Share

ಕೊನಾರ್ಕ್ ‘ಕಾಲ ದೇಗುಲ’

 

ಪ್ರವಾಸಿ ಸವಿತಾ ಕಂಡ ಇಂಡಿಯಾ

 

ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ಸಂಚಿಕೆಯಿಂದ ‘ಹೊಸ ಮನುಷ್ಯ’ ಎಂದು ಪುನರ್ನಾಮಕರಣಗೊಂಡಿತು) 2011ರ ಸೆಪ್ಟಂಬರಿನಿಂದ 2012ರ ಆಗಸ್ಟ್ ಸಂಚಿಕೆಗಳವರೆಗೆ ಧಾರಾವಾಹಿಯಾಗಿ ಪ್ರಕಟವಾಗಿತ್ತು.

-ಸವಿತಾ ನಾಗಭೂಷಣ, ಶಿವಮೊಗ್ಗ

 

ಭಾಗ-7

ರಿ ಸುಮಾರು ಒಂದು ವಾರದಿಂದ ಟಿವಿ, ದಿನಪತ್ರಿಕೆ, ಮೊಬೈಲ್ ಇತ್ಯಾದಿಗಳಿಂದ ದೂರವಿದ್ದು, ಬರೀ ಬೆಟ್ಟ-ಗುಡ್ಡ-ನದಿ ದೇಗುಲ ಎಂದು ಅಲೆದಾಡುತ್ತಿದ್ದ ನಾವು ಸಮುದ್ರ ದಡದ ಸನಿಹದಲ್ಲೇ ಇದ್ದ ಕೊನಾರ್ಕ್ ನ ವಿಶ್ವಖ್ಯಾತ ಸೂರ್ಯ ದೇವಾಲಯವನ್ನು ಎದುರುಗೊಂಡೆವು. ಕೊನಾರ್ಕ್(ಕೋನ+ಅರ್ಕ) ಎಂದರೆ ಸೂರ್ಯನ ನೆಲೆ ಎಂದರ್ಥ. ಈ ದೇವಾಲಯ ಕಲ್ಲಿನ ಭಾಷೆಯಲ್ಲಿ ಜಗದ ಸಕಲ ಜ್ಞಾನವನ್ನೂ ಪ್ರಚುರಪಡಿಸುವ ಬೃಹತ್ ಶಿಲಾ-ವಿಶ್ವವಿದ್ಯಾಲಯದಂತೆ ನನಗೆ ತೋರಿತು. ಅಷ್ಟಕ್ಕೂ ಸೂರ್ಯ ಅಂದರೆ ಬೆಳಕಲ್ಲವೆ? ‘ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟೆಗೆ ಮನವೇ ಬೀಜ’ ಎಂದು ಹನ್ನೆರಡನೇ ಶತಮಾನದಲ್ಲಿ ನುಡಿದ ಮಹದೇವಿಯಕ್ಕನ ವಚನವನ್ನು ಕೇಳಿ ಕರಗಳ ಚೇಷ್ಟೆ ತಡೆಯಲಾಗದೆ ಸಾವಿರಾರು ಶಿಲ್ಪಿಗಳು ಈ ಅನುಪಮ ಸೂರ್ಯ ದೇವಾಲಯವನ್ನು ಕಡೆದಿರಬಹುದು ಎಂದು ನನ್ನ ಕವಿಮನ ತರ್ಕಿಸಿತು.

ಈ ದೇಗುಲವನ್ನು ಹದಿಮೂರನೇ ಶತಮಾನದ ಗಂಗ ವಂಶಸ್ಥ ರಾಜ ಮೊದಲನೆಯ ನರಸಿಂಹದೇವ ಕಟ್ಟಿಸಿದನೆಂದು ಹೇಳಲಾಗುತ್ತದೆ. ಪುರಾಣಗಳ ಪ್ರಕಾರ ಕೃಷ್ಣನ ಮಗ ಸಾಂಬ ಕುಷ್ಠರೋಗ ಪೀಡಿತನಾದಾಗ ಹನ್ನೆರಡು ವರ್ಷಗಳ ಕಾಲ ಸೂರ್ಯನ ಮುಂದೆ ತಪಗೈದು(ಬಹುಶಃ ಸೂರ್ಯಪಾನದ ಪ್ರಕೃತಿ ಚಿಕಿತ್ಸೆಯಿಂದ ಗುಣಮುಖನಾಗಲು) ಬೃಹತ್ ಸೂರ್ಯನ ಮೂರ್ತಿಯನ್ನು ಕೆತ್ತಿಸಿ ನಿಲ್ಲಿಸಿದನಂತೆ. ಅದೇನೇ ಇರಲಿ, ಈ ಬೆಳಕಿನ ದೇವಾಲಯವನ್ನು ಒಮ್ಮೆ ಸುತ್ತಿ ಬಂದಾಗ, ಬಹುಶಃ ಜಗತ್ತಿನಲ್ಲಿ ಅತ್ಯಂತ ಮೃದುವಾದುದು ಏನಾದರೂ ಇದ್ದಲ್ಲಿ ಅದು ಕಲ್ಲೇ ಇರಬೇಕು ಎಂದೆನಿಸದಿರದು! ಕಲ್ಲನ್ನು ಮೃದುವಾಗಿ ನಾದಿ ತನಗೆ ಬೇಕಾದ ಆಕಾರಕ್ಕೆ ಹಿಗ್ಗಿಸಿ ಬಗ್ಗಿಸಿ ತಿದ್ದಿ ತೀಡಿದಂತಿತ್ತು, ಕಳಿಂಗ ವಾಸ್ತು (ಬೌದ್ಧ)ಶೈಲಿಯ ಈ ದೇಗುಲ. ಚಂದ್ರಭಾಗ ಸಮುದ್ರ ತೀರ ಎಂದು ಕರೆಯಲಾಗುವ ವಿಶಾಲ ಪ್ರದೇಶದಲ್ಲಿ ನಿಂತಿರುವ ಈ ‘ಕಾಲ ದೇಗುಲ’ಕಾಲದೇವನ ಮಹಾ ಮಹಿಮೆಯನ್ನು, ಲೋಹಿಯಾ ಅವರ ಮಾತಿನಲ್ಲೇ ಹೇಳುವುದಾದರೆ, ‘ಕಲ್ಲಿನ ಮಾತು’ಗಳ ಮೂಲಕ ಜಗತ್ತಿಗೆ ಸಾರುವಂತಿದೆ. (ಲೋಹಿಯಾ ಅವರ ‘ಇತಿಹಾಸ ಚಕ್ರ’ ಪುಸ್ತಕದ ರಕ್ಷಾಪುಟದಲ್ಲಿರುವುದೂ ಈ ದೇವಾಲಯದ ಕಾಲಚಕ್ರವೇ!)

ಈ ಕಾಲ ದೇಗುಲವನ್ನು ನೋಡುತ್ತಿರುವಂತೆಯೇ ನನಗೂ ಯಾರೋ ಕೀಲಿ ಕೊಟ್ಟು ವಾಪಸು ಹದಿಮೂರನೆಯ ಶತಮಾನಕ್ಕೆ ಕರೆದೊಯ್ದಂತಾಯಿತು.

ಏಳು ಕುದುರೆಗಳಿಂದ ಎಳೆಯಲ್ಪಡುತ್ತಿರುವ ರಥವೇ ದೇವಾಲಯವಾಗಿರುವ ಈ ಕಾಲ-ದೇಗುಲಕ್ಕೆ 24 ಬೃಹದಾಕಾರದ ಚಕ್ರಗಳಿವೆ. ಒಂದು ಪಾರ್ಶ್ವದಲ್ಲಿ ಸೂರ್ಯದೇವನ ಮೂರು ಮುಖಗಳನ್ನು ಹೊಂದಿರುವ ವಿಗ್ರಹ ಹುಟ್ಟು, ಬದುಕು, ಸಾವುಗಳನ್ನು ಸೂಚಿಸುತ್ತಿರುವಂತೆಯೇ ಸೂರ್ಯೋದಯ, ನಡು ಮಧ್ಯಾಹ್ನ, ಸೂರ್ಯಾಸ್ತದ ಕಲ್ಪನೆ ಹೊಂದಿದ್ದು ಸಮಯಕ್ಕೆ ಸರಿಯಾಗಿ ಬಿಸಿಲು ಅದದೇ ಮೊಗದ ಮೇಲೆ ಬೀಳುವಂತೆ ಅದದೇ ಚಕ್ರಗಳ ಮೇಲೆ ಹಾದು ಹೋಗಿ ನಿಗದಿತ ಸಮಯವನ್ನು ನಿಖರವಾಗಿ ಅರಿಯಲು ಸಹಾಯವಾಗುವಂತೆ ನಿರ್ಮಿಸಲಾಗಿದೆ. ಒಂದೊಂದು ಚಕ್ರವೂ ಅದರ ಪುಟಿಗಳೂ ಗಡಿಯಾರ ಮತ್ತು ಅದರ ಮುಳ್ಳುಗಳಂತಿದ್ದು ಜ್ಯಾಮಿತೀಯ ಸೂತ್ರಕ್ಕನುಗುಣವಾಗಿ ಎಷ್ಟು ಕರಾರುವಕ್ಕಾಗಿ ಕಡೆಯಲ್ಪಟ್ಟಿವೆ ಎಂದರೆ ಇಂದಿನ ಉನ್ನತ ತಂತ್ರಜ್ಞಾನದ ಜ್ಯಾಮಿತಿ ಶಾಸ್ತ್ರವನ್ನೂ ಮೀರಿಸುವಂತಿದೆ.

ಗ್ರಹ, ತಾರೆ, ಗಿಡ, ಮರ ಹೂವು ಹಣ್ಣು, ಕ್ರಿಮಿ, ಕೀಟ, ಪಶು, ಪಕ್ಷಿ, ನೃತ್ಯ ಸಂಗೀತ, ಕಲೆ, ಸಂಸ್ಕೃತಿ, ಧರ್ಮ, ಅರ್ಥ, ಕಾಮ, ಮೋಕ್ಷ ಲೋಕಗಳ ಸಕಲ ವಿವರಗಳೂ ಈ ದೇವಾಲಯದ ಗೋಡೆಗಳ ಮೇಲೆ ಮೂರ್ತೀಭವಿಸಿವೆ. ಇಂದಿನ ವಿಶ್ವವಿದ್ಯಾಲಯಗಳಲ್ಲಿ ಬೋಧಿಸಲ್ಪಡುವ ಎಲ್ಲ ಶಾಸ್ತ್ರಗಳೂ ಈ ದೇವಾಲಯದ ಗೋಡೆಗಳ ಮೇಲೆ ಬಿಂಬಿತವಾಗಿವೆ. ಅಷ್ಟೇ ಅಲ್ಲ, ಇಲ್ಲಿ ಕಡೆಯಲ್ಪಟ್ಟಿರುವ ಲೈಂಗಿಕ ಶಿಲ್ಪಗಳು ಆ ಕಾಲದಲ್ಲಿ ಜನತೆಗೆ ಅಶ್ಲೀಲವೆನ್ನಿಸದ ರೀತಿಯಲ್ಲಿ ಲೈಂಗಿಕ ಶಿಕ್ಷಣ ಒದಗಿಸಿದ ಸೂಚನೆಗಳನ್ನು ನೀಡುತ್ತವೆ.

ಈ ದೇಗುಲವನ್ನು ನಿರ್ಮಿಸಿದಾಗ ಇದರ ಮೇಲೆ ಬೃಹತ್ ಅಯಸ್ಕಾಂತ ಗೋಪುರವಿತ್ತಂತೆ. ಅದು ಸಮುದ್ರದ ಮೂಲಕ ದಾಳಿಯಿಡುತ್ತಿದ್ದ ವಿದೇಶಿ ಹಡಗುಗಳ ದಿಕ್ಸೂಚಿಯ ಮೇಲೆ ಪ್ರಭಾವ ಬೀರಿ ಹಡುಗುಗಳು ದಿಕ್ಕು ತಪ್ಪುವಂತೆ ಮಾಡುವ ಉದ್ದೇಶ ಹೊಂದಿದ್ದುದರಿಂದ ಪೋರ್ಚುಗೀಸರು ಅದನ್ನು ಉರುಳಿಸಿದರೆಂದೂ, ದೇವಾಲಯದ ಗರ್ಭ ಗುಡಿಯಲ್ಲಿದ್ದ ಅತಿ ದೊಡ್ಡ ವಜ್ರದ ತಿಲಕ ಹೊಂದಿದ್ದ ಸೂರ್ಯದೇವನ ವಿಗ್ರಹವನ್ನು ಬ್ರಿಟಿಷರು ಹೊತ್ತೊಯ್ದರೆಂದೂ ಈಗ ಅದು ವಜ್ರ-ತಿಲಕರಹಿತವಾಗಿ ಲಂಡನ್ನಿನ ವಸ್ತು ಸಂಗ್ರಹಾಲಯದಲ್ಲಿದೆಯೆಂದೂ ಹೇಳಲಾಗುತ್ತದೆ. ಮಸ್ಲಿನ್ ಬಟ್ಟೆ ನೇಯ್ದ ಭಾರತೀಯ ನೇಕಾರರ ಬೆರಳುಗಳನ್ನು ಬ್ರಿಟಿಷರು ಮತ್ಸರದಿಂದ ಕೊಯ್ದುದನ್ನು ಕೇಳಿದ್ದೆನಷ್ಟೆ. ಆದರೆ ಅಯಸ್ಕಾಂತ ಗೋಪುರವನ್ನು ಉರುಳಿಸುವ ಮೂಲಕ ಒಡಿಶಾದ ಕೊನಾರ್ಕದಲ್ಲಿ ಭಾರತೀಯ ವಾಸ್ತುತಜ್ಞರ ತಲೆಯನ್ನೇ ಕತ್ತರಿಸಿ ಹಾಕಿದ್ದರು.
ಶತಮಾನಗಳ ಕಾಲ ಮರಳಿನಲ್ಲಿ ಹೂತುಹಾಕಿದ್ದ ಸೂರ್ಯದೇವನ ವಿಗ್ರಹವೇ ಈಗ ಜಗನ್ನಾಥಪುರಿಯಲ್ಲಿ ಇಂದ್ರದೇವನ ವಿಗ್ರಹವಾಗಿ ಪ್ರತಿಷ್ಠಾಪಿತವಾಗಿರುವುದು ಎಂದೂ ಹೇಳಲಾಗುವುದು. ಈಗಂತೂ ಇದು ದೇವರಿಲ್ಲದ ಗುಡಿ. ಮೊಘಲರು. ಪೋರ್ಚುಗೀಸರು, ಬ್ರಿಟಿಷರು, ದೇಸಿ ಚೋರರು ಈ ಸ್ಥಳಕ್ಕೆ ಬಂದು ನಡೆಸಿರುವ ಕಾರುಬಾರು ನೋಡಿದರೆ ಈ ದೇವಾಲಯದ ಪ್ರಸಿದ್ಧಿ ಮೂಜಗಕ್ಕೂ ಹರಡಿತ್ತೆಂಬುದು ಗೊತ್ತಾಗುತ್ತದೆ. ನೂರಾರು ವರ್ಷಗಳ ಕಾಲ ಈ ದೇಗುಲ ದಿಕ್ಕುದೆಸೆಯಿಲ್ಲದೆ ಮರಳಿನಲ್ಲಿ, ಕುರುಚಲು ಕಾಡುಪೊದೆಗಳಲ್ಲಿ ಹೂತು ಹೋಗಿತ್ತೆಂದೂ, ದರೋಡೆಕೋರರ ಆವಾಸ ಸ್ಥಾನವಾಗಿತ್ತೆಂದೂ, ನಂತರ ಇದರ ನೆಲೆ ಕಂಡುಹಿಡಿದು ಜೀರ್ಣೋದ್ಧಾರ ಮಾಡಲಾಯಿತೆಂದೂ, ಈಗ ವಿಶ್ವ ಪರಂಪರೆ ಪಟ್ಟಿಗೆ ಸೇರಿದ ಮೇಲೆ ನಾವು ಈಗ ನೋಡುತ್ತಿರುವ ಸ್ಥಿತಿಯಲ್ಲಿದೆ. ಅಸ್ಥಿಪಂಜರವೇ ಇಷ್ಟು ಸೊಗಸಾಗಿದ್ದರೆ ಮೂಲ ದೇಗುಲ ಎಷ್ಟು ದಿವ್ಯವಾಗಿತ್ತೋ ಎಂದು ಕಲ್ಪಿಸಿಕೊಂಡು ರೋಮಾಂಚನವಾಯಿತು.

ಇದರ ಮೂಲ ವಿಗ್ರಹ ಸೂರ್ಯನೋ, ಬುದ್ಧನೋ, ಸಿದ್ಧನೋ… ಅದರೆ ಬೃಹತ್ ವಜ್ರದ ತಿಲಕ, ಅದರ ಉಜ್ವಲ ಬೆಳಕು ಸೂರ್ಯನ ಬೆಳಕಷ್ಟೇ ಪ್ರಖರವಾಗಿದ್ದಿರಬಹುದು. ಆದರೆ ಚಕ್ರಗಳು ತಿರುಗುತ್ತಲೇ ಇರುವಾಗ ಯಾವುದು ಶಾಶ್ವತ? ಕಟ್ಟುವುದು, ಕೆಡವುವುದು ನಿರಂತರ. ದೇವಾಲಯವನ್ನು ಭಗ್ನಗೊಳಿಸಿದವರೇ ಮುಂದೆ ಭವ್ಯವಾದ ಪ್ರೇಮ ದೇವಾಲಯವನ್ನು (‘ತಾಜ್ ಮಹಲ್’ನ್ನು) ಕಟ್ಟಲಿಲ್ಲವೇ? ಇದೆಲ್ಲ ಮನುಷ್ಯನ ಘನತೆ, ಕ್ಷುದ್ರತೆಯ ಚಲನೆಯ ಚಕ್ರಗಳು ಎಂದೆಲ್ಲ ಅಂದುಕೊಳ್ಳುತ್ತಾ ಇತಿಹಾಸದ ವಿದ್ಯಾರ್ಥಿಗಳು ಉರುಹೊಡೆದು ಉನ್ನತ ಶಿಕ್ಷಣದ ಪದವಿಪತ್ರ ಪಡೆದು ಬೀಗುವುದಕ್ಕಿಂತ ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಇಂತಹ ಸ್ಥಳಗಳನ್ನು ಸಂದರ್ಶಿಸುವುದು ಒಳಿತು ಎನ್ನಿಸಿತು.

ನೆತ್ತಿಯನ್ನು ಸುಡುತ್ತಿದ್ದ ಸೂರ್ಯನನ್ನು ಒಮ್ಮೆ ನೋಡಿ ಇವನನ್ನು ಎಲ್ಲಾದರೂ ನಾಕು ಗೋಡೆಗಳ ಮಧ್ಯೆ ಬಂಧಿಸಿ ಪೂಜಿಸುವುದು ಸಾಧುವೇ ಎಂದು ಮನ ತರ್ಕಿಸಿ ನಗೆ ಬಂದಿತು.

Share

Leave a comment

Your email address will not be published. Required fields are marked *

Recent Posts More

 • 3 days ago No comment

  ಈ ಸಂಜೆಯೊಳಗೆ

    ಕವಿಸಾಲು       ಈ ಸಂಜೆಯೊಳಗೆ ಗರಿಗೆದರುತ್ತವೆ ಮೌನದಲ್ಲೆ ಗರಬಡಿದ ಮಾತುಗಳು ಹೊಸ ಬಟ್ಟೆಯ ತೊಟ್ಟ ಮಗುವಂತೆ ಸಮುದ್ರದ ದಂಡೆಯಲಿ ದೂರ ಉಳಿದ ಭಾವಗಳು ಅಲೆಗಳಾಗಿ ಬಂದು ಪಾದಮುಟ್ಟಿ ತಮಾಷೆ ಮಾಡುತವೆ ಆಪ್ತ ಗೆಳೆಯನಂತೆ ಗೂಡಿಗೆ ಹೊರಟ ಹಕ್ಕಿಗಳು ತಿರುಗಿ ನೋಡಿವೆ ಬರುವಾಗ ಏನೋ ತಂದಿದ್ದು ಮರೆತು ಬಂದನೋ ಎಂಬಂತೆ ಅಪ್ಪನಿಲ್ಲದ ಮಕ್ಕಳು ಕೂಲಿಗೆ ಹೋದ ತಾಯಿಯ ದಾರಿಯ ಕಣ್ಣು ಮಿಟುಕಿಸದೇ ನೋಡುತಿವೆ ಅರ್ಧದಲೇ ಮರೆತ ...

 • 6 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 1 week ago No comment

  ಹುಲ್ಲಿನ ಕಡ್ಡಿ

    ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

 • 2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 2 weeks ago No comment

  ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

    ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...


Editor's Wall

 • 15 August 2018
  6 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 09 August 2018
  2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 01 August 2018
  3 weeks ago No comment

  ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                      ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

 • 25 July 2018
  4 weeks ago No comment

  ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                      ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

 • 11 May 2018
  3 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...