Share

ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

 

ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.

 

ದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ನಮ್ಮ ಸದ್ಯದ ರಾಷ್ಟ್ರಪತಿಯ ಹೆಸರೇನು? ಕರ್ನಾಟಕದ ಈಗಿನ ಮುಖ್ಯಮಂತ್ರಿ ಯಾರು? ಇಂತಹ ನಿತ್ಯಜೀವನದ ಆಗುಹೋಗುಗಳ ಬಗೆಗಿನ ಅತೀ ಸರಳ ಪ್ರಶ್ನಾವಳಿಗಳು. ಇತ್ತ ಪ್ರಶ್ನೆಗಳು ಸರಳಾತಿಸರಳವಾಗಿದ್ದರೂ ಇವರುಗಳೆಲ್ಲಾ ತಪ್ಪು-ತಪ್ಪು ಉತ್ತರಗಳನ್ನು ನೀಡಿ ಬೆಪ್ಪುತಕ್ಕಡಿಗಳಂತೆ ಕಾಣಿಸಿಕೊಳ್ಳುವುದು ತಮಾಷೆಯಾಗಿ ಕಾಣುತ್ತಿತ್ತು. ಜೊತೆಗೇ ಇಷ್ಟನ್ನೂ ಇವರುಗಳು ತಿಳಿದಿಲ್ಲವೇ ಎಂಬ ಅಚ್ಚರಿಯೂ ಕೂಡ ವೀಕ್ಷಕರಿಗೆ. ಅಂತೂ ಸುದ್ದಿವಾಹಿನಿಯು ಈ ಕಾರ್ಯಕ್ರಮವನ್ನು ಒಂದು ತಮಾಷೆಯ ಕಾರ್ಯಕ್ರಮವಾಗಿ ಪ್ರಸಾರ ಮಾಡಲು ಯತ್ನಿಸಿತ್ತೋ ಅಥವಾ ‘ಆಧುನಿಕ ಮತ್ತು ಅಕ್ಷರಸ್ಥರೆಂದು ತಮ್ಮನ್ನು ತಾವು ಕರೆದುಕೊಳ್ಳುವ ಯುವಜನರ ಹಣೆಬರಹವನ್ನು ಒಮ್ಮೆ ನೋಡಿ’ ಎಂದು ಹೇಳಲು ಬಯಸಿತೋ ಕೊನೆಗೂ ತಿಳಿಯಲಿಲ್ಲ.

ಆದರೆ ಈ ಕಾರ್ಯಕ್ರಮದಲ್ಲಿ ನನಗೆ ಕಂಡುಬಂದ ಮತ್ತೊಂದು ಸ್ವಾರಸ್ಯಕರ ಅಂಶವೆಂದರೆ ಆಯ್ದ ಯುವಕ-ಯುವತಿಯರಲ್ಲಿ ಪ್ರಸಕ್ತ ರಾಜಕಾರಣದ ಬಗ್ಗೆ ಒಂದೆರಡು ಮಾತುಗಳನ್ನಾಡಲೂ ಕೇಳಲಾಗಿತ್ತು. ಹೆಚ್ಚಿನ ಉತ್ತರಗಳು ಎಂದಿನಂತೆ ನೀರಸ ಮತ್ತು ನಿರಾಶಾದಾಯಕವಿದ್ದರೆ ಉಳಿದವುಗಳು ರೋಷಾವೇಶದಿಂದ ಕೂಡಿದ್ದವು. ವಿಚಿತ್ರವೆಂದರೆ ಬಹಳಷ್ಟು ಮಂದಿ ಭಾರತದಲ್ಲಿ ಪ್ರಜಾಪ್ರಭುತ್ವದ ಬದಲಾಗಿ ಸರ್ವಾಧಿಕಾರಿ ಆಡಳಿತವಿರಬೇಕಿತ್ತೆಂದೂ ಅಂದುಬಿಟ್ಟರು. ಈ ಉತ್ತರಗಳು ಒಂದು ರೀತಿಯಲ್ಲಿ ಭಂಡ ಮತ್ತು ಉಡಾಫೆಯದ್ದಾಗಿದ್ದರೂ ಸರ್ವಾಧಿಕಾರವೆಂಬ ದೂರದ ಬೆಟ್ಟ ಇವರಿಗೆ ನುಣ್ಣನೆ ಕಂಡಂತೆ ಭಾಸವಾಗಿದ್ದಂತೂ ಸತ್ಯ.

ಇನ್ನು ಈ ಕಾರ್ಯಕ್ರಮದ ಸನ್ನಿವೇಶದಾಚೆಗೆ ಬಂದರೂ ‘ನಮ್ಮಲ್ಲಿ ಸರ್ವಾಧಿಕಾರಿ ಆಡಳಿತವಿರಬೇಕಿತ್ತು. ಆಗ ಎಲ್ಲಾ ಸಮಸ್ಯೆಗಳೂ ಥಟ್ಟನೆ ಪರಿಹಾರವಾಗುತ್ತಿದ್ದವು’ ಎಂಬ ಮಾತುಗಳನ್ನು ಸಾಮಾನ್ಯವಾಗಿ ಅಲ್ಲಲ್ಲಿ ಕೇಳುತ್ತಿರುತ್ತೇನೆ. ಹೀಗೆ ಹೇಳುವವರಲ್ಲಿ ಬಹಳಷ್ಟು ಮಂದಿ ಒಂದೋ ಸರ್ವಾಧಿಕಾರಿ ಆಡಳಿತವಿರುವ ಪ್ರದೇಶಗಳಲ್ಲಿರುವ ನಿಜಸ್ಥಿತಿಗಳ ಬಗ್ಗೆ ಸಂಪೂರ್ಣ ಅರಿವಿಲ್ಲದಿರುವವರು ಅಥವಾ ಮೊದಲೇ ಹೇಳಿದಂತೆ ಏನಾದರೊಂದು ಹೇಳಬೇಕು ಎಂಬ ಹಟಕ್ಕೆ ಬಿದ್ದು ವಾದಿಸುವವರಂತೆ ಮಾತನಾಡುವ ಬಾಯಿಪಟಾಕಿ ವೀರರು. ಇಂಥಾ ಅತಿರಂಜಿತ ಕಲ್ಪನೆಯ ಮಾತುಗಳನ್ನು ಕೇಳಿದಾಗಲೆಲ್ಲಾ ಇವರನ್ನೊಮ್ಮೆ ಸರ್ವಾಧಿಕಾರವಿರುವ ದೇಶಗಳಿಗೆ ವಿಹಾರಕ್ಕೆಂದು ಕರೆದುಕೊಂಡು ಹೋಗಬೇಕು ಎಂದು ನನಗನ್ನಿಸುವುದುಂಟು. ಪ್ರಜಾಪ್ರಭುತ್ವದಲ್ಲಿರುವ ಕುಂದುಕೊರತೆಗಳನ್ನೆಲ್ಲಾ ಸರ್ವಾಧಿಕಾರವು ನೀಗಿಸಬಲ್ಲದು ಎಂಬ ಭ್ರಮೆಯೊಂದು ಬಹಳಷ್ಟು ಮಂದಿಗೆ ಇರುವಂತೆ ಕಾಣಿಸುವುದು ನಿಜಕ್ಕೂ ಅಚ್ಚರಿಯ ವಿಷಯವೇ ಸರಿ.

ನನ್ನನ್ನೂ ಸೇರಿದಂತೆ ನನ್ನ ವಯಸ್ಸಿನ ಅದೆಷ್ಟೋ ಮಂದಿ ಸ್ವಾತಂತ್ರ್ಯ ಹೋರಾಟದ ಬಿಸಿಯನ್ನು ಅನುಭವಿಸಿದವರಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಗಟ್ಟಿಗುಂಡಿಗೆಯವರನ್ನು ನಾವು ಹತ್ತಿರದಿಂದ ಕಂಡವರೂ ಅಲ್ಲ. ಗಾಂಧಿಯವರ ಭಾಷಣವನ್ನು ರೇಡಿಯೋದಲ್ಲಿ ಕೇಳಿ ತಮ್ಮ ಜೀವದ ಹಂಗನ್ನು ತೊರೆದು, ಸರ್ವಸ್ವವನ್ನೂ ಒತ್ತೆಯಿಟ್ಟು ಸ್ವಾತಂತ್ರ್ಯ ಸಂಗ್ರಾಮಕ್ಕಿಳಿದವರ ಕಥೆಗಳು ನಮಗಿಂದು ವಿಚಿತ್ರವಾಗಿ ಕಾಣುತ್ತವೆ. ನಮಗೆ ತಿಳಿದಿರುವ ಸ್ವಾತಂತ್ರ್ಯ ಹೋರಾಟದ ಚಳುವಳಿ, ತ್ಯಾಗ, ಅರ್ಪಣೆ, ದೇಶಪ್ರೇಮದ ಕಥೆಗಳು ಸಮಾಜ ವಿಜ್ಞಾನ ಪಠ್ಯಪುಸ್ತಕದ ಪುಟಗಳಿಗೇ ಸೀಮಿತವಾಗಿರುವಂಥವುಗಳು ಎಂಬಂತಾಗಿದೆ. ಸ್ವಾತಂತ್ರ್ಯವೆಂಬುದು ಈಗಿನವರಿಗೆ ಇಷ್ಟು ಅಗ್ಗವಾಗಲು ಇವುಗಳೇ ಕಾರಣವಾಗಿರಬಹುದೇ? ಮಹಾತ್ಮಾ ಗಾಂಧಿಯವರ ಅಹಿಂಸಾತ್ಮಕ ಮಾರ್ಗದ ಹೊರತಾಗಿಯೂ ಭಾರತದ ಸುದೀರ್ಘ ಸ್ವಾತಂತ್ರ್ಯ ಹೋರಾಟದ ರಕ್ತಸಿಕ್ತ ಪುಟಗಳನ್ನು ನಾವು ಮರೆತುಬಿಟ್ಟೆವೇ? ಸ್ವಾತಂತ್ರ್ಯೋತ್ಸವವೆಂದರೆ ಕೇವಲ ಒಂದು ಸರಕಾರಿ ರಜೆಯಷ್ಟೇ? ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ, ಈ ಹೋರಾಟದಲ್ಲಿ ತಮ್ಮವರನ್ನು ಕಳೆದುಕೊಂಡಿದ್ದ ವೃದ್ಧರ್ಯಾರಾದರೂ ಇಂಥವುಗಳನ್ನೆಲ್ಲಾ ನೋಡಿದರೆ ಅವರಿಗೆ ಹೇಗನ್ನಿಸಬಹುದು?

“ನಿಮ್ಮ ಹಳ್ಳಿಯಲ್ಲಿ ಏನೂ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಅನ್ನುತ್ತಿದ್ದೀರಲ್ಲಾ? ನಿಮ್ಮ ಸರಕಾರದ ಮೇಲೆ ಒತ್ತಡ ಹಾಕಿ. ನಿಮ್ಮ ರಾಜಕೀಯ ನಾಯಕರನ್ನು ಭೇಟಿಯಾಗಿ, ಪತ್ರಗಳನ್ನು ಬರೆಯಿರಿ, ಬೇಕಿದ್ದರೆ ಸರ್ಕಾರಿ ಕಚೇರಿಗಳ ಮುಂದೆ ಧರಣಿ ಕುಳಿತುಕೊಳ್ಳಿ” ಎಂದೆಲ್ಲಾ ನಾನು ಅಂಗೋಲಾದಲ್ಲಿದ್ದಾಗ ಅಲ್ಲಿಯ ಕೆಲ ಮಿತ್ರರಿಗೆ ಹೇಳುತ್ತಿದ್ದೆ. ಅಂಗೋಲಾದಲ್ಲಿ ಹೊಸಬನಾಗಿದ್ದ ನನ್ನ ಈ ಮಾತುಗಳನ್ನು ಕೇಳಿ ಅಲ್ಲಿಯವರು ನಾನೊಬ್ಬ ಬೆಪ್ಪನೆಂಬಂತೆ ತಲೆಯಾಡಿಸುತ್ತಿದ್ದರು. ಅಂಗೋಲಾದಲ್ಲಿ ಮುಷ್ಕರ ಹೂಡುವುದು, ಧರಣಿ ಕೂರುವುದೆಲ್ಲಾ ಅಸಾಧ್ಯವೆಂಬುದನ್ನು ತಿಳಿದುಕೊಳ್ಳಲು ನನಗೆ ಸಾಕಷ್ಟು ಸಮಯವೇ ಹಿಡಿಯಿತು. ಜಗತ್ತಿನ ಕಣ್ಣಿಗೆ ಪ್ರಜಾಪ್ರಭುತ್ವವೇ ಕಾಣುತ್ತಿದ್ದರೂ ಅಂಗೋಲಾದ ನೆಲದಲ್ಲಿ ಒಳಗೊಳಗೇ ಉಸಿರಾಡುತ್ತಿದ್ದಿದ್ದು ಸರ್ವಾಧಿಕಾರಿ ಆಡಳಿತ. ಪ್ರಜಾಪ್ರಭುತ್ವವೆಂಬ ಬೂದಿಯೊಳಗೆ ಅಡಗಿರುವ ಕೆಂಡವದು. “ಇಲ್ಲಿಯ ಸೈನಿಕರು ಹಿಂದೆಮುಂದೆ ನೋಡದೆ ಕ್ಷಣಮಾತ್ರದಲ್ಲೇ ತಮ್ಮ ರೈಫಲ್ಲುಗಳಿಂದ ನಮ್ಮನ್ನು ಗುಂಡಿಕ್ಕಿ ಕೊಲ್ಲಬಲ್ಲರು” ಎಂದು ಆತ ನನಗೆ ಉತ್ತರಿಸುತ್ತಿದ್ದ. ನಮ್ಮ ಹಕ್ಕುಗಳನ್ನು ನಮಗೆ ಕೊಡಿ ಎಂದು ಕೇಳಲೂ ಅಧಿಕಾರವಿಲ್ಲದಂತಹ ಪರಿಸ್ಥಿತಿ. ಹೀಗೆ ನಾನು ಮುಷ್ಕರ, ಧರಣಿ, ಚಳುವಳಿಯ ಮಾತುಗಳನ್ನಾಡುತ್ತಿದ್ದರೆ ಅಂದು ಆತನ ಕಣ್ಣುಗಳಲ್ಲಿದ್ದಿದ್ದು ಮೃತ್ಯುಭಯ.

“ನಮ್ಮಲ್ಲಿರುವುದು ಬೆರಳೆಣಿಕೆಯ ಸುದ್ದಿವಾಹಿನಿಗಳು. ಎಲ್ಲವೂ ರಾಷ್ಟ್ರಾಧ್ಯಕ್ಷರ ಕುಟುಂಬದ ಹಿಡಿತದಲ್ಲಿರುವ ಮಾಧ್ಯಮಸಂಸ್ಥೆಗಳು ಬೇರೆ. ಈ ವಾಹಿನಿಗಳು ಸರಕಾರದ ವಕ್ತಾರಿಕೆ ಮಾಡುತ್ತಿವೆಯಷ್ಟೇ ಹೊರತು ಇನ್ನೇನೂ ಅಲ್ಲ” ಎಂದು ಮತ್ತೊಬ್ಬ ಹೇಳುತ್ತಿದ್ದ. ಅದು ನಿಜವೂ ಆಗಿತ್ತು. ಎರಡು ದಶಕಗಳಿಗೂ ಹೆಚ್ಚು ಕಾಲ ನಡೆದ ಯುದ್ಧದಲ್ಲಿ ಅಂಗೋಲಾ ಛಿದ್ರವಾಗಿದ್ದೇನೋ ಹೌದು. ಆದರೆ ಈ ಯುದ್ಧದ ಎರಡು ಜಟ್ಟಿಗಳಾದ ಎಮ್.ಪಿ.ಎಲ್.ಎ ಮತ್ತು ಉನಿಟಾ ಪಕ್ಷಗಳು ವರ್ಷಾನುಗಟ್ಟಲೆ ಕಿತ್ತಾಡಿ ಸುಸ್ತಾಗಿದ್ದವು. ಇನ್ನು ಅಂಗೋಲನ್ ಜನತೆಯಂತೂ ಮುಗಿಯುವ ಸುಳಿವೇ ಕಾಣದಿದ್ದ ಯುದ್ಧವನ್ನು ನೋಡುತ್ತಾ ಕಂಗಾಲಾಗಿದ್ದಲ್ಲದೆ ಯುದ್ಧವು ಇಂದಲ್ಲಾ ನಾಳೆ ಮುಗಿಯಲಿದೆ ಎಂಬ ಭರವಸೆಯನ್ನೇ ಅಕ್ಷರಶಃ ಕಳೆದುಕೊಂಡವರಾಗಿದ್ದರು.

ಸಂದರ್ಭಗಳು ಹೀಗಿದ್ದಾಗ ಅಂಗೋಲಾದ ರಾಜಧಾನಿಯಾಗಿದ್ದ ಲುವಾಂಡಾದ ಮೇಲೆ ತನ್ನ ಹಿಡಿತವನ್ನು ಸಾಧಿಸಿಕೊಂಡ ಎಮ್.ಪಿ.ಎಲ್.ಎ ಪಕ್ಷವು ಕ್ರಮೇಣ ಉನಿಟಾ ಪಕ್ಷವನ್ನು ಬಗ್ಗುಬಡಿಯುವುದರಲ್ಲಿ ಯಶಸ್ವಿಯಾಯಿತು. ತೈಲೋದ್ಯಮ, ವಜ್ರ, ಟೆಲಿಕಾಂ, ಮಾಧ್ಯಮದಂತಹ ಕ್ಷೇತ್ರಗಳು ಸರಕಾರದ ಅಥವಾ ರಾಷ್ಟ್ರಾಧ್ಯಕ್ಷರ ಕುಟುಂಬದ ಸಂಪೂರ್ಣ ಹಿಡಿತಕ್ಕೊಳಪಟ್ಟವು. ಅಧಿಕಾರಕ್ಕೆ ಬಂದು ಹಂತಹಂತವಾಗಿ ಎಲ್ಲವನ್ನೂ ಕಬಳಿಸಿಬಿಟ್ಟ ಎಮ್.ಪಿ.ಎಲ್.ಎ ಉನೀಟಾ ಪಕ್ಷವನ್ನು ಯಾವ ರೀತಿ ಹೊಸಕಿಹಾಕಿತೆಂದರೆ ವಿರೋಧಪಕ್ಷವೆಂಬುದು ಒಂದು ರೀತಿಯಲ್ಲಿ ಶಾಶ್ವತವಾಗಿ ಅಂಗೋಲಾದಲ್ಲಿ ನಾಶವಾಯಿತು. ಇಂದು ಅಂಗೋಲಾದಲ್ಲಿರುವ ವಿರೋಧ ಪಕ್ಷಗಳು ಹೆಸರಿಗಷ್ಟೇ ಇರುವ ರಾಜಕೀಯ ಪಕ್ಷಗಳು. ಕಳೆದ ವರ್ಷವಷ್ಟೇ ಅಂಗೋಲಾದಲ್ಲಿ ರಾಷ್ಟ್ರಾಧ್ಯಕ್ಷರ ಹುದ್ದೆಗೆ ನಡೆದ ಚುನಾವಣೆಯಲ್ಲೂ ಚುನಾವಣೆಯು ಏಕಪಕ್ಷೀಯವಾಗಿದ್ದಿದ್ದು ಯಾರ ಕಣ್ಣಿಗಾದರೂ ಸುಲಭವಾಗಿ ರಾಚುವಂತಿತ್ತು. ಯಾವ ರೀತಿಯಲ್ಲೂ ಚುನಾವಣೆಯ ಕಾವಾಗಲೀ, ಪ್ರಚಾರದ ಅಬ್ಬರವಾಗಲೀ ಇರದಿದ್ದ ನೀರಸ ಚುನಾವಣೆಯದು. ಗೆಲುವು ಯಾರದ್ದೆಂದು ಮೊದಲೇ ಅಲ್ಲಿ ಎಲ್ಲರಿಗೂ ತಿಳಿದಿದ್ದಿದ್ದು ಸ್ಪಷ್ಟ. ಆದರೆ ತೋರಿಕೆಗೆಂಬಂತೆ ಚುನಾವಣೆಯನ್ನು ನಡೆಸಿ ಆಡಳಿತ ಪಕ್ಷವು ಕೈತೊಳೆದುಕೊಂಡಿತು. ಅಂತೂ ಅಜಮಾಸು ಮೂವತ್ತಾರು ವರ್ಷಗಳ ನಂತರ ಅಂಗೋಲಾದ ರಾಷ್ಟ್ರಾಧ್ಯಕ್ಷರು ತಮ್ಮ ಹುದ್ದೆಯಿಂದ ಕೆಳಗಿಳಿದು ತಮ್ಮದೇ ಪಕ್ಷದ ಹೊಸ ನಾಯಕನೊಬ್ಬನಿಗೆ ಸಿಂಹಾಸನವನ್ನು ಬಿಟ್ಟುಕೊಟ್ಟರು. ಅಷ್ಟರಮಟ್ಟಿಗೆ ಅಂಗೋಲಾದಲ್ಲಿ ಚುನಾವಣೆಯೆಂಬ ಪ್ರಹಸನವೊಂದು ಸಾಂಗವಾಗಿ ನೆರವೇರಿತು.

ಅಂಗೋಲಾದ ಜನತೆಗೆ ನಮಗಿದ್ದಷ್ಟು ಸ್ವಾತಂತ್ರ್ಯವಿದ್ದರೆ? ಎಂದು ನಾನಿಲ್ಲಿ ಸುಮ್ಮನೆ ಕುಳಿತು ಆಗಾಗ ಯೋಚಿಸುತ್ತೇನೆ. ಅಂಗೋಲನ್ನರಿಗೆ ನಿಜಕ್ಕೂ ಸ್ವಾತಂತ್ರ್ಯವಿದ್ದರೆ ಆಡಳಿತದ ಚುಕ್ಕಾಣಿಯನ್ನು ಹಿಡಿದಿರುವ ಶಕ್ತಿಗಳು ತಮ್ಮ ಮನಬಂದಂತೆ ದೇಶವನ್ನು ಹಿಸುಕುತ್ತಿದ್ದಾಗ ಏನನ್ನಾದರೂ ಮಾಡಬಹುದಿತ್ತು. ಒಂದಲ್ಲಾ ಒಂದು ಮಾರ್ಗವನ್ನು ಬಳಸಿಕೊಂಡು ಚೇಗೆವಾರನಂತೆ ಎದೆಎದೆಯಲ್ಲೂ ಕಿಚ್ಚನ್ನೆಬ್ಬಿಸಬಹುದಿತ್ತು. ಸಂಘಟಿತರಾಗಿಯೋ, ಮಾಧ್ಯಮಗಳ ಸಹಾಯವನ್ನೋ ಪಡೆದು ಈ ಶಕ್ತಿಗಳ ವಿರುದ್ಧ ದನಿಯೆತ್ತಬಹುದಿತ್ತು. ‘ಸ್ವತಂತ್ರ ಗಣರಾಜ್ಯ’ ಎಂದೆಲ್ಲಾ ಹೇಳಿಕೊಂಡು ಹೀಗೆಲ್ಲಾ ಮಾಡುತ್ತಿದ್ದೀರಲ್ಲಾ ಎಂದು ಧೈರ್ಯವಾಗಿ ಕೇಳಿ ಇಂಥವರ ಕಾಲಕೆಳಗಿನ ನೆಲವನ್ನು ಅಲುಗಾಡಿಸಬಹುದಿತ್ತು.

ಆದರೆ ಅಂಥದ್ದೇನೂ ಆಗಲಿಲ್ಲ. ದೊಡ್ಡ ಮಟ್ಟಿನಲ್ಲಿ ಒಂದು ಕ್ರಾಂತಿಯಾಗದ ಹೊರತು ಅಂಗೋಲಾದಲ್ಲಿ ಇಂಥಾ ಬದಲಾವಣೆಗಳನ್ನು ನಿರೀಕ್ಷಿಸುವುದೂ ಕೂಡ ಹಾಸ್ಯಾಸ್ಪದ. ನಾಗರಿಕರ ಹಕ್ಕುಗಳನ್ನು ಕಸಿದುಕೊಂಡ, ದೂರದೃಷ್ಟಿಯಿಲ್ಲದ, ಕಡುಭ್ರಷ್ಟ ಸರ್ವಾಧಿಕಾರಿಗಳು ಆಫ್ರಿಕನ್ ದೇಶಗಳಲ್ಲಿ ಮಾಡಿರುವ ಅವಾಂತರಗಳು ಕಲ್ಪನೆಗೂ ಮೀರಿದಂಥವುಗಳು. ತಮ್ಮ ಖಾಸಗಿ ಅರಮನೆಗಳಲ್ಲಿ ಚಿನ್ನದ ಶೌಚಾಲಯಗಳನ್ನಿರಿಸಿಕೊಂಡ, ಏದುಸಿರು ಬಂದರೂ ಚಿಕಿತ್ಸೆಗಾಗಿ ಪಾಶ್ಚಾತ್ಯ ರಾಷ್ಟ್ರಗಳಿಗೆ ಓಡುವ, ಕುಬೇರನೂ ನಾಚುವಷ್ಟು ಐಷಾರಾಮಿ ಜೀವನಶೈಲಿಯನ್ನು ಸವಿದ ಮತ್ತು ಸವಿಯುತ್ತಿರುವ ಸರ್ವಾಧಿಕಾರಿಗಳು ನಡೆಸುತ್ತಿರುವ ದೇಶಗಳ ದುಸ್ಥಿತಿಗಳು ನಮ್ಮ ಮುಂದಿವೆ. ಇಲ್ಲಿ ನಾವು ನಮ್ಮ ಬೆಚ್ಚಗಿನ ಗೂಡಿನಲ್ಲಿ ಹಾಯಾಗಿರುವಾಗಲೇ ಇನ್ನೆಲ್ಲೋ ಅರಾಜಕತೆ ಹೆಡೆಯೆತ್ತುತ್ತಿದೆ, ಕ್ರಾಂತಿಯ ಗಾಳಿ ಮೆಲ್ಲನೆ ಬೀಸುತ್ತಿದೆ, ತಮಗೆ ಮುಂದೇನು ಕಾದಿದೆಯೋ ಎಂಬ ಭಯದಲ್ಲಿ, ಕರಾಳ ಅನಿಶ್ಚಿತತೆಯಲ್ಲಿ ಹಲವು ಜನಸಮೂಹಗಳು ದಿನತಳ್ಳುತ್ತಿವೆ.

ಪ್ರಜಾಪ್ರಭುತ್ವ ವ್ಯವಸ್ಥೆಯು ಈ ಜಗತ್ತಿನ ಪರಿಪೂರ್ಣ ಆಡಳಿತ ವ್ಯವಸ್ಥೆಯಾಗಿಲ್ಲದಿರಬಹುದು. ಆದರೆ ಇದಕ್ಕಿಂತ ವಾಸಿಯೆನ್ನಬಹುದಾದ ಆಯ್ಕೆಗಳು ಸದ್ಯಕ್ಕಂತೂ ನಮ್ಮ ಮುಂದಿಲ್ಲ. ಸ್ವಾತಂತ್ರ್ಯದ ಮೌಲ್ಯವೇನೆಂಬುದನ್ನು ತಿಳಿಯಲು ಜೈಲುಗಳಲ್ಲಿ ಕೊಳೆಯುತ್ತಿರುವ ಕೈದಿಯನ್ನು ಕೇಳಬೇಕು, ಪರದೇಸಿಗಳಂತೆ ನಿರಾಶ್ರಿತರ ಶಿಬಿರಗಳಲ್ಲಿ ಒದ್ದಾಡುತ್ತಿರುವವರನ್ನು ಕೇಳಬೇಕು, ತಮ್ಮದೇ ನೆಲದಲ್ಲಿ ದಿಕ್ಕಿಲ್ಲದಂತೆ ಭಯದ ನೆರಳಲ್ಲಿ ಬದುಕುತ್ತಿರುವ ನಾಗರಿಕರನ್ನು ಕೇಳಬೇಕು. ಪ್ರಜಾಪ್ರಭುತ್ವವು ನಮ್ಮೆಲ್ಲರಿಗೆ ನಮ್ಮ ಹಕ್ಕುಗಳಿಗಾಗಿ ದನಿಯೆತ್ತುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯಗಳಂತಹ ಹಲವು ಹಕ್ಕುಗಳನ್ನು ನಮಗೆ ದಯಪಾಲಿಸಿದೆ. ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.

ಅದೇನೇ ಆಗಲಿ. ಸ್ವಾತಂತ್ರ್ಯ ಮಾತ್ರ ಅಗ್ಗವಾಗದಿರಲಿ!

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರು. ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 2 weeks ago No comment

  ಕವಿಸಾಲು | ಇಂಡೋನೇಶಿಯಾ

      ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ಜಲ, ಉಸಿರ ಗಾಳಿ ಹುಚ್ಚೆದ್ದು ಕುಣಿದು ಅಪ್ಪಳಿಸಿದ ಆಘಾತಕ್ಕೆ ಕಂಗೆಟ್ಟು ತತ್ತರಿಸಿವೆ ಪ್ರಾಣಿ, ಮನುಜ ಕುಲ ಮಾಡು ಹಾರಿ, ಕಂಬಗಳು ಕುಸಿದು ನೆಲಕಚ್ಚಿವೆ ಮಾನವನ ಬೀಡು ಕತ್ತರಿಸಿ ...

 • 2 weeks ago No comment

  ಕವಿಸಾಲು | ತಡವಿಲ್ಲದಿರಲಿ ಇನ್ನು…

      ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ತಡೆಯ ದಾಟಿ ತಲುಪಬೇಕಿದೆಯಷ್ಟೆ ಬಯಕೆ ಗುರಿಯನ್ನು ದಟ್ಟ ಹಸಿರಿನ ಕಾಡು, ಆಗಸದ ನೀಲಿ ಬಿಳಿಯ ಮೋಡಗಳ, ಬಿಸಿಲ ಬೆಳಕಿನ ನಡುವೆ ಬಯಲ ಸ್ವೇಚ್ಛೆಯ, ತಿಳಿಗಾಳಿ ತವಕದಲಿ ಬಂಧನಗಳ ...

 • 4 weeks ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 month ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 month ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...


Editor's Wall

 • 31 August 2018
  2 months ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  2 months ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  2 months ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  2 months ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  2 months ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...