Share

ಆ ರಕ್ಕಸ ಶಾರ್ಕ್‍ಗೆ ಕೂಡ ಅವಳ ಕನಸು ಕಸಿಯಲಾಗಲಿಲ್ಲ!

ಬೆಥನಿಯವರ ಜೀವನಪ್ರೀತಿಯು ಎಷ್ಟೆಂದರೆ ತಾನು ಗರ್ಭಿಣಿಯಾಗಿದ್ದಾಗಲೂ ಕೂಡ ಸರ್ಫ್ ಮಾಡುವ ಹುಮ್ಮಸ್ಸಿನಲ್ಲಿ ಅಲೆಗಳನ್ನಪ್ಪಿಕೊಂಡ ಸಾಹಸಿ ಈಕೆ. ಅಷ್ಟೇ ಅಲ್ಲದೆ ತನ್ನ ಮಗನಾದ ಟೋಬಿಯಾಸ್ ನನ್ನು ಆರು ತಿಂಗಳ ವಯಸ್ಸಿಗೇ ಆಕೆ ಸಮುದ್ರಕ್ಕೆ ಪರಿಚಯಿಸಿಯಾಗಿತ್ತು.

ಬಾಲಕಿಗೆ ಸರ್ಫಿಂಗ್ ಹೊಸದಲ್ಲ. ಸಾಗರದ ದೈತ್ಯ ಅಲೆಗಳು ಅವಳಲ್ಲಿ ಭಯವನ್ನು ಹುಟ್ಟಿಸುವುದಿಲ್ಲ. ತನ್ನನ್ನು ಅಕ್ಷರಶಃ ನುಂಗಿಹಾಕುವಂತೆ ಮೇಲೆರಗುವ ಸಾಗರದಲೆಗಳೊಂದಿಗೆ ಮುಖಾಮುಖಿಯಾಗುವುದು ಅವಳಿಗೆ ಸಲೀಸು. ಐದು ವರ್ಷಕ್ಕೇ ಸರ್ಫಿಂಗ್ ಕಲಿಯಲು ಆರಂಭಿಸಿದ ಈ ಹುಡುಗಿ ಏಳು ದಾಟುವಷ್ಟರಲ್ಲಿ ಅಬ್ಬರದ ಅಲೆಗಳನ್ನು ಸರ್ಫಿಂಗ್ ಬೋರ್ಡೆಂಬ ಪುಟ್ಟ ಹಲಗೆಯ ಮೇಲೆ ನಿಂತು ಸ್ವತಂತ್ರವಾಗಿ ಸಂಭಾಳಿಸುತ್ತಿದ್ದಳು. ಎಂಟರ ಹಂತಕ್ಕೆ ಬಂದಾಗ ತಾನು ವೃತ್ತಿಪರ ಸರ್ಫಿಂಗ್ ನಲ್ಲೇ ಭವಿಷ್ಯವನ್ನು ಕಂಡುಕೊಳ್ಳಬೇಕು ಎಂದು ಅವಳು ನಿರ್ಧರಿಸಿಯಾಗಿತ್ತು. ಆ ಬಾಲಕಿಯ ಹೆಸರು ಬೆಥನಿ ಹ್ಯಾಮಿಲ್ಟನ್.

ಆದರೆ ಶೀಘ್ರದಲ್ಲೇ ಅವಳ ಜೀವನದ ಗತಿಯನ್ನು ಬದಲಿಸುವಂತಹ ಭಯಾನಕ ತಿರುವೊಂದು ಬರಲಿದೆಯೆಂಬ ಸುಳಿವು ಯಾರಿಗಾದರೂ ಇತ್ತು?

ಅದು 2003ರ ಹಾಲೋವಿನ್ ಮುಂಜಾನೆ. ಅಕ್ಟೋಬರ್ 31, 2003. ಬೆಥನಿಗೆ ಆಗ ಹದಿಮೂರರ ಪ್ರಾಯ. ಅವಳು ತನ್ನ ಗೆಳತಿ ಅಲನಾ ಬ್ಲಾಂಕರ್ಡ್ ಮತ್ತು ಆಕೆಯ ತಂದೆಯೊಂದಿಗೆ ಸರ್ಫಿಂಗ್ ಮಾಡಲು ಹವಾಯಿಯ ಸಮುದ್ರತೀರಕ್ಕೆ ತೆರಳಿದ್ದಾಳೆ. ಎಂದಿನಂತೆ ಅಲೆಗಳೊಂದಿಗೆ ಆಟವಾಡುತ್ತಲೇ ಏಕಾಏಕಿ ದೊಡ್ಡ ಅನಾಹುತವೊಂದು ನಡೆದುಹೋಗಿದೆ. ಅನಿರೀಕ್ಷಿತವಾಗಿ ಬೆಥನಿಯ ಮೇಲೆರಗುವ ಟೈಗರ್ ಶಾರ್ಕ್ ಮೀನೊಂದು ಬೆಥನಿಯ ಎಡಗೈಯನ್ನು ಆಟಿಕೆಯ ಬೊಂಬೆಯಿಂದ ಕೈಯನ್ನು ತೆಗೆದುಹಾಕಿದಂತೆ ಮುರಿದು ಹಾಕುತ್ತದೆ. ಹದಿಮೂರು ವರ್ಷದ ಬಾಲಕಿಯ ಎಡಗೈ ಈಗ ಹಠಾತ್ತನೆ ಕಳಚುವಂತಿದ್ದು ಭುಜದಿಂದ ತೆಳುದಾರದಂತೆ ನೇತಾಡುತ್ತಿದೆ. ಎಡೆಬಿಡದೆ ಸ್ರವಿಸುತ್ತಿರುವ ರಕ್ತವು ಉಪ್ಪುನೀರಿನೊಂದಿಗೆ ಸೇರಿಹೋಗುತ್ತಿದೆ. ತಕ್ಷಣವೇ ಪಕ್ಕದ ಹೋಟೇಲಿನಲ್ಲಿದ್ದ ಒಬ್ಬ ವೈದ್ಯ ಮತ್ತು ಅಲನಾಳ ತಂದೆಯ ಸಹಾಯದಿಂದ ಬೆಥನಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ.

ವಿಚಿತ್ರವೆಂದರೆ ಆಸ್ಪತ್ರೆಯಲ್ಲಿ ಬೆಥನಿಯ ತಂದೆ ಆಗಲೇ ಇದ್ದಿರುತ್ತಾನೆ. ಅಸಲಿಗೆ ಆತ ತನ್ನ ಮೊಣಕಾಲಿನ ಶಸ್ತ್ರಚಿಕಿತ್ಸೆಯೆಂದು ಅಲ್ಲಿಗೆ ಬಂದಿದ್ದ. ವೈದ್ಯರ ಕೊರತೆಯ ಕಾರಣದಿಂದಾಗಿ ಆತನ ಶಸ್ತ್ರಚಿಕಿತ್ಸೆಯು ರದ್ದಾಗಿ ತಂದೆಯ ಬದಲು ಮಗಳು ಶಸ್ತ್ರಚಿಕಿತ್ಸೆಗೆ ಸಜ್ಜಾಗುತ್ತಾಳೆ. ವಿಪರೀತ ರಕ್ತಸ್ರಾವ ಮತ್ತು ತತ್ಸಂಬಂಧಿ ಆಘಾತದಿಂದಾಗಿ ಬೆಥನಿಯ ಸ್ಥಿತಿಯು ಗಂಭೀರವಾಗಿರುತ್ತದೆ. ಆದರೂ ಹರಸಾಹಸಪಟ್ಟು ವೈದ್ಯರು ಅವಳನ್ನು ಬದುಕಿಸುತ್ತಾರೆ. ಆದರೆ ಅಂದು ಬೆಥನಿ ತನ್ನ ಎಡಗೈಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾಳೆ. ಆ ಮೂಲಕವಾಗಿ ಭವಿಷ್ಯದ ಒಂದೊಳ್ಳೆಯ ಸರ್ಫರ್ ಆಗಲಿದ್ದ ಬೆಥನಿಯ ಕನಸು ನುಚ್ಚುನೂರಾದಂತೆ ಕಾಣುತ್ತದೆ.
ಅಥವಾ ಜಗತ್ತಿಗೆ ಹಾಗನ್ನಿಸುತ್ತದೆ, ಅಷ್ಟೇ!

*

ಇತ್ತ ರಾಲ್ಫ್ ಯಂಗ್ ಎಂಬ ಮೀನುಗಾರನ ತಂಡವೊಂದು ಮೈಲುದೂರದಲ್ಲೇ ಟೈಗರ್ ಶಾರ್ಕ್ ಒಂದನ್ನು ಕೊಂದಿರುತ್ತದೆ. ಅದರ ಬಾಯಿಯಲ್ಲಿ ಸಿಲುಕಿದ್ದ ಬೋರ್ಡೊಂದರ ತುಂಡನ್ನು ತನಿಖೆಗೊಳಪಡಿಸುವಾಗ ಅದು ಬೆಥನಿಯ ಸರ್ಫಿಂಗ್ ಬೋರ್ಡಿನದ್ದೇ ಎಂಬುದು ಸಾಬೀತಾಗುತ್ತದೆ. ಹಾಗೆ ನೋಡಿದರೆ ಸರ್ಫರ್ ಗಳ ಮೇಲೆ ಇಂಥಾ ಶಾರ್ಕ್ ದಾಳಿಗಳಾಗಿರುವುದು ತೀರಾ ಅಪರೂಪವೆಂದು ಹೇಳಲಾಗುತ್ತದೆ. ಆದರೆ ಜುಲೈ 2015ರ ವಿಶ್ವ ಸರ್ಫ್ ಲೀಗ್ ಕ್ರೀಡಾಕೂಟದಲ್ಲಿ ವಿಶ್ವಚಾಂಪಿಯನ್ ಸರ್ಫರ್ ಮಿಕ್ ಫಿನ್ನಿಂಗ್ ಮೇಲೆ ಶಾರ್ಕ್ ಏಕಾಏಕಿ ದಾಳಿಯನ್ನು ನಡೆಸಿ ಹುಟ್ಟಿಸಿದ ಆತಂಕವು ಮರೆಯುವಂಥದ್ದಲ್ಲ. ಮಿಕ್ ಅಂದು ಕೂದಲೆಳೆಯ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದರು.

ಈ ಸ್ಥಿತಿಯಲ್ಲಿ ಬೇರೆ ಯಾರಾದರೂ ಇದ್ದರೆ ಏನಾಗುತ್ತಿತ್ತೋ. ಆದರೆ ಶಸ್ತ್ರಚಿಕಿತ್ಸೆಯು ನಡೆದ ತಿಂಗಳೊಳಗೇ ಬೆಥನಿ ಮತ್ತೆ ಸರ್ಫಿಂಗ್ ಲೋಕಕ್ಕೆ ಮರಳಿದ್ದಳು. ಹೌದು, ಈ ಬಾರಿ ಒಂದೇ ಕೈಯೊಂದಿಗೆ! ಶಸ್ತ್ರಚಿಕಿತ್ಸೆಯಾದ ಒಂದು ತಿಂಗಳೊಳಗೇ ಅವಳ ಸರ್ಫಿಂಗ್ ದಿನಚರಿಯು ಮತ್ತೆ ಶುರುವಾಗಿತ್ತು. ಇಲ್ಲದ ಕೈಯೊಂದಿಗೆ ಸರ್ಫಿಂಗ್ ಮಾಡಲು ಹೊರಟಿದ್ದ ಅವಳನ್ನು ಸಾಗರದಲೆಗಳು ಪದೇ ಪದೇ ಮುಳುಗಿಸುತ್ತಾ, ಹೊರಕ್ಕೆಸೆಯುತ್ತಾ ಅಣಕಿಸುತ್ತಿದ್ದರೆ ಅವುಗಳಿಗೇ ಸಡ್ಡುಹೊಡೆಯುವಂತೆ ಮರಳಿ ಮುನ್ನುಗ್ಗಿ ಬರುತ್ತಿದ್ದಳು ಬೆಥನಿ. ಕಣ್ಣೀರು, ಹತಾಶೆಗಳು ಅಲ್ಲಿ ಇರಲಿಲ್ಲವೆಂದಲ್ಲ. ಆದರೆ ಅವುಗಳು ಅವಳ ಛಲವನ್ನು ಕೊಲ್ಲುವಷ್ಟಿರಲಿಲ್ಲ. ನಾನು ಹೀಗೆಯೇ ಸಾಯುವವರೆಗೂ ದುಃಖದಲ್ಲಿ ಮುಳುಗಿರಲಾರೆ, ಅಂತಾರಾಷ್ಟ್ರೀಯ ಮಟ್ಟದ ಸರ್ಫರ್ ಆಗುವ ಕನಸನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲಾರೆ ಎಂದು ಲೆಕ್ಕಹಾಕಿದ್ದ ಬೆಥನಿ ಅದೆಷ್ಟೇ ಕಷ್ಟವಾದರೂ ರಚ್ಚೆಹಿಡಿದು ಪ್ರಯತ್ನಿಸುತ್ತಿದ್ದಳು. ಅವಳು ಸಾಧಿಸುವುದು ಇನ್ನೂ ಸಾಕಷ್ಟಿತ್ತು.

ಸರ್ಫಿಂಗ್ ನಂತಹ ಮೈನವಿರೇಳಿಸುವ ರೋಚಕ ಆಟದಲ್ಲಿ ಕೈಯನ್ನು ಕಳೆದುಕೊಂಡ ಬಾಲಕಿಯೊಬ್ಬಳು ಇಷ್ಟು ಬೇಗ ಮತ್ತದೇ ಲೋಕಕ್ಕೆ ಮರಳಿ ಬರುವುದೆಂದರೆ? ಇಡೀ ಜಗತ್ತು ಬೆರಗಿನಿಂದ ಬೆಥನಿಯತ್ತ ಕಣ್ಣುಹಾಯಿಸಿದ್ದೇ ಆಗ. ದುರ್ಘಟನೆಯಾದ ಒಂದು ವರ್ಷದೊಳಗೇ ಬೆಥನಿ ಪ್ರತಿಷ್ಠಿತ ಸರ್ಫಿಂಗ್ ಕ್ರೀಡಾಕೂಟವೊಂದರಲ್ಲಿ ಭಾಗವಹಿಸುವುದಕ್ಕೆಂದು ಬಂದಾಗಿರುತ್ತದೆ. ಇದು ಎಲ್ಲೆಡೆ ಭಾರೀ ಸುದ್ದಿಯಾಗುವುದಲ್ಲದೆ ESPY (Excellence in Sports Performance Yearly) ಬೆಥನಿಗೆ ಪ್ರತಿಷ್ಠಿತ ‘ಬೆಸ್ಟ್ ಕಮ್-ಬ್ಯಾಕ್ ಅಥ್ಲೀಟ್’ ಮತ್ತು ‘ಕರೇಜ್ ಟೀನ್ ಚಾಯ್ಸ್ ಅವಾರ್ಡ್’ಗಳಿಂದ ಸನ್ಮಾನಿಸುತ್ತದೆ. ಇದರ ಬೆನ್ನಿಗೇ ಎಮ್.ಟಿ.ವಿ. ಬುಕ್ಸ್ 2004ರಲ್ಲಿ ಬೆಥನಿಯ ಆತ್ಮಕಥನವಾದ ‘ಸೋಲ್ ಸರ್ಫರ್’ ಅನ್ನು ಪ್ರಕಟಿಸುತ್ತದೆ. ಹೀಗೆ ವರ್ಷದ ಹಿಂದಷ್ಟೇ ಭೀಕರ ಅವಘಡದಿಂದಾಗಿ ತನ್ನ ಎಡಗೈಯನ್ನು ಕಳೆದುಕೊಂಡಿದ್ದ ಬಾಲಕಿಯೊಬ್ಬಳು ಈಗ ಅಂತಾರಾಷ್ಟ್ರೀಯ ಮಟ್ಟದ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿರುತ್ತಾಳೆ. ಖ್ಯಾತ ಓಪ್ರಾ ವಿನ್ಫ್ರೇ ಶೋ ಸೇರಿದಂತೆ ಎಲ್ಲಾ ಪ್ರಮುಖ ಟೆಲಿವಿಷನ್ ಶೋಗಳಲ್ಲೂ, ತರಹೇವಾರಿ ಪತ್ರಿಕೆಗಳ ಮುಖಪುಟಗಳಲ್ಲೂ ಬೆಥನಿಯದ್ದೇ ಮುಖಾರವಿಂದವು ರಾರಾಜಿಸುತ್ತದೆ.

2011ರಲ್ಲಿ ಬೆಥನಿಯ ಸಾಹಸಗಾಥೆಯು ‘ಸೋಲ್ ಸರ್ಫರ್’ ಎಂಬ ಹೆಸರಿನಲ್ಲೇ ಚಲನಚಿತ್ರವಾಯಿತು. ಚಿತ್ರದಲ್ಲಿ ನಟಿಯಾದ ಆನಾ ಸೋಫಿಯಾ ರಾಬ್ ಪೆಥನಿಯ ಪಾತ್ರವನ್ನು ನಿರ್ವಹಿಸಿದರಾದರೂ ಶಾರ್ಕ್ ದಾಳಿಯ ನಂತರದ ಭಾಗದ ಸ್ಟಂಟ್ ಗಳನ್ನು ಬೆಥನಿಯವರು ಖುದ್ದಾಗಿ ನಿರ್ವಹಿಸಿದ್ದರು ಎಂಬುದು ವಿಶೇಷ. ಅಂದಹಾಗೆ 2004ರಿಂದ 2011ರವರೆಗೆ ಬೆಥನಿಯವರ ವೃತ್ತಿಪರ ಸರ್ಫಿಂಗ್ ಪಯಣದಲ್ಲಿ ಏಳುಬೀಳುಗಳಿದ್ದರೂ ಅದು ನಿರಾಶಾದಾಯಕವೇನೂ ಆಗಿರಲಿಲ್ಲ. ಅದರಲ್ಲೂ 2011ರ ಪೈಪ್ಲೈನ್ ವುಮನ್ಸ್ ಪ್ರೊ ಕ್ರೀಡಾಕೂಟವನ್ನು ಬೆಥನಿ ಗೆದ್ದಿದ್ದರು. ಈ ಅದ್ಭುತ ಗೆಲುವಿನ ಸಂಪೂರ್ಣ ಶ್ರೇಯಸ್ಸನ್ನು ಆಕೆ ಸಲ್ಲಿಸಿದ್ದು ತನ್ನ ಪತಿಯಾದ ಆಡಂ ಡಿಕ್ಸ್ ಗೆ. ಬೆಥನಿ ಈ ಕ್ರೀಡಾಕೂಟವು ಆರಂಭವಾಗುವ ಕೆಲವೇ ತಿಂಗಳುಗಳ ಹಿಂದಷ್ಟೇ ಆಡಂರನ್ನು ಬಾಳಸಂಗಾತಿಯಾಗಿ ಆರಿಸಿಕೊಂಡಿದ್ದರು. ಬೆಥನಿ ನಟಿಸಿದ್ದ ‘ಡಾಲ್ಫಿನ್ – 2’ ಚಿತ್ರದ ಚಿತ್ರೀಕರಣದ ಕೆಲ ದಿನಗಳ ಹಿಂದೆ ಆಡಂ-ಬೆಥನಿ ಜೋಡಿಯ ವಿವಾಹವು ಪ್ರೀತಿಪಾತ್ರರ ಉಪಸ್ಥಿತಿಯಲ್ಲಿ ಸಾಂಗವಾಗಿ ನೆರವೇರಿತ್ತು.

ಬೆಥನಿಯವರ ಜೀವನಪ್ರೀತಿಯು ಎಷ್ಟೆಂದರೆ ತಾನು ಗರ್ಭಿಣಿಯಾಗಿದ್ದಾಗಲೂ ಕೂಡ ಸರ್ಫ್ ಮಾಡುವ ಹುಮ್ಮಸ್ಸಿನಲ್ಲಿ ಅಲೆಗಳನ್ನಪ್ಪಿಕೊಂಡ ಸಾಹಸಿ ಈಕೆ. ಅಷ್ಟೇ ಅಲ್ಲದೆ ತನ್ನ ಮಗನಾದ ಟೋಬಿಯಾಸ್ ನನ್ನು ಆರು ತಿಂಗಳ ವಯಸ್ಸಿಗೇ ಆಕೆ ಸಮುದ್ರಕ್ಕೆ ಪರಿಚಯಿಸಿಯಾಗಿತ್ತು. ಹೆರಿಗೆಯಾದ ಮೂರು ತಿಂಗಳಲ್ಲೇ ಡಬ್ಲ್ಯೂ.ಎಸ್.ಎಲ್ ಸ್ವಾಚ್ ಮಹಿಳಾ ಕ್ರೀಡಾಕೂಟದಲ್ಲಿ ವೈಲ್ಡ್ ಕಾರ್ಡ್ ಆಯ್ಕೆಯಿಂದ ಪ್ರವೇಶ ಪಡೆದಿದ್ದ ಬೆಥನಿ ಹದಿಮೂರನೇ ಸ್ಥಾನವನ್ನು ಗಳಿಸಿ ಉತ್ತಮ ಪ್ರದರ್ಶನವನ್ನು ನೀಡಿದ್ದರು. ಮುಂದೆ 2016ರ ನಂತರವಂತೂ ಮತ್ತಷ್ಟು ಶಕ್ತಿಶಾಲಿಯಾಗಿ ಸ್ಪರ್ಧೆಗಿಳಿದಿದ್ದ ಬೆಥನಿ, ಫಿಜಿಯ ಕ್ರೀಡಾಕೂಟದಲ್ಲಿ ಘಟಾನುಘಟಿಗಳಿಗೂ ಬೆವರಿಳಿಸಿ ಮೂರನೇ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ‘ಕ್ಲೌಡ್-ಬ್ರೇಕ್’ ಹೆಸರಿನಲ್ಲಿ ಆಯೋಜಿಸಲಾಗಿದ್ದ ಈ ಫಿಜಿ ಕ್ರೀಡಾಕೂಟದ ಪಟ್ಟುಗಳು ಅತ್ಯಂತ ಅಪಾಯಕಾರಿಯಾಗಿದ್ದುದಲ್ಲದೆ ಅವುಗಳನ್ನು ಸಾಧಿಸಲು ದೊಡ್ಡಮಟ್ಟಿನ ದೈಹಿಕ ಫಿಟ್ನೆಸ್ ಮತ್ತು ಅಪಾರವಾದ ಧೈರ್ಯದ ಅವಶ್ಯಕತೆಯಿತ್ತು. ಆಗಸ್ಟ್ 2017ರಲ್ಲಿ ಸರ್ಫರ್ಸ್ ಹಾಲ್ ಆಫ್ ಫೇಮ್ ನಲ್ಲೂ ಮಿಕ್ ಫಿನ್ನಿಂಗ್ ನಂತಹ (ಮೂರು ಬಾರಿ) ವಿಶ್ವಚಾಂಪಿಯನ್ ಗಳ ಜೊತೆ ಬೆಥನಿಯವರ ಹೆಸರು ಸೇರಿಯಾಗಿತ್ತು.

ನಿಕ್ ಮತ್ತೆ ಬೆಥನಿ

“ಅಷ್ಟು ಸವಾಲುಗಳಿದ್ದರೂ ಆಕೆಯ ಸರ್ಫಿಂಗ್ ಪ್ರದರ್ಶನದ ಮಟ್ಟವನ್ನು ನೋಡಿದರೆ ಅಚ್ಚರಿಯಾಗುತ್ತದೆ. ಬೆಥನಿಯ ಅತ್ಯದ್ಭುತ ಪಟ್ಟುಗಳನ್ನು ಪ್ರಯತ್ನಿಸಲೂ ಭಯವಾಗುತ್ತದೆ ನನಗೆ. ಆಕೆಯ ಪ್ರತಿಭೆಯು ನಿಜಕ್ಕೂ ನನ್ನನ್ನು ಆಕೆಯ ಬಹುದೊಡ್ಡ ಅಭಿಮಾನಿಯಾಗುವಂತೆ ಮಾಡಿದೆ” ಎಂದು ಬೆಥನಿಯವರ ಫಿಜಿ ಪ್ರದರ್ಶನವನ್ನು ನೆನಪಿಸಿಕೊಳ್ಳುತ್ತಾ ಹೇಳುತ್ತಾರೆ ಸರ್ಫಿಂಗ್ ಲೋಕದ ತಾರೆಯಾಗಿರುವ ಕೆಲಿ ಸ್ಲೇಟರ್. ಖ್ಯಾತ ಭಾಷಣಕಾರನೂ, ಲೇಖಕರೂ ಆಗಿರುವ ನಿಕ್ ವೋಯಚಿಚ್ ಕೂಡ ಎರಡೂ ಕೈಕಾಲುಗಳಿಲ್ಲದ ತನಗೆ ಸರ್ಫಿಂಗ್ ಕಲಿಸಿದ ಬೆಥನಿಯವರ ಬಗ್ಗೆ ತನ್ನ ಆತ್ಮಕಥನದಲ್ಲಿ ನೆನಪಿಸಿಕೊಳ್ಳುತ್ತಾ ಮೆಚ್ಚುಗೆಯ ಮಾತನ್ನಾಡುತ್ತಾರೆ. “ಕೈಯನ್ನು ಕಳೆದುಕೊಂಡ ಕಟುಸತ್ಯವನ್ನು ಒಪ್ಪಿಕೊಳ್ಳುವ ಜೊತೆಜೊತೆಗೇ ಆಕೆ ಧೈರ್ಯದಿಂದ ಮುಂದುವರೆಯಲು ನಿರ್ಧರಿಸುತ್ತಾಳೆ. ನಂತರ ನಡೆಯುವ ಕ್ರೀಡಾಕೂಟದಲ್ಲಿ ಜಗತ್ತಿನ ಅತ್ಯುತ್ತಮ ಮಹಿಳಾ ಸರ್ಫರ್ ಗಳು ಸ್ಪರ್ಧೆಯಲ್ಲಿದ್ದರೂ ಆಕೆ ಮೂರನೇ ಸ್ಥಾನವನ್ನು ಅಲಂಕರಿಸುತ್ತಾಳೆ. ಹೌದು, ಒಂದು ಕೈಯಿಂದಲೇ! ಬೆಥನಿ ಈ ಘಟನೆಯನ್ನು ಭಗವಂತನು ತನಗೆ ಅನುಗ್ರಹಿಸಿದ ವರದಂತೆ ಬಳಸಿಕೊಂಡಿದ್ದಾಳೆ. ಏಕೆಂದರೆ ಪ್ರತೀಬಾರಿಯೂ ಅವಳು ಉತ್ತಮ ಪ್ರದರ್ಶನವನ್ನು ನೀಡಿದಾಗಲೆಲ್ಲಾ ಜಗತ್ತಿನಾದ್ಯಂತ ಅದೆಷ್ಟೋ ಜೀವಗಳು ತಮ್ಮ ಜೀವನವು ಮಿತಿಯಿಲ್ಲದ್ದು ಎಂಬ ಸತ್ಯವನ್ನು ಕಂಡುಕೊಳ್ಳುತ್ತಾರೆ” ಎಂದು ದಾಖಲಿಸುತ್ತಾರೆ ನಿಕ್. ಆತ ತನ್ನ ಎಂದಿನ ತಮಾಷೆಯ ಶೈಲಿಯಲ್ಲಿ ದಾಖಲಿಸಿರುವುದು ಹೀಗಿದೆ: “ಅಂದು ಲೆಕ್ಕ ಹಾಕಿದ್ದರೆ ನಮ್ಮಿಬ್ಬರಲ್ಲಿ ಒಟ್ಟು ಕೈಕಾಲುಗಳಿದ್ದದ್ದು ಮೂರು ಮಾತ್ರ. ಆ ಮೂರೂ ಕೂಡಾ ಬೆಥನಿಯದ್ದೇ ಆಗಿದ್ದವು.” ಹವಾಯಿಯ ವೈಕೀಕಿ ಸಾಗರದ ದೈತ್ಯ ಅಲೆಗಳು ಈ ಇಬ್ಬರು ಮಹಾ ಸಾಧಕರ ಅಪರಿಮಿತ ಧೈರ್ಯಕ್ಕೆ ಅಂದು ತಲೆದೂಗಿದ್ದವು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.

ಇಂದು ಬೆಥನಿ ಹ್ಯಾಮಿಲ್ಟನ್ ಎಂದರೆ ಸರ್ಫಿಂಗ್ ಜಗತ್ತಿನಲ್ಲಿ ಒಂದು ದೊಡ್ಡ ಹೆಸರು. ಆ ಕರಾಳ ದಿನದಂದು ಶಾರ್ಕ್ ದಾಳಿಗೊಳಗಾಗಿ ಜಖಂಗೊಂಡ ಬೋರ್ಡ್ ಮತ್ತು ಅಂದು ಆಕೆ ಧರಿಸಿದ್ದ ಈಜುಡುಗೆಯು ಪ್ರಸ್ತುತ ಕ್ಯಾಲಿಫೋರ್ನಿಯಾದ ಸರ್ಫರ್ಸ್ ವಸ್ತುಸಂಗ್ರಹಾಲಯದಲ್ಲಿದ್ದು ಎಲ್ಲರಲ್ಲೂ ಒಂದು ಪ್ರೇರಣಾತ್ಮಕ ಶಕ್ತಿಯನ್ನು ತುಂಬುತ್ತಿದೆ. ಇತ್ತ ಬೆಥನಿಯವರು ಸರ್ಫಿಂಗ್, ಕುಟುಂಬ, ಚಲನಚಿತ್ರ, ಸಾಕ್ಷ್ಯಚಿತ್ರ, ಟೆಲಿವಿಷನ್, ಸಂಸ್ಥೆ, ಸಮಾಜಸೇವೆ ಅಂತೆಲ್ಲಾ ಎಂದಿನಂತೆ ವ್ಯಸ್ತರಾಗಿದ್ದಾರೆ. ಖ್ಯಾತ ಹಾಲ್ ಆಫ್ ಫೇಮ್ ನ ಒದ್ದೆ ಸಿಮೆಂಟಿನ ನೆಲದಲ್ಲಿ ಅಂದು ಬೆಥನಿ ಬರೆದ ವಾಕ್ಯವೆಂದರೆ: ‘Always Hope’. ‘ಭಗವಂತನ ಮೇಲಿನ ನಂಬಿಕೆ ಮತ್ತು ಸ್ವಸಾಮರ್ಥ್ಯದ ಮೇಲಿರುವ ಭರವಸೆಗಳೇ ನಮ್ಮನ್ನು ಗೆಲುವಿನತ್ತ ಕರೆದೊಯ್ಯಬಲ್ಲದು’ ಎಂಬುದು ಆಕೆಯ ಮನದಾಳದ ಮಾತು.

ಭಯವೆಂಬ ಪದದ ಪರಿಚಯವೇ ಇಲ್ಲದಂತಿರುವ ಬೆಥನಿಯಂಥಾ ಬೆಥನಿಗೂ ಭಯವಿರಬಹುದೇ? “ಹೌದು, ಜೇಡಗಳೆಂದರೆ ನನಗೆ ಭಾರೀ ಭಯ” ಎಂದು ನಗುತ್ತಾ ‘ಎಕ್ಸ್ಪೀರಿಯನ್ಸ್ ಲೈಫ್’ನ ಸಂಪಾದಕರಾದ ಲೇಯ್ನ್ ಬೆರ್ಗಸನ್ ರಿಗೆ ಹೇಳಿದ್ದಾರೆ ಬೆಥನಿ.

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರು. ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 1 day ago No comment

  ವಿಶಿಷ್ಟ ಚೈತನ್ಯದ ಕಾದಂಬಿನಿ ಕಾವ್ಯ

  ಕಾದಂಬಿನಿ ಅವರ ಎರಡನೇ ಕವನ ಸಂಕಲನ ‘ಕಲ್ಲೆದೆಯ ಮೆಲೆ ಕೂತ ಹಕ್ಕಿ’. 100 ಕವಿತೆಗಳ ಈ ಸಂಕಲನ ಕಾದಂಬಿನಿ ಅವರ ಕಾವ್ಯಕ್ಕೇ ವಿಶಿಷ್ಟವಾದ ಗುಣಗಳನ್ನು ಕಾಣಿಸುತ್ತದೆ. ಈ ಸಂಕಲನಕ್ಕೆ ಕವಿ, ವಿಮರ್ಶಕ, ರಂಗಕರ್ಮಿ ವಸಂತ ಬನ್ನಾಡಿ ಮುನ್ನುಡಿ ಬರೆದಿದ್ದಾರೆ. ಕಾದಂಬಿನಿ ಕವಿತೆಗಳ ವಿಶಿಷ್ಟತೆಯನ್ನು ಅವರಿಲ್ಲಿ ಕಾಣಿಸಿದ್ದಾರೆ. * ನನಗೆ ಕಾದಂಬಿನಿಯ ಕಾವ್ಯಲೋಕದ ಪರಿಚಯವಾದುದು ಮೂರು ವರ್ಷಗಳ ಹಿಂದೆ. ಆಕೆಯ ‘ಕತೆ ಹೇಳುವ ಆಟ’ ಓದಿದಾಗ. ಈ ಕವನ ಆಕೆಯ ‘ಹಲಗೆ ...

 • 1 week ago No comment

  ಕಾದಂಬಿನಿ ಕವಿತೆಗಳ ಇನ್ನೊಂದು ಕಟ್ಟು: ಫಸ್ಟ್ ಲುಕ್

  ಹೊಸ ಪುಸ್ತಕ       ಕಾದಂಬಿನಿ ಅವರ ಎರಡನೇ ಕಾವ್ಯ ಸಂಕಲನ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಪ್ರಕಟಗೊಂಡಿದೆ. 100 ಕವಿತೆಗಳಿವೆ ಈ ಸಂಕಲನದಲ್ಲಿ. ಸಂಕಲನಕ್ಕೆ ವಿಮರ್ಶಕ, ರಂಗಕರ್ಮಿ ವಸಂತ ಬನ್ನಾಡಿ ಅವರ ಮುನ್ನುಡಿ, ಕವಿ ಹೆಚ್ ಎಸ್ ಶಿವಪ್ರಕಾಶ್ ಅವರ ಬೆನ್ನುಡಿ ಇದೆ. “ಜನಸಾಮಾನ್ಯರ ಸಂಕಟಗಳಿಗೆ ಮಾತು ಕೊಡಬೇಕು ಎಂಬುದು ಕಾದಂಬಿನಿ ಕಾವ್ಯದ ಕೇಂದ್ರಪ್ರಜ್ಞೆ. ಸಾಮಾಜಿಕ ಹಾಗೂ ರಾಜಕೀಯ ವಿಷಯಗಳನ್ನು ಮುಟ್ಟಿದರೆ ಮನಸ್ಸು ಕೊಳಕಾಗುವುದೆಂಬ ಮನೋಭಾವ ...

 • 2 weeks ago One Comment

  ಕಾಲದ ಬೆವರಿನ ಬಡಿತಗಳು

  ಕವಿಸಾಲು   ಹುಲ್ಲಿನೆಳೆಗಳಲಿ ಬಿದಿರ ಕೊಂಬಿಗೆ ಆತುಗೊಂಡ ಜೋಪಡಿಯೊಳಗ ಚುಕ್ಕಿಗಳ ದಿಂಬಾಗಿಸಿದ ಹೊಂಗೆಯ ನೆರಳಿನ ಗುರುತುಗಳು ಸಗಣಿಯಿಂದ ಸಾರಿಸಿದ ಪಡಸಾಲಿ ಮದುವಣಗಿತ್ತಿಯಂತೆ ವಳ್ಳು ಬೀಸುಕಲ್ಲುಗಳ ಹೊಕ್ಕಳಲಿ ದಕ್ಕಿಸಿಕೊಂಡ ಅವಳು ನಡುಮನೆಯ ಮೈದಾನದಾಗ ನಡುಗಂಬದ ನೆಲೆ ಬಿರುಕ ಕಿಂಡಿಗಳಲಿ ಮುರಿದ ಟೊಂಗೆಗಳೆಲ್ಲಾ ಬೆಸೆದು ಗುಡಿಸಲ ಕಣ್ಣಾಗಿ ಚಂದಿರನ ಜೋಗುಳ ಕಟ್ಯಾವು ಗಾಯದ ಬೆನ್ನು ನಿದ್ರಿಸಲು ಮಳೆಯ ರಭಸದಲಿ ಕೆರೆಯಂತಾಗುವ ಜೋಪಡಿಯೊಳಗ ಎಳೆಯ ರೆಕ್ಕೆಗಳನು ಪಕ್ಕೆಲುಬಲಿ ಅವಿತುಕೊಂಡು ಬೆಚ್ಚನೆಯ ಭರವಸೆ ತುಂಬ್ಯಾಳೊ ...

 • 2 weeks ago No comment

  ಕಾಲ ಮತ್ತು ನಾನು

        ಕವಿಸಾಲು       ಅಂತರಂಗದ ಅನಿಸಿಕೆಗಳ ಅದ್ಭುತ ರಮ್ಯ ಕನಸುಗಳ ಜತನವಾಗಿಟ್ಟುಕೊಂಡ ರಹಸ್ಯಗಳ ದುಂಡಗೆ ಬರೆದು ದಾಖಲಿಸಿ ಸಾವಿರ ಮಡಿಕೆಗಳಲಿ ಒಪ್ಪವಾಗಿ ಮಡಚಿ ಮೃದು ತುಟಿಗಳಲಿ ಮುತ್ತಿಟ್ಟು ಬೆವರ ಕೈಗಳಲಿ ಬಚ್ಚಿಟ್ಟು ಯಾರೂ ಕಾಣದಾಗ ಕದ್ದು ಹಿತ್ತಲಿನ ತೋಟಕ್ಕೆ ಒಯ್ದು ನನ್ನ ನಾಲ್ಕರಷ್ಟೆತ್ತರದ ಮರ ದಟ್ಟಕ್ಕೆ ಹರಡಿದ ಎಲೆಗಳ ನಡುವೆ ಟೊಂಗೆಗಳ ಸೀಳಿನಲಿ ಮುಚ್ಚಿಟ್ಟೆ ಅಲ್ಲಿಂದ ಮುಂದೆ ಮರ ಮರವಾಗಿ ಉಳಿಯಲಿಲ್ಲ ರಹಸ್ಯಗಳನ್ನೆಲ್ಲ ...

 • 2 weeks ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...


Editor's Wall

 • 12 March 2019
  2 weeks ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...

 • 08 December 2018
  4 months ago No comment

  170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್

  ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು.   ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...

 • 30 November 2018
  4 months ago No comment

  ರಕ್ಕಸ ವ್ಯೂಹದಲ್ಲಿ ಹೆಣ್ಣಿನ ಹೋರಾಟ

  ಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ತಾಣವೇ ಇಲ್ಲ.    2017ರಲ್ಲಿ ಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ಪರಿಚಿತರಿಂದ ಹತ್ಯೆಯಾದ ಮಹಿಳೆಯರ ಸಂಖ್ಯೆಯೇ 50 ಸಾವಿರ. ಈ ಬೆಚ್ಚಿಬೀಳಿಸುವ ಅಂಕಿಅಂಶವನ್ನು ಬಯಲು ಮಾಡಿರುವುದು ವಿಶ್ವಸಂಸ್ಥೆಯು ಮೊನ್ನೆ ನ.25ರಂದು ಬಿಡುಗಡೆ ಮಾಡಿರುವ ಅಧ್ಯಯನ ವರದಿ. ನವೆಂಬರ್ 25, ...

 • 29 November 2018
  4 months ago No comment

  ರೈತರ ಸಂಕಟಗಳಿಗೆ ಸಿಗುವುದೆ ಮುಕ್ತಿ?

    ಕಳೆದ ವರ್ಷದ ನಾಸಿಕ್-ಮುಂಬಯಿ ಕಿಸಾನ್ ಲಾಂಗ್ ಮಾರ್ಚ್ ಅನ್ನೇ ಪ್ರೇರಣೆಯಾಗಿಟ್ಟುಕೊಂಡು ‘ಸಿಂಗೂರು- ರಾಜಭವನ್ ಕಿಸಾನ್ ಮುಕ್ತಿಮಾರ್ಚ್’ ಆಯೋಜಿಸಲಾಗಿದೆ. ಅಖಿಲಭಾರತ ಕಿಸಾನ್ ಸಭಾದ ಜನರಲ್ ಸೆಕ್ರೆಟರಿ ಹನ್ನಾನ್ ಮೊಲ್ಲಾ ಅವರು ‘ಅಧಿಕಾರಕ್ಕೆ ಬರಬೇಕೆನ್ನುವ ರಾಜಕೀಯ ಪಕ್ಷಗಳು ರೈತರ ಸಂಕಟಗಳಿಗೆ ಜೊತೆಯಾಗುವ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ’ ಎಂದಿದ್ದಾರೆ.     ಕಳೆದ ಇಪ್ಪತ್ತು ವರ್ಷಗಳಲ್ಲಿ 3 ಲಕ್ಷ ರೈತರ ಆತ್ಮಹತ್ಯೆಗಳಾಗಿವೆ ಎನ್ನುವುದು ಭಾರತದ ರೈತರ ಸಂಕಟಗಳ ತೀವ್ರತೆಯನ್ನು ತೋರಿಸುತ್ತದೆ. ನರೇಂದ್ರ ...

 • 09 November 2018
  5 months ago No comment

  ಹೊಸ ಕಾಲದ ಹರಕೆಯ ಕುರಿಗಳು!

    ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...