Share

ಪ್ರಸಾದ್ ಪಟ್ಟಾಂಗ | ಜೊಲಾಂಟಾ: ಹೂಜಿಯಲ್ಲಿ ಹೂತಿಟ್ಟ ಬದುಕುಗಳ ಕಥೆ

 

 

 

“ಮಗುವೇ… ಯಾರಾದರೂ ನಿನ್ನ ಕಣ್ಣೆದುರಿಗೆ ಮುಳುಗುತ್ತಿದ್ದರೆ ನಿನಗೆ ಈಜು ಬರದಿದ್ದರೂ ಸರಿಯೇ… ಆದರೆ ಹೇಗಾದರೂ ಮಾಡಿ ಅವರನ್ನು ಬದುಕಿಸು.”

ಟೈಫಸ್ ಖಾಯಿಲೆಯಿಂದ ಬಳಲುತ್ತಾ ಸಾವನ್ನು ಸಮೀಪಿಸುತ್ತಿದ್ದ ಸ್ಟಾನಿಸ್ಲಾ ತನ್ನ ಏಳು ವರ್ಷದ ಮಗಳಾದ ಇರೇನಾಳಿಗೆ ಹೇಳಿದ ಕೊನೆಯ ಮಾತಿದು. ಅದು 1917ರ ದಿನಗಳು. ಆ ದಿನಗಳಲ್ಲಿ ಪೋಲಂಡಿನ ವಾರ್ಸಾದ ಬಳಿಯಿರುವ ಒಟ್ವೋಕ್ ನಲ್ಲಿದ್ದ ಏಕೈಕ ವೈದ್ಯ ಸ್ಟಾನಿಸ್ಲಾ ತನ್ನ ಜೀವನವನ್ನು ಜನಸೇವೆಗೆಂದೇ ಮುಡಿಪಾಗಿರಿಸಿದ್ದ. ತಂದೆಯ ಆದರ್ಶ ಮಗಳಿಗೆ ದಾರಿದೀಪವಾಗಿತ್ತು. ತಾಯಿ ಜನೀನಾ ಮತ್ತು ಇಂಥಾ ಮಹಾನ್ ತಂದೆಯ ಸುಪುತ್ರಿಯಾಗಿದ್ದ ಇರೇನಾ ಸೆಂಡ್ಲರ್ ಮುಂದೆ ತನ್ನ ಜೀವನದುದ್ದಕ್ಕೂ ನಂಬಿ ಬಾಳಿದ್ದು ಕೂಡ ಈ ತುಡಿತವನ್ನಿಟ್ಟುಕೊಂಡೇ. ಇಲ್ಲವಾದರೆ ಸಾಮಾನ್ಯ ಹೆಣ್ಣುಮಗಳೊಬ್ಬಳು ಎರಡು ಸಾವಿರಕ್ಕೂ ಹೆಚ್ಚು ಕಂದಮ್ಮಗಳ ತಾಯಿಯಾಗಿ ಅವರಿಗೆ ಹೊಸ ಬದುಕನ್ನು ನೀಡುವುದೆಂದರೆ? ಅದು ಹುಡುಗಾಟದ ಸಂಗತಿಯೇ ಅಲ್ಲ!

ಇಂದಿಗೂ ಹಿಟ್ಲರ್ ಮತ್ತು ನಾಝಿಗಳ ಹೆಸರು ಕೇಳಿದಾಗಲೆಲ್ಲಾ ಥಟ್ಟನೆ ಮನದಲ್ಲಿ ಮೂಡುವುದು ಅಮಾನುಷ ಹಿಂಸೆಯ ದೃಶ್ಯಗಳೇ. ಅಡಾಲ್ಫ್ ಹಿಟ್ಲರ್ ಎಂದರೆ ಮಿಲಿಟರಿ ಸಮವಸ್ತ್ರವನ್ನು ತೊಟ್ಟು ಭರ್ಜರಿಯಾಗಿ ಭಾಷಣ ಮಾಡುತ್ತಾ ನೆರೆದಿದ್ದ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸುತ್ತಿದ್ದ ಸರ್ವಾಧಿಕಾರಿಯಷ್ಟೇ ಆಗಿರಲಿಲ್ಲ. ಆತ ಕ್ರೌರ್ಯಕ್ಕೊಂದು ಹೊಸ ಭಾಷ್ಯವನ್ನೇ ಬರೆದಿದ್ದ. ಅಕ್ಷರಶಃ ಸಾವಿನ ಕಾರ್ಖಾನೆಗಳನ್ನು ತೆರೆದುಬಿಟ್ಟಿದ್ದ. ಅದೇನೇ ಆದರೂ ಈತನಿಂದಾದ ಅರವತ್ತು ಲಕ್ಷ ಯಹೂದಿಗಳ ಮಾರಣಹೋಮವನ್ನು ಇತಿಹಾಸವು ಅಷ್ಟು ಸುಲಭವಾಗಿ ಮರೆಯಲಾಗದು. ಇಂತಿಪ್ಪ ನಾಝಿಗಳ ಅಟ್ಟಹಾಸದ ನಡುವೆಯೇ ಹೆಣ್ಣುಮಗಳೊಬ್ಬಳು ಬರೋಬ್ಬರಿ 2500 ಮಕ್ಕಳನ್ನು ತನ್ನ ಎದೆಗವಚಿ ಕಾಪಾಡಿದ್ದಳು. ಒಂದು ಕ್ಷಣದ ನೋಟಕ್ಕೆ ಹೌಹಾರುವಂತಿರುವ ಆ ಸಂಖ್ಯೆಯನ್ನು ಲೇಖಕಿ ಪಲ್ಲವಿ ಇಡೂರುರವರ ಕೃತಿಯಾದ ‘ಜೊಲಾಂಟಾ’ದ ಮುಖಪುಟದಲ್ಲಿ ನೋಡುತ್ತಲೇ ನಾನು ಅಚ್ಚರಿಯಿಂದ ಕಣ್ಣರಳಿಸಿದ್ದೆ. ನಾಝಿ ಸೈನ್ಯದ ಮೃತ್ಯುತಾಂಡವದ ನಡುವೆಯೇ ಅದೆಷ್ಟೋ ಯಹೂದಿಗಳನ್ನು ಬದುಕಿಸಿದ್ದ ಆಸ್ಕರ್ ಶಿಂಡ್ಲರ್ ಥಟ್ಟನೆ ನೆನಪಾಗಿದ್ದ. ಆದರೆ ಇರೇನಾ ಎಂಬ ಹೆಸರನ್ನು ಹಿಂದೆಂದೂ ಕೇಳಿಲ್ಲವಾದ್ದರಿಂದ ಕೃತಿಯನ್ನು ಓದಿ ಮುಗಿಸಲೇಬೇಕೆಂಬ ತುಡಿತವೂ ಹೆಚ್ಚಿದ್ದರಲ್ಲಿ ಸಂದೇಹವಿಲ್ಲ.

1999ರ ಸೆಪ್ಟೆಂಬರ್ ನಲ್ಲಿ ಆ ಅಮೆರಿಕನ್ ವಿದ್ಯಾರ್ಥಿನಿಯರಿಗೂ ಕೂಡ ನನಗಾದಂಥಾ ಅಚ್ಚರಿಯೇ ಆಗಿದ್ದಿರಬಹುದೇನೋ! ನ್ಯಾಷನಲ್ ಹಿಸ್ಟರಿ ಡೇ ಪ್ರಾಜೆಕ್ಟ್ ನ ನಿಟ್ಟಿನಲ್ಲಿ ಪ್ರಸ್ತುತಪಡಿಸಬೇಕಿದ್ದ ನಾಟಕವೊಂದಕ್ಕಾಗಿ ಶಿಕ್ಷಕರಾದ ಕೋನ್ರಾಡ್ ರವರು ನೀಡಿದ್ದ 1994ರಲ್ಲಿ ಪ್ರಕಟವಾಗಿದ್ದ ಚಿಕ್ಕ ಸುದ್ದಿಯ ಬೆನ್ನಟ್ಟಿದ್ದ ಮೇಗನ್ ಸ್ಟೆವರ್ಟ್, ಲಿಝ್ ಕೇಂಬರ್ಸ್, ಸಬ್ರೀನಾ ಕೂನ್ಸ್ ಮತ್ತು ಜೆಸ್ಸಿಕಾ ಶೆಲ್ಟನ್ ತನ್ನ ಜೀವನದುದ್ದಕ್ಕೂ ಅನಾಮಿಕಳಾಗಿಯೇ ಬದುಕಿದ್ದ ಇರೇನಾ ಸೆಂಡ್ಲರ್ ಎಂಬ ಮಹಾಸಾಧಕಿಯೊಬ್ಬಳನ್ನು ಜಗತ್ತಿನ ಮುಂದೆ ತಂದು ನಿಲ್ಲಿಸಿದ್ದರು. ನೋಡನೋಡುತ್ತಿರುವಂತೆಯೇ ಚಿಕ್ಕದೊಂದು ಸುದ್ದಿಯ ಬೆನ್ನಟ್ಟಿದ್ದ ವಿದ್ಯಾರ್ಥಿನಿಯರ ಕೈಯಲ್ಲಿ ಇರೇನಾಳ ಕಥೆಯನ್ನು ಹೇಳುತ್ತಿದ್ದ, ಜಗತ್ತಿನ ವಿವಿಧ ಮೂಲೆಗಳಿಂದ ಸಂಗ್ರಹಿಸಿದ್ದ ನಾಲ್ಕು ಸಾವಿರಕ್ಕೂ ಹೆಚ್ಚು ಪುಟಗಳ ಸಂಶೋಧನಾ ಸಾಮಗ್ರಿಗಳು ಜಮೆಯಾಗಿದ್ದವು. ತಾನು ಕಾಪಾಡಿದ ಮಕ್ಕಳ ಅಸಲಿ ಮತ್ತು ನಾಝಿ ಸೈನಿಕರ ದಿಕ್ಕುತಪ್ಪಿಸಲೆಂದೇ ಸೃಷ್ಟಿಸಲಾಗಿದ್ದ ಹೊಸ ಹೆಸರುಗಳನ್ನು ಬರೆದು, ದಾಖಲಾತಿಗಳೊಂದಿಗೆ ಗಾಜಿನ ಹೂಜಿಯಲ್ಲಿ ಅವಿತಿಟ್ಟು, ನಂತರ ಈ ಹೂಜಿಗಳನ್ನು ಸೇಬಿನ ಮರವೊಂದರ ಕೆಳಗೆ ಹೂತಿಡುತ್ತಿದ್ದ ಇರೇನಾಳ ಸಾಹಸಮಯ ಸತ್ಯಕಥೆಯನ್ನೇ ಆಧರಿಸಿ ನಿರ್ಮಿಸಿದ ‘Life in a jar’ ನಾಟಕವು ಮುನ್ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದ್ದಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿತು. ಇರೇನಾರ ಕಥೆಗೆ ಮತ್ತೊಮ್ಮೆ ಜೀವ ಕೊಟ್ಟ ಈ ವಿದ್ಯಾರ್ಥಿನಿಯರ ರಂಗಪ್ರಯೋಗವು ಮಾನವೀಯತೆಯ ಹೊಸ ಅಲೆಯೊಂದನ್ನೇ ಸೃಷ್ಟಿಸಿತ್ತು.

ಜನೀನಾ ಮತ್ತು ಡಾ. ಸ್ಟಾನಿಸ್ಲಾ ದಂಪತಿಗಳ ಏಕೈಕ ಪುತ್ರಿಯಾಗಿದ್ದ ಇರೇನಾ ಸೆಂಡ್ಲರ್ ಆರಂಭದಿಂದಲೂ ತಂದೆಯ ಹೋರಾಟದ ಹಾದಿಯನ್ನೇ ತನ್ನದಾಗಿಸಿಕೊಂಡಿದ್ದವಳು. ವಾರ್ಸಾ ವಿಶ್ವವಿದ್ಯಾಲಯದ ಪೋಲಿಷ್ ಸಾಹಿತ್ಯ ವಿದ್ಯಾರ್ಥಿಯಾಗಿದ್ದ ಇರೇನಾ ಮುಂದೆ ಪೋಲಂಡ್ ಜರ್ಮನಿಯು ವಶವಾಗಿ ಯಹೂದಿಗಳ ಮೇಲೆ ಆರ್ಯನ್ನರ ಹಿಂಸೆಯು ರಾಕ್ಷಸರೂಪವನ್ನು ಪಡೆಯುತ್ತಿರುವಂತೆಯೇ ಯಹೂದಿಗಳ ರಕ್ಷಣೆಗಿಳಿಯುತ್ತಾಳೆ. 1940 ರಲ್ಲಿ ವಾರ್ಸಾ ಘೆಟ್ಟೋದ ನಿರ್ಮಾಣದ ಬೆನ್ನಿಗೇ ಯಹೂದಿಗಳನ್ನು ಮೃಗಗಳಂತೆ ಒಂದು ಗೂಡಿನಲ್ಲಿ ಕೂಡಿಡುವ ಕ್ರಮವು ಆರಂಭವಾದ ನಂತರ ಯಹೂದಿ ಮಕ್ಕಳನ್ನು ಕಾಪಾಡುವ ಸಾಹಸಕ್ಕಿಳಿಯುತ್ತಾಳೆ. ಆಂಬುಲೆನ್ಸ್ ಗಳಲ್ಲಿ, ಕಸವನ್ನೂ ಸೇರಿದಂತೆ ತರಹೇವಾರಿ ವಸ್ತುಗಳನ್ನು ಹೊತ್ತಿರುವ ಕೈಗಾಡಿಗಳಲ್ಲಿ, ಒಳಚರಂಡಿಯ ಕೊಳವೆಗಳಿಂದ… ಹೀಗೆ ಬಗೆಬಗೆಯ ವಿಧಾನಗಳಿಂದ ಅದೆಷ್ಟೋ ಮಕ್ಕಳನ್ನು ಇರೇನಾ ಕಾಪಾಡುವ ಪರಿಯನ್ನು ಓದಿದಾಗ ಮೈಮೇಲಿನ ರೋಮಗಳು ನೆಟ್ಟಗಾಗುತ್ತವೆ. ತಾನು ಅದೆಷ್ಟು ಅಪಾಯಕರ ಕೆಲಸವನ್ನು ಮಾಡುತ್ತಿದ್ದೇನೆ ಎಂಬುದರ ಬಗ್ಗೆ ಸಂಪೂರ್ಣ ಅರಿವಿದ್ದ ಇರೇನಾರ ಭಯ, ಹತಾಶೆ, ಅಭದ್ರತೆ, ಧೈರ್ಯ, ಜಾಗರೂಕತೆ, ಸಂಘಟನಾ ಚಾತುರ್ಯಗಳು ಓದುಗರನ್ನೂ ಕಾಡುತ್ತಾ, ಕೆಲ ಕ್ಷಣಗಳ ಕಾಲ ನಮ್ಮನ್ನೂ ಕೂಡ ಆ ಯುಗಕ್ಕೇ ಕರೆದೊಯ್ಯಬಲ್ಲಷ್ಟು ಸಾಮರ್ಥ್ಯವುಳ್ಳವುಗಳು.

‘ಜೊಲಾಂಟಾ’ ಎಂಬ ರಹಸ್ಯ ನಾಮಧೇಯದೊಂದಿಗೆ ದಾದಿಯ ದಿರಿಸಿನಲ್ಲಿ ಘೆಟ್ಟೋಗಳಿಗೆ ತೆರಳಿ ಮಕ್ಕಳನ್ನು ರಹಸ್ಯವಾಗಿ ಹೊರಸಾಗಿಸುತ್ತಾ ಅವರಿಗೊಂದು ಹೊಸ ಬದುಕಿನ ವ್ಯವಸ್ಥೆ ಮಾಡುತ್ತಿದ್ದ ಇರೇನಾ ಸೆಂಡ್ಲರ್ ಅಕ್ಷರಶಃ ನಿತ್ಯವೂ ಸಾವಿನೊಂದಿಗೇ ಚೆಲ್ಲಾಟವಾಡುತ್ತಿದ್ದವರು. ಏಕೆಂದರೆ ಯಹೂದಿಗಳ ಬದುಕನ್ನು ಎಲ್ಲಾ ರೀತಿಯಿಂದಲೂ ದುರ್ಭರಗೊಳಿಸಿದ್ದ ಜರ್ಮನ್ ಆಡಳಿತವು ಕೊನೆಗೆ ಯಹೂದಿಗಳಿಗೆ ನೆರವಾಗುತ್ತಿದ್ದ ಬೆರಳೆಣಿಕೆಯ ಕೈಗಳನ್ನೂ ಕತ್ತರಿಸಹೊರಟಿತ್ತು. ಯಹೂದಿಗಳಿಗೆ ಮಾನವೀಯ ನೆಲೆಯಲ್ಲಿ ನೆರವಾಗುತ್ತಿದ್ದ ಯಾರೇ ಆಗಲಿ ಅವರಿಗೆ ಜೈಲು ಮತ್ತು ಮರಣದಂಡನೆಯಂಥಾ ಶಿಕ್ಷೆಗಳು ಸಾಮಾನ್ಯವಾಗಿದ್ದವು. ಹೀಗಾಗಿ ಯಹೂದಿ ಕಂದಮ್ಮಗಳನ್ನು ರಕ್ಷಿಸಹೊರಟಿದ್ದ ಇರೇನಾ ಮತ್ತವಳ ತಂಡವು ಮೈಯೆಲ್ಲಾ ಕಣ್ಣಾಗಿ ತಮ್ಮ ಯೋಜನೆಗಳನ್ನು ಕಾರ್ಯರೂಪಕ್ಕಿಳಿಸಬೇಕಿತ್ತು. ಇನ್ನು ಇವೆಲ್ಲವೂ ಸಾಲದ್ದೆಂಬಂತೆ ಭಯಾನಕವಾಗಿ ಹರಡಿಕೊಳ್ಳುತ್ತಿದ್ದ ಟೈಫಸ್ ಮಹಮ್ಮಾರಿ, ಜರ್ಮನ್ ಆಡಳಿತದ ತುಘಲಕ್ ಮಾದರಿ ಕಾನೂನುಗಳು, ನಾಝಿ ಸೈನ್ಯದ ದೌರ್ಜನ್ಯ, ನರಕಸದೃಶ ಜೈಲುಗಳ ಲೋಕ… ಹೀಗೆ ಕಾಲಿಟ್ಟಲ್ಲೆಲ್ಲಾ ಕೆಂಡಹಾಸಿದ ದಾರಿಯಂತಿದ್ದ ಪರಿಸ್ಥಿತಿಗಳಲ್ಲೂ ತನ್ನ ಜೀವವನ್ನು ಒತ್ತೆಯಿಟ್ಟು ಮಕ್ಕಳನ್ನು ಕಾಪಾಡುವುದರಲ್ಲೇ ನಿರತರಾಗಿದ್ದ ಇರೇನಾರ ಬದ್ಧತೆಯ ಬಗ್ಗೆ ಓದುತ್ತಾ ಹೋದಂತೆ ಮನಸ್ಸು ಭಾರವಾಗುತ್ತದೆ.

ಪೋಲಂಡ್ ಜರ್ಮನಿಯ ವಶವಾಗುವುದರಿಂದ ಹಿಡಿದು ಯುದ್ಧದ ಅಂತ್ಯದವರೆಗೂ ಎರಡು ಸಾವಿರಕ್ಕೂ ಹೆಚ್ಚಿನ ಮಕ್ಕಳನ್ನು ಕಾಪಾಡುವ ಇರೇನಾ ಮುಂದೆ ಯುದ್ಧಾನಂತರ ಆಗುವ ಬಂಧನ ಮತ್ತು ಚಿತ್ರಹಿಂಸೆಯ ಹೊರತಾಗಿಯೂ ತಾನು ಕಾಪಾಡಿದ ಮಕ್ಕಳ ಮತ್ತು ಈ ಕಾರ್ಯಕ್ಕೆ ನೆರವಾದ ಸಂಸ್ಥೆಯ ಯಾವ ಮಾಹಿತಿಯನ್ನೂ ಗೆಸ್ಟಪೋ ಪೋಲೀಸರಿಗೆ ನೀಡದಿರುವ ಪರಿ ಆಕೆಗಿದ್ದ ದೈಹಿಕ ಮತ್ತು ಮಾನಸಿಕ ನೋವನ್ನು ಸಹಿಸಿಕೊಳ್ಳುವ ಅಗಾಧಶಕ್ತಿಗೊಂದು ನಿದರ್ಶನ. ಆ ದಿನಗಳಲ್ಲಿ ಭೂಲೋಕದ ನರಕವೆಂಬಂತಿದ್ದ ಪಾವಿಯಾಕ್ ಕಾರಾಗೃಹದಲ್ಲಿ ಇರೇನಾ ಅನುಭವಿಸಿದ ಆ ಚಿತ್ರಹಿಂಸೆ ಅದ್ಯಾವ ಮಟ್ಟಿನದ್ದಿರಬಹುದು ಎಂಬ ಕಲ್ಪನೆಯೇ ಓದುಗರಲ್ಲಿ ದಿಗಿಲನ್ನು ಹುಟ್ಟಿಸುವಂಥದ್ದು. ಇನ್ನು ಸಾವಿನ ಮನೆಯ ಬಾಗಿಲವರೆಗೂ ಹೋಗಿ ವಿಚಿತ್ರ ವಿಧಿಯಾಟವೆಂಬಂತೆ ಹೇಗೋ ಪಾರಾಗಿ ಬಂದುಬಿಡುವ ಇರೇನಾ ಮುಂದೆಯೂ ಜೆಗೋಟಾ ಸಂಸ್ಥೆಯಲ್ಲಿ ಮಕ್ಕಳಿಗೆ ಸಂಬಂಧಪಟ್ಟ ಇಲಾಖೆಯಲ್ಲೇ ಮುಂದುವರಿಯುವುದು, ಹೂತಿಟ್ಟ ಗಾಜಿನ ಹೂಜಿಗಳಲ್ಲಿದ್ದ ದಾಖಲೆಗಳನ್ನು ಆಧರಿಸಿ ಹಿಂದೆ ಕೊಟ್ಟ ಮಾತಿನಂತೆ ಮಕ್ಕಳನ್ನೂ ಹೆತ್ತವರನ್ನೂ ಸಂಧಿಸುವ ಪ್ರಯತ್ನದಲ್ಲಿ ತೊಡಗಿಸಿಕೊಳ್ಳುವುದು… ಹೀಗೆ ಸೇವೆಗೆಂದೇ ಬದುಕನ್ನು ಮುಡಿಪಾಗಿಟ್ಟ ಇರೇನಾರ ಜೀವನಕಥನವನ್ನು ಓದುತ್ತಿದ್ದರೆ ಇಂಥವರೂ ಇರುತ್ತಾರೆಯೇ ಎಂಬ ದಿಗ್ಭ್ರಮೆ ನನಗೆ!

ಪಲ್ಲವಿಯರ ಅಗಾಧ ಪರಿಶ್ರಮ ಮತ್ತು ಅಧ್ಯಯನಗಳಿಂದಾಗಿ ಇಂಥದ್ದೊಂದು ಅಪರೂಪದ ಜೀವನಕಥನವು ಈಗ ಕನ್ನಡದ ಓದುಗರಿಗೂ ದಕ್ಕುವಂತಾಗಿದೆ. ಈ ನಿಟ್ಟಿನಲ್ಲಿ ಅವರು ನಿಜಕ್ಕೂ ಅಭಿನಂದನಾರ್ಹರು. ಲೇಖಕಿ ತನ್ನ ಚೊಚ್ಚಲ ಕೃತಿಯಾದ ‘ಜೊಲಾಂಟಾ’ವನ್ನು ಧರ್ಮದ ಹೆಸರಿನಲ್ಲಿ ಕರುಳಕುಡಿಗಳನ್ನು ಕಳೆದುಕೊಂಡ, ಹೆತ್ತವರನ್ನು ಅಗಲಿ ಅನಾಥರಾದ ಜಗತ್ತಿನ ಕೋಟ್ಯಾಂತರ ತಬ್ಬಲಿಗಳಿಗೆ ಅರ್ಪಿಸಿ ಕೃತಿಯ ಮೌಲ್ಯವನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ. ಧರ್ಮ, ಪಂಥಗಳ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆ, ಸಾಮಾಜಿಕವಾಗಿ ದುರ್ಬಲರಾಗಿರುವವರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯಗಳು, ಒಡೆದು ಆಳುವ ರೂಢಿಗಳೇ ವೈಭವೀಕರಣಗೊಳ್ಳುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಇರೇನಾರಂಥವರ ಕಥೆಯನ್ನು ದೊಡ್ಡ ದನಿಯಲ್ಲಿ ಪ್ರಚುರಪಡಿಸುವುದು ಸದ್ಯದ ತುರ್ತೂ ಹೌದು. ಒಟ್ಟಿನಲ್ಲಿ ಈ ಪುಸ್ತಕವನ್ನು ಓದಿಮುಗಿಸುವಷ್ಟರಲ್ಲಿ ಮಹಾಮಾನವತಾವಾದಿ ಇರೇನಾರ ಕಥೆಯನ್ನೂ ಕೂಡ ನಮ್ಮ ಮಕ್ಕಳಿಗೆ, ಯುವಜನತೆಗೆ ಹೇಳುತ್ತಾ ಅವರೆಲ್ಲರಲ್ಲೂ ಭ್ರಾತೃತ್ವದ, ಮಾನವೀಯತೆಯ ಬೀಜವನ್ನು ಬಿತ್ತುವ ಆಸೆ ಹುಟ್ಟುತ್ತದೆ.

ಜೀವನಪ್ರೀತಿಯನ್ನೇ ಬದುಕಾಗಿಸಿದ್ದ ಇರೇನಾ ಸೆಂಡ್ಲರ್ ರಂಥವರ ಕಥಾನಕವನ್ನು ನಿರೂಪಿಸುವುದೆಂದರೆ ಅದರದ್ದೇ ಆದ ಕೆಲ ವಿಶಿಷ್ಟ ಜವಾಬ್ದಾರಿಗಳಿರುವುದು ಸಹಜ. ನೀರಸ ಇತಿಹಾಸವನ್ನಷ್ಟೇ ಬರೆದು ಮುಗಿಸಿದರೆ ಅದು ಪಠ್ಯದ ಸರಕಾಗಿಬಿಡಬಲ್ಲದು. ಇತ್ತ ರೋಚಕತೆಯನ್ನಷ್ಟೇ ಕೇಂದ್ರಬಿಂದುವಾಗಿಸಿದರೆ ಕಥಾನಾಯಕಿಯ ಜೀವನಮೌಲ್ಯಗಳು ಕಳೆದುಹೋಗಿ ನಿರೂಪಣೆಯು ವೈಭವೀಕರಣದ ಶಿಥಿಲ ಅಡಿಪಾಯದ ಮೇಲಷ್ಟೇ ನಿಂತು ಜಾಳುಜಾಳಾಗಿಬಿಡುವ ಅಪಾಯವಿರುತ್ತದೆ. ಈ ನಿಟ್ಟಿನಲ್ಲಿ ಎರಡನ್ನೂ ಎಷ್ಟು ಬೇಕೋ ಅಷ್ಟೇ ಪ್ರಮಾಣದಲ್ಲಿ ಬಳಸಿ, ಸರಾಗವಾಗಿ ಓದಿಸಿಕೊಂಡು ಹೋಗುವಂತೆ, ಹಿತವಾಗಿ ಓದುಗರಿಗಾಗಿ ಉಣಬಡಿಸಿದ್ದಾರೆ ಲೇಖಕಿಯಾದ ಪಲ್ಲವಿ ಇಡೂರು. ಹೀಗಾಗಿ ನಿರೂಪಣೆಯು ಅನಗತ್ಯ ಉತ್ಪ್ರೇಕ್ಷೆಗಳಿಂದ, ವೈಭವೀಕರಣಗಳಿಂದ ಹೊರತಾಗಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಇನ್ನು ‘ಜೊಲಾಂಟಾ’ ಇವರ ಚೊಚ್ಚಲ ಕೃತಿಯಾಗಿರುವುದರಿಂದ ಒಟ್ಟಾರೆಯಾಗಿ ಶ್ಲಾಘನೀಯ ಪ್ರಯತ್ನವೂ ಹೌದು.

ಮತ, ಧರ್ಮ, ಜಾತಿ, ಕುಲಗಳ ಹೆಸರಿನಲ್ಲಿ ಇಂದಿಗೂ ಕತ್ತಿಗಳು ಮಸೆದು ರಕ್ತ ಚೆಲ್ಲುವಾಗ, ಭೀಕರ ದೌರ್ಜನ್ಯ-ಹಿಂಸಾಚಾರಗಳಾದಾಗ ಮಾನವ ತನ್ನ ಇತಿಹಾಸದಿಂದ ಕಲಿತಿದ್ದಾದರೂ ಏನು ಎಂಬ ಭಾವಗಳು ಮೂಡಿ ಗಾಬರಿಯಾಗುತ್ತದೆ. ಸಾದತ್ ಹಸನ್ ಮಂಟೋ ಈ ಆತಂಕದಲ್ಲೇ ಕೆಂಡದಂಥಾ ಕಥೆಗಳನ್ನು ಬರೆದ. ಪಾಬ್ಲೋ ನೆರೂಡಾ ಈ ಕಿಚ್ಚಿನಲ್ಲೇ ಅದೆಷ್ಟೋ ಕವಿತೆಗಳನ್ನು ಹೆಣೆದ. ಎಲ್ಲಾ ಕಾಲದಲ್ಲೂ ಬಹುತೇಕ ಎಲ್ಲಾ ಸೃಜನಶೀಲರೂ ಆಯಾ ಅಭಿವ್ಯಕ್ತಿ ಮಾಧ್ಯಮಗಳ ಮೂಲಕವಾಗಿ ತಮ್ಮ ಸುತ್ತಮುತ್ತ ನಡೆಯುತ್ತಿದ್ದ ಅನಾಚಾರಗಳ ವಿರುದ್ಧ ಸಿಡಿದೆದ್ದಿದ್ದರು. ಪಲ್ಲವಿಯವರ ‘ಜೊಲಾಂಟಾ’ ಕೂಡ ಇಂಥಾ ಜೀವನಪ್ರೀತಿಯ ಭಾವವನ್ನು, ಜೀವಪರ ಕಾಳಜಿಯನ್ನು ಓದುಗರಲ್ಲಿ ಮೂಡಿಸಲಿ. ಕನಿಷ್ಠಪಕ್ಷ ಇರೇನಾ ಸೆಂಡ್ಲರ್ ರಂಥಾ ಅಸಾಮಾನ್ಯರ ಕಥೆಗಳಾದರೂ ನಮ್ಮ ಸಮಾಜದಲ್ಲಿ ಭರವಸೆಯ ಬೆಳ್ಳಿಕಿರಣವನ್ನು, ಬದಲಾವಣೆಯ ಹೊಸ ಅಲೆಯನ್ನು ತರಲಿ ಎಂಬ ಆಶಯ ನನ್ನದು.

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರು. ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 1 month ago No comment

  ಪಂಡಿತರ ಹಳ್ಳಿಯ ‘ಮಂದರಗಿರಿ’

                ಇದು ಪ್ರವಾಸಿಗಳ ಯುಗ. ಹೊಸ ತಲೆಮಾರಿನ ಜನರಿಗೀಗ ಮನೆಯಲ್ಲಿ ಕೂರುವುದೆಂದರೆ ಬಹಳ ಬೇಜಾರಿನ ಸಂಗತಿ. ಆಗೀಗಲಾದರೂ ದೊಡ್ಡ ಅಥವಾ ಸಣ್ಣ ಪ್ರವಾಸಗಳಿಗೆ ಹೋದರೆ ಮನಸ್ಸಿಗೂ ಸುಖ ಎನ್ನುವ ತಲೆಮಾರಿನವರು ಈಗ ಹೆಚ್ಚು ಕಾಣಸಿಗುತ್ತಾರೆ. ಹೆಸರುವಾಸಿ ತಾಣಗಳಲ್ಲಿ ಸದಾ ಜನಜಂಗುಳಿಯಿರುತ್ತದೆ. ದೂರದ ಊರುಗಳೆಂದರೆ ಅದಕ್ಕೆ ತಯಾರಿ ಬೇಕು. ಹಲವು ದಿನಗಳ ಸಿದ್ಧತೆ, ಪ್ರಯಾಣ, ವಿಪರೀತ ಖರ್ಚು ಎಲ್ಲವೂ ಹೌದು. ವಯಸ್ಸಾದವರಿಗೆ ...

 • 3 months ago No comment

  ಬಿಜೆಪಿ ವಿರೋಧಿ ರಂಗ: ಪ್ರತಿಪಕ್ಷ ಸಭೆಯಲ್ಲಿ 20 ಪಕ್ಷಗಳು

  ಆರ್ಬಿಐ ,ಸಿಬಿಐ, ಚುನಾವಣಾ ಆಯೋಗದಂಥ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಭೆಯಲ್ಲಿ ನಾಯಕರು ಕಟುವಾಗಿ ಟೀಕಿಸಿದರು.   ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿಗೆ ಪ್ರತಿಶಕ್ತಿಯನ್ನು ಕಟ್ಟುವ ಯತ್ನವಾಗಿ ನಡೆದ ಪ್ರತಿಪಕ್ಷ ಸಭೆಗೆ 20 ಪಕ್ಷಗಳ ನಾಯಕರು ಹಾಜರಾಗಿದ್ದರು. ಅಷ್ಟೇ ಅಚ್ಚರಿಯ ವಿಚಾರವೆಂದರೆ, ಈ ಸಭೆಗೆ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ)ದಿಂದ ಯಾವುದೇ ಮುಖಂಡರು ಆಗಮಿಸಿರಲಿಲ್ಲ. ಡಿ.10ರಂದು, ಪಂಚರಾಜ್ಯ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ...

 • 3 months ago No comment

  ಅರ್ಧನಾರಿ ಕಥೆಯ ಮತ್ತೆರಡು ಭಾಗಗಳು

  ‘ಮಧೋರುಬಗನ್’ (ಅರ್ಧನಾರಿ) ಎಂಬ ಕಾದಂಬರಿ ಬರೆವ ಮೂಲಕ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಖ್ಯಾತ ತಮಿಳು ಲೇಖಕ ಪೆರುಮಾಳ್ ಮುರುಗನ್ ಈಗ ಆ ಕಾದಂಬರಿಯ ಮತ್ತೆರಡು ಭಾಗಗಳ ಪ್ರಕಟಣೆಯೊಂದಿಗೆ ಸುದ್ದಿಯಾಗಿದ್ದಾರೆ. ಆ ಕಾದಂಬರಿಯ ಕೆಲವು ಭಾಗಗಳು ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡಿವೆ ಎಂದು ಆರೋಪಿಸಿದ್ದ ಬಲಪಂಥೀಯ ಕಾರ್ಯಕರ್ತರು ಹಲ್ಲೆಯೆಸಗಿದಾಗ, ತಮ್ಮ ಬರವಣಿಗೆ ಮೇಲೆ ಸ್ವಯಂ ನಿಷೇಧ ಹೇರಿಕೊಂಡಿದ್ದ ಮುರುಗನ್, ಇದೀಗ ಆ ಕಾದಂಬರಿ ಮುಗಿದಲ್ಲಿಂದಲೇ ಆರಂಭಿಸಿ ಮತ್ತೆರಡು ಭಾಗಗಳನ್ನು ಹೊರತಂದಿದ್ದಾರೆ. ಮೊದಲ ...

 • 3 months ago No comment

  170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್

  ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು.   ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...

 • 3 months ago No comment

  ಅಲೆಗಳಾಗುವ ಹಾಡು

      ಕವಿಸಾಲು         ಕನಸುಗಳ ಜಾತ್ರೆ, ಮನಸುಗಳ ಹಬ್ಬ ಎಲ್ಲ ನಿಶ್ಯಬ್ದ, ಮೌನದಲಿ ಮನ ಬಿಡಿಸಿದ ಮೂರ್ತ ರೂಪಕ್ಕೆ ತದ್ರೂಪು ನಿನ್ನದೇ ಸೊಬಗು ಸುರಿವ ಮಳೆ, ಬೀಸೋ ಗಾಳಿ ಒದ್ದೆಯಾದ ಒಡಲಿನಲಿ ಉರಿವ ನನ್ನೆದೆಯ ಮೇಲೆ ಚಿತ್ತಾರ ಬಿಡಿಸುತ್ತವೆ ನಿನ್ನ ಬೆರಳು ಕರಿಕಪ್ಪು ಚಳಿ ರಾತ್ರಿಯಲಿ ಒಂದಪ್ಪುಗೆಯ ಧ್ಯಾನದಲಿ ಬೆನ್ನ ಸುಳಿ ಸೀಳಿ ಮೇಲೇರುವ ನಡುಕದಲಿ ನಿನ್ನೆದೆಯ ಹರವು ಯಾರೋ, ಯಾವತ್ತೋ ಮರಳ ...


Editor's Wall

 • 08 December 2018
  3 months ago No comment

  170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್

  ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು.   ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...

 • 30 November 2018
  3 months ago No comment

  ರಕ್ಕಸ ವ್ಯೂಹದಲ್ಲಿ ಹೆಣ್ಣಿನ ಹೋರಾಟ

  ಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ತಾಣವೇ ಇಲ್ಲ.    2017ರಲ್ಲಿ ಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ಪರಿಚಿತರಿಂದ ಹತ್ಯೆಯಾದ ಮಹಿಳೆಯರ ಸಂಖ್ಯೆಯೇ 50 ಸಾವಿರ. ಈ ಬೆಚ್ಚಿಬೀಳಿಸುವ ಅಂಕಿಅಂಶವನ್ನು ಬಯಲು ಮಾಡಿರುವುದು ವಿಶ್ವಸಂಸ್ಥೆಯು ಮೊನ್ನೆ ನ.25ರಂದು ಬಿಡುಗಡೆ ಮಾಡಿರುವ ಅಧ್ಯಯನ ವರದಿ. ನವೆಂಬರ್ 25, ...

 • 29 November 2018
  3 months ago No comment

  ರೈತರ ಸಂಕಟಗಳಿಗೆ ಸಿಗುವುದೆ ಮುಕ್ತಿ?

    ಕಳೆದ ವರ್ಷದ ನಾಸಿಕ್-ಮುಂಬಯಿ ಕಿಸಾನ್ ಲಾಂಗ್ ಮಾರ್ಚ್ ಅನ್ನೇ ಪ್ರೇರಣೆಯಾಗಿಟ್ಟುಕೊಂಡು ‘ಸಿಂಗೂರು- ರಾಜಭವನ್ ಕಿಸಾನ್ ಮುಕ್ತಿಮಾರ್ಚ್’ ಆಯೋಜಿಸಲಾಗಿದೆ. ಅಖಿಲಭಾರತ ಕಿಸಾನ್ ಸಭಾದ ಜನರಲ್ ಸೆಕ್ರೆಟರಿ ಹನ್ನಾನ್ ಮೊಲ್ಲಾ ಅವರು ‘ಅಧಿಕಾರಕ್ಕೆ ಬರಬೇಕೆನ್ನುವ ರಾಜಕೀಯ ಪಕ್ಷಗಳು ರೈತರ ಸಂಕಟಗಳಿಗೆ ಜೊತೆಯಾಗುವ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ’ ಎಂದಿದ್ದಾರೆ.     ಕಳೆದ ಇಪ್ಪತ್ತು ವರ್ಷಗಳಲ್ಲಿ 3 ಲಕ್ಷ ರೈತರ ಆತ್ಮಹತ್ಯೆಗಳಾಗಿವೆ ಎನ್ನುವುದು ಭಾರತದ ರೈತರ ಸಂಕಟಗಳ ತೀವ್ರತೆಯನ್ನು ತೋರಿಸುತ್ತದೆ. ನರೇಂದ್ರ ...

 • 09 November 2018
  4 months ago No comment

  ಹೊಸ ಕಾಲದ ಹರಕೆಯ ಕುರಿಗಳು!

    ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...

 • 28 October 2018
  4 months ago No comment

  ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು

    ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.     ಕಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಂತೆ ಕಾಣಿಸುತ್ತಿದೆ. ಆದರೆ ಅಪಸ್ವರಗಳು ಅದೇ ಹೆಣ್ಣಿನ ದನಿಯನ್ನು ಅಡಗಿಸುವಷ್ಟೇ ಗಟ್ಟಿಯಾದ ಅಬ್ಬರದೊಂದಿಗಿರುವುದೂ ಸುಳ್ಳಲ್ಲ. ಪತ್ರಕರ್ತೆ ಪ್ರಿಯಾ ರಮಾನಿ ಪತ್ರಿಕೋದ್ಯಮದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ನೊಂದ ...