Share

ಜಿದ್ದಿಗೆ ಬಿದ್ದಂತೆ ಬದುಕಿದವಳು
ವಿ ಮುಕ್ತ

“ಮೈ ಚಾಯ್ಸ್” ಅನ್ನೋ ಒಂದು ವಿಡಿಯೋ ಕಳೆದ ವರ್ಷ ಸುದ್ದಿ ಮತ್ತು ಚರ್ಚೆಗೆ ಗ್ರಾಸವಾಗಿತ್ತು. ನಮ್ಮ ಮನಸ್ಸು, ದೇಹ, ನಮ್ಮಿಷ್ಟ ಎಂಬ ಧೋರಣೆಯೊಂದಿಗೆ ವೈಯಕ್ತಿಕ ಜೀವನದ ಪ್ರತಿಯೊಂದು ಆಯ್ಕೆ ನನ್ನದು ಎಂದು ಮಹಿಳೆ ಪ್ರತಿಪಾದಿಸುವ ಆ ಕಿರುಚಿತ್ರ, ಬಾಲಿವುಡ್ ನಿರ್ದೇಶಕ ಹೋಮಿ ಅದ್ಜಾನಿಯಾ ಪರಿಕಲ್ಪನೆಯಲ್ಲಿ ನಿರ್ಮಾಣಗೊಂಡಿತ್ತು. ಮಹಿಳೆಯರ ಬಗ್ಗೆ ಪುರುಷರ ಮನೋಭಾವ ಬದಲಾಗಬೇಕು ಮತ್ತು ಮಹಿಳೆಯರ ಆಯ್ಕೆಗಳನ್ನು ಪ್ರಶ್ನಿಸಬಾರದು ಎಂದು ಹೇಳುವ ಯತ್ನ ಅದರಲ್ಲಿತ್ತು. ಶಹಬ್ಬಾಸ್ ಎನ್ನಿಸಿಕೊಂಡಷ್ಟೇ ಮಟ್ಟಿಗೆ ಟೀಕೆಗೂ ಅದು ಗುರಿಯಾಯಿತು. ಮಹಿಳಾ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಭರದಲ್ಲಿ ಸ್ವೇಚ್ಛೆಯ ಪ್ರತಿಪಾದನೆಯೇ ಅದರಲ್ಲಿ ಮುನ್ನುಗ್ಗಿದಂತೆ ಇದೆಯೆಂಬುದು ಆ ಟೀಕೆಗಳ ಸಾರಾಂಶ. ಆ ಹೊತ್ತಿನ ಟೀಕೆಗಳಲ್ಲಿ ಒಂದು ವಿಚಾರವಂತೂ ಮುನ್ನೆಲೆಗೆ ಬಂತು: ಮಹಿಳಾ ಸ್ವಾತಂತ್ರ್ಯವೆನ್ನುವುದು ಇಷ್ಟದ ವೃತ್ತಿ, ಪ್ರವೃತ್ತಿಯ ಆಯ್ಕೆ ಮತ್ತು ಜೀವನಸ್ಥೈರ್ಯವನ್ನು ಗಳಿಸಿಕೊಳ್ಳುವುದು; ಮಹಿಳಾ ವಾದಿಗಳಾಗುವುದರಿಂದ ಸಬಲೀಕರಣ ಸಾಧ್ಯವಿಲ್ಲ; ಮಹಿಳಾ ಸಬಲೀಕರಣವೆನ್ನುವುದು ಪುರುಷರನ್ನು ಕೀಳಾಗಿ ಕಾಣುವುದಲ್ಲ ಮತ್ತು ಅವರಲ್ಲಿ ಕೀಳರಿಮೆ ಹುಟ್ಟಿಸುವುದೂ ಅಲ್ಲ; ಬದಲಾಗಿ ಮನುಷ್ಯರೆಲ್ಲರನ್ನೂ ಪರಸ್ಪರ ಗೌರವ ಹಾಗೂ ಪ್ರೀತಿಯಿಂದ ಕಾಣುವ ಗುಣದಿಂದಲೇ ಗಳಿಸಿಕೊಳ್ಳುವಂಥದ್ದು.

“ಗೃಹಭಂಗ”ದ ನಂಜಮ್ಮನನ್ನು ನೋಡಿಕೊಳ್ಳುತ್ತ ಹೋಗುವಾಗ, ಮಹಿಳಾ ಸ್ವಾತಂತ್ರ್ಯ ಮತ್ತು ಸಬಲೀಕರಣ ಕುರಿತ ಇವತ್ತಿನ ಚರ್ಚೆಗಳೆಲ್ಲ ಮನಸ್ಸಿನಲ್ಲಿ ಬರುತ್ತ ಹೋದ ಹಿನ್ನೆಲೆಯಲ್ಲಿ “ಮೈ ಚಾಯ್ಸ್” ವಿಡಿಯೋದ ಪ್ರಸ್ತಾಪ ಮಾಡುತ್ತಿದ್ದೇನೆ. ಸುಮಾರು ಎಪ್ಪತ್ತು ವರ್ಷಗಳ ಕೆಳಗಿನ ಅಂದರೆ ಸ್ವಾತಂತ್ರ್ಯ ಸಿಗುವುದಕ್ಕೂ ಮುಂಚಿನ ಕಾಲಘಟ್ಟದ ಹೆಣ್ಣೊಬ್ಬಳ ಬದುಕನ್ನು ಇವತ್ತಿನ ಹೆಣ್ಣಿನ ತಲ್ಲಣಗಳ ಜೊತೆ ಇಟ್ಟು ಓದಿಕೊಳ್ಳುವುದು ಬೇಕಾಗಿದೆ ಎಂದೆನ್ನಿಸಿದ್ದರಿಂದ ಈ ಪ್ರಸ್ತಾಪ.

~

ವಿಷಯವನ್ನು ಸ್ವಲ್ಪ ಹೊರಳಿಸಿ ಮುಂದುವರಿಯುವುದಾದರೆ, ಹೆಣ್ಣಿನ ಕಥನವನ್ನು ದೇಶಕಾಲಗಳ ಚೌಕಿಯಿಂದ ಬೇರೆಯಾಗಿಸಿ ನೋಡಿದರೂ ಅದರ ಅಂತಃಸತ್ವದಲ್ಲಿ ವ್ಯತ್ಯಾಸವಾಗುತ್ತದೆಂದು ಅನ್ನಿಸುವುದಿಲ್ಲ. ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಗುರುತಿಸಬಹುದು, ಆದರೆ ಹೆಣ್ಣಿನ ಮನಸ್ಸನ್ನು ತಿಳಿಯಲಾಗದು ಎಂಬ ಕೃಷ್ಣನ ಮಾತಿನಲ್ಲಿ ಒಮ್ಮೆಲೆ ನೂರಾರು ಸಾವಿರಾರು ಕಥೆಗಳು ಪ್ರವಹಿಸುವಂತೆ ಕಾಣಿಸುತ್ತದೆ. ಭೂಮಿಯಿಂದ ಶುರುವಾಗುವ ಹೆಣ್ಣಿನ ಕಥನ ಹಲವು ನಿಲುವುಗಳಲ್ಲಿ, ಸಂವೇದನೆಗಳಲ್ಲಿ, ಸ್ವಭಾವಗಳಲ್ಲಿ ಬರೆಯಿಸಿಕೊಂಡದ್ದಾಗಿದೆ.

ತಮಾಷೆಯೆಂದರೆ, ಈ ನಿಲುವು, ಸಂವೇದನೆ, ಸ್ವಭಾವಗಳ ಸೋಗಿನಲ್ಲೇ ಇರುವ ಮಿತಿ ಎಂಬ ಸಿಕ್ಕಿನಲ್ಲಿ ಹೆಣ್ಣು ಸಿಕ್ಕಿಹಾಕಿಕೊಳ್ಳುತ್ತ ಬಂದಳು. ಸಂಸ್ಕೃತ ಕಾವ್ಯಗಳಲ್ಲಿ ಕುಲೀನ ಮನೆತನದ ಹೆಣ್ಣುಗಳನ್ನು ಬಿಟ್ಟರೆ ಕೆಳವರ್ಗದ ಹೆಣ್ಣುಗಳ ವೇದನೆ ಸಂವೇದನೆಗಳಿಗೆ ಅವಕಾಶವೇ ಇರಲಿಲ್ಲ. ಹೆಣ್ಣು ಪುರುಷನ ದೃಷ್ಟಿಯಲ್ಲಿ ಭೋಗದ ವಸ್ತು ಎಂಬುದು ಲಾಗಾಯ್ತಿನ ತಕರಾರು. ಆದರೆ ಇವತ್ತು ಟಿವಿ ಸೀರಿಯಲ್ಲುಗಳಲ್ಲಿ, ಜಾಹೀರಾತುಗಳಲ್ಲಿ ಬರುವ ಸ್ತ್ರೀ ಪಾತ್ರಗಳು ಕೂಡ ಮಾರುಕಟ್ಟೆಯ ಸರಕುಗಳೇ ಆಗಿಬಿಟ್ಟಿರುವ ಚಮತ್ಕಾರವನ್ನು ನೋಡಬೇಕು. ಮಹಿಳಾ ವಾದವೆಂಬುದು ದೊಡ್ಡ ದೊಡ್ಡ ಶಬ್ದಗಳಲ್ಲಿ ವಿಜೃಂಭಿಸುತ್ತ, ಹೆಣ್ಣು ಮಾತ್ರ ಬೇರೆಯದೇ ವಾಸ್ತವದಲ್ಲಿರುವ ಆಳದ ಒಳಸುಳಿಗಳು ಮತ್ತೆ ಮತ್ತೆ ಗೊತ್ತಾಗುತ್ತಿರುವ, ಎಲ್ಲವೂ ಗೋಜಲು ಗೋಜಲೆನ್ನಿಸುವ ಇವತ್ತಿನ ಸಂಕೀರ್ಣತೆಯ ಎದುರಿನಲ್ಲಿ ತನ್ನ ಸರಳ ನಡವಳಿಕೆಗಳಿಂದಲೇ ದೊಡ್ಡವಳಾಗಿ ನಿಲ್ಲುವವಳು “ಗೃಹಭಂಗ”ದ ನಂಜಮ್ಮ.

~

ಭೈರಪ್ಪನವರು ಈ ಕಾದಂಬರಿಗೆ ಬರೆದ ಮಾತುಗಳನ್ನು ಗ್ರಹಿಸಿ ಹೇಳುವುದಾದರೆ, ಇಲ್ಲಿನದು ಒಂದು ಕಾಲದ ಆವರಣದೊಳಗಿನ ಬದುಕನ್ನು ಅದು ಇರುವಂತೆಯೇ ನೋಡುವ ಕ್ರಮ. ಹಾಗೆ ಕಂಡಿರಿಸುವ ಇಲ್ಲಿನ ಚಿತ್ರಣದಲ್ಲಿ ಹಲವು ರೂಪಿನ ಪಾತ್ರಗಳು ಬಂದುಹೋಗುತ್ತವೆ. ಪ್ಲೇಗಿನಂಥ ಬದುಕನ್ನೇ ತಿಂದುಹಾಕುವ ಘಟನೆಗಳಿವೆ. ಕ್ಷಾಮದಂಥ ಪ್ರಾಕೃತಿಕ ವಿಕೋಪವಿದೆ. ಇವೆಲ್ಲವೂ ಸೇರಿಕೊಂಡ ಪ್ರವಹಿಸುವಿಕೆಯಲ್ಲಿ ಕಥೆಯ ಕೇಂದ್ರದಂತೆ ಇರುವುದು ಜೀವನ್ಮುಖಿ ಚಲನೆಯ ನಂಜಮ್ಮನ ಪಾತ್ರ.

ಯಾಕೆ ಜೀವನ್ಮುಖಿ ಎನ್ನಬೇಕೆನ್ನುವುದಕ್ಕೆ ನಂಜಮ್ಮನ ಕಾಲದ ಚೌಕಟ್ಟುಗಳನ್ನು ಒಮ್ಮೆ ಗಮನಿಸಬೇಕು. ಹೆಂಗಸರು ಸರ್ಕಾರಿ ಲೆಕ್ಕ ಬರೆಯಬಾರದು ಎಂಬ ನಂಬಿಕೆ ಇದ್ದ ಕಾಲ ಅದು. ಹುಡುಗಿ ಮೈನೆರೆಯುವುದಕ್ಕೆ ಮುಂಚೆ ಮದುವೆ ಮಾಡಿಕೊಡಬೇಕು ಎಂಬ ಕಟ್ಟುಪಾಡು ಇದ್ದ ಕಾಲ. ಇವೆರಡನ್ನೂ ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ನಿರ್ವಾಹವಿಲ್ಲದೆ ಉಲ್ಲಂಘಿಸುವವಳು ನಂಜಮ್ಮ. ಮುಟ್ಟಾದಾಗ ಹೊರಗಿರಬೇಕು, ಅಡುಗೆ ಮಾಡಕೂಡದು ಎಂಬುದನ್ನಂತೂ ಗಂಭೀರವಾಗಿ ತೆಗೆದುಕೊಂಡವಳೇ ಅಲ್ಲ ಅವಳು. ಎಪ್ಪತ್ತು ವರ್ಷಗಳಾಚೆಗಿನ ಕಾಲಘಟ್ಟದ ನಿಲುವಿನಲ್ಲಿ ಇಂಥದೊಂದು ಹೆಜ್ಜೆ ಸಣ್ಣದಂತೂ ಆಗಿರಲಿಲ್ಲ. ಹಾಗೆ ಮಾಡಬೇಕಾದ್ದು ಅವಳಿಗೆ ಅನಿವಾರ್ಯವಾಗಿತ್ತಾದರೂ, ಅಂಥದೊಂದು ಮನಃಸ್ಥಿತಿಗೆ ಸಿದ್ಧಗೊಳ್ಳುವುದಕ್ಕೆ ಧೈರ್ಯವೂ ಬೇಕಿತ್ತು. ಆ ಧೈರ್ಯವನ್ನು ಅವಳು ತೋರಿಸಿದಳು.

ನಂಜಮ್ಮನ ನಡೆಯೆಲ್ಲವೂ ಬದುಕು ಕಟ್ಟಿಕೊಳ್ಳುವ ಹೋರಾಟದಲ್ಲಿ ನಿಕ್ಕಿಯಾಗುತ್ತ ಹೋಯಿತು. ತನ್ನ ಮನೆಯಲ್ಲಿನ್ನು ಜಾಗವಿಲ್ಲ ಎಂದು ಅತ್ತೆ ಗಂಗಮ್ಮ ಹೇಳಿದಾಗ, ಹೊಣೆಗೇಡಿ ಗಂಡನನ್ನು ನಂಬಿಕೊಂಡು ಕೂರುವಂತಿರಲಿಲ್ಲ. ತನ್ನ ಸಂಸಾರಕ್ಕೊಂದು ಮನೆ ಅಂತ ಮಾಡಿಕೊಳ್ಳಬೇಕಾದ ಒತ್ತಡ, ಸಂಸಾರ ತೂಗಿಸಿಕೊಂಡು ಹೋಗಲು ಇಟ್ಟ ಹೆಜ್ಜೆ ಇಲ್ಲೆಲ್ಲ ಅವಳ ವ್ಯಾವಹಾರಿಕ ಜಾಣ್ಮೆ ವ್ಯಕ್ತವಾಗುತ್ತದೆ. ಬರೀ ಶಾನುಭೋಗಿಕೆಯಿಂದಲೇ ಸಂಸಾರ ತೂಗಿಸಲು ಸಾಧ್ಯವಿಲ್ಲ ಎನ್ನಿಸಿದಾಗ ಎಲೆ ಹಚ್ಚುವ ಕೆಲಸ ಶುರುಮಾಡಿಕೊಳ್ಳುತ್ತಾಳೆ. ಮಳೆಯಾಗದೆ ಬರ ಬಂದಾಗ ಮನೆಯ ಹಿತ್ತಿಲಲ್ಲೇ ತರಕಾರಿ ಸೊಪ್ಪು ಬೆಳೆಯುತ್ತ ಸಂಸಾರದ ಅಗತ್ಯ ಪೂರೈಸಿಕೊಳ್ಳುವ ಹಾದಿ ಕಂಡುಕೊಳ್ಳುತ್ತಾಳೆ. ಹೊಣೆಗೇಡಿ ಗಂಡನ ಶಾನುಭೋಗಿಕೆ ದುಡ್ಡು ಅವನ ಕೈಸೇರಿ ದುಂದು ಆಗದಂತೆ ಮಾಡಬೇಕಾದಾಗಂತೂ ಹೈರಾಣಾಗಿ ಹೋಗುತ್ತಾಳೆ. “ನಿಂಗೆ ಅಮಲ್ದಾರಿಕೆ ಮಾಡೋವಷ್ಟು ಬುದ್ಧಿ ಐತೆ” ಎಂದು ನಂಜಮ್ಮನಿಗೆ ಅವಳ ಕಷಟಕಾಲದಲ್ಲೆಲ್ಲ ನೆರವಾಗುವ ಗುಂಡೇಗೌಡರು ಮತ್ತೆ ಮತ್ತೆ ಹೊಗಳುತ್ತಾರೆ.

~

“ನೀನು, ನಿನ್ಮಕ್ಳು ಏನಾದ್ರೂ ಮಾಡ್ಕಳಿ. ನಾನು ನಮ್ಮಮ್ಮನ ಜೊತೆ ಇರ್ತೀನಿ” ಎನ್ನುವ ಹೊಣೆಗೇಡಿ, ರೇವಣ್ಣಶೆಟ್ಟಿ ಎಂಬ ವಂಚಕನ ವಿರುದ್ಧ ಹೆಂಡತಿ ಮಾತನಾಡಿದರೆ “ಇರು, ನೀ ಹೀಗೆ ಹೇಳ್ತಿಯಾ ಅಂತ ಅವನಿಗೇ ಹೇಳ್ತೀನಿ” ಎನ್ನುವಷ್ಟು ಅವಿವೇಕಿ, ತನ್ನ ಹೊಟ್ಟೆ ತುಂಬಿದರೆ ಸಾಕು, ಹೆಂಡತಿ ಮಕ್ಕಳು ತಿಂದರೊ ಬಿಟ್ಟರೊ ನೋಡಲಾರದ ನೀಚಚೆನ್ನಿಗರಾಯನಿಗೆ ಹೆಂಡತಿಯನ್ನು ಆಳಬೇಕೆಂಬ ಆಸೆ ಮಾತ್ರ ಇದೆ. ಅಂಥವನನ್ನು ಕಟ್ಟಿಕೊಂಡು ಉದ್ದಕ್ಕೂ ಏಗುವ ನಂಜಮ್ಮ, ಗಂಡನನ್ನು ತಿರಸ್ಕರಿಸದೆ ಅವನನ್ನು ಒಳಗೊಳ್ಳುತ್ತಲೇ ಸಂಸಾರವನ್ನು ಮುನ್ನಡೆಸುತ್ತಾಳೆ.

ಬೇರೆ ಮನೆ ಮಾಡಿದಾಗ ತಾನಾಗಿಯೇ ಬಂದು ಸೇರಿಕೊಳ್ಳುವ ಗಂಡನನ್ನು ದೂರ ಇರಿಸಲಾರಳು ನಂಜಮ್ಮ. ಅವಳ ಮೇಲಿನ ಆಸೆಯಿಂದಷ್ಟೇ ಹಾಸಿಗೆ ಜೋಡಿಸಿ ಹಾಕುವ ಗಂಡನನ್ನು ತೀರಾ ವಿರೋಧಿಸುವುದಿಲ್ಲ ಆಕೆ. ಸಂಸಾರ ಉಳೀಬೇಕಾದ್ರೆ ಈ ಕರ್ಮವನ್ನೂ ಅನುಭವಿಸಬೇಕು ಎಂಬ ಒಂದು ಥರದ ನಿರ್ಲಿಪ್ತ ಧೋರಣೆ.

ಮೂರನೇ ಮಗುವಿನ ಬಳಿಕ ನಾಲ್ಕನೇ ಮಗು ಹುಟ್ಟಿದ ತಕ್ಷಣ ಸಾಯುತ್ತದೆ. ಆಗ ನಂಜಮ್ಮನ ಅಜ್ಜಿ ಅಕ್ಕಮ್ಮ “ನಿನ್ನ ಗಂಡನ ಯೋಗ್ತಿ ಇಂತದು. ತಾನು ಹುಟ್ಟಿಸಿದ ಮಕ್ಕಳ ಮೇಲೇ ಪ್ರೀತಿ ಇಲ್ಲ. ತಾನಾಯ್ತು ತನ್ನ ಹೊಟ್ಟೆಯಾಯ್ತು. ಮಕ್ಕಳ ಸಾಕೂದು ನಿಂಗೂ ಕಷ್ಟ. ಇನ್ನು ಅವನನ್ನ ಹಾಸಿಗೆ ಹತ್ರಕ್ ಸೇರಿಸ್ಬೇಡ” ಎನ್ನುತ್ತಾಳೆ. “ಹಾಗೆ ಮಾಡಿದರೆ ಬೀದಿಯಲ್ಲಿ ನಿಂತು ಕಟ್ಟ್ದಾಗಿ ಕಿರುಚಿಕೊಳ್ಳುತ್ತಾರೆ. ನಾನಾಗ್ಲೇ ಹಾಗೆ ಮಾಡಿ ನೋಡಿದೀನಿ” ಎಂದು ನಂಜಮ್ಮ ಹೇಳಿದಾಗ, ಅಕ್ಕಮ್ಮನಿಗೂ ಅದು ಹಣೆಬರ ಎನ್ನಿಸಿಬಿಡುತ್ತದೆ. ತಾಯಿಯಿಂದ ಬಂದ ಮುಂಡೆ ಮುಂಡೆ ಮುಂಡೆ ಎಂಬ ಬೈಗುಳವನ್ನು ಮನಸಾರೆ ಪ್ರಯೋಗಿಸಿವುದು ಮಾತ್ರ ಗೊತ್ತಿರುವ ಚೆನ್ನಿಗರಾಯನಂಥ ಗಂಡ ತನ್ನ ಸರ್ಕಾರಿ ಕೆಲಸವನ್ನೂ ನಿಭಾಯಿಸಲಾರದಷ್ಟು ಬುದ್ಧಿಗೇಡಿ. ಆದರೆ ಅದರಿಂದ ಬರುವ ದುಡ್ಡು ಮಾತ್ರ ಬೇಕು. ಅದು ಸಿಕ್ಕಿದ ತಕ್ಷಣ ಹೊಟೇಲಿಗೆ ಹೋಗಿ ಹೊಟ್ಟೆತುಂಬ ಮೈಸೂರು ಪಾಕು ತಿನ್ನುವ ಹಪಹಪಿ. ತಾನೊಬ್ಬನೇ ತಿನ್ನುವಾಗ ಮಕ್ಕಳ ನೆನಪೂ ಬರುವುದಿಲ್ಲ ಅವನಿಗೆ. ನಂಜಮ್ಮ ಎಂಥ ಬಾಳನ್ನು ಬಾಳಿದಳು ಎಂಬುದನ್ನು ತಿಳಿಯುವುದಕ್ಕೆ ಈ ವಿವರಗಳು ಸಾಕು.

ಗಂಡನ ಈ ಹೊಣೆಗೇಡಿತನ ಅವಿವೇಕಿತನ ಒಂದೆಡೆಯಾದರೆ, ಅವನ ಮತ್ತು ಅವನ ತಾಯಿ ಗಂಗಮ್ಮನ ಮೌಢ್ಯ ಮತ್ತು ಅಜ್ಞಾನವನ್ನೇ ಬಂಡವಾಳ ನಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವ ಊರಿನ ಪುರೋಹಿತರಾದ ಅಯ್ಯಾ ಶಾಸ್ತ್ರಿ ಮತ್ತು ಅಣ್ಣಾ ಜೋಯಿಸರ ಸಂಚು ಇನ್ನೊಂದು ಕಡೆ.
ನಂಜಮ್ಮನ ಮೈದುನ ಅಪ್ಪಣ್ಣಯ್ಯನ ಹೆಂಡತಿ ಸಾತು, ನಂಜಮ್ಮನಂತೆ ಗಂಡ ಮಾತುಮಾತಿಗೆ ಮುಂಡೆ ಎಂದರೆ ಸಹಿಸಿಕೊಂಡು ಇರುವವಳಂತೂ ಅಲ್ಲ. ಮನೆಯೊಳಗೆ ಮೊದಲ ದಿನ ಅಂಥ ಮಾತು ಕೇಳಿಸಿಕೊಂಡಾಗಲೇ ವಿರೋಧಿಸಿದ್ದವಳು ಆಕೆ. ಅದೇ ಕಾರಣದಿಂದ ತವರಿಗೇ ಹೋಗಿ ಉಳಿದವಳು. ಹಾಗೆ ತವರು ಸೇರುವ ಮುನ್ನ ಒಂದು ಮಗುವಿನ ತಾಯಿಯಾಗಿದ್ದ ಅವಳು ಮತ್ತೆ ಗಂಡನ ಮನೆಗೆ ಮರಳುವಾಗ ಇಬ್ಬರು ಮಕ್ಕಳ ತಾಯಿಯಾಗಿರುತ್ತಾಳೆ. ಅಣ್ಣಪ್ಪಯ್ಯ ಹೆಂಡತಿ ಬಳಿ ಹೋಗಿಬರುತ್ತಿದ್ದುದು ಗೊತ್ತಿಲ್ಲದ ಗಂಗಮ್ಮ, ಯಾರೋ ಬೇರೆಯವರಿಗೆ ಹುಟ್ಟಿದ ಮಗು ಎಂದು ಊರ ಪುರೋಹಿತರನ್ನು ಕರೆದು ನ್ಯಾಯ ಹೇಳಲು ಕೇಳುತ್ತಾಳೆ. ಆದರೆ ಅಪ್ಪಣ್ಣಯ್ಯನೇ ತಾನು ಹೆಂಡತಿಯ ಮನೆಗೆ ಹೋಗಿದ್ದನ್ನು ಒಪ್ಪಿಕೊಂಡಾಗ ಅವಳ ಆರೋಪ ಬಿದ್ದುಹೋಗುತ್ತದೆ. ಇದಾದ ಮೇಲೆ ಅಪ್ಪಣ್ಣಯ್ಯ ತನ್ನ ಹೆಂಡತಿ ಮಕ್ಕಳೊಂದಿಗೆ ಬೇರೆ ಇರಲು ತಯಾರಾಗುತ್ತಾನೆ. ಆದರೆ ಕೂತು ಉಣ್ಣುವ ಹೆಂಡತಿ ಮತ್ತು ಅತ್ತೆಗಾಗಿ ಅವರು ಕೇಳುವ ಅಕ್ಕಿಯನ್ನು, ಕಾಫಿ ಪುಡಿ ಹಾಲನ್ನು ತರುವಷ್ಟು ದುಡಿಯಲಾರದೆ ರೋಸಿಹೋಗಿ, ತಾಯಿ ಗಂಗಮ್ಮನ ಪ್ರಚೋದನೆಯಿಂದ ಕಟ್ಟಿಕೊಂಡ ಗುಡಿಸಲಿಗೂ ಬೆಂಕಿ ಹಚ್ಚಿ, ಹೆಂಡತಿಯ ತಾಳಿ ಕೀಳುತ್ತಾನೆ. ಮನೆ ಕಳೆದುಕೊಂಡ ಸಾತು, ಅವಳ ಮಕ್ಕಳು ಮತ್ತು ತಾಯಿಗೆ ಆಶ್ರಯ ಕೊಟ್ಟಾಗ ಗಂಗಮ್ಮನ ಸಿಟ್ಟು ನಂಜಮ್ಮನ ಕಡೆಗೆ ತಿರುಗುತ್ತದೆ. ಪುರೋಹಿತರಿಬ್ಬರೂ ತಪ್ಪು ದಂಡಕ್ಕಾಗಿ ಪಟ್ಟು ಹಿಡಿಯುತ್ತಾರೆ. ಆಗ ಅವರನ್ನು ನಂಜಮ್ಮ ಪ್ರಶ್ನಿಸುವುದು ಹೀಗೆ:

“ತಾಳಿ ಕೊತ್ಕೊಂಡೋರು ಅಪ್ಪಣ್ಣಯ್ಯ. ಹೆಂಡ್ತೀ ತಾಳೀ ಕಿತ್ಕಳ್ಳೂ ಅಧಿಕಾರ ಶಾಸ್ತ್ರದಲ್ಲಿ ಅವರಿಗೆ ಇದೆಯಾ? ದಂಡಗಿಂಡ ಹಾಕಬೇಕಿದ್ರೆ ಅವ್ರಿಗೆ ಹಾಕಿ. ಇನ್ನು ಮನೆ ಸುಟ್ಟುಹೋಗಿ ಹೆಂಗಸರು ಬೀದಿಪಾಲಾಗಿದ್ದಾಗ ಮನೆಗೆ ಸೇರುಸ್ದೇ ನಾನೆನು ಮಾಡ್ಬೇಕಾಗಿತ್ತು? ಈ ಕಷ್ಟಕಾಲದಲ್ಲಿ ಒಪ್ಪತ್ತು ಸಹಾಯ ಮಾಡಬಾರದೂಂತ ಬರೆದಿದೆಯೇ ನಿಮ್ಮ ಧರ್ಮಶಾಸ್ತ್ರದಲ್ಲಿ?”

ನಂಜಮ್ಮನ ಈ ಪ್ರಶ್ನೆಗೆ ಪುರೋಹಿತರಿಬ್ಬರೂ ತಬ್ಬಿಬ್ಬಾಗುತ್ತಾರೆ. ಆದರೆ ಬಹಿಷ್ಕಾರ ತಪ್ಪುವುದಿಲ್ಲ. “ಅರಮನೆ ಎದುರಿಸಿ ಬದುಕಬಹುದು, ಗುರುಮನೆ ಬಹಿಷ್ಕಾರ ಹಾಕಿದ್ರೆ ಬದುಕೂ ಹಾಗಿಲ್ಲ ತಿಳ್ಕೊ” ಎಂದು ಪುರೋಹಿತರು ಹೇಳಿದಾಗ ನಂಜಮ್ಮನಿಗೆ ಅವಮಾನವೆನ್ನಿಸುತ್ತದೆಯೇ ಹೊರತು ಭಯವಾಗುವುದಿಲ್ಲ. ಮುಂದೆ ಇದೇ ಪುರೋಹಿತರು ಗಂಗಮ್ಮನಿಂದ ತಪ್ಪು ದಂಡ ಕಟ್ಟಿಸಿಕೊಂಡು ಚೆನ್ನಿಗರಾಯನನ್ನು ಒಳಗೆ ಸೇರಿಸಿ ನಂಜಮ್ಮ ಒಬ್ಬಳನ್ನೇ ಬಹಿಷ್ಕಾರದಲ್ಲಿ ಇಟ್ಟಾಗಲೂ ನಂಜಮ್ಮನಿಗೆ ದುಃಖಕ್ಕಿಂತ ಹೆಚ್ಚಾಗಿ ಉಂಟಾಗುವುದು ತಿರಸ್ಕಾರ.

ಯಾವ ಪುರೋಹಿತರು ಶೃಂಗೇರಿ ಮಠದ ಹೆಸರು ಹೇಳಿ ತನಗೆ ಬಹಿಷ್ಕಾರ ಹಾಕಿದರೋ ಅದೇ ಪುರೋಹಿತರು ಕಂಡೇ ಇರದ ಶೃಂಗೇರಿಗೂ ಯಾತ್ರೆ ಕೈಗೊಂಡು ಬರುವ ನಂಜಮ್ಮ, ಮುಂದೆ ಮಗಳ ಮದುವೆ ವೇಳೆಗೆ ಇದೇ ಪುರೋಹಿತರನ್ನು ಮದುವೆ ನಡೆಸಿಕೊಡಲು ಹೇಳಿದಾಗ, ಅವಳು ತಮಗೆ ಹೇಳಿದ್ದೇ ದೊಡ್ಡ ಉಪಕಾರ ಎಂದುಕೊಂಡವರಂತೆ ಓಡೋಡಿ ಬರುತ್ತಾರೆ ಇಬ್ಬರೂ.

~

ದ್ವೇಷ ಸಾಧಿಸುವುದು ನಂಜಮ್ಮನ ಸ್ವಭಾವವೇ ಅಲ್ಲ. ಗಂಗಮ್ಮ ತನ್ನನ್ನು ಅದೆಷ್ಟೇ ಆಡಿಕೊಂಡರೂ ಅವಳಿಗೆ ಊಟಕ್ಕಿಲ್ಲ ಎಂದು ಗೊತ್ತಾದಾಗ ನೊಂದುಕೊಳ್ಳುವ ಹೆಣ್ಣು ಆಕೆ. ಪಟೇಲ ಶಿವೇಗೌಡನ ದರ್ಪಕ್ಕೆ ಮಾತ್ರ ಬಗ್ಗುವುದಿಲ್ಲ ಆಕೆ. ಗಂಡನಿಗೆ ನ್ಯಾಯಯುತವಾಗಿ ಬರಬೇಕಿದ್ದ ಶಾನುಭೋಗಿಕೆಯನ್ನು ಕೊಡಲು ಆತ ಸತಾಯಿಸುತ್ತಿದ್ದಾಗ ತಂದೆ ಕಂಠಿಜೋಯಿಸರಿಗೆ ಹೇಳಿ ಕೊಡಿಸುತ್ತಾಳೆ. ಆದರೆ ಶಿವೇಗೌಡನಿಗೆ ಆಧಾರಕ್ಕೆ ಗಂಗಮ್ಮ ಬರೆದುಕೊಟ್ಟಿದ್ದ ಜಮೀನನ್ನು ಉಳಿಸಿಕೊಳ್ಳುವುದು ಮಾತ್ರ ಗಂಡ ಮತ್ತು ಅತ್ತೆಯ ಅವಿವೇಕದಿಂದಾಗಿ ಸಾಧ್ಯವಾಗುವುದೇ ಇಲ್ಲ. ಆ ಜಮೀನು ಕಂಡವರ ಪಾಲಾಗಬಾರದೆಂಬ ನಂಜಮ್ಮನ ಕಳಕಳಿ ಗಂಗಮ್ಮನಿಗಾಗಲಿ, ಚೆನ್ನಿಗರಾಯನಿಗಾಗಲಿ ಅರ್ಥವಾಗುವುದೇ ಇಲ್ಲ. ಜಮೀನು, ಮನೆ ಕಳೆದುಕೊಂಡು ಹನುಮಂತರಾಯನ ಗುಡಿಯಲ್ಲಿ ಆಶ್ರಯ ಪಡೆಯುವ ಅವರ ಸ್ಥಿತಿ ಕಂಡು ಕೊರಗುತ್ತಾಳೆ.

ಶುರುವಿನಲ್ಲೊಮ್ಮೆ ತನ್ನನ್ನು ಕಾಲಿನಿಂದ ಒದೆದ ಮೈದುನ ಅಪ್ಪಣ್ಣಯ್ಯನ ಬಗ್ಗೆಯೂ ಯಾವತ್ತೂ ಅಗೌರವ ತೋರಿದವಳಲ್ಲ ನಂಜಮ್ಮ. ಅವನ ಸಂಸಾರವೂ ಚೆನ್ನಾಗಿರಲಿ ಎಂದು ಹಂಬಲಿಸಿ ಪ್ರಯತ್ನಪಟ್ಟು ಸ್ವತಃ ಕಷ್ಟ ತಂದುಕೊಂಡವಳು. ಅವಳ ಇಂಥ ಗುಣವೇ ಕಡೇಪಕ್ಷ ಅಪ್ಪಣ್ಣಯ್ಯನಾದರೂ ಸ್ವಲ್ಪ ಬದಲಾಗಲು ಕಾರಣವಾಗುತ್ತದೆ. ಅತ್ತಿಗೆ ಎಂದರೆ ಭಯ, ಗೌರವ ತೋರಿಸತೊಡಗುತ್ತಾನೆ. ಹೆಂಡತಿ ಸಾತು ತನ್ನ ಊರಲ್ಲೇ ಯಾವುದೋ ಸಾಹುಕಾರನನ್ನು ಇಟ್ಟುಕೊಂಡು ಗತ್ತಿನಿಂದ ಬದುಕುತ್ತಿರುವುದು ಗೊತ್ತಾದಾಗ ತೀರಾ ಏಕಾಂಗಿಯಂತಾಗಿ ಕಡೆಗೆ ಗಂಡ ಬಿಟ್ಟ ಹೆಣ್ಣು ನರಸಿಯ ಮನೆಗೂ ಹೋಗಲು ಶುರುಮಾಡಿದಾಗ, ಜನರ ಬಾಯಿ ಕೆಟ್ಟದಿರುತ್ತದೆ, ಆ ಕಡೆ ಹೋಗಬೇಡಿ ಎಂಬ ನಂಜಮ್ಮನ ಒಂದೇ ಒಂದು ಮಾತಿನಿಂದಲೇ ಅದನ್ನು ನಿಲ್ಲಿಸಿಬಿಡುತ್ತಾನೆ. ಅತ್ತೆ ಗಂಗಮ್ಮ ಕೂಡ ಒಂದು ಹಂತದಲ್ಲಿ ಸೊಸೆಯ ಸೇವೆಗೆ ಬಂದು ನಿಲ್ಲುತ್ತಾಳೆ.

ಮಾದೇವಯ್ಯನವರು, ತಿಮ್ಮಾಪುರದ ಶಾನುಭೋಗ ದೇವರಸಯ್ಯ, ಕುರುಬರಹಳ್ಳಿ ಪಟೇಲ ಗುಂಡೇಗೌಡರು, ಸೂರಪ್ಪ ಮೇಷ್ಟ್ರು ಹೀಗೆ ಒಳ್ಳೆಯ ಮನಸುಳ್ಳವರ ಒಂದು ಸಮೂಹವೇ ನಂಜಮ್ಮನ ಬೆನ್ನಿಗಿದ್ದು ಕಾಯುತ್ತದೆ. ಅವಳ ಕಷ್ಟದ, ದುರಂತದ ದಿನಗಳಲ್ಲಿ ಅವಳೊಳಗೆ ಬದುಕಿನ ಕಡೆಗಿನ ತೀವ್ರತೆಯ ಸೆಲೆ ಬತ್ತದಂತೆ ಕಾಯುವುದು ಇಂಥ ಮಂದಿಯೇ. ಹಾಗೆಂದು ಅದು ಸಿಂಪಥಿಯಲ್ಲ. ಬದಲಿಗೆ, ನಂಜಮ್ಮನ ಗಟ್ಟಿತನಕ್ಕೆ ಸಂದ ಗೌರವ.

~

ಮಾತುಮಾತಲ್ಲೂ ಹಾದರವನ್ನೇ ಆರೋಪಿಸುವ ಅತ್ತೆ, ಯೋಗ್ಯತೆಯೇ ಇಲ್ಲದ ಗಂಡ, ಸಿಕ್ಕಿದರೆ ಕಿತ್ತುತಿಂದುಬಿಡುವ ಹದ್ದುಗಳಂತೆ ಕಾದಿದ್ದ ಪಟೇಲ ಶಿವೇಗೌಡನಂಥವರು ಇವರೆಲ್ಲರ ನಡುವೆಯಿದ್ದೂ ಅಂಜದ, ಜೀವನದ ಹಕ್ಕನ್ನು ಹೆಜ್ಜೆ ಹೆಜ್ಜೆಯಲ್ಲೂ ಸ್ಥಾಪಿಸಿಕೊಳ್ಳುವವಳಂತೆ ನಡೆದ ನಂಜಮ್ಮ ಮೊದಲ ಬಾರಿಗೆ ತಲ್ಲಣಿಸುವುದು ಹಿರಿಯ ಮಕ್ಕಳಿಬ್ಬರೂ ಒಮ್ಮೆಲೆ ಪ್ಲೇಗಿಗೆ ಬಲಿಯಾದಾಗ. ಅಣ್ನನಿಗೇ ಮದುವೆ ಮಾಡಿಕೊಡಬೇಕೆಂಬ ತಂದೆ ಕಂಠೀ ಜೋಯೀಸರ ಪ್ರಸ್ತಾಪ ವಿರೋಧಿಸಿ ಬೇರೊಂದು ಒಳ್ಳೆಯ ಸಂಬಂಧಕ್ಕೆ ಮದುವೆ ಮಾಡಿಕೊಟ್ಟು ಧನ್ಯಳಾದೆ ಎಂದುಕೊಳ್ಳುವ ಹೊತ್ತಿಗೇ ಪ್ಲೇಗು ಆ ಮಗಳು ಪಾರ್ವತಿಯನ್ನು ನುಂಗಿಬಿಡುತ್ತದೆ. ಅವಳ ಜೊತೆಗೇ ಪ್ಲೆಗಿಗೆ ತುತ್ತಾದ ಸ್ಕೂಲಿನಲ್ಲಿ ಚುರುಕಾಗಿದ್ದ ಮಗ ರಾಮಣ್ಣ ಕೂಡ ಅಕ್ಕನ ಸಾವಿನ ಬೆನ್ನಲ್ಲೇ ಮಣ್ಣು ಸೇರುತ್ತಾನೆ. ಅವನನ್ನು ಅಮಲ್ದಾರನನ್ನಾಗಿ ಮಾಡುವ ಕನಸು ಕಟ್ಟಿದ್ದ ನಂಜಮ್ಮ ಎಷ್ಟು ಹತಾಶಳಾಗಿಬಿಟ್ಟಳೆಂದರೆ, ಕಿರಿಯ ಮಗ ವಿಶ್ವನೀಗೂ ಪ್ಲೇಗು ಬಂದಾಗ, ತಾನು ಮಾತನಾಡಿಸುವುದಕ್ಕೂ ಇಷ್ಟಪಡದ ನರಸಿಯ ಬಳಿ ನೀನೇ ಸಾಕಿಕೊ ಎಂದು ಹೇಳಿಬಿಡುತ್ತಾಳೆ. ಹೊಳೆಗೆ ಹಾರಿ ಸಾಯಲು ಯೋಚಿಸುವ ಅವಳನ್ನು ಆ ಹೊತ್ತಿಗೆ ತಡೆಯುವುದು ಮಾತ್ರ ಅದೇ ಕಿರಿಯ ಮಗ ವಿಶ್ವನ ಬಗೆಗಿನ ಚಿಂತೆ. ಕಡೆಗೂ ವಿಶ್ವ ಸಾವಿನಿಂದ ಪಾರಾಗುತ್ತಾನೆ. ಕೊನೆಯಲ್ಲಿ ತನಗೇ ಪ್ಲೇಗು ಬಂದು ಇನ್ನು ಸಾಯುತ್ತೇನೆ ಎನ್ನಿಸಿದಾಗ, ತವರಿನಲ್ಲಿ ಅಣ್ನ ಕಲ್ಲೇಶನ ಮನೆಯಲ್ಲಿ ಇರುವ ವಿಶ್ವನನ್ನು ನೋಡಬೇಕೆಂಬ ಆಸೆಯಾದರೂ ಅವನನ್ನು ಊರಿಗೆ ಕರೆಯುವುದು ಬೇಡವೆನ್ನುತ್ತಾಳೆ. ಅವನಾದರೂ ಬದುಕಿಕೊಳ್ಳಲಿ ಎಂಬ ಮನಸ್ಸು.

ವಿಶ್ವನನ್ನು ಅವಳು ತನ್ನಣ್ಣನ ಮನೆಯಲ್ಲಿರಲು ಕಳಿಸಿದ್ದು ಕೂಡ ಅವನ ಜೀವಕ್ಕೆ ಅಪಾಯವಾಗಬಾರದು ಎಂದೇ. ಸ್ಕೂಲಿನಿಂದ ಬರುವಾಗ ದಾರಿಯಲ್ಲಿ ಹಾವಿಗೆ ಹೊಡೆದು ಅದು ತಪ್ಪಿಸಿಕೊಂಡಿದ್ದರಿಂದ, ಯಾವತ್ತಿದ್ದರು ಅದು ಅಪಾಯವುಂಟು ಮಾಡೀತು ಎಂದೇ ಜೊತೆಗಿದ್ದ ಒಬ್ಬನೇ ಮಗನನ್ನು ಕಳಿಸಲು ಇಷ್ಟವಿಲ್ಲದಿದ್ದರೂ ಕಳಿಸಿದ್ದು.

ಹೀಗೆ ಉದ್ದಕ್ಕೂ ಅವಳಲ್ಲಿ ಕಾಣುವುದು ಬದುಕಿನ ಕುರಿತ ತಹತಹ. ಬದುಕಬೇಕು ಎಂಬ ಓಟ. ಬದುಕನ್ನು ಹೇಗಾದರೂ ಮೊಗೆದುಕೊಳ್ಳುತ್ತೇನೆ ಎಂಬ ಛಲ. ಅವಳು ಆದರ್ಶ ನಾರಿ ಎಂಬ ಹಣೆಪಟ್ಟಿ ಹೊರಬೇಕೆಂದುಕೊಂಡವಳಲ್ಲ. ಉದಾತ್ತವಾಗಿರುತ್ತೇನೆ ಎಂದುಕೊಂಡವಳೂ ಅಲ್ಲ. ಶಾನುಭೋಗಿಕೆಯಲ್ಲಿ ತಮಗೂ ಪಾಲಿದೆ ಎಂದು ಅಪ್ಪಣ್ಣಯ್ಯ ಮತ್ತು ಅವನ ಹೆಂಡತಿ ಜಗಳಕ್ಕೆ ಬಂದಾಗ ಜಿದ್ದಿಗೆ ಬಿದ್ದವಳಂತೆ ಅದನ್ನು ವಿರೋಧಿಸಿದವಳು. ಕಾನೂನಿನಲ್ಲಿ ಕೂಡ ಅಂಥ ಪಾಲುದಾರಿಕೆ ಮಾತು ಬರುವುದಿಲ್ಲ ಎಂಬುದು ಖಾತ್ರಿಯಾದಾಗಲೇ ಅವಳೊಳಗೆ ಎದ್ದ ಆತಂಕ ಕರಗಿದ್ದು.

~

ಬದುಕಬೇಕು ಎನ್ನುವುದಷ್ಟೇ ಗೊತ್ತಿದ್ದುದು ನಂಜಮ್ಮನಿಗೆ. ಬದುಕನ್ನು ಅದು ಬಂದ ಬಗೆಯಲ್ಲೇ ಪ್ರೀತಿಸಿದವಳು ಆಕೆ. ಆದರ್ಶ, ಉದಾತ್ತತೆ ಎಂಬೆಲ್ಲ ಭ್ರಮೆಗಳಾಚೆಗಿನ ಸರಳ ತಿಳಿವಳಿಕೆಯೇ ಅವಳ ತಾಕತ್ತು. ಆ ಸರಳ ತಿಳಿವಿನ ದಾರಿಯಲ್ಲಿ ಸೋಲು ಗೆಲುವು ಎರಡನ್ನೂ ಕಂಡಳು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಹಲವು ನೆಲೆ ಮತ್ತು ಹಂತಗಳಲ್ಲಿ ತನ್ನ ಆಯ್ಕೆಯನ್ನು ತಾನೇ ನಿರ್ಧರಿಸಿದ್ದಳು ನಂಜಮ್ಮ. ಇವತ್ತು ನಾವು “ಬೋಲ್ಡ್” ಎಂದು ಯಾವುದನ್ನು ಬಣ್ಣಿಸುತ್ತೇವೆಯೋ ಅಂಥ ದಾರಿಯಲ್ಲಿ ನಡೆದುಹೋದ ಗಟ್ಟಿಗಿತ್ತಿ ಅವಳು.

Share

Leave a comment

Your email address will not be published. Required fields are marked *

Recent Posts More

 • 1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 2 weeks ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 2 weeks ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  4 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...