Share

ಸವಿತಾ ನಾಗಭೂಷಣ ಪ್ರವಾಸ ಕಥನ | 30, ಜನವರಿ ಮಾರ್ಗದಲ್ಲಿ…

 

ಪ್ರವಾಸಿ ಸವಿತಾ ಕಂಡ ಇಂಡಿಯಾ

 

 

 

ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ಸಂಚಿಕೆಯಿಂದ ‘ಹೊಸ ಮನುಷ್ಯ’ ಎಂದು ಪುನರ್ನಾಮಕರಣಗೊಂಡಿತು) 2011ರ ಸೆಪ್ಟಂಬರಿನಿಂದ 2012ರ ಆಗಸ್ಟ್ ಸಂಚಿಕೆಗಳವರೆಗೆ ಧಾರಾವಾಹಿಯಾಗಿ ಪ್ರಕಟವಾಗಿತ್ತು.

-ಸವಿತಾ ನಾಗಭೂಷಣ, ಶಿವಮೊಗ್ಗ

 

ಭಾಗ – 5

ಪ್ರಶಾಂತಿಯೇ ಮೈವೆತ್ತಂತೆ ಇದ್ದ ದೆಹಲಿಯ ಬಿರ್ಲಾ ಮಂದಿರದಲ್ಲಿ ಕಲ್ಲು ಬೆಂಚಿನ ಮೇಲೆ ಕುಳಿತು, ಇದ್ದರೆ ಊರಿಗೊಂದು ಇಂತಹ ವಿಶಾಲವಾದ ಗಾಳಿ ಬೆಳಕಿರುವ ದೇಗುಲವಿದ್ದರೆ ಎಷ್ಟು ಚೆಂದ ಎಂದುಕೊಂಡೆನು. ದೀಪವಿಲ್ಲ, ಧೂಪವಿಲ್ಲ, ಶಂಖ ಜಾಗಟೆಗಳಿಲ್ಲ. ಸರ್ವಶಕ್ತನ ಮುಂದೆ ಅವನ ಪ್ರೀತಿಪಾತ್ರ ಭಕ್ತ ಮಾತ್ರ… ಶಾಂತಿಯೇ ದೇವರಾಗಿ ಅಲ್ಲಿ ನೆಲೆಸಿದಂತಿತ್ತು. ಬೆಳ್ಳಂಬೆಳಿಗ್ಗೆಯಾದ್ದರಿಂದ ದೇವರನ್ನು ಭೇಟಿಯಾಗಲು ಬರುವ ಭಕ್ತರ ಸಂಖ್ಯೆ ವಿರಳವಾಗಿತ್ತು. ನನ್ನ ಸಹಯಾತ್ರಿಗಳು ಒಬ್ಬೊಬ್ಬರೇ ಬಂದು ಅಲ್ಲಿದ್ದ ನೂರಾರು ದೇವರುಗಳನ್ನು ಭೆಟ್ಟಿಯಾಗುವುದು ನಿರಂತರವಾಗಿ ನಡೆದೇ ಇತ್ತು. ಸೊಂಟ ಹಿಡಿದಿದೆಯೆಂದೋ, ಮಂಡಿನೋವು ಎಂದೋ ಒಂದು ಹೆಜ್ಜೆ ಮುಂದಿಡಲೂ ಸಾಧ್ಯವಿಲ್ಲ ಎಂದು ರಾತ್ರಿ ಗೋಳಾಡುತ್ತಿದ್ದವರೆಲ್ಲ ನಡುಗುವ ಚಳಿಯಲ್ಲಿ ಶುಚಿರ್ಭೂತರಾಗಿ ಬಂದು ದೇವರ ಮುಂದೆ ಪ್ರಾರ್ಥನೆಗೈಯುತ್ತಿದ್ದುದು ನನ್ನಲ್ಲಿ ಸೋಜಿಗ ಉಂಟುಮಾಡಿತ್ತು. ಎಲ್ಲಿಂದಲೋ ಇದ್ದಕ್ಕಿದ್ದಂತೆ ಪ್ರತ್ಯಕ್ಷನಾದ ನನ್ನ ಸಹಯಾತ್ರಿಯೊಬ್ಬ ‘ಕನ್ನಡಿ ದೇವರ ನೋಡಬನ್ನಿ!’ ಎಂದು ಸ್ವಲ್ಪ ಒತ್ತಾಯಪೂರ್ವಕವಾಗಿಯೇ ದೇಗುಲದ ಮೂಲೆಯಲ್ಲಿದ್ದ ಕೊಠಡಿಯೊಂದಕ್ಕೆ ಕರೆದೊಯ್ದು ಅಲ್ಲಿ ಕನ್ನಡಿಯಲ್ಲಿ ಮೂಡುತ್ತಿದ್ದ ಸಾವಿರ ಸಾವಿರ ದೇವರುಗಳ ಪ್ರತಿಬಿಂಬಗಳನ್ನು ತೋರಿಸಿದ. ‘ಏನು ವಿಚಿತ್ರವಪ್ಪ… ತಲೆ ಅಂದ್ರೆ ತಲೆ! ದೇವರೊಬ್ಬನೇ ಆದರೂ ಎಷ್ಟೊಂದು ಸಾವಿರ ಮುಖಗಳು!’ ಎಂದು ಕನ್ನಡಿ ದೇವರನ್ನು ಸೃಷ್ಟಿಸಿದ ಕರ್ತೃವಿನ ಸೃಜನಶೀಲತೆಯನ್ನು ಶ್ಲಾಘಿಸಿದ. ಅವನ ಸಂತೋಷದಲ್ಲಿ ನಾನೂ ಭಾಗಿಯಾಗಿ, ‘ಇದನ್ನ ತಪ್ಪಿಸ್ಕೋತಾ ಇದ್ದೆ. ಈ ವಿಶ್ವರೂಪ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದ!’ ಎಂದು ಹೇಳಿದೆ. ‘ಎಲ್ಲೋ ಮೂಲೆಯಲ್ಲಿ ಇರುವುದರಿಂದ ಇದು ಇರುವುದೇ ಗೊತ್ತಾಗುವುದಿಲ್ಲ. ಎಲ್ಲರಿಗೂ ಹೇಳಿ, ನಾನೂ ಹೇಳುವೆ’ ಎಂದು ನನ್ನ ಕಲ್ಲು ಬೆಂಚಿಗೆ ಮರಳಿದೆ.

ಇಡೀ ವಿಶ್ವದಲ್ಲಿ ದೇವರ ರಾಜ್ಯವೆಂಬುದು ಇರುವುದಾದರೆ ಅದು ಭಾರತದಲ್ಲಿಯೇ ಇರಬೇಕು! ಈ ದೇಶದಲ್ಲಿ ಏನಿಲ್ಲವೆಂದರೂ ಪ್ರತಿಯೊಬ್ಬನಿಗೂ ಒಬ್ಬ ದೇವರಂತೂ ಇದ್ದೇ ಇರುವನು. ಕೆಲವರಿಗೆ ಐದು-ಆರು, ಅದಕ್ಕಿಂತ ಹೆಚ್ಚು ದೇವರುಗಳು… ಕಲ್ಲಿನ ಮುಂದೆ ತಲೆಬಾಗುವ, ನೀರಿನಲ್ಲಿ ಮುಳುಗುವ, ಕೋತಿಯಲ್ಲೂ ದೇವರ ರೂಪ ಕಾಣುವ…ಸಾವಿರ ಜಾತಿ, ನೂರು ಭಾಷೆ, ಲಕ್ಷ ಆಶೆ… ಈ ದೇಶವನ್ನು ದೇವರಲ್ಲದೆ ಮನುಷ್ಯ ಆಳಲು ಅಸಾಧ್ಯ ಎಂದೆನಿಸಿತು. ಈ ದೇಶದ ಜನರನ್ನು ಒಡೆಯಲೂ ಸಾಧ್ಯವಿಲ್ಲ, ಒಂದುಗೂಡಿಸಲೂ ಸಾಧ್ಯವಿಲ್ಲ. ಬಹುಶಃ ಜಗತ್ತಿನಲ್ಲೇ ಈ ನನ್ನ ಭಾರತ ವಿಶಿಷ್ಟ ದೇಶವಿರಬೇಕು ಎಂದೆನ್ನಿಸಿ ನಕ್ಕೆನು.

ಹೀಗೆ ನಾನು ದೇವರ ರಾಜ್ಯದಲ್ಲಿ ವಿಹರಿಸುತ್ತಿರುವಾಗ ‘ಬಸ್ ಹೊರಟಿದೆ ಬನ್ನಿ’ ಎಂಬ ಕರೆ ಬಂತು. ಸತ್ಯ-ಅಹಿಂಸೆಯೇ ದೇವರೆಂದು ನಂಬಿದ್ದ, ದೇವರಲ್ಲಿ ಅಪಾರ-ಶ್ರದ್ಧೆ-ಪ್ರೀತಿ ಉಳ್ಳವರಾಗಿ ಪ್ರಾರ್ಥನೆಗೆ ತೆರಳುತ್ತಿದ್ದ ಸಮಯದಲ್ಲೇ ಮತಾಂಧ ದೇಶಭಕ್ತನೊಬ್ಬನ ಗುಂಡೇಟಿಗೆ ಈಡಾಗಿ ‘ಹೇ ರಾಮ್!’ ಎನ್ನುತ್ತಲೇ ನೆಲಕ್ಕೊರಗಿದ ತೀಸ್ ಜನವರಿ ಮಾರ್ಗದೆಡೆಗೆ ನಮ್ಮ ಬಸ್ ಸಾಗಿತ್ತು. ನಾವೆಲ್ಲ ಬಸ್ಸಿಂದ ಇಳಿದು, ಗಾಂಧಿ ಭಕ್ತಿಯಿಂದ ಮುಕ್ತಿಯೆಡೆಗೆ ಸಾಗಿದ ಹಾದಿಯಲ್ಲೇ, ಅಲ್ಲಿ ಕಲ್ಲಿನಲ್ಲಿ ಮೂಡಿಸಿದ್ದ ಹೆಜ್ಜೆಗಳ ಜೊತೆ ಹೆಜ್ಜೆ ಹಾಕುತ್ತಾ ‘ಹೇರಾಮ್’ ಸ್ಮಾರಕದೆಡೆಗೆ ಸಾಗಿ ಶ್ರದ್ಧಾಂಜಲಿ ಅರ್ಪಿಸಿದೆವು. ಗಿಡ-ಮರ-ಹೂವು-ಬಳ್ಳಿ-ಹಸಿರು ಹುಲ್ಲುಹಾಸು, ನಡುನಡುವೆ ತೂಗಿಬಿಟ್ಟ ಬಿಳಿ ಹಲಗೆಗಳ ಮೇಲೆ ಗಾಂಧೀಜಿಯ ಅಮರ ವಾಕ್ಯಗಳು. ಅಕ್ಷರ ಬಾರದ ನನ್ನ ಸಹಯಾತ್ರಿಯೊಬ್ಬಳಿಗೆ ಈ ಕೆಲವು ನುಡಿಮುತ್ತುಗಳನ್ನು ನಾನು ಓದಿ ಹೇಳಿದೆನು: ‘ಭಗವಂತನ ಪ್ರತ್ಯಕ್ಷ ದರ್ಶನದ ಹಂಬಲ ನನ್ನದು. ನನ್ನ ಪಾಲಿಗೆ ಭಗವಂತನನ್ನು ಕಾಣಲು ಇರುವ ಒಂದೇ ಒಂದು ನಿಶ್ಚಿತ ಮಾರ್ಗವೆಂದರೆ, ಅಹಿಂಸೆ-ಪ್ರೇಮ’, ‘ಯಾರೋ ಇನ್ನೊಬ್ಬರು ಸಾಮಾಜಿಕ ಸುಧಾರಣೆಯನ್ನು ಆರಂಭ ಮಾಡಲಿಲ್ಲವೆಂದು, ಇಡೀ ಸಮಾಜ ಪರಿವರ್ತನೆಗೆ ಸಿದ್ಧವಾಗುವವರೆಗೂ ಕಾಯಬೇಕೆಂಬ ವಾದ ಸಲ್ಲದು. ಧೀರ ವ್ಯಕ್ತಿಗಳು ಅಮಾನವೀಯ ಪದ್ಧತಿಗಳನ್ನು ಅಥವಾ ಆಚಾರಗಳನ್ನು ಉಲ್ಲಂಘಿಸಿದ ಹೊರತು ಎಂದೂ ಯಾವ ಸುಧಾರಣೆಯೂ ಕಾರ್ಯರೂಪಕ್ಕೆ ಬರದು’ ಒಂದೊಂದನ್ನೇ ಓದುತ್ತಾ ಓದುತ್ತಾ ನಾನು ಮುಂದೆ ಸಾಗಿ ಗಾಂಧೀಜಿ ಕೊನೆ ದಿನಗಳು ಕಳೆದ (ಬಿರ್ಲಾ)ಅತಿಥಿಗೃಹಕ್ಕೆ ಬಂದೆನು. ಅವರು ಬಳಸುತ್ತಿದ್ದ ವಸ್ತುಗಳು- ಕನ್ನಡಕ, ಕೋಲು, ಚರಕ, ಗಡಿಯಾರ, ಲೇಖನಿ, ನೀರಿನ ದಾನಿ, ಕರವಸ್ತ್ರ, ನೂಲಿನುಂಡೆ, ಹಸ್ತಾಕ್ಷರವಿದ್ದ ಹೊತ್ತಿಗೆ ನೋಡುತ್ತಾ, ನೋಡುತ್ತಾ, ಪುಟ್ಟ ದೇಹದೊಳಗೆ ಬಂದಿಯಾದ ಜೀವ ‘ಹೇರಾಮ್’ ಎನ್ನುತ್ತಾ ಹಾರಿ ಹೋಗುವಾಗ ಎಷ್ಟು ಸಂತಸಪಟ್ಟಿದೆಯೋ ಅಂದುಕೊಳ್ಳುತ್ತಾ ಆ ಜಾಗೆಯನ್ನು ಬಿಟ್ಟು ಬರಲು ಮನಸ್ಸಿಲ್ಲದವಳಾಗಿ ಅಲ್ಲೇ ನಿಂತಿರಲು ನಮ್ಮ ಪ್ರವಾಸಿ ಬಸ್ಸು ನನ್ನನ್ನೂ, ನನ್ನೊಂದಿಗಿದ್ದ ಇನ್ನೋರ್ವ ಸಹಯಾತ್ರಿಯನ್ನೂ ಅಲ್ಲೇ ಬಿಟ್ಟು ಮುಂದೆ ಸಾಗಿತ್ತು! ಬೇರೆ ದಾರಿ ಇಲ್ಲದೆ ನಾನು ಮತ್ತು ನನ್ನ ಸಹಯಾತ್ರಿ ಆಟೋ ಮಾಡಿಕೊಂಡು ನಮ್ಮ ಪ್ರವಾಸದ ಮುಂದಿನ ನಿಲುಗಡೆಯಾಗಿದ್ದ ಇಂದಿರಾ ಗಾಂಧಿ ಸ್ಮಾರಕದ ಹತ್ತಿರ ಅವರನ್ನು ಸೇರಿಕೊಂಡೆವು.

ನಮ್ಮನ್ನು ಸ್ವಲ್ಪ ಗಾಬರಿಯಿಂದಲೇ ಸ್ವಾಗತಿಸಿದ ನಮ್ಮ ಸಹಯಾತ್ರಿಕರಿಗೆ ನಾವು ಬಸ್ ಮರೆತು ಏನೆಲ್ಲ ನೋಡಿದೆವು ಎಂದು ಬಣ್ಣಿಸಿದಾಗ ಅವರು ‘ಅಯ್ಯೋ ನಾವು ಗಾಂಧಿ ಸ್ಮಾರಕ-ಮ್ಯೂಸಿಯಂ ಏನನ್ನೂ ನೋಡಲಿಲ್ಲ. ಈ ಟೂರ್ ಮ್ಯಾನೇಜರ್ ಅವಸರಿಸಿ ಬಸ್ಸು ಹತ್ತಿಸಿದ’ ಎಂದು ಹಲುಬಿದರು. ‘ದೇಗುಲಗಳಲ್ಲಿ ಗಂಟೆಗಟ್ಟಲೆ ನಮ್ಮನ್ನು ಕೊಳೆ ಹಾಕುವಿರಿ. ದೇವರಂಥ ಮನುಷ್ಯ ಬಾಳಿದ ಜಾಗ ನೋಡಲು ಹದಿನೈದು ನಿಮಿಷ ಮಾತ್ರ ನೀಡುವಿರಿ. ಇದು ನ್ಯಾಯವೇ?’ ಎಂದು ಟೂರ್ ಮ್ಯನೇಜರ್ ನನ್ನು ನಾವು ಕೇಳಲು, ಆತ ‘ಸೆಕ್ಯೂರಿಟಿ ಕಾಟ ಮೇಡಂ. ಅಲ್ಲಿ ಬಸ್ ಪಾರ್ಕಿಂಗ್ ಇಲ್ಲ…’ ಎಂದು ನಮಗೆ ಅರ್ಥವಾಗದ ಏನೇನೋ ಸಬೂಬುಗಳನ್ನು ಹೇಳತೊಡಗಿದ.

ಗಾಂಧಿಯ ತತ್ವಗಳಿಗೆ ತಿಲಾಂಜಲಿ ಇತ್ತು, ಗಾಂಧಿ ಬದುಕಿದ್ದಾಗಲೇ ಅವರನ್ನು ಮೂಲೆಗುಂಪು ಮಾಡಿದ್ದ ಮಂದಿಯ ಸಂತತಿ ಈಗಲೂ ನಿರಾಳವಾಗಿ ಮುಂದುವರೆದುದರಿಂದಲೇ ಈ ಉಪೇಕ್ಷೆ, ಔದಾಸೀನ್ಯವೇನೋ ಎಂದು ನಾನು ನೊಂದೆನು. ಗಾಂಧಿಯ ಸಮಕ್ಷಮದಲ್ಲಿ ನಿಂತ ನನ್ನನ್ನು ಮತ್ತು ನನ್ನ ಸಹಯಾತ್ರಿಯನ್ನು ತ್ಯಜಿಸಿ ಬಸ್ ಹೊರಟುಹೋದದ್ದು, ಕೇವಲ ಆಕಸ್ಮಿಕವಾಗಿದ್ದಿರಲಾರದು ಎಂದೂ ಮನದ ಮೂಲೆಯಲ್ಲೊಂದು ಶಂಕೆ ಮೂಡಿತು.

Share

Leave a comment

Your email address will not be published. Required fields are marked *

Recent Posts More

 • 15 hours ago No comment

  ಕ್ರೈಸ್ತರ ಪ್ರಾರ್ಥನಾ ಅಭಿಯಾನದ ಕರೆಯ ಸುತ್ತಮುತ್ತ

      ಪ್ರಸ್ತಾಪ     ಹುಸಿ ರಾಷ್ಟ್ರ ಭಕ್ತಿಯಲ್ಲಿ ಆರ್ಭಟಿಸುವ ಹಿಂದುತ್ವದ ಸ್ವಘೋಷಿತ ವಾರಸುದಾರರು ಮಾತೆತ್ತಿದರೆ ಕ್ರೈಸ್ತರನ್ನು ಈ ದೇಶದವರಲ್ಲ, ಅವರನ್ನು ದೇಶದಿಂದ ಒದ್ದೋಡಿಸಬೇಕು ಎನ್ನುವಂತೆ ವರ್ತಿಸುತ್ತಾರೆ. ಆದರೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹೀಗೆ ಪ್ರತಿ ರಾಷ್ಟ್ರೀಯ ಹಬ್ಬಗಳನ್ನೂ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿ ಆಚರಿಸಿಯೇ ಧಾರ್ಮಿಕ ಚಟುವಟಿಕೆಯನ್ನು ಶುರುಮಾಡುವ ಕ್ರೈಸ್ತರಿಂದ ಕಲಿಯುವುದು ಬೇಕಾದಷ್ಟಿದೆ. ಆಸ್ಪತ್ರೆ, ಶಿಕ್ಷಣ, ಸಮಾಜ ಸುಧಾರಣೆಯ ಕಾರ್ಯಗಳಲ್ಲಿ ಕ್ರೈಸ್ತ ಸಂಸ್ಥೆಗಳು ಮಾಡುವ ಸೇವೆಯನ್ನು ...

 • 16 hours ago No comment

  ಚಿತ್ರದಲ್ಲಿನ ಹೆಂಗಸು

    ಕವಿಸಾಲು               ತಲೆಮಾರುಗಳ ಸ್ಥಿರತೆ ಕಮಾನ ಬಿಲ್ಲಿನಂತೆ ಬಾಗಿದ ಹುಬ್ಬುಗಳಲಿ ತೂಗಿ ಕಂದು ಕಣ್ಣುಗಳ ಆಳದಲ್ಲೆಲ್ಲೋ ಅಡಗಿದ ಇನಿತಿನಿತು ಬಾಲ್ಯದ ಭಯಗಳ ನಡುವೆ ಇಣುಕುವ ವಿನಯದಿ ವಿಧೇಯ ಹೆಂಗಸಿದ್ದಾಳೆ, ಆಳಲ್ಲ ಬಾಯೆಂಬ ಬಾಯಿ ಅಚ್ಚುಕಟ್ಟಾಗಿ ಪಳಗಿ ಸರಿಯೆಂಬುದ ದಿಟ್ಟವಾಗಿ ಅರುಹಿ ಉದ್ದುದ್ದ ಭಾಷಣಗಳ ಕಟ್ಟಿಟ್ಟು ತೂಗಿ ಬಿಡಿಸಲಾಗದ ಒಗಟಿನ ಜೀವನ ಸೌಂದರ್ಯವ ಆಸ್ವಾದಿಸುವಲ್ಲಿ ಜೀವಂತವಿದ್ದಾಳೆ, ಕಳೆಯಿಲ್ಲ ಶಿರವೆಂಬ ಶಿಖರವ ...

 • 7 days ago No comment

  ಕೊನಾರ್ಕ್ ‘ಕಾಲ ದೇಗುಲ’

    ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ ...

 • 1 week ago No comment

  ಅಳಿದುಳಿದ ಊರಿನ ಹೂದೋಟದೊಳಗೆ

    ಕವಿಸಾಲು       ಯಾವ ಕತ್ತಿಯೂ ಕತ್ತರಿಸದಿರಲಿ! ಹಗಲು ಸೂರ್ಯನ ಬಿಸಿಲ ಕುಣಿಕೆ ಬಿಗಿಬಿಗಿ ಉರಿಯುವ ನಿಗಿನಿಗಿ ಕೆಂಡ ಭಸ್ಮವಾಗಿಬಿಡುವ ಭಯದ ಕಂಪನ ಬಿಸಿಯುಸಿರೂ ಧಗೆಯಾಗಿ ಅರಳಿದ ಮಲ್ಲೆಹೂಗಳು ಸುಟ್ಟು ಕರಕಲಾಗಿ ರಕ್ಕಸ ಗಣಕೊ ಭಾರೀ ಭೋಜನದೌತಣ ಭವಿಷ್ಯದ ಕಂದಮ್ಮಗಳ ಕತ್ತು ಹಿಚುಕಿ ಭ್ರೂಣಗಳ ಕಲೆಸಿಹಾಕಿ ಕಟ್ಟಬಯಸಿದ ಭವ್ಯ ಸೌಧಗಳ ಬುನಾದಿಗಳಡಿಯಲ್ಲಿ ಅಸ್ಥಿಪಂಜರಗಳ ರಾಶಿ ಒರೆಯಲ್ಲವಿತ ಕತ್ತಿಗಳು ಬಯಲಿಗೆ ಬಂದು ಒಳಕೋಣೆಯ ಸಂಚುಗಳು ಹೊಂಚುಹಾಕಿ ಕೊಲ್ಲುವ ...

 • 2 weeks ago No comment

  ಕಾದಂಬಿನಿ ಕಾಲಂ | ಜಾನೂ ಎಂದು ಕರೆಯುತ್ತೇನೆ!

                    ನಾನು ಸಾಹಿತಿಯಾಗುವ ಕನಸನ್ನು ಕಣ್ಣಿಗೆ ಮೆತ್ತಿಕೊಂಡು ಬೆಳೆದವಳಲ್ಲ. ಜಗತ್ತಿನೊಡನೆ ಒಡನಾಡುವಾಗ ನನ್ನೊಳಗೆ ನಡೆಯುವ ಯುದ್ಧವನ್ನು ಅಭಿವ್ಯಕ್ತಿಸಲು ಬರಹ ಅನಿವಾರ್ಯವಾಗಿತ್ತಷ್ಟೇ!   ಬಾಲ್ಯದಲ್ಲಿ ಪ್ರಾಣಿ ಪಕ್ಷಿ, ಮಕ್ಕಳ ಅಥವಾ ಕಾರ್ಟೂನು ಚಿತ್ರಗಳು ಊರಿನ ಸಿನೆಮಾ ಟೆಂಟಿಗೆ ಬಂದಾಗ ಶಿಕ್ಷಕರು ವಿದ್ಯಾರ್ಥಿಗಳನ್ನು ಕರೆದೊಯ್ದು ಕಡಿಮೆ ದುಡ್ಡಿನಲ್ಲಿ ಸಿನೆಮಾ ತೋರಿಸುತ್ತಿದ್ದರು. ಇಲ್ಲವೇ ರಜೆಯಲ್ಲಿ ನನ್ನ ಮಾಮನ ಥಿಯೇಟರಿನಲ್ಲಿ ಅಂಥ ಸಿನೆಮಾ ...


Editor's Wall

 • 11 May 2018
  2 weeks ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

 • 10 May 2018
  2 weeks ago No comment

  ಒಂದು ಪುಸ್ತಕ; ವಾರವಿಡೀ ಬಿಡುಗಡೆ!

  ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

 • 03 May 2018
  3 weeks ago No comment

  ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                    ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

 • 30 April 2018
  4 weeks ago No comment

  ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

  ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

 • 28 April 2018
  4 weeks ago No comment

  ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

  ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...