲ ನೀಡುತ್ತದೆಯೋ ಇಲ್ಲ ಆಯಾ ಜಿಲ್ಲೆಗಳ ಮಟ್ಟದಲ್ಲಿ ತಮಗೆ ಪೂರಕವಾಗುವಂತಹ ಅನುಕೂಲಸಿಂಧು ನಿರ್ಧಾರವನ್ನು ತೆಗೆದುಕೊಳ್ಳುತ್ತದೆಯೊ ಎಂದು ನೋಡಿದರೆ ಅದು ಕೆಲವು ಜಿಲ್ಲೆಗಳಲ್ಲಿ ಬಿಜೆಪಿ ಜೊತೆ ಸೇರಿ ಅಧಿಕಾರದ ಗದ್ದುಗೆ ಏರಿದರೆ, ಇನ್ನು ಕೆಲವು ಕಡೆ ಕಾಂಗ್ರೆಸ್ ಜೊತೆ ಸೇರಿ ಅಧಿಕಾರ ಪಡೆದುಕೊಂಡಿತು. ಹೀಗೆ ತನ್ನ ಸ್ಥಳೀಯ ಕಾರ್ಯಕರ್ತರುಗಳ ಹಿತಾಸಕ್ತಿಯನ್ನು ಕಾಪಾಡುವ ಹೇಳಿಕೆ ನೀಡುತ್ತ ಎರಡೂ ರಾಷ್ಟ್ರೀಯ ಪಕ್ಷಗಳ ಜೊತೆ ಸರಸವಾಡುತ್ತಲೇ ಬಂರುತ್ತಿದೆ. ಈಹಿನ್ನಲೆಯಲ್ಲಿ ನೋಡಿದರೆ ಜನತಾ ದಳದ ಮುಂದಿನ ಭವಿಷ್ಯದ ದೃಷ್ಟಿಯಿಂದ ಈ ಚುನಾವಣೆಯಲ್ಲಿ ಅದು ತೆಗೆದುಕೊಳ್ಳುವ ನಿಲುವು ಬಹಳ ಮಹತ್ವಪೂರ್ಣವಾದದ್ದು.

ಇದೀಗ ವಿಶೇಷವಾದ ಬೆಳವಣಿಗೆಯೊಂದು ನಡೆದಿದ್ದು, ಮೊನ್ನೆ ರಾಜ್ಯಕ್ಕೆ ಭೇಟಿ ನೀಡಿದ ನರೇಂದ್ರ ಮೋದಿ ಮಾಜಿ ಪ್ರಧಾನಿ ದೇವೇಗೌಡರನ್ನು ಹಿಗ್ಗಾಮುಗ್ಗಾ ಹೊಗಳಿ ಪಲಿತಾಂಶಗಳ ನಂತರ ದಳ ಮತ್ತು ಬಿಜೆಪಿ ಮೈತ್ರಿಯ ಸೂಚನೆಗಳನ್ನು ನೀಡಿ ಹೋಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಗೌಡರು ಮೋದಿಯವರ ಹೊಗಳಿಕೆಯಲ್ಲಿ ಅಸಹಜವಾದ್ದೇನೂ ಇಲ್ಲ ಎಂದೂ ಹೇಳಿದ್ದಾರೆ. ಇದಾದ ಎರಡೇ ದಿನಕ್ಕೆ ಮತ್ತೆ ಮೋದಿಯವರು ಯಾವ ದೇವೇಗೌಡರನ್ನು ತಾವು ಹೊಗಳಿದ್ದರೊ ಅದೇ ಗೌಡರ ಪಕ್ಷ ಜನತಾದಳವನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ.

ಬಹುಶಃ ಇಲ್ಲಿ ಬಿಜೆಪಿ ಮತ್ತು ಜನತಾ ದಳಗಳ ನಡುವೆ ಕಣ್ಣಾಮುಚ್ಚಾಲೆಯ ಆಟವೊಂದು ನಡೆಯುತ್ತಿದ್ದು, ಮೈತ್ರಿಯ ಸೂಚನೆ ನೀಡುತ್ತ ಎರಡೂ ಪಕ್ಷಗಳಿಗೆ ಅನುಕೂಲವಾಗುವ ರೀತಿಯಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುತ್ತ ಕಾಂಗ್ರೆಸ್ಸನ್ನು ಸೋಲಿಸುವ ಪ್ರಯತ್ನ ಮಾಡುತ್ತಿವೆ. ಇನ್ನು ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟಿರುವ ದಳದ ನಾಯಕರುಗಳು ಆಗಾಗ ಬಿಜೆಪಿ ಜೊತೆಗಿನ ಮೈತ್ರಿಯನ್ನು ನಿರಾಕರಿಸುತ್ತ ಆ ಸಮುದಾಯವನ್ನು ಕಾಂಗ್ರೆಸ್ಸಿನಿಂದ ದೂರವಿಡಲು ಯತ್ನಿಸುವುದು ಸಹ ನಡೆಯುತ್ತಿದೆ. ಇಂತಹ ಸಂಕೀರ್ಣ ಸಂದರ್ಭದಲ್ಲಿ ತಾವು ಎರಡೂ ರಾಷ್ಟ್ರೀಯ ಪಕ್ಷಗಳಿಂದ ಸಮಾನ ಅಂತರ ಕಾಯ್ದುಕೊಳ್ಳುವ ಮಾತನಾಡುವ ಕುಮಾರಸ್ವಾಮಿ, ಅತಂತ್ರ ವಿದಾನಸಭೆ ರಚನೆಯಾದರೆ ಏನು ಮಾಡುತ್ತೀರಿ? ಎಂಬ ಪ್ರಶ್ನೆಗೆ ನೇರ ಉತ್ತರ ನೀಡದೆ ನಾವೇ ಬಹುಮತ ಪಡೆದು ಸರಕಾರ ರಚಿಸುತ್ತೇವೆಂಬ ಹಾರಿಕೆಯ ಉತ್ತರ ನೀಡುತ್ತಾರೆ.

ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸೇತರ ವೇದಿಕೆಯೊಂದರ ಬಗ್ಗೆ ಗಟ್ಟಿಯಾಗಿ ಮಾತನಾಡುವ ಗೌಡರು ರಾಜ್ಯದ ವಿಷಯಕ್ಕೆ ಬಂದರೆ ಮಾತ್ರ ಮೆಲುದನಿಯಲ್ಲಿ ಮಾತನಾಡುವುದರ ಹಿಂದಿರುವ ಕಾರಣಗಳನ್ನು ಸ್ವತಃ ಅವರೇ ಹೇಳಬೇಕಾಗುತ್ತದೆ. ಕಾಂಗ್ರೆಸ್ ಈ ಹಿಂದಿನಿಂದಲೂ ಜನತಾ ದಳವನ್ನು ಮುಗಿಸಲು ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸುವ ಜನತಾ ದಳದ ನಾಯಕರುಗಳ ಮಾತಿನಲ್ಲಿ ಒಂದಿಷ್ಟು ಸತ್ಯವಿರುವುದು ನಿಜವಾದರೂ, ತಮ್ಮನ್ನು ಆಕರ್ಷಿಸುತ್ತಿರುವ ಬಿಜೆಪಿ ಬಗ್ಗೆಯೂ ಅವರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಯಾಕೆಂದರೆ ಕಾಂಗ್ರೆಸ್ಸಾದರೂ ಒಂದಿಷ್ಟು ಶಾಸಕರುಗಳನ್ನು ತನ್ನತ್ತ ಸೆಳೆದು ದಳವನ್ನು ದುರ್ಬಲಗೊಳಿಸಿರಬಹುದು. ಆದರೆ ಜನತಾ ದಳದೊಂದಿಗೆ ಮೈತ್ರಿ ಸಾಧ್ಯವಾದಲ್ಲಿ ಬಿಜೆಪಿ ನಿಧಾನವಾಗಿ ಇಡೀ ಜನತಾ ದಳವನ್ನೇ ದುರ್ಬಲಗೊಳಿಸುವ ಸಾಧ್ಯತೆ ಇದೆ. ರಾಷ್ಟ್ರದ ಇತರೆ ರಾಜ್ಯಗಳಲ್ಲಿ ಆಗಿರುವ ಇಂತಹ ಹಲವು ವಿದ್ಯಮಾನಗಳನ್ನು ದಳದ ನಾಯಕರುಗಳು ಗಂಭೀರವಾಗಿ ನೋಡಬೇಕಿದೆ. ಮಹಾರಾಷ್ಟ್ರದಲ್ಲಿ ತನಗೆ ಅವಕಾಶ ನೀಡಿ ಬೆಳೆಸಿದ ಶಿವಸೇನೆಯನ್ನೇ ಇವತ್ತು ಬಿಜೆಪಿ ನಗಣ್ಯವಾಗಿಸಿದೆ. ಇನ್ನು ಆಂದ್ರಪದೇಶದಲ್ಲಿ ದಶಕಗಳಿಂದ ತನಗೆ ಬೆಂಬಲ ನೀಡುತ್ತಾ ಬಂದಿದ್ದ ತೆಲುಗು ದೇಶಂ ಅನ್ನು ಇವತ್ತು ಹತಾಶೆಯ ಸ್ಥಿತಿಗೆ ತಂದು ನಿಲ್ಲಿಸಿದೆ. ಅದೇ ರೀತಿ ಒಡಿಸ್ಸಾದಲ್ಲಿ ಬಿಜು ಜನತಾ ದಳವನ್ನು ಮುಗಿಸಲು ಹೋಗಿ ಅದರಲ್ಲಿ ಸೋತು ನವೀನ್ ಪಟ್ನಾಯಕ್ ಅವರಿಂದ ದೂರಬಂದು ನಿಂತಿದೆ. ಹೀಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮುನ್ನ ದಳದ ನಾಯಕರುಗಳು ಸಾವಿರ ಸಾರಿ ಯೋಚಿಸಬೇಕಾದ ಅಗತ್ಯವಿದೆ.

ಚುನಾವಣೆಗಿನ್ನು ಕೇವಲ ಎಂಟು ದಿನಗಳು ಮಾತ್ರ ಬಾಕಿ ಉಳಿದಿದ್ದು, ಅಷ್ಟರೊಳಗೆ ಜಾತ್ಯತೀತ ಜನತಾ ದಳ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ಜನತೆಯನ್ನು ಹೀಗೆ ಗೊಂದಲದಲ್ಲಿ ಇಡುವುದರಿಂದ ತನಗೆ ಲಾಭವಾಗುತ್ತದೆಯೆಂಬ ನಿರೀಕ್ಷೆಯನ್ನು ಅದು ಬಿಡಬೇಕಿದೆ. ದಳದ ಈ ಗೊಂದಲಗಳು ಅದನ್ನು ಜನರಿಂದ ದೂರ ಮಾಡಿ ನಕಾರಾತ್ಮಕ ಪರಿಣಾಮ ಬೀರುವ ಸಾದ್ಯತೆ ಇದೆ. ಅದು ತೆಗೆದುಕೊಳ್ಳಬಹುದಾದ ಸ್ಪಷ್ಟ ನಿಲುವು ಮಾತ್ರ ಅದಕ್ಕೆ ಧನಾತ್ಮಕ ಪರಿಣಾಮಗಳನ್ನು ನೀಡುತ್ತದೆ ಎನ್ನುವುದು ನಿಶ್ಚಿತ.

ಜನತಾ ದಳದ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ನಾಯಕರುಗಳು ಸಮಾಧಾನವಾಗಿ ಕೂತು ಈ ಬಗ್ಗೆ ಚರ್ಚಿಸಿ ಒಂದು ಸ್ಪಷ್ಟ ಸಂದೇಶವನ್ನು ಜನರಿಗೆ ತಲುಪಿಸಬೇಕಿದೆ. ಇದು ಜನತಾದಳದ ಭವಿಷ್ಯದ ದೃಷ್ಟಿಯಿಂದ ಮಾತ್ರವಲ್ಲದೆ, ಕರ್ನಾಟಕದ ಭವಿಷ್ಯದ ದೃಷ್ಟಿಯಿಂದಲೂ ಅತ್ಯಂತ ಮಹತ್ವಪೂರ್ಣವಾದ ವಿಷಯವೆಂಬುದನ್ನು ಜನತಾದಳದ ನಾಯಕರು ಮನಗಾಣಬೇಕಾಗಿದೆ.

Share

Leave a comment

Your email address will not be published. Required fields are marked *

Recent Posts More

 • 2 days ago No comment

  ಈ ಸಂಜೆಯೊಳಗೆ

    ಕವಿಸಾಲು       ಈ ಸಂಜೆಯೊಳಗೆ ಗರಿಗೆದರುತ್ತವೆ ಮೌನದಲ್ಲೆ ಗರಬಡಿದ ಮಾತುಗಳು ಹೊಸ ಬಟ್ಟೆಯ ತೊಟ್ಟ ಮಗುವಂತೆ ಸಮುದ್ರದ ದಂಡೆಯಲಿ ದೂರ ಉಳಿದ ಭಾವಗಳು ಅಲೆಗಳಾಗಿ ಬಂದು ಪಾದಮುಟ್ಟಿ ತಮಾಷೆ ಮಾಡುತವೆ ಆಪ್ತ ಗೆಳೆಯನಂತೆ ಗೂಡಿಗೆ ಹೊರಟ ಹಕ್ಕಿಗಳು ತಿರುಗಿ ನೋಡಿವೆ ಬರುವಾಗ ಏನೋ ತಂದಿದ್ದು ಮರೆತು ಬಂದನೋ ಎಂಬಂತೆ ಅಪ್ಪನಿಲ್ಲದ ಮಕ್ಕಳು ಕೂಲಿಗೆ ಹೋದ ತಾಯಿಯ ದಾರಿಯ ಕಣ್ಣು ಮಿಟುಕಿಸದೇ ನೋಡುತಿವೆ ಅರ್ಧದಲೇ ಮರೆತ ...

 • 5 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 6 days ago No comment

  ಹುಲ್ಲಿನ ಕಡ್ಡಿ

    ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

 • 2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 2 weeks ago No comment

  ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

    ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...


Editor's Wall

 • 15 August 2018
  5 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 09 August 2018
  2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 01 August 2018
  3 weeks ago No comment

  ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                      ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

 • 25 July 2018
  4 weeks ago No comment

  ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                      ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

 • 11 May 2018
  3 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...