Share

ಕಾದಂಬಿನಿ ಕಾಲಂ | ಜಾನೂ ಎಂದು ಕರೆಯುತ್ತೇನೆ!

 

 

 

 

 

 

 

 

 

ನಾನು ಸಾಹಿತಿಯಾಗುವ ಕನಸನ್ನು ಕಣ್ಣಿಗೆ ಮೆತ್ತಿಕೊಂಡು ಬೆಳೆದವಳಲ್ಲ. ಜಗತ್ತಿನೊಡನೆ ಒಡನಾಡುವಾಗ ನನ್ನೊಳಗೆ ನಡೆಯುವ ಯುದ್ಧವನ್ನು ಅಭಿವ್ಯಕ್ತಿಸಲು ಬರಹ ಅನಿವಾರ್ಯವಾಗಿತ್ತಷ್ಟೇ!

 

ಬಾಲ್ಯದಲ್ಲಿ ಪ್ರಾಣಿ ಪಕ್ಷಿ, ಮಕ್ಕಳ ಅಥವಾ ಕಾರ್ಟೂನು ಚಿತ್ರಗಳು ಊರಿನ ಸಿನೆಮಾ ಟೆಂಟಿಗೆ ಬಂದಾಗ ಶಿಕ್ಷಕರು ವಿದ್ಯಾರ್ಥಿಗಳನ್ನು ಕರೆದೊಯ್ದು ಕಡಿಮೆ ದುಡ್ಡಿನಲ್ಲಿ ಸಿನೆಮಾ ತೋರಿಸುತ್ತಿದ್ದರು. ಇಲ್ಲವೇ ರಜೆಯಲ್ಲಿ ನನ್ನ ಮಾಮನ ಥಿಯೇಟರಿನಲ್ಲಿ ಅಂಥ ಸಿನೆಮಾ ಬಂದರೆ ನೋಡುತ್ತಿದ್ದೆ. ನನಗೆ ಅಂಥ ಸಿನೆಮಾ ತುಂಬ ಇಷ್ಟವಾಗಿದ್ದವು. ಒಂದು ಸಿನೆಮಾ ನೆನಪಾಗುತ್ತದೆ. ‘ಆಫ್ರಿಕಾದಲ್ಲಿ ಶೀಲಾ’ ಎಂದದರ ಹೆಸರು. ಪ್ರಾಣಿ ಪಕ್ಷಿಗಳ ಜೊತೆಗೇ ಬೆಳೆದುಬಿಟ್ಟ ಒಬ್ಬಳು ಮನುಷ್ಯಲೋಕಕ್ಕೆ ಬಂದು ಅಲ್ಲಿನ ವಿಶ್ವಾಸಘಾತುಕತನ, ಮೋಸ ವಂಚನೆ, ಕುಟಿಲತೆ ಕ್ರೌರ್ಯಗಳಿಂದ ಜರ್ಜರಿತಳಾಗಿ ಕಡೆಗೊಮ್ಮೆ ಹಿಂದಿರುಗಿ ತನ್ನ ಕಾಡಿಗೇ ಹೋಗಿಬಿಡುವ ಚಿತ್ರಕಥೆ. ನಾನು ಬಾಲ್ಯದಲ್ಲಿ ನೋಡಿದ ಈ ಸಿನೆಮಾದ ಮುಕ್ತಾಯದ ಚಿತ್ರಣ ಇನ್ನೂ ನನ್ನ ಒಳಗೆ ನಾಟಿ ಕೂತು ಮತ್ತೆ ಮತ್ತೆ ಕಾಡುತ್ತದೆ ಮತ್ತು ನಾನೂ ಅದೇ ಅಂಚಿನಲ್ಲಿ ಬಂದು ನಿಂತುಬಿಟ್ಟಿರುವೆನಾ ಎಂದು ಅನಿಸತೊಡಗಿದೆ.

ಇತ್ತೀಚೆ ಎಲ್ಲವನ್ನೂ ಕಳೆದುಕೊಂಡಂತೆ ಅಥವಾ ಕಾಲನ ಪ್ರಹಾರಕ್ಕೆ ಮೇಲೇಳುವ ಆಸೆಯ ಸೆಲೆಯೂ ಇಲ್ಲದಾಗಿ ಕಡಿದುಬಿದ್ದಲ್ಲೇ ಜೀವ ವಿಲಗುಡುವಂತೆ, ಕಣ್ಣ ಬಾಗಿಲಲ್ಲಿ ಯಾವ ನಿರೀಕ್ಷೆಗಳೂ ಇಲ್ಲದೆ ನೋಟವನು ಶೂನ್ಯವೊಂದು ಆವರಿಸಿಬಿಟ್ಟಂತೆ ಒಂದು ಪುಟ್ಟ ಹಕ್ಕಿಯಾದರೂ ಸಿಕ್ಕಿದ್ದರೆ ಬದುಕಿಬಿಡುತ್ತಿದ್ದೆ ಎಂದು ಹಲುಬುತ್ತ ಇದ್ದುಬಿಟ್ಟ ದಿನಗಳಿವು. ಅಂಥ ಒಂದು ಜೀವವಷ್ಟೇ ನನ್ನನ್ನು ಉಳಿಸೀತು ಎಂದು ನನಗೆ ಅನಿಸತೊಡಗಿತ್ತು. ಹೊತ್ತುಗೊತ್ತಿಲ್ಲದೆ ಮನೆಯೆದುರಿನ ಗಿಡಗಳಲ್ಲಿ ಆಡುವ ಪುಟ್ಟ ಪುಟ್ಟ ಹಕ್ಕಿಗಳನ್ನು ನೋಡುತ್ತಾ ಅವುಗಳ ಮಧುರ ಉಲಿಯನ್ನೇ ಧ್ಯಾನಿಸುತ್ತ ಕಾಲ ಕಳೆಯುತ್ತಿದ್ದೆ. ಬುಲ್ ಬುಲ್ ಹಕ್ಕಿಗಳ ಹಾಡು ಪೀಹೂವಿನ ನೆನಪು ತರಿಸುತ್ತ ಹೃದಯ ಹಿಂಡಿಹಾಕುತ್ತಿತ್ತು. ಅಂಥ ಹೊತ್ತಲ್ಲಿ ನಮ್ಮ ಮನೆಯೆದುರಿಂದ ನಡೆದುಹೋಗುವ ಕೆಲ ಮಕ್ಕಳು ಕಾರಣವಿಲ್ಲದೆ ಈ ಹಕ್ಕಿ ಮರಿಗಳಿಗೋ ಮನೆಯ ಕಿಟಕಿಗೋ ನಮ್ಮ ನಾಯಿಗೋ, ಬೆಕ್ಕಿಗೋ ರಸ್ತೆಯ ಕಲ್ಲುಗಳನ್ನು ಎತ್ತಿ ಬೀಸುತ್ತಿರುವುದನ್ನು ನೋಡುತ್ತಿದ್ದೆ. ನಾನಲ್ಲಿ ಅವರನ್ನು ನೋಡುತ್ತಿರುವುದರ ಮತ್ತು ಅವರ ನಡವಳಿಕೆಯಿಂದ ನನ್ನಲ್ಲೊಂದು ತಳಮಳದ ಚಂಡಮಾರುತವು ಕನಲಿಬಿಡುವ ಪರಿವೆ ಅವರಿಗಿಲ್ಲ.

ನಾನು ಮಕ್ಕಳನ್ನು ತುಂಬ ಪ್ರೀತಿಸುತ್ತೇನೆ. ಆದರೆ ಅಂಥ ಮುಗ್ಧ ಮಕ್ಕಳಿಗೂ ಅದೇಕೆ ಚಂದದ್ದೊಂದು ಹಕ್ಕಿಯ ಕಾಲು ಮುರಿದು ಕೆಡವಿಬಿಡಬೇಕೆನಿಸುತ್ತದೆ? ದೊಡ್ಡವರೂ ಕೊಳ, ಹೊಳೆಗೆ ದಡದಲ್ಲಿ ನಿಂತು ಕಲ್ಲೆಸೆಯುತ್ತಿರುವುದನ್ನು ಬೇಕಾದಷ್ಟು ಸಲ ಕಂಡಿದ್ದೇನೆ. ಅದೇಕೆ ತಿಳಿಗೊಳಕ್ಕೆ ಕಲ್ಲೆಸೆದು ರಾಡಿಯೆಬ್ಬಿಸಬೇಕೆನಿಸುತ್ತದೆ? ನಾಯಿಗಳು, ಬೆಕ್ಕುಗಳು ಅಷ್ಟೇ ಯಾಕೆ ಹಾವು, ಚೇಳುಗಳೂ ತನಗೆ ಅಪಾಯವಿದೆಯೆಂದೆನಿಸದ ಹೊರತು ಸುಮ್ಮನಿದ್ದವರನ್ನು ಬಂದು ಕಚ್ಚುವುದಿಲ್ಲ. ಮನುಷ್ಯಜೀವಿಯ ಸ್ವಭಾವವು ಮಗುವಾಗಿದ್ದಾಗಿನಿಂದಲೇ ನಿರ್ದಯಿಯಾಗುತ್ತಾ ಆಗುತ್ತಾ ಕಂಡಕಂಡದ್ದಕ್ಕೆ ಕಲ್ಲು ಬೀಸುತ್ತ ಯಾಕಿಷ್ಟು ಹಿಂಸ್ರ ನಡೆ? ಅದೇಕೆ ಸುಶಾಂತ ಸರೋವರಕ್ಕೆ ಕಲ್ಲು ಬೀಸಬೇಕು ಎಂದೆನಿಸಬೇಕು? ಅದರಿಂದ ದಕ್ಕುವುದೇನು? ಯಾರೋ ಬರುತ್ತಾರೆ, ಸುಮ್ಮನಿದ್ದವರ ಎದೆಯ ಮೇಲೊಂದು ಕಲ್ಲೆತ್ತಿಹಾಕಿ ಹೋಗಿಬಿಡುತ್ತಾರೆ ಎಂದರೆ ಅರ್ಥವಾದರೂ ಏನು? ಹೇಗೆ ನಂಬುವುದು ಸುಳ್ಳಿನ ಮುಖವಾಡ ತೊಟ್ಟು ಕಪಟ, ವಂಚನೆಯ ಜಾಲದಲ್ಲಿ ಕೆಡವುತ್ತ, ಮುದ್ದಿಸಿ ಮುದ್ದಿಸಿ ನಂಜುಣಿಸುವ ಈ ಮನುಷ್ಯ ಜೀವಿಯನ್ನು?

ಬೆಕ್ಕು ನಾಯಿಗಳಂಥ ಸಾಕುಪ್ರಾಣಿಗಳ ಕೆಲವು ಸಂಗತಿ ಯೋಚಿಸಿ ನೋಡಿ. ಬೆಕ್ಕು ತನ್ನಂಥದ್ದೇ ಇನ್ನೊಂದು ಬೆಕ್ಕು ಕಂಡರೆ ಅದನ್ನು ಕಚ್ಚಲು ಮುಂದಾಗುತ್ತದೆ. ಆದರೆ ತನ್ನ ಜಾತಿಯಲ್ಲದ ಮನುಷ್ಯನ ಜೊತೆ ಮುದ್ದಾಗಿ ವ್ಯವಹರಿಸುತ್ತಿರುತ್ತದೆ. ನಾಯಿಯೊಂದು ತನ್ನಂಥದ್ದೇ ಇನ್ನೊಂದು ನಾಯಿಯನ್ನು ಕಂಡಾಗ ವೈರಿಯೆಂದು ಭಾವಿಸಿ ಮೇಲೆರಗುತ್ತದೆ. ಆದರೆ ತನ್ನನ್ನು ಸಾಕಿದ ಮನುಷ್ಯರನ್ನು ದೇವರಂತೆ ನೋಡುತ್ತಿರುತ್ತದೆ. ಈ ವರ್ತನೆ ಅವುಗಳಲ್ಲಿ ಬಂದಿದ್ದಾದರೂ ಹೇಗೆ? ಮನುಷ್ಯಜೀವಿ ಅದು ಯಾವ ಪರಿಯಲ್ಲಿ ಪ್ರಾಣಿಸಂಕುಲವನ್ನು ಗುಲಾಮಿತನಕ್ಕೆ ಶರಣಾಗಿಸಿದ್ದಾನು? ಆನೆಯನ್ನು ಬಳಸಿ ಇನ್ನೊಂದಾನೆಯನ್ನು ಪಳಗಿಸಿ ಮಣಿಸಿಬಿಡುವ ಕುಟಿಲ ಕಲೆ ಮನುಷ್ಯನಿಗಲ್ಲದೆ ಇನ್ನಾವ ಜೀವಿಯಿಂದ ಸಾಧ್ಯವಾದೀತು? ಈ ಮನುಷ್ಯಜೀವಿ ತನ್ನ ಸಹಮಾನವನೊಡನೆಯೂ ಹೀಗೆಯೇ ನಡೆದುಕೊಂಡದ್ದಿದೆಯಲ್ಲವೇ?

ಹಾಗಾಗಿಯೋ ಏನೋ ಮನುಷ್ಯ ಸಂಗಜೀವಿಯಾದರೂ ಒಳಗೊಳಗೇ ಒಡೆದೊಡೆದು ಚೂರಾಗಿ ತನ್ನ ಎದೆಯ ಮಾತಿಗೆ ಕಿವಿಯಾಗಬಲ್ಲ ಇನ್ನೊಂದು ಜೀವಿಗಾಗಿ ತಹತಹಿಸುತ್ತ ಒಬ್ಬೊಂಟಿಯಾಗಿ ಬದುಕಿಡೀ ಪರಿತಪಿಸುತ್ತಾನೆ ಆದರೂ ಅವನ ಹುಡುಕಾಟ ಮುಗಿಯುವುದಿಲ್ಲ. ನಾನೂ ಅಂತಹದ್ದೇ ಒಂದು ಜೀವಿಯಷ್ಟೇ. ಹುಡುಕುತ್ತೇನೆ ನನ್ನ ಒಳಗುದಿಗೆ ಕಿವಿಯಾಗಬಲ್ಲ ಆ ಇನ್ನೊಂದು ಜೀವ ಯಾವುದೆಂದು? ಅದು ಮನುಷ್ಯನೇ? ಉಹೂಂ.. ಅವನು ಅರ್ಹತೆಯನ್ನು ಕಳೆದುಕೊಂಡಿದ್ದಾನೆ. ಒಮ್ಮೆ ಯಾವ ಒಬ್ಬನಿಗೆ ಪ್ರಾಣಿ ಪಕ್ಷಿಗಳ ಪ್ರೀತಿಯ ಅನುಭವವಾಯಿತೆಂದರೆ ಮತ್ತೆ ಅವನೆಂದೂ ಮನುಷ್ಯನ ಪ್ರೀತಿಗೆ ಹಂಬಲಿಸಲಾರ. ಯಾಕೆಂದರೆ ಮನುಷ್ಯಜೀವಿಗೆ ಸ್ವಾರ್ಥರಹಿತವಾಗಿ ಪ್ರೀತಿಸುವುದು ಗೊತ್ತೇ ಇಲ್ಲ. ಇದು ಅರ್ಥವಾದ ಮೇಲೆ ಈ ಮನುಷ್ಯರ ಪ್ರೀತಿಯ ಕೊಡುಕೊಳ್ಳುವಿಕೆಯಲ್ಲಿ ಅರ್ಥವೇ ಉಳಿಯುವುದಿಲ್ಲ ಎಂದೆಲ್ಲ ಯೋಚಿಸುತ್ತ ಒಬ್ಬೊಂಟಿಯಾಗಿ ಬದುಕಿನ ಹಾದಿಯ ಯಾವುದೋ ತಿರುವಿನಲ್ಲಿ ಕಾಲ್ಗೆಟ್ಟು ನಿಂತಲ್ಲೇ ನಿಂತುಬಿಟ್ಟ ಒಂದು ದಿನ…

ಆ ದಿನ ಅಂಬಿಕಾನಗರಕ್ಕೆ ಹೋಗಲೆಂದು ಬೆಳಿಗ್ಗೆ ಮನೆ ಬಿಟ್ಟಿದ್ದೆವು. ಸಂಜೆ ಐದಕ್ಕೆ ನಾವಲ್ಲಿ ತಲುಪಿದ್ದರೆ ಸಾಕಿತ್ತು. ಹಾಗಾಗಿ ನಾನು ದಾರಿಯಲ್ಲಿ ತಮ್ಮನ ಮನೆಗೆ ಹೋದೆ. ಅವ ನನಗಾಗಿಯೇ ಕಾದಿದ್ದವನಂತೆ ‘ಇಲ್ಲಿ ನೋಡು, ಕಾಲಿಗೆ ಪೆಟ್ಟಾಗಿ ಗೆಳಯನ ಜೋಳದ ಹೊಲದಲ್ಲಿ ಬಿದ್ದಿತ್ತಂತೆ. ತಂದುಕೊಂಟ್ಟಿದ್ದ. ನನ್ನ ಆರೈಕೆಯಿಂದ ಗುಣವೇನೋ ಆಗಿದೆ. ಆದರೆ ಇದಿನ್ನೂ ಮರಿಯಾಗಿರುವ ಕಾರಣ ಕೂಡಲೇ ಕಾಡಿಗೆ ಬಿಡುವಂತಿಲ್ಲ. ನೀನು ಅದು ಹಾರಲು ಕಲಿಯುವ ತನಕ ಸಾಕು’ ಎಂದು ಮುದ್ದು ಗಿಳಿಯೊಂದನನ್ನು ಕೊಟ್ಟಿದ್ದ. ನನಗೆ ಸ್ವರ್ಗವೇ ಸಿಕ್ಕಂತಾಯ್ತು. ಅದೂ ನಾನು ಅದರ ಹಳೆಯ ಸಂಬಂಧಿ ಎನ್ನುವಂತೆ ನನ್ನ ಹೆಗಲ ಮೇಲೆ ಹತ್ತಿ ಬೆಳಿಗ್ಗೆ ಸ್ನಾನಮಾಡಿ ಒಣಗಲೆಂದು ಹಾಗೆಯೇ ಹರಡಿಕೊಂಡಿದ್ದ ನನ್ನ ಕೂದಲ ನಡುವೆ ಕೂತುಬಿಟ್ಟಿತು. ನನ್ನ ಕೆನ್ನೆಗಳಿಂದ ಗಿಳಿಯ ಬೆನ್ನಿಗೆ ನವುರಾಗಿ ಸೋಕಿದೆ. ನನ್ನ ಪಾಲಿನ ಒಳ್ಳೆಯ ದಿನಗಳ ಆಗಮನಕ್ಕೆ ಹಿಡಿದ ಹಸಿರು ನಿಶಾನೆಯಂತೆ ಈ ಗಿಳಿ ಕಂಗೊಳಿಸುತ್ತಿತ್ತು. ಏನು ಹೆಸರಿಡುವುದು ಈ ಹಸಿರು ಗಿಳಿಗೆ? ಪಚ್ಚೆ? ಉಹೂಂ! ಬಾಲದಲ್ಲಿ ಅದೆಂಥ ಮೋಹಕ ನೀಲಿ! ವಾಹ್ ನೀಲಿ! ನಾನು ಬೆರಳ ತುದಿಯಲ್ಲಿ ಗಿಳಿಯನ್ನು ಕೂರಿಸಿಕೊಂಡು ಅದರ ಎದೆಯ ಬೆಚ್ಚನೆ ಬಿಸುಪಿಗೆ ಮುತ್ತಿಕ್ಕಿ ಮೆಲ್ಲನೆ ಹೇಳಿದೆ “ನೀನು ನೀಲಿ!”

ನನ್ನ ಮನೆಯ ಐದಡಿ ಉದ್ದ ನಾಲ್ಕು ಅಡಿ ಅಗಲ ನಾಲ್ಕ ಅಡಿ ಎತ್ತರದ ಜಾಲರಿಯ ಗೂಡಿನಲ್ಲಿ ನೀಲಿ ಹಾರಿಕೊಂಡು ಹಾಯಾಗಿ ಇತ್ತು. ಬೇಗ ಬೇಗ ಕೆಲಸ ಮುಗಿಸುವುದು, ನೀಲಿಯ ಜೊತೆ ಸಮಯ ಕಳೆಯುವುದು, ಹಾಡಿಗೆ ದನಿಗೂಡಿಸುವ ನೀಲಿಗಾಗಿ ಹಾಡು ಹಾಕುವುದು, ಅದರ ಜೊತೆ ಮಾತಾಡುವುದು ನನ್ನ ದಿನಚರಿಯಾಯ್ತು. ನನಗೀಗ ಮನುಷ್ಯರ ಸಂಗ ಬೇಕಿರಲಿಲ್ಲ. ನೀಲಿಯಲ್ಲಿ ನಾನು ಬೆರೆತುಹೋಗಿದ್ದೆ. ನೀಲಿ ಮನೆಗೆ ಬಂದು ಒಂದೇ ವಾರವಾಗಿದ್ದಿರಬಹುದು.

ನನ್ನ ಫೇಸ್ಬುಕ್ ಗೆಳೆಯರಾದ ನಿಖಿಲ್ ಕೊಲ್ಪೆಯವರು ಒಂದು ಪುಟ್ಟ ಬುಲ್ ಬುಲ್ ಮರಿ ಸಿಕ್ಕಿದ್ದಾಗಿ ಪೋಸ್ಟ್ ಬರೆದು ನನಗೆ ಟ್ಯಾಗ್ ಮಾಡಿದ್ದರು. ನೋಡಿದ್ದೇ ತಡ ನನ್ನ ಹೃದಯ ಬಾಯಿಗೆ ಬಂದುಬಿಟ್ಟಿತು. ಥೇಟ್ ಪೀಹೂವಿನಂತೆ ಇತ್ತು. ನಾನು ಗೋಗರೆಯತೊಡಗಿದೆ, ‘ಸರ್ ಈ ಮರಿಗೆ ತಂದೆ ತಾಯಿ ಸಿಕ್ಕದೇ ಇದ್ದ ಪಕ್ಷದಲ್ಲಿ ಇದನ್ನು ನೀವು ನನಗೆ ಕೊಡ್ತೀರಾ? ನನ್ನ ಪ್ರಾಣದ ಹಾಗೆ ನೋಡಿಕೊಳ್ತೀನಿ. ನೀವಿದನ್ನು ನನಗೆ ಕೊಟ್ಟರೆ ನಾನದಕ್ಕೆ ಜಾನೂ ಎಂದು ಕರೀತೀನಿ’ ಎಂದು. ನಿಖಿಲ್ ಸರ್ ಅವರಲ್ಲಿ ನಾನು ಅಂಗಲಾಚುವುದನ್ನು ನೋಡಿದ ಲೋಕೇಶ್ ಪೂಜಾರಿ ಎಂಬ ಫೇಸ್ಬುಕ್ ಸ್ನೇಹಿತರು ‘ನಿಖಿಲ್ ಸರ್ ಕೊಡುವುದಾದರೆ ಈ ಹಕ್ಕಿ ಮರಿಯನ್ನು ನಾನೇ ಮಂಗಳೂರಿನಿಂದ ಮಲೆನಾಡಿಗೆ ಬಂದು ನಿಮ್ಮ ಮನೆಗೆ ತಲುಪಿಸ್ತೇನೆ’ ಎಂದರು. ರಾತ್ರಿ ಪೂರಾ ನಿದ್ದೆಯಿಲ್ಲ ನನಗೆ. ಬೆಳಿಗ್ಗೆ ಎದ್ದವಳೇ ಬೇಗಬೇಗನೇ ಕೆಲಸ ಮುಗಿಸಿದೆ.

ಲೋಕೇಶ್ ಪೂಜಾರಿಯವರು ನನಗಾಗಿ ಉಜಿರೆಯಿಂದ ಉಡುಪಿಗೆ ಬಂದು ಅಲ್ಲಿಂದ ಮಂಗಳೂರಿಗೆ ಹೋಗಿ ಹಕ್ಕಿ ಮರಿಯನ್ನು ನಿಖಿಲ್ ಸರ್ ಅವರಿಂದ ಪಡೆದುಕೊಂಡು ನನ್ನೂರಿಗೆ ಹೊರಟಿದ್ದರು. ನನಗಿಲ್ಲಿ ಎಷ್ಟು ಹೊತ್ತಿಗೆ ಬರ್ತಾರಪ್ಪಾ ಎಂದು ಕಾತರ. ಅಂತೂ ರಾತ್ರಿ ಎಂಟರ ಸಮಯ ಅವರು ಬಂದೇಬಿಟ್ಟರು. ಅವರ ಜೊತೆ ಬಂದ ಪತ್ರಕರ್ತೆ ಮಗುವಿನಂತೆ ಹಕ್ಕಿಮರಿಯನ್ನು ಹಿಡಿದುಕೊಂಡು ಕೂತಿದ್ದರಂತೆ. ನಾನು ಮರಿಯನ್ನು ಎತ್ತಿಕೊಂಡು ಬಾಯಿ ತುಂಬಾ ‘ಜಾನೂ!’ ಎಂದೆ. ಹಕ್ಕಿ ಮರಿ ಊಟ ಕಾಣದೆ ಕೆಲ ದಿನಗಳಾಗಿತ್ತೆಂದು ಕಾಣುತ್ತದೆ. ರೆಕ್ಕೆ ಪುಕ್ಕ ಮೂಳೆ ಚರ್ಮ ಇಷ್ಟೇ ಇದ್ದದ್ದು ಅದರ ಶರೀರದಲ್ಲಿ. ತುತ್ತು ಕೊಟ್ಟರೆ ತಿನ್ನಬೇಕೆನ್ನುವುದನ್ನೂ ಮರಿ ಮರೆತುಬಿಟ್ಟಂತಿತ್ತು. ಅದಕ್ಕೆ ಉಣಿಸುವ ಸರ್ಕಸ್ಸು ಶುರುವಾಯಿತು. ‘ಭಗವಾನ್ ದೇತಾ ಹೈ ತೋ ಚಪ್ಪರ್ ಫಾಡ್ ಕೆ ದೇತಾ ಹೈ’ ಎನ್ನುವ ಮಾತಿನಂತೆ ನನ್ನ ಬರಗೆಟ್ಟ ಬಾಳಿನಲ್ಲಿ ಎರಡು ಹಕ್ಕಿಗಳು ಏಕಕಾಲಕ್ಕೆ ವರವಾಗಿ ಬಂದಿದ್ದವು.

ನನಗೆ ಜೀವನದಲ್ಲಿ ಮತ್ತೇನೂ ಬೇಡವೆನಿಸಿತು. ಈ ಲೋಕದೊಂದಿಗಿನ ನಂಟನ್ನು ಇಷ್ಟಿಷ್ಟಾಗಿ ಕಡಿದುಕೊಳ್ಳುತ್ತಾ ಬರುವ ಯೋಜನೆ ಹಾಕಿಕೊಂಡು ಫೋನೆತ್ತಿಕೊಂಡು ಪ್ರಕಾಶಕರಿಗೆ ‘ನೀವು ನನ್ನ ಪುಸ್ತಕ ಪ್ರಕಟಿಸುವುದು ಬೇಡ’ ಎಂದು ಸಂದೇಶ ಬರೆದು ಕೂತೆ. ಒಂದು ತಾಸು ಬಿಟ್ಟು ನೋಡುತ್ತೇನೆ, ‘ನಾಳೆ ನಿಮ್ಮ ಪುಸ್ತಕ ನಿಮಗೆ ತಲುಪುತ್ತದೆ’ ಎಂಬ ಮಾರುತ್ತರ ಪ್ರಕಾಶಕರಿಂದ. ಏನೆನ್ನುವುದು ಈ ಚೋದ್ಯಕ್ಕೆ? ಎಲ್ಲರೂ ನಿಮ್ಮದೊಂದು ಸಂಕಲನ ತನ್ನಿ ಎಂದಾಗಲೂ ಗಂಭೀರವಾಗಿ ಪರಿಗಣಿಸದೆ ಕೂತಿದ್ದ ನನಗೆ ಅವರೊಬ್ಬರು ಪುಸ್ತಕ ಪ್ರಕಟಿಸು ಎಂದು ಕನಸಿನ ಕಿಡಿ ಹೊತ್ತಿಸಿದ್ದರು. ಯಾಕೆ ಬೇಕು ನನ್ನಂಥವರಿಗೆ ಬೇಡದ ಉಸಾಬರಿ? ನನ್ನ ಪುಸ್ತಕ ಯಾರು ಕೊಳ್ಳುತ್ತಾರೆ? ಎಂದಾಗ ‘ನಾನೇ ಐವತ್ತು ಪ್ರತಿ ತಗೋತೀನಿ’ ಎಂದಿದ್ದರು. ಮುನ್ನುಡಿ ಬರೆಸಲು ಕಳಿಸುವವರೆಗೂ ಒತ್ತಾಯಿಸುತ್ತಲೇ ಬಂದರು. ಒಂದು ದಿನ ಐವತ್ತು ಪ್ರತಿ ಖರೀದಿಸುವ ಭರವಸೆ ಕೊಟ್ಟವರು ನಾಪತ್ತೆ! ಪುಸ್ತಕ ತನ್ನ ತಯಾರಿ ಮಾಡಿಸಿಕೊಳ್ಳತೊಡಗಿತು. ಎಲ್ಲ ತಯಾರಿ ಮುಗಿಯುವಾಗ ರಕ್ಷಾ ಪುಟದ ವಿನ್ಯಾಸಕರು ‘ರಕ್ಷಾಪುಟದ ವಿನ್ಯಾಸವನ್ನು ಫೇಸ್ಬುಕ್ಕಿಗೆ ಹಾಕು. ಒಂದು ಸ್ಪರ್ಧೆ ಆಯೋಜಿಸು. ಪ್ರತಿಕ್ರಿಯೆ ಗಮನಿಸಿ ಬದಲಾವಣೆ ಬೇಕಿದ್ದರೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ’ ಎಂದರು. ಪುಸ್ತಕ ಶೀಘ್ರವಾಗಿ ಬರುವ ಸೂಚನೆಯಿಲ್ಲದೆ ಆ ರೀತಿ ಪೋಸ್ಟ್ ಹಾಕುವುದು ಸರಿಯಲ್ಲ ಎನಿಸಿ ಪ್ರಕಾಶಕರಿಗೆ ಕರೆ ಮಾಡಿ ಕೇಳಿದರೆ ‘ಇನ್ನೇನ್ ವಾರದಲ್ಲೇ ಬರುತ್ತೆ. ನೀವು ಹಾಕಿ’ ಎಂದುಬಿಟ್ಟಿದ್ದರು. ಇಬ್ಬರಿಗೆ ಬಹುಮಾನ ಹತ್ತು ಜನರಿಗೆ ಪುಸ್ತಕ ಬಹುಮಾನ ಘೋಷಿಸಿದೆನಾದರೂ ಪುಸ್ತಕ ವಾರದಲ್ಲಿ ಬರಲಿಲ್ಲ. ಡಿಸೆಂಬರಿನಲ್ಲಿ ನನ್ನ ಕೈಸೇರಬೇಕಿದ್ದ ಅದು ತಿಂಗಳು ತಿಂಗಳಾಗಿ ಉರುಳಿ ಹೋಗುತ್ತ ನನ್ನ ಭರವಸೆ ಇಷ್ಟಿಷ್ಟಾಗಿ ಕುಸಿಯುತ್ತ… ಪ್ರಕಾಶಕರಿಗೆ ಕೇಳಿದಾಗೆಲ್ಲ ವಾರದ ಗಡುವು! ಈ ವಾರದ ಗಡುವು ಭರ್ತಿ ನಾಲ್ಕು ತಿಂಗಳನ್ನು ನುಂಗಿಹಾಕಿತು. ಬೆನ್ನ ಹಿಂದೆ ನಗುತ್ತಿದ್ದವರೀಗ ಎದುರಲ್ಲೇ ನಗತೊಡಗಿದ್ದರು!

ಆದರೆ ನನ್ನನ್ನು ನಾನು ಅಪಮಾನಿತಳೆಂದು ಭಾವಿಸುವ ಬದಲಿಗೆ, ಈ ಪುಸ್ತಕ ಮಾಡಿ ಯಾವ ಜಗಕ್ಕೆ ಏನುಪಯೋಗ? ನನ್ನ ಕವಿತೆಗಳಿಲ್ಲದಿದ್ದರೆ ಜಗತ್ತಿಗೆ ಆಗುವ ನಷ್ಟವೇನು? ಯಾರ ಯಾವ ಸಂಭ್ರಮಕ್ಕಾಗಿ ಇವೆಲ್ಲವೂ ಎನಿಸಿ ಕೊನೆಗೂ ಪುಸ್ತಕವನ್ನೇ ಮಾಡುವ ವಿಚಾರವನ್ನು ಕೈಬಿಡಲು ತೀರ್ಮಾನಿಸಿಬಿಟ್ಟಿದ್ದೆ. ಆದರೆ ಅಷ್ಟು ಹೊತ್ತಿಗೆ ಪುಸ್ತಕ ಮುದ್ರಣವಾಗಿ ಬಂದಾಗಿದೆ. ಇದು ನನ್ನಲ್ಲಿ ಯಾವ ಪುಳಕವನ್ನೂ ಉಂಟುಮಾಡಿಲ್ಲ. ಪುಸ್ತಕ ಬಿಡುಗಡೆಯನ್ನೂ ತೀರಾ ಸರಳವಾಗಿ ಫೇಸ್ಬುಕ್ಕಿನಲ್ಲಿಯೇ ಮಾಡಿದ್ದಾಯಿತು. ಬಿಡುಗಡೆಯ ಹಿಂದೆಯೂ ಬಂಡವಾಳ ಸುರಿದು ಪುಸ್ತಕ ತಂದ ಪ್ರಕಾಶಕರ ಕೈ ಸುಡದಿರಲೆಂಬ ಆಶಯವೊಂದರ ಹೊರತು ಬೇರಾವ ಪ್ರಚಾರದ ಬಯಕೆಯಿಲ್ಲ.

ನನ್ನ ಇಂಥ ಮಾತುಗಳನ್ನು ಓದಿದ ಯಾರಿಗಾದರೂ ನಾನು ನಿರಾಶಾವಾದಿ ಎನಿಸಬಹುದು. ನಿಮಗಿಲ್ಲಿ ಒಂದು ಸ್ಪಷ್ಟೀಕರಣ ಕೊಡಬೇಕು. ನಾನು ಸಾಹಿತಿಯಾಗುವ ಕನಸನ್ನು ಕಣ್ಣಿಗೆ ಮೆತ್ತಿಕೊಂಡು ಬೆಳೆದವಳಲ್ಲ. ಜಗತ್ತಿನೊಡನೆ ಒಡನಾಡುವಾಗ ನನ್ನೊಳಗೆ ನಡೆಯುವ ಯುದ್ಧವನ್ನು ಅಭಿವ್ಯಕ್ತಿಸಲು ಬರಹ ಅನಿವಾರ್ಯವಾಗಿತ್ತಷ್ಟೇ! ಅದರಿಂದ ಯಾರಿಗೆ ಯಾವ ಲಾಭ ನಷ್ಟವಿದೆಯೋ ನನಗೆ ತಿಳಿದಿಲ್ಲ.

ನನ್ನ ಬದುಕಿನಲ್ಲೀಗ ನೀಲಿ ಮತ್ತು ಜಾನೂವಿನ ಪ್ರವೇಶವಾಗಿದೆ. ನಾಯಿ, ಬೆಕ್ಕು ಮತ್ತು ಈ ಎರಡು ಹಕ್ಕಿಗಳು ಸಾಕಾಗದೇ ಆತ್ಮಸಾಂಗತ್ಯಕ್ಕೆ? ಯಾಕೆ ಬೇಕು ಈ ಮನುಷ್ಯರ ಕೂಡ ಸಖ್ಯ? ಮತ್ತೊಮ್ಮೆ ಹಿಂದಿರುಗಿ ಹೋಗಿಬಿಡುವೆ ನನ್ನ ಲೋಕಕ್ಕೆ. ಅಲ್ಲಿ ಸುಳ್ಳೆಂಬುದು ಇರುವುದಿಲ್ಲ. ಅವು ಮೋಸದಿಂದ ಎರಗುವುದಿಲ್ಲ. ಗಿಲೀಟಿನ ಕನಸುಗಳನ್ನು ಬಿತ್ತುವುದಿಲ್ಲ, ಪ್ರೀತಿಯ ಮುಖವಾಡ ತೊಟ್ಟು ವಂಚಿಸುವುದಿಲ್ಲ. ಮುದ್ದಿಸಿ ಮುದ್ದಿಸಿ ನಂಜುಣಿಸುವುದಿಲ್ಲ ಈ ಮನುಷ್ಯಜೀವಿಯ ಸುಳ್ಳು, ಮೋಸ, ವಿಶ್ವಾಸಘಾತುಕತನವನ್ನು ಕಂಡುಂಡ ನನ್ನಲ್ಲಿ ಇಂಥ ತೀರ್ಮಾನವೊಂದು ಹರಳುಗಟ್ಟತೊಡಗಿದ್ದೇ ತಳಮಳಗಳ ಕೊನೆಯಾಗಿ ಮತ್ತೆ ಆ ದಿವ್ಯ ಶಾಂತಿ ನೆಲೆಯಾಗುತ್ತಿದೆ.

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ವಾಸ. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಪತ್ರಿಕೆಗಳು, ವೆಬ್ ಪೋರ್ಟಲ್ ಗಳಲ್ಲಿ ಬರಹಗಳು ಪ್ರಕಟವಾಗಿವೆ. ‘ಹಲಗೆ ಮತ್ತು ಮೆದುಬೆರಳು’ ಅವರ ಮೊದಲ ಕಾವ್ಯಸಂಕಲನ.

Share

Leave a comment

Your email address will not be published. Required fields are marked *

Recent Posts More

 • 2 weeks ago No comment

  ಕವಿಸಾಲು | ಇಂಡೋನೇಶಿಯಾ

      ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ಜಲ, ಉಸಿರ ಗಾಳಿ ಹುಚ್ಚೆದ್ದು ಕುಣಿದು ಅಪ್ಪಳಿಸಿದ ಆಘಾತಕ್ಕೆ ಕಂಗೆಟ್ಟು ತತ್ತರಿಸಿವೆ ಪ್ರಾಣಿ, ಮನುಜ ಕುಲ ಮಾಡು ಹಾರಿ, ಕಂಬಗಳು ಕುಸಿದು ನೆಲಕಚ್ಚಿವೆ ಮಾನವನ ಬೀಡು ಕತ್ತರಿಸಿ ...

 • 2 weeks ago No comment

  ಕವಿಸಾಲು | ತಡವಿಲ್ಲದಿರಲಿ ಇನ್ನು…

      ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ತಡೆಯ ದಾಟಿ ತಲುಪಬೇಕಿದೆಯಷ್ಟೆ ಬಯಕೆ ಗುರಿಯನ್ನು ದಟ್ಟ ಹಸಿರಿನ ಕಾಡು, ಆಗಸದ ನೀಲಿ ಬಿಳಿಯ ಮೋಡಗಳ, ಬಿಸಿಲ ಬೆಳಕಿನ ನಡುವೆ ಬಯಲ ಸ್ವೇಚ್ಛೆಯ, ತಿಳಿಗಾಳಿ ತವಕದಲಿ ಬಂಧನಗಳ ...

 • 1 month ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 month ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 month ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...


Editor's Wall

 • 31 August 2018
  2 months ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  2 months ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  2 months ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  2 months ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  2 months ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...