Share

ಸವಿತಾ ನಾಗಭೂಷಣ ಪ್ರವಾಸ ಕಥನ | ದೇವರೆಂಬ ಆಟಿಕೆ, ಪಂಡಾಗಳ ಪುಂಡಾಟಿಕೆ…

 

ಪ್ರವಾಸಿ ಸವಿತಾ ಕಂಡ ಇಂಡಿಯಾ

 

 

 

ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ಸಂಚಿಕೆಯಿಂದ ‘ಹೊಸ ಮನುಷ್ಯ’ ಎಂದು ಪುನರ್ನಾಮಕರಣಗೊಂಡಿತು) 2011ರ ಸೆಪ್ಟಂಬರಿನಿಂದ 2012ರ ಆಗಸ್ಟ್ ಸಂಚಿಕೆಗಳವರೆಗೆ ಧಾರಾವಾಹಿಯಾಗಿ ಪ್ರಕಟವಾಗಿತ್ತು.

-ಸವಿತಾ ನಾಗಭೂಷಣ, ಶಿವಮೊಗ್ಗ

ಭಾಗ-6

ನಾವು ಜಗನ್ನಾಥನ ಆವಾಸ ಸ್ಥಾನವಾದ ಪುರಿಯಲ್ಲಿದ್ದೆವು. ಒಡಿಸ್ಸಾದ ಪುರಿ ತನ್ನ ರಥಯಾತ್ರೆಯಿಂದ ಜಗತ್ಪ್ರಸಿದ್ಧಿ ಪಡೆದಿದೆ. ಲಕ್ಷಾಂತರ ಭಕ್ತರು ಸೇರುವ ಈ ರಥಯಾತ್ರೆಯಲ್ಲಿ ನೂಕುನುಗ್ಗಲಿನಿಂದ ಹಲವಾರು ಬಾರಿ ಮರಣ ಕೂಡ ಸಂಭವಿಸಿರುವುದುಂಟು. ಹಿಂದೂಗಳು ಅದರಲ್ಲೂ ವೈಷ್ಣವ ಮತಾನುಯಾಯಿಗಳು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ಕ್ಷೇತ್ರವನ್ನು ಸಂದರ್ಶಿಸಿ ಪಾವನರಾಗಬೇಕೆಂದು ಹಂಬಲಿಸುವ ಯಾತ್ರಾ ಕ್ಷೇತ್ರವಿದು. ಹಾಗೇ ಇದು ಆದಿವಾಸಿ, ಬೌದ್ಧ, ಜೈನ, ಶಾಕ್ತ ಹೀಗೆ ಹತ್ತು ಹಲವು ಧರ್ಮಗಳನ್ನು ಅನುಸರಿಸುವ ಜನರು ನಡೆದುಕೊಳ್ಳುವ ಮಿಸಳಭಾಜಿ ಕ್ಷೇತ್ರವೂ ಹೌದು.

ಈಗಿರುವ ಜಗನ್ನಾಥ ದೇವಾಲಯ ಹನ್ನೊಂದನೇ ಶತಮಾನದಲ್ಲಿ ಅನಂತವರ್ಮ ಚೋದಗಂಗದೇವ ಜೀರ್ಣೋದ್ಧಾರ ಮಾಡಿದುದು ಎಂದು ಇತಿಹಾಸ ಹೇಳುತ್ತದೆ. ತೀರಾ ತೀರಾ ಹಿಂದಕ್ಕೆ ಹೋದರೆ, ಆದಿವಾಸಿಗಳು ಪೂಜಿಸುತ್ತಿದ್ದ ನೀಲಮಾಧವನ ಕ್ಷೇತ್ರವಿದೆಂದು ಹೇಳಲಾಗುತ್ತದೆ. ಈ ಸೀಮೆಯ ಬೆಟ್ಟಗಳು ನೀಲಿ. ಸಮುದ್ರವೂ ನೀಲಿ ಎಂಬುದನ್ನು ಇಲ್ಲಿ ಗಮನಿಸಬಹುದು. ವಿಶ್ವವಸು ಎಂಬ ಬುಡಕಟ್ಟು ದೊರೆಯ ಮನೆದೇವರೇ ಈ ನೀಲಮಾಧವನಂತೆ. ಕಾಡಿನ ಗುಹೆಯೊಂದರಲ್ಲಿದ್ದ ಇವನ ನೆಲೆಯನ್ನು ಬಲ್ಲಾತ ವಿಶ್ವವಸು ಒಬ್ಬನೇ. ಆ ಪ್ರಾಂತ್ಯದ ದೊರೆ ಇಂದ್ರದ್ಯುಮ್ನ ನೀಲಮಾಧವನ ಮಹಾಮಹಿಮೆಯನ್ನು ಕೇಳಿ ಆತನ ನೆಲೆಯನ್ನು ಹುಡುಕಲು ಯತ್ನಿಸಿ ಸಿಗದೆ ಹತಾಶನಾಗುವನು. ಕೊನೆಗೆ ಹರಸಾಹಸ ಮಾಡಿ ನೆಲೆ ತಲುಪಲು ಸಾಧ್ಯವಾದರೂ ನೀಲಮಾಧವ ಅವನ ಕಣ್ಣಿಗೆ ಕಾಣಿಸದೆ ಮರೆಯಾಗುವನು. ಆದರೆ ಛಲ ಬಿಡದೆ ನಿರಂತರ ತಪಗೈಯ್ಯಲು ಕನಸಿನಲ್ಲಿ ಜಗನ್ನಾಥನ ರೂಪಿನಲ್ಲಿ ದರುಶನ ನೀಡುವನು. ಅಂತೆಯೇ ಆ ಜಗನ್ನಾಥನ ಅಭಿಲಾಷೆಯಂತೆ ಸುವಾಸನೆ ಸೂಸುವ ಕಟ್ಟಿಗೆಯಿಂದ ಮಾಡಿದ ಮೂರು ಮೂರುತಿಗಳನ್ನು ಅಲ್ಲಿ ಪ್ರತಿಷ್ಠಾಪಿಸುವನು.

ಈ ಅಂತೆ ಕಂತೆ ಪುರಾಣವನ್ನು ಮೆಲುಕು ಹಾಕುತ್ತಾ ನಾವು ಜಗನ್ನಾಥ ಪುರಿ ದೇಗುಲದ ಮುಂದೆ ಜಮಾಯಿಸಿದೆವು. ಆವರೆಗಿನ ಪ್ರವಾಸದಲ್ಲಿ ಸುತ್ತಿ ಸುತ್ತಿ ಪಾದಗಳು ಬಳಲಿ ಬಿರುಕು ಬಿಟ್ಟು ನೋಯಲು ತೊಡಗಿದ್ದರಿಂದ ನಾನು ಕಾಲುಚೀಲಗಳನ್ನು ತೊಟ್ಟುಕೊಂಡೇ ದೇಗುಲವನ್ನು ಪ್ರವೇಶಿಸಿದೆನು. ಅದಕ್ಕಾಗಿ ಪ್ರವೇಶ ದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿಯ ಅನುಮತಿಯನ್ನೂ ಪಡೆದೆನು. ಭರತ ವರ್ಷದ ಉತ್ಕರ್ಷ, ಸಂಘರ್ಷ, ಪತನ ಇವಕ್ಕೆ ಸಾಕ್ಷಿಯಂತೆ ಜಗನ್ನಾಥ ಪುರಿಯ ಈ ಭವ್ಯ ದೇವಾಲಯ ಕಂಡಿತು. ‘ಅಲ್ಲಿ ಮೊದಲು ಇದ್ದದ್ದು ಬುದ್ಧ ಕಣಮ್ಮ! ವೈದಿಕರು ಬಹಳ ಕ್ಷೇತ್ರಗಳಂತೆ ಈ ಕ್ಷೇತ್ರವನ್ನೂ ಎತ್ತಿ ಹಾಕಿಕೊಂಡು ಜಗನ್ನಾಥನನ್ನ ಕೂರಿಸಿಕೊಂಡವರೆ!’ ಎಂದು ‘ಮಾಡಿ ಮಡಿದವರು’ ಸಿನಿಮಾ ಖ್ಯಾತಿಯ ಬುದ್ಧಾನುಯಾಯಿ ಗುರು ಕೆ.ಎಂ.ಶಂಕರಪ್ಪನವರು ಯಾವಾಗಲೂ ತಮ್ಮ ಯಾವುದೋ ಪುರಾತನ ಆಸ್ತಿ ಕಳಕೊಂಡವರಂತೆ ಗೋಳಾಡುತ್ತಿದ್ದುದರಿಂದ ನಾನೂ ಗೂಢಚಾರಳಂತೆ ಬುದ್ಧನ ಕುರುಹುಗಳಿಗಾಗಿ ದೇವಾಲಯದ ಮೂಲೆಮುಡುಕಗಳನ್ನು ತಡಕಾಡಿದೆನು! ಹಾಗೆ ತಡಕಾಡುವ ಅಗತ್ಯವೇನೂ ಇರಲಿಲ್ಲ. ಒಡಿಸ್ಸಾದ ಈ ಭವ್ಯ ದೇಗುಲ ಮನೋಹರವಾದುದು ಎಂಬುದರಲ್ಲಿ ಎರಡು ಮಾತಿಲ್ಲ. ಅದರ ವಾಸ್ತು ನಿಸ್ಸಂದೇಹವಾಗಿ ಅತ್ಯಂತ ಪ್ರಾಚೀನ ಬೌದ್ಧ ಶೈಲಿಯದು ಎಂಬುದು ಎದ್ದು ಕಾಣುತ್ತದೆ. ಒಂದು ಕಾಲದಲ್ಲಿ ಇದು ಬೌದ್ಧ ವಿಹಾರವಾಗಿತ್ತೆಂದೂ, ವಿಕಾರಗೊಂಡ ತಾಂತ್ರಿಕ ಆಚರಣೆಗಳ ಕಾರಣದಿಂದಾಗಿ ಅವನತಿಗೊಂಡಿತೆಂದೂ ವಿವೇಕಾನಂದರೂ ಹೇಳುತ್ತಾರೆ. ಈಗ ಈ ಜಾಗೆಯಲ್ಲಿ ಬಲರಾಮ, ಸುಭದ್ರ, ಕೃಷ್ಣರ ಮರದ ಗೊಂಬೆಗಳು ರಾರಾಜಿಸುತ್ತಿವೆ.

ನಾವು ದೇಗುಲ ಪ್ರವೇಶಿಸುತ್ತಿದ್ದ ಸಮಯ ಈ ದೇವರುಗಳು ಊಟ ಮಾಡುವ ಸಮಯವಾಗಿತ್ತು. ಹಾಗಾಗಿ ನಾವು ಕೆಲಹೊತ್ತು ದೇಗುಲದ ಪ್ರವೇಶದ್ವಾರದಲ್ಲಿ ಕಾಯಬೇಕಾಯಿತು. ದೊಡ್ಡ ದೊಡ್ಡ ಗುಡಾಣಗಳಂತಹ ಹೊಟ್ಟೆ ಹೊತ್ತ ಪುರೋಹಿತರು ನೈವೇದ್ಯದ ಮಡಕೆಗಳನ್ನು ಹೊತ್ತು ಗಲ್ ಗಲ್ಲೆಂದು ಗೆಜ್ಜೆ ಸದ್ದು ಮಾಡುತ್ತಾ (ಎದುರಿಗೆ ಯಾರೂ ಸಿಕ್ಕಬಾರದೆಂದು) ಬುಡಬುಡನೆ ಓಡುತ್ತಿದ್ದುದು ನೋಡಲು ಮೋಜೆನಿಸುತ್ತಿತ್ತು. ಬಿಸಿ ಬಿಸಿ ಅನ್ನ ಮತ್ತು ದಾಲ್ ದೇವರಿಗೆ ಸಮರ್ಪಣೆಯಾದ ನಂತರ ಪ್ರಸಾದವಾಗಿ ಹೊರಗೆ ಮಾರಲ್ಪಡುತ್ತಿತ್ತು. ಅದಕ್ಕಾಗಿಯೇ ಈ ಬುಡುಬುಡು ಓಟ ಎಂದು ಆಮೇಲೆ ನಮಗೆ ತಿಳಿಯಿತು! ದೇಗುಲದ ಗರ್ಭಗುಡಿಯ ಆವರಣವನ್ನು ಪ್ರವೇಶಿಸುವಾಗ ಪಂಡಾಗಳು (ಬ್ರಾಹ್ಮಣ ಪೂಜಾರಿಗಳು) ನಮ್ಮನ್ನು ಅಡ್ಡಹಾಕಿ ತಲೆಯ ಮೇಲೆ ಬಿದಿರು ಕೋಲಿನಿಂದ ಬಡಿದು ದಕ್ಷಿಣೆ ಕೊಡುವಂತೆ ಒತ್ತಾಯಿಸಿದರು. ನಾವಾರೂ ಅವರಿಗೆ ಸೊಪ್ಪು ಹಾಕದೆ, ‘ನೀನು ಕೊಟ್ಟ ಏಟಿಗೆ ನೋಟು ಬೇರೆ ಕೊಡಬೇಕಾ?’ ಎಂದು ಕನ್ನಡದಲ್ಲಿ ಛೇಡಿಸಿ ಅವರನ್ನು ತಳ್ಳಿಕೊಂಡೇ ಮುಂದೆ ಸಾಗಿದೆವು. ನವಿಲುಗರಿಯ ಕೃಷ್ಣನನ್ನು ನೋಡಿ ಅಭ್ಯಾಸ ಮಾಡಿಕೊಂಡಿದ್ದ ನಾವು ಮಾಟ-ಮಂತ್ರದ ಗೊಂಬೆಗಳಂತೆ ತೋರುತ್ತಿದ್ದ ದೇವರ ಮೂರ್ತಿಗಳನ್ನು ನೋಡಿ ಗಾಬರಿಯಾದೆವು. ಬುಡಕಟ್ಟಿನ ದೇವರುಗಳಂತಿದ್ದ ಆ ಗೊಂಬೆಗಳಿಗೆ ನಮಸ್ಕರಿಸಿದೆವಾದರೂ, ಇದೆಂತಹ ದೇವರಪ್ಪಾ ಎಂಬ ಬೆರಗಂತೂ ಉಂಟಾಯಿತು.

ಸುಮಾರು ನಾಲ್ಕು ಲಕ್ಷ ಚದರಡಿಗಳ ವ್ಯಾಪ್ತಿಯುಳ್ಳ ಈ ಬೃಹತ್ ದೇಗುಲ-ಸಂಕೀರ್ಣವನ್ನು ಸುತ್ತಿ ಬಂದಾಗ ಒಂದೆಡೆ ಒಬ್ಬ ಪಂಡಾ ನಿರಾಸೆಯೇ ಮೈವೆತ್ತಂತೆ ಕೂತಿದ್ದ ನಾಲ್ವರು ವಿಧವೆಯರಿಗೆ ಅಧ್ಯಾತ್ಮ ಬೋಧಿಸುತ್ತಿರುವುದು ಕಣ್ಣಿಗೆ ಬಿತ್ತು. ಪಕ್ಕದಲ್ಲೇ ನೊಣಗಳಿಂದ ಮುತ್ತಿದ್ದ ಪ್ರಸಾದವನ್ನು ತಿನ್ನುತ್ತಾ ಕುಳಿತಿದ್ದ ಭಕ್ತರ ದಂಡೊಂದನ್ನು ನೋಡಿ ಭಕ್ತಿಯ ಪರಾಕಾಷ್ಠೆ ಈ ಮಟ್ಟವನ್ನೂ ಮುಟ್ಟಬಲ್ಲದೇ ಎಂದು ಮೂಕವಿಸ್ಮಿತೆನಾದೆನು. ದೇಗುಲದ ಒಳಗೆ ಹೊರಗೆ ಸುತ್ತ-ಮುತ್ತ ಕೊಳಕು ಎಷ್ಟಿತ್ತೆಂದರೆ, ನನಗೆ ಜಿಗುಪ್ಸೆಯಾಗಿ ತಕ್ಷಣ ಹೊರಹೋಗಬೇಕೆನ್ನಿಸಿತು. ಇದರ ಮಧ್ಯೆ ಮದಿಸಿದ ಆನೆಗಳಂತೆ ಭಯ ಹುಟ್ಟಿಸುವಂತೆ ಓಡಾಡುವ ಪಂಡಾಗಳು! ಅಂತೂ ಸಾವರಿಸಿಕೊಂಡು ದೇವಾಲಯದ ಹೊರ ಬಾಗಿಲಿನ ಹತ್ತಿರ ಬರಲು ಪಂಡಾನೊಬ್ಬ ಎದುರಾಗಿ, ‘ಇನ್ನು ಎರಡೇ ಹೆಜ್ಜೆ ಬಾಗಿಲು ಅಲ್ಲೇ ಇದೆ…’ ಎಂದು ಎಷ್ಟು ಹೇಳಿದರೂ ಅವನು ‘ಸಾಧ್ಯವೇ ಇಲ್ಲ! ದೇವಾಲಯದ ಕಾನೂನಿನ ಪ್ರಕಾರ ಬರಿಗಾಲಲ್ಲೇ ಬರಬೇಕು’ ಎಂದು ಕಾಲುಚೀಲ ಬಿಚ್ಚಲು ಒತ್ತಾಯಿಸಿದ.

ಬಿಸಿಲಿಗೆ, ಬೆವರಿಗೆ ಕಾಲುಚೀಲುಗಳು ಕಾಲಿಗೆ ಅಂಟಿಕೊಂಡಿದ್ದರಿಂದ ನಾನು ಎಷ್ಟೇ ಎಳೆದರೂ, ಅವು ಪಾದಗಳನ್ನು ಬಿಡಲು ನಿರಾಕರಿಸಿದ್ದರಿಂದ ಅಲ್ಲೇ ಇದ್ದ ಇನ್ನೊಬ್ಬ ಪಂಡಾ ‘ಬಿಡು ಮಾರಾಯಾ… ಎರಡು ಹೆಜ್ಜೆಯಲ್ಲವೇ!’ ಎಂದು ಸಹಾನುಭೂತಿ ತೋರಿದರೂ ಆ ಪಂಡಾ ‘ಸಾಧ್ಯವೇ ಇಲ್ಲ…… ದೇಗುಲದ ಕಾನೂನು ಮುರಿಯುವ ಹಾಗಿಲ್ಲ!’ ಎಂದು ಬಂಡೆಯಂತೆ ಅಡ್ಡಗಟ್ಟಿ ನಿಂತ. ರೋಸಿಹೋದ ನಾನು ‘ಇವು ನನ್ನ ಪಾದಗಳು ಬಿಡುತ್ತಿಲ್ಲ… ನೀನೇ ಈ ಕಾಲುಚೀಲಗಳನ್ನು ಎಳೆದು ತೆಗೆ’ ಎಂದೆ. ಕೊನೆಗೆ ನಾನೇ ಹಾಗೂ ಹೀಗೂ ಅವನ್ನು ಎಳೆದಾಡಿ ತೆಗೆದು, ಗಾಯಗೊಂಡ ಪಾದಗಳನ್ನು ಬಿಸಲಿನಿಂದ ಕಾದ ನೆಲದ ಮೇಲೆ ಎಳೆದುಕೊಂಡು ಹೋಗಿ ಬಾಗಿಲು ದಾಟಿದ ಮೇಲೆ ಅವನತ್ತ ಹಿಂತಿರುಗಿ ನೋಡಿ ‘ಈಗ ನಿನಗೆ ಸಮಾಧಾನವಾಯಿತೇ?’ ಎಂದು ಕೇಳಿದೆ. ಅವನು ಬಂಡೆಯಂತೆ ನಿರ್ಭಾವದಿಂದ ನಿಂತಿದ್ದನಷ್ಟೆ. ಕರ್ಮಠತೆ ಎಂದರೆ ಇದಲ್ಲವೇ ಎಂದುಕೊಂಡು ಮನಸ್ಸು ದುಗುಡದಿಂದ ತುಂಬಿತು. ಇದನ್ನೆಲ್ಲ ನೋಡುತ್ತಿದ್ದ ನಮ್ಮ ಸಹಯಾತ್ರಿಯೊಬ್ಬ ‘ಭಾರಿ ಸೊಕ್ಕಿಬಿಟ್ಟವರೆ! ದೇವರನ್ನೂ ಹೆದ್ರಿಸಿ ಇಟ್ಕೊಂಡವರೆ… ನಮ್ಮ ಕಡೆ ಇಂತ ಜನ ಹುಡುಕಿದ್ರೂ ಸಿಗಾಕಿಲ್ಲ ಒಳ್ಳೆ ರೌಡಿಗಳಿದ್ದಂಗವ್ರೆ… ಪ್ರಸಾದದ ಅನ್ನ ಬೇಳೆ ತಿಂದು ಕೊಬ್ಬವರೆ!’ ಎಂದು ಗೊಣಗುತ್ತಾ ಅವನತ್ತ ದುರುದುರು ನೋಡಿದ. ಏನುಪಯೋಗ? ಅವರಿಗೆ ಇಂತವರೆಷ್ಟು ಜನವೋ! ನಾನು ಕಾಲುಚೀಲಗಳನ್ನು ಮತ್ತೆ ತೊಟ್ಟುಕೊಳ್ಳುತ್ತಾ ಈ ಜಿಗುಪ್ಸೆಕರ ಕ್ಷೇತ್ರಕ್ಕೆ ಬಂದಿದ್ದಕ್ಕೆ ತಕ್ಕ ಶಾಸ್ತಿಯಾಯಿತು ಎಂದು ಮನದಲ್ಲೇ ಅಂದುಕೊಂಡು ನಿಧಾನವಾಗಿ ಹೊರಕ್ಕೆ ಹೆಜ್ಜೆ ಇಟ್ಟೆನು. ನಮ್ಮ ಜನರ ಪವಿತ್ರ ಭಕ್ತಿ ಇಲ್ಲಿ ಸಮೂಹ ಸನ್ನಿ ರೂಪ ತಾಳಿದೆ ಎನ್ನಿಸಿತು. ಮೈತ್ರಿ-ಕರುಣೆಯ ಬೀಡಾಗಬೇಕಿದ್ದ ಈ ಮೂಲ ಬುದ್ಧನ ಜಾಗ ಪಂಡಾಗಳ ಗೂಂಡಾಗಿರಿಯ ಗೂಡಾಗಿದ್ದಕ್ಕೆ ವಿಷಾದವೆನಿಸಿತು. ಇಲ್ಲಿ ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ. ಇಂದಿರಾ ಗಾಂಧಿಯವರಿಗೂ ಅವರು ಅನ್ಯಮತದಲ್ಲಿ ವಿವಾಹಿತರಾದವರೆಂದು ಪ್ರವೇಶ ನಿರಾಕರಿಸಿದ್ದ ಕ್ಷೇತ್ರವಿದು. ಹಾಗೇ, ಇಲ್ಲಿನ ಪೀಠದ ಶಂಕರಾಚಾರ್ಯರು ಅಸ್ಪೃಶ್ಯತೆ ಹಿಂದೂ ಧರ್ಮದ ಅವಿಭಾಜ್ಯ ಅಂಗ ಎಂದು ಘೋಷಿಸಿದವರು!

ವಿವೇಕಾನಂದರು ಈ ಕ್ಷೇತ್ರ ಬೌದ್ಧ ತಾಂತ್ರಿಕಾಚರಣೆಗಳಿಂದ ಅವನತಿಗೊಂಡಿತೆನ್ನುವರು. ಹಾಗೇ, ಶಂಕರಾಚಾರಾರ್ಯರು ಬಂದು ಇದನ್ನು ಬೌದ್ಧರಿಂದ ವಿಮೋಚನೆಗೊಳಿಸಿ ಉದ್ಧಾರ ಮಾಡಿದರೆಂದು ಹೇಳಲಾಗುತ್ತದೆ. ಈಗ ಈ ಪುರಿ ಇನ್ನೊಂದು ವಿಮೋಚನೆಗೆ ಕಾದಂತಿದೆ. ಈ ಎಲ್ಲ ಅಲೋಚನೆಗಳ ಮಧ್ಯೆ ಮರದ ಆಟಿಕೆಗಳಂತಿದ್ದ ದೇವರ ಮುಂದೆ ಭಕ್ತಿಯೇ ಮೈವೆತ್ತಂತೆ ಕೈಮುಗಿದು ನಿಂತಿದ್ದ ಕಂಗೆಟ್ಟ ಮುಖದ ಬಿಳಿ ಸೀರೆಯ ಯುವತಿಯ ಚಿತ್ರ ಮಾತ್ರ ಮನದಲ್ಲಿ ಅಚ್ಚೊತ್ತಿದ್ದಂತೆ ಉಳಿದಿದೆ! ಭಾರತವೆಂದರೆ ಇದೇ ಇರಬೇಕು!

Share

Leave a comment

Your email address will not be published. Required fields are marked *

Recent Posts More

 • 2 weeks ago No comment

  ನಮ್ಮ ಕಣ್ಣುಗಳೇಕೆ ಭಾರವಾಗುತ್ತಿವೆ?

        ಕವಿಸಾಲು           ತಿರುಕನ ಕನಸಲ್ಲ ನನ್ನದು ತಿರುಕನಲ್ಲ ಕಣ್ರಿ ನಾನು ನಿಮ್ಮ ಮರುಕ ಗಿರುಕ ಎಲ್ಲಾ ನನಗೆ ಹಿಡಿಸಲ್ಲ ಅವ್ರು ಕೋಟೆ ಕಟ್ಟಿ ನ್ಯಾಯ ನೀತಿಗಳ ತಮ್ಮಲ್ಲೆ ಬಚ್ಚಿಟ್ಟು ಒಳಗೆ ಬೆಚ್ಚಗೆ ಕೂತಿರಬಹುದು ನ್ಯಾಯಕ್ಕೆ ಕನ್ನ ಹಾಕೋ ನಾನು ತಿರುಕ ಹೇಗೆ ಆಗಬೇಕು? ತಿರುಕನದೇನೋ ಕನಸಿತ್ತು ನನ್ನದು ಕೂಡಾ ಕನಸೆಂದು ಆ ಕೋಟೆ ಒಳಗಿರುವವರು ಕನವರಿಸುತ್ತಿರಬಹುದು ಬೂದಿ ಮುಚ್ಚಿದ ...

 • 2 weeks ago No comment

  ಕೊಂಕಣಿ ಪ್ರತಿಭೆಯನ್ನರಸಿ ಕರ್ನಾಟಕಕ್ಕೆ ಬಂದ ಪ್ರಶಸ್ತಿ

      ಅತಿಥಿ           ಈ ಬಾರಿ ಕರ್ನಾಟಕವು ಎರಡು ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು ಎಂದರೆ ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಪ್ರಮಾದವೇನಾದರೂ ಆಯಿತೇ? ಒಂದೇ ಪುರಸ್ಕಾರವನ್ನು ಇಬ್ಬರಿಗೆ ಹಂಚಿರಬಹುದೇ? ಎಂದೆಲ್ಲ ಯೋಚಿಸಿ ತಲೆ ಕೆರೆದುಕೊಳ್ಳುತ್ತಿದ್ದೀರಾ? ಇಲ್ಲಿದೆ ನೋಡಿ ಉತ್ತರ. ಕನ್ನಡಕ್ಕೆ 2018ರ ಕೇಂದ್ರಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಘೋಷಣೆಯಾದಾಗಲೇ ಕರ್ನಾಟಕದ ಕೊಂಕಣಿ ಕವಯತ್ರಿ ವಿಲ್ಮಾ ...

 • 3 weeks ago No comment

  ಸಾಹಸದ ಆ ನಿಮಿಷಗಳು

          ಮೊದಲ ಬಾರಿಯಾದ್ದರಿಂದ ಕೆಲವೇ ನಿಮಿಷಗಳ ಈ ಜಿಗಿತದ ರೋಚಕತೆ ಒಂದು ತಿಂಗಳ ಕಾಲ ನನ್ನನ್ನು ಆವರಿಸಿದ್ದು ಸುಳ್ಳಲ್ಲ.         ಬ್ಯಾಂಕರುಗಳು, ಅಕೌಂಟೆಂಟುಗಳು ವರ್ಷದ ಮೊದಲಿಂದ ಹಿಡಿದು ಮಾರ್ಚಿ ತಿಂಗಳವರೆಗೆ ಭಾರೀ ಬ್ಯುಸಿಯಾಗುವಂತೆ ಇಂಗ್ಲೆಂಡಿನ ಸರ್ಕಾರೀ ದಂತ ವೈದ್ಯಕೀಯ ರಂಗದಲ್ಲೂ ಧಾವಂತ ಕಾಣಿಸಿಕೊಳ್ಳುತ್ತದೆ. ಸರ್ಕಾರದಿಂದ ಗುತ್ತಿಗೆ ಪಡೆದ ಕೆಲಸವನ್ನು ಮಾರ್ಚಿಯ ಕೊನೆಗೆ ಪೂರ್ತಿಗೊಳಿಸದಿದ್ದರೆ ಮುಂದಿನ ವರ್ಷದ ಕಾಂಟ್ರಾಕ್ಟ್ ನ್ನು ಕಳೆದುಕೊಳ್ಳುವ ...

 • 4 weeks ago No comment

  ಪ್ರಸಾದ್ ಪಟ್ಟಾಂಗ | ಫಿಫಾ ಫಿವರ್

  ಅಂದು ಎಲ್ಲರ ಕಣ್ಣುಗಳೂ ಬೇರೇನನ್ನೋ ದಿಟ್ಟಿಸುತ್ತಿದ್ದವು. ಅದೊಂದು ಸುಂದರ ರೆಸ್ಟೊರೆಂಟ್. ಆವರಣದ ಒಳಗೂ ಹೊರಗೂ ಬಂದವರಿಗೆ ಕುಳಿತುಕೊಳ್ಳಲು ಸಾಕಷ್ಟು ಜಾಗವಿರುವಂಥದ್ದು. ಜೊತೆಗೇ ಒಂದು ಪುಟ್ಟ ಮೈದಾನದಂತಿರುವ ಜಾಗವನ್ನೂ, ಈಜುಕೊಳವನ್ನೂ ಹೊಂದಿರುವ ಸುಸಜ್ಜಿತ ರೆಸ್ಟೊರೆಂಟ್. ನಾನು ಪ್ರತೀ ತಿಂಗಳು ಲುವಾಂಡಾಗೆ ಬಂದಿಳಿದಾಗಲೆಲ್ಲಾ ಇಲ್ಲಿಯ ಸಿಬ್ಬಂದಿಯೇ ನನಗೆ ಅನ್ನದಾತರು. ಹೀಗಾಗಿ ಎಲ್ಲೆಲ್ಲೂ ನನಗೆ ಪರಿಚಿತ ಮುಖಗಳೇ. ಅಂದು ಮಾತ್ರ ಸಿಬ್ಬಂದಿಯೊಬ್ಬ ಗಡಿಬಿಡಿಯಲ್ಲಿ ನನ್ನ ಆರ್ಡರ್ ಬರೆದುಕೊಂಡು ಅಷ್ಟೇ ಅವಸರದಲ್ಲಿ ಖಾದ್ಯಗಳನ್ನು ತಂದಿಟ್ಟು ...

 • 4 weeks ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ದಾರಿಯೇ ದೈವ… ವೈಷ್ಣೋದೇವಿ

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...


Editor's Wall

 • 11 May 2018
  2 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

 • 10 May 2018
  2 months ago No comment

  ಒಂದು ಪುಸ್ತಕ; ವಾರವಿಡೀ ಬಿಡುಗಡೆ!

  ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

 • 03 May 2018
  3 months ago No comment

  ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                    ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

 • 30 April 2018
  3 months ago No comment

  ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

  ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

 • 28 April 2018
  3 months ago No comment

  ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

  ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...