Share

ಪಾಂಡಾ ಕಥೆ ಹೇಳಿತು!
ಪ್ರಸಾದ್ ನಾಯ್ಕ್ ಕಾಲಂ

 

ಜೀವನದ ಪಾಠಗಳನ್ನು ಇಷ್ಟು ತಮಾಷೆಯಾಗಿಯೂ ಹೇಳಬಹುದೇ?

 

ನಾನೊಬ್ಬ ಸೂಪರ್ ಹೀರೋನನ್ನು ಸೃಷ್ಟಿಸಿದ್ದೇ ಆದಲ್ಲಿ ಅದಕ್ಕೆ ‘Disappointment ಪಾಂಡಾ’ ಎಂಬ ಹೆಸರಿಡುತ್ತೇನೆ (‘ಕುಂಗ್ ಫು ಪಾಂಡಾ’ ಚಿತ್ರದಲ್ಲೊಂದು ಮುದ್ದಾದ ಪಾಂಡಾ ಇತ್ತಲ್ವಾ, ಥೇಟು ಅಂಥದ್ದೇ). ಈ ಪಾಂಡಾದ ಕೆಲಸವೇನೆಂದರೆ ಪ್ರತಿಯೊಬ್ಬರ ಬಳಿಗೂ ಹೋಗಿ ಅವರ ಬಗ್ಗೆಯೇ ಅಪ್ರಿಯವಾದ ಸತ್ಯವೊಂದನ್ನು ಹೇಳುವುದು. ಅವರು ಕೇಳಲೇಬೇಕಾಗಿರುವ ಆದರೆ ಅದನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳದಿರುವ ಕಟುಸತ್ಯಗಳನ್ನು ಪಾಂಡಾ ಒಬ್ಬೊಬ್ಬರಿಗೂ ಹೇಳಲಿದ್ದಾನೆ.

ಬೈಬಲ್ ಮಾರುವ ಸೇಲ್ಸ್ ಮ್ಯಾನ್ ನಂತೆ ನಮ್ಮ ಪಾಂಡಾ ಮನೆಮನೆಗೂ ಹೋಗಿ ಕರೆಗಂಟೆಯನ್ನೊತ್ತುತ್ತಾನೆ. “ರೀ… ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಏನೋ ಸಖ್ಖತ್ತಾಗಿದೆ. ಆದರೆ ಅದರಿಂದ ನಿಮಗೆ ಮಕ್ಕಳ ಪ್ರೀತಿಯೂ ಸಿಗಲಿದೆ ಎಂದು ಹೇಳುವುದು ಕಷ್ಟ”, “ಹಲೋ, ನಿಮ್ಮ ಸಂಗಾತಿಯ ಬಗ್ಗೆ ನಿಮಗೆ ನಂಬಿಕೆಯಿದೆಯೇ ಎಂದು ನಾನು ಕೇಳಿದಾಗ ಒಳಗೊಳಗೇ ಸಂಶಯದ ಹುಳು ತಲೆಯಿತ್ತಿದ್ದು ನಿಜವಲ್ವಾ?”, “ಇದೇನು ‘ಗೆಳೆತನ’ ಅಂತೆಲ್ಲಾ ನೀವು ಡಂಗುರ ಸಾರಿಸುತ್ತಾ ಬರುತ್ತಿದ್ದೀರಲ್ಲಾ, ಅದು ಇನ್ನೊಬ್ಬರನ್ನು ಸಂತೃಪ್ತಗೊಳಿಸಲು ನೀವು ಮಾಡುತ್ತಿರುವ ಒಂದು ಕ್ಷೀಣ ಪ್ರಯತ್ನವಷ್ಟೇ”… ಹೀಗೆ ಕಪಾಳಕ್ಕೆ ಹೊಡೆಯುವಂತಿರುವ ತರಹೇವಾರಿ ಕಟುಸತ್ಯಗಳನ್ನು ಹೇಳುವುದು. ಹೀಗೆ ಏನಾದರೂ ಹೇಳಿದ ನಂತರ “ನಿಮ್ಮ ದಿನವು ಶುಭವಾಗಲಿ” ಎನ್ನುತ್ತಾ ಏನೂ ಆಗೇ ಇಲ್ಲವೆಂಬಂತೆ ಮುಂದಿನ ಮನೆಯತ್ತ ತೆರಳುವುದು.

ಇಂಥದ್ದೊಂದು ಇರುತ್ತಿದ್ದರೆ ಹೇಗಿರುತ್ತಿತ್ತಲ್ವಾ? ಇದೊಂದು ವಿಚಿತ್ರವೇ. ತೀರಾ ಖದೀಮ ಬುದ್ಧಿಯ ಕೀಟಲೆಯಿದು. ಕೊಂಚ ಬೇಜಾರಿನ ವಿಷಯವೂ ಹೌದು. ಒಂದು ರೀತಿಯಲ್ಲಿ ನೋಡಿದರೆ ಸತ್ಯವಾಗಿರುವುದರಿಂದ ಅವಶ್ಯಕವೂ ಹೌದು. ಏನ್ಮಾಡೋದು ಹೇಳಿ! ನಮ್ಮ ಜೀವನದ ಬಹಳಷ್ಟು ಸತ್ಯಗಳು ಅದೆಷ್ಟು ಕಟುವಾಗಿರುತ್ತವೆಂದರೆ ಇದರ ಸಹವಾಸವೇ ಬೇಡ ಎಂದು ನಾವು ತಲೆಮರೆಸಿಕೊಳ್ಳುತ್ತೇವೆ.

ಈ ನಿಷ್ಠುರಿ ಪಾಂಡಾ ಮಹಾಶಯ ಯಾರೊಬ್ಬರೂ ಇಷ್ಟಪಡದ, ಆದರೆ ಎಲ್ಲರಿಗೂ ಬೇಕಾಗಿರುವ ಹೀರೋ ಕೂಡ ಹೌದು. ಜಂಕ್ ಫುಡ್ ಗಳಂತಿರುವ ಕೆಲಸಕ್ಕೆ ಬಾರದ ಕಸಗಳನ್ನು ಹೊಂದಿದ ನಮ್ಮ ಮೆದುಳಿಗೊಂದು ಇದು ಪರಿಪೂರ್ಣ ಆಹಾರ. ಒಂದು ಕ್ಷಣ ನಮ್ಮನ್ನು ನಿರ್ದಯವಾಗಿ ಹೊಸಕಿಹಾಕಿದಂತೆ ಕಂಡರೂ ಈತ ನಮ್ಮನ್ನು ಉನ್ನತಿಯತ್ತ ಕೊಂಡೊಯ್ಯಬಲ್ಲ. ನಮ್ಮೊಳಗಿನ ಕತ್ತಲನ್ನು ತೋರಿಸುತ್ತಲೇ ಬೆಳಕಿನತ್ತ ಕರೆದೊಯ್ಯಬಲ್ಲ, ಕಣ್ಣೀರು ಹಾಕಿಸಿಯಾದರೂ ನಮ್ಮನ್ನು ಮತ್ತಷ್ಟು ಪರಿಪಕ್ವನಾಗಿಸಬಲ್ಲ. ನನ್ನ ಪಾಂಡಾದ ಮಾತುಗಳನ್ನು ಕೇಳುವುದೆಂದರೆ ಹೀರೋ ಕೊನೆಯಲ್ಲಿ ಸಾಯುವ ಸಿನೆಮಾವನ್ನು ನೋಡಿದಂತೆ. ಒಂದು ಕ್ಷಣ ಬಹಳ ಬೇಜಾರಾದರೂ ಚಿತ್ರ ನಿಮಗಿಷ್ಟವಾಗುತ್ತದೆ. ಏಕೆಂದರೆ ನೈಜಜೀವನದಲ್ಲಿ ಆಗುವುದು ಇದೇ ಅಲ್ಲವೇ?

ನಮ್ಮ ವಿಕಾಸವು ಹೇಗಾಗಿದೆಯೆಂದರೆ ನೋವಿನ ಹೆಣಭಾರವನ್ನು ಹೊರುವುದು ನಮ್ಮ ಯೋಚನಾ ಶೈಲಿಯ ಅವಿಭಾಜ್ಯ ಅಂಗವೇ ಎಂಬಂತೆ. ಹತಾಶೆ, ಅಭದ್ರತೆ, ಅಸಂತೃಪ್ತಿಗಳೇ ದೊಡ್ಡಮಟ್ಟಿನ ಬದಲಾವಣೆಯ ತಲಾಶೆಯತ್ತ ನಮ್ಮನ್ನು ದೂಡಿವೆ. ಶತಶತಮಾನಗಳಿಂದಲೂ ಅಸಂತೃಪ್ತಿಯು ಮಾನವನನ್ನು ತನ್ನ ಸಮಾಜದಲ್ಲಿ ಹೊಡೆದಾಡುವಂತೆ, ಕಟ್ಟುವಂತೆ, ಬೀಳಿಸುವಂತೆ, ಹಕ್ಕು ಸಾಧಿಸುವಂತೆ… ಹೀಗೆ ಬಹಳಷ್ಟನ್ನು ಮಾಡಿಸಿದೆ. ನಮ್ಮ ಬಳಿ ಏನಿದೆಯೋ ಅದರ ಬಗ್ಗೆ ಇರಬೇಕಾದ ಸಂತೃಪ್ತಿಗಿಂತ, ನಮ್ಮ ಬಳಿಯಿಲ್ಲದಿರುವ ಇನ್ನೇನನ್ನೋ ಹಂಬಲಿಸುತ್ತಾ ನಾವು ಸಂಕಟಪಡುವುದೇ ಹೆಚ್ಚು. ನಮ್ಮದು ಮುಗಿಯದ ನೋವಿನ ಗಾಥೆ!

ಸದ್ಯ ಒಂದು ಸಿಂಪಲ್ಲಾದ ನೋವಿನ ಬಗ್ಗೆ ಹೇಳುತ್ತೇನೆ ಕೇಳಿ. ಉದಾಹರಣೆಗೆ ನಿಮ್ಮ ಕಾಲ ಹೆಬ್ಬೆರಳು ಆಕಸ್ಮಿಕವಾಗಿ ಯಾವುದಕ್ಕೋ ಜೋರಾಗಿ ಢಿಕ್ಕಿ ಹೊಡೆದಿದೆ. ನನ್ನ ಹೆಬ್ಬೆರಳೇನಾದರೂ ಹಾಗೆ ಮೇಜಿನ ಕಾಲಿಗೆ ಢಿಕ್ಕಿ ಹೊಡೆದಿದ್ದೇ ಆದಲ್ಲಿ ಪೋಪ್ ಫ್ರಾನ್ಸಿಸ್ ಕೂಡ ಬೆಚ್ಚಿಬೀಳುವಷ್ಟರ ಮಟ್ಟಿಗೆ ನನ್ನ ಬಾಯಿಯಿಂದ ಇಂಗ್ಲಿಷ್ ಬೈಗುಳದ ಆ ನಾಲ್ಕು ಅಕ್ಷರಗಳು ಉದುರಿಬಿಡುತ್ತವೆ. ಇನ್ನು ತಕ್ಷಣದ ಪ್ರತಿಕ್ರಿಯೆಯೆಂಬಂತೆ ನಿಮ್ಮ ಈ ನೋವಿಗೆ ಏನೇನೂ ಸಂಬಂಧವಿಲ್ಲದ ವಸ್ತುಗಳ ಮೇಲೂ ನೀವು ನಿಮ್ಮ ಕೋಪವನ್ನು ತೋರಿಸಬಹುದು. “ಥೂ ಮನೆಹಾಳ ಮೇಜು” ಎಂದು ಮೇಜಿಗೇ ಬೈಯಬಹುದು. ನಿಮ್ಮ ರಕ್ತದೊತ್ತಡ ಸೀದಾ ಮೇಲಕ್ಕೇರಿದ್ದೇ ಆದಲ್ಲಿ ಮನೆಯ ಒಳಾಂಗಣವನ್ನು ವಿನ್ಯಾಸಗೊಳಿಸಿದಾತನಿಗೂ ನೀವು ಯದ್ವಾತದ್ವಾ ಬಯ್ಯಬಹುದು. “ಅದ್ಯಾವನಯ್ಯಾ, ಈ ಜಾಗದಲ್ಲಿ ಕೆಲಸಕ್ಕೆ ಬಾರದ ಮೇಜು ಇಟ್ಟೋನು” ಅಂತೆಲ್ಲಾ.

ಅಸಲಿಗೆ ಇಂಥಾ ನೋವುಗಳಿಂದ ಲಾಭವೂ ಇದೆಯೆನ್ನಿ. ನಾವು ಚಿಕ್ಕವರಿದ್ದಾಗ ನಮ್ಮನ್ನು ಸುರಕ್ಷಿತವಾಗಿಟ್ಟಿದ್ದು ಇಂಥದ್ದೇ ನೋವುಗಳು. ನಮ್ಮ ಇತಿಮಿತಿಗಳ ಬಗ್ಗೆ ನಮಗೇ ಅರಿವಿಲ್ಲದಂತೆ ಕಲಿಸಿಕೊಟ್ಟ ನೋವುಗಳು ಇವೆಲ್ಲಾ. ಈ ಇತಿಮಿತಿಗಳನ್ನು ದಾಟಿದಾಗಲೆಲ್ಲಾ ನೋವಿನ ರೂಪದಲ್ಲಿ ನಮ್ಮ ದೇಹಪ್ರಕೃತಿಯು ತನ್ನಷ್ಟಕ್ಕೆ ನಮ್ಮನ್ನು ದಂಡಿಸಿದೆ. ಇಂಥಾ ತಪ್ಪುಗಳು ಮರುಕಳಿಸದಂತೆ ನಮ್ಮನ್ನು ಜಾಗೃತರನ್ನಾಗಿಸಿದೆ. ಬಿಸಿ ಕಾವಲಿಯನ್ನು ಮುಟ್ಟಬಾರದು, ಲೋಹದ ವಸ್ತುಗಳನ್ನು ಎಲೆಕ್ಟ್ರಿಕ್ ಪಾಯಿಂಟ್ ಗಳಿಗೆ ತೂರಿಸಬಾರದು… ಇತ್ಯಾದಿ ಇತ್ಯಾದಿ. ಹೀಗಾಗಿ ಖುಷಿ, ವಿಲಾಸ ಮತ್ತು ಸುಖದ ಮೋಹಕ್ಕಾಗಿ ನೋವಿಗೆ ವಿದಾಯವನ್ನೇ ಹೇಳಿಬಿಡುವುದು ಅಷ್ಟೇನೂ ಉಪಯುಕ್ತ ಸೂತ್ರವಲ್ಲ.

ಅಂದಹಾಗೆ ಮಾನಸಿಕ ನೋವುಗಳಿಗೂ ಇದು ಅನ್ವಯಿಸುತ್ತವೆ. ನಮ್ಮ ಮೆದುಳು ದೈಹಿಕ ಮತ್ತು ಮಾನಸಿಕ ನೋವುಗಳನ್ನು ಅಷ್ಟು ನಿರ್ದಿಷ್ಟವಾಗಿಯೇನೂ ಪ್ರತ್ಯೇಕಿಸಿ ನೋಡುವುದಿಲ್ಲ ಎಂದು ಕೆಲವು ಸಂಶೋಧನೆಗಳು ಸಾಬೀತುಪಡಿಸಿವೆ. ನನ್ನ ಮೊದಲ ಗರ್ಲ್ಫ್ರೆಂಡ್ ನನಗೆ ಕೈಕೊಟ್ಟು ಹೋದಾಗ ಐಸ್ ಪಿಕ್ ಒಂದು ಹೃದಯಕ್ಕೆ ಆಳವಾಗಿ ಇಷ್ಟಿಷ್ಟೇ ಇರಿಯುತ್ತಿರುವಷ್ಟು ನನಗೆ ನೋವಾಗಿತ್ತು. ದೈಹಿಕ ನೋವಿನಂತೆ ಮಾನಸಿಕ ನೋವುಗಳೂ ಕೂಡ ನಮ್ಮೊಳಗಿನ ಯಾವುದೋ ಒಂದು ಸಮತೋಲನವು ಬಿಗಡಾಯಿಸಿದ ಸೂಚನೆಯೇ. ಆದರೆ ಅದೃಷ್ಟವಶಾತ್ ಇದೂ ಕೂಡ ದೈಹಿಕ ನೋವಿನಂತೆ ಪ್ರತೀಬಾರಿಯೂ ನಷ್ಟ ತರುವಂಥದ್ದೇನಲ್ಲ. ಅಸಲಿಗೆ ಇಂಥಾ ನೋವುಗಳು ನಮಗೆ ನಿಜಕ್ಕೂ ಬೇಕು. ಹಾಗಿದ್ದರೇನೇ ನಾವು ನಡೆಯುವಾಗ ಎಚ್ಚರದಿಂದ, ಮೇಜಿಗೆ ಢಿಕ್ಕಿ ಹೊಡೆಯದಂತೆ ನಡೆಯುತ್ತೇವೆ. ಮಾನಸಿಕ ನೋವು, ಹತಾಶೆಗಳು ಮುಂದೆ ಅಂತಹ ಸನ್ನಿವೇಶಗಳು ನಡೆಯದಂತೆ, ನಡೆದರೂ ಹಿಂದಿನ ತಪ್ಪುಗಳು ಮತ್ತೆ ಪುನರಾವರ್ತನೆಯಾಗದಂತೆ ನಮ್ಮನ್ನು ಸಿದ್ಧಗೊಳಿಸುತ್ತವೆ.

ವಿಪರ್ಯಾಸದ ಸಂಗತಿಯೆಂದರೆ ತಪ್ಪಿಸಲಾರದ, ತಪ್ಪಿಸಬಾರದ ಜೀವನದ ಇಂಥಾ ನೋವುಗಳಿಂದ ನಾವು ಬಚ್ಚಿಟ್ಟುಕೊಂಡು ನಮ್ಮ ಸುತ್ತಲೂ ರಕ್ಷಣಾ ಕೋಟೆಯನ್ನು ಕಟ್ಟಿಕೊಳ್ಳುತ್ತಾ ಹೋಗುವುದು. ಜೀವನಕ್ಕೆ ಬೇಕಾಗಿರುವಷ್ಟು ಪ್ರಮಾಣದ ನೋವಿನಿಂದಲೂ ಕೂಡ ಹೇಡಿಗಳಂತೆ ತಲೆಮರೆಸಿಕೊಳ್ಳುತ್ತಾ ನೈಜಜೀವನದ ಅಸಲಿ ಸವಾಲುಗಳಿಂದ ಸಂಪರ್ಕ ಕಡಿದುಕೊಳ್ಳುವ ಬಾಲಿಶ ಪ್ರಯತ್ನದಲ್ಲಿ ತೊಡಗುವುದು. ದುಃಖಗಳೇ ಇಲ್ಲದ ಜೀವನವೊಂದರ ಕನಸು ಕಾಣುತ್ತಾ ನೀವು ಜೊಲ್ಲುಸುರಿಸಬಹುದು. ಆದರೆ ನೋ ಲಕ್! ನಮ್ಮ ಜಗತ್ತಿನಲ್ಲಿ ಅಂಥದ್ದೊಂದು ಸಂಗತಿಯೇ ಇಲ್ಲ. ನೀವೇನೇ ಮಾಡಿ, ಕಷ್ಟಗಳು ಸವಾಲುಗಳು ಮುಗಿಯುವಂಥದ್ದಲ್ಲ. ನನ್ನೊಂದಿಗೆ ಮಾರ್ಗರಿಟಾವನ್ನು ಹೀರುತ್ತಾ ಪಾಂಡಾ ಅಂದು ಹೀಗೆ ಹೇಳಿತು: “ನೋಡಪ್ಪಾ, ನೀನು ತಿಪ್ಪರಲಾಗ ಹಾಕಿದರೂ ಜೀವನದ ಸವಾಲುಗಳಿಗೆ ಬೆನ್ನುಹಾಕಿ ಓಡಲಾರೆ. ಅವು ಒಂದರ ಹಿಂದೊಂದರಂತೆ ಬರುತ್ತಲೇ ಇರಲಿವೆ. ಕಾಲಕ್ರಮೇಣ ಕೊಂಚ ವಾಸಿ ಅನ್ನುವಂತಿನ ಸವಾಲುಗಳು ಎದುರಾಗಬಹುದಷ್ಟೇ. ಹಣದ ಸಮಸ್ಯೆಯು ವಾರೆನ್ ಬಫೆಟ್ ನಿಗೂ ಇದೆ. ಆ ನಿರ್ಗತಿಕ ಕುಡುಕನಿಗೂ ಇದೆ. ಆ ಕುಡುಕನಿಗಿಂತ ಬಫೆಟ್ ಸಾಹೇಬ್ರ ಪ್ರಾಬ್ಲಮ್ಮು ಕೊಂಚ ವಾಸಿಯಷ್ಟೇ. ಒಂದು ಸಮಸ್ಯೆಯನ್ನು ನಿವಾರಿಸಿಕೊಂಡೆ ಅನ್ನುವಷ್ಟರಲ್ಲಿ ಇನ್ನೊಂದು ತಯಾರಾಗಿ ನಿಂತಿರುತ್ತೆ. ಇದೇ ಜೀವನ.”

ನಿಮಿಷಗಳು ಉರುಳಿದವು. ಮಾತನಾಡುವ ಪಾಂಡಾ ಎಲ್ಲಿಂದ ಬಂತಪ್ಪಾ ಎಂಬ ಇರಿಸುಮುರಿಸು ನನಗೆ. ‘ಅದ್ಯಾವನಪ್ಪಾ, ನಮಗೆ ಕುಡಿಯಲು ಮಾರ್ಗರೀಟಾ ಬೇರೆ ತಂದುಕೊಟ್ಟ’ ಎಂದು ನಾನು ಅಸಮಾಧಾನದಿಂದಲೇ ತಲೆಕೆರೆದುಕೊಂಡೆ. “ಸಮಸ್ಯೆ, ಸವಾಲುಗಳೇ ಇಲ್ಲದ ಜೀವನವನ್ನು ಬಯಸಬೇಡ. ಬದಲಾಗಿ ಪರವಾಗಿಲ್ಲ ಎಂಬಂತಹ ಸಮಸ್ಯೆಗಳನ್ನು ಹೊಂದಿರುವ ಜೀವನಕ್ಕಾಗಿ ಹಂಬಲಿಸು” ಎಂದು ಉಪದೇಶವನ್ನು ಕೊಟ್ಟಿತು ಪಾಂಡಾ.

ಇಷ್ಟು ಹೇಳಿ ಡ್ರಿಂಕ್ ತುಂಬಿದ ಗ್ಲಾಸನ್ನು ಪಕ್ಕಕ್ಕಿಟ್ಟು ತನ್ನ ಪುಟ್ಟ ಕೊಡೆಯನ್ನು ಸರಿಪಡಿಸಿಕೊಳ್ಳುತ್ತಾ ಪಾಂಡಾ ಹೊರಟೇಬಿಟ್ಟಿತು. ಕಟುಸತ್ಯವೊಂದಕ್ಕೆ ಎದುರಾದ ನಾನು ಪಾಂಡಾ ಮರೆಯಾಗುವವರೆಗೂ ಅದನ್ನು ನೋಡುತ್ತಲೇ ಇದ್ದೆ.

~ ~ ~

ಜೀವನದ ಪಾಠಗಳನ್ನು ಇಷ್ಟು ತಮಾಷೆಯಾಗಿಯೂ ಹೇಳಬಹುದೇ? ಹೌದು ಎಂದಿತ್ತು ಇಂಥದ್ದೊಂದು ಓದಿನ ಅನುಭವ! ಏರ್ ಪೋರ್ಟ್ಗಳಲ್ಲಿ ಎಂದಿನಂತೆ ಪುಸ್ತಕದಂಗಡಿಗೆ ನುಗ್ಗುವ ನಾನು ಈ ಬಾರಿ ಬೆಂಗಳೂರು ಏರ್ ಪೋರ್ಟಿನ ಬುಕ್ ಸ್ಟಾಲ್ ಒಂದರಲ್ಲಿ “The subtle art of not giving a f*ck” ಎಂಬ ವಿಚಿತ್ರ ಶೀರ್ಷಿಕೆಯ ಪುಸ್ತಕವನ್ನು ಕಂಡು ನಕ್ಕುಬಿಟ್ಟಿದ್ದೆ. ಏನಿದೆಯಪ್ಪಾ ಇದರಲ್ಲಿ ಎಂಬ ಕುತೂಹಲದಲ್ಲಿ ಖರೀದಿಸಿದ್ದೂ ಆಯಿತು. ಮುಂದೆ ಹಲವು ದಿನಗಳ ನಂತರ ಸಾವಧಾನವಾಗಿ ಓದಲು ಕುಳಿತುಕೊಂಡರೆ ಕೃತಿಯ ಲೇಖಕ ಮಾರ್ಕ್ ಮಾನ್ಸನ್ ತನ್ನದೇ ಆದ ತಮಾಷೆಯ ಶೈಲಿಯಲ್ಲಿ ಜೀವನದ ಸತ್ಯಗಳನ್ನು ಬಲು ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದ್ದ. ಓದು ಗರಿಗರಿಯಾಗಿ ಖುಷಿಕೊಟ್ಟಿತ್ತು.

ಮಾರ್ಕ್ ಮಾನ್ಸನ್

ನ್ಯೂಯಾರ್ಕ್ ನಿವಾಸಿಯಾಗಿರುವ ಮಾರ್ಕ್ ಮಾನ್ಸನ್ ಓರ್ವ ಖ್ಯಾತ ಬ್ಲಾಗ್ ಲೇಖಕ. ತನ್ನ ವಿಡಂಬನಾ ಶೈಲಿಯ ಬರವಣಿಗೆಯಿಂದ ಕೇವಲ ಬ್ಲಾಗ್ ಜಗತ್ತಿನಲ್ಲೇ ಲಕ್ಷಾಂತರ ಓದುಗರನ್ನು ಸಂಪಾದಿಸಿಕೊಂಡ ಯುವ ಪ್ರತಿಭಾವಂತ. ಸ್ವತಃ ಉದ್ಯಮಿಯೂ ಆಗಿದ್ದು ಎರಡು ಕೃತಿಗಳನ್ನು ಪ್ರಕಟಿಸಿರುವ ಮಾರ್ಕ್ನ ಚೊಚ್ಚಲ ಕೃತಿಯಿದು. ಸೆಲ್ಫ್ ಹೆಲ್ಪ್ ಮಾದರಿಯ ಎಂದಿನ ಬರವಣಿಗೆಗಳಲ್ಲಿ ಸಾಮಾನ್ಯವಾಗಿ ಕಾಣಬರುವಂತೆ ಇಲ್ಲಿ ಈತ ಓದುಗರಿಗೆ ಬೆಣ್ಣೆ ಹಚ್ಚುವುದಿಲ್ಲ, ಇಂದ್ರ-ಚಂದ್ರ ಎಂದು ಹೊಗಳುವುದಿಲ್ಲ. ಈ ಲೇಖನದ ಕಥಾನಾಯಕನಾಗಿರುವ ಪಾಂಡಾದ ಶೈಲಿಯಲ್ಲೇ ಜೀವನದ ಸತ್ಯಗಳನ್ನು ಕಡ್ಡಿಮುರಿದಂತೆ ನಿಷ್ಠುರವಾಗಿ, ಆದರೆ ಎಲ್ಲೂ ನೀರಸವಾಗದಂತೆ ಸ್ವಾರಸ್ಯಕರವಾಗಿ ಮಾರ್ಕ್ ನಿರೂಪಿಸಿದ್ದಾನೆ. ಹಾರ್ಪರ್ ವನ್ ಬಳಗವು ಈ ಕೃತಿಯನ್ನು ಪ್ರಕಟಿಸಿದೆ.

‘ಮುಖಪುಟವನ್ನಷ್ಟೇ ನೋಡಿ ಪುಸ್ತಕವನ್ನು ಆರಿಸಿಕೊಳ್ಳಬೇಡಿ’ ಎಂಬ ಒಂದು ಜನಪ್ರಿಯ ಮಾತಿದೆ. “ನಾನೊಬ್ಬ ಶತಮೂರ್ಖ ಎಂದು ಕೆಲವರು ಹೇಳುತ್ತಾರೆ. ನನ್ನನ್ನು ಉಳಿಸಿದ್ದೇ ನಿನ್ನ ಬರಹಗಳು ಎಂದು ಮತ್ತಿಷ್ಟು ಮಂದಿ ಹೇಳುತ್ತಾರೆ. ಓದಿಕೊಂಡು ನೀವೇ ನಿರ್ಧರಿಸಿ” ಎಂದು ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದ್ದಾನೆ ಮಾರ್ಕ್. ದಿನನಿತ್ಯದ ಮುಗಿಯದ ಸೆಣಸಾಟದಂತೆ ಬದುಕು ನಿಮಗೆ ಕಾಣುತ್ತಿರುವುದೇ ಆದಲ್ಲಿ ಇಂಥದ್ದೊಂದು ಲವಲವಿಕೆಯ ಪಾಠದ ಅವಶ್ಯಕತೆಯು ನಿಜಕ್ಕೂ ಇದೆ. ಇನ್ನೇನು ತಡ? ನೀವೂ ಒಮ್ಮೆ ಓದಿ ನೋಡಿ. ಎಲ್ಲರಿಗೂ ಹ್ಯಾಪೀ ರೀಡಿಂಗ್!

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರು. ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 1 month ago No comment

  ಪಂಡಿತರ ಹಳ್ಳಿಯ ‘ಮಂದರಗಿರಿ’

                ಇದು ಪ್ರವಾಸಿಗಳ ಯುಗ. ಹೊಸ ತಲೆಮಾರಿನ ಜನರಿಗೀಗ ಮನೆಯಲ್ಲಿ ಕೂರುವುದೆಂದರೆ ಬಹಳ ಬೇಜಾರಿನ ಸಂಗತಿ. ಆಗೀಗಲಾದರೂ ದೊಡ್ಡ ಅಥವಾ ಸಣ್ಣ ಪ್ರವಾಸಗಳಿಗೆ ಹೋದರೆ ಮನಸ್ಸಿಗೂ ಸುಖ ಎನ್ನುವ ತಲೆಮಾರಿನವರು ಈಗ ಹೆಚ್ಚು ಕಾಣಸಿಗುತ್ತಾರೆ. ಹೆಸರುವಾಸಿ ತಾಣಗಳಲ್ಲಿ ಸದಾ ಜನಜಂಗುಳಿಯಿರುತ್ತದೆ. ದೂರದ ಊರುಗಳೆಂದರೆ ಅದಕ್ಕೆ ತಯಾರಿ ಬೇಕು. ಹಲವು ದಿನಗಳ ಸಿದ್ಧತೆ, ಪ್ರಯಾಣ, ವಿಪರೀತ ಖರ್ಚು ಎಲ್ಲವೂ ಹೌದು. ವಯಸ್ಸಾದವರಿಗೆ ...

 • 3 months ago No comment

  ಬಿಜೆಪಿ ವಿರೋಧಿ ರಂಗ: ಪ್ರತಿಪಕ್ಷ ಸಭೆಯಲ್ಲಿ 20 ಪಕ್ಷಗಳು

  ಆರ್ಬಿಐ ,ಸಿಬಿಐ, ಚುನಾವಣಾ ಆಯೋಗದಂಥ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಭೆಯಲ್ಲಿ ನಾಯಕರು ಕಟುವಾಗಿ ಟೀಕಿಸಿದರು.   ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿಗೆ ಪ್ರತಿಶಕ್ತಿಯನ್ನು ಕಟ್ಟುವ ಯತ್ನವಾಗಿ ನಡೆದ ಪ್ರತಿಪಕ್ಷ ಸಭೆಗೆ 20 ಪಕ್ಷಗಳ ನಾಯಕರು ಹಾಜರಾಗಿದ್ದರು. ಅಷ್ಟೇ ಅಚ್ಚರಿಯ ವಿಚಾರವೆಂದರೆ, ಈ ಸಭೆಗೆ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ)ದಿಂದ ಯಾವುದೇ ಮುಖಂಡರು ಆಗಮಿಸಿರಲಿಲ್ಲ. ಡಿ.10ರಂದು, ಪಂಚರಾಜ್ಯ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ...

 • 3 months ago No comment

  ಅರ್ಧನಾರಿ ಕಥೆಯ ಮತ್ತೆರಡು ಭಾಗಗಳು

  ‘ಮಧೋರುಬಗನ್’ (ಅರ್ಧನಾರಿ) ಎಂಬ ಕಾದಂಬರಿ ಬರೆವ ಮೂಲಕ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಖ್ಯಾತ ತಮಿಳು ಲೇಖಕ ಪೆರುಮಾಳ್ ಮುರುಗನ್ ಈಗ ಆ ಕಾದಂಬರಿಯ ಮತ್ತೆರಡು ಭಾಗಗಳ ಪ್ರಕಟಣೆಯೊಂದಿಗೆ ಸುದ್ದಿಯಾಗಿದ್ದಾರೆ. ಆ ಕಾದಂಬರಿಯ ಕೆಲವು ಭಾಗಗಳು ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡಿವೆ ಎಂದು ಆರೋಪಿಸಿದ್ದ ಬಲಪಂಥೀಯ ಕಾರ್ಯಕರ್ತರು ಹಲ್ಲೆಯೆಸಗಿದಾಗ, ತಮ್ಮ ಬರವಣಿಗೆ ಮೇಲೆ ಸ್ವಯಂ ನಿಷೇಧ ಹೇರಿಕೊಂಡಿದ್ದ ಮುರುಗನ್, ಇದೀಗ ಆ ಕಾದಂಬರಿ ಮುಗಿದಲ್ಲಿಂದಲೇ ಆರಂಭಿಸಿ ಮತ್ತೆರಡು ಭಾಗಗಳನ್ನು ಹೊರತಂದಿದ್ದಾರೆ. ಮೊದಲ ...

 • 3 months ago No comment

  170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್

  ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು.   ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...

 • 3 months ago No comment

  ಅಲೆಗಳಾಗುವ ಹಾಡು

      ಕವಿಸಾಲು         ಕನಸುಗಳ ಜಾತ್ರೆ, ಮನಸುಗಳ ಹಬ್ಬ ಎಲ್ಲ ನಿಶ್ಯಬ್ದ, ಮೌನದಲಿ ಮನ ಬಿಡಿಸಿದ ಮೂರ್ತ ರೂಪಕ್ಕೆ ತದ್ರೂಪು ನಿನ್ನದೇ ಸೊಬಗು ಸುರಿವ ಮಳೆ, ಬೀಸೋ ಗಾಳಿ ಒದ್ದೆಯಾದ ಒಡಲಿನಲಿ ಉರಿವ ನನ್ನೆದೆಯ ಮೇಲೆ ಚಿತ್ತಾರ ಬಿಡಿಸುತ್ತವೆ ನಿನ್ನ ಬೆರಳು ಕರಿಕಪ್ಪು ಚಳಿ ರಾತ್ರಿಯಲಿ ಒಂದಪ್ಪುಗೆಯ ಧ್ಯಾನದಲಿ ಬೆನ್ನ ಸುಳಿ ಸೀಳಿ ಮೇಲೇರುವ ನಡುಕದಲಿ ನಿನ್ನೆದೆಯ ಹರವು ಯಾರೋ, ಯಾವತ್ತೋ ಮರಳ ...


Editor's Wall

 • 08 December 2018
  3 months ago No comment

  170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್

  ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು.   ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...

 • 30 November 2018
  3 months ago No comment

  ರಕ್ಕಸ ವ್ಯೂಹದಲ್ಲಿ ಹೆಣ್ಣಿನ ಹೋರಾಟ

  ಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ತಾಣವೇ ಇಲ್ಲ.    2017ರಲ್ಲಿ ಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ಪರಿಚಿತರಿಂದ ಹತ್ಯೆಯಾದ ಮಹಿಳೆಯರ ಸಂಖ್ಯೆಯೇ 50 ಸಾವಿರ. ಈ ಬೆಚ್ಚಿಬೀಳಿಸುವ ಅಂಕಿಅಂಶವನ್ನು ಬಯಲು ಮಾಡಿರುವುದು ವಿಶ್ವಸಂಸ್ಥೆಯು ಮೊನ್ನೆ ನ.25ರಂದು ಬಿಡುಗಡೆ ಮಾಡಿರುವ ಅಧ್ಯಯನ ವರದಿ. ನವೆಂಬರ್ 25, ...

 • 29 November 2018
  3 months ago No comment

  ರೈತರ ಸಂಕಟಗಳಿಗೆ ಸಿಗುವುದೆ ಮುಕ್ತಿ?

    ಕಳೆದ ವರ್ಷದ ನಾಸಿಕ್-ಮುಂಬಯಿ ಕಿಸಾನ್ ಲಾಂಗ್ ಮಾರ್ಚ್ ಅನ್ನೇ ಪ್ರೇರಣೆಯಾಗಿಟ್ಟುಕೊಂಡು ‘ಸಿಂಗೂರು- ರಾಜಭವನ್ ಕಿಸಾನ್ ಮುಕ್ತಿಮಾರ್ಚ್’ ಆಯೋಜಿಸಲಾಗಿದೆ. ಅಖಿಲಭಾರತ ಕಿಸಾನ್ ಸಭಾದ ಜನರಲ್ ಸೆಕ್ರೆಟರಿ ಹನ್ನಾನ್ ಮೊಲ್ಲಾ ಅವರು ‘ಅಧಿಕಾರಕ್ಕೆ ಬರಬೇಕೆನ್ನುವ ರಾಜಕೀಯ ಪಕ್ಷಗಳು ರೈತರ ಸಂಕಟಗಳಿಗೆ ಜೊತೆಯಾಗುವ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ’ ಎಂದಿದ್ದಾರೆ.     ಕಳೆದ ಇಪ್ಪತ್ತು ವರ್ಷಗಳಲ್ಲಿ 3 ಲಕ್ಷ ರೈತರ ಆತ್ಮಹತ್ಯೆಗಳಾಗಿವೆ ಎನ್ನುವುದು ಭಾರತದ ರೈತರ ಸಂಕಟಗಳ ತೀವ್ರತೆಯನ್ನು ತೋರಿಸುತ್ತದೆ. ನರೇಂದ್ರ ...

 • 09 November 2018
  4 months ago No comment

  ಹೊಸ ಕಾಲದ ಹರಕೆಯ ಕುರಿಗಳು!

    ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...

 • 28 October 2018
  4 months ago No comment

  ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು

    ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.     ಕಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಂತೆ ಕಾಣಿಸುತ್ತಿದೆ. ಆದರೆ ಅಪಸ್ವರಗಳು ಅದೇ ಹೆಣ್ಣಿನ ದನಿಯನ್ನು ಅಡಗಿಸುವಷ್ಟೇ ಗಟ್ಟಿಯಾದ ಅಬ್ಬರದೊಂದಿಗಿರುವುದೂ ಸುಳ್ಳಲ್ಲ. ಪತ್ರಕರ್ತೆ ಪ್ರಿಯಾ ರಮಾನಿ ಪತ್ರಿಕೋದ್ಯಮದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ನೊಂದ ...