Share

ಸಾಹಸದ ಆ ನಿಮಿಷಗಳು
ಡಾ. ಪ್ರೇಮಲತ ಬಿ

 

 

 

 

ಮೊದಲ ಬಾರಿಯಾದ್ದರಿಂದ ಕೆಲವೇ ನಿಮಿಷಗಳ ಈ ಜಿಗಿತದ ರೋಚಕತೆ ಒಂದು ತಿಂಗಳ ಕಾಲ ನನ್ನನ್ನು ಆವರಿಸಿದ್ದು ಸುಳ್ಳಲ್ಲ.

 

 

 

 

ಬ್ಯಾಂಕರುಗಳು, ಅಕೌಂಟೆಂಟುಗಳು ವರ್ಷದ ಮೊದಲಿಂದ ಹಿಡಿದು ಮಾರ್ಚಿ ತಿಂಗಳವರೆಗೆ ಭಾರೀ ಬ್ಯುಸಿಯಾಗುವಂತೆ ಇಂಗ್ಲೆಂಡಿನ ಸರ್ಕಾರೀ ದಂತ ವೈದ್ಯಕೀಯ ರಂಗದಲ್ಲೂ ಧಾವಂತ ಕಾಣಿಸಿಕೊಳ್ಳುತ್ತದೆ. ಸರ್ಕಾರದಿಂದ ಗುತ್ತಿಗೆ ಪಡೆದ ಕೆಲಸವನ್ನು ಮಾರ್ಚಿಯ ಕೊನೆಗೆ ಪೂರ್ತಿಗೊಳಿಸದಿದ್ದರೆ ಮುಂದಿನ ವರ್ಷದ ಕಾಂಟ್ರಾಕ್ಟ್ ನ್ನು ಕಳೆದುಕೊಳ್ಳುವ ಭಯದಿಂದ ಭಾರೀ ಬಿರುಸಿನ ಕೆಲಸ ನಡೆಯುತ್ತದೆ. ಏಪ್ರಿಲ್ ವರೆಗಿನ ನನ್ನ ಬಹುತೇಕ ಗಮನ ಅತ್ತ ಹರಿದರೂ ಮರು ತಿಂಗಳು ರಜಾದಂತೆ ಭಾಸವಾಗಿ ಬೇಸರವಾಗಬಲ್ಲದು. ಈ ವರ್ಷವೂ ಹಾಗೆಯೇ ಆಯಿತು. ಇನ್ನೇನು ಮಾಡಲಿ ಎಂದು ಮಿಡುಕುತ್ತಿದ್ದ ನನ್ನ ಪ್ರಕೃತಿಯ ಅರಿವಿರುವ ನನ್ನ ನರ್ಸೊಬ್ಬಳು ನಾನಿರುವ ಗ್ರಾಂಥಮ್ ಎನ್ನುವ ನಗರದ ಸಮೀಪವೇ ಸ್ಕೈ ಡೈವಿಂಗ ಇದೆ, ಯಾಕೆ ಮಾಡಬಾರದು ಎಂದಿದ್ದೇ ತಡ ನನ್ನ ಉತ್ಸಾಹದ ಗರಿಗೆದರಿತು.

ಬದುಕು ಮತ್ತು ಕಾಲ ಎರಡೂ ಕಳೆಯುತ್ತಲೇ ಸಾಗುತ್ತವೆ. ನಡುವೆ ನಾವು ಗಳಿಸುವುದು ಅನುಭವ, ಸಾಧನೆ, ತೃಪ್ತಿ, ಹರ್ಷ, ನೆನಪುಗಳು ಯಾವುದೇ ಇರಬಹುದು. ಅಥವಾ ಎಲ್ಲವೂ ಆಗಿರಬಹುದು, ಒಟ್ಟಿನಲ್ಲಿ ಬದುಕು ನಿಂತ ನೀರಾದರೆ ನನ್ನ ಅಸ್ತಿತ್ವವೂ ಅಳಿಯುತ್ತದೇನೋ ಎಂದು ಮಿಡಿಯುವ ಜೀವ ನನ್ನದು. ವಾರದಲ್ಲಿ ಐದು –ಆರು ದಿನಗಳ ಕೆಲಸ, ಇಬ್ಬರು ಮಕ್ಕಳು, ಮನೆ ಕೆಲಸ, ಓದು –ಬರಹ ಇಷ್ಟು ಮಾತ್ರವಾದರೆ ನನ್ನ ಉತ್ಸಾಹದ ಒರತೆಗೆ ಸಾಕಾಗುವುದಿಲ್ಲ, ಅದರಿಂದ ಆಚೆಗೆ ಇನ್ನೇನಾದರೂ ಇದೆಯೇ ಎನ್ನುವುದೇ ನನ್ನ ಧ್ಯಾನವಾಗುತ್ತದೆ.

ಒಳ್ಳೆಯ ಹವಾಮಾನವಿರುವ ದಿನವೊಂದರಲ್ಲಿ ವಿಮಾನದಲ್ಲಿ 13,500 ಅಡಿಗಳ ಎತ್ತರಕ್ಕೇರಿ ನುರಿತ ಪರಿಣಿತ ಜಿಗಿತಗಾರರೊಡನೆ ಕೂಡಿ ಆಕಾಶದಿಂದ ಜಿಗಿವ ಹುಮ್ಮಸ್ಸಿನಲ್ಲಿ ಒಂದೆರಡು ವಾರಗಳ ಕಾಲ ಖುಷಿಯಾಗಿರುವ ಯೋಚನೆಯೊಡನೆ ಮನಸ್ಸು ಚೇತರಿಸಿಕೊಂಡಿತು. ಆ ಬಗ್ಗೆ ವಿಚಾರವನ್ನು ಕಲೆಹಾಕಹತ್ತಿದೆ. ಜೂನ್ ತಿಂಗಳಲ್ಲಿ ಒಳ್ಳೆಯ ಹವಾಮಾನಕ್ಕಾಗಿ ಕಾಯತೊಡಗಿದೆ. ದಿನ ಬೆಳಗಾದರೆ ನನ್ನ ಮಾತೆಲ್ಲ ಈ ಬಗ್ಗೆಯೇ ಆಗತೊಡಗಿತು. ನನ್ನ ಈ ಉತ್ಸಾಹದ ಸೋಂಕು ನನ್ನ ಸುತ್ತಮುತ್ತಲಿನವರಿಗೂ ಹರಡತೊಡಗಿತು. ಸಾದತ್ ಎನ್ನುವ ನನ್ನ ಸಹೋದ್ಯೋಗಿ ನಾನೂ ಬರುತ್ತೇನೆಂದ. ಆದರೆ ಅದು ಆತ ರಂಜಾನ್ ಹಬ್ಬಕ್ಕಾಗಿ ಉಪವಾಸ ಮಾಡುತ್ತಿದ್ದ ಕಾಲ. ಆತನ ಉಪವಾಸ ಕಳೆಯುವವರೆಗೂ ನಾನೂ ಕಾದದ್ದಾಯ್ತು.

ಜೂನ್ 24 ಭಾನುವಾರದಂದು 12 ಗಂಟೆಗೆ ಲಭ್ಯವಿದ್ದ ಸರತಿಯಲ್ಲಿ ಜಿಗಿಯಲು ನೂರಾರು ಪೌಂಡುಗಳ ಶುಲ್ಕ ತೆತ್ತು (£350) ಸ್ಥಳ ಕಾದಿರಿಸಿ ಈ ಸಾಹಸ ಕ್ರೀಡೆಗಾಗಿ ದೇಹವನ್ನು ಒಂದಷ್ಟು ಅಣಿಗೊಳಿಸತೊಡಗಿದೆ. ಈ ಮಧ್ಯೆ ನಾವು ಕೆಲಸ ಮಾಡುತ್ತಿದ್ದ ಜಾಗದವರು “ಅಯ್ಯೋ, ಒಟ್ಟಿಗೇ ಇಬ್ಬರು ದಂತ ವೈದ್ಯರನ್ನು ಕಳೆದುಕೊಳ್ಳಲು ನಾವು ತಯಾರಿಲ್ಲ” ಎಂದು ಹಲುಬಲು ಶುರುಮಾಡಿದರು. ಅವರಿವರು ಹೀಗೆಯೇ ಜಿಗಿದು ಪ್ರಾಣ ಕಳೆದುಕೊಂಡದ್ದನ್ನು, ಇನ್ಯಾರೋ ಇಳಿಯುವ ಜಾಗದಲ್ಲಿ ಇಳಿಯದೇ ಕಾರು ಪಾರ್ಕೊಂದರಲ್ಲಿ ಬಿದ್ದು ಎರಡೂ ಮಂಡಿಗಳನ್ನು ಮುರಿದುಕೊಂಡ ಕತೆಗಳನ್ನು ಹೇಳತೊಡಗಿದರು. ಅವಿರತ ಕೆಲಸ ಮಾಡುವ ನನ್ನ ಮೈಯಲ್ಲಿ ‘ಏನೋ ಹೊಕ್ಕಿದೆ’ಯೆಂದು ಕೂಡ ಹೇಳಿ ನಕ್ಕರು. ಇವ್ಯಾವುದರಿಂದಲೂ ಬದಲಾಗದ ನಿರ್ಧಾರ ತಿಳಿದ ನಂತರ ನೀನು ಜಿಗಿಯುವುದೇ ಆದರೆ ‘ಬ್ರಿಡ್ಜ್ 2 ಏಡ್’ ಎನ್ನುವ ಸಂಸ್ಥೆಗೆ ಹಣವನ್ನು ದೇಣಿಗೆ ಕೊಡುಬಹುದು ಎಂದು ಫೇಸ್ಬುಕ್ಕಿನ ಹಾಳೆಯೊಂದನ್ನು ತಯಾರು ಮಾಡಿ ಹಣ ಸಂಗ್ರಹಣೆ ಮಾಡತೊಡಗಿದರು.

ಬದುಕಿನ ಒಂದು ಅನುಭಕ್ಕಾಗಿ ಮಾಡುವ ಈ ಸಾಹಸದಲ್ಲಿ ಒಂದು ಒಳ್ಳೆಯ ಉದ್ದೇಶವೂ ಜೊತೆಗೂಡಿತು. ‘ಬ್ರಿಡ್ಜ್ 2 ಏಡ್’ ಎನ್ನುವ ಈ ದಾನ ಸಂಸ್ಥೆ ಅತ್ಯಂತ ಬಡ ಆಫ್ರಿಕಾ ದೇಶಗಳ ಜನರ ಹಲ್ಲುನೋವಿನ ಸಮಸ್ಯೆಗಳಿಗೆ ಉಚಿತ ಚಿಕಿತ್ಸೆ, ಸ್ಥಳೀಯ ಸ್ವಯಂಸೇವಕರಿಗೆ ಈ ನಿಟ್ಟಿನಲ್ಲಿ ತರಬೇತಿ, ಉಪಕರಣಗಳ ಪೂರೈಕೆಯನ್ನು ನಡೆಸುವ ದಾನ ಸಂಸ್ಥೆ. ಇದಕ್ಕಾಗಿ ದಂತವೈದ್ಯರು, ದಾದಿಯರು ಆ ದೇಶಗಳಿಗೆ, ಇಂಗ್ಲೆಡ್ ಮುಂತಾದ ದೇಶಗಳಿಂದ ಪ್ರಯಾಣ ಮಾಡಿ ಸೇವೆ ಮಾಡಿಬರುತ್ತಾರೆ. ವಿದ್ಯುಚ್ಛಕ್ತಿ, ಕುಡಿಯುವ ನೀರು, ರೋಗಿಗಳು ಕೂಡಲು ಒಂದು ದಂತ ಚಿಕಿತ್ಸಾ ಕುರ್ಚಿಯೂ ಇಲ್ಲದಂಥ ಕಡೆ, ಅನ್ನ ಬೇಯಿಸುವ ಪ್ರೆಷರ್ ಕುಕರ್ ಗಳನ್ನೇ ಬಳಸಿ ಉಪಕರಣಗಳನ್ನು ಸ್ವಚ್ಛಗೊಳಿಸಿಕೊಂಡು ವೈದ್ಯಕೀಯ ಕೆಲಸಮಾಡುತ್ತಾರೆ. ಇಂಥವರು ಬಂದರೆ ಸಾಕೆಂದು ಹಳ್ಳಿ ಹಳ್ಳಿಗಳಿಂದ ಬಂದು ಯಮಯಾತನೆಯಲ್ಲಿ ನರಳುತ್ತಿರುವ ಬಡ ಜನರು ಸಾಲುಗಟ್ಟಿ ಸಹಾಯ ಕೋರಿ ನಿಲ್ಲುತ್ತಾರೆ. ಒಮ್ಮೆ ಇವರನ್ನೇ ನಂಬಿ ಬಂದ ತುಂಬು ಗರ್ಭಿಣಿಯ ಪ್ರಸೂತಿ ಕಾರ್ಯವನ್ನು, ಯಾವ ತರಬೇತಿಯೂ ಇಲ್ಲದೆ ಅನಿವಾರ್ಯವಾಗಿ ನಡೆಸಬೇಕಾದ ಪ್ರಸಂಗವನ್ನೂ ಈ ಸಂಸ್ಥೆಯ ಕಾರ್ಯಕರ್ತರು ನೆನೆಯುತ್ತಾರೆ. ಇಂತಹ ಸೇವೆಯ ಉತ್ತಮ ಕಾರ್ಯಕ್ಕಾದರೆ ಹತ್ತು ಬಾರಿ ಬೇಕಾದರೂ ಜಿಗಿಯಬಲ್ಲೆನೆಂದ ನನ್ನ ಡೈವನ್ನು ನೋಡಲು, ಸ್ವತಃ ಜಿಗಿಯಲಾಗದ, ಅಳ್ಳಕ ಎದೆಯ 5 ಜನ ಸಹೋದ್ಯೋಗಿಗಳು ಕೂಡ ಬಂದದ್ದು ವಿಶೇಷ.

ಈ ಜಿಗಿತವನ್ನು ಮಾಡುವ ಮುನ್ನ ಯಾವುದೇ ರೀತಿಯ ಹಾನಿಗೆ, ಪ್ರಾಣ ಹೋಗುವುದಕ್ಕೆ ನಾವೇ ಜವಾಬುದಾರರು ಎಂದು ಬರೆದ ಪತ್ರಕ್ಕೆ ಸಹಿ ಮಾಡಿಕೊಡಬೇಕು. ಕಾಲು ಮುರಿದರೆ, ಕಣ್ಣಿನ ರೆಟಿನಾಗಳು ಕಳಚಿ ಬಿದ್ದರೆ, ಸೊಂಟ ಮುರಿದರೆ, ರಕ್ತ ಸ್ರಾವವಾಗಿ ಮಧ್ಯೆ ಮೂರ್ಛೆ ಹೋಗಿ ನೆಲ ಕಚ್ಚಿದರೆ ಎಲ್ಲದ್ದಕ್ಕೂ ನಮ್ಮದೇ ಜವಾಬುದಾರಿ. ನಮ್ಮ ಇಳಿಕೆಯನ್ನು ನಿಯಂತ್ರಿಸಲು ನಮ್ಮ ಜೊತೆಗೇ ನಮ್ಮ ಬೆನ್ನಿಗಂಟಿಕೊಂಡೇ ಜಿಗಿವ ಮಾರ್ಗದರ್ಶಕ ಇಳಿಯುವಾಗ ನಮ್ಮ ಮೇಲೇಯೇ ಬಿದ್ದು ತಮ್ಮ ಎಲ್ಲ ಭಾರವನ್ನೂ ಹೇರಿ ನಮ್ಮನ್ನೂ ನೆಲ ಕಚ್ಚಿಸಿದರೆ ಅದಕ್ಕೂ ನಮ್ಮ ಸಮ್ಮತಿ ಸೂಚಿಸಬೇಕು ಅದನ್ನೆಲ್ಲ ಕಣ್ಣು ಮುಚ್ಚಿ ಮಾಡಿದ್ದಾಯ್ತು!

ವಾರದ ಹಿಂದೆಯಷ್ಟೇ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದೆ. ಈಗ ನನ್ನ ಜೀವವನ್ನು ಬರೆದುಕೊಟ್ಟು ಸ್ಕೈ ಡೈವಿಂಗ್ ಸೆಂಟರಿನಲ್ಲಿ ಹಾಜರಾಗಿದ್ದೆ. ಕಿವಿಯಿಂದ ಕಿವಿಯವರೆಗೆ ಅರಿವಿಲ್ಲದಂತೆಯೇ ನಗು ತುಂಬಿ ತುಳುಕುತಿತ್ತು. ಗೊತ್ತಿಲ್ಲದ್ದರ ಬಗ್ಗೆ ಭಯವಾಗುವುದು ಸಾಮಾನ್ಯ. ಆದರೆ ಗೊತ್ತಿಲ್ಲದ ಸಾಹಸವನ್ನು ಮಾಡುವಾಗ ಆಗುವ ಅಡ್ರಿನಲಿನ್ ನ ಕಿಕ್ ಈಗ ನನ್ನಲ್ಲಿ ತುಂಬಿಕೊಂಡಿತ್ತು.

ಇದನ್ನೇ ವೃತ್ತಿಯನ್ನಾಗಿಯೋ, ಪ್ರವೃತ್ತಿಯನ್ನಾಗಿಯೋ ಮಾಡಿಕೊಳ್ಳಬೇಕೆಂದರೆ ಇಂತಹ ಸಾಹಸಕ್ಕೆ ತರಬೇತಿಯ ಅಗತ್ಯವಿರುತ್ತದೆ. ಆದರೆ ಒಬ್ಬ ತರಬೇತಿಯುಳ್ಳ ನಿಪುಣ ಆಕಾಶ ಜಿಗಿತಗಾರನ ಜೊತೆಗೆ ಜಿಗಿದಲ್ಲಿ ಇದೇ ಥ್ರಿಲ್ಲನ್ನು ಅನುಭವಿಸಲೂ ಬಹುದು; ಜೊತೆಗೆ ಜೋಪಾನವಾಗಿಯೂ ನೆಲಮುಟ್ಟಬಹುದು. ಇಂತಹ ಆಕಾಶ ಜಿಗಿತವನ್ನು ಟ್ಯಾಂಡಮ್ ಸ್ಕೈ ಡೈವಿಂಗ್ ಅನ್ನುತ್ತಾರೆ. ಯಾವುದೇ ತರಬೇತಿಯಿಲ್ಲದೆ ಈ ಕ್ರಿಡೆಯಲ್ಲಿ ತೊಡಗುವುದು ಮೃತ್ಯುವಿಗೆ ಆಹ್ವಾನವಿತ್ತಂತೆ. ಆದರೆ ಇದನ್ನೂ ಮಾಡಿದ ಇಬ್ಬರು ಸಾಹಸಿಗಳು ಈ ಜಗತ್ತಿನಲ್ಲಿದ್ದಾರೆ.

ಈ ಸಾಹಸ ಮಾಡಲು ಹೋಗಿ ಸತ್ತವರ, ಕಾಲು ಮುರಿದುಕೊಂಡವರ ಬಗ್ಗೆ, ಹಲವು ರೀತಿಯ ಮೂಳೆ ಮುರಿದುಕೊಂಡವರ ಬಗ್ಗೆ ಬೇಕಾದಷ್ಟು ಮಾಹಿತಿಯಿದೆ. ಅಂತೆಯೇ ಪ್ಯಾರಾಶ್ಯೂಟ್ ಗಳು ತೆರೆದುಕೊಳ್ಳದೆ ರಿಸರ್ವ್ ಪ್ಯಾರಾಶ್ಯೂಟ್ ನ್ನು ಉಪಯೋಗಿಸಬೇಕಾದ ತುರ್ತುಗಳು ಕೂಡ ಉಂಟಾಗಬಹುದು. ಅಪಾಯವಿಲ್ಲದ ಸಾಹಸ ಕ್ರೀಡೆಗಳು ಸಾಹಸ ಕ್ರೀಡೆಗಳಾಗಲು ಸಾಧ್ಯವೇ?

ನಾವು ಪ್ರತಿದಿನದ ಅಗತ್ಯ ಎಂದು ಬೈಕನ್ನು ಚಲಾಯಿಸುವುದೋ ಅಥವಾ ಕಾರನ್ನು ನಡೆಸುವುದೋ ಮಾಡುತ್ತೇವೆ. ಇಂತಹ ಪ್ರತಿದಿನ ಕೆಲಸದಲ್ಲಿ ಅಪಘಾತಗಳಾಗುತ್ತವೆ, ಅಂಗಗಳು ಊನವಾಗುತ್ತವೆ. ಪ್ರಾಣಗಳು ಹೋಗುತ್ತವೆ. ಅಮೆರಿಕಾದ 2010ರ ಸರ್ವೆಯ ಪ್ರಕಾರ 3.1 ಮಿಲಿಯನ್ನು ಸ್ಕೈ ಡೈವಿಂಗ್ ನಲ್ಲಿ ಸತ್ತವರ ಸಂಖ್ಯೆ ಕೇವಲ 21 ಜನ. ಅಂದರೆ ಸಾಧ್ಯತೆ 0.0007% ನಷ್ಟು ಕಡಿಮೆ. ಅದೇ ಪ್ರತಿ ಹತ್ತು ಸಾವಿರ ಮೈಲು ಕಾರು ಚಲಾಯಿಸುವಾಗ ನಡೆದ ಅಪಘಾತದಲ್ಲಿ ಮಡಿದವರ ಸಂಖ್ಯೆ 0.0167%. ಇನ್ನೊಂದು ಅರ್ಥದಲ್ಲಿ ಕಾರು ನಡೆಸುವಾಗ ಮಡಿವ ಸಾಧ್ಯತೆ ಸ್ಕೈ ಡೈವಿಂಗ್ ಗೆ ಹೋಲಿಸಿದರೆ 24 ಪಟ್ಟು ಹೆಚ್ಚಿನದು.

ಆಕಾಶ ಜಿಗಿತದ ಅವಘಡಗಳು ಪ್ರತಿ ದಶಕದಲ್ಲೂ ಕಡಿಮೆಯಾಗುತ್ತ ಹೋಗುತ್ತಿವೆ. ಹಾಗಾಗಿ ಪ್ರತಿ ದೇಶದಲ್ಲಿ, ಪ್ರತಿ ಪ್ರವಾಸೀ ತಾಣದಲ್ಲಿ ಹೆಲಿಕಾಪ್ಟರಿನಲ್ಲಿ ಅಥವಾ ಸಣ್ಣ ವಿಮಾನಗಳಲ್ಲಿ ಮೇಲೆ ಹೋಗಿ ಜಿಗಿದು ಬರುವ ಅವಕಾಶಗಳಿವೆ. ಗರಿಷ್ಟ ಮಟ್ಟದ ಭದ್ರತೆ ಒದಗಿಸುವ ಜಾಗಗಳಲ್ಲಿ ಮೊದಲು ಟ್ಯಾಂಡೆಮ್ ಸ್ಕೈ ಡೈವಿಂಗ್ (ಮಾರ್ಗದರ್ಶಕರ ಜೊತೆ) ಮಾಡುವುದು ಒಳಿತು. ಈ ಕ್ರೀಡೆ ನಿಮಗೆ ಒದಗುತ್ತದೆ ಎಂದಲ್ಲಿ ಅದನ್ನು ಹವ್ಯಾಸವನ್ನಾಗಿ ಮಾಡಿಕೊಳ್ಳಬಹುದು. ತೀರಾ ಇತ್ತೀಚೆಗೆ 101 ವರ್ಷ 38 ದಿನಗಳ ವಯಸ್ಸಿನ ಅಮೆರಿಕಾದ ಮಿಲಿಟರಿಯಿಂದ ನಿವೃತ್ತನಾದ ಬ್ರೈಸನ್ ವಿಲ್ಲಿಯಮ್ ವೆರ್ಡನ್ ಹೇಯ್ಸ್ ಎಂಬಾತ 15000 ಅಡಿ ಎತ್ತರದಿಂದ ತನ್ನ ಸಂಸಾರದ ಮೂರು ತಲೆಮಾರುಗಳ ಜನರೊಂದಿಗೆ ಜಿಗಿದು ಹೊಸ ದಾಖಲೆಯನ್ನು ನಿರ್ಮಿಸಿದ್ದಾನೆ. ಒಂದೇ ದಿನದಲ್ಲಿ ಮೂರು ವಿಮಾನಗಳನ್ನು ಬಳಸಿ ಪ್ರತಿ 2.25 ನಿಮಿಷಗಳಿಗೆ ಒಮ್ಮೆ ಒಂದೇ ದಿನದಲ್ಲಿ 640 ಸಾರಿ ಜಿಗಿದ ಖ್ಯಾತಿ ಜೇಯ್ ಸ್ಟೋಕ್ ಎಂಬಾತನಿಗೆ ಸಲ್ಲುತ್ತದೆ. 4 ವರ್ಷದ ಸೌತ್ ಆಫ್ರಿಕಾದ ಟೋನಿ ಸ್ಟಾಡ್ಲರ್ ಪ್ರಪಂಚದ ಆಕಾಶ ಜಿಗಿತ ಮಾಡಿರುವ ಅತಿ ಚಿಕ್ಕ ವಯಸ್ಸಿನ ಬಾಲಕ. ಆದರೆ ಕೆಲವು ಮುಂದುವರಿದ ದೇಶಗಳಲ್ಲಿ 16 ವರ್ಷದವರೆಗೆ ಆಕಾಶ ಜಿಗಿತ ಮಾಡಲು ಅವಕಾಶವಿಲ್ಲ. ಭಾರತದಲ್ಲಿ ಹಲವೆಡೆ ನಿಮ್ಮ ವಯಸ್ಸು 18ರ ಮೇಲಿದ್ದರೆ ಮಾತ್ರ ಜಿಗಿಯಲು ಸಾಧ್ಯ.

ನಮ್ಮ ಸಣ್ಣ ವಿಮಾನ ಮೇಲೆ ಮೇಲೆ ಹೋದಂತೆಲ್ಲ ನನ್ನ ಸಂತೋಷ ಹೆಚ್ಚುತ್ತಿತ್ತು. 13,000 ಅಡಿಗಳ ಎತ್ತರದಲ್ಲಿ ನನ್ನ ಟ್ಯಾಂಡೆಮ್ ಗುರು ತಲೆಗೆ ಟೊಪ್ಪಿ, ಕನ್ನಡಕ ಹಾಕಲು ಹೇಳಿದ. ಅದೇ ವಿಮಾನದಲ್ಲಿ ಬಂದಿದ್ದ ಐದು ಮಂದಿ ನುರಿತ ಜಿಗಿತಗಾರರು ವಿಮಾನದ ಬಾಗಿಲು ತೆರೆಯುತ್ತಿದ್ದಂತೆ ಪುರ್ರೆಂದು ಒಟ್ಟಿಗೆ ಹಾರಿಹೋದರು. ಆಗಸದಲ್ಲಿ ಕೈ ಕೈ ಹಿಡಿದು ಚಿತ್ತಾರ ಬಿಡಿಸಬಲ್ಲ ಪರಿಣಿತ ಜಿಗಿತಗಾರರಿವರು. ಕೊನೆಯವಳು ನಾನು. ಬಾಗಿಲಿಗೆ ಬಂದಂತೆ ಹಸಿರು ಗೀಚಿನ ನೆಲ, ನೀಲ ಆಗಸ, ಭರ್ರೆಂದು ಬಲವಾಗಿ ಬೀಸುವ ಗಾಳಿಯ ಜೊತೆಗೆ ಚಲಿಸುವ ವಿಮಾನದ ಗತಿಯಿಂದ ಕಳಚಿಕೊಂಡು ಜಿಗಿದದ್ದೇ ತಡ ಬಲವಾದ ಗಾಳಿ ಮತ್ತು ಗುರುತ್ವಾಕರ್ಷಣೆಗಳ ಘರ್ಷಣೆಯಲ್ಲಿ ಸಿಕ್ಕ ನಮ್ಮ ದೇಹಗಳು ಗಂಟೆಗೆ 200 ಮೈಲುಗಳ ವೇಗದಲ್ಲಿ ಕೆಳಗೆ ಬೀಳತೊಡಗಿದವು. ವಿಮಾನ ಬಾಗಿ ಇಳಿಯುವಾಗ ಕಿವಿಯಲ್ಲಿ ಕಾಣಿಸಿಕೊಳ್ಳುವ ನೋವು ಬಲಗಿವಿಯನ್ನು ಆವರಿಸುತ್ತಿರುವಂತೆ ಡ್ರೋಗ್ (ವೇಗವನ್ನು ನಿಯಂತ್ರಿಸುವ ಸಣ್ಣ ಬಲೂನು) ನ್ನು ಹಾರಿಸಲಾಯಿತು. ಇದರಿಂದ ನಮ್ಮ ವೇಗ ಗಂಟೆಗೆ 120 ಮೈಲುಗಳಿಗೆ ಇಳಿಯಿತು. ಒಂದಷ್ಟು ಹೊತ್ತು ಕೈಗಳನ್ನು ಬಡಿಯುತ್ತ ಆನಂದಿಸಿದ ನಂತರವಷ್ಟೇ ಪ್ಯಾರಾಶ್ಯೂಟ್ ನ್ನು ಬಿಚ್ಚಿದ್ದು. ಇದು ತೆರೆದುಕೊಳ್ಳುತ್ತಿದ್ದಂತೆ ಇಡೀ ದೇಹವನ್ನು ಪ್ಯಾರಾಶ್ಯೂಟ್ ಲಬಕ್ಕೆಂದು ಮೇಲೆಳೆದುಕೊಂಡು ನಮ್ಮ ವೇಗದ ಜಿಗಿತ ತಟ್ಟನೆ ತಹಬದಿಗೆ ಬಂತು. ನೆಲದಿಂದ ಸುಮಾರು 13,000 ಅಡಿಗಳ ಮೇಲೆ ಗಾಳಿಯನ್ನು ಬಿಟ್ಟರೆ ಯಾವ ಶಬ್ದವೂ ಇರುವುದಿಲ್ಲ. ನಾನು ಸ್ಕೈ ಡೈವಿಂಗ್ ಮಾಡಿದ ದಿನ ನೀಲ ಶುಭ್ರ ಆಕಾಶ. ಹಾಗಾಗಿ ಹಲವಾರು ಮೈಲುಗಳ ದೂರಕ್ಕೂ ನೆಲ ಕಾಣಿಸುತ್ತಿತ್ತು. ಬಲಕ್ಕೂ ಎಡಕ್ಕೂ ಪ್ಯಾರಶ್ಯೂಟು ತಿರುಗುತ್ತಿದ್ದಂತೆ ಗಾಳಿಯನ್ನು ಸೀಳುವ ಮತ್ತದೇ ಹರ್ಷ. ನೆಲದಲ್ಲಿರುವವರಿಗಂತೂ ನಾವು ಈ ದೂರದಿಂದ ಕಾಣುತ್ತಿರಲಿಲ್ಲ. ಇಲ್ಲಿ ನಿಮ್ಮ ಮಾರ್ಗದರ್ಶಕರೊಂದಿಗೆ ಮಾತಾಡಬಹುದು. ಕ್ಷಿತಿಜದವರೆಗೆ ಕಣ್ಣು ಹಾಯಿಸಬಹುದು. ನಿಧಾನವಾಗಿ ಸ್ಕೈ ಡೈವಿಂಗ್ ಮುಗಿಸಿ ನಾವು ನೆಲಕ್ಕಿಳಿಯುವಾಗ ವೇಗವನ್ನು ಹೆಚ್ಚು ಮಾಡಲಾಗುತ್ತದೆ. ಯಾವ ಹಾನಿಯೂ ಇಲ್ಲದೆ ಇಳಿದಾಗ ಇಡೀ ದೇಹ ಮತ್ತು ಮಿದುಳ ಅಯೋಮಯ ಸ್ಥಿತಿಯನ್ನು ಅನುಭವಿಸಿದರೂ ಸಾರ್ಥಕತೆಯ ಭಾವ ಆವರಿಸಿತು. ಮುಂದಿನ ಎರಡು ದಿನಗಳು ಕೂಡ ಇದೇ ಗುಂಗಿನಲ್ಲಿ ಕಳೆದವು.

ನಮ್ಮ ದೇಶದಲ್ಲಿ ಸಾಮಾನ್ಯ ಜನರಿಗಾಗಿ ಇಂತಹ ಆಕಾಶ ಜಿಗಿತದ ಐದು ಕೇಂದ್ರಗಳಿವೆ. ನಮ್ಮ ರಾಜ್ಯದ ಮೈಸೂರು ಕೂಡ ಇವುಗಳಲ್ಲಿ ಒಂದು. ಚಾಮುಂಡೀ ಬೆಟ್ಟದ ತಪ್ಪಲಲ್ಲಿಯೇ ಇಂತಹ ಕೇಂದ್ರವಿದ್ದು, ವರ್ಷದಲ್ಲಿ ಹಲವು ಕ್ಯಾಂಪುಗಳನ್ನು ಇವರು ನಡೆಸುತ್ತಿದ್ದಾರೆ. ಹಲವು ಬಗೆಯ ಆಕಾಶ ಜಿಗಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಈ ರೀತಿಯ ತರಬೇತುದಾರರೊಟ್ಟಿಗಿನ ಜಿಗಿತವೊಂದಕ್ಕೆ ವಾರಾಂತ್ಯವೋ, ವಾರದ ದಿನವೋ ಎಂಬುದರ ಆಧಾರದ ಮೇಲೆ ಸುಮಾರು 35,000-45,000 ರೂಪಾಯಿಗಳ ಶುಲ್ಕವಿದೆ. ಇದರ ಫೋಟೋ ಮತ್ತು ವಿಡೀಯೋ ಪ್ಯಾಕೇಜಿಂಗ್ ಗಳನ್ನು ಕೂಡ ನೀವು ಕಾದಿರಿಸಬಹುದು. ನಿಮ್ಮ ಈ ವೀಡೀಯೋ ಮಾಡಲು ಮೂರನೇ ವ್ಯಕ್ತಿ ನಿಮ್ಮೊಂದಿಗೆ ಜಿಗಿದು ಈ ವಿಡೀಯೋವನ್ನು ತೆಗೆಯುವುದು ವಿಶೇಷ. ಹಾಗಾಗಿ ಇದು ಎಲ್ಲರಿಗೂ ಎಟುಕುವ ಕ್ರೀಡೆಯಲ್ಲ.

ಮೈಸೂರೇ ಅಲ್ಲದೆ ಮಧ್ಯಪ್ರದೇಶದ ಧಾನ, ಮಹಾರಾಷ್ಟ್ರದ ಆಂಬಿ ವ್ಯಾಲಿ, ಗುಜರಾತಿನ ದೀಸ ಮತ್ತು ಪಾಂಡಿಚೆರಿಯಲ್ಲಿಯೂ ಈ ಸೌಲಭ್ಯಗಳಿವೆ. ಈ ಪ್ರತಿ ಜಾಗದಲ್ಲಿಯೂ ಏರುವ ಎತ್ತರ ಮತ್ತು ಜಿಗಿತದ ಬೆಲೆ ಎರಡರಲ್ಲಿಯೂ ವ್ಯತ್ಯಾಸಗಳಿವೆ. ಕೆಲವೊಂದು ಕಡೆ ಬೇಡಿಕೆಯಿದ್ದಲ್ಲಿ ಮಾತ್ರ ವರ್ಷದಲ್ಲಿ ಈ ಚಟುವಟಿಕೆಗಳು ನಡೆಯುತ್ತವೆ; ಇಲ್ಲವೆಂದರೆ ಇಲ್ಲ. ಹಾಗಾಗಿ ಯಾವುದೇ ಜಾಗವಾಗಲಿ, ಮೊದಲು ಖಚಿತಪಡಿಸಿಕೊಂಡು ಹೋಗುವುದು ಒಳಿತು.

ಹೃದಯದ ಖಾಯಿಲೆಗಳು, ಕಾಲಿನ ಊನಗಳು, ಗರ್ಭಿಣಿಯರು ಮತ್ತು ಇನ್ನಿತರ ಊನಗಳ, ಖಾಯಿಲೆಗಳ ಜನರು ಇದರಲ್ಲಿ ಭಾಗವಹಿಸುವಂತಿಲ್ಲ. ಈ ಸಾಹಸದಲ್ಲಿ ಭಾಗವಹಿಸುವ ಮುನ್ನ ಸರ್ವ ರೀತಿಯಲ್ಲಿಯೂ ಆರೋಗ್ಯವಾಗಿರುವ ಮಂದಿ ಕೂಡ ತಮ್ಮ ಬದುಕಿಗೆ ತಾವೇ ಜವಾಬುದಾರರು ಎಂದು ಬರೆದುಕೊಟ್ಟೇ ಹೋಗಬೇಕು ಎಂದರೆ ಈ ಆಕಾಶ ಜಿಗಿತದ ಅಪಾಯಗಳ ಊಹೆ ನಿಮಗಾಗಬಹುದು.

ಸ್ಕೈ ಡೈವಿಂಗ್ ನಲ್ಲಿಯೂ ನಾನಾ ವಿಧಗಳಿವೆ. ಒಬ್ಬ ತರಬೇತಿಯಿರುವ ನುರಿತ ಜಿಗಿತಗಾರನ ಜೊತೆ ಒಟ್ಟಿಗೆ ಜಿಗಿಯುವುದು, ಒಮ್ಮೆ ತರಬೇತಿ ಮತ್ತು ಲೈಸೆನ್ಸ್ ದೊರೆತ ನಂತರ ಸ್ವತಂತ್ರವಾಗಿ ಜಿಗಿಯುತ್ತ ಆನಂದಿಸುವುದು, ಗುಂಪುಗಳಲ್ಲಿ ಒಟ್ಟಿಗೆ ಜಿಗಿದು ಕೈ ಕೈ ಹಿಟಿದು ನಾನಾ ರೀತಿಯ ಚಿತ್ತಾರಗಳನ್ನು ಆಗಸದಲ್ಲಿ ಬಿಡಿಸುವುದು ಮತ್ತು ಇವೇ ವರ್ಗಗಳಲ್ಲಿ ಅಪಾಯದ ಮಟ್ಟವನ್ನು ಹೆಚ್ಚಿಸಿಕೊಂಡು ನೇರವಾಗಿ ಬೀಳುತ್ತ ಆನಂದಿಸುವುದು -ಹೀಗೆ ನಮ್ಮ ಅಪಾಯದ ಪರಿಧಿಯನ್ನು ಹಿಗ್ಗಿಸಿಕೊಳ್ಳುತ್ತ ಸಾಗುವುದು ಮನುಷ್ಯನ ಸಾಹಸೀ ಗುಣದ ಕಡೆ ಬೆರಳು ತೋರಿಸುತ್ತದೆ.

ಮೊದಲ ಬಾರಿಯಾದ್ದರಿಂದ ಕೆಲವೇ ನಿಮಿಷಗಳ ಈ ಜಿಗಿತದ ರೋಚಕತೆ ಒಂದು ತಿಂಗಳ ಕಾಲ ನನ್ನನ್ನು ಆವರಿಸಿದ್ದು ಸುಳ್ಳಲ್ಲ. ಈ ಕ್ಷಣಗಳ ವಿಡೀಯೋವನ್ನು ಯೂಟ್ಯೂಬಿಗೂ ಏರಿಸಿದೆ.

ಡಾ. ಪ್ರೇಮಲತ ಬಿ

ದಂತವೈದ್ಯೆ. ಕಳೆದ 15 ವರ್ಷಗಳಿಂದ ಇಂಗ್ಲೆಂಡಿನಲ್ಲಿ ವಾಸ. ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ. ಹಲವಾರು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ. ಕಥೆ, ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನಿತರು.

Share

Leave a comment

Your email address will not be published. Required fields are marked *

Recent Posts More

 • 1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 1 week ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 1 week ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  3 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...