Share

ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

 

 

 

 

 

 

 

 

 

 

ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?

 

ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ಆ ಆಸಾಮಿ. ಹೀಗೆಯೇ ಸಂಭಾಷಣೆ ಮುಂದುವರಿದು ಆತ ಹೇಳಿದ, ‘ನನಗೆ ದುಡಿಮೆ, ದುಡ್ಡು ಮುಖ್ಯ. ಈ ಹಾಡು ಸಿನೆಮಾ ಹುಚ್ಚರ ಸಂತೆ ನನಗೆ ಇಷ್ಟವಿಲ್ಲ. ಗಮ್ಮತ್ತಿನ ನಾನ್ವೆಜ್ ಊಟ ಮಾಡಿ ಆರಾಮವಾಗಿ ಮಲಗಿದ್ರೆ ಮುಗೀತು’ ಎಂದು ತನ್ನ ಬೆನ್ನು ತಾನೇ ತಟ್ಟಿಕೊಳ್ಳತೊಡಗಿದ್ದೇ ಅಷ್ಟೂ ಹೊತ್ತೂ ಸುಮ್ಮನೆ ಕೂತಿದ್ದ ಪತ್ನಿ ‘ಎಣ್ಣೆ ಕುಡ್ಕೊಂಡು!’ ಎಂದು ಚಾಟಿ ಬೀಸಿಬಿಟ್ಟಿದ್ದಳು. ಚಾಲಕ ಅವಳ ಈ ದನಿಯಲ್ಲೇ ಯಾವುದೋ ವಿಷಣ್ಣ ಭಾವವನ್ನು ಗುರುತಿಸಿಬಿಟ್ಟಿದ್ದ.

‘ಹೌದು ಕುಡೀತೇನೆ. ನಾನು ದುಡಿದಿದ್ದು ನನ್ನ ಸುಖಕ್ಕಲ್ಲದೆ ಇನ್ನೇನು?’ ಎಂದು ಪತಿ ಉತ್ತರಿಸುವುದರೊಳಗೆ ಚಾಲಕ ‘ಹಾಗಾದ್ರೆ ಸಿನೆಮಾಕ್ಕೂ ಹೋಗಲ್ವಾ ಸಾರ್… ಮೇಡಮ್ಮನ್ನ ಕರ್ಕೊಂಡು?’ ಎಂದೊಂದು ಪ್ರಶ್ನೆ ಎಸೆದುಬಿಟ್ಟ. ಹೆಂಡತಿಯನ್ನು ಸಿನೆಮಾಕ್ಕೆ ಕರೆದೊಯ್ಯದಿರುವುದೇ ಮಹಾನ್ ಸಾಧನೆ ಎನ್ನುವಂತೆ ‘ಇಲ್ಲಾ ಇಲ್ಲಾ’ ಎಂದು ಪತಿ ಹೇಳಿ ಮುಗಿಸುವುದಕ್ಕಿಲ್ಲ; ಪತ್ನಿ ‘ಮದುವೆಯಾಗಿ ಕಾಲು ಶತಮಾನವೇ ಆಯ್ತು. ನನ್ನ ಬದುಕನ್ನು ಹಾಳು ಮಾಡಿಬಿಟ್ರು. ಎಷ್ಟೋ ವರ್ಷ ನಮ್ಮ ಮನೆಯಲ್ಲಿ ಟಿವಿನೇ ಇರಲಿಲ್ಲ. ಟಿವಿ ನೋಡಿ ನೀನು ಹಾಳಾಗೋದು ಬೇಡ ಅಂದ್ರು. ಹೊರಗೆ ಕರೆದುಕೊಂಡು ಹೋಗಿ ಅಂದಾಗ ಅದನ್ನೆಲ್ಲ ನೋಡಿದ್ರೆ ಏನು ಸಿಗುತ್ತೆ ಮನೆಯಲ್ಲಿ ಬಿದ್ದುಕೋ ಅಂದ್ರು. ಇವರು ಆರಾಮವಾಗಿ ಉಂಡು ಮಲಗ್ತೀನಿ ಅಂದ್ರಲ್ಲ, ಇವರು ಉಂಡು ಮಲಗೋದಕ್ಕಾಗಿ, ಇವರ ಮಕ್ಕಳ ಸುಖಕ್ಕಾಗಿ ಕತ್ತೆ ಥರ ಗೇಯ್ದಿದ್ದು ಬಿಟ್ರೆ ಏನಿತ್ತು ಇಲ್ಲಿ! ಇವರಿಗೆ ಯಾರ ಮೇಲೆ ಸಿಟ್ಟು ಬಂದ್ರೂ ಅದು ತಣಿಯಲು ನಾನು ಹೊಲಸು ಬಯ್ಗುಳದ ಸಮೇತ ಹೊಡೆತ ಬಡಿತ ತಿನ್ನಬೇಕು. ಅದೇ ನನ್ನ ಎಂಟರ್ಟೇನ್ ಮೆಂಟ್ ! ಇಷ್ಟು ಸಾಲಲ್ವಾ’ ಎಂದು ಅದೆಷ್ಟು ವರ್ಷಗಳ ಆಕ್ರೋಶವೋ ಸಾಮಾನ್ಯ ಚಾಲಕನೆದುರು ಸಿಡಿದುಬಿಟ್ಟಿದ್ದಳು. ಇದನ್ನೇನೂ ನಿರೀಕ್ಷಿಸಿರದ ಪತಿದೇವನು ಎಂದಿನಂತೆ ‘ಕತ್ತೆ ಮುಂಡೆ! ಇವನೇನು ನಿನ್ನ ಮಿಂಡನಾ?’ ಎಂದು ಚಾಲಕನೆದುರಲ್ಲೇ ನಿಂದಿಸುತ್ತಾ ಅವಳ ಬಾಯಿಯ ಮೇಲೆ ಬಡಿಯಲಾರದೆ ಯಾಕೋ ಗಲಿಬಿಲಿಗೊಂಡು ತೆಪ್ಪಗಾಗಿಬಿಟ್ಟಿದ್ದ. ಹೆಣ್ಣೊಬ್ಬಳನ್ನು ಹಣಿಯಲು ಅವೆಷ್ಟು ಸುಂದರ ಪದಗಳಿದ್ದವು ನಮ್ಮ ಶಬ್ದಕೋಶದಲ್ಲಿ!

ಹಗಲಿಗೆ ಕುಟುಂಬದ ಹೊಟ್ಟೆಯ ಹಸಿವನ್ನೂ ಇರುಳಲ್ಲಿ ಗಂಡನ ದೇಹದ ಹಸಿವನ್ನೂ ತೀರಿಸುತ್ತ ಗೇಯುತ್ತ ಸವೆಯುತ್ತಿರುವ ಈ ಮಹಿಳೆ ನನ್ನೊಂದಿಗೆ ಹೃದಯ ತೆರೆದು ಹರವುತ್ತಾಳೆ. ‘ನಿಮ್ಮ ನಿಮ್ಮ ಪತ್ನಿಯರು ಯಂತ್ರಗಳಲ್ಲ. ಆರು ತಿಂಗಳಿಗೋ ಮೂರು ತಿಂಗಳಿಗೋ ಒಮ್ಮೆ ಅವರನ್ನು ಹೊರಗೆ ಕರೆದೊಯ್ಯಿರಿ. ಜೀವಂತ ಮನುಷ್ಯರನ್ನು ಯಂತ್ರದಂತೆ ಅವಿಶ್ರಾಂತವಾಗಿ ದುಡಿಸಿದರೆ ಅವು ಕೆಟ್ಟು ಹೋಗುತ್ತವೆಂದು ಪಾದ್ರಿ ಪ್ರವಚನ ಹೇಳುತ್ತಾರೆ ಆದರೆ ಇದನ್ನು ಕೇಳಿಸಿಕೊಳ್ಳಲು ನನ್ನ ಗಂಡ ಚರ್ಚಿಗೇ ಬಂದಿರುವುದಿಲ್ಲ. ಸಂಸಾರವೆಂಬ ನಾಲ್ಕು ಗೋಡೆಯ ನಡುವೆ ಬಂಧಿಯಾದ ಮಹಿಳೆಯರ ಜೊತೆ ಹೇಗೆ ನಡೆದುಕೊಳ್ಳಬೇಕೆಂಬ ಬರಹ ನಾನು ಓದುತ್ತೇನೆ. ಅವನು ಇದನ್ನು ಓದುವುದಿಲ್ಲ. ವೈದ್ಯರೊಡನೆ ಕೌನ್ಸಿಲಿಂಗ್ ಗೆ ನಾನು ಹೋಗಲು ತಯಾರಿದ್ದೇನೆ ಅವನನ್ನು ಕರೆದೊಯ್ಯುವುದು ಸಾಧ್ಯವಿಲ್ಲ. ಹಾಗಾದಾಗ ಅವನ ತಪ್ಪಿನ ಅರಿವು ಮೂಡಿಸುವುದು, ತಿದ್ದುವುದು ಹೇಗೆ? ನಮ್ಮ ಇಡೀ ಸಮಾಜಕ್ಕೆ ನಮ್ಮ ಸಮಸ್ಯೆ ಒಂದು ಸಮಸ್ಯೆಯೇ ಅಲ್ಲ. ಎಲ್ಲ ಕೇಳುತ್ತಾರೆ ನಿನಗೆ ಏನು ಕಡಿಮೆ ಆಗಿದೆಯೆಂದು.’

ಅಸಾಮಾನ್ಯ ಪ್ರತಿಭಾವಂತೆಯಾದ ನನ್ನ ಬಾಲ್ಯ ಸ್ನೇಹಿತೆ ಮತ್ತವಳ ಪತಿ, ಮಕ್ಕಳು ನನ್ನ ಕವಿತೆ ಓದುತ್ತಿರುತ್ತಾರೆನ್ನುವುದು ನನ್ನ ಪಾಲಿನ ಅಭಿಮಾನದ ಸಂಗತಿ. ಲೈಕುದಾರರ ಪಟ್ಟಿಯನ್ನು ಕೆದಕುತ್ತಾ ಕೂರುವುದು ನನ್ನ ಇಂಥ ಆಪ್ತ ವಲಯದವರು ನನ್ನ ಕವಿತೆಯನ್ನು ಗಮನಿಸಿದ್ದಾರೋ ಇಲ್ಲವೋ ಎಂದು ನೋಡುವ ಉದ್ದೇಶದಿಂದಲೇ. ಅವಳು ನನ್ನ ಪ್ರಾಣ ಸ್ನೇಹಿತೆಯಾದರೂ ನಾವು ಫೋನಲ್ಲಿ ಹರಟುವುದು ತೀರಾ ಕಡಿಮೆ. ಹಾಗೆ ಹರಟಿದಾಗಲೂ ಅವಳು ತನ್ನ ಬದುಕಿನ ತನ್ನ ನೋವಿನ ಮುಖವನ್ನು ನನಗೆ ಪರಿಚಯಿಸಿದ್ದೇ ಇಲ್ಲ. ನನ್ನೊಂದಿಗೆ ಇತ್ತೀಚೆ ಕರೆ ಮಾಡಿ ಮಾತಾಡುತ್ತಾ ಅವಳು, ‘ನೀನು ಆ ದಿನ ಸೂಳೆ ಕುಲಟೆ ಅಂತ ಒಂದು ಕವಿತೆ ಬರೆದಿದ್ದೆಯಲ್ಲಾ ಅದನ್ನು ಓದಿದ ನನ್ನ ಪತಿ, ನಾನು ಅಂದಿದ್ದನ್ನೆಲ್ಲ ಅಷ್ಟು ಬೇಗ ಫ್ರೆಂಡಿಗೆ ಹೇಳಿ ಅವಳು ಕವಿತೆ ಬರೆದು ಹಾಕಿದ್ಲು ನೋಡು! ಎಂದು ಹಂಗಿಸಿ ದೊಡ್ಡ ಸೀನೇ ಕ್ರಿಯೇಟ್ ಮಾಡಿಬಿಟ್ರು ಕಣೇ’ ಎಂದು ಖೇದದಿಂದ ಹೇಳುತ್ತಹೋದಳು.

ಸೂಳೆ, ಕುಲಟೆ, ಜಾರಿಣಿ, ವ್ಯಭಿಚಾರಿಣಿ
ಆಹಾ! ಎಂಥಾ ಮಾಯಾವಿ ಪದಗಳು!
ಇವನ್ನು ಕಾರಿಕೊಳ್ಳುತ್ತಲೇ
ಕುದಿವ ರಕ್ತವೂ ಹಗೆಯ ದಳ್ಳುರಿಯೂ
ನಾಲಗೆಯ ತುರಿಕೆಯೂ ಸುಡುವ ಹತಾಶೆಗಳೂ
ಅದೆಷ್ಟು ತಣ್ಣನೆ ತಣಿದುಬಿಡುವವು

ಹೆಣ್ಣೇ ನಿನಗೆ ಹೇಗನಿಸಿರಬಹುದು
ನಿನ್ನ ಗಂಡನೇ ನಿನ್ನನು
‘ಸೂಳೆ’ ಎಂದು ಜರಿವಾಗ
ಹೇಗೆ ಸಹಿಸಿರಬಹುದು ನೀನು
ನಿನ್ನನು ಹಾಗೆ ಜರಿದುದು ಸಾಲದೆನಿಸಿ
‘ನಿನ್ನ ತಾಯಿ ಸೂಳೆ’
ಎಂದು ಅವನು ನಂಜು ಉಗುಳಿಬಿಡುವಾಗ!

ನಾನೇ ಬರೆದ ಸಾಲುಗಳು ನೆನಪಾಗುತ್ತ ಹೋದವು. ನಾನು ಪಾತಾಳಕ್ಕೆ ಕುಸಿದುಬಿಟ್ಟಿದ್ದೆ, ಯಾಕಾದ್ರೂ ಇಂಥ ಕವಿತೆ ಬರೆದೆನೋ ಎಂದು! ಅಸಂಖ್ಯ ಹೆಣ್ಣುಮಕ್ಕಳ ಗಾಯಗಳನ್ನು ನೇವರಿಸುವ ಶಕ್ತಿ ನನ್ನ ಬರಹಕ್ಕಿರಬಹುದೆಂದೇ ಭಾವಿಸಿದ್ದ ನನಗೆ ನನ್ನ ಬರಹ ಇನ್ನೊಬ್ಬರ ಗಾಯಕ್ಕೆ ಉಪ್ಪೂ ಸವರಬಹುದೆಂದು ಅರಿವಾದದ್ದೇ ಆಗ.

ಬೇಸಗೆಯಲ್ಲಿ ನಾನು ಮಾಡಬೇಕಾದ ಕಛೇರಿಯ ಮತ್ತು ಮನೆಯ ಕೆಲಸಗಳನ್ನು ಮುಗಿಸಿದ ಬಳಿಕ ಏಕಾಕಿತನ ಮುಸುಳಿ ಹಿಂಸೆ ಅನುಭವಿಸುತ್ತಿದ್ದ ಹೊತ್ತು ಓದಾಗಲಿ ಬರಹವಾಗಲಿ ನನ್ನನ್ನು ತಣಿಸದಾಗಿ ಮನುಷ್ಯರ ಸಂಗಕ್ಕೆ ಹಂಬಲಿಸಿ ಏನೋ ನಿರ್ಧಾರಕ್ಕೆ ಬಂದಿದ್ದೆ. ಹಾಗಾಗಿ ಮಧ್ಯಾಹ್ನ ಒಂದು ತಾಸು ಬಿಡುವು ಮಾಡಿಕೊಳ್ಳಲು ತಯಾರಾದೆ. ಕೌಟುಂಬಿಕ ಚೌಕಟ್ಟಿನಲ್ಲಿ ಬಂಧಿಯಾದ ಹೆಂಗಸರಿಗೆ ಹೊಲಿಗೆ ತರಬೇತಿ ಕೊಡುವ ಯೋಜನೆಯದು. ನಾನವರಿಗೆ ಹೇಳಿದೆ: ನನಗೆ ಹಣದ ಅವಶ್ಯಕತೆ ಇಲ್ಲ. ಆದರೂ ನೀವು ಏನಾದರೂ ಕಾಣಿಕೆ ತಂದು ಕೊಡುತ್ತೀರಿ ಎಂದು ಬಲ್ಲೆ. ಬೇರೆ ತರಬೇತಿ ಕೇಂದ್ರಗಳಲ್ಲಿ ಆರು ತಿಂಗಳು ಪ್ರತಿ ತಿಂಗಳಿಗೆ 500 ರೂಪಾಯಿಗಿಂತ ಹೆಚ್ಚು ಶುಲ್ಕ ನೀವು ಕಟ್ಟಬೇಕಾಗುತ್ತದೆ ಎನ್ನುವುದು ನನಗೆ ಗೊತ್ತಿದೆ. ನಾನಿಲ್ಲಿ ನಿಮಗೆ ಕೇವಲ ಒಂದೇ ತಿಂಗಳಲ್ಲಿ ನೀವು ಕಲಿಯಬಯಸುವುದನ್ನು ಕಲಿಸಬಲ್ಲೆ. ಆದ್ದರಿಂದ ನೀವು ಎಷ್ಟು ಮಹಿಳೆಯರಾದರೂ ಕಲಿಯಲು ಬನ್ನಿ. ಎಲ್ಲರೂ ಸೇರಿ ನನಗೆ ಬರೇ ಎರಡು ಸಾವಿರ ಕೊಡಿ. ಆ ಹಣದಿಂದ ಒಂದಷ್ಟು ನಿಯತಕಾಲಿಕೆಗಳಿಗೆ ಚಂದಾ ಹಣ ಕಟ್ಟುತ್ತೇನೆ ಎಂದು.

ನನ್ನ ಮಹಡಿಯ ದೊಡ್ಡ ಹಾಲ್ ನಲ್ಲಿ ಕೂಡುತ್ತಿದ್ದ ಮಹಿಳೆಯರಿಗೆ ನಾನು ಮೊದಲ ದಿನ ಹೇಳಿದ ಪಾಠವೆಂದರೆ, ನಿಮಗೆ ನಾನು ಸರಳ ವಿಧಾನದಲ್ಲಿ ಹೊಲಿಗೆ ಕಲಿಸುತ್ತೇನೆ. ಇನ್ನು ನಿಮ್ಮ ಕೈಯಿಂದ ಪ್ರತಿನಿತ್ಯ ನಿಮಗಾಗಿ, ನಿಮ್ಮ ಮಕ್ಕಳಿಗಾಗಿ, ನಿಮ್ಮ ಗಂಡಂದಿರಿಗಾಗಿ, ನಿಮ್ಮ ಪರಿವಾರದವರಿಗಾಗಿ ಹೊಸ ಹೊಸ ಉಡುಪುಗಳು ಅರಳಲಿವೆ. ಹೀಗೆ ನೀವು ಹೊಲಿಯುವ ಒಂದೊಂದು ಉಡುಪಿಗೂ ಒಂದು ಸಾಧಾರಣ ಹೊಲಿಗೆ ಮಜೂರಿಯನ್ನು ಒಂದು ಡೈರಿಯಲ್ಲಿ ಬರೆದಿಡುತ್ತಾ ಹೋಗಿ. ಈ ತಿಂಗಳು ಮುಗಿಯುವಾಗ ಕಲಿಕಾ ಹಂತದಲ್ಲೇ ನೀವು ದುಡಿದ ಲೆಕ್ಕವನ್ನು ನಿಮ್ಮ ನಿಮ್ಮ ಗಂಡಂದಿರಿಗೆ ತೋರಿಸಿ ಎಂದು.

ಮಕ್ಕಳ ಪೆಟ್ಟಿಕೋಟಿನಿಂದ ಶುರುವಾಗಿತ್ತು ಕಲಿಕೆಯ ಪಯಣ. ನಾನೂ ಅವರ ರೆಕ್ಕೆಗಳ ಕೆಲ ಕಟ್ಟುಗಳನ್ನಾದರೂ ಬಿಚ್ಚಿಹಾಕುವ ಹಟಕ್ಕೆ ಬಿದ್ದಿದ್ದೆ. ನಿಮ್ಮ ಉಡುಪುಗಳಿಗೆ ಜೇಬುಗಳೇಕಿಲ್ಲ? ನಿಮ್ಮ ಬಳಿಯೂ ಹಣ, ಕೀ ಗೊಂಚಲು, ಫೋನು ಇಲ್ಲವೇ? ಇನ್ನು ಮುಂದೆ ನೀವಿಲ್ಲಿ ಹೊಲಿದುಕೊಳ್ಳುವ ಪ್ರತಿ ಬಟ್ಟೆಗೂ ಒಂದು ಜೇಬಿರುತ್ತದೆ ಮರೆಯದಿರಿ ಎನ್ನುತ್ತಿದ್ದೆ. ಒಂದು ಪೆಟ್ಟಿಕೋಟ್ ಗೆ ಬದಲು ನಾಲ್ಕು ನಾಲ್ಕು ಹೊಲಿದುಕೊಂಡು ಮರುದಿನ ತೋರಿಸಲು ಬರುವಾಗ ನನ್ನಲ್ಲೂ ಏನೆಲ್ಲವನ್ನು ಕಲಿಸಿಬಿಡೋಣವೆಂಬ ಉತ್ಸಾಹ. ಕೇವಲ ಒಂದು ತಿಂಗಳಲ್ಲಿ ಸಾದಾ ಚೂಡಿ, ಪಾಟಿಯಾಲಾ, ಧೋತಿ, ಘಾಗ್ರಾ ಚೋಲಿ, ಪುಷ್ಷಪ್, ಸಾದಾ ಬ್ಲೌಸ್, ಕಟೋರಿ, ಪ್ರಿನ್ಸ್ ಕಟ್ ಬ್ಲವ್ಸ್, ಹೈನೆಕ್ ಬ್ಲವ್ಸ್, ಅಂಗಿ, ಶರಟು, ನೈಟಿ, ತ್ರೀಫೋರ್ತ್ ನಾನಾ ತರಹದ ಫ್ರಾಕು, ಗೌನುಗಳು ಅವರ ಕೈಗಳಲ್ಲಿ ರೂಪು ತಳೆಯುತ್ತಿದ್ದವು. ತಾವೇ ಹೊಲಿದುದನ್ನು ತಾವೇ ಧರಿಸಿಯೋ ತಮ್ಮ ಮಕ್ಕಳಿಗೆ ತೊಡಿಸಿಯೋ ಅಕ್ಕ ಪಕ್ಕದವರಿಗೂ ಹೊಲಿದುಕೊಟ್ಟು ಹಣ ಮಾಡಿಕೊಂಡೋ ಬಂದಾಗ ಅವರ ಕಣ್ಣುಗಳ ಹೊಳಪು ನೋಡಬೇಕು! ತಿಂಗಳು ಮುಗಿಯುವಾಗ ಹೇಳಿದೆ, ನಾನು ಸತ್ತುಹೋಗುವಾಗ ನನ್ನ ಕಲೆಯೂ ಸತ್ತುಹೋಗುತ್ತದೆ. ಆದ್ದರಿಂದ ನೀವು ಇನ್ನು ಯಾವ ಹೊತ್ತಲ್ಲೂ ಬಂದು ಏನು ಬೇಕಾದರೂ ಕಲಿತುಕೊಂಡು ಹೋಗಬಹುದು. ಫೀಸ್ ಕೊಡುವ ಅಗತ್ಯ ಇಲ್ಲ ಎಂದು.

ಈ ಬ್ಯಾಚು ಮುಗಿಯುತ್ತಿದ್ದಂತೆ ಮತ್ತೂ ಕೆಲವರು ನನ್ನ ಬಾಗಿಲಲ್ಲಿ ನಿಂತಿದ್ದರು. ನಾನು ಫೀಜಿನ ಕುರಿತೇನೂ ಹೇಳಲಿಲ್ಲ. ಸುಮ್ಮನೆ ತರಗತಿ ಶುರುವಿಟ್ಟೆ.

ಈ ಬ್ಯಾಚಿನ ಒಬ್ಬಾಕೆ ಪ್ರತಿದಿನ ತನ್ನ ಗಂಡನನ್ನು ಮಾತು ಮಾತಲ್ಲಿ ಹೊಗಳುತ್ತಿದ್ದಳು. ಈ ವಯಸ್ಸಲ್ಲಿ ‘ಇಷ್ಟು ಕೆಲಸದ ನಡುವೆ ನಿನಗೆ ಕಲಿಯುವ ಹುಕಿ ಬಂತಲ್ಲೇ ನಿನಗೆ ಯಾಕೆ ಬೇಕು ಇದೆಲ್ಲ. ತಿಂದುಂಡು ಆರಾಮವಾಗಿ ಇರಬಾರದೇ’ ಎಂದು ಗಂಡನು ತನ್ನ ಗುಣಗಾನ ಮಾಡುತ್ತಾನೆಂದು ಹೇಳುವಾಗ ನನಗೂ ಖುಷಿಯಾಗುತ್ತಿತ್ತು.
ಇತ್ತೀಚೆ ನಾನು ಶಾಪಿಂಗ್ ಗೆಂದು ಪೇಟೆಯ ಕಡೆ ಹೋದಾಗ ಅಚಾನಕ್ಕು ಆಕೆಯ ಗಂಡ ಸಿಕ್ಕು ಇಷ್ಟಗಲ ನಕ್ಕ ಮತ್ತು ‘ನಿಮಗೆ ತುಂಬ ಥ್ಯಾಂಕ್ಸ್ ಮೇಡಮ್. ನನ್ ಹೇಣ್ತಿ ಮನೆಯಲ್ಲಿ ತಿನ್ನೋದು ಬಿದ್ಕೊಳ್ಳೋದು. ಅಡುಗೆ ಬಟ್ಟೆ ಒಗ್ಯೋದು ಮುಗಿದ್ಮೇಲೆ ಏನಿದೆ ಕಟ್ಟೆ ಕಡ್ದು ಹಾಕಕ್ಕೆ? ನಾನು ಏನಾದ್ರೂ ಹೊಲೀಲಿ ನಾಲ್ಕು ಕಾಸು ಸಂಪಾದ್ನೆ ಮಾಡ್ಲಿ ಅಂತ ಹೊಲ್ಗೆದು ಮತ್ತು ಜಿಗ್ಜಾಗ್ ದು ಅಂತ ಎರಡೆರಡು ಮೆಷೀನ್ ತಂದುಕೊಟ್ರೆ ಮೂಲೆಗೆ ಹಾಕಿದ್ಲು. ಈಗ ನಿಮ್ಮ ಹತ್ರ ಹೋಗಲಿಕ್ಕೆ ಶುರು ಮಾಡಿದ್ಮೇಲೆ ನೋಡಿ ಒಂದೊಂದೇ ಹೊಲೀತಿದಾಳೆ’ ಅಂದ. ನನಗೆ ಅವನ ಮಾತು ಮುಖಕ್ಕೆ ಹೊಡೆದಂತೆ ತಾಕಿತು. ಗಂಡನ ಮಾನ ಉಳಿಸಿದ ಹೆಂಡತಿಯನ್ನು ಹೀಗೆ ನಡು ಪೇಟೆಯಲ್ಲಿ ನಿಂತು ಹರಾಜು ಹಾಕಿದ್ದ.

ಈಗ ನಾನು ಆಕೆ ತನ್ಮಯಳಾಗಿ ನನ್ನ ಪಾಠಗಳನ್ನು ಕೇಳುವುದನ್ನೂ, ಒಂದು ಗೆರೆಯೂ ಹೆಚ್ಚು ಕಡಿಮೆಯಾಗದಂತೆ ಬಟ್ಟೆ ಕತ್ತರಿಸುವುದನ್ನೂ ನೋಡುತ್ತೇನೆ. ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ? ಉತ್ತರಕ್ಕಾಗಿಯೇ ತಡಕಾಡಿಯೇ ತಡಕಾಡುತ್ತೇನೆ

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ವಾಸ. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಪತ್ರಿಕೆಗಳು, ವೆಬ್ ಪೋರ್ಟಲ್ ಗಳಲ್ಲಿ ಬರಹಗಳು ಪ್ರಕಟವಾಗಿವೆ. ‘ಹಲಗೆ ಮತ್ತು ಮೆದುಬೆರಳು’ ಅವರ ಮೊದಲ ಕಾವ್ಯಸಂಕಲನ.

Share

Leave a comment

Your email address will not be published. Required fields are marked *

Recent Posts More

 • 2 days ago No comment

  ಈ ಸಂಜೆಯೊಳಗೆ

    ಕವಿಸಾಲು       ಈ ಸಂಜೆಯೊಳಗೆ ಗರಿಗೆದರುತ್ತವೆ ಮೌನದಲ್ಲೆ ಗರಬಡಿದ ಮಾತುಗಳು ಹೊಸ ಬಟ್ಟೆಯ ತೊಟ್ಟ ಮಗುವಂತೆ ಸಮುದ್ರದ ದಂಡೆಯಲಿ ದೂರ ಉಳಿದ ಭಾವಗಳು ಅಲೆಗಳಾಗಿ ಬಂದು ಪಾದಮುಟ್ಟಿ ತಮಾಷೆ ಮಾಡುತವೆ ಆಪ್ತ ಗೆಳೆಯನಂತೆ ಗೂಡಿಗೆ ಹೊರಟ ಹಕ್ಕಿಗಳು ತಿರುಗಿ ನೋಡಿವೆ ಬರುವಾಗ ಏನೋ ತಂದಿದ್ದು ಮರೆತು ಬಂದನೋ ಎಂಬಂತೆ ಅಪ್ಪನಿಲ್ಲದ ಮಕ್ಕಳು ಕೂಲಿಗೆ ಹೋದ ತಾಯಿಯ ದಾರಿಯ ಕಣ್ಣು ಮಿಟುಕಿಸದೇ ನೋಡುತಿವೆ ಅರ್ಧದಲೇ ಮರೆತ ...

 • 5 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 6 days ago No comment

  ಹುಲ್ಲಿನ ಕಡ್ಡಿ

    ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

 • 2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 2 weeks ago No comment

  ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

    ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...


Editor's Wall

 • 15 August 2018
  5 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 09 August 2018
  2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 01 August 2018
  3 weeks ago No comment

  ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                      ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

 • 25 July 2018
  4 weeks ago No comment

  ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                      ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

 • 11 May 2018
  3 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...