Share

ವಿಶಿಷ್ಟ ಚೈತನ್ಯದ ಕಾದಂಬಿನಿ ಕಾವ್ಯ
ವಸಂತ ಬನ್ನಾಡಿ

ಕಾದಂಬಿನಿ ಅವರ ಎರಡನೇ ಕವನ ಸಂಕಲನ ‘ಕಲ್ಲೆದೆಯ ಮೆಲೆ ಕೂತ ಹಕ್ಕಿ’. 100 ಕವಿತೆಗಳ ಈ ಸಂಕಲನ ಕಾದಂಬಿನಿ ಅವರ ಕಾವ್ಯಕ್ಕೇ ವಿಶಿಷ್ಟವಾದ ಗುಣಗಳನ್ನು ಕಾಣಿಸುತ್ತದೆ. ಈ ಸಂಕಲನಕ್ಕೆ ಕವಿ, ವಿಮರ್ಶಕ, ರಂಗಕರ್ಮಿ ವಸಂತ ಬನ್ನಾಡಿ ಮುನ್ನುಡಿ ಬರೆದಿದ್ದಾರೆ. ಕಾದಂಬಿನಿ ಕವಿತೆಗಳ ವಿಶಿಷ್ಟತೆಯನ್ನು ಅವರಿಲ್ಲಿ ಕಾಣಿಸಿದ್ದಾರೆ.

*

ನಗೆ ಕಾದಂಬಿನಿಯ ಕಾವ್ಯಲೋಕದ ಪರಿಚಯವಾದುದು ಮೂರು ವರ್ಷಗಳ ಹಿಂದೆ. ಆಕೆಯ ‘ಕತೆ ಹೇಳುವ ಆಟ’ ಓದಿದಾಗ. ಈ ಕವನ ಆಕೆಯ ‘ಹಲಗೆ ಮತ್ತು ಮೆದುಬೆರಳು’ ಕವನ ಸಂಕಲನದಲ್ಲಿ ಪ್ರಕಟವಾಗಿದೆ. ‘ನನ್ನಿನಿಯನೇ ಕತೆ ಹೇಳುತ್ತಿದ್ದೀ ನೀನು’ ಎಂದು ತಣ್ಣನೆ ಆರಂಭವಾಗುವ ಈ ಕವಿತೆ ಧುತ್ತನೆ ತೆರೆದುಕೊಳ್ಳುವ ತಿರುವುಗಳು ಬೆಚ್ಚಿಬೀಳಿಸುವಂತಿವೆ. ರಮಿಸುವ ದನಿಯಲ್ಲಿ ಆತ ಹೇಳುವ ಕತೆಗೆ ಆಕೆ ಹೂಂಗುಟ್ಟುತ್ತಿರುವಂತೆಯೇ, ದುಃಸ್ವಪ್ನದಲ್ಲೆಂಬಂತೆ ರೂಕ್ಷ ಗಂಡುಗಳು ಹೆಣ್ಣಿನ ಮೇಲೆರಗುವ ಬೀಭತ್ಸ ದಾಳಿಯ ಚಿತ್ರವನ್ನು ಸರ್ರಿಯಲಿಸ್ಟಿಕ್ ಎನ್ನಬಹುದಾದ ಶೈಲಿಯಲ್ಲಿ ಕಟ್ಟಿಕೊಡುವ ಈ ಕವಿತೆ ಕಾಲ ಯುಗಗಳನ್ನು ದಾಟಿ ನೆಗೆವ ಗಂಡುಗಳ ಕ್ರೂರ ಅಭೀಪ್ಸೆಗಳ ಕಥೆಯನ್ನು ಹೇಳುತ್ತದೆ. ಕಾದಂಬಿನಿ ಮಾತ್ರ ಬರೆಯಬಹುದಾದ ಕವಿತೆಯಿದು; ಕನ್ನಡದ ಯಾವ ಕವಿಯೂ ಇಂಥದ್ದೊಂದು ಕವಿತೆ ಬರೆಯಲಾರ ಎಂದು ನನಗೆ ಅನಿಸಿಬಿಟ್ಟಿತು. ಈ ಬಗೆಯ ಕವಿತೆ ರಚಿಸಲು ಅಗಾಧ ಧೈರ್ಯ ಬೇಕು. ಸಿದ್ಧ ಓದುಗರ ಸಿದ್ಧ ಅಪೇಕ್ಷೆಗಳನ್ನು ಬದಿಗಿಟ್ಟು ನಡೆವ ಛಾತಿ ಬೇಕು. ಹೊಸ ಹುಟ್ಟಿನ ಸಂಭ್ರಮದ ಜೊತೆಗೇ ಬೆಸೆದುಕೊಂಡಿರುವ ಯಾತನೆಯ ಕೆಂಡವನ್ನು ತನ್ನೊಳಗೆ ಇಟ್ಟುಕೊಂಡು ಹುಟ್ಟಿದ ಕವಿತೆಯಿದು. ಪ್ರೇಮ, ಕಾಮ, ಕ್ರೌರ್ಯಗಳ ಹರಹನ್ನು ಪದರ ಪದರವಾಗಿ ಹಿಡಿದಿಟ್ಟ ರೀತಿ ದಂಗುಬಡಿಸುವಂತೆ ಈ ಕವನದಲ್ಲಿ ಪ್ರಕಟವಾಗಿದೆ. ಈ ಕವನವನ್ನು ಓದಿದ ನಾನು ‘ಕನ್ನಡ ಕಾವ್ಯಲೋಕದಲ್ಲಿ ಹೊಸ ನಕ್ಷತ್ರವೊಂದು ಉದಯಿಸಿದೆ’ ಎಂದು ಬರೆದಿದ್ದೆ.

ನನ್ನ ಮಾತನ್ನು ನಿಜವಾಗಿಸುವಂತೆ ಕಾದಂಬಿನಿ ಕಳೆದ ಮೂರು ವರ್ಷಗಳಿಂದ ಒಂದರ ಮೇಲೊಂದು ಅತ್ಯುತ್ತಮ ಕವಿತೆಗಳನ್ನು ಬರೆಯುತ್ತಲೇ ಇದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ದಾರಿಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಕವಿಯಾಗಿ ತನ್ನ ಅನನ್ಯತೆಯನ್ನು ಸಹಜ ಪ್ರತಿಭೆಯ ಓಜಸ್ಸಿನಿಂದ ಸಿದ್ಧಿಸಿಕೊಂಡ ಉದಾಹರಣೆಯಿದು.

ಈ ಹಿನ್ನೆಲೆಯಲ್ಲಿ ಕಾದಂಬಿನಿ ತನ್ನ ಎರಡನೆಯ ಕವನ ಸಂಕಲನವಾದ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಬಗ್ಗೆ ಎರಡು ಮಾತು ಬರೆಯಬೇಕೆಂದು ಕೇಳಿಕೊಂಡಾಗ ನಾನು ಸಂತೋಷದಿಂದ ಒಪ್ಪಿಕೊಂಡೆ. ಆಕೆಯ ಕಾವ್ಯ ಮತ್ತು ಕಾವ್ಯ ವ್ಯಕ್ತಿತ್ವದ ಬಗ್ಗೆ ನನ್ನ ಅರಿವಿಗೆ ಬಂದುದನ್ನು ದಾಖಲಿಸಬಹುದೆಂದು. ಹಾಗೆ ಮಾಡುವಾಗ ಕವಿತೆಯ ಸಾಲುಗಳನ್ನು ಉದ್ಧರಿಸುತ್ತಾ ವಿಶ್ಲೇಷಿಸುವ ಪ್ರಾಯೋಗಿಕ ವಿಮರ್ಶೆಯನ್ನು ಮಾಡದೇ ಒಟ್ಟಾರೆಯಾಗಿ ಕಾದಂಬಿನಿಯ ಕಾವ್ಯದ ವೈಶಿಷ್ಟ್ಯಗಳನ್ನು ಕಾಣಿಸುವತ್ತಲೇ ನನ್ನ ಗಮನವನ್ನು ಹರಿಸಿದ್ದೇನೆ. ಈವರೆಗೆ ಬಂದಿರುವ ಎರಡೂ ಕವನ ಸಂಕಲನಗಳನ್ನೂ ಗಮನದಲ್ಲಿಟ್ಟುಕೊಂಡು ಮಾತುಗಳನ್ನು ಜೋಡಿಸಿದ್ದೇನೆ.

ಕಾದಂಬಿನಿಯ ಕವಿತೆಗಳನ್ನು ನಾನು ಕನ್ನಡ ಕಾವ್ಯಲೋಕಕ್ಕೆ ಹೊಸದಾಗಿ ಪರಿಚಯಿಸುವ ಅಗತ್ಯವೇ ಇಲ್ಲ. ಕವನ ಬರೆಯಲು ಆರಂಭಿಸಿದ ದಿನದಿಂದಲೇ ಸಹೃದಯ ಓದುಗರ ಗಮನವನ್ನು ಸೆಳೆಯುತ್ತಲೇ ಬಂದಿರುವ ಕಾದಂಬಿನಿ, ಗಂಭೀರ ಕಾವ್ಯಾಭ್ಯಾಸಿಗಳಿಗೆ ಚಿರಪರಿಚಿತ ಹೆಸರು. ಪಾಂಡಿತ್ಯಪೂರ್ಣ ವಿಮರ್ಶೆಯ ಹಂಗಿಲ್ಲದೇ ಆಕೆಯ ಕಾವ್ಯ ಹೇಗೆ ತನ್ನದೇ ಓದುಗ ಬಳಗವೊಂದನ್ನು ಸೃಷ್ಟಿಸಿಕೊಂಡಿತು ಎಂಬುದೂ ಕುತೂಹಲಕಾರಿಯಾದ ಅಂಶ. ಕಾದಂಬಿನಿ ಕವಿತೆಗಳ ತಾಜಾತನವೇ ಇದಕ್ಕೆ ಕಾರಣ ಎನ್ನಬಹುದು.

ಭಾಷೆ, ಭಾವಗಳ ಬೆಸುಗೆ ಇಲ್ಲದೇ ಕವಿತೆ ಒಣಗಿ ಹೋಗುತ್ತಿರುವ ಇಂದಿನ ಕಾವ್ಯ ಸಂದರ್ಭದಲ್ಲಿ ಕಾದಂಬಿನಿ ಕವಿತೆಗಳು ಅನನ್ಯವಾದುವು. ಆಕೆಯ ಮೊದಲ ಸಂಕಲನವಾದ ‘ಹಲಗೆ ಮತ್ತು ಮೆದುಬೆರಳು’ವಿನ ಎಲ್ಲ ಕವಿತೆಗಳಲ್ಲಿಯೂ ಪ್ರೌಢವಾದ ಕಾಣ್ಕೆಯೊಂದು ಅಂತರ್ ಸೆಲೆಯಂತೆ ಹರಿಯುತ್ತಿರುವುದನ್ನು ಕಾಣಬಹುದು. ಇದು ಕಾದಂಬಿನಿ ಕಾವ್ಯಕ್ಕೆ ವಿಶಿಷ್ಟವಾದ ಹೊಳಪು ತಂದುಕೊಟ್ಟಿದೆ. ಸಣ್ಣದೊಂದು ಸೆಲೆಯಂತೆ ಆರಂಭಗೊಳ್ಳುವ ಕಾದಂಬಿನಿ ಕವಿತೆಗಳು ಬರಬರುತ್ತ ಪಡೆದುಕೊಳ್ಳುವ ರಭಸ ಬೆರಗು ಹುಟ್ಟಿಸುವಂತಹುದು. ಹೃದಯದ ಮಾತುಗಳು ಪ್ರಕ್ಷುಬ್ಧ ತೊರೆಯಂತೆ ಭೋರ್ಗರೆದು ಹರಿವ ಕಾವ್ಯ ಇದು. ಮೇಲು ನೋಟಕ್ಕೆ ಸರಳ ಅನಿಸಿದರೂ ಅನೂಹ್ಯವೂ ಗೂಢವೂ ಆದ ಭಾವ ಪ್ರಪಂಚವನ್ನು ತನ್ನೊಳಗೆ ಹೊಂದಿರುವುದರಿಂದಲೇ ಕಾದಂಬಿನಿ ಕವಿತೆಗಳು ಅಪ್ಪಟ ಕಾವ್ಯವಾಗಿರುವುದು. ಮಾತುಗಾರಿಕೆ ಮತ್ತು ಭಾವತೀವ್ರತೆ ಇಲ್ಲಿ ಸಮಪಾಕದಲ್ಲಿ ಬೆರೆತಿವೆ. ಈ ಎಲ್ಲ ಕಾರಣಗಳಿಂದಾಗಿ ಇಂದು ಬರೆಯುತ್ತಿರುವ ಕವಿಗಳ ಸಾಲಿನಲ್ಲಿ ಕಾದಂಬಿನಿ ನಿಸ್ಸಂಶಯವಾಗಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ.

ಒಬ್ಬ ಮುಖ್ಯ ಕವಿಯ ಒಟ್ಟು ಕಾವ್ಯ ಸೃಷ್ಟಿಯಲ್ಲಿ ಒಂದು ಸಾತತ್ಯ ಇರುತ್ತದೆ. ಅದೊಂದು ಸಾವಯವ ಸಂಬಂಧ ಹೊಂದಿರುವ ಬೃಹತ್ ವೃಕ್ಷದಂತೆ. ಕಾದಂಬಿನಿಯ ಒಟ್ಟಾರೆ ಕಾವ್ಯ ಪ್ರಪಂಚವನ್ನು ಹೀಗೆ ಟಿಸಿಲೊಡೆಯುತ್ತಲೇ ಹೋಗುವ ವೃಕ್ಷಕ್ಕೆ ಹೋಲಿಸಬಹುದು. ಮೊದಲನೆಯ ಸಂಕಲನದಲ್ಲಿ ಕಾಣಿಸಿಕೊಂಡ ಈ ಬೆಳವಣಿಗೆ ಎರಡನೆಯ ಸಂಕಲನದ ಕಟ್ಟಕಡೆಯ ಕವಿತೆಯವರೆಗೂ ಚಾಚಿಕೊಂಡಿದೆ. ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಸಂಕಲನದ ಒಂದು ಮುಖ್ಯ ಕವಿತೆಯಾದ ‘ಪಾತ್ರ’ ವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಇಲ್ಲಿಯೂ ಹೆಣ್ಣು ತನ್ನ ಪ್ರಿಯತಮನನ್ನು ಉದ್ದೇಶಿಸಿ ಮಾತು ಶುರು ಮಾಡುತ್ತಾಳೆ. ಇಲ್ಲಿಯೂ ವಿರುದ್ಧ ಭಾವಗಳನ್ನು ಹಿಡಿದಿಡುವ ಪ್ರಯತ್ನ ಇದೆ. ತಾಯಾಗಿ ಭಡ್ತಿಯಾದ ಪ್ರಿಯತಮೆಯ ಪಾತ್ರ ಹಿಂದೆ ಸರಿಯುತ್ತಾ, ಪ್ರಿಯತಮೆಯರ ಕೂಡ ಆತನ ಮೆರವಣಿಗೆ ಸಾಗಿದೆ. ಹೊಸ ಪದಗಳ ಸೃಷ್ಟಿಯ ಜೊತೆಗೆ ಹೊಸ ಮಂಡನಾ ಕ್ರಮದಲ್ಲಿ ಮುಂದುವರೆಯುತ್ತಾ ದಟ್ಟ ಪ್ರತಿಮಾ ಪ್ರಪಂಚವೊಂದನ್ನು ಈ ಕವಿತೆ ಕಟ್ಟಿಕೊಡುತ್ತದೆ.
ತನ್ನದೇ ವಿಶೇಷವಾದ ಅಭಿವ್ಯಕ್ತಿ ವಿಧಾನವೊಂದನ್ನು ಕಂಡುಕೊಳ್ಳಬೇಕೆಂಬ ಕವಯತ್ರಿಯ ತಹತಹವನ್ನು ಈ ಸಂಕಲನದ ಮತ್ತೊಂದು ಮುಖ್ಯ ಕವಿತೆಯಾದ ‘ಮುಸಲಧಾರೆ ಮಳೆ’ಯಲ್ಲಿಯೂ ನೋಡಬಹುದು.

‘ನಾನೊಮ್ಮೆ ಮಲಗಬೇಕು ಅಂಗತ್ತನೆ ಬಟಾಬಯಲಲಿ’ ಎಂಬ ಚಕಿತಗೊಳಿಸುವ ಮಾತುಗಳಿಂದ ಈ ಕವನ ಶುರುವಾಗುತ್ತದೆ.

‘ಮಣ್ಣೊಳೊಂದಾದ ಬೀಜ ಕೊಳೆಯಬೇಕು..
ಬೀಜದೆದೆಯ ಬೆಂಕಿ ಮಾತ್ರ ಮೊಳೆಯಬೇಕು’
ಎಂಬ ಸಾಲುಗಳೊಡನೆ ಮುಕ್ತಾಯಗೊಳ್ಳುತ್ತದೆ. ಈ ನಡುವೆ ನಾವು ಕಾಣುವುದು ಭೋರ್ಗರೆವ ಭಾವಗಳ ಮುಸಲಧಾರೆಯೇ; ಜಗದ ನೋವಿಗೆ ಓಗೊಡುವ ಕವಿಮನದ ಅನಾಹತನಾದವೇ. ತಾನು ಕಂಡುಕೊಂಡ ಅಭಿವ್ಯಕ್ತಿ ವಿಧಾನಕ್ಕೆ ಒಗ್ಗುವ ತಕ್ಕ ಭಾಷೆಯನ್ನು ಸಾಕ್ಷಾತ್ಕರಿಸಿಕೊಳ್ಳುವ ಕವಯತ್ರಿಯ ಕಸುಬುಗಾರಿಕೆಯನ್ನು ಈ ಕವಿತೆಯಲ್ಲಿಯೂ ನೋಡಬಹುದು. ಒಂದರ ಮೇಲೊಂದರಂತೆ ಬರುವ ಇಡಿಕಿರಿದ ಪ್ರತಿಮೆಗಳ ಈ ಕವಿತೆ ಹೆಣ್ಣಿನ ಕುರಿತ ಹುಸಿ ರೊಮ್ಯಾಂಟಿಕ್ ಪರಿಧಿಗಳನ್ನು ಕೆಡವಿ ಅಗಾಧ ನೋವಿನ ನಡುವೆಯೂ ಆಕೆ ತೋರುವ ಧೀಮಂತವೂ ವಿಹ್ವಲವೂ ಆದ ಒಳತೋಟಿಯ ಹೊಸ ಪ್ರಪಂಚವೊಂದನ್ನು ಅನಾವರಣಗೊಳಿಸುತ್ತದೆ. ಕಾದಂಬಿನಿಯ ಲೇಖನಿಯಿಂದ ತೆರೆದುಕೊಳ್ಳುವ ಈ ಲೋಕದ ತೀವ್ರತೆ ಎಂಥದ್ದೆಂದರೆ ಕವನ ಕಟ್ಟುವುದರಲ್ಲಿ ಆಕೆ ತನ್ನೊಂದಿಗೆ ತಾನೇ ಸ್ಪರ್ಧಿಸುತ್ತಿರುವಂತಿದೆ. ಹೀಗಾಗಿ ಆಕೆಯ ಕಾವ್ಯ ಹೊಸ ಕಾವ್ಯ ಮಾರ್ಗವೊಂದರ ದಿಕ್ಸೂಚಿಯಂತೆಯೂ ಇದೆ.

ನಾನು ಮೊದಲೇ ಹೇಳಿದಂತೆ ಈ ಸಂಕಲನದ ಎಲ್ಲ ಕವಿತೆಗಳನ್ನೂ ನಾನು ಉದ್ಧರಿಸಲು ಹೋಗುವುದಿಲ್ಲ. ಗೃಹಿಣಿಯೊಬ್ಬಳ ಮರಣಪತ್ರ, ಪಾದಕ್ಕೂ ಕಣ್ಣುಂಟು, ಕೆಂಡ ಕೊಂಡದೊಳಗಿಂದ, ಒದ್ದೆ ಮುದ್ದೆ ಕಾಗದ, ಭವದ ಮೋಹ, ಪರಿಮಳದ ಗಲ್ಲಿಗಳಲಿ ಮುಂತಾದ ಮಹತ್ವಾಕಾಂಕ್ಷೀ ಕವನಗಳನ್ನು ಈ ಸಂಕಲನ ಒಳಗೊಂಡಿದೆ. ಇಲ್ಲಿ ನಾವು ನೋಡುವುದು ಮತ್ತದೇ ಕಾದಂಬಿನಿತನ. ಪೆಡಸುತನದ ವಿರುದ್ಧ ಸಮರ ಸಾರಿದಂತೆ, ರಭಸದಲ್ಲಿ ಕವಿತೆ ಕಟ್ಟುವ ಕಾವ್ಯೋತ್ಸಾಹ.

ಕಾದಂಬಿನಿಯ ಕಾವ್ಯರಚನೆಯ ವಿಶೇಷತೆಯೆಂದರೆ, ದ್ವಂದ್ವಗಳನ್ನೂ ಜೊತೆಗೇ ಹಿಡಿದಿಡಬಲ್ಲ ವಾಕ್ಯ ರಚನೆ. ಇದು ಒಂದು ವಾಕ್ಯ ರಚನೆಯಲ್ಲಿ ಇರುವ ಹಾಗೆಯೇ ಇಡೀ ಕವಿತೆಯ ಹೂರಣದಲ್ಲಿಯೂ ಇರುತ್ತದೆ. ಆದುದರಿಂದ ಸರಳ ರಚನೆಯ ಹಾಗೆ ಮೊದ ಮೊದಲಿಗೆ ಕಾಣಿಸುವ ಕಾದಂಬಿನಿಯ ಕವಿತೆಗಳು ಅಂತಿಮವಾಗಿ ಒಂದು ಸಂಕೀರ್ಣ ಅನುಭವವಾಗಿ ನಮ್ಮನ್ನು ಆವರಿಸಿ ಬಿಡುತ್ತದೆ. ಮೇಲೆ ಹೆಸರಿಸಿದ ಎಲ್ಲ ಕವಿತೆಗಳಲ್ಲಿಯೂ ಇದನ್ನು ನೋಡಬಹುದು.

ರಿಲ್ಕೆಯೋ ಇನ್ನಾರೋ ಗೊತ್ತಾದ ಕೆಲವು ಪಾಶ್ಚಾತ್ಯ ಲೇಖಕರನ್ನು ಅನುಕರಿಸಿ ಜನವಿದೂರ ಪ್ರದೇಶವೊಂದರಲ್ಲಿ ವಸ್ತುಗಳನ್ನೋ ವಿನ್ಯಾಸಗಳನ್ನೋ ನೆಟ್ಟ ದೃಷ್ಟಿಯಿಂದ ನೋಡುತ್ತಾ ನಿರ್ಜೀವ ಪದಗಳ ಕುಂಟು ನಡಿಗೆಯಲ್ಲಿ ತೊಡಗುವುದೇ ಕಾವ್ಯ ಎಂದು ನಂಬಿಸುತ್ತಿರುವವರನ್ನು ಒಂದು ಕ್ಷಣ ತಡೆದು ನಿಲ್ಲಿಸಿ ನೋಡಬಲ್ಲಂತೆ ಮಾಡುವ ಸಶಕ್ತ ರಚನೆಗಳಿವು. ಕಾವ್ಯವು ಭಾಷೆಯಲ್ಲಿ ನಿಜವಾಗಬೇಕು ಎಂಬುದರ ಅರಿವೂ ಕಾದಂಬಿನಿಗಿರುವುದರಿಂದ ಈ ನೆಗೆತ ಸಾಧ್ಯವಾಗಿದೆ. ಕಾವ್ಯದ ವಸ್ತುವನ್ನು ಹೊಸ ವಿನ್ಯಾಸದಲ್ಲಿ ಪ್ರಕಟಿಸುವ ಯತ್ನದಲ್ಲೂ ಆಕೆ ತೊಡಗಿಕೊಂಡಿದ್ದಾರೆ. ಅದೇ ಹೊತ್ತಿನಲ್ಲಿ ಕಾವ್ಯ ಬರಿಯ ಘೋಷಣೆಯಾಗಬಾರದೆಂಬ ಎಚ್ಚರವೂ ಕವಯತ್ರಿಗಿದೆ.
ಕಾದಂಬಿನಿ ಕವಿತೆಗಳ ಇನ್ನೊಂದು ಮುಖ್ಯ ಲಕ್ಷಣವೆಂದರೆ, ಇಲ್ಲಿನ ಕವಿತೆಗಳನ್ನು ಓದುತ್ತಾ ಓದುತ್ತಾ ಓದುಗನೂ ಕಾವ್ಯ ಲಯದ ರಭಸದಲ್ಲಿ ತಾನೂ ಒಂದಾಗಿ ಬಿಡುವಂತೆ ಮಾಡುವ ಸಾಮರ್ಥ್ಯ ಹೊಂದಿರುವುದು. ಆದರೂ ಬೇಕೆಂದೇ ತಲ್ಲೀನತೆ ಸಾಧ್ಯವಾಗದ ರೀತಿ ಕವನದ ಓಟ ಇರುವುದು. ಕವಯತ್ರಿ ಹೀಗೆ ಇಡೀ ವಸ್ತುವಿನ ಪ್ರಕ್ಷುಬ್ದತೆಯಲ್ಲಿ ಮುಳುಗಿಯೂ ದೂರ ನಿಂತು ನಿರುಕಿಸುತ್ತ ಕಾವ್ಯ ರಚಿಸುತ್ತಿರುವುದು; ಮತ್ತು ಓದುಗನೂ ತನ್ನನ್ನು ತಾನು ಪೂರ್ತಿ ಒಳಗೊಳಿಸಿಕೊಳ್ಳದೇ ದೂರದಲ್ಲೇ ಇದ್ದು ಪುನರಭಿನಯಿಸಲು ಅನುವಾಗುವಂತೆ ಕಾವ್ಯದ ಶಿಲ್ಪ ಇರುವುದು. ಬರ್ಟೋಲ್ಟ್ ಬ್ರೆಕ್ಟ್ ಹೇಳುವ ‘ದೂರೀಕರಣ ತತ್ವ’ಕ್ಕೆ ಹತ್ತಿರವಾದ ಕಲ್ಪನೆಯಿದು; ಭಾವ ತಲ್ಲೀನತೆಗೆ ವಿರುದ್ಧವಾದುದು.

ತನ್ನನ್ನೇ ತಾನು ನಿಕಷಕ್ಕೆ ಒಡ್ಡಿಕೊಳ್ಳುತ್ತಾ ಬೆಳೆಯುತ್ತಾ ಸಾಗುತ್ತಿರುವ ಕವಿ ಕಾದಂಬಿನಿ. ತಾನು ಆಗಲೇ ಪರಿಪೂರ್ಣತೆಯನ್ನು ಸಾಧಿಸಿಬಿಟ್ಟಿರುವೆ ಎಂಬ ಮನೋಭಾವವೂ ಆಕೆಗಿಲ್ಲ. ಹೀಗಾಗಿ ಯಾವುದೇ ವಲಯಕ್ಕೆ ಸೇರದ ಅಪ್ಪಟ ಸಾಹಿತ್ಯಾಸಕ್ತರಿಂದ ಆಕೆಯ ಕಾವ್ಯಕ್ಕೆ ಅಪಾರ ಮೆಚ್ಚುಗೆ ಹರಿದು ಬರುತ್ತಿದೆ. ಆಕೆಯ ಪ್ರತಿ ಕವನದಲ್ಲೂ ಆಕೆಗೇ ವಿಶಿಷ್ಟ ಅನಿಸುವ ಚೈತನ್ಯವೊಂದು ಗುಪ್ತಗಾಮಿನಿಯಾಗಿ ಹರಿಯುತ್ತಿರುವುದೇ ಆಕೆ ಎಲ್ಲರ ಗಮನ ಸೆಳೆಯುತ್ತಿರುವುದಕ್ಕೆ ಮುಖ್ಯ ಕಾರಣ ಅನಿಸುತ್ತದೆ.

ಕಾದಂಬಿನಿಯದು ಸಾಂಪ್ರದಾಯಿಕ ಪ್ರೇಮ ಕವಿತೆಗಳಲ್ಲ. ಪ್ರೇಮ ಕವಿತೆಯೆಂಬಂತೆ ತೋರುವ ರಚನೆಗಳಲ್ಲೂ ಆಕೆ ತನ್ನ ಕಾಲದ ಬಿಕ್ಕಟ್ಟುಗಳಿಗೆ ಮುಖಾಮುಖಿಯಾಗಲು ಯತ್ನಿಸುವುದನ್ನು ಕಾಣಬಹುದು. ಜನಸಾಮಾನ್ಯರ ಸಂಕಟಗಳಿಗೆ ಮಾತು ಕೊಡಬೇಕು ಎಂಬುದು ಕಾದಂಬಿನಿ ಕಾವ್ಯದ ಕೇಂದ್ರಪ್ರಜ್ಞೆ. ಸಾಮಾಜಿಕ ಹಾಗೂ ರಾಜಕೀಯ ವಿಷಯಗಳನ್ನು ಮುಟ್ಟಿದರೆ ಮನಸ್ಸು ಕೊಳಕಾಗುವುದೆಂಬ ಮನೋಭಾವ ಇಂದಿಗೂ ಇರುವ ಸಂದರ್ಭದಲ್ಲಿ ಕಾದಂಬಿನಿಯದು ತೀರಾ ತದ್ವಿರುದ್ಧ ನಿಲುವು. ಸಾಮಾಜಿಕ, ರಾಜಕೀಯ ವಿಷಯಗಳನ್ನು ಆರಿಸಿಕೊಂಡು ಹೇಗೆ ಪ್ರಖರ ಕವಿತೆಗಳನ್ನು ರಚಿಸಬಹುದು ಎಂಬುದನ್ನು ಆಕೆ ತೋರಿಸಿಕೊಟ್ಟಿದ್ದಾರೆ. ಕಾದಂಬಿನಿ ಬರೆದಿರುವ ಅನೇಕ ಕಿರುಗವನಗಳೂ ತಮ್ಮ ಒಡಲೊಳಗೆ ಸಾಮಾಜಿಕ ಜಿಜ್ಞಾಸೆಯನ್ನೂ ಒಳಗೊಂಡಿರುವುದರಿಂದಲೇ ವಿಶಿಷ್ಟವಾಗಿವೆ. ಜಗತ್ತಿನ ಎಲ್ಲ ಆಗು ಹೋಗುಗಳ ಬಗ್ಗೆಯೂ ಆಕೆಗೆ ಆಸಕ್ತಿಯಿದೆ. ಸಹಜವಾಗಿ ಅವು ಆಕೆಯ ಕವಿತೆಗಳ ಅವಿಭಾಜ್ಯ ಅಂಗವೂ ಆಗಿವೆ. ಜಗದ ನೋವಿಗೆ ಸ್ವಂದಿಸದವನು ಕವಿಯೇ ಅಲ್ಲ ಎಂಬ ನಿಲುವು ಆಕೆಯನ್ನು ಇತರರಿಗಿಂತ ಭಿನ್ನ ಕವಿಯನ್ನಾಗಿಸಿದೆ.

ಸೂಕ್ಷ್ಮ ಮನಸ್ಸಿನ ಯಾರೇ ಆದರೂ ಇಂದಿನ ಸಂದರ್ಭದಲ್ಲಿ ಸಂಭ್ರಮಿಸುತ್ತ ಕೂರಲು ಸಾಧ್ಯವೇ? ಈ ಕಾರಣದಿಂದಾಗಿಯೇ ಕಾದಂಬಿನಿಯ ಕವಿತೆಯ ಆಳದಲ್ಲಿ ಇರುವುದು ಗಾಢ ವಿಷಾದ ಹಾಗೂ ತಳಮಳ; ಸನ್ನಿವೇಶದ ಕಾಠಿಣ್ಯತೆಗೆ ಸಡ್ಡು ಹೊಡೆವ ವಿದ್ರೋಹಿ ಗುಣ.

ಕಾವ್ಯ ಪ್ರಭುತ್ವವನ್ನು ಇಡಿಯಾಗಿ ಎದುರು ಹಾಕಿಕೊಳ್ಳುವ ವಿದ್ರೋಹಿ ಗುಣವನ್ನು ಹೊಂದಿರುವಾಗಲೇ ಜೀವಶಕ್ತಿ ಪಡೆದು ನಳನಳಿಸತೊಡಗುತ್ತದೆ. ಈ ಬಗೆಯ ನಿಷ್ಠುರ ನಡವಳಿಕೆಯಿಂದ ತಮ್ಮ ವ್ಯಕ್ತಿತ್ವದ ಮೂಲ ಸೆಲೆಯನ್ನು ರೂಪಿಸಿಕೊಳ್ಳಬೇಕಾದ ಕವಿ, ಪ್ರಭುತ್ವಕ್ಕೆ ಶರಣಾಗಿಯೂ ಒಳ್ಳೆಯ ಕಾವ್ಯ ರಚಿಸುತ್ತೇನೆ ಎಂದು ತಿಳಿದಿದ್ದರೆ ಅದು ಬರೀ ಲೊಳಲೊಟ್ಟೆ. ಹಾಗೆ ಮಾಡುವುದರಿಂದ ಕವಿಯ ವ್ಯಕ್ತಿತ್ವ ಮಾತ್ರವಲ್ಲ, ಕಾವ್ಯವೂ ಮಂಕಾಗುತ್ತದೆ. ಅಂತಹ ಒಂದು ದಯನೀಯ ಸ್ಥಿತಿಯನ್ನು ನಾವಿಂದು ನೋಡುತ್ತಿದ್ದೇವೆ. ಕಾದಂಬಿನಿ ಕಾವ್ಯ ರಚನೆಯಲ್ಲಿ ತೊಡಗಿದ್ದು ಇಂತಹ ಸಂದರ್ಭದಲ್ಲಿ. ಯಾರ ಪ್ರಭಾವಕ್ಕೂ ಒಳಗಾಗದೆ ಕಾವ್ಯ ರಚನೆಯಲ್ಲಿ ತೊಡಗಿಕೊಳ್ಳುವ ಮೂಲಕ ಆಕೆ ಇದಕ್ಕೆ ತಕ್ಕ ಉತ್ತರ ಕಂಡುಕೊಂಡಂತಿದೆ. ಕಾದಂಬಿನಿ ಸಾಹಿತ್ಯದ ವಿದ್ಯಾರ್ಥಿಯಾಗದೇ ಇರುವುದೂ ಆಕೆಯ ಭಿನ್ನ ಕಾವ್ಯ ರಚನೆಗೆ ಒತ್ತಾಸೆಯಂತಿದೆ.

ಹೊಸ ದಾರಿ ಕಂಡುಕೊಳ್ಳುವ ಕಷ್ಟದ ಅರಿವು ಲೇಖಕನೊಬ್ಬನಿಗೆ ಇರಲೇಬೇಕಾದದ್ದು. ಈಗಾಗಲೇ ಚಾಲ್ತಿಯಲ್ಲಿರುವ ಸಿದ್ಧಶೈಲಿಯೊಂದನ್ನು ಅನುಕರಿಸ ಹೊರಡುವವರಂತೂ ಬಹುಬೇಗ ಖಾಲಿಯಾಗಿಬಿಡುತ್ತಾರೆ. ಧಿಡೀರ್ ಜನಪ್ರಿಯತೆ, ಪ್ರಶಸ್ತಿ, ಸನ್ಮಾನಗಳ ಆಶೆ ಅವರನ್ನು ಪೆಡಸುಗಳನ್ನಾಗಿಸುತ್ತದೆ. ತನ್ನೊಳಗೆ ಒಂದು ಪ್ರತಿರೋಧದ ಗುಣ ಇಟ್ಟುಕೊಳ್ಳದೇ ಹೋದ ಕವಿ ಬಹುದೂರ ನಡೆಯಲಾರ ಎಂಬುದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ.

ಕವಿಯೊಬ್ಬ ತನ್ನ ಪೂರ್ವಸೂರಿಗಳಿಗೆ ನಮಸ್ಕಾರ ಮಾಡಿಯೇ ಮುಂದೆ ಹೋಗಬೇಕು ಎಂಬ ಮಾತೂ ಇದೆ. ಇದು ಒಪ್ಪಬೇಕಾದ ವಿಚಾರವೇ. ಆದರೆ ಮುಂಚೂಣಿಯಲ್ಲಿದ್ದ ಕೆಲವು ನವ್ಯ ಲೇಖಕರು ಆರಂಭದಲ್ಲಿ ತಮಗಿಂತ ಹಿಂದೆ ಬರೆಯುತ್ತಿದ್ದ ಬರಹಗಾರರನ್ನು ತಿರಸ್ಕರಿಸುತ್ತಾ ಪಿತೃಹತ್ಯೆಯ ಅಗತ್ಯದ ಬಗ್ಗೆ ಮಾತನಾಡಿ ವಯಸ್ಸಾದ ಮೇಲೆ ತಮಗೆ ಅನುಕೂಲಕರವಾಗಿ ಕಂಡವರನ್ನು ಪೂರ್ವಸೂರಿಗಳೆಂದು ಕರೆದು ಭಕ್ತಿ ತೋರಿದ್ದನ್ನು ಕಂಡಿದ್ದೇವೆ. ಈ ಯಾವ ಗೊಂದಲಗಳೂ ಕಾದಂಬಿನಿಯನ್ನು ಕಾಡಿದಂತಿಲ್ಲ. ಕಾದಂಬಿನಿಗೆ ಇರುವ ಅನುಕೂಲತೆಯೆಂದರೆ ಆಕೆ ಈ ಎಲ್ಲ ವಲಯಗಳಿಂದ ದೂರ ಉಳಿದು ಕಾವ್ಯ ರಚಿಸುತ್ತಿರುವುದು.

ಕಾದಂಬಿನಿ ಸೂಕ್ಷ್ಮ ಸ್ವಭಾವದ ಕವಯತ್ರಿ. ಅದಮ್ಯ ಜೀವನ ಪ್ರೀತಿ ಹೊಂದಿರುವವರು. ಬದುಕಿನ ಒಂದು ಹಂತದಲ್ಲಿ ಉಂಡ ಅತೀವ ನೋವು ತನ್ನನ್ನು ಕಾವ್ಯ ರಚಿಸುವಂತೆ ಪ್ರೇರೇಪಿಸಿತು ಎಂದು ಒಂದು ಕಡೆ ಆಕೆಯೇ ಹೇಳಿಕೊಂಡಿದ್ದಾರೆ. ಆದುದರಿಂದಲೇ ಆಕೆಯ ಕಾವ್ಯ ಸೂಕ್ಷ್ಮವೂ ದೃಢವೂ ಆಗಿರುವುದು. ಎಲ್ಲ ಎಡರು ತೊಡರುಗಳನ್ನು ದಾಟಿ ಕಾದಂಬಿನಿ ಕಾವ್ಯ ರಚನೆಯಲ್ಲಿ ನಿರಂತರವಾಗಿ ಮುಂದುವರೆಯಲಿ ಎಂಬುದೇ ನನ್ನ ಹಾರೈಕೆ. ಈಗಾಗಲೇ ಕನ್ನಡ ಕಾವ್ಯಲೋಕದಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಗಟ್ಟಿಯಾಗಿ ಮೂಡಿಸಿರುವ ಕಾದಂಬಿನಿಯ ಮುಂದಿನ ಹಾದಿಯೂ ಸುಗಮವಾಗಿರಲಿ. ಅಸಾಧಾರಣ ಪ್ರತಿಭೆ ಹೊಂದಿರುವ ಕಾದಂಬಿನಿ ಅದೇ ಏಕಾಗ್ರತೆಯಿಂದ ಕಥೆ, ಕಾದಂಬರಿಗಳನ್ನೂ ರಚಿಸುವಂತಾಗಲಿ. ಈಗ ಪಡೆದಿರುವಂತೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮೆಚ್ಚುಗೆ, ಆದರಗಳನ್ನು ಜನರಿಂದ ಪಡೆಯುವಂತಾಗಲಿ.

ನನ್ನ ಮೇಲೆ ವಿಶ್ವಾಸವಿಟ್ಟು ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಗೆ ಮೊದಲ ಮಾತುಗಳನ್ನು ನನ್ನಿಂದ ಬರೆಯಿಸಿದ ಕಾದಂಬಿನಿಗೆ ನಾನು ಕೃತಜ್ಞನಾಗಿದ್ದೇನೆ.

Share

Leave a comment

Your email address will not be published. Required fields are marked *

Recent Posts More

 • 2 weeks ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 2 weeks ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 2 weeks ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  2 weeks ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  4 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...