Share

ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

 

 

 

 

 

 

 

 

 

 

ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.

 

ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ಫೋಟೋಗಳನ್ನು ಇನ್ಮುಂದೆ ಇಲ್ಲಿ ತಂದು ಹಾಕ್ಬೇಡಿ. ಈ ವೇದಿಕೆ, ಪ್ರಶಸ್ತಿ, ಪುರಸ್ಕಾರ, ಶಾಲು, ಸನ್ಮಾನಗಳ ಬಗ್ಗೆ ನನಗೆ ಅಂಥ ಒಲವಿಲ್ಲ’ ಇನ್ನು ಮುಂತಾಗಿ. ಹೌದು. ಮಾತಾಡುವ ಮುನ್ನ ಹತ್ತು ಸಲ ಯೋಚಿಸಬೇಕು. ಮಾತೆಂಬುದು ಇಬ್ಬಾಯಿಯ ಅಲಗು. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇದ್ದೇ ಇರುತ್ತದೆನ್ನುವ ನ್ಯೂಟನ್ನನ ನಿಯಮದಂತೆ ಯಾರನ್ನಾದರೂ ಮಾತಿನಲ್ಲಿ ತಿವಿದು ನೋಯಿಸುವಾಗ ಅದರ ಇನ್ನೊಂದು ಮೊನೆ ನಮ್ಮನ್ನೂ ಇರಿದು ದುಪ್ಪಟ್ಟು ನೋಯಿಸುತ್ತದೆ. ಹೀಗೆ ಕವಿಯನ್ನು ಹೀಗೆ ನೋಯಿಸಬೇಕಾಗಿ ಬಂದಿದ್ದಕ್ಕಾಗಿ ನಾನು ನೋಯುತ್ತಲಿದ್ದೆ.

ಕೆಲವರು ತಾವು ಕವಿಗೋಷ್ಠಿಗೆ ಆಯ್ಕೆಯಾದರೆ, ವೇದಿಕೆ ಒದಗಿದರೆ, ತಮ್ಮ ಕುರಿತು ಪತ್ರಿಕೆಯಲ್ಲಿ ಪ್ರಕಟವಾದರೆ, ತಮಗೆ ಯಾರೋ ಬಹುಮಾನ ಕೊಟ್ಟರೆ, ಸನ್ಮಾನಿಸಿದರೆ, ತಮಗೊಂದು ಪ್ರಶಸ್ತಿ ಬಂದರೆ ಅಂಥ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಫೋಟೋ, ಬರಹಗಳನ್ನು ತಂದು ನನ್ನ ಇನ್ಬಾಕ್ಸಿಗೆ ಸುರಿದು ನನ್ನಿಂದ ಅಭಿನಂದನೆ, ಶುಭಾಶಯ ಇತ್ಯಾದಿ ನಿರೀಕ್ಷಿಸುವುದಿದೆ. ಅವರ ಪ್ರಕಟಿತ ಬರಹಗಳನ್ನು ಇನ್ಬಾಕ್ಸಿಗೆ ಹಾಕಿದರೆ ಪುರುಸೊತ್ತಾದಾಗ ಕೂತು ಓದುತ್ತೇನೆ. ಆದರೆ ಸಾಧನೆಯ ಬಹುಪರಾಕುಗಳನ್ನು ಓದುವುದು ಮಹಾ ಕಿರಿಕಿರಿ. ಆನಂತರ ಹೊಗಳಿ, ಸ್ತುತಿಸಿ ಪ್ರತಿಕ್ರಿಯಿಸುವುದು ಮತ್ತೂ ಕಿರಿಕಿರಿ. ಇದಕ್ಕೆ ದೊಡ್ಡ ದೊಡ್ಡ ಕವಿ, ಸಾಹಿತಿಗಳೂ ಹೊರತಲ್ಲ. ಅವರ ಪ್ರಚಾರದ ಬಯಕೆಗಳು ಇನ್ನೂ ತಣಿಯಲಿಲ್ಲವಲ್ಲಾ ಎನಿಸುವಾಗ ದಟ್ಟ ವಿಷಾದ ಆವರಿಸುತ್ತದೆ.

ಹೀಗೆ ತಮ್ಮ ಬಿರುದು ಬಾವಲಿಗಳನ್ನು ನನ್ನ ಇನ್ಬಾಕ್ಸಿಗೆ ಹಾಕುವವರಲ್ಲಿ ಎರಡು ರೀತಿಯ ಭಾವಗಳನ್ನು ಗುರುತಿಸಿದ್ದೇನೆ. ಮೊದಲಿನದು ತಮ್ಮ ಖುಷಿಯನ್ನು ನನ್ನೊಂದಿಗೆ ಹಂಚಿಕೊಳ್ಳಲು ಬಯಸುವುದು; ಎರಡನೆಯದು ‘ನೋಡು ನಾನು ಏನೆಲ್ಲ ಸಾಧಿಸಿಬಿಟ್ಟೆ. ನೀನೂ ಇದ್ದೀಯ ನಾಲಾಯಕ್. ಇಗೋ ನೋಡು ನಾಚಿಕೆ ಪಟ್ಟುಕೋ. ನೀನೆಲ್ಲಿದ್ದೀಯಾ ನಾನೆಲ್ಲಿದ್ದೇನೆ ನೋಡಿಕೋ’ ಎನ್ನುವುದು.

ಈ ಮೊದಲಿನದಿದೆಯಲ್ಲ ಅವರಿಗೆ ನಾನು ಎಷ್ಟು ಬೇಗ ನೋಡಿ ಏನು ಪ್ರಶಂಸೆ, ಪ್ರತಿಕ್ರಿಯೆ ಕೊಡುತ್ತೇನೆ ಎನ್ನುವ ಕಾತರ. ಇದಾದ ನಂತರವೂ ಇನ್ನಷ್ಟು ಮತ್ತಷ್ಟು ನನ್ನೊಂದಿಗೆ ತಮ್ಮ ಕುರಿತು ಹಂಚಿಕೊಳ್ಳುತ್ತಲೇ ಹೋಗುವ ಹುಕಿ. ಸದಾ ‘ನನ್ನ ಮರ್ಜಿಯ ಮಾಲ್ಕಿನ್’ ಆಗಿರುವ ನನಗೆ ಇಂಥ ವಿಷಯಗಳಲ್ಲಿ ಇನ್ನೊಬ್ಬರಿಗಾಗಿ ಒಂದು ಅಭಿನಂದನೆಗಿಂತ ಹೆಚ್ಚು ಸಮಯ ವ್ಯಯಿಸಲು ಸುತಾರಾಂ ಇಷ್ಟವಿರೋದಿಲ್ಲ.

ಈ ಎರಡನೆಯವರಿಗೆ ನನ್ನಿಂದ ಅಭಿನಂದನೆ ಸ್ವೀಕರಿಸುವಾಗ ಅದೇನು ದಿಗ್ವಿಜಯದ ಖದರು ಅಂತೀರಿ!

ಈಗ ದೊಡ್ಡ ಕವಿ ಸಾಹಿತಿ ಎಂದು ಲೇಬಲ್ ಅಂಟಿಸಿಕೊಂಡ ಕೆಲವರು ಅಂದು ಲಂಕೇಶ್ ಮೇಷ್ಟ್ರಿಂದ ಹೊಗಳಿಸಿಕೊಳ್ಳಲು ಬಹಳ ಕಸರತ್ತು ಮಾಡುತ್ತಿದ್ದರಂತೆ. ಈಗಲೂ ಬಹಳ ದೊಡ್ಡ ದೊಡ್ಡ ಹೆಸರಿನವರೂ ಎಚ್. ಎಸ್. ಶಿವಪ್ರಕಾಶ್ ಅವರಂತಹ ಕವಿಗಳಿಂದ ಹೊಗಳಿಸಿಕೊಳ್ಳಲು ನಾನಾ ಕಸರತ್ತು ಮಾಡುವುದನ್ನು ಕಾಣುತ್ತೇನೆ. ಆ ಕಾಲದಲ್ಲಿ ಲಂಕೇಶ್ ಅವರಿಂದ ಬೆನ್ನು ತಟ್ಟಿಸಿಕೊಂಡ ಕೆಲವರು ಇವತ್ತಿಗೂ ಅದೇ ಕಾರಣಕ್ಕೆ ಗಣ್ಯರಾಗಿಬಿಟ್ಟದ್ದು ನೋಡುವಾಗ ಒಂದೆರಡು ಮಾತು ಈ ಕುರಿತು ಚರ್ಚಿಸಲೇಬೇಕೆನಿಸುತ್ತದೆ.

ಲಂಕೇಶ್ ಇಂಥವರನ್ನು ಅದೇಕೆ ಹೊಗಳಿದರು? ಎನ್ನುವುದು ಆ ಚರ್ಚೆಯಲ್ಲಿನ ಮೊದಲ ಪ್ರಶ್ನೆ. ಇಂಥವರನ್ನು ಭೇಷ್ ಎಂದ ಕಾರಣಕ್ಕಾಗಿ ಲಂಕೇಶ್ ಮೇಷ್ಟ್ರನ್ನು ಅನುಮಾನಿಸುವ ಮುನ್ನ ನಾವು ಒಂದು ಸಂಗತಿ ಯೋಚಿಸಬೇಕು. ಲಂಕೇಶ್ ಇದ್ದ ಕಾಲಕ್ಕೆ ಇವರೆಲ್ಲ ಯುವಕರಾಗಿದ್ದರು. ಆಗಲೇ ಚೆನ್ನಾಗಿ ಬರೆಯತೊಡಗಿದ ಕೆಲವರನ್ನು ಮೇಷ್ಟ್ರು ನಾಳಿನ ಭರವಸೆಯ ಕವಿ/ಲೇಖಕ ಆಗಬಲ್ಲ ಎನ್ನುವ ಆಶಯದಡಿ ಬೆನ್ನು ತಟ್ಟಿದ್ದಿರಬಹುದು. ಆದರೆ ಹೀಗೆ ಬೆನ್ನು ತಟ್ಟಿಸಿಕೊಂಡವರು ಅದೆಷ್ಟು ಬೆಳೆದರು? ಇನ್ನೂ ಅದೇಕೆ ನವ್ಯದ ಚುಂಗು ಹಿಡಿದು ಜೋತಾಡುತ್ತಾ ಲಂಕೇಶ್ ಅವರಿಂದ ಹೊಗಳಿಸಿಕೊಂಡ ಪ್ರಶಸ್ತಿಯನ್ನೇ ಕಿರೀಟದಂತೆ ಮುಡಿದುಕೊಂಡು ಅಲ್ಲೇ ಉಳಿದುಬಿಟ್ಟರು?

ಲಂಕೇಶ್ ಅವರ ಹೆಸರೆತ್ತಿದರೆ ಉರಿದುಬೀಳುವ ಕೆಲವರೂ ಅವರಿಂದ ಪ್ರಶಂಸಿಸಿಕೊಂಡದ್ದನ್ನು ಹೊತ್ತು ಮೆರೆಯುವಾಗ, ಹಾಗೆ ಹೊತ್ತು ಮೆರೆಯುತ್ತಲೇ ಅವರ ವಿಚಾರಗಳನ್ನು ಕಡೆಗಣಿಸಿ ‘ಅವರೇ ನಮ್ಮನ್ನು ಹೊಗಳಿದ್ದರೆಂದ ಮೇಲೆ ನಮ್ಮನ್ನು ಹಿಡಿಯುವವರಾರು’ ಎಂದು ಬೀಗುವಾಗ ಅವರ ಬೌದ್ಧಿಕ ಅಧಃಪತನ ಕಂಡು ಹೇಸುತ್ತದೆ ಮನಸ್ಸು.

ಈ ಅಧಿಕಾರ, ವೇದಿಕೆ ಇತ್ಯಾದಿಗಳ ವ್ಯಾಮೋಹದಲ್ಲಿ ಮನುಷ್ಯ ಯಾವ ಮಟ್ಟದ ನೈಚ್ಯಾನುಸಂಧಾನಗಳಿಗೆ ಇಳಿಯುತ್ತಾನೆಂದು ಕಂಡ ಮೇಲಷ್ಟೇ ಬರವಣಿಗೆಯ ಕ್ಷೇತ್ರಕ್ಕೆ ಬಂದ ನನಗೆ ಯಾವ ವೇದಿಕೆ, ಶಾಲು, ಸನ್ಮಾನ, ಹೊಗಳಿಕೆ, ಬಿರುದು ಬಾವಲಿಗಳೂ ಖುಷಿಕೊಡುವುದಿಲ್ಲ. ಹಾಂ. ತೀರ ಹೃದಯಕ್ಕೆ ಹತ್ತಿರವಾದವರು ನನ್ನ ಬರಹದ ಒಳ್ಳೆಯದು, ಕೆಟ್ಟದ್ದರ ಬಗ್ಗೆ ಮಾತಾಡುವಾಗ ಖುಷಿಯಾಗುತ್ತದೆ, ಇಲ್ಲವೆಂದಲ್ಲ. ಆದರೆ ಅವರೂ ಅಗತ್ಯಕ್ಕಿಂತ ಹೆಚ್ಚು ಹೊಗಳಿದಾಗ ಉರಿದುಬೀಳುತ್ತೇನೆ.

ಜನ ಯಾವು ಯಾವುದಕ್ಕೋ ಫೇಮಸ್ ಆಗಿಬಿಡುತ್ತಾರೆ. ಇತ್ತೀಚೆ ಅಶೋಕ ಶೆಟ್ಟರ್ ಅವರು ‘ನೀವು ಕಾರ್ಯಕ್ರಮಕ್ಕೆ ಬರುವುದಿಲ್ಲ ಅಂಥ ಫೇಮಸ್ ಆಗಿದ್ದೀರಲ್ಲ’ ಅಂದಾಗ ಗಟ್ಟಿಯಾಗಿ ನಕ್ಕುಬಿಟ್ಟೆ. ಈ ವೇದಿಕೆ ಹತ್ತುವುದಿದೆಯಲ್ಲ ಅದರ ಉದ್ದೇಶ ಕೇವಲ ವಿಚಾರವನ್ನು ದಾಟಿಸುವುದಕ್ಕಾದರೆ ಅದಕ್ಕೆ ನನ್ನ ಬೇಷರತ್ ಬೆಂಬಲವಿದೆ. ಅಂಥಲ್ಲಿ ನನಗೆ ಉಪನ್ಯಾಸ, ಕವಿತೆ, ಭಾಷಣ ಆಲಿಸಲು ನಿಜಕ್ಕೂ ಖುಷಿಯಿದೆ. ಬಾಕಿ ಪೈಪೋಟಿಯಿಂದಲೋ ಕುತಂತ್ರಗಾರಿಕೆಗಳಿಂದಲೋ ವೇದಿಕೆ ಹಿಡಿದು ಬೀಗುವುದಾದರೆ ಅದು ಬಾಲಿಶ ನಡೆಯಷ್ಟೇ. ಅಂಥಲ್ಲಿಂದ ನಾನು ಬಹಳ ದೂರ.

ನನ್ನ ಪುಸ್ತಕ ಬಂದಾಗ ಒಬ್ಬಾಕೆ ತಾನೇ ಮುಂದಾಗಿ ನನ್ನ ಸಂಕಲನದ ಐದು ಪ್ರತಿ ತರಿಸಿಕೊಂಡು ನನ್ನ ಪುಸ್ತಕ ಬಿಡುಗಡೆ ಮಾಡ್ತೇನೆ ಎಂದರು. ಅದಾಗಲೇ ಹಲವರು ನನ್ನ ಪುಸ್ತಕವನ್ನು ತಾವೇ ಫೇಸ್ಬುಕ್ಕಲ್ಲಿ ಬಿಡುಗಡೆ ಮಾಡಿದ್ದರಿಂದ ಇದೂ ಹಾಗೆಯೇ ಇರಬಹುದೆನಿಸಿತ್ತು. ಚುನಾವಣೆಯ ನಂತರ ನಮ್ಮೂರಲ್ಲಿ ಬಿಡುಗಡೆ ಕಾರ್ಯಕ್ರಮ ನೀವು ಬರುತ್ತೀರಲ್ಲ ಎಂದಾಗ, ನಾನು ಬರುವುದಿಲ್ಲ ಜಾನೂ ಮತ್ತು ನೀಲಿ ಹಕ್ಕಿಮರಿಗಳಿವೆಯಲ್ಲ. ತುತ್ತುಣಿಸಬೇಕು ಎಂದಿದ್ದೆ.

ಚುನಾವಣೆ ಕಳೆದ ಮೇಲೆ, ಕಾರ್ಯಕ್ರಮ ನಿಗದಿಯಾಯಿತೆಂದು ಹಿರಿಯ ಸಾಹಿತಿಗಳೊಬ್ಬರು ತಿಳಿಸಿ ಪ್ರಕಾಶಕರಿಂದ ಪುಸ್ತಕ ತರಿಸಿಕೊಂಡಾಕೆ ನಿಮ್ಮನ್ನು ಆಹ್ವಾನಿಸುತ್ತಾರೆ. ಬರದಿರಬೇಡಿ ಅಂದಿದ್ದರು. ಆದರೆ ಆಕೆ ಒಂದು ದಿನ ಫೋನಲ್ಲಿ ‘ಎಂತ ಗೊತ್ತಾ? ನಾನು ನಿಮ್ಮ ಪುಸ್ತಕ ಬಿಡುಗಡೆ ಮಾಡ್ತಿರೋದಕ್ಕೆ ತುಂಬ ಜನ ತಗಾದೆ ತೆಗ್ದಿದಾರೆ. ಅವರದ್ದೇ ಯಾಕೆ ಮಾಡಬೇಕು? ಬೇರೆಯವರದ್ದೂ ಮಾಡ್ತೀರಾ ಎಂದೆಲ್ಲ ಕೇಳ್ತಿದಾರೆ’ ಎಂದರು, ಆ ಮಾತು ನನ್ನ ಮೇಲೆ ಯಾವ ಪರಿಣಾಮ ಬೀರಬಹುದು ಎಂಬ ಸಣ್ಣ ಲೋಚನೆಯೂ ಇಲ್ಲದೆ. ಅದಕ್ಕೆ ನಾನು ‘ಅಯ್ಯೋ ಹಾಗಾದ್ರೆ ಅಂಥ ಕಾರ್ಯಕ್ರಮ ಯಾಕೆ ಮಾಡ್ತೀರಿ?’ ಅಂದೆ. ಅದಕ್ಕೆ ಆಕೆ ‘ಇಲ್ಲ ಈಗಾಗ್ಲೇ ಕಾರ್ಯಕ್ರಮ ನಿಗದಿಯಾಗಿದೆ. ಬದಲಿಸುವಂತಿಲ್ಲ. ಅದಕ್ಕೇ ನಾನು ಬೇರೊಂದು ಉಪಾಯ ಮಾಡಿದೀನಿ. ಇತ್ತೀಚೆ ಬರೆಯುತ್ತಿರುವ ಇನ್ನೂ ಐದು ಕವಯತ್ರಿಯರ ಕವಿತೆ ತರಿಸಿಕೊಂಡಿದೀನಿ ಎಲ್ಲರ ಕವಿತೆಯ ಕುರಿತು ಚರ್ಚೆಯಾಗಲಿ’ ಎಂದರು. ನಾನು, ‘ನೀವು ಇತರ ಕವಯತ್ರಿಯರನ್ನು ಸೇರಿಸಿದ್ದು ಬಹಳ ಒಳ್ಳೆಯದಾಯ್ತು. ನನ್ನ ಹೆಸರನ್ನು ಸಾಧ್ಯವಿದ್ದರೆ ಬಿಟ್ಟುಬಿಡಿ’ ಎಂದೆ. ನನ್ನ ತಲೆಯ ಮೇಲೆ ಹೊರಲಾರದಷ್ಟು ಭಾರವಾದ ಮೂಟೆಯನ್ನೆತ್ತಿ ಕುಕ್ಕಿದಂತಾಗಿತ್ತು. ನೀವು ತರಿಸಿಕೊಂಡ ನನ್ನ ಐದು ಪುಸ್ತಕದ ಹಣ ಬ್ಯಾಂಕಿಗೆ ಹಾಕಲೇ ಎಂದರೆ ಆಕೆ ಖಾತೆ ವಿವರ ಕೊಡಲೊಪ್ಪಲಿಲ್ಲ. ಹಾಗಾದ್ರೆ ನನ್ನ ಕೆಲವು ಪ್ರತಿ ಕಳಿಸ್ತೀನಿ ಕಾರ್ಯಕ್ರಮದ ದಿನ ಅದನ್ನು ಮಾರಿ ಅದರ ಹಣ ಇಟ್ಟುಕೊಳ್ಳಿ ಎಂದೆ. ಒಪ್ಪಿದರು.

ಇದಾದ ನಂತರ ನನಗೆ ಕಾರ್ಯಕ್ರಮ ಇಂಥ ದಿನಾಂಕದಂದು ಇಂಥ ಊರಲ್ಲಿದೆಯೆಂದು ಹಿರಿಯ ಸಾಹಿತಿಗಳಿಂದ ಗೊತ್ತಾಗಿತ್ತೇ ಹೊರತು ಕಾರ್ಯಕ್ರಮಕ್ಕೆ ಬನ್ನಿ ಎಂದು ಒಂದು ಆಹ್ವಾನ ಪತ್ರಿಕೆಯಾಗಲೀ ಫೋನ್ ಕರೆಯಾಗಲಿ ಬಂದಿರಲಿಲ್ಲ. ಬಂದರೂ ನಾನು ಹೋಗುತ್ತಲೂ ಇರಲಿಲ್ಲ. ಒಂದು ದಿನ ಏನೋ ತುರ್ತು ಕೆಲಸ ಮಾಡುತ್ತಿದ್ದ ಸಮಯ ಆಕೆಯ ಕರೆ ಬಂತು. ನೋಡಿ ನೀವು ಈ ಕಾರ್ಯಕ್ರಮಕ್ಕೆ ಬರಲೇಬೇಡಿ. ಕವಿತೆ ಮಾತಾಡಲಿ. ಕವಿ ಯಾಕೆ? ನಾನು ಆ ಕವಯತ್ರಿಯರಿಗೂ ಹೀಗೆಯೇ ಹೇಳಿದ್ದೇನೆ ಎಂದೆಲ್ಲ ಏನೇನೋ ಬಡಬಡಿಸಿದರು. ನಾನು ಆಕೆ ಅರ್ಥಮಾಡಿಕೊಳ್ಳಲಿ ಎಂದು, ನೋಡಿ ನಾನು ನೀವು ಕರೆದರೂ ಬರುತ್ತಿರಲಿಲ್ಲ. ಅಂಥಲ್ಲಿ ಬರಬೇಡವೆನ್ನುತ್ತಿದ್ದೀರಿ ಎಂದು ಹೇಳಿ ಸಾಹಿತ್ಯ ಲೋಕದ ಕೆಲವರ ಟೊಳ್ಳು ಪೊಳ್ಳನ್ನು ಸೂಚ್ಯವಾಗಿ ಮಾತಾಡಿ ಕರೆ ಕತ್ತರಿಸಿದೆ.

ಇದಾದ ಮಾರನೆಯ ದಿನವಿರಬೇಕು ನನ್ನ ಫೇಸ್ಬುಕ್ಕಿನ ಒಂದು ಪೋಸ್ಟಿಗೆ ಒಬ್ಬರು ‘ಇಂಥ ದಿನ ಇಂಥ ಕಾರ್ಯಕ್ರಮದಲ್ಲಿ ನಿಮ್ಮನ್ನು ನೋಡುತ್ತಿದ್ದೇವೆ’ ಎಂದು ಬರೆದರು. ಇತರ ಕೆಲವರೂ ಕಾದಂಬಿನಿ ಬರುವುದಾದರೆ ನಾನೂ ಬರ್ತೀನಿ ಎಂದು ದನಿಗೂಡಿಸಿದರು. ನಾನು ‘ಹೌದಾ ನಾನು ಬರ್ತಿದೀನಾ? ನನಗೆ ಆ ಕುರಿತು ಮಾಹಿತಿಯಿಲ್ಲ’ ಎಂದು ಬರೆದೆ. ಕೂಡಲೇ ಅವರು ಈ ಕಾರ್ಯಕ್ರಮದ ಜವಾಬ್ದಾರಿ ಹೊತ್ತಾಕೆಯನ್ನು ಕರೆದು ಇದಕ್ಕೆ ಉತ್ತರಿಸುವಂತೆ ಒತ್ತಾಯಿಸಿದರು. ಅಲ್ಲಿ ಆಕೆ ಏನೊಂದೂ ಉತ್ತರಿಸದೆ ಕೂಡಲೆ ನನಗೆ ಕರೆ ಮಾಡಿ ‘ಯಾಕೆ ಕಾದಂಬಿನಿ ನಿಮಗೆ ಕಾರ್ಯಕ್ರಮದ ಮಾಹಿತಿ ಇಲ್ಲವೇ?’ ಎಂದರು. ನಾನು ‘ಅದು ನಿಮಗೇ ಚೆನ್ನಾಗಿ ಗೊತ್ತಿದೆ’ ಎಂದವಳೇ ಕರೆ ಕತ್ತರಿಸಿ ಆನಂತರ ಅತ್ತ ತಿರುಗಿಯೂ ನೋಡಲಿಲ್ಲ. ಈ ಪ್ರಸಂಗ ಕಾರ್ಯಕ್ರಮ ಮತ್ತಷ್ಟು ಮುದುಡಿಕೊಳ್ಳುವಂತೆ ಮಾಡಿತು.

ಇದಾದ ಬಳಿಕ ಹಿರಿಯ ಕವಿಯೊಬ್ಬರು ಈಗಾಗಲೇ ನನ್ನ ಹಲಗೆ ಮತ್ತು ಮೆದುಬೆರಳು ಸಂಕಲನದಲ್ಲಿ ಪ್ರಕಟಗೊಂಡ ಕವಿತೆಗಳನ್ನು ಹಿರಿಯ ಇಬ್ಬರು ಕವಿಗಳ ಕವಿತೆಗಳ ಜೊತೆ ಕಾವ್ಯಮಾಲಿಕೆ ತರುತ್ತೇವೆ ಅಂದಾಗ ನನ್ನ ಮಾರ್ಗದರ್ಶಕರೊಂದಿಗೆ ಒಂದು ಮಾತು ಚರ್ಚಿಸಿ ಒಪ್ಪಿದೆ. ಪುಸ್ತಕ ಬಿಡುಗಡೆಯಾಗಬೇಕು ಇದ್ದಕ್ಕಿದ್ದಂತೆ ಅವರು, ‘ನಿನ್ನ ಜನ್ಮ ರಹಸ್ಯದ ಬಗ್ಗೆ ಊಹಾಪೋಹಗಳಿವೆಯಲ್ಲಾ’ ಅಂದರು. ನನ್ನ ಜನ್ಮಕ್ಕೆ ಯಾವ ರಹಸ್ಯಗಳೂ ಇರಲಿಲ್ಲವಾಗಿ ನಾನು ತಣ್ಣಗೆ ‘ಊಹಾಪೋಹಗಳನ್ನು ನೀವು ನಂಬಕೂಡದು’ ಅಂದೆ. ಆಂಥಾಲಜಿ ಬಿಡುಗಡೆಗೂ ನಾನು ಹೋಗಲಿಲ್ಲ.

ಮೊನ್ನೆ ಒಬ್ಬ ಸಾಹಿತಿಗಳು ಕರೆ ಮಾಡಿ ಕವಿಗೋಷ್ಠಿಗೆ ಕರೆದರು. ಎಂದಿನಂತೆ ನಿರಾಕರಿಸಿದೆ. ನೀವು ಬರುವುದಿಲ್ಲವೆಂದು ಯಾರೋ ಚಾಲೆಂಜ್ ಮಾಡಿದ್ದರು ಎಂದು ತಮಾಷೆಯಾಗಿ ಹೇಳಿದ ಅವರು ಕಾರ್ಯಕ್ರಮದ ಸ್ವರೂಪವನ್ನು ವಿವರಿಸಿದರು. ನಾನೆಂದೆ, ‘ಸರ್ ನೀವು ಬುಡಕಟ್ಟು ಜನರನ್ನು ವೇದಿಕೆಗೆ ಕರೆತಂದು ಮಾತಾಡಿಸುವ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ. ದಯಮಾಡಿ ನನ್ನದೊಂದು ಕೋರಿಕೆಯಿದೆ. ನಾನು ಕಳೆದ ವರ್ಷ ವಡ್ಡಾಬೋವಿ ಅಲೆಮಾರಿ ಜನಾಂಗದ ಹೆಣ್ಣುಮಗಳ ವೀಡಿಯೋವನ್ನು ಫೇಸ್ಬುಕ್ಕಲ್ಲಿ ಅಪ್ಲೋಡ್ ಮಾಡಿದ್ದೆ. ಅದು ವೈರಲ್ ವ್ಯೂವ್ಸ್ ಕಂಡಿತ್ತು. ಆ ಹೆಣ್ಣುಮಗಳು ಸಾವಿತ್ರಿಗೆ ನನ್ನ ಬದಲಾಗಿ ಮಾತಾಡಲು ಅವಕಾಶ ಮಾಡಿಕೊಟ್ಟರೆ ತುಂಬ ಉಪಕಾರವಾಗುತ್ತದೆ.’ ಬಹಳ ಸಂತೋಷದಿಂದಲೇ ಒಪ್ಪಿಕೊಂಡರು. ಹಾಗೆಯೇ ಮಾತಾಡುತ್ತ ಕೆಲವು ಸಂಗತಿಗಳು ಬಂದುಹೋದವು.

ಸಾಮಾನ್ಯವಾಗಿ ಕಾರ್ಯಕ್ರಮ ಏರ್ಪಡಿಸುವುದು ಎಂದರೆ ಅದಕ್ಕೆ ಜನ ಸೇರಿಸುವುದೂ ಒಂದು ಪ್ರಯಾಸದ ಕೆಲಸವೇ. ದೇಶದಲ್ಲಿ ಈಗ ಇರುವ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಕೆಲವು ಹೋರಾಟಕ್ಕೆ ಸಂಬಂಧಿಸಿದ, ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಕವಿಗೋಷ್ಠಿ ಏರ್ಪಡಿಸಿದರೆ ಕಾರ್ಯಕ್ರಮ ಇನ್ನಷ್ಟು ಚಂದವಾಗುವುದಲ್ಲದೆ ಒಂದಷ್ಟು ಕವಿಗಳು ಕವಿತೆ ವಾಚಿಸುವ ನೆವದಲ್ಲಾದರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಕಾರ್ಯಕ್ರಮ ಆಶಯಗಳು ಈಡೇರಿಯಾವು ಎಂಬುದೂ ಸಂಘಟಕರ ಉದ್ದೇಶವಾಗಿರುವುದಿದೆ. ಈ ಉದ್ದೇಶದಲ್ಲೇ ವಿಷಾದದ ವಿಷಸರ್ಪ ಅಡಗಿದೆ. ಅದು ನನ್ನನ್ನು ಬುಸುಗುಟ್ಟಿ ಹೆದರಿಸುತ್ತದೆ. ನಮ್ಮ ಕವಿಗಳನ್ನು ಕವಿಗೋಷ್ಠಿ ಎಂಬ ಚಾಕಲೇಟು, ಬಿಸ್ಕತ್ತು ತೋರಿಸಿ ಕಾರ್ಯಕ್ರಮಕ್ಕೆ ಬರಮಾಡಿಕೊಂಡು ಜಾಗೃತಿ ಮೂಡಿಸಬೇಕಾಗಿದೆಯಲ್ಲಾ ಎಂದು ಮನಸ್ಸು ಹೇಸಿಹೋಗುತ್ತದೆ.

ಕೆಲವರಂತೂ ಇಂಥ ಅವಕಾಶಗಳಿಗೇ ಕಾದಿದ್ದು ಅಲ್ಲಿಯೂ ಸಲ್ಲಲು, ಇಲ್ಲಿಯೂ ಸಲ್ಲಲು ತಿಣುಕಾಟ ನಡೆಸುವುದು ಕಣ್ಣಿಗೆ ರಾಚುತ್ತದೆ. ಇಂಥ ಕೆಲವರು, ಆಯೋಜಿಸುವ ಕಾರ್ಯಕ್ರಮ ಎಂಥದ್ದು? ಅಂಥಲ್ಲಿ ಯಾವ ತರಹದ ಕವಿತೆಯನ್ನು ವಾಚಿಸಬೇಕು ಎನ್ನುವದನ್ನೂ ಚಿಂತಿಸದೆ ರೊಮ್ಯಾಂಟಿಕ್ ಕವಿತೆಗಳನ್ನು ಓದಿ ಭೇಷ್ ಅನಿಸಿಕೊಳ್ಳುತ್ತಾರೆ. ಕೆಲವರಿಗೆ ಇಂಥ ಕಾರ್ಯಕ್ರಮಗಳಿಗೆ ಹೋಗಲು ಬಹಳ ಉತ್ಸಾಹ. ಆಯಾ ಊರುಗಳಲ್ಲಿ ಇರುವ ಪ್ರವಾಸಿ ತಾಣಗಳನ್ನು ಸಂದರ್ಶಿಸಿ ಸೆಲ್ಫಿ ಗಿಲ್ಫಿ ಹೊಡೆದುಕೊಂಡು ತಮ್ಮ ಗೋಷ್ಠಿ ನಡೆಯುವ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮದಲ್ಲಿ ಹಾಜರಿದ್ದರಾಯಿತು. ಇದು ಅಂತಃಸಾಕ್ಷಿ ಸತ್ತ ಸಮಾಜವೊಂದರ, ಸಾಹಿತ್ಯ ಲೋಕವೊಂದರ ಚಿಕ್ಕ ಸ್ಯಾಂಪಲ್ ಅಷ್ಟೇ. ಕವಿ ಹೃದಯವೇ ಹೀಗಾದರೆ ಬಾಕಿಯವರು ಹೇಗೆ?

ನಾನು ಮೊನ್ನೆ ಪ್ರಯೋಗಾತ್ಮಕವಾಗಿ ನನ್ನ ಫೇಸ್ಬುಕ್ ಗೋಡೆಯಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸುವವರ ಫೋಟೋ ಪೋಸ್ಟ್ ಮಾಡಿದೆ. ಅಬ್ಬಬ್ಬಾ ಅಭಿನಂದನೆ, ಶುಭಾಶಯ, ಲೈಕುಗಳ ಸುರಿಮಳೆಯೇ ಬೀಳತೊಡಗಿತು. ನಾನು ಆ ಪೋಸ್ಟಿನ ಹಿಂದೆಯೇ ಈ ಬುಡಕಟ್ಟು ಹೆಣ್ಣುಮಗಳು ಸಾವಿತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ಒಂದು ಪೋಸ್ಟ್ ಬರೆದೆ. ಕವಿತೆಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.

ಇದು ನನ್ನಂಥವಳೊಬ್ಬಳಲ್ಲಿ ಯಾವ ತರಹದ ಸಂಕಟ ಉಂಟುಮಾಡುತ್ತದೆ ಎನ್ನುವುದನ್ನು ಕಟ್ಟಿಕೊಂಡು ಯಾರಿಗೂ ಏನೂ ಆಗಬೇಕಾದುದಿಲ್ಲ. ಇವತ್ತು ಎಂಥ ಕವಿ ಮತ್ತು ಕವಿತೆ ಸಾಹಿತ್ಯಲೋಕಕ್ಕೆ ಬೇಕಾಗಿದೆ, ಅದು ಎಂಥ ಕವಿತೆಯನ್ನು ಶ್ರೇಷ್ಠವೆಂದು ಮೆರೆಸುತ್ತದೆ, ಹಾಗೆ ಮೆರೆಸುವುದರ ಹಿಂದೆ ಏನೆಲ್ಲ ಹಿತಾಸಕ್ತಿಗಳಿವೆ, ಯಾರೆಲ್ಲ ಈ ಘನಕಾರ್ಯದಲ್ಲಿ ತೊಡಗಿದ್ದಾರೆಂದು ಅರ್ಥವಾಗುತ್ತಾ ಆಗುತ್ತಾ ವಿಷಾದವೊಂದು ಹೆಪ್ಪುಗಟ್ಟುತ್ತದೆ.

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ವಾಸ. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಪತ್ರಿಕೆಗಳು, ವೆಬ್ ಪೋರ್ಟಲ್ ಗಳಲ್ಲಿ ಬರಹಗಳು ಪ್ರಕಟವಾಗಿವೆ. ‘ಹಲಗೆ ಮತ್ತು ಮೆದುಬೆರಳು’ ಅವರ ಮೊದಲ ಕಾವ್ಯಸಂಕಲನ.

Share

Leave a comment

Your email address will not be published. Required fields are marked *

Recent Posts More

 • 6 days ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 7 days ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 7 days ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 1 week ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  6 days ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  3 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  3 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...