Share

ಪ್ರಸಾದ್ ಪಟ್ಟಾಂಗ | ಫಿಫಾ ಫಿವರ್

ಅಂದು ಎಲ್ಲರ ಕಣ್ಣುಗಳೂ ಬೇರೇನನ್ನೋ ದಿಟ್ಟಿಸುತ್ತಿದ್ದವು.

ಅದೊಂದು ಸುಂದರ ರೆಸ್ಟೊರೆಂಟ್. ಆವರಣದ ಒಳಗೂ ಹೊರಗೂ ಬಂದವರಿಗೆ ಕುಳಿತುಕೊಳ್ಳಲು ಸಾಕಷ್ಟು ಜಾಗವಿರುವಂಥದ್ದು. ಜೊತೆಗೇ ಒಂದು ಪುಟ್ಟ ಮೈದಾನದಂತಿರುವ ಜಾಗವನ್ನೂ, ಈಜುಕೊಳವನ್ನೂ ಹೊಂದಿರುವ ಸುಸಜ್ಜಿತ ರೆಸ್ಟೊರೆಂಟ್. ನಾನು ಪ್ರತೀ ತಿಂಗಳು ಲುವಾಂಡಾಗೆ ಬಂದಿಳಿದಾಗಲೆಲ್ಲಾ ಇಲ್ಲಿಯ ಸಿಬ್ಬಂದಿಯೇ ನನಗೆ ಅನ್ನದಾತರು. ಹೀಗಾಗಿ ಎಲ್ಲೆಲ್ಲೂ ನನಗೆ ಪರಿಚಿತ ಮುಖಗಳೇ. ಅಂದು ಮಾತ್ರ ಸಿಬ್ಬಂದಿಯೊಬ್ಬ ಗಡಿಬಿಡಿಯಲ್ಲಿ ನನ್ನ ಆರ್ಡರ್ ಬರೆದುಕೊಂಡು ಅಷ್ಟೇ ಅವಸರದಲ್ಲಿ ಖಾದ್ಯಗಳನ್ನು ತಂದಿಟ್ಟು ಹೋಗಿದ್ದೂ ಆಯಿತು. ಇತ್ತ ಅರ್ಧ ಅಡಿಯಷ್ಟು ಉದ್ದವಿದ್ದ ಮೀನನ್ನು ನೋಡುತ್ತಲೇ ಬೇರೇನೂ ಕಾಣದಂತಾಗಿ ನಾನು ಭೋಜನದಲ್ಲಿ ಮುಳುಗಿಹೋದೆ. ಬಗಲಿನಲ್ಲೇ ಅಟ್ಲಾಂಟಿಕ್ ಸಾಗರವಿರುವಾಗ ಮೀನುಗಳಿಗೇನು ಬರ? ಒಟ್ಟಿನಲ್ಲಿ ‘ಪೇಟ್ ಖುಷ್ ತೋ ಸಬ್ ಖುಷ್’.

ಉಳಿದವರೂ ತಮ್ಮ ತಮ್ಮ ತಟ್ಟೆಗಳಲ್ಲಿ ತಿನ್ನುತ್ತಲೇ ಇದ್ದರು. ಆದರೆ ಕೆಲ ನಿಮಿಷಗಳಲ್ಲೇ ಎಲ್ಲವೂ ಬದಲಾಗಿಹೋಯಿತು. ಈಗ ಎಲ್ಲರ ಕಣ್ಣುಗಳೂ ಎತ್ತರದಲ್ಲಿ ಇರಿಸಲಾಗಿದ್ದ ದೊಡ್ಡ ಟೆಲಿವಿಷನ್ನಿನತ್ತ ನೋಡುತ್ತಿವೆ. ಕುಳಿತ ಬಹುತೇಕರಿಗೆ ಎದುರಿನಲ್ಲಿದ್ದ ತಟ್ಟೆಯು ಮರೆತುಹೋಗಿದೆ. ‘ಕೂಕಾ’ (ಅಂಗೋಲಾದ ಜನಪ್ರಿಯ ಬಿಯರ್) ಲೆಕ್ಕವಿಲ್ಲದಷ್ಟು ಒಳಸೇರುತ್ತಿದೆ. ಹಾ… ಹೂ… ಓಯ್… ಎಂಬ ಬಗೆಬಗೆಯ ಉದ್ಗಾರಗಳು ಹೊರಬೀಳುತ್ತಿವೆ. ಇವೆಲ್ಲಾ ಆಗುತ್ತಿದ್ದಿದ್ದು ಫುಟ್ಬಾಲ್ ಪಂದ್ಯವೊಂದರಿಂದಾಗಿ. ಟೆಲಿವಿಷನ್ ಸ್ಕ್ರೀನಿನಲ್ಲಿ ಒಬ್ಬ ಆಟಗಾರ ಬಿದ್ದರೆ ಇಲ್ಲಿ ನೋವಾಗುತ್ತಿದ್ದಿದ್ದು ರೆಸ್ಟೊರೆಂಟಿನಲ್ಲಿದ್ದ ಜನರಿಗೆ. ಗೋಲ್ ಆದರೆ ವಿಜಯದ ಉದ್ಗಾರ. ಒಂದಿಷ್ಟರಲ್ಲಿ ತಪ್ಪಿಹೋದರೆ ಬೇಜಾರೋ ಬೇಜಾರು, ಆಡುತ್ತಿದ್ದವರಿಗೆ ಪೋರ್ಚುಗೀಸ್ ಭಾಷೆಯಲ್ಲಿ ಒಂದಷ್ಟು ಪುಕ್ಕಟೆ ಬೈಗುಳ.

“ಇನ್ನು ಕೆಲವು ದಿನಗಳ ಕಾಲ ಮನರಂಜನೆಗೇನೂ ಕೊರತೆಯಿಲ್ಲ”, ಪಕ್ಕದಲ್ಲೇ ಕೂತಿದ್ದ ಠೊಣಪನೊಬ್ಬ ನನ್ನ ಕಿವಿಯಲ್ಲಿ ಉಸುರಿದ. ನಾನು ಆಟವನ್ನು ಬಿಟ್ಟು ಆಹಾರವನ್ನು ಸವಿಯುವುದರಲ್ಲೇ ಮಗ್ನನಾಗಿರುವುದರಿಂದ ಆತನಿಗೆ ಅಚ್ಚರಿಯಾಗಿತ್ತೇನೋ. “ಹೌದ್ಹೌದು… ಒಳ್ಳೇ ಪಂದ್ಯ”, ನಾನು ಸೌಜನ್ಯಕ್ಕೆಂಬಂತೆ ಉತ್ತರಿಸಿದೆ. “ನೀವು ಯಾವ ತಂಡದ ಅಭಿಮಾನಿ?”, ಸಂಭಾಷಣೆಯು ಶುರುವಾದ ಖುಷಿಯಲ್ಲಿ ಉತ್ಸಾಹದಿಂದ ಕೇಳಿದ ಆತ. ಈ ಪ್ರಶ್ನೆಯಿಂದ ಇಕ್ಕಟ್ಟಿಗೆ ಬಿದ್ದವನು ನಾನು. ಮೊದಲಿನಿಂದಲೂ ಕ್ರೀಡೆಗೂ ನನಗೂ ಅಷ್ಟಕ್ಕಷ್ಟೇ. ಬಾಲ್ಯದಲ್ಲಿ ಟಿವಿ ನೋಡಲು ಬಹುತೇಕ ನಿಷೇಧವಿದ್ದ ನಮ್ಮ ಮನೆಯಲ್ಲಿ ಒಂದಿಷ್ಟು ಕ್ರಿಕೆಟ್ ನೋಡಿದ್ದೇ ದೊಡ್ಡ ಸಂಗತಿ. ಟಿ20 ಪಂದ್ಯಾವಳಿಗಳು ಇನ್ನೂ ಶುರುವಾಗದಿದ್ದ ಕಾಲವದು. ಬಹಳಷ್ಟು ಟೆಸ್ಟ್ ಪಂದ್ಯಗಳನ್ನು ನೋಡುತ್ತಾ ನಾನು ನಿದ್ದೆ ಹೋಗಿದ್ದೇ ಹೆಚ್ಚಾಗಿದ್ದರಿಂದ ಏಕದಿನ ಪಂದ್ಯಾವಳಿಗಳನ್ನು ವೀಕ್ಷಿಸುವುದು ಆ ದಿನಗಳಲ್ಲಿ ಖುಷಿಯೆನಿಸುತ್ತಿತ್ತು. ಆದರೆ ದುರದೃಷ್ಟವೆಂಬಂತೆ ಹ್ಯಾನ್ಸಿ ಕ್ರೊನಿಯೆ ಹೊರಹಾಕಿದ ಮ್ಯಾಚ್ ಫಿಕ್ಸಿಂಗ್ ಬಾಂಬುಗಳಿಂದ ಆಟದ ಬಗೆಗಿದ್ದ ಒಂದಷ್ಟು ಆಸಕ್ತಿಯೂ ಮುರುಟಿಹೋಯಿತು. ತದನಂತರ ನನ್ನನ್ನೂ ಸೇರಿದಂತೆ ಹಲವು ಕ್ರಿಕೆಟ್ ಪ್ರಿಯರು ಸದ್ದಿಲ್ಲದೆ ಆಟದ ಹುಚ್ಚಿನಿಂದ ದೂರ ಸರಿದುಬಿಟ್ಟಿದ್ದ ನೆನಪಿದೆ ನನಗೆ.

ಹೀಗೆ ಭಾರತದಲ್ಲಿದ್ದು ಕ್ರಿಕೆಟ್ಟಿನಂತಹ ಕ್ರಿಕೆಟ್ಟನ್ನೇ ಅರ್ಧಕ್ಕೆ ಬಿಟ್ಟ ನನ್ನಂಥವನೊಂದಿಗೆ ಈತ ಫುಟ್ಬಾಲ್ ಬಗ್ಗೆ ಕೇಳುತ್ತಿದ್ದ. ಫುಟ್ಬಾಲ್ ಲೋಕದಲ್ಲಿ ಬೆರಳೆಣಿಕೆಯ ಕೆಲ ಹೆಸರುಗಳನ್ನು ಬಿಟ್ಟು ಅಷ್ಟೇನೂ ಬಲ್ಲವನಲ್ಲ ನಾನು. ಈಜಿಪ್ಟಿನ ಪಂದ್ಯವು ನಡೆಯುತ್ತಿದ್ದರಿಂದ ಮೊಹಮ್ಮದ್ ಸಲಾಹನ ಹೆಸರು ಹೇಳಿದೆ. ಕೆಲದಿನಗಳ ಹಿಂದಷ್ಟೇ ಸಲಾಹನ ಬಗ್ಗೆ ಸ್ವಾರಸ್ಯಕರ ವರದಿಯೊಂದು ಬಿತ್ತರವಾಗಿತ್ತು. ಎಲ್ಲೆಲ್ಲೂ, ಅದರಲ್ಲೂ ಪಶ್ಚಿಮದ ದೇಶಗಳಲ್ಲಿ ‘ಇಸ್ಲಾಮೋಫೋಬಿಯಾ’ ಎಂಬುದು ಗಣನೀಯವಾಗಿ ಹೆಚ್ಚುತ್ತಿದ್ದ ಈಚಿನ ದಿನಗಳಲ್ಲಿ ಸಲಾಹನ ಪಾಶ್ಚಾತ್ಯ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಆತನ ಬಗ್ಗೆಯೇ ಹಾಡೊಂದನ್ನು ಕಟ್ಟಿ ಬಲು ಸಂತಸದಿಂದ ಹಾಡುತ್ತಿದ್ದರು. ಸಲಾಹ ತನ್ನ ಅದ್ಭುತ ಆಟದಿಂದ ದೇಶ-ಭಾಷೆ-ಧರ್ಮಗಳ ಗಡಿಗಳನ್ನು ಧ್ವಂಸ ಮಾಡಿ ಎಲ್ಲರ ಮನಸ್ಸನ್ನೂ ಗೆದ್ದಿದ್ದ. ಹೀಗೆ ಸಲಾಹನ ಹೆಸರು ಹೇಳಿದ ನನಗೆ ಆ ದಿನದ ಪಂದ್ಯದಲ್ಲಿ ಈಜಿಪ್ಟೇ ಇದ್ದಿದ್ದು ಕೂಡ ನಿರಾಳತೆಯನ್ನು ತಂದಿತು. “ಚಿಯರ್ಸ್” ಎಂದ ಆತ ಮಾತನ್ನು ಮುಂದುವರಿಸದೆ ಮತ್ತೊಮ್ಮೆ ಟೆಲಿವಿಷನ್ನಿನತ್ತ ತನ್ನ ಗಮನವನ್ನು ಹರಿಸಿದ. ಆ ತೊಂಭತ್ತು ನಿಮಿಷಗಳೆಂದರೆ ಅಂಗೋಲನ್ನರಿಗೆ ಅಷ್ಟು ಮುಖ್ಯ. ಹೌದು, ಸ್ವಾದಿಷ್ಟ ಭೋಜನಕ್ಕಿಂತಲೂ! ಆ ಮಟ್ಟಿನ ಫುಟ್ಬಾಲ್ ಫಿವರ್.

ಫುಟ್ಬಾಲ್ ಎಂದಾಗ ನನಗೆ ನೆನಪಾಗುವುದು ನನ್ನ ಪ್ರೌಢಶಾಲೆಯ ದಿನಗಳು. ಆ ದಿನಗಳಲ್ಲಿ ಫುಟ್ಬಾಲ್ ಹೆಸರಿನಲ್ಲಿ ವಿಚಿತ್ರ ಆಟವೊಂದನ್ನು ನಾವು ಆಡುತ್ತಿದ್ದೆವು. ಸ್ವಭಾವತಃ ಆಲಸಿಯಾದ ನನ್ನನ್ನು ಗೋಲ್ ಕೀಪರಿನ ಬಳಿಯಲ್ಲಿ ನಿಲ್ಲಿಸಲಾಗುತ್ತಿತ್ತು. ಉಳಿದ ಆಟಗಾರರು ಆಟವಾಡುತ್ತಾ ನನ್ನ ಬಳಿ ಚೆಂಡನ್ನು ತಲುಪಿಸುತ್ತಿದ್ದರು. ಅದನ್ನು ಗೋಲ್ ಮಾಡುವ ಕೆಲಸ ಮಾತ್ರ ನನ್ನದಾಗಿತ್ತು. ನಮ್ಮ ದೈಹಿಕ ಶಿಕ್ಷಕರೇನಾದರೂ ಇಂಥಾ ಅರ್ಥವಿಲ್ಲದ ಕಿಡಿಗೇಡಿತನದ ಆಟವನ್ನು ನೋಡಿದರೆ ಮತ್ತೆ ನನ್ನನ್ನು ಮೈದಾನಕ್ಕೆ ಓಡಿಸುತ್ತಿದ್ದರೋ ಏನೋ. ಚೆಂಡು ನಮ್ಮತ್ತ ಬರದ ಸಮಯಗಳಲ್ಲಿ ನಾನು ಮತ್ತು ಗೋಲ್ ಕೀಪರ್ ಅದೇನನ್ನೋ ಹರಟೆ ಹೊಡೆಯುತ್ತಿದ್ದೆವು. ಈ ಮಧ್ಯೆ ಚೆಂಡು ನನ್ನತ್ತ ಬಂದರೆ ನಾನು ಕ್ಷಣಾರ್ಧದಲ್ಲಿ ಭಯಂಕರ ಆಟಗಾರನಂತೆ ಬದಲಾಗಿ ಚೆಂಡನ್ನು ಒದ್ದು ಗೋಲ್ ಮಾಡುತ್ತಿದ್ದೆ. ಇನ್ನು ಉಳಿದವರಿಗಿಂತ ನನ್ನ ಎತ್ತರವು ಹೆಚ್ಚಿದ್ದಿದ್ದು ಈ ನಿಟ್ಟಿನಲ್ಲಿ ಉಪಯೋಗಕ್ಕೂ ಬರುತ್ತಿತ್ತು. ಒಟ್ಟಿನಲ್ಲಿ ಗೋಲ್ ಮಾಡಲಷ್ಟೇ ನೇಮಿಸಲಾಗಿದ್ದ ವಿಶೇಷ ಆಟಗಾರನಾಗಿದ್ದೆ ನಾನು.

ಈ ಬಾರಿಯ ಫಿಫಾ ಪಂದ್ಯಾವಳಿಯು ನನ್ನ ಅರೆ-ಫುಟ್ಬಾಲ್ ದಿನಗಳನ್ನೆಲ್ಲಾ ನೆನಪಿಸಿದ್ದು ಹೀಗೆ. ಫುಟ್ಬಾಲ್ ಆಟದ ಅಷ್ಟೊಂದು ಅಭಿಮಾನಿಗಳಿರುವ ಆಫ್ರಿಕಾದಲ್ಲಿ ಇದರ ಇನ್ನೊಂದು ಕರಾಳ ಮುಖವೂ ಇದೆ. ಮೀರಾ ನಾಯರ್ ನಿರ್ದೇಶನದ ‘ಕ್ವೀನ್ ಆಫ್ ಕಟ್ವೆ’ ಚಿತ್ರದಲ್ಲಿ ಹೀಗೊಂದು ಸನ್ನಿವೇಶ ಬರುತ್ತದೆ. ಅದು ಉಗಾಂಡಾ ರಾಜಧಾನಿಯಾದ ಕಂಪಾಲಾದ ಒಂದು ಕೊಳಗೇರಿ. ಅಲ್ಲಿ ಕೋಚ್ ಒಬ್ಬನ ಕಣ್ಗಾವಲಿನಲ್ಲಿ ಕೆಲವರು ಬಲು ಉತ್ಸಾಹದಿಂದ ಫುಟ್ಬಾಲ್ ಆಡುತ್ತಿದ್ದಾರೆ. ಇತ್ತ ಕೊಳಗೇರಿಯ ಮಕ್ಕಳು ಆಟವನ್ನು ಅಷ್ಟೇ ಆಸಕ್ತಿಯಿಂದ ಮೂಲೆಯೊಂದರಲ್ಲಿ ನಿಂತು ನೋಡುತ್ತಿದ್ದಾರೆ. ತನ್ನ ಪಕ್ಕದಲ್ಲಿ ಕಣ್ಣರಳಿಸಿ ನಿಂತಿರುವ ಈ ಮಕ್ಕಳನ್ನು ನೋಡುವ ಕೋಚ್ ಇವರ ಬಳಿ ಬಂದು “ನೀವೇನು ಕೂತು ನೋಡುವುದು? ಹೋಗಿ ಆಡುವುದಲ್ಲವೇ?” ಎಂದು ಕೇಳುತ್ತಾನೆ. “ಆಡುವುದಕ್ಕೇನೋ ಆಸೆಯಿದೆ. ಆದರೆ ಮನೆಯವರಿಗೆ ವಿಷಯ ತಿಳಿದರೆ ನಾಳೆಯಿಂದ ಈ ಕಡೆ ಬರಲೇ ಬಿಡುವುದಿಲ್ಲ” ಎಂದು ಒಬ್ಬ ಬಾಲಕ ಹೇಳುತ್ತಾನೆ. ಅಸಲಿಗೆ ಮಕ್ಕಳು ಫುಟ್ಬಾಲ್ ಆಡುತ್ತಾ ಬಿದ್ದು ಕಾಲು ಮುರಿದುಕೊಂಡರೆ ವೈದ್ಯಕೀಯ ಚಿಕಿತ್ಸೆಯನ್ನು ನೀಡುವಷ್ಟು ಸ್ಥಿತಿವಂತರಾಗಿರುವುದಿಲ್ಲ ಈ ಕೊಳಗೇರಿಯ ಮಕ್ಕಳ ಹೆತ್ತವರು. ಹೀಗಾಗಿ ಮಕ್ಕಳ ಮೇಲೆ ಇಂಥದ್ದೊಂದು ಅಲಿಖಿತ ಕಟ್ಟುಪಾಡನ್ನು ಹೇರಿರಲಾಗುತ್ತದೆ.

ಈ ಘಟನೆಯಿಂದ ಪ್ರೇರಿತನಾಗಿಯೇ ಕೋಚ್ ತೀವ್ರ ದೈಹಿಕ ಶ್ರಮದ ಅಗತ್ಯ ಮತ್ತು ಗಾಯಾಳುಗಳಾಗುವ ಸಾಧ್ಯತೆಯುಳ್ಳ ಫುಟ್ಬಾಲ್ ಆಟದ ಬದಲಾಗಿ ಈ ಬಡ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುತ್ತಾನೆ. ಇದು ಬುದ್ಧಿವಂತಿಕೆಯ ಆಟ ಎಂದು ಚದುರಂಗವನ್ನು ಪರಿಚಯಿಸುವುದಲ್ಲದೆ ಆಟವನ್ನು ಜೀವನದೊಂದಿಗೆ ಸಮೀಕರಿಸಿ ಹೋರಾಟದ ಕಿಚ್ಚನ್ನು ಮಕ್ಕಳಲ್ಲಿ ಹುಟ್ಟಿಸುತ್ತಾನೆ. ಈತನ ಸತತ ಪ್ರಯತ್ನ ಮತ್ತು ಪ್ರೋತ್ಸಾಹದಿಂದ ಫಿಯೋನಾ ಮುಟೇಸಿ ಎಂಬ ಪ್ರತಿಭಾವಂತ ಬಾಲಕಿಯೊಬ್ಬಳು ಹತ್ತರ ವಯಸ್ಸಿನಲ್ಲೇ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮುತ್ತಾಳೆ. ನೋಡನೋಡುತ್ತಿದ್ದಂತೆ ಕಂಪಾಲಾದ ಕೊಳಚೆಪ್ರದೇಶದಿಂದ ಬರುವ ಬಾಲಕಿಯೊಬ್ಬಳು ಉಗಾಂಡಾದ ಸೂಪರ್-ಸ್ಟಾರ್ ಆಗುತ್ತಾಳೆ.

ಹೀಗೆ ಎಲ್ಲಾ ಕ್ಷೇತ್ರಗಳಂತೆ ಕ್ರೀಡೆಯಲ್ಲೂ ಬಗೆಬಗೆಯ ಕಥೆಗಳು. ಮೇಲಿನ ಸನ್ನಿವೇಶದಲ್ಲಿ ಮಾತ್ರ ಕಥೆಯು ಫುಟ್ಬಾಲ್ ನಿಂದ ಶುರುವಾಗಿ ಚೆಸ್ ನಲ್ಲಿ ಅಂತ್ಯವಾಗಿದ್ದು ವಿಚಿತ್ರ. ಇನ್ನು ಫುಟ್ಬಾಲ್ ಲೋಕದ್ದೇ ಸ್ವಾರಸ್ಯಕರ ಘಟನೆಯೊಂದನ್ನು ಇಲ್ಲಿಯ ಹುಡುಗನೊಬ್ಬ ನನಗೆ ಹೇಳಿದ್ದ. ಅದು 1986 ರ ದಿನಗಳು. ಇಂಗ್ಲೆಂಡಿನ ಆಲ್ವಿನ್ ಮಾರ್ಟಿನ್ ಎಂಬ ಆಟಗಾರನೊಬ್ಬ ಒಂದೇ ಪಂದ್ಯದಲ್ಲಿ ಮೂರು ಗೋಲುಗಳನ್ನು ಮಾಡಿದ್ದನಂತೆ. ಅಸಲಿಗೆ ಆಲ್ವಿನ್ ಮಾರ್ಟಿನ್ ನ ತಂಡವು ಅಂದು ನ್ಯೂ-ಕ್ಯಾಸಲ್ ಯುನೈಟೆಡ್ ತಂಡದ ವಿರುದ್ಧ ಆಡುತ್ತಿತ್ತು. ಆಲ್ವಿನ್ ಮೊದಲ ಗೋಲ್ ಹೊಡೆದಾಗ ನ್ಯೂ-ಕ್ಯಾಸಲ್ ತಂಡದಲ್ಲಿ ಗೋಲ್ ಕೀಪರ್ ಆಗಿದ್ದವನು ಮಾರ್ಟಿನ್ ಥಾಮಸ್. ನಂತರ ಥಾಮಸ್ ಗಾಯಗೊಂಡ ಪರಿಣಾಮವಾಗಿ ಕ್ರಿಸ್ ಹೆಡ್ವರ್ತ್ ಗೋಲ್ ಕೀಪರ್ ಆಗಿ ಬಂದು ನಿಂತುಕೊಂಡ. ಆಲ್ವಿನ್ ಮಹಾಶಯ ಈ ಬಾರಿಯೂ ಗೋಲ್ ಮಾಡಿದ. ಎಲ್ಲರಿಗೂ ಅಬ್ಬಬ್ಬಾ ಅನ್ನಿಸಿದ್ದು ನ್ಯೂ-ಕ್ಯಾಸಲ್ ತಂಡದ ಮೂರನೇ ಗೋಲ್ ಕೀಪರ್ ಆಗಿ ಪೀಟರ್ ಬೆರ್ಡ್ಸ್ಲೇ ಬಂದು ಆಲ್ವಿನ್ ಈ ಬಾರಿಯೂ ಗೋಲ್ ಮಾಡಿದಾಗ! ಹೀಗೆ ಒಂದೇ ಪಂದ್ಯದಲ್ಲಿ ಮೂವರು ಪ್ರತ್ಯೇಕ ಗೋಲ್ ಕೀಪರ್ ಗಳ ರಕ್ಷಣಾಕೋಟೆಯನ್ನು ಭೇದಿಸಿ ಆಲ್ವಿನ್ ಮಾರ್ಟಿನ್ ಮೂರು ಗೋಲ್ ಮಾಡಿದ್ದ. ಆ ಪಂದ್ಯವನ್ನು ಆಲ್ವಿನ್ ನ ತಂಡವು 8-1 ರಿಂದ ಗೆದ್ದಿತ್ತು. ಫುಟ್ಬಾಲ್ ಜಗತ್ತಿನಲ್ಲೇ ಇದೊಂದು ವಿಚಿತ್ರ ದಾಖಲೆಯಂತೆ!

ರಷ್ಯಾದಲ್ಲಿ ಆರಂಭವಾಗಿರುವ ಫುಟ್ಬಾಲ್ ಹಬ್ಬವು ವಿವಾದಗಳ ಹೊರತಾಗಿಯೂ ಭರ್ಜರಿ ಆರಂಭವನ್ನು ಪಡೆದಿದೆ. ಪ್ರತೀಬಾರಿಯಂತೆ ಈ ಪಂದ್ಯಾವಳಿಯೂ ಕೂಡ ಹಲವು ಅಭೂತಪೂರ್ವ ಕ್ಷಣಗಳಿಗೆ ಸಾಕ್ಷಿಯಾಗಲಿರುವುದು ಖಚಿತ. ಕ್ರೊಯೇಷಿಯಾ ತಂಡದ ವಿರುದ್ಧ ಒಂದು ಗೋಲನ್ನೂ ಮಾಡಲು ಸಾಧ್ಯವಾಗದೆ ಅರ್ಜೆಂಟೀನಾ ಸೋತಾಗ ಅರ್ಜೆಂಟೀನಾವನ್ನು ಹುರಿದುಂಬಿಸಲು ಬಂದಿದ್ದ ಫುಟ್ಬಾಲ್ ದಂತಕಥೆ ಡೀಗೋ ಮರಡೋನಾ ಕಣ್ಣೀರಿಟ್ಟಿದ್ದರು. ಇನ್ನೇನು ಕ್ಷಣಮಾತ್ರದಲ್ಲಿ ಮುಗಿಯಬೇಕಿದ್ದ ಕೆಲ ಪಂದ್ಯಗಳಲ್ಲೂ ಗೋಲುಗಳಾಗಿ ಕೋಟ್ಯಂತರ ಅಭಿಮಾನಿಗಳಿಗೆ ರೋಮಾಂಚನವನ್ನು ತಂದವು. ಆಟಗಾರನೊಬ್ಬ ಫುಟ್ಬಾಲಿನಂತೆ ತಾನೇ ಸ್ವತಃ ಉರುಳಾಡಿಕೊಂಡು ಹೋಗುತ್ತಿರುವ ಕೆ.ಎಫ್.ಸಿ ಯ ಚಾಣಾಕ್ಷ ಜಾಹೀರಾತು ಜನಪ್ರಿಯವಾಯಿತು. ಹೀಗೆ ಎಲ್ಲೆಲ್ಲೂ ಹೊಸತನದ ಅಲೆ!

ಫಿಫಾದ ನೆಪದಲ್ಲಾದರೂ ಆಟವನ್ನು ಮತ್ತಷ್ಟು ತನ್ನದಾಗಿಸಿಕೊಳ್ಳುವ ಆಶಾಭಾವ ನನ್ನದು. ‘ಪಟ್ಟಾಂಗ’ ಮಾಡಲು ಸಲಾಹನ ಹೊರತಾಗಿಯೂ ಹೆಚ್ಚಿನದನ್ನು ತಿಳಿದುಕೊಳ್ಳಬೇಕಲ್ಲವೇ?

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರು. ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 1 week ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 1 week ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  3 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...