Share

ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ.

ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ಹುಡುಗರೆಲ್ಲ ಅಂಟಿಕೊಳ್ಳುವುದಕ್ಕೆ ಕಾರಣವಾಗುವ ಮೇಣದಂಥ ಸಂಗತಿಯ ಬಗ್ಗೆಯೂ ಒಂದು ಮಾತು ಹೇಳದಿದ್ದರೆ ಹೇಗೆ? ಕೇಳಿ ಮತ್ತೆ. ಈ ಹುಡುಗರಿಗೆಲ್ಲ ನಾಟಕದ ಖಯಾಲಿ. ಕೆಲವರಿಗಂತೂ ಮೊದಲ ನೋಟದ ಪ್ರೇಮಕ್ಕೂ ಲವ್ ಲೆಟರಿಗೆ ಬೇಕಾಗುವ ಮೊದಲ ಸಾಲುಗಳಿಗೂ ಯಾರದೋ ಮನೆಗೆಂದು ಬಂದ ಯಾವುದೋ ಊರಿನ ಯಾರದೋ ಹೆಂಡತಿಯರನ್ನು ಪಟಾಯಿಸುವುದಕ್ಕೂ ಈ ನಾಟಕವೇ ಮೂಲಾಧಾರವಾಗುತ್ತ ಬಂದಿರುವ ಒಂದು ಪರಂಪರೆಯೇ ಉಂಟು. ಹೀಗಿರುವಲ್ಲಿ ಈ ಹುಡುಗರ ಗ್ಯಾಂಗು ಹಳಬರು ಹೊಸಬರೆನ್ನದೆ, ದೊಡ್ಡವರು ಸಣ್ಣವರೆನ್ನದೆ, ಊರವರು ಊರಾಚೆಯವರೆನ್ನದೆ ನೆಲ್ಲಿಬೇಣದಷ್ಟೇ ನಿರ್ಲಿಪ್ತವೂ ನಿರುಮ್ಮಳವೂ ಆಗಿರುವುದು.

ಬೇಣದಲ್ಲಿ ಸೇರಿದ್ದ ಹುಡುಗರಲ್ಲಿ ಯಾರೋ ‘ಹೌ ಆರ್ ಯೂ ಬಂದ’ ಎಂದರು. ಗ್ಯಾಂಗಿಗೆ ಅವತ್ತು ಹೊಸದಾಗಿ ಜೊತೆಯಾಗಿದ್ದ ಪೇಟೆ ಕಡೆಯವರಿಬ್ಬರು ಹೌಹಾರಿದರು. ಅವನು ಜರ್ನಲಿಸ್ಟು. ಯೂ ಆರ್ ಹೆಂಗಯ್ಯ ಎಂಬುದು ಅವನ ಹೆಸರು. ಜೊತೆಯವರೆಲ್ಲ ಅವನನ್ನು ಹೌ ಆರ್ ಯೂ ಎಂದು ಅಣಕಿಸುತ್ತ ಕಡೆಗೆ ಅದೇ ಹೆಸರು ಕೂತುಬಿಟ್ಟಿತ್ತು. ಎಷ್ಟು ತಲೆಕೆರೆದುಕೊಂಡರೂ ಏನೂ ಆಗಲಾರದೆ ಕಡೆಗೆ ಜರ್ನಲಿಸ್ಟಾಗಿದ್ದವನು ಅದೆಂಥದೋ ಕಥೆಯನ್ನೂ ವ್ಯಥೆಯನ್ನೂ ಬರೆಯತೊಡಗಿದ ಮೇಲಂತೂ ಊರೊಳಗೆ ಅವನ ಕೀರ್ತಿ ಅಪಾರವಾಯಿತು. ಅವನ ಕನ್ನಡ ಗ್ರಾಮರಿನ ಗ್ಲಾಮರು ಕೇಶಿರಾಜನೇ ನಾಚುವಂತಿರುವುದು.

ಹೌ ಆರ್ ಯೂ ಬಂದವನೇ ಬಿಹಾರದ ಗಯಾ ಗಿಯಾ ಎಂದೆಲ್ಲ ಹೇಳುತ್ತ ಎಲ್ಲರನ್ನೂ ಭಯಬೀಳಿಸಿದ. ಗ್ಯಾಂಗಲ್ಲಿ ಶಾಲಿನಿಯೂ ಇರುವುದನ್ನು ನೋಡಿ, ನವನವೋನ್ಮೇಷಶಾಲಿನೀ ಎಂಬುದರಲ್ಲಿ ಶಾಲಿನೀ ಎಂಬುದೊಂದನ್ನು ಬಿಟ್ಟು ಉಳಿದದ್ದನ್ನೆಲ್ಲಾ ತಪ್ಪಾಗಿ ಒದರುತ್ತ ಇಷ್ಟಗಲ ಬಾಯ್ತೆರೆದ. ಆಗ ಹಿಂದೆ ಕೂತಿದ್ದ ಉಮೇಶ, ಹೀಗೆ ಇದ್ದಕ್ಕಿದ್ದಂತೆ ತನ್ನ ಹೆಸರು ಶಾಲಿನಿ ಜೊತೆ ಸೇರಿದ ಪವಾಡಕ್ಕೆ ಒಳಗೊಳಗೇ ನಾಚಿದ. ಇದೆಲ್ಲದರ ನಡುವೆಯೇ ಅಲ್ಲಿ ನಾಟಕಕ್ಕೆ ಬಯಲುರಂಗವು ಸಜ್ಜಾಯಿತು.

ವೀರಾವೇಶದಿಂದ ಸೂತ್ರಧಾರನ ಪ್ರವೇಶ. ಸೂತ್ರಧಾರನಾದರೂ ಯಾರೆಂದುಕೊಂಡಿರಿ. ಅದೇ ಹೌ ಆರ್ ಯೂ. ‘ಈ ದೇಶದಲ್ಲಿ ಇನ್ನುಮುಂದೆ ಯಾರೂ ಮಲವಿಸರ್ಜನೆ ಮಾಡಲು ಬಿಡುವುದಿಲ್ಲ ಎಂದು ಈ ಸರ್ಕಾರ ಅದೆಷ್ಟು ಕೊಚ್ಚಿಕೊಂಡಿತ್ತು ಗೊತ್ತಲ್ಲವೇ?’ ಎಂದು ಶುರುಹಚ್ಚಿದ. ‘ಬಯಲಲ್ಲಿ ಮಲವಿಸರ್ಜನೆ ಅಂತ ಹೇಳೊ ಮಾರಾಯ’ ಎಂದು ಪ್ರಾಮ್ಟ್ ಮಾಡಲಿಕ್ಕಿದ್ದ ಹುಡುಗರು ತಿದ್ದಲು ಪ್ರಯತ್ನ ಮಾಡಿದರಾದರೂ ಅದೆಲ್ಲವೂ ಹೊಳೆಯಲ್ಲಿ ಬರೀ ಹುಣಸೆಹಣ್ಣೇನು ದೊಡ್ಡ ದೊಡ್ಡ ವಿಶಾಡ ಮಾವಿನಹಣಗಣುಗಳನ್ನೇ ತೊಳೆದ ಹಾಗಾಯಿತು.

ಸೂತ್ರಧಾರ ಮುಂದುವರಿದಿದ್ದ: ‘ಏನು ಕ್ಲೀನು ಇಂಡಿಯಾವೊ ಏನೊ? ಬಾಯ್ತೆರೆದರೆ ಹಂದಿ ನಾಯಿಗಳೇ ಉದುರುತ್ತವೆ. ಇಂತಾ ದೇಶದಲ್ಲಿ ಅದೋ ಅಲ್ಲಿ ಹೊಳೆದಂಡೆ ಮೇಲಿನ ಪೊದೆಗಳ ಮರೆಯಲ್ಲಿ ನೀರಿಟ್ಟುಕೊಂಡು ನಾಲ್ಕಾರು ಜನ ಕೂತಿದ್ದಾರಲ್ಲ ಮಲವಿಸರ್ಜನೆಗೆ, ಅಲ್ಲಿರುವುದೇ ನಮ್ಮ ಇವತ್ತಿನ ನಾಟಕದೊಳಗೆ ಬರುವ ಊರು, ಬಿಹಾರದ ಗಯಾ.’ ಅವನು ಅಷ್ಟು ಹೇಳುತ್ತಿದ್ದಂತೆ ಶಾಲಿನಿಗೆ ನಗು ತಡೆಯಲಾಗದೆ ಹೋಯ್ತು. ಪ್ರಾಮ್ಟಿನ ಹುಡುಗರು ಅಷ್ಟೊಂದು ಬಡಕೊಂಡರೂ ಕೇಳಿಸದಂತಿದ್ದವ ಈಗ ಅವಳು ಕಿಸಕ್ ಎಂದದ್ದೇ ಅಲರ್ಟ್ ಆಗಿ, ‘ಇದು ನಗುವ ವಿಷಯವೇ ಅಲ್ಲ. ಹೆಣ್ಣುಮಕ್ಕಳಂತೂ ನಗಲೇ ಕೂಡದು. ಮಲವಿಸರ್ಜನೆ ಎಂದೊಡನೆ ನನಗಂತೂ ನೋವಿನಿಂದ ಕಣ್ಣೀರೇ ಬರುತ್ತದೆ’ ಎಂದು ಸಲೀಸಾಗಿ ಡೈಲಾಗು ಜೋಡಿಸಿದ. ಈಗಂತೂ ಶಾಲಿನಿಗೆ ನಗು ಒತ್ತರಿಸಿ ಬಂತು. ಹೌ ಆರ್ ಯೂ ಸಿಟ್ಟಿನಿಂದ ‘ಕಟ್’ ಎಂದ. (ಯಾವ ನನ್ಮಗ ಕ್ಯಾಮರಾ ಇಟ್ನಿದ್ನಪ್ಪ ಅಲ್ಲಿ?)

‘ಯಾಕೆ, ಏನಾಯ್ತು ಶಾಲೂ?’ ತೆಳುಬೆಲ್ಲದಲ್ಲಿ ಒಂದೈದು ನಿಮಿಷ ಅದ್ದಿಟ್ಟು ತೆಗೆದ ಉದ್ದಿನ ದೋಸೆಯಂಥ ಪ್ರೇಮರಾಗ (ಈ ಅಲಂಕಾರಕ್ಕೂ ಕೇಶಿರಾಜ ನಾಚಿಕೊಂಡು ಸಾಯ್ಲಿ ಅತ್ಲಾಗೆ)! ‘ಮತ್ತೆ ನೀನು ಮಲವಿಸರ್ಜನೆ ಅಂದ್ರೆ ಕಣ್ಣಲ್ಲಿ ನೀರು ಬರುತ್ತೆ ಅಂದ್ಯಲ್ಲೊ’ ಎಂದಳು. ‘ಹೌದು ಕಣೆ ನಿಜ ಅದು’ ಎಂದ. ‘ಹಾಗಾದ್ರೆ ನಿನಗೆ ಪೈಲ್ಸ್ ಆಗಿರ್ಬೇಕು ಕಣೊ. ಅದನ್ನು ನೆನೆಸಿಕೊಂಡೇ ನಗು ತಡೆಯೋಕ್ಕಾಗಲಿಲ್ಲ, ಸಾರಿ ಕಣೊ’ ಎನ್ನುತ್ತ ಮತ್ತೂ ಜೋರಾಗಿ ನಗತೊಡಗಿದಳು. ಹುಡುಗರೆಲ್ಲ ಬಿದ್ದೂ ಬಿದ್ದೂ ನಗುತ್ತ, ತುಸು ಹೊತ್ತು ಹೆಂಗಯ್ಯಾ ಎಂದು ಕೇಳುವವರೂ ಇಲ್ಲದೆ ಹೌ ಆರ್ ಯೂ ಅನಾಥನಾದ. ಇಡೀ ನೆಲ್ಲಿಬೇಣವೇ ನಕ್ಕೂ ನಕ್ಕೂ ಗದ್ಗದಿತವಾಯಿತು.

ಎಲ್ಲರೂ ಸುಮ್ಮನಾದ ಮೇಲೆ ಜೋರು ದನಿ ತೆಗೆದು ‘ಸಾಕು ಸುಮ್ನಿರಿ’ ಎಂದು ಅಬ್ಬರಿಸಿ, ಅಂತೂ ಟ್ರ್ಯಾಕಿಗೆ ಬಂದ ಸೂತ್ರಧಾರ. ‘ಬಿಹಾರದಲ್ಲಿ ಲಕ್ಷಾಂತರ ಮಂದಿ, ಅಲ್ಲಿ ಕೂತಿದ್ದಾರಲ್ಲ ಅವರ ಥರಾನೇ ಬಯಲಲ್ಲೇ ಶೌಚ ಮಾಡೋದು. ದೊಡ್ಡ ಮಟ್ಟದಲ್ಲಿ ಶೌಚಾಲಯ ಕಟ್ಟಿಸಿಕೊಡೋದಾಗಿ ಹೇಳಿದ್ದ ಸರ್ಕಾರಕ್ಕೆ ಅದು ನೆನಪೇ ಇಲ್ಲ. ಇಂಥ ಬಿಹಾರದ ಗಯಾದಲ್ಲಿ ಅವಳೊಬ್ಬ 60 ವರ್ಷದ ಬಡವಿಯ ಕಥೆ ಎಂಥದು ಕೇಳಿ.’

ದುಪ್ಪಟಾ ತಲೆಯ ಮೇಲೆ ಹೊದ್ದು ಮೆಲ್ಲನೆ ಮಧ್ಯಕ್ಕೆ ನಡೆದುಬಂದಳು ಶಾಲಿನಿ. ‘ನಾನು ತೇತ್ರಿದೇವಿ. ಹೌ ಆರ್ ಯೂ ಹೇಳಿರೋದು ಕರೆಕ್ಟು. ನಂಗೆ 60 ವರ್ಷ. ಜೀವನಕ್ಕೆ ನಾಲ್ಕು ಕಾಸು ಬರೋಹಾಗೆ ಆಸರೆಯಾಗಿದ್ದ ಒಂದೇ ಒಂದು ಹಸೂನ ಮಾರಿಬಿಟ್ಟೆ. ಯಾಕೆ ಗೊತ್ತಾ?’ ಎನ್ನುತ್ತ ಒಂದು ಬದಿಗೆ ಹೋಗಿ ಅಳುತ್ತ ನಿಲ್ಲುವಳು. (ಸೂತ್ರಧಾರನ ವಿಚಾರದಲ್ಲಿ ಎಲ್ಲ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದ್ದ ಪ್ರಾಮ್ಟ್ ಹುಡುಗರು ಎಲ್ಲಿ ಇದೇ ಟೈಮೆಂದು ನೆವಮಾಡಿಕೊಂಡು ಶಾಲಿನಿಯ ಕಣ್ಣೊರೆಸಲು ಹೋಗುತ್ತಾನೊ ಎಂದುಕೊಂಡು ಅವನನ್ನು ಹಿಡಿದುಕೊಂಡಿದ್ದು, ಆಗ ತಮ್ಮ ಮಾತು ಕಿವಿಗೆ ಹಾಕಿಕೊಂಡಿರದ ಅವನ ಮೇಲೆ ಒಂದು ಹಂತಕ್ಕೆ ರಿವೇಂಜು ತೀರಿಸಿಕೊಂಡರು).

ಅವಳು ಮತ್ತೆ ಮಧ್ಯಕ್ಕೆ ಬಂದು ಕಥೆ ಹೇಳತೊಡಗಿದಳು: ‘ನಮ್ಮದು ಸಣ್ಣ ಕುಟುಂಬ. ಸಣ್ಣದೊಂದು ಮನೆ. ಕಾಯಿಲೆಬಿದ್ದಿರೋ ಗಂಡ, ನಾನು ಮತ್ತು ಮಗ-ಸೊಸೆ ಎಷ್ಟೋ ವರ್ಷಗಳಿಂದ ಒಂದು ಟಾಯ್ಲೆಟ್ಟೂ ಇಲ್ಲದೆ ಬದುಕಿದ್ದೀವಿ. ಟಾಯ್ಲೆಟ್ ಕಟ್ಟಿಸಿಕೊಡಿ ಅಂತ ಕೇಳಿದ್ರೆ ತಾಲೂಕಾಫೀಸ್ನೋರು ಆಗಲ್ಲ ಅಂದ್ರು. ನನ್ನ ಸೊಸೆ ಎಸೆಸೆಲ್ಸಿ ಓದಿದೋಳು. ಟಾಯ್ಲೆಟ್ ಕಟ್ಸು ಅಂತ ಹಠ ಮಾಡ್ತಾನೇ ಇದ್ಲು. ದುಡ್ಡಿಲ್ಲ ಅಂತ ನಾನು ತಳ್ತಾನೇ ಬಂದೆ. ಕಡೆಗೆ ಆಕೆ ತನ್ನ ಹತ್ರ ಇರೋ ಸ್ವಲ್ಪ ಬಂಗಾರ ಮಾರಿ ಕಟ್ಸು ಅಂದಾಗ, ಅದಕ್ಕಿಂತ ಹಸೂ ಮಾರೋದೇ ವಾಸಿ ಅನ್ನಿಸ್ತು.’

ಆಕೆ ಹೇಳಿದ ಕಥೆಗೆ ಮೆತ್ತಿಕೊಂಡಿದ್ದ ನೋವಿನ ಅಲೆ ಹಾಗೇ ಇದ್ದ ಹೊತ್ತಲ್ಲೇ ಇದ್ದಕ್ಕಿದ್ದಂತೆ ಗದ್ದಲ, ಜೈಕಾರ ಕೇಳಿಸುತ್ತದೆ ಮತ್ತೊಂದು ಕಡೆಯಿಂದ. ನೋಡಿದರೆ ಸಣ್ಣ ಸೈಜಿನ ಮೆರವಣಿಗೆಯೊಂದಿಗೆ ಒಬ್ಬಾತ ನಡುವೆ ಬಂದು ನಿಲ್ಲುತ್ತಾನೆ. ಅವನು ತಾಲೂಕಾಫೀಸರು. ‘ಈ ಮುದ್ಕಿ, ಅಲ್ಲಲ್ಲ, ಅಜ್ಜಿ ಎಲ್ರಿಗೂ ಅದೆಷ್ಟು ದೊಡ್ಡ ಸ್ಫೂರ್ತಿಯಾಗಿದ್ದಾಳೆ ಗೊತ್ತಾ? ಅವಳಿಗೆ ನಾವು ಸನ್ಮಾನ ಮಾಡ್ತೇವೆ, ಜೈ ಹೇಳ್ರೊ’ ಎನ್ನುತ್ತಾನೆ. ಮತ್ತೆ ಗುಂಪು ಅವನಿಗೆ ಜೈಕಾರ ಹೇಳುತ್ತದೆ. ಶಾಲಿನಿಯ ಪಕ್ಕ ನಿಂತು ಆ ತಾಲೂಕಾಫೀಸರು ಸೆಲ್ಫೀ ತಗೊಳ್ತಾನೆ. ಅವನು ಒಂದೇ ಸಮನೆ ಸೆಲ್ಫೀ ಕ್ಲಿಕ್ ಮಾಡ್ತಿರೋದು ನೋಡಿ ಸೂತ್ರಧಾರನಿಗೆ ಮಾತ್ರವಲ್ಲ, ಹುಡುಗರ ಗ್ಯಾಂಗಿನ ಎಲ್ರಿಗೂ ಮೈ ಉರಿಯುತ್ತೆ. ‘ಆಕೆ ಟಾಯ್ಲೆಟ್ ಕಟ್ಸೋಕೆ ದುಡ್ಡು ಕೇಳಿದಾಗ ದುಡ್ಡಿಲ್ಲ ಅಂದೋರು ಈಗ ಬಂದು ಏನೋ ಘನಂದಾರಿ ಕೆಲ್ಸ ಮಾಡ್ದೋರ ಥರ ಪೋಸು ಕೊಡ್ತಿದ್ದೀರಾ?’ ಎಂದು ಅಬ್ಬರಿಸುತ್ತ ಬಂದವರೇ ತಾಲೂಕಾಫೀಸರನ ಕೊರಳುಪಟ್ಟಿ ಹಿಡಿಯುತ್ತಾರೆ. ಅಷ್ಟರಲ್ಲಿ, ಪ್ರಾಮ್ಟಿನ ಹುಡುಗರು ‘ರಂಗದ ಮೇಲೆ ನಿಧಾನವಾಗಿ ಕತ್ತಲೆ ಆವರಿಸುವುದು’ ಎಂದು ಕತ್ತಲೆಯೂ ಓಡಿಹೋಗುವಷ್ಟು ಜೋರಾಗಿ ಕಿರುಚಿದರು.

*

ಓ ಮೈ ಗಾಡ್!

ದೇವಲೋಕದಲ್ಲಿ ತುಸು ಉದ್ವಿಗ್ನ ಎಂಬಂಥ ಪರಿಸ್ಥಿತಿ ಉಂಟಾಗಿತ್ತು. ಸುಮಾರು ಮಂದಿ ಪತ್ರಕರ್ತರು ದೇವಲೋಕದಲ್ಲಿ ತುಂಬಿಹೋಗಿ, ಮೂಲ ನಿವಾಸಿಗಳು ವಲಸಿಗರನ್ನು ಬೈದುಕೊಳ್ಳುತ್ತಾರಲ್ಲ ಹಾಗೆ ದೇವತೆಗಳು ಇವರನ್ನು ಬೈದುಕೊಳ್ಳುವುದು ಶುರುವಾಗಿತ್ತು. ಇನ್ನೊಂದೆಡೆ ಪತ್ರಕರ್ತರು ತಮ್ಮನ್ನೆಲ್ಲ ಇಲ್ಲಿಗೆ ಕರೆಸಿ ನಿರುದ್ಯೋಗಿಗಳನ್ನಾಗಿ ಮಾಡಿ ಕೂರಿಸಿದ್ದೀರಿ; ಅಲ್ಲಾದರೆ ಎಷ್ಟೊಂದು ಚಾನೆಲ್ಲುಗಳಿದ್ದವು ಎಂದು ಪ್ರತಿಭಟನೆ ಶುರುಮಾಡಿದ್ದರು. ಇವರೆಲ್ಲ ಯಾವಾಗ ಇಲ್ಲಿಗೆ ಬಂದವರು ಎಂದು ದೇವರು ಅಸಿಸ್ಟಂಟನನ್ನು ಕೇಳಿದ್ದಕ್ಕೆ, ನಾವು ಸ್ಥಳ, ಡೇಟು ಎಲ್ಲ ಬರೆದುಕೊಳ್ಳೋಕ್ಕೆ ಶುರುಮಾಡಿದ್ದು ಇವರು ಇಲ್ಲಿಗೆ ಬಂದು ಹೀಗೆ ಮಾಡಲು ಸಲಹೆ ಕೊಟ್ಟಮೇಲೇ ಅಲ್ಲವೆ ಬಾಸ್ ಎಂದ, ಸ್ವಲ್ಪ ಅಳುಕುತ್ತಲೇ. ಸರಿ ಸರಿ ಎನ್ನುತ್ತ ದೇವರು ಇವರ ಮುಂದೆ ತೀರಾ ಮರ್ಯಾದೆ ಹೋಗುವ ಲೆವಲ್ಲಿಗೆ ಈ ವಿಚಾರಣೆ ಹೋಗುವುದು ಬೇಡ ಎಂದು ಅಲರ್ಟ್ ಆದವನೇ, ಈಗ ನಿಮಗೇನು ಕೆಲಸ ಕೊಡೋಣ ಹೇಳಿ ಎಂದು ಇವರನ್ನೇ ಕೇಳಿದ. ಇವರು ಇನ್ನೇನು ಉತ್ತರ ಕೊಡಬೇಕು, ಅಷ್ಟರಲ್ಲಿ ದೇವರಿಗೆ ಎಚ್ಚರವಾಗಿ, ಓಹ್ ಕನಸಾ ಎಂದುಕೊಂಡು ನಿಟ್ಟುಸಿರು ಬಿಟ್ಟ.

*

ಒಂಚೂರು ಬೇತಾಳ

ಬೇತಾಳ ಬಂದು ಹೆಗಲ ಮೇಲೆ ವಕ್ಕರಿಸುತ್ತಿದ್ದಂತೆ ರಾಜ ವಿಕ್ರಮಾದಿತ್ಯ ತೀರಾ ತಗ್ಗಿದ ದನಿಯಲ್ಲಿ ರಿಕ್ವೆಸ್ಟು ಮಾಡಿಕೊಂಡ: ‘ಇವತ್ತು ರಾಣಿಗೆ ಹುಷಾರಿಲ್ಲ. ತನಗೆ ಹುಷಾರಿಲ್ಲದ ದಿನ ಆಕೆ ಕೆಲಸವಳಿಗೂ ಬರಬೇಡ ಅಂತ ಸುದ್ದಿ ಮುಟ್ಟಿಸ್ತಾಳೆ. ನನಗೂ ಕೆಲಸದವಳಿಗೂ ಸಂಬಂಧ ಶುರುವಾದ್ರೆ ನಾಳೆ ತನ್ನ ಪಟ್ಟ ದಾಸಿಗೆ ಹೋಗ್ಬಹುದು ಅನ್ನೋ ದೂರಾಲೋಚನೆ ಅವಳದು. ಹಾಗಾಗಿ ಇವತ್ತು ಅಡುಗೆ, ಪಾತ್ರೆ ತೊಳೆಯೋದು ಎಲ್ಲ ನಾನೇ ಮಾಡ್ಬೇಕು, ಇವತ್ತೊಂದಿನ ಬಿಟ್ಬಿಡು.’ ಅವನ ದೈನೇಸಿ ಸ್ಥಿತಿ ನೋಡಿ, ಹಾಳಾಗಿ ಹೋಗು ಎನ್ನುತ್ತ ಅಲ್ಲಿಂದ ಜಾರಿಕೊಂಡು ಹೋದ ಬೇತಾಳಕ್ಕೆ ಎಂಥ ಸೊಕ್ಕು ನೋಡಿ, ಎದುರಲ್ಲೇ ಹುಣಸೆಮರ ಇದ್ದರೂ ಅದನ್ನು ಬಿಟ್ಟು ನುಗ್ಗೆಮರಕ್ಕೆ ಜೋತುಬೀಳಲು ಹೋಯ್ತು. ಅದು ಜೋತುಬಿತ್ತೊ ಇಲ್ಲವೊ ಎಂಬಷ್ಟರಲ್ಲಿ ನುಗ್ಗೆಕೊಂಬೆ ಹಿಸಿದು ಕೆಳಕ್ಕೊರಗಿ, ಬೇತಾಳ ಡುಬುಕ್ಕನೆ ಮುಸುಡಿ ಕೆಳಗಾಗಿ ಬಿತ್ತು. ಇನ್ನು ಇದರ ಕೈಗೇನಾದರೂ ತಾನು ಸಿಕ್ಕಿಬಿಟ್ಟರೆ ಇದೆಲ್ಲ ಯಡವಟ್ಟಿಗೆ ನಾನೇ ಕಾರಣ ಎಂದು ತಲೆತೆಗೆಯದೇ ಬಿಡದು ಎಂದುಕೊಂಡವನೇ ವಿಕ್ರಮಾದಿತ್ಯ ಸೀದಾ ಓಡಿ ಅದೇ ನುಗ್ಗೆಮರವನ್ನೇರಿ ಧಾವಂತದಲ್ಲಿ ಕೊಂಬೆಯ ಮೇಲೆ ಕಾಲಿಟ್ಟದ್ದೇ ಅದು ಮುರಿದುಕೊಂಡು, ಕೆಳಗಿನ್ನೂ ಏಳಲಾರದೆ ಒದ್ದಾಡುತಿದ್ದ ಬೇತಾಳನ ಮೇಲೆಯೇ ಬಿದ್ದ. ಈಗ ಬೇತಾಳನ ಹೆಗಲ ಮೇಲೆ ರಾಜ ವಿಕ್ರಮಾದಿತ್ಯ. Exclusive.

Share

Leave a comment

Your email address will not be published. Required fields are marked *

Recent Posts More

 • 6 days ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 7 days ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 7 days ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 1 week ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  6 days ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  3 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  3 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...