Share

ನನ್ನೊಳಗಿನ ಮಗುವಿಗೊಂದು ಪತ್ರ
ಪ್ರಸಾದ್ ನಾಯ್ಕ್

 

 

 

ನಿನ್ನೆ ನನ್ನ ಹಳೆಯ ಕಡತಗಳನ್ನೆಲ್ಲಾ ತೆರೆದು ಏನನ್ನೋ ಹುಡುಕುತ್ತಿದ್ದಾಗ ನೀನು ಬಿಡಿಸಿದ ಕೆಲವು ಚಿತ್ರಗಳು ಸಿಕ್ಕವು. ನಿಜಕ್ಕೂ ಅದ್ಭುತವಾಗಿದ್ದವು ಅವುಗಳು.

 

 

 

ಕ್ಕಳ ದಿನಾಚರಣೆಯ ಋತುವಿನಲ್ಲಿ ನಮ್ಮದೇ ಹನ್ನೆರಡರ ವ್ಯಕ್ತಿತ್ವಕ್ಕೊಂದು ಪತ್ರ ಬರೆದರೆ ಹೇಗಿರುತ್ತದೆ ಎಂಬ ಯೋಚನೆಯೊಂದು ತಲೆಯೆತ್ತಿತು. ಸದ್ಯ ಪತ್ರಗಳಂತೂ ಮಾಯವಾಗಿವೆ. ನಿತ್ಯಜೀವನದ ಜಂಜಾಟದಲ್ಲಿ ನಮ್ಮೊಳಗಿನ ಮಗುವೂ ನಿಧಾನಕ್ಕೆ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಈ ನಿಟ್ಟಿನಲ್ಲೇ ಇವೆರಡನ್ನೂ ಒಂದೇ ವೇದಿಕೆಗೆ ತಂದಿಡುವ ಪುಟ್ಟ ಪ್ರಯತ್ನವಿದು.

~

ಪ್ರೀತಿಯ ಹನ್ನೆರಡರ ನನಗೆ,
ನೆನಪುಗಳಲ್ಲಾದರೂ ಕ್ಷೇಮವಾಗಿದ್ದೀಯಾ ಎಂದು ಭಾವಿಸುತ್ತೇನೆ. ಇದು ಇ-ಮೈಲ್ ಗಳ ಯುಗ. ಆದರೂ ನಿನಗೆ ಪತ್ರವನ್ನು ಬರೆಯುವ ಸಾಹಸವನ್ನು ಮಾಡಿದ್ದೇನೆ. ಇನ್ಯಾರಿಗಾದರೂ ಪತ್ರ ಬರೆದರೆ ನೀನ್ಯಾವ ಓಬೀರಾಯನ ಕಾಲದಲ್ಲಿದ್ದೀಯಾ ಎಂದು ಕೇಳುತ್ತಿದ್ದರೋ ಏನೋ. ಆದರೆ ನನಗೆ ನಾನೇ ಬರೆಯುತ್ತಿರುವ ಪತ್ರವಲ್ಲವಾ ಇದು? ಹಾಗಿದ್ದಾಗ ಆತ್ಮಸಾಕ್ಷಿಯೆದುರು ಎಂಥಾ ನಾಟಕ?

ನಿನಗೆ ನೆನಪಿದೆಯಾ? ನಿನ್ನ ವಯಸ್ಸಿನಲ್ಲಿ ನನ್ನಂತಾಗಲು ನೀನು ಹಾತೊರೆಯುತ್ತಿದ್ದೆ. ಆದಷ್ಟು ಬೇಗ ದೊಡ್ಡವನಾಗಬೇಕು ಎಂಬ ಅವಸರ ನಿನಗೆ. ಹಾಫ್ ಟಿಕೆಟ್ ಸೀಟಿನ ಹೆಸರಿನಲ್ಲಿ ಸಿಕ್ಕಸಿಕ್ಕವರ ತೊಡೆಗಳ ಮೇಲೆ ಮುದುಡಿ ಕೂರುವ ಬದಲು ಇಡೀ ಸೀಟು ತನಗೇ ಸೇರಿದ್ದು ಎನ್ನುವ ಹೆಮ್ಮೆಯಲ್ಲಿ ಕಾಲು ಅಗಲಿಸಿ ಕೂರುವ ತವಕ. ಅಪ್ಪ ಸಂಪಾದಿಸುತ್ತಾರೆ ಎಂದು ನಿನಗೆ ಗೊತ್ತಿತ್ತು. ಅದೇನು, ಎಷ್ಟು ಅಂತೆಲ್ಲಾ ಗೊತ್ತಿರಲಿಲ್ಲ. ಆದರೆ ನನ್ನ ಕೈಗೂ ಒಂದಿಷ್ಟು ಕಾಸು ಸಿಕ್ಕರೆ ದಿನವಿಡೀ ಆ ಐಸ್ ಕ್ಯಾಂಡಿ ತಿಂದಿರುತ್ತಿದ್ದೆ ಎಂಬ ಪೆದ್ದು ಕನಸು ನಿನ್ನದು. ‘ಇಂವ ಅಮ್ಮನ ಬಾಲ’ ಎಂದು ಇತರರು ನಗೆಯಾಡಿದರೆ ನಿನಗೆ ಸಿಟ್ಟು ಬರುತ್ತಿತ್ತು. ಆದರೂ ಇಡೀ ದಿನ ಅಮ್ಮನ ಸೆರಗು ಹಿಡಿದುಕೊಂಡೇ ತಿರುಗುತ್ತಿದ್ದೆ ಗೊತ್ತಾ? ಕೆಲವೊಮ್ಮೆ ಆ ದಿನಗಳನ್ನು ನೆನೆಸಿಕೊಂಡರೆ ನಗು ಬರುತ್ತದೆ.

ಆದರೆ ಒಂದಂತೂ ನಿಜ. ಆಗ ನಿನಗೆ ಬಹುತೇಕ ಎಲ್ಲದರಲ್ಲೂ ಆಸಕ್ತಿಯಿತ್ತು. ಚೆಂದಗೆ ಚಿತ್ರ ಗೀಚುತ್ತಿದ್ದೆ. ಆಡುವ ವಯಸ್ಸಿನಲ್ಲೂ ಏನೇನೋ ಓದುತ್ತಿದ್ದೆ. ಉಳಿದವರು ಏನಂದುಕೊಳ್ಳುತ್ತಾರೋ, ನಿನ್ನ ಕಂಠ ಹೇಗಿದೆಯೋ ಎಂಬ ಪರಿವೆಯೇ ಇಲ್ಲದೆ ಅವಕಾಶ ಸಿಕ್ಕಾಗಲೆಲ್ಲಾ ಹಾಡುತ್ತಿದ್ದೆ. ಬಹಳಷ್ಟು ವಿಷಯಗಳಲ್ಲಿ ನೀನು ಉಳಿದವರೆಲ್ಲರಿಗಿಂತ ಕಳಪೆ ಎಂಬುದೂ ನಿನಗೆ ಗೊತ್ತಿತ್ತು. ಭಾಷಣ ಅಂಥವುಗಳಲ್ಲೊಂದು. ಆದರೂ ನಾಲ್ಕಾರು ಸಾಲು ಏನನ್ನೋ ಬಾಯಿಪಾಠ ಮಾಡಿಕೊಂಡು ಹೋಗಿ ಹೇಳಿಬರುತ್ತಿದ್ದೆ. ಆಗ ನಿನ್ನ ಕಾಲುಗಳು ಸಣ್ಣಗೆ ಕಂಪಿಸುತ್ತಿದ್ದವು. ನಿನ್ನ ಎಳೆಯ ದೇಹವು ಕಲ್ಲಿನಂತೆ ಸ್ಥಿರವಾಗಿತ್ತು. ಕೈಗಳು ನೆಲ ನೋಡುತ್ತಿದ್ದರೂ ಮುಷ್ಟಿ ಹಾಕಿಕೊಂಡಿದ್ದವು, ದೇಹಕ್ಕೆ ಅಂಟಿಸಿಟ್ಟಂತೆ ಬಿಗಿಯಾಗಿ ತಾಗಿಕೊಂಡಿರುತ್ತಿದ್ದವು.

ಆಗ ನೀನು ಎದುರಿಗಿದ್ದ ನಿನ್ನ ಸಹಪಾಠಿಗಳ ಮುಖವನ್ನು ನೋಡುವ ಮೊದಲು ದೂರದ ಗೋಡೆಯನ್ನು ದಿಟ್ಟಿಸುತ್ತಾ ನಿರ್ಲಿಪ್ತನಂತೆ ಏನೋ ಮಾತಾಡಿ, ಹರಕೆ ಸಂದಿಸುವವನಂತೆ ಹೇಳಿ ಹೋಗುತ್ತಿದ್ದೆ. ಎಲ್ಲರೂ ನಿನ್ನನ್ನು ನೋಡಿ ನಗುತ್ತಿದ್ದಾರೆ ಎಂದು ನಿನಗನ್ನಿಸುತ್ತಿತ್ತು. ಆ ಭಯದಿಂದಲೇ ನೀನು ಭಾಷಣ ಮಾಡುತ್ತಿದ್ದಾಗ ಉಳಿದವರನ್ನು ನೋಡುತ್ತಿರಲಿಲ್ಲ. ಭಾಷಣದ ಆ ಐದು ನಿಮಿಷಗಳು ನಿನಗೆ ಐದು ಯುಗಗಳಂತೆ ಭಾಸವಾಗುತ್ತಿದ್ದವು. ಆದರೂ ನೀನು ಇವುಗಳನ್ನು ಮಾಡುತ್ತಿದ್ದೆ. ನೈಜ ಮತ್ತು ಕಾಲ್ಪನಿಕ ಸವಾಲುಗಳನ್ನು ಅವುಡುಗಚ್ಚಿ ಸಹಿಸಿಕೊಂಡು ಜಯಿಸಲು ಪ್ರಯತ್ನಿಸುತ್ತಿದ್ದೆ. ನಿನಗಿದೆಲ್ಲಾ ಒಂದು ನೆನಪಿಡುವ ಸಂಗತಿಯೇ ಅಲ್ಲದಿರಬಹುದು. ಆದರೆ ನನಗಿನ್ನೂ ನೆನಪಿವೆ ಆ ದಿನಗಳು. ಮಬ್ಬುಮಬ್ಬಾಗಿಯಾದರೂ ನೆನಪಿವೆ. ನನ್ನದೇ ಕಥೆಯನ್ನು ನನಗೇ ಏಕೆ ಹೇಳುತ್ತಿದ್ದೇನೆ ಅಂದುಕೊಂಡೆಯಾ? ನಿನ್ನ ರೂಪದಲ್ಲಿ ನನ್ನೊಳಗಿದ್ದ ಹೋರಾಟದ ಕಿಚ್ಚು ಅದೆಲ್ಲಿ ಮಾಯವಾಯಿತು ಎಂದು ಯೋಚಿಸುತ್ತಿದ್ದೇನೆ. ನನ್ನದೂ ಒಂದು ಅಸ್ತಿತ್ವವಿದೆ ಎಂದು ಪ್ರಮಾಣಿಸಿ ತೋರಿಸುವ ಹಪಹಪಿಯಾಗಿತ್ತಾ ಅದು? ಅಂದು ಸೋಲು-ಗೆಲುವುಗಳು ಕೇವಲ ನನ್ನದಷ್ಟೇ ಆಗಿದ್ದವು ಎಂಬ ಸ್ವಾತಂತ್ರ್ಯವಿತ್ತೇ? ಹೀಗೆ ಬಹಳಷ್ಟು ಯೋಚನೆಗಳು. ಈಗ ಮತ್ತೆ ಹನ್ನೆರಡಾಗುವ ಬಯಕೆ ಹುಟ್ಟಿದೆ. ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದಕ್ಕಲ್ಲ. ಸೋಲುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಆದದ್ದಾಗಲಿ ಎಂಬ ಹುಚ್ಚುಧೈರ್ಯದಿಂದ ಧುಮುಕಿ ತನ್ನೊಳಗಿನ ಸಾಮರ್ಥ್ಯವನ್ನು ಕಾಯಾ ವಾಚಾ ಮನಸಾ ಪ್ರಸ್ತುತಪಡಿಸುವುದಕ್ಕೆ.
ಆಗ ನೀನೆಷ್ಟು ಖುಷಿಯಾಗಿದ್ದೆ ಗೊತ್ತಾ? ತೊಂಭತ್ತರ ದಶಕದ ಕುಡಿ ನೀನು. ಅಂದರೆ ಹೇಳಿಕೊಳ್ಳುವಷ್ಟು ಹಳೆಯ ಜಮಾನಾವೂ ಅಲ್ಲ. ತೀರಾ ಹೊಸದೂ ಅಲ್ಲ. ಆಗ ಲ್ಯಾಂಡ್-ಲೈನುಗಳಿದ್ದವು. ರೇಡಿಯೋಗಳು ಮೆಲ್ಲಗೆ ಮಾಯವಾಗುತ್ತಿದ್ದರೂ ರೀಲುಗಳ ಕ್ಯಾಸೆಟ್ಟುಗಳಿದ್ದವು. ಆಗಲೇ ಕೆಲ ಮನೆಗಳಲ್ಲಿ ಕಂಪ್ಯೂಟರ್ ಬಂದು ಕೂತಿತ್ತು, ನಿನ್ನ ಮನೆಯೊಂದನ್ನು ಬಿಟ್ಟು! ಆಗ ನಿನ್ನ ಮನೆಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಿದ್ದು ದೂರದರ್ಶನ ಮಾತ್ರ. ಭಾನುವಾರ ನಾಲ್ಕಕ್ಕೆ ಪ್ರಸಾರವಾಗುತ್ತಿದ್ದ ಚಲನಚಿತ್ರವೇ ನಿನ್ನ ಏಕಮಾತ್ರ ಮನರಂಜನೆ. ಅದೆಲ್ಲೋ ಬೇಸಿಗೆಯ ರಜೆಯಲ್ಲಿ ಚಿತ್ರಹಾರ್ ನೋಡುತ್ತಿದ್ದೆ ಎಂಬ ನೆನಪು. ಆದರೂ ನೀನು ಖುಷಿಯಾಗಿದ್ದೆ. ಅದಿಲ್ಲ ಇದಿಲ್ಲ ಎಂಬ ವೃಥಾ ದೂರುಗಳು ನಿನಗಿರಲಿಲ್ಲ. ನಿನಗೊಂದು ಪುಸ್ತಕ ಸಿಕ್ಕರೆ ಅದರಲ್ಲೇ ಕಳೆದುಹೋಗುತ್ತಿದ್ದೆ. ಈಗ ನೋಡು, ಅದೆಷ್ಟು ಓಡಾಟ ಜಂಜಾಟ! ಬಾಚಿದಷ್ಟೂ ಕಮ್ಮಿಯೆನಿಸುತ್ತಿದೆ. ಅದ್ಯಾರದ್ದೋ ಅಳತೆಗೋಲಿಗೆ ಸರಿಹೊಂದಲು ದಿನರಾತ್ರಿ ಒದ್ದಾಡುತ್ತಿದ್ದೇನೆ.

ಜೀವನ ಅದೆಷ್ಟು ಬದಲಾಗುತ್ತದಲ್ವಾ? ಹನ್ನೆರಡಕ್ಕೆ ನೀನು ಹಾಗಿದ್ದೆ. ಹದಿನೇಳಕ್ಕೆ ಕೊಂಚ ಬದಲಾದೆ. ಇಪ್ಪತ್ತೆರಡಕ್ಕೆ ಮತ್ತಿನ್ನೇನೋ ಆದೆ. ಸದ್ಯ ನಾನಾಗಿ ಹೀಗಿರುವೆ. ಮುಂದೇನಾಗುತ್ತೋ ಗೊತ್ತಿಲ್ಲ. ಹೊಸದನ್ನು ಅಪ್ಪಿಕೊಳ್ಳಲು ಹಳೆಯ ಕೆಲವನ್ನು ಕಳಚಿಕೊಳ್ಳುವುದು ಅನಿವಾರ್ಯವಂತೆ. ಆದರೆ ಹಾಗೆಂದು ನಮ್ಮತನವನ್ನು ನಾವು ಕಳೆದುಕೊಳ್ಳುವುದು ಸಾಧ್ಯವೇ? ನನ್ನೊಳಗಿನ ನಿನ್ನನ್ನು ತೊರೆಯಲು ಸಾಧ್ಯವೇ? ಹೊರಗಿನವರು ಏನನ್ನಾದರೂ ಹೇಳಲಿ. ಯಾಕಾದರೂ ನಾನು ನಿನ್ನನ್ನು ಕಳೆದುಕೊಳ್ಳಬೇಕು, ಅಲ್ವಾ?

ನಿನ್ನೆ ನನ್ನ ಹಳೆಯ ಕಡತಗಳನ್ನೆಲ್ಲಾ ತೆರೆದು ಏನನ್ನೋ ಹುಡುಕುತ್ತಿದ್ದಾಗ ನೀನು ಬಿಡಿಸಿದ ಕೆಲವು ಚಿತ್ರಗಳು ಸಿಕ್ಕವು. ನಿಜಕ್ಕೂ ಅದ್ಭುತವಾಗಿದ್ದವು ಅವುಗಳು. ಇಂದಿಗೂ ಅಷ್ಟು ಚೆನ್ನಾಗಿ ನಾನು ಚಿತ್ರ ಬರೆಯಬಲ್ಲೆನೇ ಎಂಬ ಬಗ್ಗೆ ಸಂಶಯವಿದೆ ನನಗೆ. ಮೊನ್ನೆ ಅವಳು ನೀಲಿ ಕಣ್ಣಿನ ಹುಡುಗಿ, ಅದೇ ಮಾರಾಯ, ಎರಡನೇ ಬೆಂಚಿನಲ್ಲಿ ಕೂರುತ್ತಿದ್ದವಳು ನನ್ನನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಗೋ ಹುಡುಕಿ ಹಾಯ್ ಎಂದಳು. ಈಗಲೂ ಚಿತ್ರ ಬರೆಯುತ್ತೀಯಾ ಎಂದು ಕೇಳಿದಳು. ಈಗ ಅದಕ್ಕೆಲ್ಲಾ ಟೈಮೇ ಸಿಗುತ್ತಿಲ್ಲ ಮಾರಾಯ್ತೀ ಅಂದೆ. ಅವಳಿಗೆ ಎಷ್ಟೆಲ್ಲಾ ನೆನಪಿದೆಯಲ್ಲಾ ಎಂದು ನನಗಂದು ಅಚ್ಚರಿಯಾಯಿತು. ನಿಜಕ್ಕೂ ನಾನ್ಯಾಕೆ ಈಗ ಬಣ್ಣ-ಕುಂಚ ಹಿಡಿಯುತ್ತಿಲ್ಲ ಎಂದು ಯೋಚಿಸಿದೆ. ಸತ್ಯವಾಗಿಯೂ ಸಮಯವೇ ಇಲ್ವಾ ಎಂದು ತಲೆಕೆರೆದುಕೊಂಡೆ. ಹಾಗೇನಿಲ್ಲ ಎಂದು ಒಳದನಿಯು ಹೇಳಿತು. ಆಗ ಇವೆಲ್ಲಾ ಎಷ್ಟು ಗಂಭೀರವಾಗಿತ್ತಲ್ವಾ? ಇದೇ ಜೀವನ ಅಂದುಕೊಂಡಿದ್ದೆ ನೀನು. ನಿನ್ನಲ್ಲಿದ್ದ ಆ ಉತ್ಸಾಹವನ್ನೇ ಈಗ ಹುಡುಕುತ್ತಿದ್ದೇನೆ ಮಾರಾಯ. ಕಾಸು ಗಿಟ್ಟಲು ಮಾತ್ರ ಹವ್ಯಾಸಗಳು ಬೇಕಾ? ಆತ್ಮತೃಪ್ತಿಗಾಗಿ ಮಾಡಬಾರದಾ? ಅದಕ್ಕೇ ಹೇಳಿದ್ದು ನಾನು. ಹನ್ನೆರಡಕ್ಕೆ ಮತ್ತೆ ಮರಳುವ ಆಸೆಯಾಗುತ್ತಿದೆ ಎಂದು.

ಅಂದಹಾಗೆ ನೀನು ಹನ್ನೆರಡರಲ್ಲಿ ಅದೆಂಥಾ ದೊಡ್ಡ ಪೆದ್ದನಾಗಿದ್ದೆ ಗೊತ್ತಾ? ಆ ಮೋಟುಜಡೆಯವಳೆಂದರೆ ನಿನಗೆ ಭಾರೀ ಅಕ್ಕರೆ. ಯಾರ ಜೊತೆಗೂ ಸುಲಭವಾಗಿ ಬೆರೆಯದ ನೀನು ಅವಳೊಂದಿಗೆ ಮಾತ್ರ ಖುಷಿಖುಷಿಯಾಗಿದ್ದೆ. ಆಹಾ, ಮೂತಿ ನೋಡಬೇಕು ನಿನ್ನದು, ಇದಕ್ಕೆ ನಾಚಿಕೆ ಬೇರೆ ಕೇಡು. ಅದೇನೆಂದು ನಿನಗೆ ನಿಮ್ಮಪ್ಪನಾಣೆಗೂ ಗೊತ್ತಿರಲಿಲ್ಲ. ಆದರೂ ಅದೆಂಥದ್ದೋ ರೋಮಾಂಚನ, ಪುಳಕ. ಮುಂದೆ ಇದು ನಿನಗೆ ಹದಿನೇಳರಲ್ಲೂ ಆಯಿತು. ಇಪ್ಪತ್ತರಲ್ಲೂ ಆಯಿತು. ಆದರೆ ಯಾವುದರಲ್ಲೂ ಮೊದಲಿನಷ್ಟು ತಾಜಾತನವಿರಲಿಲ್ಲ ಗೊತ್ತಾ? ಇನ್ನು ನಿನ್ನ ಹನ್ನೆರಡರ ಪೆದ್ದುತನಗಳ ಬಗ್ಗೆ ತೀರಾ ತಲೆಕೆಡಿಸಿಕೊಳ್ಳಬೇಡ. ಈಗ ನನಗೆ ಗೊತ್ತಾಗಿದೆ ಆ ಎಳೇವಯಸ್ಸಿನಲ್ಲಿ ಎಲ್ಲರೂ ಕೂಡ ಪೆದ್ದುಗಳೇ ಎಂದು. ಇನ್ನು ನಿನ್ನ ಗೊಂದಲಗಳು, ಸೋಲುಗಳು, ಕೀಳರಿಮೆಗಳು, ತಪ್ಪು ಹೆಜ್ಜೆಗಳು ಇವುಗಳನ್ನೆಲ್ಲಾ ನೆನಪಿಸಿಕೊಂಡು ಮನದ ಗಾಯವನ್ನು ಕೆರೆದು ಕೆರೆದು ಮತ್ತಷ್ಟು ದೊಡ್ಡದು ಮಾಡಬೇಡ. ನೀನು ಪರಿಪೂರ್ಣನಲ್ಲ. ಆದರೂ ನನಗೆ ನಿನ್ನ ಬಗ್ಗೆ ಅಭಿಮಾನವಿದೆ. ನೀನಂದು (ನಿನ್ನ ಪೆದ್ದುತನದ ಹೊರತಾಗಿಯೂ) ಹೇಗೋ ನದಿ ದಾಟಿಸದಿದ್ದರೆ ನಾನಿಂದು ನಿನ್ನನ್ನುದ್ದೇಶಿಸಿ ಪತ್ರವನ್ನು ಬರೆಯಲಾಗುತ್ತಿತ್ತೇ?

ಜಗತ್ತು ಭಾರೀ ಗೊಂದಲಮಯವಾಗಿದೆ ಕಣೋ. ಮೊನ್ನೆ ನಿನ್ನದೇ ಪ್ರಾಯದ ನಮ್ಮ ಪಕ್ಕದ ಬೀದಿಯ ಕೆಲ ಚಳ್ಳೆಪಿಳ್ಳೆಗಳೊಂದಿಗೆ ಆಡುತ್ತಿದ್ದೆ. ಸ್ವಲ್ಪ ಹೊತ್ತಿನಲ್ಲೇ ಪಕ್ಕದ ಮನೆಯ ಅಂಕಲ್ ಬಂದು `”ಏನ್ರೀ, ಇದೇನು ಆಡೋ ವಯಸ್ಸಾ ನಿಮ್ಮದು? ಇವರುಗಳದ್ದು ಕಮ್ಮಿ ಅಂತ ನೀವೂ ಸೇರ್ಕೊಂಡುಬಿಟ್ರಿ. ಸರಿಹೋಯ್ತು” ಅಂದುಬಿಟ್ಟರು. ಅಷ್ಟಕ್ಕೇ ನನ್ನ ಉತ್ಸಾಹವೆಲ್ಲಾ ಜರ್ರನೆ ಇಳಿದುಹೋಯಿತು. ಇಂದು ಇವಳು ಬಂದು ನನ್ನ ಹಣೆಗೊಂದು ಮುತ್ತಿಕ್ಕಿ “ಯಾಕೋ ಯಾವತ್ತೂ ಸುಡುಸುಡು ಅಂತಿರ್ತೀಯಾ, ಸ್ವಲ್ಪ ಮಗುವಿನಂತೆ ನಗೋ” ಎಂದಳು. ಎರಡೆರಡು ಇಮೇಜ್ ಸಂಭಾಳಿಸೋದು ಅದೆಷ್ಟು ಕಷ್ಟ ಗೊತ್ತಾ? ನಂತರ ರಾತ್ರಿ ಬಾಲ್ಕನಿಯಲ್ಲಿ ಕುಳಿತು ಕಾಫಿ ಹೀರುತ್ತಿದ್ದಾಗ ಆ ಅಂಕಲ್ ಹೇಳಿದ್ದಕ್ಕೆ ನಾನು ಅಷ್ಟೆಲ್ಲಾ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿತ್ತೇ ಎಂದೆನಿಸಿ ನಿರಾಳನಾದೆ. ಇನ್ನು ಇವಳ ಮಾತು ಕೇಳಿ ಗಲಿಬಿಲಿಯಾಗಿ ಕೂಡಲೇ ಕನ್ನಡಿಯೆದುರು ಹೋಗಿ ನಿಂತೆ. ನನ್ನ ಅಸಲಿ ವಯಸ್ಸಿಗಿಂತಲೂ ಹೆಚ್ಚಿನ ನೆರಿಗೆಗಳು ಮುಖದಲ್ಲಿ ಕಂಡವು. ಬೆಳ್ಳಿಕೂದಲು ಅಲ್ಲಲ್ಲಿ ಇಣುಕುತ್ತಿತ್ತು. ಕೊನೆಯ ಬಾರಿ ಮನಬಿಚ್ಚಿ ನಕ್ಕಿದ್ದು ಯಾವಾಗ ಎಂದು ನೆನೆಪು ಮಾಡಿಕೊಳ್ಳಲು ಯತ್ನಿಸಿದೆ. ನೀನೇ ಹೇಳು? ಇಂಥದ್ದೆಲ್ಲಾ ಟೆನ್ಷನ್ನುಗಳಿದ್ದವಾ ಹನ್ನೆರಡರಲ್ಲಿ?

ನಿನಗೊಂದು ಪತ್ರ ಬರೆಯೋಣ ಎಂದರೆ ಹಳಹಳಿಸಿಕೊಂಡಿದ್ದೇ ಆಯಿತು. ಇರಲಿ. ನೀನು ಮಾತ್ರ ಹೀಗೇ ಇರು. ಆಗಾಗ ನನ್ನೊಳಗಿನಿಂದಲೂ ಹೊರಹೊಮ್ಮುತ್ತಿರು. ನಾನು ಹಳಿತಪ್ಪುತ್ತಿದ್ದರೆ ತಲೆಗೊಂದು ಕುಟ್ಟಿ ಎಚ್ಚರಿಸು. ನಾನೂ ಒಂದಿಷ್ಟು ಸಮಯವನ್ನಾದರೂ ನಿನ್ನೊಂದಿಗೆ ಕಳೆಯಲು ಪ್ರಯತ್ನಿಸುತ್ತೇನೆ. ನೀನು ಜೋಪಾನ ಮತ್ತೆ!

ಇಂತೀ ನಿನ್ನ ವಯಸ್ಕ ವ್ಯಕ್ತಿತ್ವ

—-

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರು. ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 2 weeks ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 2 weeks ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  4 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...