Share

ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

 

 

 

 

 

 

 

 

 

ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ.

ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ಜೀವನದಲ್ಲಿ ಪಾಲಿಗೆ ಬಂದುದನ್ನು ನಿರಾಕರಿಸಿ ಬದುಕಲುಂಟೇ? ಹುಟ್ಟಿದಂದಿನಿಂದ ಅತೀ ಹೆಚ್ಚು ಮಳೆ ಬೀಳುವ ಘಟ್ಟದ ಕಾಡು ಪ್ರದೇಶದಲ್ಲೇ ವಾಸಮಾಡಬೇಕಾದ ಅನಿವಾರ್ಯತೆ ನನಗೆ.

ಈ ಕಾಡು, ಕಣಿವೆ, ಮಳೆ ಎಂದರೆ ನನಗೆ ಪ್ರಾಣ. ಈ ಮಲೆ-ಬೆಟ್ಟ, ಕಣಿವೆಗಳಿಗಾಗಿ, ಮಳೆ, ಕಾನಿಗಾಗಿ ಕಾಯಿಲೆಗೆ ಔಷಧಿ ಕೊಂಡರೆ ಒಂದಷ್ಟು ಸೈಡ್ ಎಫೆಕ್ಟನ್ನೂ ಒಪ್ಪಿಕೊಳ್ಳಬೇಕಾಗುವಂತೆ ಈ ಮಳೆಕಾಡಿನ ಕೆಲ ಅನಾನುಕೂಲತೆಗಳನ್ನೂ ಸಹಿಸಿಕೊಳ್ಳಲು ನಾನು ತಯಾರಿದ್ದೇನೆ. ಹೆಚ್ಚಿನ ಋತುಗಳಲ್ಲಿ ಇಲ್ಲಿಯದು ತೇವಾಂಶಭರಿತ ತಣ್ಣಗಿನ ಹವೆ. ಮಳೆ ಹಿಡಿಯುತ್ತಲೇ ಎಲೆಗಳು ಕೊಳೆಯತೊಡಗಿ ಹುಳಗಳು ಮಿಜಿಗುಡತೊಡಗುತ್ತವೆ. ಸಾವಿರ ಬಣ್ಣ, ರೂಪ, ಆಕಾರಗಳ ಕಂಬಳಿಹುಳು, ಎರೆಹುಳು, ಬಸವನಹುಳು, ಆರೇಳು ಅಂಗುಲ ಉದ್ದನೆಯ ಹಸಿರು ಸಾಗುವಾನಿ ಹುಳು, ಓಡುಹುಳು, ಹಸಿರು, ಕಪ್ಪು, ಬಿಳಿ ಎಲೆಹುಳು, ಲಕ್ಷ್ಮಿ ಚೇಳು, ಕೊಡಲಿ ಹುಳು, ರೈಲುಹುಳು, ಅಂಗುಲ ಹುಳು, ತರಕಾರಿ ಹುಳು, ಕೊಳಚೆಯ ಬಾಲದ ಬಿಳಿಹುಳು, ಹಳದಿ ಸೆಗಣಿ ಹುಳು, ಮಿಡತೆ, ಜಿಗಣೆ, ಇಂಬಳ ಹೀಗೆ ಲೆಕ್ಕವೇ ಇಲ್ಲದಷ್ಟು ಬಗೆಯ ಹುಳಗಳೇ ಹುಳಗಳು!

ನನಗೆ ಹುಳಗಳೆಂದರೆ ಯಾವ ಪರಿ ಹೆದರಿಕೆ ಎಂದರೆ ಬಾಲ್ಯದಲ್ಲಿ, ನನ್ನ ಮಾಮನ ಮನೆಯಲ್ಲಿ ರೇಷಿಮೆಯ ಹುಳು ಸಾಕಾಣಿಕೆಯನ್ನು ನೋಡಿ ಬಂದ ನಾನು ಮತ್ತೆಂದೂ ಅವರ ಮನೆಗೆ ಕಾಲಿಡಲಿಲ್ಲ. ಈಗ ರೇಷಿಮೆಯ ಸೀರೆ ಉಡುವಾಗ, ರಂಗುರಂಗಿನ ಸುಂದರ ಚಿಟ್ಟೆಗಳನ್ನು ನೋಡುವಾಗ ಖುಷಿಯಾಗುತ್ತದಾದರೂ ಹುಳಗಳ ಜೊತೆ ರಾಜಿಯಾಗಲು ಸಾಧ್ಯವಾಗಲಿಲ್ಲ.

ಹುಳಗಳನ್ನು ಕಂಡರೆ ನನಗಿಂತಲೂ ಹೆಚ್ಚು ಹೆದರುವ ವ್ಯಕ್ತಿಗಳು, ಅದರಲ್ಲೂ ಗಂಡಸರು ಇದ್ದಾರೆ ಎನ್ನುವುದು ನಾನು ಹೆಮ್ಮೆ ಪಡಬಹುದಾದ ವಿಷಯವೋ ಬೇಜಾರು ಮಾಡಬೇಕಾದ ವಿಚಾರವೋ ನನಗಿನ್ನೂ ತಿಳಿದಿಲ್ಲ. ಒಟ್ಟಿನಲ್ಲಿ ಹುಳಗಳನ್ನು ಕಂಡರೆ ಹೆಂಗಸರು ಮಾತ್ರವಲ್ಲ, ಗಂಡಸರೂ ಹೆದರುತ್ತಾರೆ ಎಂದರೆ ನೀವು ನಂಬಬೇಕು. ನಾನು ಲಿಂಗನಮಕ್ಕಿಯಲ್ಲಿದ್ದಾಗ ಅಕ್ಟೋಬರ್ ರಜೆಯಲ್ಲಿ ನನ್ನ ಮನೆಗೆ ಬಂದ ನನ್ನ ಸೋದರತ್ತೆ, ‘ಈ ತರಹ ಹುಳದ ರಾಶಿ ಇದೆ ಅಂತ ಗೊತ್ತಾದರೆ ನನ್ನ ಬೆಂಗಳೂರಿನ ಅಳಿಯ ನಿಮ್ಮ ಮನೆಗೆ ಕಾಲಿಡಲಿಕ್ಕಿಲ್ಲ’ ಎಂದ ಮಾತು ಸದಾ ನೆನಪಾಗುತ್ತಿರುತ್ತದೆ. ಹುಳಗಳಿಗೆ ಹೆದರಿ ಆ ಮನುಷ್ಯ ಕೊನೆಗೂ ನನ್ನ ಮನೆಗೆ ಕಾಲಿಡಲೇ ಇಲ್ಲ!

ಚಿಕ್ಕವಳಿದ್ದಾಗಿಂದ ತಮ್ಮನ ಜೊತೆ ಸೇರಿ ಗಾಳ ಹಾಕುವ ಹುಚ್ಚು ಹವ್ಯಾಸ. ನಮ್ಮ ಮನೆಯಿದ್ದ ಊರಿನ ಎಲ್ಲ ಕೆರೆಗಳ ಆಳ ಅಗಲ, ಹಿಂದೆ ಮುಂದೆ ಎಲ್ಲ ನಮಗೆ ಚಿರಪರಿಚಿತ. ಗಾಳ ಹಾಕಲು ಹೋಗುವ ಮೊದಲು ತೇವಾಂಶ ಇರುವ ನೆಲವನ್ನು ಗುದ್ದಲಿಯಿಂದ ಸ್ವಲ್ಪ ಅಗೆದರೆ ಎರೆಹುಳು, ಮಣ್ಣಮಿಡತೆಗಳು ಸಿಗುತ್ತವೆ. ನನಗೆ ಈ ಮಣ್ಣ ಮಿಡತೆಗಳ ಅಂಥ ಭಯವಿಲ್ಲ. ಆದರೆ ಎರೆಹುಳುವನ್ನು ಅಷ್ಟು ಸಲೀಸಾಗಿ ಕೈಯಲ್ಲಿ ಹಿಡಿಯಲಾರೆ. ಅದಕ್ಕೆ ತಮ್ಮನಿಂದ ಬೈಯಿಸಿಕೊಳ್ಳುತ್ತಲೇ ಎರೆಹುಳು ಸಂಗ್ರಹಿಸಿಕೊಳ್ಳಬೇಕು. ಆಮೇಲೆ ನಾವು ಮೊದಲೇ ನಿರ್ಧರಿಸಿದ ಕೆರೆಯ ಆಯಕಟ್ಟಿನ ಜಾಗಗಳಿಗೆ ಹೀಗಿ ಗಾಳಕ್ಕೆ ಎರೆಹುಳು ಸುರಿಯಬೇಕು. ಅದಕ್ಕೆ ಮತ್ತೆ ತಮ್ಮನ ಬೈಗುಳ. ಆದರೇನಂತೆ ಗಾಳ ಹಾಕಲು ಕೂತಾಗಿನ ತನ್ಮಯತೆ, ಆ ಮೌನ ಅದೆನಿತು ಅಪ್ಯಾಯಮಾನ! ಬೆಲೆ ಕಟ್ಟಲುಂಟೇ ಅದಕೆ? ಎಷ್ಟೋ ಸಲ ಕೊರವವೋ, ಕುಚ್ಚೋ, ಮುರುಗೋಡೋ ಗಾಳಕ್ಕೆ ಕಚ್ಚಿಕೊಂಡು ಎಳೆದೊಯ್ದರೂ ನನ್ನ ಕಲ್ಪನಾವಿಲಾಸದ ಲಹರಿಗಳ ಮೇಲೆ ತೇಲುತ್ತಿರುತ್ತಿದ್ದ ನನಗೆ ಧಾತೇ ಇಲ್ಲದೆ ಮತ್ತೆ ತಮ್ಮನಿಂದ ಬೈಗುಳ ತಿನ್ನುತ್ತಿದ್ದೆ. ಒಟ್ಟಿನಲ್ಲಿ ನನ್ನ ಹಾಗೆ ಶಾಲೆಯಲ್ಲಿ ಚಂದ ಓದದ ಕಾರಣಕ್ಕೆ ಎಲ್ಲರಿಂದ ಬೈಯಿಸಿಕೊಳ್ಳುತ್ತಿದ್ದ ತಮ್ಮನಿಗೆ ನನ್ನ ಮೇಲೆ ಸೇಡು ತೀರಿಸಿಕೊಳ್ಳುವ ಸುವರ್ಣಾವಕಾಶವಿದು. ಬಿಟ್ಟಾನೆಯೇ ಅವನು?

ಬೇಸಗೆ ಬಂತೆಂದರೆ ಕೆರೆಗಳು ಕೆಸರ ಮಡುವಾಗಿ ಒಣಗುತ್ತ ಬರುವಾಗ ನೀರು ಉಗ್ಗಿ ಮೀನು ಹಿಡಿಯಲೋ, ತಾವರೆ ಹೂಗಳ ಗೆಡ್ಡೆಗಳನ್ನು( ಕೋಳಿಗೆಡ್ಡೆ ಅನ್ನುತ್ತಿದ್ದೆವು ನಾವದನ್ನು. ಗೆಡ್ಡೆಗಳ ತಾವರೆಯ ಪಕಳೆಗಳನ್ನು ಸುಲಿದರೆ ಒಳಗೆ ನಿಂಬೆ, ಕಿತ್ತಳೆಯಂಥ ಕವಾಟಗಳು. ಅದರ ತುಂಬ ಕಾಳುಗಳು. ಬಲಿತ ಕಾಳುಗಳು ಕಪ್ಪುಬಿಳಿ ಬಣ್ಣದಲ್ಲಿದ್ದರೆ ಬಲಿಯದ ಕಾಳುಗಳು ರಾಗಿಯಂತೆ ಕಡುಗೆಂಪಾಗಿರುತ್ತಿದ್ದವು. ಇದನ್ನು ತಿನ್ನುವುದು ತುಂಬ ಖುಷಿ ನಮಗಾಗ.) ಕೀಳಲೋ ಕೆರೆಗಿಳಿದರೆ ಜಿಗಣೆಗಳ ಕಾಟ. ಈ ಜಿಗಣೆಗಳು ತನ್ನ ರಬ್ಬರಿನಂತಹ ಮೈಯನ್ನು ಚಾಚಿಕೊಳ್ಳುತ್ತ ಬಂದು ಮೈಗೆ ಹತ್ತಿತೆಂದರೆ ನನ್ನ ಹೆದರಿಕೆಯ ಬೊಬ್ಬೆ ಕೇಳಬೇಕು!

ಒಮ್ಮೆ ಏನಾಯಿತೆಂದರೆ, ನಮ್ಮ ಅಮ್ಮನ ಟ್ರಂಕಿನಲ್ಲಿ ದಾರದ ಎಳೆ ಎಳೆ ಜೋತಾಡುವ ಅದೆಂತದೋ ಡಿಸಾಯ್ನಿನ ಬಿಳಿ ಸೀರೆಯೊಂದಿತ್ತು. ಅದನ್ನು ತೆಗೆದು ಚಂದನೆಯ ಫ್ರಾಕ್ ಹೊಲಿದುಕೊಂಡು ಹಾಕಿ ಮೆರೆಯುತ್ತಿದ್ದೆ. ಮಳೆಗಾಲ ಮುಗಿಯುತ್ತ ಬಂದ ಸಮಯ. ಅಂಗಳದಲ್ಲಿ ಬಿದ್ದುಕೊಂಡಿದ್ದ ತೆಂಗಿನ ಮಡಲನ್ನು ಎತ್ತಿ ಬಿಸುಟು ಅಂಗಳ ಗುಡಿಸುತ್ತೇನೆಂದು ಹೊರಟಾಗ ಮಡಲಿನಲ್ಲಿ ನನಗೆ ಕಾಣದಂತೆ ಅಡಗಿಕೊಂಡಿದ್ದ ರಾಶಿರಾಶಿ ಕಂಬಳಿಹುಳು ನನ್ನ ತಲೆ, ಮೈಮೇಲೆಲ್ಲ ಬಿದ್ದವು. ಹುಚ್ಚುಹುಚ್ಚಾಗಿ ಕೂಗುತ್ತ ಕುಣಿಯತೊಡಗಿದೆ. ಮೈಮೇಲಿನ ಹುಳ ಕೊಡವ ಹೋದರೆ ಅದು ಇಳಿಬಿದ್ದ ಬಟ್ಟೆಯ ದಾರದಲ್ಲಿ ಸಿಕ್ಕು ಮತ್ತಷ್ಟು ಅವಾಂತರವಾಯ್ತು. ಅವುಗಳ ಚುಂಗು ಮೈಗೆಲ್ಲ ಹೊಕ್ಕು ಕುಂಬಳ ಎಲೆ, ಕಂಬಳಿ ಯಾವುದರಲ್ಲಿ ಉಜ್ಜಿದರೂ ಹೋಗುವುದಿಲ್ಲ. ಇಡೀ ಕುತ್ತಿಗೆ, ಮೈಕೈ ಎಲ್ಲ ಕೆಂಪೇರಿ ಉರಿ ಹತ್ತಿದ್ದಲ್ಲದೆ, ಭಯಕ್ಕೆ ವಾರದ ತನಕ ಜ್ವರ ಹಿಡಿದು ನಿದ್ದೆಯಲ್ಲೂ ಬೆಚ್ಚಿಬೆಚ್ಚಿ ಬೀಳುತ್ತಿದ್ದೆನಂತೆ.

ಹುಳಗಳ ಕುರಿತ ನನ್ನ ನಿಲುವು, ವರ್ತನೆ ಹೀಗಿರುವಾಗಲೇ ಕಾಡಿನ ಹಕ್ಕಿಗಳನ್ನು ಸಾಕುವ ಸಂದರ್ಭಗಳು ನನ್ನ ಬದುಕಲ್ಲಿ ಒದಗಿ ಬಂದವು. ಈ ಹಕ್ಕಿಗಳೆಲ್ಲವೂ ಕೋಳಿಗಳ ಹಾಗೆ ಅಕ್ಕಿ ನುಚ್ಚು, ತೌಡು ತಿನ್ನಲಾರವು. ಹೆಚ್ಚಿನ ಕಾಡು ಹಕ್ಕಿಗಳು ಹುಳ ಹುಪ್ಪಟೆ ತಿನ್ನುವ ಕೀಟಾಹಾರಿಗಳು. ಅಂಥ ಹಕ್ಕಿಗಳು ನನಗೆ ಸಿಕ್ಕಂಥ ಸಮಯದಲ್ಲಿ ಅವುಗಳ ಹೊಟ್ಟೆ ತುಂಬಿಸಲು ನಾನು ಅಕ್ಕಿ, ನುಚ್ಚು, ಹಣ್ಣು ಹಂಪಲು, ಕ್ಯಾಟ್ ಫುಡ್, ಸೆರಿಲ್ಯಾಕ್, ಹಾರ್ಲಿಕ್ಸ್ ನಂತಹ ಸರ್ಕಸ್ಸುಗಳನ್ನೆಲ್ಲ ಮಾಡಿ ಮುಗಿಸಿ, ಜೀವಮಾನವಿಡೀ ಯಾವ ಹುಳುಗಳನ್ನು ಕಂಡು ಹೆದರಿದೆನೋ ಅವೇ ಹುಳಗಳನ್ನು ಹಿಡಿಯಲು ಗಿಡಗಂಟಿಗಳಲ್ಲಿ, ಕಾಡಲ್ಲಿ ಅಲೆಯತೊಡಗಿದೆ. ಸುರಿವ ಮಳೆಯಲ್ಲಿ ಹುಲುಸಾಗಿ ಬೆಳೆದ ಪೊದೆಗಳಲ್ಲಿ ನುಸುಳಿ ಕೈ ಕಾಲು ಸೊಡ್ಡೆಲ್ಲ ತರಚಿಕೊಂಡು, ಕಷ್ಟಪಟ್ಟು ಒಂದೆರಡು ಹುಳ ಹಿಡಿದು ತಂದರೆ ನನ್ನ ಹಕ್ಕಿಗಳಿಗೆ ಅವು ರುಚಿಸುವುದಿಲ್ಲ ಅಥವಾ ಅವುಗಳಿಗೆ ತಿನ್ನುವ ಮೂಡು ಇರುವುದಿಲ್ಲ. ಕೆಲವೊಮ್ಮೆ ಭಾರೀ ಉಮೇದಿನಿಂದ ಹುಳವನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಇನ್ನೇನು ನುಂಗುತ್ತದೆ ಅನ್ನುವಾಗ ಅವು ತಪ್ಪಿಸಿಕೊಂಡು ಹಾರಿಯೇ ಹೋಗುವಾಗ ಅಥವಾ ಹಕ್ಕಿ ಹುಳವನ್ನು ಕೊಕ್ಕಿನಿಂದ ಕುಕ್ಕಿ ಕುಕ್ಕಿ ಕೊಂದು ಎಸೆದುಬಿಡುವಾಗ ನನ್ನ ಹೃದಯವೇ ಒಡೆದುಹೋಗುತ್ತಿತ್ತು. ಕಷ್ಟಪಟ್ಟು ಹಿಡಿದು ತಂದಿದೀನಿ ತಿನ್ರೋ ಎಂದು ಅಂಗಲಾಚಿದರೂ ಉಹೂಂ!

ಕಳೆದ ಮಾರ್ಚ್ ಕೊನೆಯಲ್ಲಿ ನನ್ನ ತಮ್ಮ ಪೆಟ್ಟಾದ ಒಂದು ಕಾಡುಗಿಳಿಯನ್ನು ಕೊಟ್ಟಿದ್ದ. ನೀಲಿಯೆಂದು ಅದರ ಹೆಸರು. ಇದನ್ನೇನೋ ಹಣ್ಣು ಹಂಪಲು ತಿನ್ನಿಸಿ ಸಾಕಿ ಗುಣವಾದಮೇಲೆ ಚಂದದಿಂದ ಕಾಡಿಗೆ ಬಿಟ್ಟಿದ್ದಾಯಿತು. ಅದೇ ದಿನಗಳಲ್ಲಿ ಬರಹಗಾರರಾದ ನಿಖಿಲ್ ಕೊಲ್ಪೆಯವರಿಗೆ ಸಿಕ್ಕ ಬುಲ್ಬುಲ್ ಮರಿ ನನ್ನ ಮನೆ ಸೇರಿ ‘ಜಾನೂ’ ಆದ ಮೇಲೆ ನಾವು ತಿನ್ನುವ ಹಣ್ಣು ಹಂಪಲು, ಆಹಾರ ತಿನ್ನಿಸುತ್ತಿದ್ದೆನಾದರೂ ಅದರ ಆಹಾರ ಪದ್ಧತಿಯನ್ನು ತಪ್ಪಿಸಿದ ಕೊರತೆ ಕಾಡುತ್ತಿತ್ತು. ಹಾಗಾಗಿ ಧಾರಾಕಾರ ಮಳೆಯಲ್ಲೂ ಹುಳ ಹಿಡಿಯಲು ಹೋಗತೊಡಗಿದೆ. ಹುಳ ಸಿಕ್ಕರೆ ಸಿಕ್ಕಿತು ಇಲ್ಲವೆ ಇಲ್ಲ. ಹಾಗೆಯೇ ಜಾನೂ ಅದನ್ನು ತಿಂದರೆ ತಿಂದಿತು, ಇಲ್ಲವಾದರೆ ಇಲ್ಲ!

ಹೀಗಿರುವಾಗಲೇ ಫೇಸ್ಬುಕ್ ನ ಪೀಟರ್ ಕೆ ದಾಸ್ ಎಂಬ ಸಹೃದಯ ಸ್ನೇಹಿತರು ಹಕ್ಕಿ ಸಾಕಾಣಿಕೆಗಾಗಿಯೇ ಹುಳ ಸಾಕಾಣಿಕೆಯೂ ಇರುವುದನ್ನು ವಿವರಿಸಿ ಬೆಂಗಳೂರಿನಿಂದ ಬರುವವರ ಹತ್ತಿರ ಹುಳ ಸಾಕಾಣಿಕೆಯ ‘ಕಲ್ಚರನ್ನು’ ಕಳಿಸಿಯೂ ಕೊಟ್ಟರು. ಮಿಜಿಮಿಜಿಗುಡುವ ಹುಳದ ರಾಶಿಯನ್ನು ನೋಡಿ ನಾನು ‘ಹುಸ್ಸಪ್ಪಾ’ ಎಂದು ನಿಟ್ಟುಸಿರು ಬಿಟ್ಟೆ. ಆದರೇನು? ಜಾನೂ ಹುಳಗಳನ್ನು ಮೂಸಿಯೂ ನೋಡಲಿಲ್ಲ. ಹುಳ ಕೊಟ್ಟರೆ ಕೊಕ್ಕಲ್ಲಿ ಒಂದೆರಡು ಬಾರಿ ಕುಕ್ಕಿ ಎಲ್ಲಂದರಲ್ಲಿ ಬಿಸಾಡಿಬಿಡುತ್ತಿತ್ತು. ಅದರ ಸಮಸ್ಯೆ ಅಂದರೆ ಅದು ನಾನು ತಿನ್ನುವಂಥದ್ದನ್ನು ಮಾತ್ರ ತಿನ್ನುತ್ತದೆ. ಹಾಗೆಂದು ನಾನು ಹುಳ ತಿಂದು ತೋರಿಸಲೇ?! ಅಂತೂ ಕಳೆದ ವರ್ಷದ ಧಾರಾಕಾರ ಮಳೆಗೆ ಅದೆಷ್ಟು ಜೋಪಾನ ಮಾಡುತ್ತೇನೆಂದರೂ ಹುಳದ ಕಲ್ಚರನ್ನು ತೇವಾಂಶ ಮುಕ್ತವಾಗಿ ಬೆಚ್ಚಗೆ ಇಡಲು ನನ್ನಿಂದಾಗಲೇ ಇಲ್ಲ. ಹೀಗೆ ಎಲ್ಲ ಹುಳ ಸತ್ತವು!

ಒಂದೆರಡು ತಿಂಗಳ ಹಿಂದೆ ಒಬ್ಬ ವ್ಯಕ್ತಿ ರೆಕ್ಕೆ ಮುರಿದ ಅಂಬರ ಗೀಜುಗ (ಆಶೀ ವುಡ್ ಸ್ವಾಲೋ) ಜಾತಿಯ ರೆಕ್ಕೆ ಮುರಿದ ಹಕ್ಕಿಯೊಂದನ್ನು ತಂದುಕೊಟ್ಟರು. ಅದಕ್ಕೆ ಅಜಬ್ದೆ ಎಂದು ಹೆಸರಿಟ್ಟೆ. ಹುಳ ತಿನ್ನುವ ಹಕ್ಕಿಗೆ ನಾನು ಸೆರಿಲ್ಯಾಕ್ ತಿನ್ನಿಸತೊಡಗಿದ್ದೆ. ಈಗಲಾದರೂ ಹುಳಗಳಿದ್ದಿದ್ದರೆ ಎನಿಸಿತು. ಕೂಡಲೇ ಪೀಟರ್ ಅವರಿಗೆ ಕರೆ ಮಾಡಿದೆ. ಅವರು ಮರುದಿನವೇ ಕಳಿಸಿಯೂ ಕೊಟ್ಟರು. ಆದರೆ ಎರಡೂ ಹಕ್ಕಿಗಳು ಏನು ಮಾಡಿದರೂ ಈ ಹುಳ ತಿನ್ನಲು ಸುತಾರಾಂ ತಯಾರಿಲ್ಲ. ಅದರ ರೆಕ್ಕೆ ಗುಣವಾಗುವ ತನಕ ಸುಮಾರು ಇಪ್ಪತ್ತೆರಡು ದಿನಗಳ ಕಾಲ ಅಜಬ್ದೆ ಹೊಟ್ಟೆತುಂಬ ಸೆರಿಲ್ಯಾಕನ್ನೇ ಗಪಗಪ ತಿನ್ನುತ್ತ ಗುಂಡಗುಂಡಗೆ ಮೈತುಂಬಿಕೊಂಡು ಗಟ್ಟಿಯಾಯಿತು. ನಂತರ ಅದನ್ನು ಅದು ಯಾವ ಕಾಡಿನಲ್ಲಿ ಸಿಕ್ಕಿತ್ತೂ ಅಲ್ಲಿಗೇ ಕರೆದೊಯ್ದು ತುಂಗೆಯ ನದಿಯ ಬಳಿ ಬಿಟ್ಟುಬಂದೆ.

ಮರಿಯಾಗಿದ್ದಾಗಿನಿಂದ ಸಾಕಿ ನನಗೇ ಅಂಟಿಕೊಂಡ ನನ್ನ ಜಾನೂ ಹಕ್ಕಿಗೆ ಈಗ ಹೇಗಾದರೂ ಹುಳ ತಿನ್ನುವುದು ಕಲಿಸಿ ಅಜಬ್ದೆಯಂತೆಯೇ ಕಾಡಿಗೆ ಬಿಡಬೇಕು ಎಂದು ನಿರ್ಧರಿಸಿದೆ. ಹಾಗಾದರೆ ಅವಶ್ಯವಾಗಿ ಹುಳಗಳ ಸಾಕಾಣಿಕೆ ಮಾಡಲೇಬೇಕು! ಕನಸಲ್ಲೂ ಹುಳಗಳೆಂದರೆ ಬೆಚ್ಚುತ್ತಿದ್ದ ನಾನು ಜಾನೂವಿನ ಪ್ರೀತಿಗಾಗಿ ಹುಳಗಳನ್ನೂ ಪ್ರೀತಿಸತೊಡಗಿದೆ. ದಿನೇ ದಿನೇ ಈ ಹುಳ ಕಂಡರೆ ಕರುಣೆ, ಪ್ರೀತಿ, ಮಮತೆ ಮೂಡುತ್ತಿತ್ತು. ಜಾನೂ ದಯೆ ದರ್ದು ಇಲ್ಲದೆ ಕೊಕ್ಕಿನಿಂದ ಹುಳ ಕಚ್ಚಿ ಆಚೀಚೆ ಕುಕ್ಕಿ ಕೊಲ್ಲುವಾಗ ನನಗೆ ದುಃಖವೇ ಆಗುತ್ತಿತ್ತು.

ಹೊರದೇಶಗಳಲ್ಲಾದರೆ ಇಂಥ ಹಕ್ಕಿಸಾಕಾಣಿಕೆಗಾಗಿಯೇ ಹುಳದ ಕೃಷಿ ದೊಡ್ಡ ಸಮಾಚಾರವೇನಲ್ಲ. ಆದರೆ ನಮ್ಮಲ್ಲಿ ದೊಡ್ಡ ನಗರಗಳಲ್ಲಿ ಜೀವಂತ ಹಾಗೂ ಒಣಹುಳು ಸಿಕ್ಕಾವು. ನನಗೆ ಈ ಕುರಿತು ಯಾವುದೇ ಮಾಹಿತಿ ಇಲ್ಲದ್ದರಿಂದ ಪೀಟರ್ ದಾಸ್ ಅವರು ಸಾಕಾಣಿಕೆಯ ಕುರಿತು ವಿಶದವಾಗಿ ತಿಳಿಸಿದ್ದರು.

ಅವರು ಒಂದು ಡಬ್ಬಿಯ ಮುಚ್ಚಳ ಕತ್ತರಿಸಿ ಆ ಮುಚ್ಚಳಕ್ಕೆ ಗಾಳಿಯಾಡುವಂತೆ ಜಾಲರಿ ಅಳವಡಿಸಿದ್ದರು. ಅವರು ಕಳಿಸಿದ್ದ ಕಲ್ಚರಿನಲ್ಲಿ ಕಪ್ಪು ಓಡುಹುಳ, ತಿನಿಸಲು ಸೂಕ್ತವಾದ ಬೆಳೆದ ಒಂದು ಒಂದೂವರೆ ಅಂಗುಲ ಉದ್ದದ ಗೋಧಿ ಬಣ್ಣದ ಹುಳ, ಮತ್ತವುಗಳ ಮರಿಗಳು, ಬರಿಗಣ್ಣಿಗೆ ಕಾಣದ ಮೊಟ್ಟೆಗಳು ಈ ಎಲ್ಲಾ ಅವಸ್ಥೆಯ ಹುಳುಗಳನ್ನೂ ಓಟ್ಸ್ ನಲ್ಲಿ ಹಾಕಿ ಕಳಿಸಿದ್ದರು. ಅದನ್ನೀಗ ನಾನು ಒಂದೇ ಡಬ್ಬಿಯಲ್ಲಿ ಇಡುವಂತಿಲ್ಲ. ಯಾಕೆಂದರೆ ದೊಡ್ಡ ಓಡುಹುಳುಗಳು ಚಿಕ್ಕ ಮೊಟ್ಟೆ ಹಾಗೂ ಮರಿಗಳನ್ನು ತಿಂದುಹಾಕುತ್ತವೆ.
ಆದುದರಿಂದ ಇನ್ನೆರಡು ಡಬ್ಬಗಳನ್ನು ತೆಗೆದುಕೊಂಡು ಅವುಗಳ ಮುಚ್ಚಳ ಕತ್ತರಿಸಿ ಜಾಲರಿ ಅಳವಡಿಸಿ ಎರಡಕ್ಕೂ ಓಟ್ಸ್ ತುಂಬಿದೆ. ಈಗ ಪೀಟರ್ ದಾಸ್ ಕಳಿಸಿದ ಡಬ್ಬಿ ಸೇರಿ ಮೂರು ಡಬ್ಬಿಯಾದವು. ಈ ಡಬ್ಬಿಗಳಿಗೀಗ ಒಂದೊಂದು ಚಿಕ್ಕ ಕ್ಯಾರೆಟ್ ಅಥವಾ ಆಲೂಗಡ್ಡೆಯ ತುಂಡನ್ನು ಹಾಕಬೇಕು. ಇದರ ತೇವಾಂಶಕ್ಕೆ ಉತ್ಪತ್ತಿಯಾಗುವ ಬೂಸ್ಟೇ ಹುಳುಗಳ ಆಹಾರ. ಈಗ ಒಂದು ಡಬ್ಬಿಯಲ್ಲಿ ಓಡುಹುಳುವನ್ನು ಒಂದರಲ್ಲೂ ಬೆಳೆದ ಹುಳುಗಳನ್ನು ಒಂದರಲ್ಲೂ ಸಣ್ಣ ಮೊಟ್ಟೆ ಮರಿಗಳನ್ನು ಒಂದರಲ್ಲೂ ವಿಂಗಡಿಸಿ ತುಂಬಬೇಕು.

ಸಂಜೆ ಐದರ ಸುಮಾರಿಗೆ ಅರ್ಧಗಂಟೆಯೊಂಗೆ ಈ ವಿಂಗಡಣೆಯ ಕಾರ್ಯ ಮುಗಿಸುತ್ತೇನೆಂದು ದಿನಪತ್ರಿಕೆ ಹರಡಿ ಅದರಲ್ಲಿ ಕಲ್ಚರ್ ಸುರಿದು ಹುಳ ಹೆಕ್ಕತೊಡಗಿದೆ. ಇತ್ತಲ ಹುಳ ತುಂಬಿದರೆ ಅತ್ತ ಬುರುಬುರು ಓಡುವ, ಅತ್ತಲ ಹುಳ ಹಿಡಿದು ತುಂಬುವುದರೊಳಗೆ ಇತ್ತ ಬಿಜಿಬಿಜಿ ಹರಿದಾಡುವ ಹುಳುಗಳನ್ನೇ ದಿಟ್ಟಿಸಿ ನೋಡುತ್ತಾ ಏಕಾಗ್ರತೆಯಿಂದ ಯಂತ್ರದಂತೆ ಒಂದೇ ಸಮ ಹುಳ ಹೆಕ್ಕುತ್ತಾ ಹೆಕ್ಕುತ್ತಾ ರಾತ್ರಿ ಹನ್ನೆರಡು ದಾಟಿತು. ನಂತರ ಚಾರ್ಲಿ ಚಾಪ್ಲಿನ್ನನ ಮಾಡ್ರನ್ ಟೈಮ್ಸ್ ಸಿನೆಮಾದಲ್ಲಿ ಚಾಪ್ಲಿನ್ನನಿಗೆ ಎಲ್ಲಿ ನೋಡಿದರಲ್ಲಿ ಬೋಲ್ಟ್ ನಟ್ಟುಗಳೇ ಕಾಣುವಂತೆ ಎತ್ತ ಕಣ್ಣು ಹಾಯಿಸಿದರೂ ಹುಳಗಳೇ! ಸ್ನಾನ ಮುಗಿಸಿ ಮಲಗಿದರೆ ನಿದ್ದೆಯಲ್ಲೂ ಹುಳಗಳೇ!

ಏನೇ ಇರಲಿ, ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು. ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಅಲ್ಲವೇ?

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ವಾಸ. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಪತ್ರಿಕೆಗಳು, ವೆಬ್ ಪೋರ್ಟಲ್ ಗಳಲ್ಲಿ ಬರಹಗಳು ಪ್ರಕಟವಾಗಿವೆ. ‘ಹಲಗೆ ಮತ್ತು ಮೆದುಬೆರಳು’, ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಅವರ ಪ್ರಕಟಿತ ಕಾವ್ಯಸಂಕಲನಗಳು.

Share

One Comment For "ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು"

 1. Ashoka
  29th March 2019

  ಅತ್ಯಂತ ಚೆಂದದ ಬರಹ. ಇಷ್ಟೆಲ್ಲಾ ಹುಳುಗಳ ಹೆಸರು ಖಂಡಿತ ನಮಗೆ ತಿಳಿದಿರಲಿಲ್ಲ.
  ನಾವೂ ರೇಷ್ಮೆ ಹುಳು ಸಾಕುತ್ತಿದ್ದೆವು. ಚಿಕ್ಕಂದಿನಲ್ಲಿ ಅವನ್ನು ಮುಟ್ಟಲು ನನಗೂ ಭಯವಾಗುತ್ತಿತ್ತು ನಂತರ ಅನಿವಾರ್ಯವಾಯಿತು. ನನ್ನ ಸಂಬಂಧಿಯೊಬ್ಬರ ಮಗಳಿಗೆ ರೇಷ್ಮೆ ಹುಳ ಸಾಕುವಾಗ ಕಾವಲಿರಬೇಕಿತ್ತು. ಹೇಗಾದರೂ ಎಲ್ಲರನ್ನೂ ಯಾಮಾರಿಸಿ ಗಬಗಬನೆ ತಿಂದು ಬಿಡುತ್ತಿದ್ದಳು.
  ನಮ್ಮ ಅಜ್ಜಿ ಮನೆಗೆ ಹೋದರೆ ತಿಂಡಿ ಅಂತ ಸಿಗುತ್ತಿದ್ದುದು ಹುರಿದ ಮಳೆ ಹುಳುಗಳೇ, ಈ ಮಳೆ ಹುಳಗಳನ್ನು ಒಮ್ಮೆ ಹುರಿದು ಇಟ್ಟರೆ ಕೆಡುವುದೇ ಇಲ್ಲ.
  ನಿಮ್ಮ ಬರಹದ ಕೊನೆಯ ಸಾಲುಗಳು ಆತ್ಮೀಯವಾಗಿವೆ. ನಿಮ್ಮ ಪಕ್ಷಿ ಪ್ರೀತಿಗೆ ಅಭಿನಂದನೆಗಳು.

  Reply

Leave a comment

Your email address will not be published. Required fields are marked *

Recent Posts More

 • 1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 2 weeks ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 2 weeks ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  4 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...