Share

ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು
ಕನೆಕ್ಟ್ ಕನ್ನಡ

ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.

 

ನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ದೋಣಿಯ ಹಾಗೆ ಒಂಟಿಯೆಂದರೆ ಒಂಟಿಯಾಗಿ ಪತರುಗುಡಬೇಕಾಗುತ್ತದೆ ಎಂಬುದಕ್ಕೆ ಅಸಾರಾಂ ಎಂಬ (ಅವನಿಗೆ ‘ಬಾಪು’ ಎಂದು ತುದಿಯಲ್ಲೊಂದು ಹೆಸರು ಬೇರೆ ಕೇಡು!) ಸ್ವಯಂಘೋಷಿತ ದೇವಮಾನವ ಮಾಡಿದ ಅನಾಚಾರ ಎಂಥದಾಗಿತ್ತು ಎಂದು ಈ ಲೋಕಕ್ಕೆ ಕಾಣಿಸಿದ ಆ 16 ವರ್ಷದ ಬಾಲಕಿ ಮತ್ತವಳ ಕುಟುಂಬವೇ ಸಾಕ್ಷಿ. ಮತ್ತು ಇಂಥದೊಂದು ಬಹುದೊಡ್ಡ ಯುದ್ಧಕ್ಕೆ ಅವರು ನಿರ್ಧರಿಸಿಬಿಡುವಾಗ ಅವರಿಗೆ ಗೊತ್ತಿತ್ತು, ತಾವೆಲ್ಲ ಪ್ರಾಣವನ್ನೇ ಪಣವಾಗಿಡುತ್ತಿದ್ದೇವೆ ಎಂಬುದು.

ಐದು ವರ್ಷಗಳ ಬಳಿಕ ಈ ಯುದ್ಧದಲ್ಲಿ ಗೆಲುವು ಕಂಡಾಗಲೂ, ಅವರನ್ನು ಕಾಡುತ್ತಿರುವುದು ಆ ಐದು ವರ್ಷಗಳು ಅದೆಂಥ ತಲ್ಲಣದಲ್ಲಿ ಬೇಯಿಸಿಹಾಕಿದವಲ್ಲ ಎಂಬುದೇ. ನಿರಂತರ ಬೆದರಿಕೆಗಳು, ಹೊರಹೋದರೆ ಎಲ್ಲಿ ಜೀವವನ್ನೇ ಕಳೆದುಕೊಳ್ಳಬೇಕಾಗುವುದೋ ಎಂಬ ಆತಂಕ, ದೂರ ಸರಿದ ಬಂಧುಬಳಗ ಮತ್ತು ಸಂಬಂಧಿಗಳು, ಕಣ್ಣಿಗೇ ಕಾಣಿಸಿಕೊಳ್ಳದೆ ಹೋದ ಗೆಳೆಯರು… ತಮ್ಮದು ಏಕಾಂಗಿ ಹೋರಾಟ ಎಂಬ ಕಟುಸತ್ಯ ಕೆಲವೇ ದಿನಗಳಲ್ಲಿ ಅವರಿಗೆ ತಿಳಿದುಬಿಟ್ಟಿತ್ತು.

ಜೋಧ್ಪುರದ ಅಸಾರಾಂ ಆಶ್ರಮದಿಂದ ಮನೆಗೆ ಮರಳಿದ್ದ ದಿವಸ (2013ರ ಆಗಸ್ಟ್ 18) ಮಗಳು ಪ್ರಾರ್ಥನೆಯನ್ನಾಗಲೀ ತಾವು ಬಾಪು ಎಂದು ಕರೆಯುತ್ತಿದ್ದ ಆ ದೊಡ್ಡ ಮನುಷ್ಯನ ಹೆಸರಿನ ಪಠಣೆಯನ್ನಾಗಲೀ ಮಾಡದಿದ್ದುದನ್ನು, ಊಟಕ್ಕೂ ಮನಸ್ಸಿಲ್ಲದವಳಂತೆಯೂ ಹೆಚ್ಚು ಮಾತೂ ಆಡದೆಯೂ ಇದ್ದುದನ್ನು ಗಮನಿಸಿದ್ದ ತಾಯಿ ಅದಾದ ಮೂರು ದಿನಗಳ ಬಳಿಕ ಮಗಳನ್ನು ಕೇಳುತ್ತಾಳೆ, ಯಾಕೆ ಮಗಳೆ ಹೀಗೆ ಎಂದು?

‘ಹೇಗೆ ಮಾಡಲಮ್ಮ? ಅವನೊಬ್ಬ ವಂಚಕ, ಬದ್ಮಾಷ್. ಅವನು ನನಗೇನು ಮಾಡಿದ ಅನ್ನುವುದು ನಿಮಗೆ ಗೊತ್ತಿಲ್ಲ.’ ಇಷ್ಟು ಹೇಳಿದವಳ ದುಃಖ ಕಟ್ಟೆಯೊಡೆಯುತ್ತದೆ. ಆ ಹೊತ್ತಲ್ಲಿ ಪಕ್ಕದ ಕೋಣೆಯಲ್ಲಿ 11 ವರ್ಷಗಳಿಂದ ತಾವು ಪೂಜಿಸಿಕೊಂಡು ಬಂದಿದ್ದ ಅದೇ ದೊಡ್ಡ ಮನುಷ್ಯನ ಚಿತ್ರದೆದುರು ಆರತಿಯೆತ್ತುತ್ತಿದ್ದ ಆ 16ರ ಬಾಲೆಯ ತಂದೆ ಸಿಡಿಲೆರಗಿದಂಥ ಅನುಭವಕ್ಕೆ ಸಿಕ್ಕು ತತ್ತರಿಸಿಬಿಡುತ್ತಾರೆ. ಆ ತಂದೆಗೆ ಆಗ 51 ವರ್ಷ.

ಒಂದು ಯುದ್ಧಕ್ಕೆ ಸಜ್ಜಾಗುವ ನಿರ್ಧಾರವನ್ನು ತೆಗೆದುಕೊಂಡೇಬಿಡುತ್ತದೆ ಆ ಪುಟ್ಟ ಕುಟುಂಬ. ಮರುದಿನವೇ ಆ ಹುಡುಗಿ ಮತ್ತು ಅಪ್ಪ ಅಮ್ಮ ಉತ್ತರಪ್ರದೇಶದ ಶಹಜಾನ್ ಪುರದ ತಮ್ಮ ಮನೆಯಿಂದ ದೆಹಲಿಯತ್ತ ಹೊರಡುತ್ತಾರೆ. ದೇಶ, ಹೊರದೇಶಗಳಲ್ಲಿ 400ಕ್ಕೂ ಹೆಚ್ಚು ಆಶ್ರಮಗಳನ್ನು ಹೊಂದಿದ್ದ 10 ಸಾವಿರ ಕೋಟಿಗಳ ಅಧ್ಯಾತ್ಮ ಸಾಮ್ರಾಜ್ಯದ ಒಡೆಯನನ್ನು ‘ಏನಪ್ಪಾ ದೊಡ್ಡ ಮನುಷ್ಯನೆ, ಹೀಗೆಲ್ಲ ಮಾಡಬಹುದಾ ನೀನು?’ ಎಂದು ಕೇಳಬೇಕಿರುತ್ತದೆ ಅವರಿಗೆ.

ಆ ಕುಟುಂಬ ದೆಹಲಿ ಮುಟ್ಟಿದಾಗ, ರಾಮ್ ಲೀಲಾ ಮೈದಾನದಲ್ಲಿ ತನ್ನ ಸತ್ಸಂಗವನ್ನು ಕೊನೆಗೊಳಿಸುವ ಹಂತದಲ್ಲಿರುತ್ತಾನೆ ಅಸಾರಾಂ. ಎಂದಿನಂತೆ ಅನುಯಾಯಿಗಳ ಸಮೂಹದ ಮಧ್ಯೆ ಕಂಗೊಳಿಸುತ್ತಿರುತ್ತಾನೆ. ಅವನ ಒಂದು ಮಾತಿಗಾಗಿ ಹೀಗೆ ಮುಗಿಬೀಳುವ ಈ ಮಂದಿಯ ಮಧ್ಯೆ ನೀನು ಹೋಗಿ ಆ ಮನುಷ್ಯನ ಮೇಲೆ ಆರೋಪ ಹೊರಿಸುವುದು ಸಾಧ್ಯವೇನಪ್ಪಾ ಎಂದು ಕೇಳುವ ಮಗಳು, ಸೀದಾ ಪೊಲೀಸ್ ಸ್ಟೇಷನ್ನಿಗೆ ಹೋಗೋಣವೆನ್ನುತ್ತಾಳೆ.

ಪೊಲೀಸ್ ಅಧಿಕಾರಿಣಿಗೆ ಹುಡುಗಿಯ ದೂರಿನಲ್ಲಿರುವ ಹೆಸರಿನ ಬಗ್ಗೆ ನಂಬಿಕೆಯೇ ಬರುವುದಿಲ್ಲ. ಈ ಅಸಾರಾಂ ಬಗ್ಗೆಯಾ ನೀನು ಹೇಳುತ್ತಿರುವುದು ಎಂದು ರಾಮ್ ಲೀಲಾ ಮೈದಾನದ ಕಡೆಗೆ ಬೆರಳು ಮಾಡಿ ಕೇಳಿ ಮತ್ತೊಮ್ಮೆ ಖಚಿತಪಡಿಸಿಕೊಳ್ಳುತ್ತಾರೆ. ‘ದೇವಮಾನವ’ ಅತ್ಯಾಚಾರಿ ಎಂದು ನಂಬುವುದಕ್ಕೇ ಮೊದಲು ನಿರಾಕರಿಸುವ ಪೊಲೀಸರು, ಕಡೆಗೆ ಜೋಧ್ಪುರದಲ್ಲಿ ಆದುದಕ್ಕೆ ಇಲ್ಲೇಕೆ ದೂರು ದಾಖಲಿಸಿಕೊಳ್ಳೋಣ ಎಂದು ತಕರಾರೆತ್ತುತ್ತಾರೆ. ಆದರೆ ಹುಡುಗಿಯ ಅಚಲ ನಿಲುವಿನ ಮುಂದೆ ಮಣಿಯುವ ಪೊಲೀಸರು ಕೇಸು ದಾಖಲಿಸಿಕೊಳ್ಳಬೇಕಾಗುತ್ತದೆ. ಕಡೆಗೆ ಅದು ಜೋಧ್ಪುರ ಪೊಲೀಸರಿಗೆ ವರ್ಗಾವಣೆಯಾಗುತ್ತದೆ.

ಅದಾಗಿ ನಾಲ್ಕೂವರೆ ವರ್ಷಗಳ ಬಳಿಕ ಮೊನ್ನೆ ಏಪ್ರಿಲ್ 25ರಂದು 77 ವರ್ಷದ ಅಸಾರಾಂಗೆ ಜೀವಾವಧಿ ಕಾರಾಗೃಹ ಶಿಕ್ಷೆಯನ್ನು ಘೋಷಿಸಿತು ಜೋಧ್ಪುರ ನ್ಯಾಯಾಲಯ. ಆದರೆ ಈ ಅವಧಿಯಲ್ಲಿ, ಈಗ 21 ವರ್ಷದವಳಾಗಿರುವ ಆ ಹುಡುಗಿ ಮತ್ತವಳ ಕುಟುಂಬದ ಪಾಲಿಗೆ ಸಂದರ್ಭ ಸುಲಭದ್ದಾಗಿರಲಿಲ್ಲ.

ಅದೇ ಮೊದಲ ಬಾರಿಗೆ ಆ ಹುಡುಗಿ ಮತ್ತವಳ ತಂದೆ ಪೊಲೀಸ್ ಠಾಣೆಯೊಳಗೆ ಹೋಗಬೇಕಾಗಿ ಬಂದಿತ್ತು. ವ್ಯವಸ್ಥೆ ಹೇಗೆಲ್ಲಾ ಇರುತ್ತದೆ ಎಂಬುದರ ಮರ್ಮ ಗೊತ್ತಿರಲಿಲ್ಲ. ಮಾತ್ರವಲ್ಲ, ಒಬ್ಬ ಮಗಳ ತಂದೆಯ ಮನಸ್ಸು ದ್ವಂದ್ವದಲ್ಲಿ ಹೊಯ್ದಾಡುತ್ತಿತ್ತು. ಮಗಳಿಗೆ ಅನ್ಯಾಯ ಮಾಡಿದವನಿಗೆ ಶಿಕ್ಷೆಯಾಗಬೇಕೆಂದು ಬಯಸುವಾಗಲೇ, ಮಗಳ ಭವಿಷ್ಯದ ಬಗ್ಗೆಯೂ ಯೋಚಿಸಬೇಕಾದ ಅನಿವಾರ್ಯತೆಯಿತ್ತು. ಹಾಗಾಗಿಯೇ ದೂರು ದಾಖಲಿಸಿ ಹತ್ತು ದಿನ ಕಳೆದರೂ ಅದನ್ನು ಎಲ್ಲಿಯೂ ಬಹಿರಂಗಗೊಳಿಸುವ ಸ್ಥಿತಿಯಲ್ಲಿರಲಿಲ್ಲ ಆ ತಂದೆ. ಆದರೆ ಯಾವುದು ಆಗಬಾರದೆಂದು ಅಂದುಕೊಂಡಿದ್ದಿತ್ತೋ ಅದೇ ಆಗತೊಡಗಿತ್ತು. ಅಸಾರಾಂನ ಮಂದಿ ತಂದೆ ಮಗಳ ತೇಜೋವಧೆ ಮಾಡಲು ಎಲ್ಲ ದಾರಿಗಳನ್ನೂ ಬಳಸತೊಡಗಿತು. ಆ ಹುಡುಗಿಗೆ ಮಾನಸಿಕ ಅಸ್ವಸ್ಥೆ ಪಟ್ಟವನ್ನೂ ಕಟ್ಟಿತು. ಕಡೆಗೆ ಎಲ್ಲವನ್ನೂ ಈ ಸಮಾಜದೆದುರು ಹೇಳಿಕೊಳ್ಳಲೇಬೇಕಾಯಿತು ಆಕೆಯ ಕುಟುಂಬ. 2013ರ ಆಗಸ್ಟ್ 31ರಂದು ಅಸಾರಾಂನನ್ನು ಪೊಲೀಸರು ಬಂಧಿಸಿದರು.

ಇದಾದ ಮೇಲೆ ಇನ್ನಷ್ಟು ಬಿಗಡಾಯಿಸಿತ್ತು ಪರಿಸ್ಥಿತಿ. ವಿಚಾರಣೆ ಪ್ರಕ್ರಿಯೆ ನಡೆಯುತ್ತಿದ್ದ ಹೊತ್ತಲ್ಲಿ 2014ರ ಮೇನಲ್ಲಿ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಮತ್ತು ಅಸಾರಾಂ ಸಹಾಯಕ ಅಮೃತ್ ಪ್ರಜಾಪತಿಗೆ ಗುಂಡಿಕ್ಕಲಾಯಿತು. ಆತ ಜೂನ್ ನಲ್ಲಿ ತೀರಿಕೊಂಡ. 2015ರ ಫೆಬ್ರವರಿಯಲ್ಲಿ ಮತ್ತೊಬ್ಬ ಸಾಕ್ಷಿ ರಾಹುಲ್ ಸಚನ್ ಗೆ ಕೋರ್ಟಿನ ಹೊರಗಡೆ ಚೂರಿಯಿಂದ ಇರಿಯಲಾಯಿತು. ಆತ ಅದೇ ನವೆಂಬರ್ ನಲ್ಲಿ ನಾಪತ್ತೆಯಾದ. 2015ರ ಮೇನಲ್ಲಿಯೇ ಈ ಮುಂಚೆ ಅಸಾರಾಂ ಆಶ್ರಮದಲ್ಲಿ ಕೆಲಸ ಮಾಡಿದ್ದ ಮತ್ತು ಈ ಪ್ರಕರಣದಲ್ಲಿ ಸಾಕ್ಷ್ಯ ಹೇಳಬೇಕಿದ್ದ ಮಹೇಂದ್ರ ಚಾವ್ಲಾನನ್ನು ಆತನ ಮನೆಯಲ್ಲಿಯೇ ಗುಂಡಿಕ್ಕಿ ಕೊಲ್ಲಲಾಯಿತು. ಇನ್ನೊಂದೆಡೆ ಹುಡುಗಿಯ ಶಿಕ್ಷಕಿ, ಪ್ರಿನ್ಸಿಪಾಲ್, ತನಿಖೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಹುಡುಗಿಯ ತಂದೆಗೆ ಬೆದರಿಕೆಗಳು ಬರುತ್ತಲೇ ಇದ್ದವು. ತಂದೆ ವಿರುದ್ಧ ಏನೇನೋ ಸುಳ್ಳು ಕೇಸುಗಳನ್ನು ಹಾಕುತ್ತ ಬಳಲಿಸುವ ಯತ್ನಗಳೂ ನಡೆದವು. ಇವೆಲ್ಲದರ ನಡುವೆಯೇ ಆ ಕುಟುಂಬವನ್ನು ಅಸಹನೀಯ ಒಬ್ಬಂಟಿತನ ಮುತ್ತಿಕೊಂಡಿತ್ತು.

ಅವೆಂಥ ದಿನಗಳೆಂದರೆ, ಅದೆಷ್ಟೋ ಸಲ ಆ ಬಾಲೆಯ ತಂದೆ ಅತ್ಯಂತ ದಾರುಣವೆನ್ನಿಸುವ ಅಸಹಾಯಕ ಭಾವನೆಯಲ್ಲಿ ಅತ್ತುಬಿಡುತ್ತಿದ್ದುದಿತ್ತು. ಆಗ ಮಗಳೇ ತಂದೆಯನ್ನು ಬಿಗಿದಪ್ಪಿಕೊಂಡು ಸಮಾಧಾನಿಸಬೇಕಿತ್ತು. ಈ ಯುದ್ಧದಲ್ಲಿ ನಾವೇ ಗೆಲ್ಲುತ್ತೇವಪ್ಪ ಎಂದು ಧೈರ್ಯ ತುಂಬಬೇಕಿತ್ತು. ಅದೆಷ್ಟೋ ಸಲ ಆಕೆ ತನ್ನ ಕೋಣೆ ಸೇರಿಕೊಂಡು ಮಾತಿಲ್ಲದೆ ಕಳೆದುಬಿಡುತ್ತಿದ್ದಳು. ಆಗ ಅವಳ ಅಪ್ಪ ಅಮ್ಮನೇ ಅವಳ ಮನಸ್ಸು ಹಗುರಾಗುವಂತೆ ಮಾಡಬೇಕಿತ್ತು.

ನ್ಯಾಯಾಲಯದಲ್ಲಿ ಗೆಲುವು ಸಿಕ್ಕ ಬಳಿಕ ಶಹಜಾನ್ ಪುರದ ಮನೆಯಲ್ಲಿ ಆ ಕುಟುಂಬವನ್ನು ‘ಲೈವ್ ಮಿಂಟ್’ ಮಾತನಾಡಿಸಿದಾಗ ಹೊರಬಿದ್ದ ನೋವಿನ ಕಥೆ ಇದು. ‘ಅಸಾರಾಂ ಜೈಲುಪಾಲಾಗಿದ್ದಾನೆ ಎಂದು ಜನ ಹೇಳುತ್ತಾರೆ. ಆದರೆ ನಾನವರಿಗೆ ಹೇಳುತ್ತೇನೆ, ನಾವು ಜೈಲಲ್ಲಿದ್ದೇವೆ. ನನ್ನ ಮಗಳು ಕಳೆದೈದು ವರ್ಷಗಳಿಂದ ಜೈಲಿನಲ್ಲಿದ್ದಾಳೆ.’ ಎನ್ನುವಾಗಿನ ತಂದೆಯ ಸಂಕಟ ಕರುಳನ್ನೇ ಕತ್ತರಿಸಿಬಿಡುವಂಥದ್ದು.

ಅಸಾರಾಂನ ಮಂದಿಯಿಂದ ಜೀವಬೆದರಿಕೆಯಿದ್ದ ಕಾರಣ, ಈ ಐದು ವರ್ಷಗಳಲ್ಲಿ ಆಕೆ ಕಾಲೇಜು ಪರೀಕ್ಷೆಗಳನ್ನು ಬರೆಯುವುದಕ್ಕೆ ಮತ್ತು ಕೋರ್ಟಿಗೆ ಹಾಜರಾಗುವುದಕ್ಕೆ ಮಾತ್ರವೇ ಮನೆಯಿಂದ ಹೊರಹೋಗುತ್ತಿದ್ದುದು. ತನ್ನ ಕುಟುಂಬದ ಉದ್ಯಮಕ್ಕೆ ನೆರವಾಗಲು ಚಾರ್ಟರ್ಡ್ ಅಕೌಂಟಂಟ್ ಆಗಬೇಕೆಂದುಕೊಂಡಿದ್ದ ಆಕೆಯ ಕನಸೂ ಈಗ ಸೋರಿಹೋಗಿದೆ. ಅವಳೀಗ ದೂರಶಿಕ್ಷಣದ ಮೂಲಕ ಬಿಎ ಮಾಡುತ್ತಿದ್ದಾಳೆ. ಒಬ್ಬ ಯಶಸ್ವೀ ಸಾರಿಗೆ ಉದ್ಯಮಿಯಾಗಿದ್ದ ತಂದೆ ಗಳಿಸಿದ್ದರಲ್ಲಿ ಬಹುಪಾಲನ್ನು ಕಾನೂನು ಹೋರಾಟಕ್ಕೇ ಕಳೆದಿದ್ದರೆ, ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು ಎಂದು ವಿವರಿಸುತ್ತದೆ ವರದಿ.

ಬೆದರಿಕೆಗಳಿಂದ ಕಂಗೆಟ್ಟ ಕುಟುಂಬದ ಮುಂದೆ ಆತಂಕದ ಕರಿಛಾಯೆ ಇನ್ನೂ ಕರಗಿಲ್ಲ. ತನ್ನ ಪಾಡಿಗೆ ತಾನು ಬದುಕಿಕೊಂಡಿದ್ದ ಅಮಾಯಕರ ಪುಟ್ಟ ಗೂಡನ್ನು ಅತ್ಯಾಚಾರಿಯೊಬ್ಬ ಹೇಗೆ ಅಲ್ಲೋಲಕಲ್ಲೋಲ ಮಾಡಿಬಿಟ್ಟನಲ್ಲ.

ಯುದ್ಧ ಎಲ್ಲಿ ಮುಗಿಯುತ್ತದೆ ಹೇಳಿ?

Share

Leave a comment

Your email address will not be published. Required fields are marked *

Recent Posts More

 • 1 month ago No comment

  ಪಂಡಿತರ ಹಳ್ಳಿಯ ‘ಮಂದರಗಿರಿ’

                ಇದು ಪ್ರವಾಸಿಗಳ ಯುಗ. ಹೊಸ ತಲೆಮಾರಿನ ಜನರಿಗೀಗ ಮನೆಯಲ್ಲಿ ಕೂರುವುದೆಂದರೆ ಬಹಳ ಬೇಜಾರಿನ ಸಂಗತಿ. ಆಗೀಗಲಾದರೂ ದೊಡ್ಡ ಅಥವಾ ಸಣ್ಣ ಪ್ರವಾಸಗಳಿಗೆ ಹೋದರೆ ಮನಸ್ಸಿಗೂ ಸುಖ ಎನ್ನುವ ತಲೆಮಾರಿನವರು ಈಗ ಹೆಚ್ಚು ಕಾಣಸಿಗುತ್ತಾರೆ. ಹೆಸರುವಾಸಿ ತಾಣಗಳಲ್ಲಿ ಸದಾ ಜನಜಂಗುಳಿಯಿರುತ್ತದೆ. ದೂರದ ಊರುಗಳೆಂದರೆ ಅದಕ್ಕೆ ತಯಾರಿ ಬೇಕು. ಹಲವು ದಿನಗಳ ಸಿದ್ಧತೆ, ಪ್ರಯಾಣ, ವಿಪರೀತ ಖರ್ಚು ಎಲ್ಲವೂ ಹೌದು. ವಯಸ್ಸಾದವರಿಗೆ ...

 • 3 months ago No comment

  ಬಿಜೆಪಿ ವಿರೋಧಿ ರಂಗ: ಪ್ರತಿಪಕ್ಷ ಸಭೆಯಲ್ಲಿ 20 ಪಕ್ಷಗಳು

  ಆರ್ಬಿಐ ,ಸಿಬಿಐ, ಚುನಾವಣಾ ಆಯೋಗದಂಥ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಭೆಯಲ್ಲಿ ನಾಯಕರು ಕಟುವಾಗಿ ಟೀಕಿಸಿದರು.   ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿಗೆ ಪ್ರತಿಶಕ್ತಿಯನ್ನು ಕಟ್ಟುವ ಯತ್ನವಾಗಿ ನಡೆದ ಪ್ರತಿಪಕ್ಷ ಸಭೆಗೆ 20 ಪಕ್ಷಗಳ ನಾಯಕರು ಹಾಜರಾಗಿದ್ದರು. ಅಷ್ಟೇ ಅಚ್ಚರಿಯ ವಿಚಾರವೆಂದರೆ, ಈ ಸಭೆಗೆ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ)ದಿಂದ ಯಾವುದೇ ಮುಖಂಡರು ಆಗಮಿಸಿರಲಿಲ್ಲ. ಡಿ.10ರಂದು, ಪಂಚರಾಜ್ಯ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ...

 • 3 months ago No comment

  ಅರ್ಧನಾರಿ ಕಥೆಯ ಮತ್ತೆರಡು ಭಾಗಗಳು

  ‘ಮಧೋರುಬಗನ್’ (ಅರ್ಧನಾರಿ) ಎಂಬ ಕಾದಂಬರಿ ಬರೆವ ಮೂಲಕ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಖ್ಯಾತ ತಮಿಳು ಲೇಖಕ ಪೆರುಮಾಳ್ ಮುರುಗನ್ ಈಗ ಆ ಕಾದಂಬರಿಯ ಮತ್ತೆರಡು ಭಾಗಗಳ ಪ್ರಕಟಣೆಯೊಂದಿಗೆ ಸುದ್ದಿಯಾಗಿದ್ದಾರೆ. ಆ ಕಾದಂಬರಿಯ ಕೆಲವು ಭಾಗಗಳು ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡಿವೆ ಎಂದು ಆರೋಪಿಸಿದ್ದ ಬಲಪಂಥೀಯ ಕಾರ್ಯಕರ್ತರು ಹಲ್ಲೆಯೆಸಗಿದಾಗ, ತಮ್ಮ ಬರವಣಿಗೆ ಮೇಲೆ ಸ್ವಯಂ ನಿಷೇಧ ಹೇರಿಕೊಂಡಿದ್ದ ಮುರುಗನ್, ಇದೀಗ ಆ ಕಾದಂಬರಿ ಮುಗಿದಲ್ಲಿಂದಲೇ ಆರಂಭಿಸಿ ಮತ್ತೆರಡು ಭಾಗಗಳನ್ನು ಹೊರತಂದಿದ್ದಾರೆ. ಮೊದಲ ...

 • 3 months ago No comment

  170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್

  ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು.   ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...

 • 3 months ago No comment

  ಅಲೆಗಳಾಗುವ ಹಾಡು

      ಕವಿಸಾಲು         ಕನಸುಗಳ ಜಾತ್ರೆ, ಮನಸುಗಳ ಹಬ್ಬ ಎಲ್ಲ ನಿಶ್ಯಬ್ದ, ಮೌನದಲಿ ಮನ ಬಿಡಿಸಿದ ಮೂರ್ತ ರೂಪಕ್ಕೆ ತದ್ರೂಪು ನಿನ್ನದೇ ಸೊಬಗು ಸುರಿವ ಮಳೆ, ಬೀಸೋ ಗಾಳಿ ಒದ್ದೆಯಾದ ಒಡಲಿನಲಿ ಉರಿವ ನನ್ನೆದೆಯ ಮೇಲೆ ಚಿತ್ತಾರ ಬಿಡಿಸುತ್ತವೆ ನಿನ್ನ ಬೆರಳು ಕರಿಕಪ್ಪು ಚಳಿ ರಾತ್ರಿಯಲಿ ಒಂದಪ್ಪುಗೆಯ ಧ್ಯಾನದಲಿ ಬೆನ್ನ ಸುಳಿ ಸೀಳಿ ಮೇಲೇರುವ ನಡುಕದಲಿ ನಿನ್ನೆದೆಯ ಹರವು ಯಾರೋ, ಯಾವತ್ತೋ ಮರಳ ...


Editor's Wall

 • 08 December 2018
  3 months ago No comment

  170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್

  ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು.   ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...

 • 30 November 2018
  3 months ago No comment

  ರಕ್ಕಸ ವ್ಯೂಹದಲ್ಲಿ ಹೆಣ್ಣಿನ ಹೋರಾಟ

  ಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ತಾಣವೇ ಇಲ್ಲ.    2017ರಲ್ಲಿ ಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ಪರಿಚಿತರಿಂದ ಹತ್ಯೆಯಾದ ಮಹಿಳೆಯರ ಸಂಖ್ಯೆಯೇ 50 ಸಾವಿರ. ಈ ಬೆಚ್ಚಿಬೀಳಿಸುವ ಅಂಕಿಅಂಶವನ್ನು ಬಯಲು ಮಾಡಿರುವುದು ವಿಶ್ವಸಂಸ್ಥೆಯು ಮೊನ್ನೆ ನ.25ರಂದು ಬಿಡುಗಡೆ ಮಾಡಿರುವ ಅಧ್ಯಯನ ವರದಿ. ನವೆಂಬರ್ 25, ...

 • 29 November 2018
  3 months ago No comment

  ರೈತರ ಸಂಕಟಗಳಿಗೆ ಸಿಗುವುದೆ ಮುಕ್ತಿ?

    ಕಳೆದ ವರ್ಷದ ನಾಸಿಕ್-ಮುಂಬಯಿ ಕಿಸಾನ್ ಲಾಂಗ್ ಮಾರ್ಚ್ ಅನ್ನೇ ಪ್ರೇರಣೆಯಾಗಿಟ್ಟುಕೊಂಡು ‘ಸಿಂಗೂರು- ರಾಜಭವನ್ ಕಿಸಾನ್ ಮುಕ್ತಿಮಾರ್ಚ್’ ಆಯೋಜಿಸಲಾಗಿದೆ. ಅಖಿಲಭಾರತ ಕಿಸಾನ್ ಸಭಾದ ಜನರಲ್ ಸೆಕ್ರೆಟರಿ ಹನ್ನಾನ್ ಮೊಲ್ಲಾ ಅವರು ‘ಅಧಿಕಾರಕ್ಕೆ ಬರಬೇಕೆನ್ನುವ ರಾಜಕೀಯ ಪಕ್ಷಗಳು ರೈತರ ಸಂಕಟಗಳಿಗೆ ಜೊತೆಯಾಗುವ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ’ ಎಂದಿದ್ದಾರೆ.     ಕಳೆದ ಇಪ್ಪತ್ತು ವರ್ಷಗಳಲ್ಲಿ 3 ಲಕ್ಷ ರೈತರ ಆತ್ಮಹತ್ಯೆಗಳಾಗಿವೆ ಎನ್ನುವುದು ಭಾರತದ ರೈತರ ಸಂಕಟಗಳ ತೀವ್ರತೆಯನ್ನು ತೋರಿಸುತ್ತದೆ. ನರೇಂದ್ರ ...

 • 09 November 2018
  4 months ago No comment

  ಹೊಸ ಕಾಲದ ಹರಕೆಯ ಕುರಿಗಳು!

    ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...

 • 28 October 2018
  4 months ago No comment

  ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು

    ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.     ಕಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಂತೆ ಕಾಣಿಸುತ್ತಿದೆ. ಆದರೆ ಅಪಸ್ವರಗಳು ಅದೇ ಹೆಣ್ಣಿನ ದನಿಯನ್ನು ಅಡಗಿಸುವಷ್ಟೇ ಗಟ್ಟಿಯಾದ ಅಬ್ಬರದೊಂದಿಗಿರುವುದೂ ಸುಳ್ಳಲ್ಲ. ಪತ್ರಕರ್ತೆ ಪ್ರಿಯಾ ರಮಾನಿ ಪತ್ರಿಕೋದ್ಯಮದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ನೊಂದ ...