Share

ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

 

 

 

 

 

 

 

 

 

 

ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?

 

ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ಹೆಸರೂ ರಾಜೀವಿ ಆಗಿದ್ದರಿಂದ ಗುರುತು ಹಿಡಿಯಲು ರಾಣಿ ಮತ್ತು ರಾಜಿ ಎಂದು ವಿಂಗಡಿಸಿದ್ದೆವಾದರೂ ರಾಣಿ ಮತ್ತು ಕುಳ್ಳಿ ರಾಜಿ ಎಂದು ಅವರಿಬ್ಬರನ್ನೂ ಕರೆಯುವುದಿತ್ತು. ‘ಕುಳ್ಳಿರಾಜಿನಾ?’ ಎನ್ನುವ ಪ್ರಶ್ನೆ ನಾಲಿಗೆ ತುದಿವರೆಗೂ ಬಂತಾದರೂ ನಿಯಂತ್ರಿಸಿಕೊಂಡೆ. ‘ಇಲ್ಲ ಇನ್ನೊಂದ್ ಇಪ್ಪತ್ತೈದು ವರ್ಷ ಬಿಟ್ಟು ಫೋನ್ ಮಾಡು ನಂಗೆ ನಿಂದೇ ಧ್ಯಾನ ನೋಡು. ಝಾಡಿಸಿ ಒದೀಬೇಕು ನಿಂಗೆ ಇಷ್ಟು ವರ್ಷ ಎಲ್ಲೇ ಹಾಳಾಗಿ ಹೋಗಿದ್ದೆ?’ ಅಂದರೆ ಗಳಗಳಗಳ ಸದ್ದು ಮಾಡಿ ನಕ್ಕಳು! ‘ನಿಮ್ಮನೆಯಿಂದ ನಿನ್ನ ನಂಬರ್ ತಗೊಳ್ಬೇಕಾದ್ರೆ ಸಾಕು ಸಾಕಾಯ್ತೇ ಮಾರಾಯ್ತಿ. ಕೊಡೋದೇ ಇಲ್ಲ ಅಂದ್ರಂತೆ. ಅದೂ.. ನಾನು ಆರ್ನೇ ಕ್ಲಾಸಿಗೇ ಸ್ಕೂಲ್ ಬಿಟ್ನಲ್ಲಾ ಈಗ ನನ್ನ ಸರ್ಟಿಫಿಕೇಟು ಕೇಳಕ್ಕೆ ಹೋದ್ರೆ ಇಲ್ಲಿ ನೀನು ಓದಿಯೇ ಇಲ್ಲ ಅಂತಿದಾರೆ ಏನ್ಮಾಡ್ಲೇ?’ ಅಂತ ವಿವರಿಸತೊಡಗಿದ್ಲು. ಓದಿದ ಸ್ಕೂಲೇ ಬೇರೆ ನೀನು ಕೇಳಿದ್ದೇ ಬೇರೆ ಸ್ಕೂಲಲ್ಲಾದ್ರೆ ಮತ್ತೇನಂತಾರೆ? ಒಂದು ಕೆಲ್ಸ ಮಾಡು, ನಾವು ಓದುವಾಗ ದಾಸಕೊಪ್ಪದಲ್ಲಿದ್ದ ಸ್ಕೂಲನ್ನ ಮಿಲ್ ಹಿಂದುಗಡೆಗೆ ಬದಲಿಸಿದಾರೆ. ಅಲ್ಲಿಗೆ ಹೋಗಿ ನೀನು ಓದಿದ ಇಸವಿ ಹೇಳಿ ಸರ್ಟಿಫಿಕೇಟು ಕೇಳು ಅಂದರೆ ‘ನಾನು ಓದಿದ ಇಸವಿ ಯಾವ್ದು ನೀನೇ ಹೇಳೇ’ ಅಂತ ಗಂಟುಬಿದ್ದಳು. ‘ಈಗ್ತಾನೇ ಕಣ್ಣು ಬಿಡ್ತಾ ಇದೀನಿ. ಇಸವಿನ ಆಮೇಲೆ ಕಾಲ್ ಮಾಡಿ ಹೇಳ್ತೀನಿ ಫೋನಿಡು’ ಅಂದೆ.

ನೆನಪು ಬಾಲ್ಯಕ್ಕೆಳೆದೊಯ್ದಿತು. ‘ಕುಳ್ಳಿರಾಜಿ’ ಎನ್ನುವುದು ಒಂದು ಕುಬ್ಜ ಜೀವ. ನನಗಿಂತ ಸುಮಾರು ವರ್ಷ ದೊಡ್ಡವಳಾದರೂ ನನ್ನದೇ ಕ್ಲಾಸಲ್ಲಿದ್ದಳು. ಅವಳಿಗೆ ಮಗುವಾಗಿದ್ದಾಗ ನಡೆಯಲು ಕಾಲು ಬಲವಿಲ್ಲದೆ ಎಷ್ಟೋ ವರ್ಷ ಮರಳಲ್ಲಿ ಸೊಂಟದ ತನಕ ಹೂತಿಡುತ್ತಿದ್ದರಂತೆ. ಕಾಲಿನಿಂದ ಸೊಂಟದವರೆಗೆ ಪೀಚಾಗಿ ಭುಜ, ತಲೆಬುರುಡೆ ದೊಡ್ಡದಾಗಿರುವ ಕುಳ್ಳನೆ ದೇಹದಿಂದ ಕುಳ್ಳಿ ಎಂಬ ಅನ್ವರ್ಥನಾಮಕ್ಕೆ ಪಾತ್ರಳಾದವಳು ಅವಳು. ಹೊಟ್ಟೆಗೂ ಗತಿಯಿಲ್ಲದ ಬಡತನದ ಹುಡುಗಿಗೆ ಬರಿಗಾಲಲ್ಲಿ ನಡೆಯುವಾಗ ಪಾದದ ಚರ್ಮ ಸವೆದು ತೂತುಬೀಳುತ್ತಿದ್ದರೆ ಹುಬ್ಬುಗಳಿಲ್ಲದ ದೊಡ್ಡ ಹಣೆ, ದೊಡ್ಡ ದೊಡ್ಡ ಪೇಲವ ಕಣ್ಣುಗಳು, ಶಿಂಡು ಮೂಗು, ಅಗಲಬಾಯಿ ಮೊಗದ ಅಂದಗೆಡಿಸಿದ್ದವು. ಮಾತಾಡುವಾಗ, ನಗುವಾಗ ಮೇಲ್ಭಾಗದ ಮತ್ತು ಕೆಳಭಾಗದ ಹಲ್ಲುಗಳ ನಡುವೆ ನಾಲಿಗೆ ತುದಿ ಹೊರ ತೂರುವಷ್ಟು ಕಿಂಡಿಬಿಡುತ್ತಿತ್ತು. ಮಾತಿಗೊಮ್ಮೆ ಗಳಗಳ ಸದ್ದಿಂದ ನಗುವ, ಅಳುವ ಈ ಭಾವಜೀವಿಗೆ ತಂದೆ ತಾಯಿ ಇರಲಿಲ್ಲ. ಇಬ್ಬರು ಅಣ್ಣಂದಿರು, ಇಬ್ಬರು ಅಕ್ಕಂದಿರು. ದೊಡ್ಡಣ್ಣ ಅತ್ತಿಗೆಯ ಕುಟುಂಬದೊಂದಿಗಿದ್ದ ಇವರೆಲ್ಲ ಹೊಟ್ಟೆಬಟ್ಟೆಗೆ ಕೂಲಿ ಮಾಡಲೇಬೇಕು. ರಾಜಿಯೊಬ್ಬಳೇ ದುಡಿಯದೇ ಶಾಲೆಗೆ ಹೋಗುತ್ತಿದ್ದವಳು. ಅತ್ತಿಗೆ ಇದ್ದುದರಲ್ಲೇ ಚೆನ್ನಾಗಿ ನೋಡಿಕೊಳ್ಳುತ್ತಿದ್ದರೂ ತಾಯಿಯಿಲ್ಲದ ಮಕ್ಕಳೆಂದು ಹಿಂಸಿಸುತ್ತಾಳೆ ಎಂದು ಭಾವಿಸುತ್ತಿದ್ದ ರಾಜಿ, ತಪ್ಪು ಮಾಡಿದರೆ ತಂದೆ ತಾಯಿ ಕೂಡ ಬೈದು ಹೊಡೆದು ಮಾಡ್ತಾರೆ ಕಣೇ ಅಂದರೂ ಅರ್ಥಮಾಡಿಕೊಳ್ಳದೆ ಅತ್ತಿಗೆಯನ್ನು ವಿಪರೀತ ದ್ವೇಷಿಸುತ್ತಿದ್ದಳು.

ಮಕ್ಕಳು ಗುಂಪುಗೂಡಿದ್ದಲ್ಲಿ ಬೈಗುಳ, ಅಶ್ಲೀಲ ಪದಗಳಿರುವ ಕಥೆ, ಹಾಡು ಹೇಳಿ ನಾವು ನಗುವುದಕ್ಕೂ ಮೊದಲು ದೊಡ್ಡ ಗೊಗ್ಗರು ದನಿಯಲ್ಲಿ ನಗುತ್ತಿದ್ದ ರಾಜಿಗೆ ಕ್ಷಣದಲ್ಲಿ ಕಣ್ಣೀರಿನ ಕಥೆ ಹೇಳಿ ಅಳುವುದೂ ಗೊತ್ತಿತ್ತು.

ಶಾಲೆಯಲ್ಲೂ ಸರಿಯಾಗಿ ಕಲಿಯದ ರಾಜಿಗೆ ಆರೋಗ್ಯ ಸಮಸ್ಯೆಗಳಿದ್ದವು. ಸುಮಾರು ಒಂದು ಮೈಲು ನಡೆದು ಶಾಲೆಗೆ ಹೋಗುವಾಗ ಬರುವಾಗ ಅವಳಿಗೆ ಹೊಟ್ಟೆಮುರಿತ ಶುರುವಾಗಿ ಕಾಲುಗಳನ್ನು ಕತ್ತರಿಹಾಕಿ ಒತ್ತಿಕೊಂಡು ತುಟಿಕಚ್ಚಿ ರಸ್ತೆಯಲ್ಲೇ ನಿಂತುಬಿಡುತ್ತಿದ್ದಳು. ಇವಳದ್ದೊಂದು ‘ನೀರ್ಕಡೆ’ ಮುಗಿಯೋದೇ ಇಲ್ಲ ಅಂತ ಗೆಳತಿಯರೆಲ್ಲ ಬಿಟ್ಟು ಹೋದರೂ ನಾನು ಮಾತ್ರ ಇವಳ ಹೊಟ್ಟೆಮುರಿತ ನಿಯಂತ್ರಣಕ್ಕೆ ಬರುವ ತನಕ ಜೊತೆಗೇ ನಿಲ್ಲುತ್ತಿದ್ದೆ. ಶಾಲೆಯಲ್ಲಿ ಕೊಡುವ ಬಲ್ಗರ್ ಉಪ್ಪಿಟ್ಟು, ಮನೆಯ ಅಪೌಷ್ಟಿಕ ಆಹಾರ ಇವಳ ಆರೋಗ್ಯ ಕೆಡಿಸಿದ್ದಿರಬಹುದು.

ತರಗತಿಯಲ್ಲೂ ಈ ಸಮಸ್ಯೆ ದಿನಕ್ಕೆ ನಾಲ್ಕಾರು ಸಲ ಅವಳನ್ನು ಕಾಡುತ್ತಿತ್ತು. ಅಂತೂ ಆರನೇ ಕ್ಲಾಸು ಫೇಲಾಗಿ ಶಾಲೆ ಬಿಟ್ಟು ಮನೆಯಲ್ಲಿ ಕೂತ ಮೇಲೆ ಅತ್ತಿಗೆ ನಾದಿನಿ ಜಗಳ ನಾಲ್ಕೆಂಟು ಮನೆಗೆ ಕೇಳತೊಡಗುತ್ತಿತ್ತು. ಮೊದಲೂ ಹೆಚ್ಚಿನ ಸಮಯ ನಮ್ಮ ಮನೆಯಲ್ಲೇ ಉಂಡು ತಿಂದು ಕಳೆಯುತ್ತಿದ್ದ ಅವಳೀಗ ನಮ್ಮ ಮನೆಯ ಖಾಯಂ ಸದಸ್ಯೆಗಾಗಿದ್ದಳು. ಆದರೂ ಅವರ ಅತ್ತಿಗೆ ಹೇಳುವುದು, ಕೂತು ತಿನ್ನಲು ನಾವೇನು ರಾಜರ ವಂಶಸ್ಥರಲ್ಲ. ಶಾಲೆನಾದ್ರೂ ಕಲೀಲಿ ಅಂದ್ರೆ ಅದೂ ಮಾಡ್ಲಿಲ್ಲ. ಈಗ ನನ್ ಜೊತೆ ಕೂಲಿಗೆ ಬಂದ್ರೆ ನಾನೇನು ಇವಳ ದುಡ್ಡು ಕಸ್ಕೊಳ್ತೀನಾ? ಪಿಗ್ಮಿ ಕಟ್ಟಿದ್ರೂ ನಾಳೆ ಇವಳದ್ದೇ ಮದ್ವೆಗೆ ನಾಕ್ ಕಾಸ್ ಒಟ್ಟುಮಾಡ್ಬಹುದು. ಈಗ ನನ್ನ ಮಗಳು ಶಮಿತನಿಗೆ ನಾನೇನು ಉಪ್ಪರಿಗೆ ಮೇಲೆ ಕೂರ್ಸಿದೀನಾ? ರಜೆ ಬಂದ್ರೆ ಸಾಕು ಗದ್ದೆ ನಟ್ಟಿಗೆ ಬರ್ತಾಳಲ್ಲ? ಮನೇಲಿದ್ರೂ ಬೋರ್ವೆಲಿಂದ ನಾಕ್ ಕೊಡ ನೀರು ತಂದು ಇಡಲ್ಲಾ ಅಂದ್ರೆ? ಒಂದ್ ಕಸ ಗುಡ್ಸಲ್ಲ ಅಂದ್ರೆ? ಕೆಲ್ಸ ಮಾಡಿ ಸಾಕಾಗಿ ಮನೆಗೆ ಬಂದು ಬೇಸಿ ಹಾಕಿದ್ರೂ ಸಮಾಧಾನ ಇಲ್ಲ ಅಂದ್ರೆ? ಸಿಟ್ಟು ಬರಲ್ವಾ?’ ಎಂದು.

ಬರಬರುತ್ತಾ ಅತ್ತಿಗೆ ನಾದಿನಿಯರ ಜಗಳ ಹೊಡೆದಾಟಕ್ಕೆ ತಿರುಗಿತ್ತು. ಪೀಚಲು ಕುಳ್ಳಿರಾಜಿಯ ಪೆಟ್ಟಿಗಿಂತ ದೇಹದಾರ್ಢ್ಯ ಚೆನ್ನಾಗಿದ್ದ ಅತ್ತಿಗೆಯ ಪೆಟ್ಟು ಬಲವಾದುದಾಗಿದ್ದು ರಾಜಿ ಎಂಟೆಂಟು ದಿನ ಸುಧಾರಿಸಿಕೊಳ್ಳಲು ಬೇಕಾಗುತ್ತಿತ್ತು. ಕೊನೆ ಕೊನೆಗೆ ರಾಜಿ ಆತ್ಮಹತ್ಯೆಯ ಮಾತಾಡತೊಡಗುವಾಗ ನಮ್ಮ ಸಂಬಂಧಿಕರು ಅವಳನ್ನು ಬೆಂಗಳೂರಿಗೆ ಕರೆದೊಯ್ದು ಒಂದು ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲೆಂದು ಬಿಟ್ಟರು. ಮೊದಲೇ ಬಂಗಲೆ, ಕಾರು, ನಗರ ಜೀವನವನ್ನು ಕನಸುವ ರಾಜಿಗೆ ಈ ಮನೆ ತನ್ನದೇ ಎನಿಸಿ ಹೊಂದಿಕೊಂಡುಬಿಟ್ಟಳು.
ಆ ಮನೆಯವರೂ ಹಣವಂತರು, ಗುಣವಂತರು. ಇವಳು ಆ ಮನೆ ಸೇರಿದ ನಾಲ್ಕೇ ದಿನಗಳಲ್ಲಿ ಅಪಘಾತವಾಗಿ ಆ ಮನೆಯ ಗಂಡಸು ತೀರಿಹೋದುದರಿಂದ ಇವಳು ಆ ಮನೆಯ ಹೆಂಗಸು ಮತ್ತು ಮಗುವಿನ ಅನಿವಾರ್ಯವೂ ಆಗಿಬಿಟ್ಟಿದ್ದಳು. ಆ ಹೆಂಗಸು ಎಷ್ಟೋ ವರ್ಷಗಳ ಕಾಲ ಚೆನ್ನಾಗಿ ನೋಡಿಕೊಂಡರು. ಒಳ್ಳೆಯ ಆರೋಗ್ಯಕರ ವಾತಾವರಣದಲ್ಲಿ ಹರೆಯಕ್ಕೆ ಬಂದ ರಾಜಿ ಉದ್ದಕ್ಕೆ ಗುಂಡಗುಂಡಗೆ ಬೆಳೆದು ಮೈಬಣ್ಣ ರಂಗೇರಿತು. ಬಟ್ಟೆ, ಬಂಗಾರ, ಹಣ ಎಲ್ಲ ಮಾಡಿಕೊಂಡು ಚಂದದ ಬಟ್ಟೆ, ಹೈಹೀಲ್ಡ್ ಚಪ್ಪಲಿ ಧರಿಸಿ ವ್ಯಾನಿಟಿ ಬ್ಯಾಗ್ ಹಿಡಿದು ಊರಿಗೆ ಬಂದಳೆಂದರೆ ಕುಳ್ಳಿ ರಾಜಿ ಎಂದು ಗೇಲಿ ಮಾಡುತ್ತಿದ್ದವರೆಲ್ಲ ‘ಮೇಡಮ್’ ಎಂದು ಗೌರವಿಸತೊಡಗಿದರು. ಇವಳು ಬೆಂಗಳೂರಲ್ಲಿರುವಾಗ ಊರಲ್ಲಿ ಇವಳ ದೊಡ್ಡಕ್ಕ ಒಬ್ಬನನ್ನು ಪ್ರೀತಿಸಿ ಅಂತರ್ಜಾತಿ ಮದುವೆ ಮಾಡಿಕೊಂಡಿದ್ದಳು. ಈಗ ಅತ್ತಿಗೆ, ಅಣ್ಣ, ಅಕ್ಕ ಭಾವ ಎಲ್ಲರೂ ಕುಳ್ಳಿರಾಜಿಯ ಹಿಂದೆ ಮುಂದೆ ಸುತ್ತುವ ಗಿರಗಿಟ್ಲೆಯಾದರು.

ಯಾವಾಗ ನಾದಿನಿಯ ಸ್ಥಿತಿಗತಿ ಚೆನ್ನಾಗಿದೆ ಎಂದಾಯಿತೋ ಸರಕಾರಿ ಕಚೇರಿಯೊಂದರಲ್ಲಿ ಗುಮಾಸ್ತನಾಗಿದ್ದ ಇವಳ ಭಾವ ಬೆಂಗಳೂರಿಗೆ ಹೋದಾಗೆಲ್ಲ ಅವಳನ್ನು ಕಂಡು ಬರತೊಡಗಿದ. ಬರಬರುತ್ತಾ ಅವಳಲ್ಲಿ ಹಣ ಪಡೆಯತೊಡಗಿದ. ನಂತರ ಬ್ಯಾಂಕಿನಲ್ಲಿಟ್ಟ ಅವಳ ಹಣ, ಮೈಮೇಲಿದ್ದ ಚಿನ್ನದ ಮೇಲೆ ಅವನ ಕಣ್ಣು ಬಿದ್ದಿತ್ತು ಎಂದು ನನ್ನ ನೆರೆಹೊರೆಯವರು ನಾನು ಊರಿಗೆ ಹೋದಾಗ ಹೇಳಿದ್ದಿತ್ತು.

ಅವಳಿಗಾಗಿ ಕೆಲ ಸಂಬಂಧಗಳೂ ಬರತೊಡಗಿದ್ದವು. ಅವಳಿದ್ದ ಮನೆ ಮಾಲಕಿ ನೀನೂ ನನ್ನ ಮಗಳಿದ್ದ ಹಾಗೆಯೇ. ನಾನೇ ನಿಂತು ನಿನ್ನ ಮದುವೆ ಮಾಡಿಸುತ್ತೇನೆ ಎನ್ನುತ್ತಿದ್ದಳಂತೆ. ಇಷ್ಟಿದ್ದರೂ ಒಂದು ದಿನ ರಾಜಿ ಬೆಂಗಳೂರು ಬಿಟ್ಟು ಬಂದೇಬಿಟ್ಟಳು. ಅವರೆಷ್ಟೇ ಫೋನ್ ಮಾಡಿ ಅಂಗಲಾಚಿದರೂ ಮತ್ತೆ ಬೆಂಗಳೂರಿಗೆ ಮರಳಲಿಲ್ಲ. ಯಾಕೆಂದರೆ ಬಾಯಿಯೇ ಬಿಡಲಿಲ್ಲ. ಮೊದ ಮೊದಲಿಗೆ ಅಣ್ಣ ಅತ್ತಿಗೆ ಚೆನ್ನಾಗಿ ಉಪಚರಿಸಿದರು. ಯಾವಾಗ ಇವಳು ಹಣ ಬಿಚ್ಚುತ್ತಿಲ್ಲವೆಂದು ತಿಳಿಯತೊಡಗಿತೋ ಮತ್ತೆ ತಾತ್ಸಾರ ಶುರುವಾಯಿತು. ಇದರ ನಡುವೆ ಅಣ್ಣ ಅತ್ತಿಗೆ ಕೂಲಿಗೆ ಹೋಗುತ್ತಿದ್ದಂತೆ ಭಾವ ಅವರ ಮನೆ ಹೊಕ್ಕುತ್ತಾನೆಂದೂ ಅವರು ಹಿಂದಿರುಗುವ ಮೊದಲೇ ಹೊರಬೀಳುತ್ತಾನೆಂದೂ ಜನ ಗುಸುಗುಸು ಮಾಡತೊಡಗಿದ್ದರು. ಇದು ಅಣ್ಣ ಅತ್ತಿಗೆಯ ಕಿವಿಗೆ ಬೀಳುವಷ್ಟರಲ್ಲಿ ರಾಜಿ ನಾಪತ್ತೆಯಾಗಿಯೇಬಿಟ್ಟಳು.

ನಾನು ಊರಿಗೆ ಹೋದಾಗೆಲ್ಲ ಎಲ್ಲರ ಕುರಿತು ವಿಚಾರಿಸುತ್ತಾ ಕುಳ್ಳಿರಾಜಿಯ ಸುದ್ದಿಯಿದೆಯಾ? ಯಾರ ಜೊತೆ ಹೋದಳು? ಹೇಗಿದ್ದಾಳೆ? ಎಲ್ಲಿದ್ದಾಳೆ? ಎಂದರೆ ಜನ ‘ಅವಳ ಭಾವನ ಜೊತೆಗೇ ಓಡಿಹೋದ್ಲಲ್ಲೇ. ಸ್ವಂತ ಅಕ್ಕನ ಸಂಸಾರಕ್ಕೇ ಕೊಳ್ಳಿ ಇಡ್ತಿದೀನಲ್ಲಾ ಅಂತನಾದ್ರೂ ಬೇಡ್ವಾ? ಅಷ್ಟು ವರ್ಷ ಕಷ್ಟಪಟ್ಟು ದುಡಿದ ದುಡ್ಡು ಚಿನ್ನ ಎಲ್ಲ ಅವನ ಎದೆಮೇಲೆ ಹಾಕಿದ್ಲಲ್ಲ. ದುಡ್ಡಿರೋ ತನಕ ಚೆನಾಗಿ ನೋಡಿಕೊಂಡಿದ್ದಾನು. ಆಮೇಲೆ ಮತ್ಯಾರನ್ನ ಹುಡುಕಿ ಹೋದ್ನೋ. ಇವಳಿಗೆ ಬುದ್ಧಿ ಬೇಕಾ ಬೇಡ್ವಾ?’ ‘ಒಬ್ಳು ಮಗಳು ಇದಾಳಂತೆ. ಅವನ ಸಂಬಳ ದೊಡ್ಡ ಹೇಣ್ತಿಗಂತೆ ಗಿಂಬಳ ಚಿಕ್ಕ ಹೇಣ್ತಿಗಂತೆ.. ದೊಡ್ಡ ಹೇಣ್ತಿಗೆ ಸ್ವಂತ ಮನೆ ಕಟ್ಸಿದಾನಂತೆ. ಇವಳಿಗೆ ಬಾಡಿಗೆಯದಂತೆ’, ‘ಒಂದೇ ಊರಲ್ಲಿದ್ರೂ ಅಕ್ಕನಿಗೇ ಗೊತ್ತಿಲ್ಲ ಅಂತಾರಪ್ಪ’, ‘ಗೊತ್ತಿಲ್ಲದೇ ಏನು? ಒಂದಿನ ಮಂಗಳೂರಿನ ಪೇಟೆ ಮಧ್ಯೆ ತಂಗಿನ ರೋಡಲ್ಲಿ ಹಾಕಿ ಹೊಟ್ಟೆ ಹೊಟ್ಟೆಗೆ ಒದ್ಲಂತೆ’ ಹೀಗೆ ಜನ ಹೇಳುವ ಮಾತಿನ ತುಣುಕುಗಳನ್ನು ಜೋಡಿಸಿ ನಾನು ಇವಳ ಇಡೀ ಕಥೆಯನ್ನು ಊಹಿಸುತ್ತಿದ್ದೆ. ಬಹಳ ಹಿಂಸೆಯಾಗುತ್ತಿತ್ತು ಮನಸ್ಸಿಗೆ. ಕಥೆಯ ಒಂದು ತುದಿಯಲ್ಲಿ ಅವಳಕ್ಕ ದುಃಖಕ್ಲಾಂತ ಮೊಗದಲ್ಲಿ ನಿಂತಿದ್ದರೆ ಇನ್ನೊಂದು ತುದಿಯಲ್ಲಿ ನಿಂತ ಇವಳ ಗಳಗಳ ನಗು ಅಥವಾ ಅಳುವಿನ ಸದ್ದು ಕೇಳಿಸಿದಂತಾಗುತ್ತಿತ್ತು.

ತೀರಾ ಇತ್ತೀಚೆ ನಾನು ಊರಿಗೆ ಹೋದಾಗ ಒಬ್ಬರು ‘ನಿನಗೆ ಗೊತ್ತಾ? ಪಾರ್ವತಿ ಸತ್ತಳು!’ ಎಂದರು. ಯಾವ ಪಾರ್ವತಿ? ಜನ್ನಾಚಾರಿ ಮಗಳಾ? ಅಂದರೆ ಅಲ್ಲಕಣೇ ಕುಳ್ಳಿರಾಜಿಯ ಅಕ್ಕ ಎಂದರು. ಕ್ಷಣ ಬೆಚ್ಚಿಬಿದ್ದೆ. ಏನಾಗಿತ್ತು ಅವಳಿಗೆ? ಇದೇನು ಸಾಯುವ ವಯಸ್ಸಾ? ಅಂದರೆ ಬೋನ್ ಕ್ಯಾನ್ಸರಂತೆ ಕಣೇ. ಅವಳು ಇವಳ ದೆಸೆಯಿಂದ ಮೊದಲೇ ಏನು ಕಡಿಮೆ ನೋವು ತಿಂದಿದ್ಲಾ? ಈಗ ಕ್ಯಾನ್ಸರ್ ಅಂದಮೇಲೆ ಅದೆಷ್ಟು ನೋವು ತಿಂದಿರಬೌದು?! ಮದುವೆ ಆದ ಲಾಗಾಯ್ತು ಅಕ್ಕ ತಂಗಿ ಊರಕಡೆ ಮುಖಾನೇ ಹಾಕಿರ್ಲಿಲ್ಲ. ಯಾರಿಗೋ ಸಿಕ್ರು. ಯಾರೋ ಚೂರು ಪಾರು ಸುದ್ದಿ ಕೊಟ್ರು… ಹಿಂಗೇ ಆಯ್ತು ನೋಡು. ಸರಿಯಾಗಿ ಗೊತ್ತಾಗಿದ್ರೆ ಕಾಯ್ಲೆಲ್ಲಿ ಮಲ್ಗಿದ್ದಾಗ ಒಂದು ಸಲ ನೋಡ್ಕೊಂಡಾದ್ರೂ ಬರಬೌದಿತ್ತು. ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸ್ತಾರೆ ಅಂತಾರೆ. ಅವಳೇನು ತಪ್ಪು ಮಾಡಿದ್ಲೇ? ತಪ್ಪು ಮಾಡಿ ಅವಳ ಬಾಳು ಹಾಳು ಮಾಡಿದ ಇವಳು ಕಲ್ಲುತುಂಡಿನ ಹಾಗಿದಾಳೆ ನೋಡು. ಈಗ ಅನ್ಯಾಯ ಮಾಡ್ದೋರಿಗೇ ಕಾಲ’ ನಾನು ಮತ್ತೂ ಈ ಮಾತುಗಳ ತುಣುಕುಗಳನ್ನೇ ಜೋಡಿಸಿ ಕಥೆ ಹೆಣೆದುಕೊಂಡು ವ್ಯಥಿತಳಾಗುತ್ತಿದ್ದೆ. ಗುಲಾಬಿಗೆಂಪು ಮೈಬಣ್ಣದ ಪಾರ್ವತಿ ಕೆಂಪು ಲಂಗ ದಾವಣಿ ಹಾಕಿಕೊಂಡು ಓಡಾಡುತ್ತಿದ್ದ ನೆನಪು ಮೂಡಿ ಅವಳ ದೊಡ್ಡ ದೊಡ್ಡ ಕಪ್ಪು ಕಣ್ಣುಗಳು ಹನಿದುಂಬಿ ತುಳುಕುವ ಚಿತ್ರವೊಂದು ನನ್ನ ಮನಸ್ಸಿನಲ್ಲಿ ಉಳಿದುಬಿಟ್ಟಿತು.

ಮಧ್ಯಾಹ್ನದ ಹೊತ್ತಿಗೆ ಕುಳ್ಳಿ ರಾಜಿಗೆ ಕರೆ ಮಾಡಿ ಲೆಕ್ಕಾಚಾರ ಹಾಕಿ ‘ಇಂಥ ಇಸವಿಯಲ್ಲಿ ನೀನು ಆರನೇ ಕ್ಲಾಸು ಓದ್ತಿದ್ದೆ ನೋಡು’ ಎಂದು ಹೇಳಿದೆ. ಗಳಗಳನೆ ಸದ್ದು ಮಾಡಿ ನಗುತ್ತ ‘ನೀನು ಕಂಪ್ಯೂಟರು ನಿಂಗೆಲ್ಲ ಗೊತ್ತಿರುತ್ತೆ ನೋಡು’ ಅಂದಳು ‘ಪಾರ್ವತಕ್ಕ ಏನಾದಳೇ?’ ಎಂದು ಕೇಳಿದೆ. ‘ಬೋನ್ ಕ್ಯಾನ್ಸರು. ತುಂಬ ನರಳಿಬಿಟ್ಲು ಕಣೇ’ ಎಂದಳು. ನೀನು ಹೇಗಿದ್ದೀ? ಅಂದೆ. ನಾನು ಬದುಕಿಡೀ ಒಂಟಿಯಾಗಿ ಕಳೆದುಬಿಟ್ಟೆ ಕಣೇ. ಭಾವ ಅನಿಸಿಕೊಂಡೋನು ಉದ್ದುಕ್ಕೂ ಮೋಸಾನೇ ಮಾಡಿಬಿಟ್ಟ. ನೋಡೋರ್ ಕಣ್ಣಿಗೆ ನಾನೇ ವಿಲನ್ನು! ನೋಡೀಗ…. ನಾನೇ ಅನಾಥೆ. ಅದು ಸಾಕಾಗಲ್ಲ ಅಂತ ನನಗೊಬ್ಳು ಮಗಳು ಇಬ್ರೂ ಅನಾಥರು ತಗೋ! ಎಂದವಳೇ ಮತ್ತೆ ಗಳಗಳನೆ ಅಳತೊಡಗಿದಳು. ಈ ಬದುಕಿನ ವ್ಯಾಪಾರ ಅದೆಷ್ಟು ವಿಚಿತ್ರವೆನಿಸಿತು.

ನಾನು ಮೌನವಾದೆ. ನಾವು ಚಿಕ್ಕವರಿರುವಾಗ ಯಾರಾದರೂ ಮಕ್ಕಳೇ ಯಾರಾದ್ರೂ ಹಾಡು ಹೇಳಿ ಎಂದದ್ದೇ ಎಲ್ಲರಿಗಿಂತ ಮೊದಲು ಎದ್ದು ನಿಲ್ಲುತ್ತಿದ್ದ ಕುಳ್ಳಿರಾಜಿ ತನ್ನ ಗೊಗ್ಗರು ದನಿಯಲ್ಲಿ.

“ಅಕ್ಕನ ಗಂಡ ಭಾವ ಅಂತ ಆಸೆ ಮಾಡಿದ್ದೆ
ಭಾವನಾದ ಬೋಳಿಮಗ ಮೋಸ ಮಾಡಿದ್ದ!”

ಎಂದು ಹಾಡಿ ಜೋರಾಗಿ ನಗುತ್ತ ನಗಿಸುತ್ತಿದ್ದದ್ದು ಮತ್ತೆ ಮತ್ತೆ ನೆನಪಾಯಿತು. ಆದರೆ ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು ಎಂದು ತೋಚದೆ ಕೂತಲ್ಲೇ ಮರವಟ್ಟಿದೆ.

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ವಾಸ. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಪತ್ರಿಕೆಗಳು, ವೆಬ್ ಪೋರ್ಟಲ್ ಗಳಲ್ಲಿ ಬರಹಗಳು ಪ್ರಕಟವಾಗಿವೆ. ‘ಹಲಗೆ ಮತ್ತು ಮೆದುಬೆರಳು’ ಅವರ ಮೊದಲ ಕಾವ್ಯಸಂಕಲನ.

Share

Leave a comment

Your email address will not be published. Required fields are marked *

Recent Posts More

 • 2 weeks ago No comment

  ಕವಿಸಾಲು | ಇಂಡೋನೇಶಿಯಾ

      ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ಜಲ, ಉಸಿರ ಗಾಳಿ ಹುಚ್ಚೆದ್ದು ಕುಣಿದು ಅಪ್ಪಳಿಸಿದ ಆಘಾತಕ್ಕೆ ಕಂಗೆಟ್ಟು ತತ್ತರಿಸಿವೆ ಪ್ರಾಣಿ, ಮನುಜ ಕುಲ ಮಾಡು ಹಾರಿ, ಕಂಬಗಳು ಕುಸಿದು ನೆಲಕಚ್ಚಿವೆ ಮಾನವನ ಬೀಡು ಕತ್ತರಿಸಿ ...

 • 2 weeks ago No comment

  ಕವಿಸಾಲು | ತಡವಿಲ್ಲದಿರಲಿ ಇನ್ನು…

      ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ತಡೆಯ ದಾಟಿ ತಲುಪಬೇಕಿದೆಯಷ್ಟೆ ಬಯಕೆ ಗುರಿಯನ್ನು ದಟ್ಟ ಹಸಿರಿನ ಕಾಡು, ಆಗಸದ ನೀಲಿ ಬಿಳಿಯ ಮೋಡಗಳ, ಬಿಸಿಲ ಬೆಳಕಿನ ನಡುವೆ ಬಯಲ ಸ್ವೇಚ್ಛೆಯ, ತಿಳಿಗಾಳಿ ತವಕದಲಿ ಬಂಧನಗಳ ...

 • 4 weeks ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 month ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 month ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...


Editor's Wall

 • 31 August 2018
  2 months ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  2 months ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  2 months ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  2 months ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  2 months ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...