Share

ಅಜ್ಜಿಗೇನು ಬೇಕು ಅಂತ ಅಜ್ಜಂಗೇನು ಗೊತ್ತು!
ಮುದ್ದು ತೀರ್ಥಹಳ್ಳಿ

 

 

 

 

ಕಥನ

 

 

 

 

ಜ್ಜ ಪೆನ್ಷನ್ ತರೋದಕ್ಕೆ ಅಂತ ಪೇಟೆಗೆ ಹೋಗಿದ್ದ. ಅಷ್ಟರಲ್ಲಿ ಮನೆ ಬಾಗಿಲಲ್ಲಿ ಕಾರು ಬಂದು ನಿಂತಿತು. ಕಾರಲ್ಲಿ ಅಜ್ಜಿಯ ಮಗ, ಸೊಸೆ ಮತ್ತೆ ಆರು ವರ್ಷದ ಮೊಮ್ಮಗ ಬಂದಿದ್ರು. ಅಜ್ಜಿಗೆ ಖುಷಿ ತಡೆಯಕ್ಕಾಗದೇ ಅಡಿಗೆ ಮನೆ ಸಂದಿ ಮೂಲೇನೆಲ್ಲಾ ಹುಡುಕಿದ್ಲು. ದಡಾ ಬಡಾ ಸದ್ದು ಮಾಡಿದ್ಲು, ಸರಾಪರಾ ಸದ್ದು ಮಾಡಿದ್ಲು. ಅಡುಗೆ ಮನೆಯಿಂದ ಕೊತಾಕೊತಾ ಸದ್ದು ಬಂತು. ಆಮೇಲೆ ಘಮಾ ಘಮಾ ಪರಿಮಳ ಬರೋದಕ್ಕೆ ಶುರುವಾಯ್ತು.

ಅಜ್ಜಿ ಕೇಸರಿ ಬಾತು, ಉಪ್ಪಿಟ್ಟು ತಂದು ಮೂವರಿಗೂ ಬಡಿಸಿದ್ಲು. ಮೊಮ್ಮಗ ಒಂದು ಚಮಚ ಕೇಸರೀಬಾತನ್ನು ಬಾಯಿಗಿಟ್ಟಿದ್ದೇ ತಡ “ಹಾ…!” ಅಂತ ಕೂಗಿಕೊಂಡ. ಆಗ ಅಜ್ಜಿ, ಸೊಸೆ, ಮಗ ಮೂವರೂ ಒಟ್ಟಿಗೇ “ಏನಾಯ್ತು ಕಂದಾ?” ಅಂತ ಕೇಳಿದ್ರು. ಕಂದ ಕಲ್ಲೂ ಅಂದ. ಆಗ ಸೊಸೆ ವೃತ್ತಾಕಾರವಾಗಿ ಕಣ್ಣು ತಿರುಗಿಸುತ್ತಾ, “ಅಯ್ಯೋ ಕಲ್ಲು ನನ್ನ ಕಂದನ ಗಂಟಲಲ್ಲಿ ಸಿಕ್ಕುಹಾಕಿಕೊಂಡಿದ್ದರೆ ಏನು ಮಾಡಬೇಕಾಗಿತ್ತು?” ಅಂತ ಕೇಳಿದ್ಲು. ಅದಕ್ಕೆ ಅಜ್ಜಿ, “ಗಂಟಲಲ್ಲಿ ಸಿಕ್ಕುಹಾಕಿಕೊಳ್ಳೋದಕ್ಕೆ ಕಲ್ಲೇನು ಕಡುಬಿನ ಗಾತ್ರ ಇತ್ತಾ?” ಅಂದ್ಲು. ಆಗ ಸೊಸೆ, “ಈ ಕಲ್ಲೇನಾದ್ರೂ ನನ್ಮಗನ ಹೊಟ್ಟೆ ಸೇರಿ ಅಲ್ಲಿಂದ ಕಿಡ್ನಿ ಸೇರಿದ್ರೆ ಏನು ಮಾಡಬೇಕಾಗಿತ್ತು?” ಅಂದ್ಲು.

ಆಗ ಅಜ್ಜಿ “ಏನೇ..? ಓದಿದವಳಾಗಿ ಈ ತರ ಮಾತಾಡ್ತೀಯಲ್ಲ! ಬಾಯಲ್ಲಿ ಅಗಿದ ಕಲ್ಲು ಕಿಡ್ನಿಗೆ ಹೋಗಿ ಸೇರಿಕೊಳ್ಳುತ್ತೆ ಅಂತ ಯಾವುದಾದ್ರೂ ಡಾಕ್ಟರೆದುರಿಗೆ ಹೇಳು. ಸರಿಯಾಗಿ ಮಂಗಳಾರತಿ ಮಾಡ್ತಾರೆ!” ಅಂದ್ಲು. ಆಗ ಅಜ್ಜಿಯ ಸೊಸೆ, “ಈ ಕಲ್ಲೇನಾದ್ರೂ ನನ್ನ ಮಗನ ಹೊಟ್ಟೆ ಸೇರಿ ಹೊಟ್ಟೆ ಕುಯ್ಯೋ ಪರಿಸ್ಥಿತಿ ಬಂದ್ರೆ ಏನು ಮಾಡ್ಬೇಕು?” ಕೇಳಿದ್ಲು. ಅದಕ್ಕೆ ಅಜ್ಜಿ, “ಏನಮ್ಮಾ ಹೊಟ್ಟೆ ಎಂಥಾ ಕಲ್ಲನ್ನೂ ಕರಗಿಸುತ್ತೆ ಅಂತ ನಾನು ಕೇಳಿದ್ದೆ. ವಿದ್ಯಾವಂತರ ಬಾಯಲ್ಲಿ ಈ ತರ ಎಲ್ಲಾ ಮಾತು ಬರಬಾರದು” ಎಂದು ಸಿಡಿಮಿಡಿಗುಟ್ಟಿದ್ಲು ಅಜ್ಜಿ.

ಅದಕ್ಕೆ ಸೊಸೆ, “ನಿಮ್ಮ ಹೊಟ್ಟೆಗೇನು ಕಲ್ಲು ಯಾಕೆ ದೊಡ್ಡ ಬಂಡೆಯನ್ನೇ ತಿಂದು ಕರಗಿಸೋ ಶಕ್ತಿ ಇದೆ ಬಿಡಿ. ನಮಗಿಲ್ಲವಲ್ಲ! ನಡೀರಿ.. ಇಷ್ಟೆಲ್ಲ ಮಾತು ಕೇಳಿದರೂನು ಕಲ್ಲು ಬಂಡೆ ತರ ಕೂತುಕೊಂಡು ಎಂಟು ದಿನ ಉಪವಾಸ ಇದ್ದವರ ಹಾಗೆ ನುಂಗುತ್ತಾ ಕೂತಿದ್ದೀರಲ್ಲ! ಇಷ್ಟೆಲ್ಲ ಮಾತು ಕೇಳೋದಕ್ಕೇ ಇವರ ಮನೆಗೆ ಬಂದಹಾಗಾಯ್ತು. ಇದನ್ನೆಲ್ಲ ಕೇಳಿಸಿಕೊಳ್ಳಲಿ ಅಂತಾನೇ ಹಟ ಮಾಡಿ ನನ್ನನ್ನ ಇಲ್ಲಿಗೆ ಕರಕೊಂಡು ಬಂದ್ರಲ್ಲ. ನಡೀರಿ..ಹೋಗೋಣಾ..” ಅಂತ ಮಗುವನ್ನ, ಗಂಡನ್ನ ಎಳಕೊಂಡು ಅಜ್ಜಿಯ ಸೊಸೆ ಹೊರಟೇ ಹೋದ್ಲು.

ಅಜ್ಜಿಗೆ ತುಂಬಾ ದುಃಖ ಆಯ್ತು. ಗಟ್ಟಿಯಾಗಿ ಅಳೋಕೆ ಶುರು ಮಾಡಿದ್ಲು. ‘ಛೇ ಎಂಥಾ ಕೆಲಸ ಆಗಿ ಹೋಯ್ತಲ್ಲ. ಕಲ್ಲು ರವೇಲ್ಲಿತ್ತೋ ಸಕ್ಕರೆಯಲ್ಲಿತ್ತೋ ಯಾವ ಪುಣ್ಯಾತ್ಮನಿಗೆ ಗೊತ್ತು! ಹಾಳಾದ್ದು ಎಲ್ಲಾ ಕಲಬೆರಕೆ ಮಾಲು! ನನಗೂ ವಯಸ್ಸಾಗಿ ಕಣ್ಣು ಬೇರೆ ಸರಿಯಾಗಿ ಕಾಣಲ್ಲ. ಒಂದು ಕನ್ನಡಕಾನಾದ್ರೂ ಇದ್ದಿದ್ದರೆ ಚೆನ್ನಾಗಿ ರವೇನ ಆರಿಸಿಯಾದ್ರೂ ಹಾಕಬಹುದಿತ್ತು ಕನ್ನಡಕ ಒಂದು ಇದ್ದಿದ್ದರೆ ಇವತ್ತು ಜಗಳವಾಡೋ ಪರಿಸ್ಥಿತಿನೇ ಬರುತ್ತಿರಲಿಲ್ಲ’ ಅಂತ ಪೇಚಾಡಿಕೊಂಡು ರೋದಿಸಿದ್ಲು.

ಅದೇ ಸಮಯಕ್ಕೆ ಮನೆಗೆ ಬಂದ ಅಜ್ಜನಿಗೆ ಕಣ್ಣೀರು ಹಾಕುತ್ತಾ ಇದ್ದ ಅಜ್ಜಿ ಕಣ್ಣಿಗೆ ಬಿದ್ಲು. “ಏನಾಯ್ತೇ ಸರಸೀ.. ಯಾಕೇ ಅಳುತ್ತಾ ಇದ್ದೀಯೇ..?” ಅಂದ ಅಜ್ಜ. ನಡೆದ ಘಟನೆಯನ್ನ ಅಜ್ಜನಿಗೆ ಹೇಳಿ ಅಜ್ಜನ ಮನಸ್ಸು ನೋಯಿಸೋದಕ್ಕೆ ಅಜ್ಜಿಗೆ ಇಷ್ಟ ಇರಲಿಲ್ಲ. ಅದಕ್ಕೆ ಅಜ್ಜಿ, “ಈ ಮನೇಲ್ಲಿ ನನಗೇನು ಬೇಕು ಅಂತ ನಿಮಗೇನು ಗೊತ್ತು! ಅದೆಲ್ಲ ಗೊತ್ತಿದ್ದಿದ್ರೆ ಈವತ್ತು ಅಳೋ ಪರಿಸ್ಥಿತಿನೇ ಬರುತ್ತಾ ಇರಲಿಲ್ಲ” ಅಂತ ಹೇಳಿ ಅಜ್ಜಿ ಅಡುಗೆ ಮನೆ ಸೇರಿಕೊಂಡ್ಲು.

ಪೆನ್ಷನ್ ಹಣ ತಗೊಂಡು ಬಂದ ಅಜ್ಜನಿಗೆ ಭಾರೀ ಟೆನ್ಷನ್ ಆಯ್ತು. ಮನೆಯಿಂದ ಹೊರಗೆ ಬಂದು ತಿರುಗಾಡ್ತ.. ತಿರುಗಾಡ್ತ ಹೊಳೆ ಹತ್ತಿರ ಹೋದ. ದಾರಿ ತುಂಬ ಅಜ್ಜಿಗೇನು ಬೇಕು ಅಂತ ಯೋಚನೆ ಮಾಡುತ್ತಾ ಇದ್ದ. ಹೊಳೆ ಹತ್ತಿರ ಬಂಡೆ ಮೇಲೆ ಕೂತುಕೊಂಡು ‘ಬೆಂಡೋಲೆ ಏನಾದ್ರೂ ಬೇಕಾಗಿರಬಹುದಾ’ ಅಂತ ಯೋಚಿಸಿದ. ‘ಹಾಂ.. ಹೌದು ಅದೇ.. ಬೆಂಡೋಲೇನೇ ಬೇಕಾಗಿದ್ದು. ಜೇಬಲ್ಲಿ ಹೇಗೂ ಹಣ ಇದೆ. ಒಂದು ಬೆಂಡೋಲೆ ತೆಗೆದು ಕೊಟ್ಟರೆ ಅಜ್ಜಿ ಖುಷಿಯಾಗಿ ಬಿಡ್ತಾಳೆ. ಈಗಲೇ ತೆಗೆದು ಕೊಡ್ತೀನಿ’ ಅಂತ ಹೊರಟ.

ಹೋಗ್ತಾ ಹೋಗ್ತಾ ಅಜ್ಜನಿಗೆ ಏನೋ ನೆನಪಾಗೋದಕ್ಕೆ ಶುರುವಾಯ್ತು. ‘ಅಲ್ಲಾ.. ಕಳೆದ ವರ್ಷ ದೀಪಾವಳೀಲಿ ಅನ್ಸುತ್ತೆ. ಇಬ್ಬರೂ ಸೊಸೆಯರು ಹಬ್ಬಕ್ಕೆ ಬಂದಿದ್ದರಲ್ಲ..ಆಗ ಅವಳ ಹತ್ತಿರ ಇದ್ದ ನಾಲ್ಕೂ ಜೊತೆ ಬೆಂಡೋಲೆ ತಂದು ಇಬ್ಬರೂ ಸೊಸೆಯರಿಗೂ ಎರಡೆರಡು ಜೊತೆ ಕೊಟ್ಟು, “ನನಗ್ಯಾಕೆ ಇಷ್ಟೊಂದು ಬೆಂಡೋಲೆ. ಮುತ್ತಿನ ಓಲೆ ಹರಳಿನ ಓಲೆ ನೀನಿಟ್ಟುಕೋ.. ಈ ಪಚ್ಚೆ ಓಲೆ ಹವಳದ ಓಲೆ ನೀನಿಟ್ಟುಕೋ ಇವತ್ತು ನಾಳೆ ಸಾಯೋ ಮುದುಕಿ ನಾನು ಇದನ್ನೆಲ್ಲ ತೊಟ್ಟುಕೊಂಡು ತಿರುಗಿದರೆ ಏನು ಚೆನ್ನಾಗಿರತ್ತೆ?’ ಅಂತ ಅಂದಿದ್ಲಲ್ಲಾ. ಛೇ..ಛೇ.. ಅವಳಿಗೆ ಬೆಂಡೋಲೆ ಬೇಡ. ಬೇರೆ ಏನೋ ಬೇಕು. ಏನದು?’ ಅಂತ ಯೊಚನೆ ಮಾಡೋಕೆ ಶುರು ಮಾಡಿದ.

ಹೀಗೆ… ಸೀಬೆ ಮರದ ಕೆಳಗೆ ನಿಂತು, ‘ಸೀರೆ ಏನಾದ್ರೂ ಬೇಕಾಗಿರಬಹುದಾ?’ ಅಂತ ಯೋಚನೆ ಮಾಡಿದ. ‘ಹಾಂ! ಹೌದು. ಅದೇ. ಸೀರೇನೇ ಬೇಕಾಗಿದ್ದು. ಜೇಬಲ್ಲಿ ಹೇಗೂ ಹಣ ಇದೆ. ಸೀರೆ ತೆಗೆದು ಕೊಟ್ಟರೆ ಖುಷಿ ಆಗಿಬಿಡ್ತಾಳೆ. ಈಗ್ಲೇ ತೆಗೆದು ಕೊಡ್ತೀನಿ’ ಅಂತ ಹೊರಟ. ಹೊಗ್ತಾ..ಹೋಗ್ತಾ ಏನೋ ನೆನಪಾಗೋಕೆ ಶುರುವಾಯ್ತು.

‘ಕಳೆದ ಯುಗಾದಿ ಹಬ್ಬದಲ್ಲಿ ಅನ್ಸುತ್ತೆ.. ಅಜ್ಜಿ ಕಪಾಟಲ್ಲಿದ್ದ ಸೀರೆಗಳನ್ನೆಲ್ಲಾ ಹಬ್ಬಕ್ಕೆ ಬಂದಿದ್ದ ಸೊಸೆಯಂದಿರ ಎದುರಿಗೆ ಗುಡ್ಡೆ ಹಾಕಿ ಇಷ್ಟು ಸೀರೆಗಳನ್ನ ನೀನಿಟ್ಟುಕೋ… ಈ ಇಷ್ಟು ಸೀರೆಗಳನ್ನ ನೀನಿಟ್ಟುಕೋ. ಇವತ್ತು ನಾಳೆ ಸಾಯೋ ಮುದುಕಿಗೆ ಎರಡು ನೂಲಿನ ಸೀರೆಗಳಿದ್ದರೆ ಬೇಕಾದಷ್ಟಾಯ್ತು. ಅಂದಿದ್ದಳಲ್ಲಾ. ಹಾಗಾಗಿ ಅವಳಿಗೆ ಸೀರೆ ಖಂಡಿತಾ ಬೇಕಾಗಿರಲಿಕ್ಕಿಲ್ಲ. ಹಾಗಾದ್ರೆ ಅಜ್ಜಿಗೇನು ಬೇಕು?’ ಅಂತ ತಲೆ ಕೆಡಿಸಿಕೊಂಡು ಅಜ್ಜ ಹೋಗ್ತಾ ಇರುವಾಗ ತರಕಾರಿ ಅಂಗಡಿ ಸಿಕ್ಕಿತು. ತರಕಾರಿ ಅಂಗಡಿ ನೋಡಿದ ಕೂಡಲೇ ಛಕ್ಕಂತ ಅಜ್ಜನಿಗೆ ಏನೋ ನೆನಪಾಯ್ತು.

ಅದು ಮದುವೆಯಾದ ಪ್ರಾರಂಭದ ದಿನಗಳು ಅನ್ಸುತ್ತೆ. ಅಜ್ಜಿ ಅಜ್ಜ ಇಬ್ಬರಿಗೂ ಹರೆಯ. ಅಜ್ಜಿ ಅಜ್ಜನ ಹತ್ರ ಹೂ ತೆಗೆದುಕೊಂಡು ಬನ್ನಿ ಅಂದಿದ್ಲು. ಅಜ್ಜ ಇದೂ ಒಂದು ಹೂವೇ ತಾನೇ ಅಂತ ಅಂದುಕೊಂಡು ಹೂಕೋಸು ತೆಗೆದುಕೊಂಡು ಹೋಗಿಬಿಟ್ಟಿದ್ದ. ಹೂವಿನ ಜಾಗದಲ್ಲಿ ಹೂಕೋಸು ನೋಡಿದ ಅಜ್ಜಿ, ‘ನಿಮ್ಮ ಹತ್ರ ಇನ್ನು ಏನೂ ಕೇಳಲ್ಲ. ಹೂ ತಂದು ಕೊಡಿ ಅಂತ ಕೇಳಿದ್ದೇ ತಪ್ಪಾಯ್ತು. ಅಂತ ಸಿಟ್ಟು ಮಾಡಿಕೊಂಡಿದ್ಲು. ಆಮೇಲಿಂದ ಅಜ್ಜಿ ಹೂ ತಂದುಕೊಡಿ ಅಂತ ಕೇಳಿದ್ದೂ ಇರಲಿಲ್ಲ, ಅಜ್ಜ ತೊಗೊಂಡು ಹೋಗಿ ಕೊಟ್ಟಿದ್ದೂ ಇರಲಿಲ್ಲ. ಇದು ನೆನಪಾಗಿ ಅಜ್ಜನಿಗೆ ಭಾರೀ ಖುಷಿ, ಬೇಜಾರು ಹೀಗೆ ಏನೇನೋ ಒಂಥರಾ ಆಯ್ತು.

‘ಇವತ್ತು ಅಜ್ಜಿಗೇನು ಬೇಕೋ ಅದನ್ನ ತೊಗೊಂಡು ಹೋಗಿ ಕೊಟ್ಟೇಬಿಡುತ್ತೀನಿ’ ಅಂತ ಹೂವಿನ ಅಂಗಡಿಯ ಕಡೆ ಹೊರಟ. ಆಮೇಲೆ ಮನೆ ಸೇರಿದ ಅಜ್ಜ, “ಸರಸೂ.. ನಿನಗೇನು ಬೇಕು ಅಂತ ನೀನು ಬಾಯಿಬಿಟ್ಟು ಹೇಳದೇ ಹೋದ್ರೂ ಅದೇನು ಅಂತ ಕಂಡುಹಿಡಿದು ತೊಗೊಂಡು ಬಂದಿದೀನಿ ತೊಗೋಳೇ” ಅಂದ. ಕೈಯಲ್ಲಿ ದೊಡ್ಡ ಹೂವಿನ ಪೊಟ್ಟಣವನ್ನು ನೋಡಿದ ಕೂಡಲೇ ಅಜ್ಜಿಗೆ ಎಲ್ಲಿಲ್ಲದ ಸಿಟ್ಟು ಬಂತು. “ಏನ್ರೀ ಮುಪ್ಪು ಹಿಡಿದು ಮೂಲೇ ಸೇರಿರೋ ಮುದುಕಿ ನಾನು. ನನ್ನ ತಲೆ ಕೂದಲೆಲ್ಲ ಬೆಳ್ಳಗಾಗಿ ನೆತ್ತಿ ಕೂದಲೆಲ್ಲ ಉದುರಿ ಹೋಗಿ ಉಳಿದಿರೋ ಮೂರೇ ಮೂರು ಕೂದಲಿಗೆ ಮೂರು ಮಾರು ಮಲ್ಲಿಗೆ ಹೂ ತಂದಿದ್ದೀರಲ್ಲರೀ ನಿಮಗೇನು ಬುದ್ದಿ ಗಿದ್ದಿ ಇದೆಯಾ?” ಅಂತ ಸಿಟ್ಟಿನಿಂದ ಎದ್ದು ಅಡುಗೆ ಮನೆಗೆ ಹೋದ್ಲು. ಅದ್ರೂ ಅವಳ ತುಟಿಯಂಚಲ್ಲಿ ಮತ್ತು ಕಣ್ಣಂಚಲ್ಲಿ ಪ್ರೀತಿಯ ಒಂದು ಕಿರುನಗೆ ಇತ್ತು. ಅಜ್ಜನಿಗೂ ವಯಸ್ಸಾಗಿ ಕಣ್ಣು ಮಂದ ಆಗಿತ್ತಲ್ಲ ಹಾಗಾಗಿ ಆ ಕಿರುನಗೆ ಅಜ್ಜನಿಗೆ ಕಾಣಲೇ ಇಲ್ಲ.

ಸಿಟ್ಟು ಮಾಡಿಕೊಂಡ ಅಜ್ಜಿಯನ್ನ ನೋಡಿ ಅಜ್ಜ ಪೆಚ್ಚಾದ. ಕೊನೆಗೂ ಅಜ್ಜಿಗೇನು ಬೇಕು ಅಂತ ಅಜ್ಜನಿಗೆ ಗೊತ್ತೇ ಆಗಲಿಲ್ಲ!

ಮುದ್ದು ತೀರ್ಥಹಳ್ಳಿ

ಕಾನೂನು ವಿದ್ಯಾರ್ಥಿನಿ. ಕನ್ನಡ, ಕೊಂಕಣಿ ಭಾಷೆಗಳಲ್ಲಿ ಬರೆಯುತ್ತಾರೆ. ಕಾಡ ಹಾದಿಯ ಹೂಗಳು, ಒಂದು ಚಂದ್ರನ ತುಂಡು, ಕಾನನ ಕಲರವ, ಎಷ್ಟು ಬಣ್ಣದ ಇರುಳು ಹಾಗೂ ಹೂ ಗೊಂಚಲು ಇವರ ಕನ್ನಡ ಕೃತಿಗಳು. ‘ಕಾಡ ಹಾದಿಯ ಹೂಗಳು’ ಕಾದಂಬರಿ ಅದೇ ಹೆಸರಲ್ಲಿ ಚಲನಚಿತ್ರವಾಗಿದೆ. ಕೊಂಕಣಿಯ ನಮಾನ್ ಬಾಳೋಕ್ ಜೆಜು ಪತ್ರಿಕೆಗೆ ಕಳೆದ ನಾಲ್ಕು ವರ್ಷಗಳಿಂದ ಅಂಕಣ ಬರೆಯುತ್ತಿದ್ದಾರೆ. ‘ಮಂದಾನಿಲ’ ಎಂಬ ಪತ್ರಿಕೆಯನ್ನು ಐದು ವರ್ಷ ನಡೆಸಿದವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಕಲಬುರ್ಗಿ ಹತ್ಯೆ ಖಂಡಿಸಿ ಈ ಪ್ರಶಸ್ತಿಯನ್ನು ಮರಳಿಸಿದ್ದಾರೆ), ಕಾವ್ಯಾನಂದ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅರಳು ಪ್ರಶಸ್ತಿ, ಜ್ಯೋತಿ ಪುರಸ್ಕಾರ ಹಾಗೂ ಶಾರದಾ ಆರ್ ರಾವ್ ಮತ್ತು ಕರಿಯಣ್ಣ ದತ್ತಿ ಪ್ರಶಸ್ತಿಗಳು, ಬೇಂದ್ರೆ ಗ್ರಂಥ ಬಹುಮಾನ, ಅರಳು ಮೊಗ್ಗು ಪ್ರಶಸ್ತಿ, ಕನ್ನಡಶ್ರೀ ಪ್ರಶಸ್ತಿ, ಅಡ್ವೈಸರ್ ಪ್ರಶಸ್ತಿ ಬಂದಿವೆ.

Share

One Comment For "ಅಜ್ಜಿಗೇನು ಬೇಕು ಅಂತ ಅಜ್ಜಂಗೇನು ಗೊತ್ತು!
ಮುದ್ದು ತೀರ್ಥಹಳ್ಳಿ
"

 1. 21st June 2018

  Chanagide….

  Reply

Leave a comment

Your email address will not be published. Required fields are marked *

Recent Posts More

 • 6 days ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 week ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...

 • 2 weeks ago No comment

  ಕಲರವ | ಒಂದು ಸಿನಿಮಾ ನೋಡಿದ ಕಥೆ…

      ಕಲರವ           “ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ಸಿನಿಮಾ ನೋಡು” ಎಂದಳು ಭಾರತದ ನನ್ನ ಅಕ್ಕ. “ಹೌದಲ್ಲವಾ” ಅಂತ ನಮ್ಮೂರಿನಲ್ಲಿ ನಡೆಯುತ್ತಿದ್ದ ಸಿನಿಮಾ ಪಟ್ಟಿ ನೋಡಿದೆ. ಪ್ರೀತಿ –ಪ್ರೇಮ, ಫೈಟಿಂಗ್ ಗಳ ಚಲನಚಿತ್ರವನ್ನು ನೋಡುವುದೆಂದರೆ, ‘ನೋಡಿದ್ದನ್ನೇ ನೋಡುವ’ ಕಷ್ಟ. ವೈಚಾರಿಕ ಸಿನಿಮಾಗಳು ಜಾಸ್ತಿ ಓಡದ ಕಾಲವಿದು. ಇನ್ನು ಸಾಂಸಾರಿಕ ಚಿತ್ರಗಳು ಬರುವುದು ನಿಂತ ಮೇಲೆ ಸಂಸಾರಗಳು ಒಟ್ಟಿಗೆ ...

 • 2 weeks ago No comment

  ಕವಿಸಾಲು | ಅಲೆಗಳೆದ್ದ ಕೊಳ…

      ಕವಿಸಾಲು         ಅಲೆಗಳೆದ್ದ ಕೊಳವಿದು, ಕಲ್ಲು ತೂರಿದ ಕಾಯಕವಷ್ಟೇ ನಿನ್ನದು ಎದ್ದ ಅಲೆಗಳ ಮೇಲಿಲ್ಲ ನಿನಗೆ ಇನಿತು ಅಧಿಕಾರವು ದೂರಿಲ್ಲ ನನ್ನಲ್ಲಿ, ಬೇಡಿಕೆ ತಾನೇ ಏಕೆ? ತುಂಬಿದ ಮನದಿ ಹೊಕ್ಕ ಹರ್ಷಕೆ ಪುರಾವೆಗಳ ಹಂಗಿಲ್ಲ, ನಕ್ಕ ನಗುವಿನಲಿ ನೋವಿಲ್ಲ, ತುಂಬಿವೆ ನೂರು ಭಾವಾರ್ಥ ಮುಚ್ಚಟೆಯಿಂದ ಬಚ್ಚಿಟ್ಟುಕೊಂಡು ಬೇಕಾದ ಪರಿಭಾಷೆಯಲಿ ದಿರಿಸಿಟ್ಟು ಸಿಂಗರಿಸಿ ನೋಡುತ್ತ ನಿನ್ನ ಅನುಪಸ್ಥಿತಿಯಲ್ಲೂ ಸಿಗುವ ಅನುಪಮ ಭಾವದಿ ದೊರಕಿದ್ದು ...

 • 3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...


Editor's Wall

 • 31 August 2018
  3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  3 weeks ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  3 weeks ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  4 weeks ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  4 weeks ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...