Share

ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

 

 

 

 

 

 

 

 

 

 

ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.

 

ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ಕೇಂದ್ರವೊಂದರಲ್ಲಿನ ಎದೆ ನಡುಗಿಸುವಂಥ ಹೆಣ್ಣುಮಕ್ಕಳ ಮೇಲಿನ ಕ್ರೂರ ಅತ್ಯಾಚಾರ ಪ್ರಕರಣ ಮನಸ್ಸಿಂದ ಮಾಸುವ ಮೊದಲೇ ಉತ್ತರ ಪ್ರದೇಶದ ದೇವರಿಯಾ ಎಂಬಲ್ಲಿ, ಒಂದು ವರ್ಷದ ಕೆಳಗೆ ಮಾನ್ಯತೆ ರದ್ದುಪಡಿಸಲಾದ ‘ಮಾ ವಿಂಧ್ಯಾವಾಸಿನಿ ಮಹಿಳಾ ಪ್ರಶಿಕ್ಷಣ ಏವಂ ಸಮಾಜಸೇವಾ ಸಂಸ್ಥಾನ್’ ಎಂಬ, ಹೆಸರು ಕೇಳಿದರೆ ಭಯಭಕ್ತಿಯುಕ್ಕಿ ಉದ್ದಂಡ ನಮಸ್ಕಾರ ಹೊಡೆಯಬೇಕೆನಿಸುವಂಥ ಘನವಾದ ಹೆಸರಿಟ್ಟುಕೊಂಡ ಸಂಸ್ಥೆಯೊಂದರಲ್ಲಿಯೂ ಹೆಣ್ಣುಮಕ್ಕಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದ್ದ ಸಂಗತಿ ಬಯಲಾಗಿ ದೇಶದ ಪ್ರಜ್ಞಾವಂತರನ್ನು ನಡುಗಿಸಿಟ್ಟಿತು. ಎಂಟು ಹತ್ತು ವಯಸ್ಸಿನ ಹಸುಳೆಯರು ಹೀಗೆ ಘೋರ ದೌರ್ಜನ್ಯಕ್ಕೆ ನಿತ್ಯ ತುತ್ತಾಗುತ್ತಿದ್ದ ಭೀಬತ್ಸ್ಯಕರ ಸುದ್ದಿಯನ್ನು ಓದುತ್ತಿದ್ದರೆ ಮನಸ್ಸು ಕನಲಿ ಖತಿಗೊಳ್ಳುತ್ತಿತ್ತು, ಏನೂ ಮಾಡಲಾಗದ ಹತಾಶೆಯಿಂದ ಹಳಹಳಿಸುತ್ತಿತ್ತು.

ಅನಾಥಾಲಯ, ಪುನರ್ವಸತಿ ಕೇಂದ್ರಗಳಲ್ಲಿರುವ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯಗಳನ್ನು ಎಸಗುತ್ತಾ ಹಸುಳೆಗಳ ಬದುಕನ್ನು ಹರಿ ಹರಿದು ತಿಂದು ಮುಗಿಸುತ್ತಿರುವ ಕ್ರೌರ್ಯದ ಕಥೆಗಳು ಈ ದೇಶಕ್ಕೆ ಹೊಸದೇನೂ ಅಲ್ಲ. ಹೆಣ್ಣು ಹುಟ್ಟಿತೆಂದರೆ ಅದು ಭೋಗದ ವಸ್ತುವೆಂದೇ ಭಾವಿಸುವ, ಎಲ್ಲ ಸರಿಯಿದ್ದಲ್ಲೂ ಕಾಯುವ ಕಣ್ಣಿಂದ ಚೂರು ಮರೆಯಾದರೂ ಅವಳು ಸುರಕ್ಷಿತವಲ್ಲ ಎನ್ನುವಂಥ ಪರಿಸರದಲ್ಲಿ ಹೆಣ್ಣು ಶಿಶುವೊಂದು ಅನಾಥವೆಂದರೆ, ಅದೊಂದು ಬೇಲಿಯಿಲ್ಲದ ಹೊಲವೆಂದರೆ ಮುಗಿದೇಹೋಯಿತು ಕಥೆ.

ಪೋಷಕರನ್ನು ಕಳೆದುಕೊಂಡ ಮಕ್ಕಳು, ಅನಾಥ ಶಿಶುಗಳು, ಲೈಂಗಿಕ ದೌರ್ಜನ್ಯಗಳಿಗೆ ತುತ್ತಾಗಿ ರಕ್ಷಿಸಲ್ಪಟ್ಟಂತಹ ಮಕ್ಕಳು, ಅಪರಾಧಿಗಳಾಗಿ ಜೈಲುಪಾಲಾದವರ ಮಕ್ಕಳು, ಕಡು ಬಡತನದ ಕಾರಣದಿಂದ ಸಾಕಲಾಗದ, ಮನೆಕೆಲಸಗಳಿಗೆ ನಿಯುಕ್ತರಾಗಿ ಅಲ್ಲಿಂದ ರಕ್ಷಣೆ ಪಡೆದ ಮಕ್ಕಳೆಲ್ಲ ಇಂಥ ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುತ್ತಾರೆ. ಅಂಥ ಎಷ್ಟು ಪುನರ್ವಸತಿ ಕೇಂದ್ರಗಳಲ್ಲಿ ಇಂಥ ಹೇಯ ಕೃತ್ಯ ನಡೆಯುತ್ತಿದೆಯೋ ದೇವರೇ ಬಲ್ಲ. ಹೀಗೆ ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.

ಕೆಲ ವರ್ಷಗಳ ಕೆಳಗೆ ನಾವಿದ್ದ ಆ ಊರಿನಲ್ಲಿ ಒಂದು ದಿನ ಆಸ್ಪತ್ರೆಯ ಹಿಂಭಾಗದಲ್ಲಿ ಒಂದು ಆಗಷ್ಟೇ ಹುಟ್ಟಿದ ಹೆಣ್ಣುಶಿಶು ಸಿಕ್ಕಿದೆಯೆಂಬ ಗುಲ್ಲು ಹರಡಿ ಕುತೂಹಲದಿಂದ ಜನ ತಂಡ ತಂಡವಾಗಿ ಆಸ್ಪತ್ರೆಗೆ ನುಗ್ಗತೊಡಗಿದ್ದರು. ಆದರೆ ಅದು ಆಸ್ಪತ್ರೆಯಲ್ಲಿ ಹುಟ್ಟಿದ ಶಿಶುವಾಗಿರದೆ ಯಾರೋ ಆಸ್ಪತ್ರೆಯ ಹಿಂಬದಿಯಲ್ಲಿ ತಂದಿಟ್ಟು ಹೋದದ್ದಾಗಿತ್ತು.

ಮುದ್ದಾದ ಹೆಣ್ಣುಮಗುವಿಗೆ ಪೋಲೀಸರ ವಿನಂತಿಯ ಮೇರೆಗೆ ಅದೇ ಆಸ್ಪತ್ರೆಯಲ್ಲಿದ್ದ ಬಾಣಂತಿಯೊಬ್ಬರು ಎದೆಹಾಲುಣಿಸತೊಡಗಿದರು. ಮಗುವನ್ನು ಆಸ್ಪತ್ರೆಯ ಹಿಂಭಾಗದ ಕಸದ ರಾಶಿಯಲ್ಲಿ ಇಟ್ಟು ಹೋದದ್ದನ್ನು ಯಾರೆಂದರೆ ಯಾರೂ ನೋಡಿರಲಿಲ್ಲವಾದ್ದರಿಂದ ಮಗುವನ್ನು ಮುಂದೇನು ಮಾಡುವುದೆಂದು ಊರಿಡೀ ತಲೆಬಿಸಿಮಾಡಿಕೊಂಡಿತ್ತು.

ಅಷ್ಟರಲ್ಲಿ ಕೆಲವರು ಒಬ್ಬರಿಗಿಂತ ಒಬ್ಬರು ಮುಂದಾಗಿ ಆ ಮಗುವನ್ನು ಸಾಕಲು ಕೊಡಬೇಕೆಂದು ವೈದ್ಯರಲ್ಲೂ ಪೋಲೀಸರಲ್ಲೂ ಮನವಿ ಮಾಡತೊಡಗಿದ್ದರು. ಒಂದೆಡೆ ಈ ಮಗುವನ್ನು ಮಕ್ಕಳೇ ಇಲ್ಲದ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ದಂಪತಿಗಳಿಗೆ ಕೊಡುವ ಮಾತುಗಳು ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಮಗುವಿನ ಹೆತ್ತವರಿಗಾಗಿ ಹುಡುಕಾಟ ನಡೆಸುತ್ತಿರುವ ಎಳೆಗಳನ್ನಾದರಿಸಿದ ಹಸಿಬಿಸಿ ಊಹಾಪೋಹಗಳು ಹರಿದಾಡುತ್ತಿದ್ದವು. ದಿನಗಳೂ ಒಂದೊಂದಾಗಿ ಸರಿಯುತ್ತಿದ್ದವು. ಆಸ್ಪತ್ರೆಯಲ್ಲಿ ಮಗುವಿಗಾಗಿ ಎದೆಹಾಲುಣಿಸುತ್ತಿದ್ದ ಬಾಣಂತಿ ಡಿಸ್ಚಾರ್ಜ್ ಮಾಡಿಸಿಕೊಂಡು ತನ್ನ ಮಗುವಿನೊಡನೆ ಮನೆಗೆ ಹೋಗುವ ಬದಲು ಸಿಕ್ಕ ಆ ಮಗುವಿಗಾಗಿ ಆಸ್ಪತ್ರೆಯಲ್ಲೇ ಉಳಿದು ಊರಿನ ಪ್ರಶಂಸೆಗೆ ಪಾತ್ರಳಾಗಿದ್ದಳು. ಪ್ರತಿಯೊಬ್ಬರೂ ಆಕೆಯ ಗುಣಗಾನ ಮಾಡುವವರೇ.

ಮಗುವಿಗಾಗಿ ಅರ್ಜಿ ಹಾಕಿದ್ದವರು ನಾಮುಂದು ತಾಮುಂದು ಎಂಬಂತೆ ಪ್ರತಿದಿನ ಆಸ್ಪತ್ರೆಗೆ ಎಡತಾಕುತ್ತ ಮಗುವಿಗಾಗಿ ಕೇಳುತ್ತಿದ್ದರೆ, ಪೋಲೀಸರು ಮಗುವನ್ನು ಸಾಕಲು ಯಾವುದಾದರೊಂದು ಮಕ್ಕಳಿಲ್ಲದ ದಂಪತಿಗೆ ಕೊಡೋಣವಂತೆ ಸ್ವಲ್ಪ ಕಾಯಿರಿ ಎನ್ನುತ್ತಿದ್ದರು. ಯಾರ ಬಾಯಲ್ಲಿ ಕೇಳಿದರೂ ಮಗುವಿನದೇ ಸುದ್ದಿ. ಆ ಮಗುವಿಗಾಗಿ ಏನಾದರೂ ಮಾಡಬೇಕೆಂಬ ತುಡಿತ. ಒಟ್ಟಿನಲ್ಲಿ ಊರಿನ ಪ್ರತಿಯೊಬ್ಬರೂ ತಮಗರಿವಿದ್ದೋ ಇಲ್ಲದೆಯೋ ಮಗುವೆಂಬ ಸಮೂಹ ಸನ್ನಿಯ ಸೆಳವಿನಲ್ಲಿ ಸಿಲುಕಿ ಅನಾಮತ್ತಾಗಿ ಹರಿದುಹೋಗುತ್ತಿದ್ದರು. ಅಲ್ಲಿಂದಲ್ಲಿಗೆ ಸುಮಾರು ಹದಿನೈದು ದಿನಗಳೇ ಕಳೆದುಹೋಗಿದ್ದವು.

ಈ ಮಗುವಿನ ಸುದ್ದಿ ಊರೆಲ್ಲ ಹಬ್ಬುತ್ತಿದ್ದಂತೆ ಒಬ್ಬ ಆಟೋ ಚಾಲಕನನ್ನು ಹುಡುಕಿಕೊಂಡು ಮುದುಕಿಯೊಬ್ಬಳ ಜೊತೆ ಬಂದಿದ್ದ ವ್ಯಕ್ತಿಯೊಬ್ಬ ಮುದುಕಿಯ ಸಹಾಯದಿಂದ ಆಟೋ ಚಾಲಕನ ಪತ್ತೆ ಮಾಡಿ ಆಟೋ ಸ್ಟ್ಯಾಂಡಿನಿಂದ ಕೊಂಚ ದೂರ ಕರೆದೊಯ್ದು ಒಂದಷ್ಟು ಹಣ ಕೈಯಲ್ಲಿ ತುರುಕಿ ಏನೋ ಗುಟ್ಟು ಮಾತಾಡಿದ್ದನ್ನು ಆಟೋಸ್ಟ್ಯಾಂಡಿನ ಇತರರು ಗಮನಿಸಿದ್ದರು. ಅದಕ್ಕೆ ಸರಿಯಾಗಿ ಆ ರಾತ್ರಿ ಕೈಗೆ ಸಿಕ್ಕ ಹಣದಲ್ಲಿ ಸ್ವಲ್ಪ ಜಾಸ್ತಿಯೇ ಕುಡಿದಿದ್ದ ಆಟೋ ಚಾಲಕ ಲೇಡಿ ಡಾಕ್ಟರ್, ಮುದುಕಿ, ಮಗು ಎಂದು ಏನೋ ಕಲಸು ಮಲಸಾಗಿ ನಾಲಿಗೆ ಹರಿಯಬಿಟ್ಟಿದ್ದ.

ಮಗುವಿನ ಪ್ರಕರಣದಲ್ಲಿ ಮೈಯೆಲ್ಲ ಕಣ್ಣು ಕಿವಿಯಾಗಿಸಿಕೊಂಡಿದ್ದ ಪೋಲೀಸರಿಗೆ ಈ ‘ಲೇಡಿ ಡಾಕ್ಟರ್’ ಎಂಬ ಪದ ಕೇಳಿದ್ದೇ ಒಂದೇ ಏಟಿಗೆ ಕಗ್ಗಂಟು ಜಾರುಗಂಟಾಗಿ ಸಡಿಲಗೊಂಡುಬಿಟ್ಟಿತು. ಸೇಬುಗಲ್ಲದ ಸುಂದರ ಮೈಕಟ್ಟಿನ ಕೃಷ್ಣಸುಂದರಿ ವೈದ್ಯೆಯದು ಸದಾ ಸುದ್ದಿಯಲ್ಲಿರುವ ಜಾತಕ. ಒಮ್ಮೆ ಊರಿನ ರೌಡಿಯೊಂದಿಗೆ ರಾತ್ರಿ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿ ಸುದ್ದಿಯಾದರೆ, ಇನ್ನೊಮ್ಮೆ ಮತ್ತೊಬ್ಬ ವೈದ್ಯನೊಂದಿಗೆ ಹೇಗೆ ಹೇಗೋ ಕಾಣಿಸಿಕೊಂಡು ಸುದ್ದಿಯಾಗುತ್ತಿದ್ದಳು. ಒಮ್ಮೆ ರೋಗಿಯ ಕೆನ್ನೆಗೆ ಬಾರಿಸಿ ಸದ್ದು ಮಾಡಿದರೆ, ಮತ್ತೊಮ್ಮೆ ಆಸ್ಪತ್ರೆಯಲ್ಲೇ ಖುಲ್ಲಂ ಖುಲ್ಲ ಯಾರನ್ನೋ ತಬ್ಬಿ ಕೂತು ಸದ್ದುಮಾಡುತ್ತಿದ್ದಾಕೆ. ಹಣ ಕೊಟ್ಟರೆ ಗರ್ಭಪಾತದಿಂದ ಹಿಡಿದು ನಿವೃತ್ತವಾಗುವ ಮೊದಲೇ ಗಂಡಂದಿರನ್ನು ಕೊಂದು ಅನುಕಂಪದ ಆಧಾರದಲ್ಲಿ ಅವನ ನೌಕರಿ ಪಡೆಯ ಬಯಸುವ ಹೆಂಗಸರಿಗೆ ಸಹಜ ಸಾವೆಂಬ ಸರ್ಟಿಫಿಕೇಟು ಕೊಡುವವರೆಗಿನ ಎಲ್ಲ ನೀಚ ಕೆಲಸಗಳಿಗೂ ಜನ ಅವಳದೇ ಮೊರೆಹೋಗುತ್ತಾರೆಂದು ಆ ಊರಿನ ಜನ ಗುಟ್ಟಾಗಿಯೇನೂ ಮಾತಾಡಿಕೊಳ್ಳುತ್ತಿರಲಿಲ್ಲ.

ಇಂಥಲ್ಲಿ ಈ ಕಸದತೊಟ್ಟಿಯಲ್ಲಿ ಸಿಕ್ಕ ಮಗುವಿನ ಹೊಕ್ಕುಳ ಬಳ್ಳಿ ಈ ಲೇಡಿ ಡಾಕ್ಟರಳೊಂದಿಗೆ ಹೆಸರಿಗೆ ಹೇಗೋ ಸುತ್ತಿಕೊಂಡಿತ್ತು. ಪೋಲೀಸರು ಆಟೋ ಚಾಲಕನನ್ನು ಎತ್ತಿಕೊಂಡು ಹೋಗಿ ವಿಚಾರಣೆ ನಡೆಸಿದಾಗ ಅವರಾರೆಂದು ತನಗೆ ಗೊತ್ತೇ ಇಲ್ಲವೆಂದೂ ಆದರೆ ಆ ಮುಂಜಾನೆ ಲೇಡಿ ಡಾಕ್ಟರಳ ಮನೆಯಿಂದ ಒಂದು ಮಗುವನ್ನೆತ್ತಿಕೊಂಡಿದ್ದ ಮುದುಕಿಯನ್ನು ಕರೆತಂದು ಆಸ್ಪತ್ರೆ ಬಾಗಿಲಲ್ಲಿ ಬಿಟ್ಟಿದ್ದು ನಿಜವೆಂದೂ ಅವನು ಒಪ್ಪಿಕೊಂಡಿದ್ದ. ಆಸ್ಪತ್ರೆಯಲ್ಲೇ ಹುಟ್ಟಿದ್ದ ಮಗುವನ್ನು ವೈದ್ಯೆಯ ಬಳಿ ತಪಾಸಣೆಗೆ ಕರೆದೊಯ್ದಿದ್ದಾಗಿ ಆ ಮುದುಕಿ ಹೇಳಿದ್ದನ್ನು ಅವನು ನಂಬಿ ಆ ಘಟನೆಯನ್ನು ಮರೆತೂಬಿಟ್ಟಿದ್ದನಂತೆ. ಯಾವಾಗ ಈ ಮುದುಕಿ ಒಬ್ಬ ಗಂಡಸಿನೊಂದಿಗೆ ತನ್ನನ್ನು ಹುಡುಕಿ ಬಂದು ಈ ಸಂಗತಿಯನ್ನು ಯಾರಲ್ಲೂ ಬಾಯಿಬಿಡಬಾರದೆಂದು ಹಣ ಕೊಟ್ಟರೋ ಆಗಲೇ ಅವನಿಗೆ ಆಸ್ಪತ್ರೆಯ ಹಿಂದಿನ ಕಸದ ರಾಶಿಯಲ್ಲಿ ಸಿಕ್ಕ ಮಗುವನ್ನು ವೈದ್ಯೆಯ ಮನೆಯಿಂದ ಕರೆತಂದವನು ತಾನೇ ಎಂದು ಗೊತ್ತಾಗಿ ಅಚ್ಚರಿಯಾಗಿತ್ತಂತೆ. ಆದರೆ ಆಕೆ ಯಾರು ಏನು ಕಥೆ ತನಗೆ ತಿಳಿದಿಲ್ಲ ಎಂದು ಆ ಆಟೋರಿಕ್ಷಾ ಚಾಲಕ ಹೇಳಿದ್ದ. ನರ್ಸುಗಳನ್ನು ವಿಚಾರಿಸಿದಾಗ ಈ ಮಗು ಆಸ್ಪತ್ರೆಯಲ್ಲಿ ಹುಟ್ಟಿದ್ದಲ್ಲವೆಂದು ಖಾತರಿಯಾಗಿ ಇದು ಲೇಡಿ ಡಾಕ್ಟರಳ ಮನೆಯಲ್ಲೇ ಹೆರಿಗೆಯಾದ ಕೂಸಿರಬಹುದೆಂದು ಪೋಲೀಸರು ಊಹಿಸಿದರು.

ಅವರ ಊಹೆಯಂತೆಯೇ ಮಗುವೇನೋ ಲೇಡಿ ಡಾಕ್ಟರಳ ಮನೆಯಲ್ಲಿಯೇ ಹುಟ್ಟಿತ್ತು. ಮಗುವನ್ನು ಎಲ್ಲಿಯಾದರೂ ಬಿಟ್ಟುಬರಲು ಆಟೋ ಹತ್ತಿದ ಮುದುಕಿ ‘ಆಸ್ಪತ್ರೆಯಲ್ಲಿ ಹೆರಿಗೆಯಾದ ಯಾವಳೋ ಮಗುವನ್ನು ಬಿಸಾಡಿ ಹೋಗಿದ್ದಾಳೆ’ ಎಂದು ಜನ ಭಾವಿಸಲಿ ಎಂದುಕೊಂಡು ಆಸ್ಪತ್ರೆಯ ಹಿಂಭಾಗದ ಕಸದ ರಾಶಿಯಲ್ಲಿ ಮಗುವನ್ನಿಟ್ಟು ಮಾಯವಾಗಿದ್ದಳು. ದುರದೃಷ್ಟವಶಾತ್ ಬುದ್ದಿಗೇಡಿ ಮುದುಕಿ ಇದೇ ವೈದ್ಯೆ ಇರುವ ಆಸ್ಪತ್ರೆಯ ಹಿಂಭಾಗದಲ್ಲೇ ಮಗುವನ್ನು ಬಿಸುಟಿ ಹೋಗಿ ವೈದ್ಯೆಯ ಕುತ್ತಿಗೆಗೆ ಕುತ್ತು ತಂದಿಟ್ಟಿದ್ದಳು. ಇದಿಷ್ಟು ಪೋಲೀಸರಿಗೆ ಗೊತ್ತಾಯಿತು. ಅಷ್ಟೇ!

ಹೀಗೆ ವಿಷಯ ಲೇಡಿ ಡಾಕ್ಟರಳಲ್ಲಿಗೆ ಬಂದು ತಲುಪಿದ್ದೇ ತಡ ಮಗುವನ್ನು ದತ್ತುಪಡೆಯಬಯಸುವ ದಂಪತಿಗಳ ಎದುರು ಪೋಲೀಸರ ವರಸೆ ಬದಲಾಗಿತ್ತು. ಹಾಗೆಲ್ಲ ಮಗುವನ್ನು ಅವರಿವರಿಗೆ ಕೊಡುವಂತಿಲ್ಲವೆಂದೂ ಸಂಬಂಧಪಟ್ಟ ಇಲಾಖೆಗೆ ಮಗುವನ್ನು ಒಪ್ಪಿಸಿದ ನಂತರದಲ್ಲಿ ಅಲ್ಲಿಗೇ ಬೇಕಿದ್ದರೆ ಅರ್ಜಿ ಸಲ್ಲಿಸಿ ಮಗುವನ್ನು ಪಡೆದುಕೊಳ್ಳಬೇಕೆಂದೂ ಕೂತುಬಿಟ್ಟರು.

ಇಷ್ಟೆಲ್ಲ ಜರುಗುತ್ತಿದ್ದರೂ ಆಸ್ಪತ್ರೆಯಲ್ಲೊಬ್ಬ ತಾಯಿ ತಾನು ಹೆತ್ತ ಕೂಸಿಗೂ ಈ ಸಿಕ್ಕ ಕೂಸಿಗೂ ಸರಿಸಮವಾಗಿ ಎದೆಹಾಲುಣಿಸುತ್ತ ಹಗಲು ರಾತ್ರಿ ನಿದ್ದೆಗೆಟ್ಟು ಆ ಮಗು ಅತ್ತರೆ ಅದನ್ನು ಬಾಚಿ ಎದೆಗಪ್ಪುತ್ತಾ ಈ ಮಗು ಅತ್ತರೆ ಇದನ್ನು ಮಡಿಲಲ್ಲಿ ಹುದುಗಿಸುತ್ತಾ ದಣಿಯುತ್ತಿದ್ದರೂ, ಮನೆಗೆ ಹೋಗುವ ಬಯಕೆಯಾದರೂ ತೋರಗೊಡದೆ, ದಿನೇ ದಿನೇ ಆ ಮಗು ಹಾಗೂ ಈ ತಾಯಿನಡುವೆಯೂ ಬಂಧವೊಂದು ಬೆಸೆದು ‘ಮಗುವನ್ನು ನನಗೇ ಕೊಟ್ಟುಬಿಡಿ ಸಾರ್ ಅವಳಿ ಜವಳಿಯ ಹಾಗೆ ಸಾಕ್ತೀನಿ’ ಎಂದು ದೈನೇಸಿಯಾಗಿ ಬೇಡತೊಡಗಿದ್ದಳು.

ಹೀಗೆ ಆಸ್ಪತ್ರೆಯ ಮಂಚದಲ್ಲಿ ಹಾಲುಣಿಸುತ್ತ ಕೂತ ಒಂದು ದಿನ ಮಗುವನ್ನು ಸಂಬಂಧಪಟ್ಟ ಇಲಾಖೆಯವರು ಕೊಂಡೊಯ್ಯುತ್ತಾರೆಂದು ಸುದ್ದಿ ಬಂತು. ಹಾಲುಣಿಸುವ ಮಹಿಳೆ ಕಣ್ಣೀರು ಹಾಕತೊಡಗಿದಳು. ಅಷ್ಟರಲ್ಲಿ ಒಬ್ಬ ಹುಡುಗಿ ಮತ್ತೊಬ್ಬ ಗಂಡಸಿನೊಂದಿಗೆ ಆ ಬಾಣಂತಿಯ ವಾರ್ಡಿಗೆ ನುಗ್ಗಿದಳು. ಆ ಮಗು ಅವರದು ಕೊಟ್ಟುಬಿಡಮ್ಮಾ ಎಂದರು ಹಿಂದೆಯೇ ಬಂದ ಪೋಲೀಸರು. ಹುಡುಗಿ ಅಷ್ಟು ದಿನವೂ ಆಸ್ಪತ್ರೆಯಲ್ಲೇ ಉಳಿದು ಹಾಲುಣಿಸಿ ಪೊರೆದ ತಾಯಿಗೆ ಒಂದು ಕಿರು ಕೃತಜ್ಞತೆಯನ್ನೂ ಹೇಳದೆ ಹಿಂದಿರುಗಿ ನೋಡದೇ ಮಗುವನ್ನು ಬಾಚಿಕೊಂಡು ಹೊರಟೇ ಹೋದಳು.

ಭಾವ ನಾದಿನಿಯಂತೆ, ಒಡಹುಟ್ಟಿದ ಅಕ್ಕನಿಗೇ ಮೋಸಮಾಡಿ ಕದ್ದು ಬಸುರಾಗಿದ್ದಂತೆ, ಪಕ್ಕದ ಊರಿನವರಂತೆ. ಸುದ್ದಿ ಊರೆಲ್ಲ ಗಬ್ಬೆದ್ದು ನಾರಿತೋ ಇಲ್ಲವೋ ಬಂದು ಮಗುವನ್ನು ಎತ್ತಿಕೊಂಡು ಹೋದರು. ಅದೂ ಎದೆಹಾಲು ಕಟ್ಟಿಕೊಂಡು ನೋವು ತಾಳದೆ ಮಗುವನ್ನು ಒಯ್ದಳಂತೆ. ಇಲ್ಲವಾದರೆ ಮಗು ಅನಾಥಾಶ್ರಮ ಸೇರಬೇಕಿತ್ತು. ಲೇಡಿ ಡಾಕ್ಟರಳ ಬುಡಕ್ಕೆ ಬಂದಿತ್ತಲ್ವಾ? ಇಲ್ಲವೆಂದಿದ್ರೆ ಹೆತ್ತವಳಿಗೆ ಈಗ ಮಗುವಿನ ನೆನಪಾಗಬೇಕಾ? ಎಂದೆಲ್ಲ ಒಂದಷ್ಟು ಕಾಲ ಜನ ಮಾತಾಡಿಕೊಂಡರು. ಇಷ್ಟಿಷ್ಟೇ ಅಂತರದಲ್ಲಿ ಅನಾಥಾಲಯದ ಪಾಲಾಗಲಿದ್ದ ಒಂದು ಹೆಣ್ಣು ಮಗು ಹಿಂದಿರುಗಿ ಹೆತ್ತವಳ ಮಡಿಲು ಸೇರುವುದರೊಂದಿಗೆ ಪ್ರಹಸನಕ್ಕೆ ತೆರೆಬಿದ್ದಿತ್ತು. ಮಗುವಿನ ಕಥೆ ಮುಂದೇನಾಯಿತೋ ಆ ದೇವರಿಗೇ ಗೊತ್ತು.

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ವಾಸ. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಪತ್ರಿಕೆಗಳು, ವೆಬ್ ಪೋರ್ಟಲ್ ಗಳಲ್ಲಿ ಬರಹಗಳು ಪ್ರಕಟವಾಗಿವೆ. ‘ಹಲಗೆ ಮತ್ತು ಮೆದುಬೆರಳು’ ಅವರ ಮೊದಲ ಕಾವ್ಯಸಂಕಲನ.

Share

Leave a comment

Your email address will not be published. Required fields are marked *

Recent Posts More

 • 2 days ago No comment

  ಈ ಸಂಜೆಯೊಳಗೆ

    ಕವಿಸಾಲು       ಈ ಸಂಜೆಯೊಳಗೆ ಗರಿಗೆದರುತ್ತವೆ ಮೌನದಲ್ಲೆ ಗರಬಡಿದ ಮಾತುಗಳು ಹೊಸ ಬಟ್ಟೆಯ ತೊಟ್ಟ ಮಗುವಂತೆ ಸಮುದ್ರದ ದಂಡೆಯಲಿ ದೂರ ಉಳಿದ ಭಾವಗಳು ಅಲೆಗಳಾಗಿ ಬಂದು ಪಾದಮುಟ್ಟಿ ತಮಾಷೆ ಮಾಡುತವೆ ಆಪ್ತ ಗೆಳೆಯನಂತೆ ಗೂಡಿಗೆ ಹೊರಟ ಹಕ್ಕಿಗಳು ತಿರುಗಿ ನೋಡಿವೆ ಬರುವಾಗ ಏನೋ ತಂದಿದ್ದು ಮರೆತು ಬಂದನೋ ಎಂಬಂತೆ ಅಪ್ಪನಿಲ್ಲದ ಮಕ್ಕಳು ಕೂಲಿಗೆ ಹೋದ ತಾಯಿಯ ದಾರಿಯ ಕಣ್ಣು ಮಿಟುಕಿಸದೇ ನೋಡುತಿವೆ ಅರ್ಧದಲೇ ಮರೆತ ...

 • 5 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 6 days ago No comment

  ಹುಲ್ಲಿನ ಕಡ್ಡಿ

    ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

 • 2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 2 weeks ago No comment

  ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

    ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...


Editor's Wall

 • 15 August 2018
  5 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 09 August 2018
  2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 01 August 2018
  3 weeks ago No comment

  ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                      ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

 • 25 July 2018
  4 weeks ago No comment

  ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                      ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

 • 11 May 2018
  3 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...