Share

ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

 

 

 

 

 

 

 

 

 

 

ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?

 

‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ.

ನೆನ್ನೆ ರಾತ್ರಿ ಒಬ್ಬ ಯುವಕ ವೀಡಿಯೋವೊಂದನ್ನು ಹಾಕಿ, ನಾನಾ ಕಡೆಯಿಂದ ನೆರೆ ಸಂತ್ರಸ್ತರಿಗೆ ನೆರವಿನ ಮಹಾಪೂರ ಹರಿದು ಬರುತ್ತಿದ್ದರೆ ಸಂಸ್ರಸ್ತರಿಗೆ ಹಂಚಬೇಕಾದ ವಸ್ತುಗಳನ್ನು ಸಂತ್ರಸ್ತರ ಕ್ಯಾಂಪಿನ ಒಳಗೆ ಹೋಗಗೊಡದೆ ಯಾರ್ಯಾರೋ ಕೊಳ್ಳೆಹೊಡೆಯುತ್ತಿದ್ದಾರೆಂದು ಹೇಳುತ್ತಿದ್ದ. ಅಷ್ಟೇ ಅಲ್ಲದೆ ನೆರೆ ಸಂತ್ರಸ್ತರ ಖಾಲಿ ಮನೆಗಳಿಗೆ ನುಗ್ಗಿ ಹಣ, ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಲಾಗುತ್ತಿದೆಯೆಂದು ರಕ್ಷಣಾ ಕ್ರಮಗಳನ್ನು ಅನುಸರಿಸಲಾಗುತ್ತಿದೆಯೆಂದು ಮಾಧ್ಯಮಗಳು ವರದಿ ಮಾಡತೊಡಗಿದ್ದವು. ಮಾನವೀಯತೆಯೇ ಸತ್ತ ರಕ್ಕಸರಿರುವಲ್ಲಿ ಇಂಥದ್ದು ನಡೆಯುವುದು ಹೊಸದೇನಲ್ಲ. ಆದರೂ ಇಂಥ ಸಂದರ್ಭದಲ್ಲಿ ಇಂಥ ಸಂಗತಿಗಳು ಹೃದಯವನ್ನು ಹಿಂಡಿಹಾಕುತ್ತವೆ.

ವಾಹನವೊಂದು ಅಪಘಾತಕ್ಕೊಳಗಾದಾಗ ಅಪಘಾತಕ್ಕೀಡಾದವರ ರಕ್ಷಣೆಗೆ ಮುಂದಾಗುವ ಬದಲು ಅವರ ಮೈಮೇಲಿದ್ದ ಚಿನ್ನ, ಅವರಲ್ಲಿದ್ದ ಹಣ, ಮೊಬೈಲು ಕದಿಯುವವರಿಂದ ಹಿಡಿದು ಭೂಕಂಪ, ನೆರೆಯಂತಹ ವಿಕೋಪಗಳಿಗೆ ತುತ್ತಾದಾಗ ಅವರ ನೆರವಿಗೆ ಹಣ ಸಂಗ್ರಹಿಸಿ ಮುಳುಗಡೆ ಮಾಡುವವರ ತನಕ ಕಳ್ಳರೇ ಕಳ್ಳರು ನಮ್ಮ ನಡುವಿದ್ದಾರೆ. ನಾನೊಬ್ಬ ರಾಜಕಾರಣಿಯನ್ನು ನೋಡಿದೆ. ರಾಜಕಾರಣಿ ಎಂದ ಮೇಲೆ ಅವರಲ್ಲಿ ಬಹುಪಾಲು ಮಂದಿ ಸಾಹುಕಾರರೇ ಆಗಿರುತ್ತಾರೆನ್ನಿ. ಇವನನ್ನು ಉದ್ಯಮಿ, ಭಾರೀ ಒಳ್ಳೆಯ ಜನ ಎಂದು ಎದುರಿಗೆ ಹೊಗಳುತ್ತಿದ್ದ ಮಂದಿಯೇ ಹಿಂದಿನಿಂದ ಇವನು ಗಣ್ಯ ವ್ಯಕ್ತಿಯೊಬ್ಬರ ಅಪಹರಣವಾದಾಗ ಅವರನ್ನು ಬಿಡಿಸಿ ತರಲು ಹಣ ಸಂಗ್ರಹಿಸಿ ಅದನ್ನು ನುಂಗಿ ದೊಡ್ಡ ಮನುಷ್ಯನಾದವ ಎನ್ನುತ್ತಿದ್ದರು. ಹೀಗೆ ಎಂಥ ಸಂದರ್ಭದಲ್ಲೂ ದರೋಡೆ ಮಾಡಿ ದೊಡ್ಡವರಾಗುವವರಿಗೆ ಬರವೇನೂ ಇಲ್ಲ.

ಪ್ರಕೃತಿ ವಿಕೋಪವೋ ಅಪಘಾತವೋ ಅನಾಹುತವೋ ಆದಾಗ ಅಂಥಲ್ಲೂ ಸಹಾಯಹಸ್ತ ಚಾಚಿದಂತೆ ಕ್ಯಾಮೆರಾಕ್ಕೆ ಪೋಸ್ ಕೊಡುವವರು, ಪ್ರಚಾರ ಪಡೆಯಲೆಂದೇ ಏನೇನೋ ಗಿಮಿಕ್ಕು ಮಾಡುವವರು, ಏನೂ ಮಾಡದೆಯೇ ಪ್ರಚಾರ ಪಡೆಯುವವರು, ಸಂದರ್ಭದ ನಾನಾ ತರಹದ ಲಾಭ ಪಡೆಯುವವರು ಬಹಳ ಮಂದಿ ಇರುತ್ತಾರೆಂದು ಊಹಿಸಿಯೇ ಇರುತ್ತೇವೆ. ಇಂಥವರಿಂದ ಜಾಗರೂಕರಾಗಿರಬೇಕೆಂದು ನಮ್ಮೊಳಗನ್ನು ನಾವು ಎಚ್ಚರಿಸಿಕೊಳ್ಳುತ್ತೇವೆ. ಆದರೆ ನಾವು ಒಳ್ಳೆಯವರೆಂದು ಭಾವಿಸಿದ ಒಬ್ಬರು ಹೀಗೆ ಮಾಡಿ ಅವರ ಅಸಲಿ ಚಹರೆ ಬಯಲಾದಾಗ ನಿಜಕ್ಕೂ ತಲ್ಲಣಿಸುತ್ತೇವೆ.

ಆದರೆ ನನ್ನಂಥ ಹೆಣ್ಣೊಬ್ಬಳಿಗೆ ಇಂಥ ವಿಕೋಪಗಳಿಗೆ ಜನ ಸಿಲುಕುವಾಗ ಇದಕ್ಕಿಂತ ಭಿನ್ನವಾದ ಮತ್ತೊಂದು ಭಯ ಆವರಿಸಿ ಕಾಡತೊಡಗುತ್ತದೆ. ಅಂಥ ಯಾವುದೋ ಸುದ್ದಿ ಕಿವಿಗಳ ಮೇಲೆ ಬೀಳದಿರಲೆಂದು ಒಳಗೊಳಗೇ ಮುದುಡಲಾರಂಭಿಸುತ್ತೇನೆ. ಆದರೂ ಯಾರೋ ಪಿಸುಮಾತಲ್ಲಾದರೂ ಇಂಥ ಹೊತ್ತಲ್ಲೂ ಕಾಪಾಡುವ ಹೆಸರಲ್ಲಿ ಹೋದವನೋ ಬರಿದೆ ನೋಡ ಹೋದವನೋ ಸಂತ್ರಸ್ತರದೇ ಗುಂಪಿನವನೋ ಹೆಣ್ಣೊಬ್ಬಳನು ಹಸಿದ ಕಣ್ಣಿಂದ ನೋಡಿದನೆಂದೋ ಎದೆಗೆ ಕೈ ಹಾಕಿದನೆಂದೋ ಉಸುರಿಬಿಡುತ್ತಾರೆ. ಕೈಕಾಲು ಅದುರತೊಡಗುತ್ತವೆ.

ಕೆಲ ವರ್ಷಗಳ ಹಿಂದೆ ಕಟ್ರೀನಾ ಎಂಬ ಹೆಸರಿನ ಚಂಡಮಾರುತವು ಅಮೇರಿಕಾವನ್ನು ಕೊಡವಿ ಹಾಕಿದ ಅಂಥ ದಾರುಣ ಸಂದರ್ಭದಲ್ಲೂ ಮನೆಗೆ ನುಗ್ಗುತ್ತಿದ್ದ ದರೋಡೆಕೋರರು ಬೆಳೆಬಾಳುವ ವಸ್ತುಗಳನ್ನೂ ಹಣವನ್ನೂ ದೋಚುತ್ತಿದ್ದುದಲ್ಲದೆ ಮಹಿಳೆಯರನ್ನು ಅತ್ಯಾಚಾರ ಮಾಡಿಹೋಗುತ್ತಿದ್ದ ಭೀಬತ್ಸ್ಯಕರ ಸುದ್ದಿ ಕಾದ ಸೀಸದಂತೆ ಕಿವಿಗಳನ್ನು ಸುಡುವಾಗ ಮನಸ್ಸು ತತ್ತರಿಸಿಹೋಗುತ್ತಿತ್ತು. ಹೌದು ಅದು ಎಂಥದ್ದೇ ಭೀಕರ, ದಾರುಣ, ಶೋಚನೀಯ ಪರಿಸ್ಥಿತಿ ಇರಲಿ ಹೆಣ್ಣು ತನ್ನ ಜೀವವನ್ನು ಮಾತ್ರವಲ್ಲ ತನ್ನ ದೇಹವನ್ನೂ ಕಾಯ್ದುಕೊಳ್ಳಬೇಕು!

ಕೆಲವು ವರ್ಷಗಳ ಹಿಂದೆ ಮಹಾಶ್ವೇತಾದೇವಿಯವರ ‘ದೋಪ್ದಿ’ ಎಂಬ ಒಂದು ಕಥೆ ಓದಿದ್ದೆ. ಅದು ಕಣ್ಣಿಗೆ ಕಟ್ಟಿದ ಕಥೆಯ ಚಿತ್ರಣ ನನ್ನೊಳಗನ್ನು ಅದೆಷ್ಟು ಸುಟ್ಟಿದೆಯೋ ಹೇಳಲಾರೆ. ನಕ್ಸಲಳೆಂದು ಅವಳನ್ನು ಸಾಮೂಹಿಕ ಅತ್ಯಾಚಾರವೆಸಗುವ ಕಾಶ್ಮೀರ, ಛತ್ತೀಸ್ ಗಡಗಳಲ್ಲೆಲ್ಲ ಯಾವ ಯಾವುದರ ಹೆಸರಲ್ಲಿ ಹೆಣ್ಣು ದೇಹಗಳನ್ನು ಯಾರು ಯಾರೆಲ್ಲ ಹೇಗೆ ಹೇಗೆಲ್ಲ ಹರಿದು ಹಸಿಗೆ ಮಾಡಿ ತಿನ್ನುತ್ತಾರೆಂದು ನಾವೆಲ್ಲ ಕೇಳಿದ್ದೇವೆ. 2014ರಲ್ಲಿ ಮಣಿಪುರದ ಇಂಪಾಲದಲ್ಲಿ ಸೈನಿಕರು ಮಹಿಳೆಯರ ಮೇಲೆರಗುವ ಕ್ರೌರ್ಯದ ವಿರುದ್ಧ ಸಿಡಿದ ಮಹಿಳೆಯರ ‘ಇಂಡಿಯನ್ ಆರ್ಮಿ ರೇಪ್ ಅಸ್’ ಎನ್ನುವ ಬೆತ್ತಲೆ ಚಳುವಳಿಯನ್ನೂ ನಾವು ಅರಗಿಸಿಕೊಂಡೆವು. ವಿಶೇಷಾಧಿಕಾರದ ಹೆಸರಲ್ಲಿ ಸೈನಿಕರು ನಡೆಸುವ ಇಂಥ ಹೀನ ಕೃತ್ಯಗಳನ್ನು ಖಂಡಿಸಿ ವರ್ಷಾನುಗಟ್ಟಲೆ ಉಪವಾಸ ಸತ್ಯಾಗ್ರಹ ಹೂಡಿದ ಇರೋಮ್ ಶರ್ಮಿಳಾ ಚಾನು ಖಂಡಿತ ನಮ್ಮ ನೆನಪಿನ ಪಟಲದಿಂದ ಮಾಸಲಾರಳು. ಅವತ್ತು ಸೈನಿಕರು ಎಸಗಿದ್ದರಲ್ಲಿ ಹೆಣ್ಣಿನ ದೇಹವನ್ನು ಹರಿದು ಮುಕ್ಕುವ ಹೀನ ಕೃತ್ಯವೂ ಇತ್ತಲ್ಲವೇ? ನಿರಾಶ್ರಿತರ ಕ್ಯಾಂಪುಗಳಿರಲಿ, ಎಳೆಯ ಬಾಲಕಿಯರ ಪುನರ್ವಸತಿ ಕೇಂದ್ರಗಳಿರಲಿ, ಅವರೆದುರಿಸುತ್ತಿರುವ ಸನ್ನಿವೇಶ ಎಂಥ ದಾರುಣವೇ ಇರಲಿ ಹೆಣ್ಣುದೇಹವನ್ನು ಕುಕ್ಕಿ ಕುಕ್ಕಿ ಮುಕ್ಕಲು ಹೀನ ಗಂಡು ಮನಃಸ್ಥಿತಿ ಹೇಸಿದ್ದೇ ಇಲ್ಲ.

ಇಂಥ ಪ್ರಕರಣಗಳು ನಮ್ಮ ದೇಶಕ್ಕಷ್ಟೇ ಸೀಮಿತವಲ್ಲ. ನಮ್ಮ ಕಾಲಗತಿಯಲ್ಲೇ ನಡೆದ ಇರಾಕ್ ಅಮೇರಿಕಾ ಯುದ್ಧಕಾಲದಲ್ಲಿ ಹೇಗೆಲ್ಲ ಹೆಣ್ಣುಮಕ್ಕಳ ಮೇಲೆ ಅಮೇರಿಕೆಯ ಸೈನಿಕರು ಎರಗುತ್ತಿದ್ದರು ಎನ್ನುವುದು ಗುಟ್ಟಾಗೇನೂ ಉಳಿದಿರಲಿಲ್ಲ. ‘ಟರ್ಟಲ್ ಕ್ಯಾನ್ ಫ್ಲೈ’ ಅನ್ನುವುದು ಅಂಥದ್ದೇ ಒಂದು ಇರಾನಿ ಸಿನೆಮಾ. ಈ ಸಿನೆಮಾ ಕಾಣಿಸುವ ಯುದ್ಧಕಾಲದ ಭೀಕರತೆಯನ್ನು ನೆನೆದರೆ ಜೀವ ಅಲ್ಲಾಡಿಹೋಗುತ್ತದೆ. ಯುದ್ಧ ಶುರುವಾಗಲು ಎರಡು ವಾರಗಳಿವೆ ಎನ್ನುವಾಗ ಬಾಂಬುದಾಳಿಗಳ ಕಾರಣಕ್ಕೆ ಕೈ, ಕಾಲು, ಕಣ್ಣು ಮುಂತಾದ ಅಂಗವಿಹೀನರಾದ ಕುರ್ದಿಶ್ ನಿರಾಶ್ರಿತರ ಕ್ಯಾಂಪಿನ ಮಕ್ಕಳನ್ನು ನೆಲದಲ್ಲಿ ಹೂತಿಟ್ಟ ಸ್ಫೋಟಕಗಳನ್ನು ಕಿತ್ತುಕೊಡುವ ಕೆಲಸಕ್ಕೆ ನೇಮಿಸಲಾಗುತ್ತದೆ. ಅಲ್ಲಿಗೆ ಬರುವ ಎರಡೂ ಕೈಗಳಲ್ಲಿದ ಪುಟ್ಟ ಬಾಲಕ ಅವನ ಜೊತೆ ಬರುವ ಪುಟ್ಟ ಬಾಲಕಿ ಅವಳ ಕೈಯಲ್ಲೊಂದು ಮಗು ಮತ್ತವಳ ಆತ್ಮಹತ್ಯೆ ಯತ್ನ ಅಥವಾ ಮಗುವನ್ನು ಕೊಲ್ಲುವ ಯತ್ನವನ್ನು ಕಾಣಿಸುವ ಕಥೆ ಭಯಪೂರಿತ ಕುತೂಹಲದಿಂದ ಕಟ್ಟಿಹಾಕುತ್ತದೆ. ಚಿತ್ರವು ಈ ಮಗುವನ್ನೆತ್ತಿಕೊಂಡ ಹಾಲುಗಲ್ಲದ ಬಾಲಕಿ ಸೈನಿಕರ ಸಾಮೂಹಿಕ ಅತ್ಯಾಚಾರಕ್ಕೆ ತುತ್ತಾದ ಕರಾಳತೆಯನ್ನೇ ಹೊತ್ತು ಬದುಕುತ್ತಿದ್ದಾಳೆನ್ನುವುದು ಸಿನೆಮಾ ನೋಡುಗನನ್ನು ಪತರಗುಟ್ಟಿಸಿಬಿಡುತ್ತದೆ.

ಒಟ್ಟಿನಲ್ಲಿ ಬೇಲಿ ಗಟ್ಟಿಯಿಲ್ಲದ ಗದ್ದೆಗೆ ದನಗಳು ಮುರಿದುಕೊಂಡು ನುಗ್ಗುವಂತೆ ಯಾವ ಪ್ರಕೃತಿ ವಿಕೋಪವಿರಲಿ, ಯುದ್ಧವಿರಲಿ, ನಿರಾಶ್ರಿತರ ಕ್ಯಾಂಪುಗಳಿರಲಿ, ಪುನರ್ವಸತಿ ಕೇಂದ್ರಗಳಿರಲಿ, ಬುದ್ಧಿಮಾಂದ್ಯಳಿರಲಿ, ಮಾನಸಿಕ ಅಸ್ವಸ್ಥಳಿರಲಿ, ಮೂಕಿಯಿರಲಿ, ಕುರುಡಿಯಿರಲಿ, ಕೂಸಿರಲಿ ಮುದುಕಿಯಿರಲಿ ಅವಳನ್ನು ಹೊತ್ತುಗೊತ್ತಿಲ್ಲದೆ ದೋಚಲಾಗುತ್ತದೆ. ಯಾವ ಕರುಣೆ ಕಣ್ಣೂ ಅವಳ ಸ್ಥಿತಿ ಕಂಡು ಕನಿಕರಿಸುವುದಿಲ್ಲ.

ದಯನೀಯ ಸ್ಥಿತಿಯಲ್ಲಿದ್ದ ಹೆಣ್ಣೊಬ್ಬಳನ್ನು ಹೇಗೆ ಹೇಗೆಲ್ಲ ಬೇಟೆಯಾಡಲು ಹೊಂಚಲಾಗುತ್ತದೆ ಎನ್ನುವುದಕ್ಕೆ ಒಂದು ಘಟನೆ ನೆನಪಾಗುತ್ತದೆ. ನಾನಿದ್ದ ಕ್ವಾರ್ಟ್ರಸ್ ಹಿಂಭಾಗದಲ್ಲಿ ಒಬ್ಬ ಮಹಿಳೆ ತನ್ನ ಮಗಳು ಮತ್ತು ಸಣ್ಣ ಬುದ್ಧಿಮಾಂದ್ಯ ಗಂಡುಮಗುವಿನೊಂದಿಗೆ ಇದ್ದಳು. ಅವಳ ತಲೆಯ ಮೇಲೆ ಸೀಮೆ ಎಣ್ಣೆ ಹುಯ್ದು ಸುಟ್ಟಿದ್ದರಿಂದ ಗದ್ದದ ಕೆಳಭಾಗದ ಚರ್ಮ ಎದೆಯ ಚರ್ಮಕ್ಕೆ ಅಂಟಿಕೊಂಡು ಕತ್ತೆತ್ತಿ ಮುಖ ಅತ್ತಿತ್ತ ತಿರುಗಿಸಲಾಗುತ್ತಿರಲಿಲ್ಲ. ಈ ಮಹಾನ್ ಕೆಲಸವನ್ನು ಅವಳ ಗಂಡ ಅವನ ಪ್ರೇಯಸಿಯ ಜೊತೆಗೂಡಿ ಅವಳು ಸಣ್ಣ ಮಗುವಿಗೆ ಬಸುರಾಗಿದ್ದಾಗ ಮಾಡಿದ್ದರಿಂದ ಹುಟ್ಟಿದ್ದ ಮಗುವೂ ಮಂದಬುದ್ಧಿಯದ್ದಾಗಿ ಹುಟ್ಟಿಬಿಟ್ಟಿತ್ತು. ಹೆಂಡತಿಯನ್ನು ಸುಟ್ಟರೂ ಅವಳನ್ನು ಕೊಲ್ಲಲಾಗದೆ ಇವನು ಪ್ರೇಯಸಿಯ ಮನೆ ಹೊಕ್ಕು ಕೂತಿದ್ದ. ಸುಟ್ಟುಕೊಂಡವಳಿಗೆ ಹಿಂದೆ ಮುಂದೆ ಯಾರೂ ಇರಲಿಲ್ಲವಾದ್ದರಿಂದ ತನ್ನ ಜೀವ ಉಳಿಸಿಕೊಳ್ಳುವುದೇ ದುಸ್ತರವಾಗಿ ಆಕೆ ಕಾನೂನು ಕ್ರಮಕ್ಕೆ ಕೈಹಾಕಿರಲಿಲ್ಲ. ಅವನಿಗೊಂದು ಸರಕಾರಿ ಕೆಲಸವೂ ಇದ್ದುದರಿಂದ ಅವನ ಪ್ರೇಯಸಿ ತಾನೇ ಅವನ ಹೆಂಡತಿಯೆಂದು ದಾಖಲೆಗಳನ್ನು ತಯಾರು ಮಾಡಿಕೊಂಡು ಅನುಕಂಪದ ಆಧಾರದಲ್ಲಿ ಕೆಲಸ ಪಡೆಯಬಹುದೆಂಬ ದುರಾಲೋಚನೆಯಿಂದ ಯಾರೊಡನೆಯೋ ಸೇರಿ ಪ್ರಿಯಕರನನ್ನು ಕೊಂದು ಮುಗಿಸಿದ್ದಳು. ಅವಳ ಕೃತ್ಯ ಬಯಲಾಗಿ ಈ ಅನುಕಂಪದ ಕೆಲಸ ಯಾವ ಹೆಂಡತಿಗೆ ಕೊಡುವುದೆಂಬ ವಿಚಾರ ಕೋರ್ಟು ಮೆಟ್ಟಿಲು ಹತ್ತಿದ್ದ ಸಂದರ್ಭ ತುತ್ತು ಕೂಳಿಗೂ ಗತಿಯಿಲ್ಲದೆ ಎರಡು ಮಕ್ಕಳನ್ನು ಸಾಕಲು ಹೆಣಗುತ್ತಾ ಬಾಡಿಗೆ ಆಧಾರದಲ್ಲಿ ಆ ಕ್ವಾರ್ಟ್ರಸ್ಸಲ್ಲಿ ಉಳಿದಿದ್ದ ಮಹಿಳೆಗೆ ಕೆಲ ಗಂಡಸರು ಕಿರುಕುಳಕೊಡತೊಡಗಿದ್ದರು.

ರಾತ್ರಿ ಏನಾದರೂ ಓದುತ್ತಾ ತಡವಾಗಿ ಮಲಗುವ ಅಭ್ಯಾಸವಿದ್ದ ನಾನು ದಿಂಬಿಗೊರಗಿ ಹಾಸಿಗೆಯ ಮೇಲೆ ಕೂತಿದ್ದೆ. ನನ್ನ ಮುಖದೆದುರು ಪುಸ್ತಕವಿತ್ತು. ನನ್ನೆದುರು ಗೋಡೆಯ ಒಂದಾಳೆತ್ತರದ ಮೇಲುಭಾಗಕ್ಕೆ ಚಿಕ್ಕದೊಂದು ಕಿಟಕಿ. ಏನೋ ಕಿರುಗುಟ್ಟಿದ ಸದ್ದಾಯಿತೆಂದು ಪುಸ್ತಕ ಕೆಳಗಿಳಿಸಿ ನೋಡುತ್ತೇನೆ ಆ ಅಪರಾತ್ರಿಯಲ್ಲಿ ಎರಡು ಕಣ್ಣುಗಳು ನನ್ನತ್ತಲೇ ನೋಡುತ್ತಿವೆ. ಭಯದಿಂದ ಹೃದಯ ಬಾಯಿಗೆ ಬರುವಂತಾಯಿತು. ಆದರೆ ಆ ಚಿಕ್ಕ ಕಿಟಕಿಯಲ್ಲಿ ತಲೆಯೂ ತೂರುವುದು ಸಾಧ್ಯವಿರಲಿಲ್ಲವಾದ್ದರಿಂದ ಗಟ್ಟಿ ದನಿ ತೆಗೆದು ‘ಯಾವನೋ ಅವನು?’ ಎಂದು ಕೂಗಿಬಿಟ್ಟೆ. ಅವನು ಓಡಿದ ದಬದಬ ಸದ್ದು ಕೇಳಿತು. ನಾನು ಬೆಡ್ಡಿನ ಪಕ್ಕದಲ್ಲೇ ಇದ್ದ ಲ್ಯಾಂಡ್ ಲೈನಿನ ರಿಸೀವರ್ ಎತ್ತಿಕೊಂಡು ಪೋಲಿಸ್ ಸ್ಟೇಷನ್ನಿಗೆ ಕರೆ ಮಾಡಿ ಹೀಗೆ ಹೀಗೆ ಎಂದು ಹೇಳಿದ್ದೂ ಆಯ್ತು. ನನ್ನ ಫ್ರೆಂಡಿನ ಗಂಡನೇ ದಫೇದಾರ್ ಆಗಿದ್ದರಿಂದ ಅವರು ಬೀಟ್ಸಿಗೆ ಹೊರಟ ಪೋಲೀಸರಿಗೆ ತಿಳಿಸಿದ್ದೂ ಆಯ್ತು.

ಸ್ವಲ್ಪವೇ ಹೊತ್ತಲ್ಲಿ ನಮ್ಮ ಹಿಂದಿನ ಆ ಮಹಿಳೆಯ ಗಲಾಟೆ ಕೇಳತೊಡಗಿತು. ‘ಬೇವಾರ್ಶಿ ನನ್ ಮಗ್ನೇ ಬಾರೋ ಇಲ್ಲಿ ನಿನ್ಗೆ ಸುಮ್ಕೆ ಬಿಡಲ್ಲಾ ಏನಿಲ್ಲಾ ನಾನು. ಕೋರ್ಟಿಗೆ ಹೋಗ್ತೀನಿ’ ಎಂದು ಹೇಳಿದ್ದನ್ನೇ ಹೇಳುವುದು ಕೇಳತೊಡಗಿತು. ಸ್ವಲ್ಪ ಹೊತ್ತಲ್ಲೇ ಪೋಲೀಸರು ಬಂದರು. ಪೋಲೀಸರು ಬರುವ ನಿರೀಕ್ಷೆಯಿಲ್ಲದೆ ಅಲ್ಲೇ ಅಡಗಿ ಆಟ ನೋಡುತ್ತಿದ್ದ ಒಬ್ಬನನ್ನು ಪೋಲೀಸರು ಹಿಡಿದೇಬಿಟ್ಟರು. ಲಾಠಿ ರುಚಿ ಸವಿಯುತ್ತಿದ್ದಂತೆ ಒಂದೊಂದೇ ಬಾಯಿಬಿಡಹತ್ತಿದ್ದ. ಕ್ವಾರ್ಟ್ರಸ್ ಗಳೆಲ್ಲ ಹೆಚ್ಚುಕಡಿಮೆ ಒಂದೇ ತರಹ ಇದ್ದುದರಿಂದ ಕುಡಿದ ಮತ್ತಿನಲ್ಲಿ ಆತ ಆಕೆಯ ಮನೆಯೆಂದುಕೊಂಡು ನನ್ನ ಮನೆಯ ಕಿಟಕಿ ತೆರೆದು ಸಿಕ್ಕುಬಿದ್ದಿದ್ದ.

ಆ ಹೆಂಗಸಿನ ಹೇಳಿಕೆಯ ಪ್ರಕಾರ ಪ್ರತಿರಾತ್ರಿ ಕೆಲ ಗಂಡಸರು ಆಕೆಯ ಮನೆ ಬಾಗಿಲು ತಟ್ಟುತ್ತಿದ್ದರು. ಮತ್ತು ಆಕೆಯ ಒಣಗಲು ಹಾಕಿದ ಬಟ್ಟೆಗಳ ಮೇಲೆ, ಮನೆಯ ಬಾಗಿಲಿಗೆ ಮೂತ್ರ ಮಾಡುವುದು ನಾನಾ ತರಹದ ಹೊಲಸು ಪದಗಳನ್ನು ಬಳಸಿ ಆಕೆಯನ್ನು ಹೆದರಿಸುವುದು ಮಾಡುತ್ತಿದ್ದರು. ಆಕೆ ಅಸಹಾಯಕಿ. ಯಾರೊಡನೆ ಈ ವಿಷಯ ಹೇಳಿದರೂ ಸುಟ್ಟು ವಿಕಾರಗೊಂಡ ಮುಖವನ್ನು ಹಗಲಲ್ಲಿ ನೋಡಲೇ ಭಯಪಡುವಾಗ ರಾತ್ರಿ ಯಾವನು ಹೋಗಿದ್ದಾನು ಎಂದೇ ಉಪೇಕ್ಷಿಸುತ್ತಿತ್ತು ಲೋಕ. ಅಷ್ಟಕ್ಕೂ ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು? ವಿಕಾರಗೊಂಡ ಮುಖವನ್ನು ದೂರಿಯಾರು. ವಿಕಾರ ಮನಸ್ಸನ್ನು?

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ವಾಸ. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಪತ್ರಿಕೆಗಳು, ವೆಬ್ ಪೋರ್ಟಲ್ ಗಳಲ್ಲಿ ಬರಹಗಳು ಪ್ರಕಟವಾಗಿವೆ. ‘ಹಲಗೆ ಮತ್ತು ಮೆದುಬೆರಳು’ ಅವರ ಮೊದಲ ಕಾವ್ಯಸಂಕಲನ.

Share

Leave a comment

Your email address will not be published. Required fields are marked *

Recent Posts More

 • 13 hours ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 week ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 2 weeks ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...

 • 2 weeks ago No comment

  ಕಲರವ | ಒಂದು ಸಿನಿಮಾ ನೋಡಿದ ಕಥೆ…

      ಕಲರವ           “ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ಸಿನಿಮಾ ನೋಡು” ಎಂದಳು ಭಾರತದ ನನ್ನ ಅಕ್ಕ. “ಹೌದಲ್ಲವಾ” ಅಂತ ನಮ್ಮೂರಿನಲ್ಲಿ ನಡೆಯುತ್ತಿದ್ದ ಸಿನಿಮಾ ಪಟ್ಟಿ ನೋಡಿದೆ. ಪ್ರೀತಿ –ಪ್ರೇಮ, ಫೈಟಿಂಗ್ ಗಳ ಚಲನಚಿತ್ರವನ್ನು ನೋಡುವುದೆಂದರೆ, ‘ನೋಡಿದ್ದನ್ನೇ ನೋಡುವ’ ಕಷ್ಟ. ವೈಚಾರಿಕ ಸಿನಿಮಾಗಳು ಜಾಸ್ತಿ ಓಡದ ಕಾಲವಿದು. ಇನ್ನು ಸಾಂಸಾರಿಕ ಚಿತ್ರಗಳು ಬರುವುದು ನಿಂತ ಮೇಲೆ ಸಂಸಾರಗಳು ಒಟ್ಟಿಗೆ ...

 • 3 weeks ago No comment

  ಕವಿಸಾಲು | ಅಲೆಗಳೆದ್ದ ಕೊಳ…

      ಕವಿಸಾಲು         ಅಲೆಗಳೆದ್ದ ಕೊಳವಿದು, ಕಲ್ಲು ತೂರಿದ ಕಾಯಕವಷ್ಟೇ ನಿನ್ನದು ಎದ್ದ ಅಲೆಗಳ ಮೇಲಿಲ್ಲ ನಿನಗೆ ಇನಿತು ಅಧಿಕಾರವು ದೂರಿಲ್ಲ ನನ್ನಲ್ಲಿ, ಬೇಡಿಕೆ ತಾನೇ ಏಕೆ? ತುಂಬಿದ ಮನದಿ ಹೊಕ್ಕ ಹರ್ಷಕೆ ಪುರಾವೆಗಳ ಹಂಗಿಲ್ಲ, ನಕ್ಕ ನಗುವಿನಲಿ ನೋವಿಲ್ಲ, ತುಂಬಿವೆ ನೂರು ಭಾವಾರ್ಥ ಮುಚ್ಚಟೆಯಿಂದ ಬಚ್ಚಿಟ್ಟುಕೊಂಡು ಬೇಕಾದ ಪರಿಭಾಷೆಯಲಿ ದಿರಿಸಿಟ್ಟು ಸಿಂಗರಿಸಿ ನೋಡುತ್ತ ನಿನ್ನ ಅನುಪಸ್ಥಿತಿಯಲ್ಲೂ ಸಿಗುವ ಅನುಪಮ ಭಾವದಿ ದೊರಕಿದ್ದು ...


Editor's Wall

 • 31 August 2018
  3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  3 weeks ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  4 weeks ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  4 weeks ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  1 month ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...