Share

ಪ್ರಸಾದ್ ನಾಯ್ಕ್ ಪಟ್ಟಾಂಗ | ನನಗೂ ಒಬ್ಬ ಗೆಳೆಯ ಬೇಕು…

ಘಟನೆಯನ್ನು ನೆನಪಿಸಿಕೊಂಡಾಗಲೆಲ್ಲಾ ಈಗಲೂ ನಗು ಉಕ್ಕುಕ್ಕಿ ಬರುತ್ತದೆ.

ಅಂದು ವಿಚಿತ್ರ ಘಟನೆಯೊಂದು ನಡೆದಿತ್ತು. ಅವು ನನ್ನ ಕಾಲೇಜಿನ ದಿನಗಳು. ಮಂಗಳೂರಿನ ಶಾಪಿಂಗ್ ಮಾಲ್ ಒಂದಕ್ಕೆ ಮಧ್ಯಾಹ್ನದ ಊಟಕ್ಕೆಂದು ಬಂದಿದ್ದ ನಾನು ಫುಡ್ ಕೋರ್ಟಿನಲ್ಲಿ ಸುಮ್ಮನೆ ಅಡ್ಡಾಡುತ್ತಿದ್ದೆ. ಎತ್ತ ಹೋಗಬೇಕೆಂದು ತಿಳಿಯದೆ ಸುಮ್ಮನೆ ಒಂದು ಕೌಂಟರಿನತ್ತ ನಡೆದು ಬೇಕಿದ್ದದ್ದನ್ನು ಆರ್ಡರ್ ಮಾಡಿದೆ. ಕೆಲಸವಿಲ್ಲದೆ ನೊಣ ಹೊಡೆಯುತ್ತಿದ್ದ ಆ ಹೆಂಗಸಿಗೆ ನನ್ನ ಆಗಮನವು ಅಂಥಾ ಉತ್ಸಾಹವೇನೂ ತರಲಿಲ್ಲವಾದರೂ ನಾನು ಹೇಳಿದ್ದನ್ನೆಲ್ಲಾ ಬರೆದುಕೊಂಡು ಒಳನಡೆದರು. ನಂತರ ಒಳನಡೆದ ವೇಗದಲ್ಲೇ ಹೊರಬಂದ ಆಕೆ ”ಇನ್ನೂ ಏನೂ ತಯಾರಾಗಿಲ್ಲ. ಟೈಮಾಗುತ್ತೆ. ಒಂದರ್ಧ ತಾಸಾಗಬಹುದು”, ಎಂದು ನಿರುತ್ಸಾಹದಿಂದ ನುಡಿದಳು. ನಾನೂ ಗಡಿಬಿಡಿಯಲ್ಲಿರದಿದ್ದ ಕಾರಣ ಹೂಂಗುಟ್ಟಿ ಅಲ್ಲೇ ಎದುರಿನಲ್ಲಿದ್ದ ಕುರ್ಚಿಯಲ್ಲಿ ಕುಳಿತುಕೊಂಡೆ. ಕೌಂಟರಿನಾಚೆ ಆಕೆ. ಈ ಕಡೆ ನಾನು. ಮಧ್ಯಾಹ್ನದ ವಾತಾವರಣವು ಆಕೆಯನ್ನು ತೂಕಡಿಕೆಗೆ ದೂಡಿದರೆ ನನ್ನನ್ನು ಆಲಸ್ಯಕ್ಕೆ ದೂಡಿತ್ತು. ಒಟ್ಟಿನಲ್ಲಿ ನೀರಸ ಮಧ್ಯಾಹ್ನ.

ಕಾಲಹರಣಕ್ಕೆಂದು ಏನಾದರೂ ಮಾಡಬೇಕಲ್ಲಾ? ಆಕೆ ಪುಟ್ಟ ಚೀಟಿಯೊಂದರಲ್ಲಿ ಬರೆದಿದ್ದ ನನ್ನ ಆರ್ಡರ್ ನನಗೆ ಕಂಡಿದ್ದು ಆಗಲೇ. ಆಕೆಯ ಕೈಬರಹವು ನಿಜಕ್ಕೂ ಸೊಗಸಾಗಿರುವುದನ್ನು ನಾನು ಗಮನಿಸಿದೆ. ಆಕೆಯ ಟಿ-ಶರ್ಟಿನ ಮೇಲೆ ಸಿಕ್ಕಿಸಿದ್ದ ಪುಟ್ಟ ಲೋಹದ ಪಟ್ಟಿಯಲ್ಲಿ ಅಚ್ಚೊತ್ತಿದ್ದ ಹೆಸರನ್ನು ಕಂಡು, ಅದೇ ಹೆಸರಿನಲ್ಲಿ ಸಂಬೋಧಿಸಿ, ನಿಮ್ಮ ಕೈಬರಹ ಬಹಳ ಸೊಗಸಾಗಿದೆ ಎಂದು ಹೇಳಿದೆ. ಬಹುಷಃ ಗ್ರಾಹಕನಾಗಿ ನನ್ನಿಂದ ಈ ಮಾತನ್ನು ನಿರೀಕ್ಷಿಸದ ಆಕೆ ಒಮ್ಮೆಲೇ ಖುಷಿಯಾದವಳಂತೆ ಕಂಡಳು. ನನಗೆ ಧನ್ಯವಾದಗಳನ್ನರ್ಪಿಸುತ್ತಾ ಅದು-ಇದು ಎನ್ನುತ್ತಾ ಏನೋ ಕಥೆ ಹೇಳತೊಡಗಿದಳು. ನಾನು ಮಿತಭಾಷಿಯಾಗಿದ್ದರಿಂದ ಮತ್ತು ಮಾತಾಡುವ ಎಲ್ಲಾ ಕೆಲಸಗಳನ್ನು ಆಕೆಯೇ ಮಾಡುತ್ತಿದ್ದ ಪರಿಣಾಮವಾಗಿ ನನ್ನ ಕೆಲಸವು ಆಲಿಸುವುದಕ್ಕೇ ಮೀಸಲಾಗಿ ಮತ್ತಷ್ಟು ಸುಲಭವಾಯಿತು. ಕೀ ಕೊಟ್ಟ ಆಟಿಕೆಯಂತೆ ಒಂದೇ ಸಮನೆ ಮಾತನಾಡುತ್ತಾ ಹೋದ ಆಕೆ ತನ್ನ ಗಂಡ, ಕುಟುಂಬ, ಎಫ್ಫೆಮ್ಮು, ಟ್ರಾಫಿಕ್ಕು… ಹೀಗೆ ನಿಲ್ಲದೆ ಹೇಳುತ್ತಲೇ ಹೋದಳು. ಹಲವು ವರ್ಷಗಳ ನಂತರ ಬಾಲ್ಯದ ಗೆಳೆಯರು ಸಿಕ್ಕಾಗ ಮಾತಾಡುವಂತೆ ಸುಮಾರು ಇಪ್ಪತ್ತೈದರಿಂದ ಮೂವತ್ತು ನಿಮಿಷಗಳ ಕಾಲ ಆಕೆ ಮಾತಾಡಿದ್ದೇ ಮಾತಾಡಿದ್ದು. ಬರೀ ಮಾತು. ಆಕೆಯದ್ದೇ ಮಾತು! ಕೊನೆಗೆ ಮಾತಿನ ಭರದಲ್ಲಿ ನನ್ನ ಬಳಿ ತನ್ನ ಹಿರಿಯ ಅಧಿಕಾರಿಯನ್ನು ಬೈಯಲು ಹೊರಟಿದ್ದ ಆಕೆ ಈ ಬಾರಿ ಮಾತ್ರ ಹಟಾತ್ತನೆ ಎಚ್ಚರವಾದವಳಂತೆ ಒಂದು ಕ್ಷಣ ಸ್ತಬ್ದಳಾದಳು. ತಾನು ಇಷ್ಟು ಹೊತ್ತು ಮಾತಲ್ಲೇ ಮೈಮರೆತಿದ್ದೆನೆಂಬ ಸತ್ಯವು ಆಕೆಗೆ ಈಗ ಅರಿವಾಗಿತ್ತು. ಇನ್ನು ಆಗಂತುಕ ವಿದ್ಯಾರ್ಥಿಯೊಬ್ಬನೆದುರು ಹೀಗೆ ಮೈಮರೆತಿದ್ದು ಆಕೆಯನ್ನು ಮುಜುಗರಕ್ಕೂ, ಆತಂಕಕ್ಕೂ ದೂಡಿತ್ತು. “ಯಾರ್ರೀ ನೀವು?”, ನನ್ನನ್ನು ನೋಡುತ್ತಾ ಆಘಾತಕ್ಕೊಳಗಾದವಳಂತೆ ಕೇಳಿದಳು ಆಕೆ. ಈಗ ಹೀಗಾದರೆ ಏನು ಮಾಡುವೆನೋ ಗೊತ್ತಿಲ್ಲ. ಆದರೆ ಅಂದು ಮಾತ್ರ ಆಕೆಯೆದುರೇ ಜೋರಾಗಿ ನಕ್ಕುಬಿಟ್ಟಿದ್ದೆ. ಮಾತಿನ ಭರದಲ್ಲಿ ಜಗತ್ತನ್ನೇ ಮರೆಯುವವರಿದ್ದಾರಲ್ಲಾ ಎಂಬುದು ನನಗಂದು ತಮಾಷೆಯಾಗಿ ಕಂಡಿತ್ತು. ನನ್ನ ನಗುವಿನಿಂದ ಮತ್ತಷ್ಟು ಇರಿಸುಮರುಸಾದ ಆಕೆ ತನ್ನ ಮಾತನ್ನು ಅಲ್ಲೇ ನಿಲ್ಲಿಸಿ ಒಳನಡೆದಿದ್ದಳು. ಆ ಹುಡುಗಾಟದ ದಿನಗಳಲ್ಲಿ ನನಗಂತೂ ಇದೊಂದು ತಮಾಷೆಯ ಘಟನೆಯಾಗಿ ಶಾಶ್ವತವಾಗಿ ಉಳಿದುಬಿಟ್ಟಿತು.

ಆದರೆ ತಮಾಷೆಯ ಜೊತೆಗೇ ಈ ಘಟನೆಯು ಬಹುದೊಡ್ಡ ಪಾಠವೊಂದನ್ನು ನನಗೆ ಕಲಿಸಿದ್ದೂ ಸತ್ಯ. ಹೊಸ ಗೆಳೆತನವನ್ನು ಸಂಪಾದಿಸಿಕೊಳ್ಳುವುದು ಹೇಗೆ ಎಂಬುದು ಈ ಒಂದು ಘಟನೆಯಿಂದ ನನಗೆ ಮನದಟ್ಟಾಗಿತ್ತು. ನಾನು ಆಕೆಗೆ ಆಗಂತುಕನಾಗಿದ್ದೆ. ಓರ್ವ ಯಕಃಶ್ಚಿತ್ ಗ್ರಾಹಕನಾಗಿದ್ದೆ. ಆಕೆ ನನ್ನ ದುಪ್ಪಟ್ಟಿನ ವಯಸ್ಸಿನವರಾಗಿದ್ದರು. ಆದರೆ ಮೊದಲ ಭೇಟಿಯಾಗಿದ್ದ ಹೊರತಾಗಿಯೂ ಅಷ್ಟು ಹೊತ್ತು ಅಂದು ನಾವು ಹರಟಿದೆವು. ನಾವು ಹರಟಿದೆವು ಅನ್ನುವುದಕ್ಕಿಂತಲೂ ಆಕೆ ಹರಟಿದರು ಎನ್ನುವುದು ಅಪ್ಪಟಸತ್ಯ. ನಾನು ಆಕೆಯನ್ನು ಹೊಗಳಿದ್ದರಿಂದ ಆಕೆ ಉಬ್ಬಿಹೋಗಿ ಇಷ್ಟು ಮಾತಾಡಿದಳು ಎಂಬುದು ಅರ್ಧಸತ್ಯ ಮಾತ್ರ. ಏಕೆಂದರೆ ಅದು ನನ್ನ ಮನದಾಳದ ಪ್ರಶಂಸೆಯಾಗಿತ್ತೇ ಹೊರತು ಮುಖಸ್ತುತಿಯಾಗಿರಲಿಲ್ಲ. ಕೈಬರಹವು ಸೊಗಸಾಗಿದ್ದವರಿಗೆ ಸಾಮಾನ್ಯವಾಗಿ ಈ ಬಗ್ಗೆ ಆಗಲೇ ತಿಳಿದಿರುತ್ತದೆ. ಇದರಲ್ಲಿ ಹೊಸತೇನಿಲ್ಲ. ಹಾಗಿದ್ದರೆ ಇಲ್ಲಿ ಕೆಲಸ ಮಾಡಿದ್ದೇನು? ಉತ್ತರವು ಬಲು ಸರಳ: ನಾನು ಆಕೆಯ ಬಗ್ಗೆ ತಿಳಿದುಕೊಳ್ಳಲು ಉತ್ಸುಕನಾಗಿದ್ದೆ ಮತ್ತು ನಾವಿಬ್ಬರೂ ಗೆಳೆಯರಾಗಲು ಇದಿಷ್ಟು ಸಾಕಾಗಿತ್ತು.

ನಮ್ಮದೇ ಬಾಲ್ಯದ ದಿನಗಳನ್ನೊಮ್ಮೆ ನೆನೆಸಿಕೊಳ್ಳೋಣ. ಚಿಕ್ಕವರಿದ್ದಾಗ ನಾವು ವಯಸ್ಸು-ಲಿಂಗ-ಜಾತಿಭೇದಗಳಿಲ್ಲದೆ ಸಿಕ್ಕಸಿಕ್ಕವರೊಂದಿಗೆ ಮಾತಾಡುತ್ತಿದ್ದೆವು. ಕ್ಷಣಮಾತ್ರದಲ್ಲಿ ಸಂಭಾಷಣೆಗಳು ಶುರುವಾಗುತ್ತಿದ್ದವು. ಮಕ್ಕಳಾದ ನಮ್ಮನ್ನು ಯಾರಾದರೂ ಮಾತಾಡಿಸಿದ ಸಂದರ್ಭಗಳಲ್ಲೂ ಹೀಗಾಗುವುದು ಸಾಮಾನ್ಯವಾಗಿತ್ತು. ಆದರೆ ದೊಡ್ಡವರಾಗುತ್ತಾ ಬಂದಂತೆಲ್ಲಾ ನಮ್ಮ ಸುತ್ತಲೇ ನಾವು ಅದೃಶ್ಯ ಗೋಡೆಗಳನ್ನು ಕಟ್ಟತೊಡಗಿದೆವು. ಆಗಂತುಕರೆಂದರೆ ಕಳ್ಳನೋ, ಅತ್ಯಾಚಾರಿಯೋ ಎಂಬಂತಹ ಅಸಂಖ್ಯಾತ ಆತಂಕಗಳು ಶುರುವಾದವು. ಹೊಸ ಗೆಳೆತನವನ್ನು ಮಾಡುವ ಕೆಲಸವು ಕಷ್ಟವಾಗುತ್ತಾ ಹೋಯಿತು. ನೈಜಜಗತ್ತಿನಲ್ಲಿ ನಮ್ಮ ಸುತ್ತಮುತ್ತಲಿನವರನ್ನು ಗೆಳೆಯರನ್ನಾಗಿಸುವ ಬದಲು ನಾವು ಚಾಟ್ ರೂಮ್ ಗಳ, ಸಾಮಾಜಿಕ ಜಾಲತಾಣಗಳ ಮೊರೆಹೋದೆವು. ಐದು ಸಾವಿರ ಗೆಳೆಯರನ್ನು ಪಡೆದೆವೆಂದು ಜಂಭಕೊಚ್ಚಿಕೊಂಡೆವು. ಇನ್ನೆಲ್ಲೋ ಕುಳಿತು ಮಾತಾಡುತ್ತಿರುವ ಆಸಾಮಿಯು ಅಸಲಿಯೋ, ನಕಲಿಯೋ ಎಂಬ ಬಗ್ಗೆ ತಿಳಿಯದೆಯೂ ಖುಷಿಯಿಂದ ಕೀಬೋರ್ಡ್ ಕುಟ್ಟಿದೆವು, ಹಲ್ಲು ಕಿಸಿದೆವು, ರೋಮಾಂಚನಕ್ಕೊಳಗಾದೆವು. ಇನ್ನು ಮಾನಿಟರ್ ನಿಂದ ಹೊರಬಂದರೆ ಮತ್ತದೇ ನೀರಸ ಜೀವನ, ಸಪ್ಪೆ ಮುಖಗಳು, ಜನಜಾತ್ರೆಯಲ್ಲಿ ಕಳೆದುಹೋದಂತಿನ ಅನುಭವ.

ಹಲವು ವರ್ಷಗಳ ಹಿಂದೆ ನ್ಯೂಯಾರ್ಕಿನ ಟೆಲಿಫೋನ್ ಕಂಪೆನಿಯೊಂದು ಸರ್ವೇ ಮಾಡಿತ್ತಂತೆ. ಜನರು ಸಾಮಾನ್ಯವಾಗಿ ಟೆಲಿಫೋನ್ ಸಂಭಾಷಣೆಯಲ್ಲಿ ಅತೀ ಹೆಚ್ಚು ಬಳಸುವ ಪದ ಯಾವುದೆಂದು ತಿಳಿದುಕೊಳ್ಳುವುದು ಅವರ ಉದ್ದೇಶವಾಗಿತ್ತು. ಕೊನೆಗೂ ಅವರಿಗೆ ಸಿಕ್ಕ ಆ ಮ್ಯಾಜಿಕ್ ಪದವೆಂದರೆ ‘ನಾನು’. ಸುಮಾರು 500 ಟೆಲಿಫೋನ್ ಸಂಭಾಷಣೆಗಳಲ್ಲಿ ಒಟ್ಟು 3900 ಬಾರಿ ಈ ಪದವನ್ನು ಗುರುತಿಸಲಾಗಿತ್ತು. ಅದು ಹಾಗಿರಲಿ. ಒಂದು ಗ್ರೂಪ್ ಫೋಟೋ ಇದೆ ಎಂದಿಟ್ಟುಕೊಳ್ಳೋಣ. ಮೊಟ್ಟಮೊದಲು ಈ ಚಿತ್ರದಲ್ಲಿ ನಾವು ನೋಡೋದ್ಯಾರನ್ನು? ನಿಸ್ಸಂದೇಹವಾಗಿಯೂ ನಮ್ಮನ್ನೇ. ‘ನಾನು’ ಎಂಬುದು ನನಗೆಷ್ಟು ಮುಖ್ಯವೆಂಬುದು ತಿಳಿದುಕೊಳ್ಳಲು ಇದಿಷ್ಟೇ ಸಾಕು. ಹೀಗಿರುವಾಗ ನಮ್ಮ ಬಗ್ಗೆ ಇಂಥದ್ದೇ ಪ್ರಾಮುಖ್ಯತೆಯನ್ನು ಬೇರೆ ಯಾರಾದರೂ ಕೊಟ್ಟರೆಂದರೆ? ತಕ್ಷಣ ಅವರನ್ನು ನಾವು ಇಷ್ಟಪಡುತ್ತೇವೆ. ಸಮಾನಮನಸ್ಕರೆಂದು ತಿಳಿದುಕೊಳ್ಳುತ್ತೇವೆ. ಆ ವ್ಯಕ್ತಿಯ ದೃಷ್ಟಿಯಲ್ಲಿ ನಾವು ಅದೆಷ್ಟು ಪ್ರಮುಖ ಸ್ಥಾನದಲ್ಲಿ ಕುಳಿತಿದ್ದೇವೆ ಎಂಬ ಕಲ್ಪನೆಯೇ ಸೊಗಸಾದ ಅನುಭೂತಿಯನ್ನು ಹುಟ್ಟಿಸುತ್ತದೆ. ಇಲ್ಲಿ ಗೆಳೆತನಗಳಾಗುವುದು ಸುಲಭ.

ಇತರರ ಬಗ್ಗೆ ತಿಳಿದುಕೊಳ್ಳುವ ಉತ್ಸುಕತೆಯೆಂದರೆ ಅವರ ಖಾಸಗಿ ವಿಷಯಗಳಲ್ಲಿ ಮೂಗು ತೂರಿಸುವುದೇನೂ ಇಲ್ಲ. ಪತ್ತೇದಾರರಂತೆ ಬೆನ್ನು ಬೀಳುವುದೂ ಅಲ್ಲ. ಬೇರೊಬ್ಬರು ನಮ್ಮ ಬಗ್ಗೆ ಗಮನವನ್ನು ನೀಡುತ್ತಿದ್ದಾರೆ ಎಂಬ ಸತ್ಯವೇ ನಮ್ಮನ್ನು ಪ್ರಸನ್ನರಾಗಿಸಬಲ್ಲದು. ಚುನಾವಣೆಗಳಲ್ಲಿ ಉತ್ತರ ಭಾರತದ ನಾಯಕರೊಬ್ಬರು ದಕ್ಷಿಣದ ರಾಜ್ಯವೊಂದಕ್ಕೆ ರ್ಯಾಲಿಗೆಂದು ಬಂದಾಗ ಭಾಷಣದ ಮೊದಲ ಸಾಲನ್ನು ಸ್ಥಳೀಯ ಭಾಷೆಯಲ್ಲೇ ಹೇಳಿ ಚಪ್ಪಾಳೆ ಗಿಟ್ಟಿಸುವುದರ ಹಿಂದಿರುವ ಗಿಮಿಕ್ಕೂ ಇದೇ. ”ನೀವೆಲ್ಲರೂ ನನಗೆ ಬಹಳ ಮುಖ್ಯ, ಬಹಳ ಅಮೂಲ್ಯ”, ಎಂಬ ಭಾವನೆಯನ್ನು ಸ್ಥಳೀಯ ಜನತೆಯಲ್ಲಿ ಮೂಡಿಸುವುದು. ಹಲವು ವರ್ಷಗಳ ಹಿಂದಿನ ಮಾತು. ಒಮ್ಮೆ ಡ್ಯೂಕ್ ಆಫ್ ವಿಂಡ್ಸರ್ ಗೆ ದಕ್ಷಿಣ ಅಮೆರಿಕಾ ಪ್ರವಾಸಕ್ಕೆಂದು ಹೊರಡಬೇಕಿತ್ತಂತೆ. ಪ್ರವಾಸಕ್ಕೆ ಇನ್ನೂ ತಿಂಗಳುಗಳು ಬಾಕಿಯಿರುವಾಗಲೇ ಸ್ಪ್ಯಾನಿಶ್ ಕಲಿಯಲು ಆರಂಭಿಸಿದರು ಈತ. ದಕ್ಷಿಣ ಅಮೆರಿಕಾಗೆ ಹೋಗಿ ಅವರದ್ದೇ ಭಾಷೆಯಲ್ಲಿ ಮಾತನಾಡುವುದು ಅವರ ಉದ್ದೇಶವಾಗಿತ್ತು. ಅವರ ಪ್ರಯತ್ನದಿಂದ ಅದು ನೆರವೇರಿತು ಕೂಡ. ದಕ್ಷಿಣ ಅಮೆರಿಕನ್ನರು ಈ ಬ್ರಿಟಿಷ್ ರಾಜಮನೆತನದ ಅರಸನ ಸ್ಪ್ಯಾನಿಶ್ ಭಾಷಣಕ್ಕೆ ತಲೆದೂಗಿದರು. ಅತಿಥಿ ಈಗ ಹೊರಗಿನವನಾಗಿ ಉಳಿಯದೆ ಅವರಲ್ಲೊಬ್ಬನಾಗಿದ್ದ.

ಹೀಗೆ ಒಂದು ನಿಷ್ಕಲ್ಮಶ ನಗು, ಒಂದು ಆತ್ಮೀಯ ಪ್ರಶಂಸೆ, ಕಾಳಜಿಯ ಒಂದು ಮಾತು, ಇತರರ ಬಗ್ಗೆ ತಿಳಿದುಕೊಳ್ಳುವ ತವಕ, ಆಲಿಸುವ ತಾಳ್ಮೆಗಳಿದ್ದಲ್ಲಿ ಸಂವಹನವು ಅಂಥಾ ಸಾಹಸದಂತೇನೂ ಅನ್ನಿಸುವುದಿಲ್ಲ. ಹೊಸ ಗೆಳೆತನವನ್ನು ಬಯಸುವವರು ಇಂಥಾ ಸುಲಭದ ಮಾರ್ಗಗಳನ್ನೆಲ್ಲಾ ಕೈಬಿಟ್ಟು ಇದನ್ನೊಂದು ಸಂಕೀರ್ಣ ರಾಕೆಟ್ ಸೈನ್ಸ್ ನಂತೆ ನೋಡುತ್ತಿರುವುದರ ಬಗ್ಗೆ ಕೆಲವೊಮ್ಮೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹವನ್ನು ಬಯಸಿ ಖಾಸಗಿಯಾಗಿ ಸಂದೇಶಗಳನ್ನು ಕಳಿಸುವ ಕೆಲ ಆಗಂತುಕರನ್ನು ನಾನು ನೋಡುತ್ತಿರುತ್ತೇನೆ. ಬಹಳಷ್ಟು ಬಾರಿ ಇವುಗಳು ಅದೆಷ್ಟು ಮೂರ್ಖತನದ ವರಾತಗಳಾಗಿರುತ್ತವೆಯೆಂದರೆ ‘ನೀನೂ ಬೇಡ, ನಿನ್ನ ಗೆಳೆತನವೂ ಬೇಡ’ ಎಂದು ದೂರದಿಂದಲೇ ಅಟ್ಟುವಂತಾಗುತ್ತದೆ. ಸಾಮಾಜಿಕ ಜಾಲತಾಣಗಳ ಬಳಕೆದಾರರ ಇನ್ಬಾಕ್ಸ್ ಗಳು ಗೊತ್ತುಗುರಿಯಿಲ್ಲದ ಸಂದೇಶಗಳಿಂದ ತುಂಬಿ ಕಸದ ತೊಟ್ಟಿಯಂತಾಗಿರುವುದು ಕೂಡ ಈ ಕಾರಣಗಳಿಂದಲೇ.

ನೈಜಜೀವನದಲ್ಲಿ ನಾವು ಬೆಳೆಸುವ ಸಂಪರ್ಕಗಳಿಗೂ ವರ್ಚುವಲ್ ಜಗತ್ತಿನ ವಲಯಕ್ಕೂ ಇರುವ ವ್ಯತ್ಯಾಸದ ಗೆರೆಯು ಮಂದವಾದಂತೆ ಕಾಣತೊಡಗಿದಾಗ ಇಂಥಾ ಗೊಂದಲಗಳುಂಟಾಗುತ್ತವೆಯೇ? ಇರಬಹುದೇನೋ! ನಮ್ಮ ಕಾಲೇಜಿನಲ್ಲಿ ಓರ್ವ ಸಹಪಾಠಿಯಿದ್ದ. ಬಿಹಾರ ಮೂಲದವನು. ತರಗತಿಯಿಂದ ಹಾಸ್ಟೆಲ್ಲಿಗೆ ಬಂದ ನಂತರ ಅವನಿಗಿರುತ್ತಿದ್ದ ಏಕೈಕ ಕೆಲಸವೆಂದರೆ ಸಂವಹನ ಕಲೆಯ ಬಗೆಗಿನ ಹಲವು ಬಗೆಯ ಇ-ಪುಸ್ತಕಗಳನ್ನು ಓದುವುದು. ‘ಹೊಸ ಗೆಳೆಯರನ್ನು ಪಡೆದುಕೊಳ್ಳುವುದು ಹೇಗೆ?’, ‘ಸುಂದರಿಯೊಬ್ಬಳ ಫೋನ್ ನಂಬರ್ ಅನ್ನು ಐದು ನಿಮಿಷದೊಳಗೆ ಗಿಟ್ಟಿಸುವುದು ಹೇಗೆ?’… ಈ ಬಗೆಯವು. ಅದೇನು ಓದಿ ಗುಡ್ಡಹಾಕಿದನೋ ಆತ! ನಾಲ್ಕು ವರ್ಷಗಳಲ್ಲಿ ತನ್ನ ನಾಲ್ಕೈದು ಸಹಪಾಠಿಗಳನ್ನು ಹೊರತುಪಡಿಸಿ ಆತ ಯಾರ ಜೊತೆಗೆ ಮಾತನಾಡಿದ್ದನ್ನೂ ನಾವುಗಳು ನೋಡಿರಲಿಲ್ಲ. ಆದರೆ ಸತತ ಓದು ಮಾತ್ರ ಜಾರಿಯಲ್ಲಿತ್ತು. ಅಂತೂ ಇವೆಲ್ಲಾ ನಮ್ಮನ್ನು ಅದೆಷ್ಟು ಕಂಗೆಡಿಸಿತ್ತೆಂದರೆ ಈತ ಓದುತ್ತಿದ್ದುದೆಲ್ಲಾ ಕೆಲಸಕ್ಕೆ ಬಾರದ ಕಸವೇ ಎಂದು ತಲೆಕೆರೆದುಕೊಳ್ಳುವಂತಾಗುತ್ತಿತ್ತು. ಒಟ್ಟಿನಲ್ಲಿ ಇದು ಒಲೆ ಹಚ್ಚುವಷ್ಟೂ ಆಸಕ್ತಿ, ಧೈರ್ಯವಿಲ್ಲದವನು ಕಲ್ಪನೆಯಲ್ಲೇ ಅಡುಗೆ ಮಾಡಿ ಬಿರಿಯಾನಿ ಚಪ್ಪರಿಸಿದಂತೆ.

“ಯಶಸ್ವಿ ಲೇಖಕನಾಗಲು ಬೇಕಿರುವುದೊಂದೇ. ತಮ್ಮ ಸುತ್ತಮುತ್ತಲಿನ ಜನರ ಬಗ್ಗೆ ಆಸಕ್ತನಾಗಿರುವುದು” ಎಂದು ನ್ಯೂಯಾಕ್ ವಿಶ್ವವಿದ್ಯಾಲಯದ ಮಾಧ್ಯಮತಜ್ಞರೊಬ್ಬರು ಹೇಳಿದ್ದರಂತೆ. ಇದು ಲೇಖಕರಿಗೆ ಮಾತ್ರವಲ್ಲ, ಎಲ್ಲರಿಗೂ ಮುಖ್ಯವೇ. ಒಟ್ಟಿನಲ್ಲಿ ಹೊಸ ಗೆಳೆತನವನ್ನು ಬಯಸುವುದೆಂದರೆ ಆ ವ್ಯಕ್ತಿಗಾಗಿ ನಮ್ಮ ಹೃದಯದಲ್ಲಿ ಒಂದಷ್ಟು ಜಾಗವನ್ನು ಬಿಟ್ಟುಕೊಡಬೇಕಾಗುತ್ತದೆ. ಇನ್ನು ಇದಕ್ಕಿಂತಲೂ ದೊಡ್ಡ ಸತ್ಯವೆಂದರೆ ಹೀಗೆ ಬಿಟ್ಟುಕೊಡಲು ಮೊಟ್ಟಮೊದಲಾಗಿ ನಾವು ಆ ಸ್ಥಳವನ್ನು ಖಾಲಿಯೂ ಮಾಡಬೇಕಾಗುತ್ತದೆ.

ನಮ್ಮ ಗೆಳೆತನಗಳು ಇಂಥದ್ದೇ ಸಹಜಪ್ರೀತಿಯಲ್ಲಿ ಹುಟ್ಟಲಿ!

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರು. ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 3 days ago No comment

  ಈ ಸಂಜೆಯೊಳಗೆ

    ಕವಿಸಾಲು       ಈ ಸಂಜೆಯೊಳಗೆ ಗರಿಗೆದರುತ್ತವೆ ಮೌನದಲ್ಲೆ ಗರಬಡಿದ ಮಾತುಗಳು ಹೊಸ ಬಟ್ಟೆಯ ತೊಟ್ಟ ಮಗುವಂತೆ ಸಮುದ್ರದ ದಂಡೆಯಲಿ ದೂರ ಉಳಿದ ಭಾವಗಳು ಅಲೆಗಳಾಗಿ ಬಂದು ಪಾದಮುಟ್ಟಿ ತಮಾಷೆ ಮಾಡುತವೆ ಆಪ್ತ ಗೆಳೆಯನಂತೆ ಗೂಡಿಗೆ ಹೊರಟ ಹಕ್ಕಿಗಳು ತಿರುಗಿ ನೋಡಿವೆ ಬರುವಾಗ ಏನೋ ತಂದಿದ್ದು ಮರೆತು ಬಂದನೋ ಎಂಬಂತೆ ಅಪ್ಪನಿಲ್ಲದ ಮಕ್ಕಳು ಕೂಲಿಗೆ ಹೋದ ತಾಯಿಯ ದಾರಿಯ ಕಣ್ಣು ಮಿಟುಕಿಸದೇ ನೋಡುತಿವೆ ಅರ್ಧದಲೇ ಮರೆತ ...

 • 6 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 1 week ago No comment

  ಹುಲ್ಲಿನ ಕಡ್ಡಿ

    ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

 • 2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 2 weeks ago No comment

  ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

    ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...


Editor's Wall

 • 15 August 2018
  6 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 09 August 2018
  2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 01 August 2018
  3 weeks ago No comment

  ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                      ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

 • 25 July 2018
  4 weeks ago No comment

  ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                      ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

 • 11 May 2018
  3 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...