Share

ವಸಂತದ ನೆನಪು; ಮಾಗುವ ಹುರುಪು!
ಡಾ. ಪ್ರೇಮಲತ ಬಿ

 

ಜಗತ್ತಿನ ಬಗ್ಗೆ ತಿಳಿಯುತ್ತ ಸಾಗಿ, ನಮಗೆ ಈ ಜಗತ್ತು ಹೀಗೆ ನಡೆಯುತ್ತಿದೆ ಅಂತ ಅರಿತುಕೊಳ್ಳುವವರೆಗಿನದು ಮಧ್ಯವಯಸ್ಸಿನ ಕಾಲ. ನಾವು ಅಲ್ಲಿಯವರೆಗೆ, ಕಲಿತದ್ದು, ಕೇಳಿದ್ದು, ನಮಗೆ ತಿಳಿದಿದ್ದು ಎಲ್ಲವೂ ಬದಲಾಗುವ ವೇಳೆಗೆ ನಮಗೆ ವಯಸ್ಸಾಗಿಬಿಟ್ಟಿರುತ್ತದೆ. ಕಾಲದಲ್ಲಿ ಹೊಸ ಚಿಗುರು ಟಿಸಿಲೊಡೆದಿರುತ್ತದೆ.

 

 

ಕುಣಿದಾಡುವಷ್ಟು ಚೈತನ್ಯವಿರುವ ಯೌವನಕ್ಕೂ, ಕುಂದಿದ ಶಕ್ತಿಯ ಇಳಿಗಾಲದ ವೃದ್ಧಾಪ್ಯಕ್ಕೂ ನಡುವೆ ಬರುವುದು ಮಧ್ಯವಯಸ್ಸು!

ಹುಟ್ಟು, ಬದುಕು ,ಸಾವು ಎಲ್ಲರಿಗೂ ಬರುತ್ತದೆ. ಬದುಕನ್ನು ಹಲವರು ಸಾಧನೆಗಳ ಮೂಲಕ, ತಮ್ಮ ಕೆಲಸಗಳ ಮೂಲಕ ಅಳೆಯಲು ಪ್ರಯತ್ನಿಸುತ್ತಾರೆ. ಕೆಲವರು ಭೌತಿಕ ದೇಹದ ಪಯಣವನ್ನು, ಆಂತರಿಕ ಪಯಣದ ಆಧ್ಯಾತ್ಮದ ಮೂಲಕ ಕಾಣಲು ಹವಣಿಸುತ್ತಾರೆ. ಬದುಕನ್ನು ಹೇಗೇ ಅಳೆದರೂ ಶಾರೀರಿಕ ಪಯಣವನ್ನು ನಿರ್ಲ್ಯಕ್ಷಿಸಲಾಗದು. ಈ ಪಯಣದಲ್ಲಿ ಎಲ್ಲ ಕಾಲಘಟ್ಟಗಳೂ ಮುಖ್ಯವೇ. ಬಾಲ್ಯ, ಯೌವನ ಮತ್ತು ಮುಪ್ಪು ಎಂದು ಈ ಬದುಕನ್ನು ವಿಭಜಿಸಿದವರು ಮಧ್ಯವಯಸ್ಸಿನ ಬಗ್ಗೆ ಅನಾದರ ತೋರಿದ್ದಾರೇನೋ ಅನ್ನಿಸುತ್ತದೆ. ದೇಹ, ವೃತ್ತಿ, ಪ್ರವೃತ್ತಿ ಎಲ್ಲವೂ ತಮ್ಮ ಪ್ರಭುದ್ಧ ಸ್ಥಿತಿಯನ್ನು ತಲುಪಿರುವ ಕಾಲ ಅಂದರೆ ಈ ಮಧ್ಯವಯಸ್ಸೇ ನಿಜ.

ಆಕ್ಸ್ ಫರ್ಡ್ ಡಿಕ್ಷನರಿ ಪ್ರಕಾರ ಮಧ್ಯವಯಸ್ಸಿನವರೆಂದರೆ, 45ರಿಂದ 65 ವಯಸ್ಸಿನ ನಡುವಿನ ವಯೋಮಾನದವರು. ಅರೆರೆ… ಇದೇನಿದು? ‘ಐವತ್ತಾದರೆ ವಯಸ್ಸಾಯ್ತು’ ಅಂತಲೋ, ‘ಅರವತ್ತೆಂದರೆ ವೃದ್ದಾಪ್ಯ’ ಅಂತಲೋ ನಮ್ಮ ಸಮಾಜಕ್ಕನುಗುಣವಾಗಿ, ನಂಬಿಕೆಗಳಿಗನುಗುಣವಾಗಿ ಅಥವಾ ವರ್ತನೆಗಳಿನಗುಗುಣವಾಗಿ ನಂಬಿಕೊಂಡವರಿಗೆ ಈ ಹೇಳಿಕೆಯಿಂದ ಸ್ವಲ್ಪ ಕಕ್ಕಾಬಿಕ್ಕಿಯಾದರೂ, ಇದು ನಿಜ!

20 ವರ್ಷಗಳ ಈ ಮಧ್ಯವಯಸ್ಸು ನಿಜಕ್ಕೂ ಬದುಕಿನ ಅತ್ಯಂತ ಮುಖ್ಯ ಕಾಲಘಟ್ಟ. ಆದರೆ ಈ ಕಾಲದಲ್ಲಿ ನಾವು ಹಾದುಹೋಗುವ ಬದಲಾವಣೆಗಳೆಷ್ಟೆಂದರೆ, ಈ ಮಧ್ಯವಯಸ್ಸಿನ ಕಾಲದ ಬದುಕು ನಮಗೆ ಸಮಯವನ್ನೇ ಕೊಡದೆ ಎಳೆದೊಯ್ಯುತ್ತಾ ಸಾಗಿ, ನಮ್ಮ ಬಗ್ಗೆ ನಮಗೆ ಗಮನವನ್ನೇ ನೀಡಲಾಗುವುದಿಲ್ಲ. ಅಥವಾ ಬದುಕಿನಲ್ಲಿ ಮದ್ಯವಯಸ್ಸು ಎಷ್ಟು ಬೇಗ, ಬೇಗ ಸರಿದು ಬಿಡುತ್ತದೆಂದರೆ, “ಅಯ್ಯೋ ನನಗಿಷ್ಟು ವಯಸ್ಸಾಯ್ತೇ…” ಎನ್ನುವಷ್ಟರಲ್ಲಿ ನಮ್ಮ ದೇಹ ನಿಧಾನವಾಗಿ ಬಿಡುತ್ತದೆ.

ಪ್ರಸಿದ್ದ ಮನೋತಜ್ಞ ಎರಿಕ್ ಎರಿಕ್ಸನ್ ಎನ್ನುವವನ ಪ್ರಕಾರ ಮದ್ಯವಯಸ್ಸು ಅನ್ನುವುದು ಮಾನಸಿಕ ವಯಸ್ಸಿನ ಮಾಪನಕ್ಕೆ ಹೊಂದಿದಂತೆ 40ರಿಂದ 60 ವರ್ಷದ ನಡುವಿನದು. 20ರಿಂದ 40ರ ವಯಸ್ಸನ್ನು ಈತ ಕಿರಿಯ ಪ್ರೌಢಾವಸ್ಥೆ ಎಂದು ಕರೆಯುತ್ತಾನೆ. 40-60 ರ ವಯಸ್ಸನ್ನು ಮಧ್ಯವಯಸ್ಸಿನ ಪ್ರೌಢಾವಸ್ಥೆಯೆಂದು ಕರೆಯುತ್ತಾನೆ. ನಂತರದ್ದಷ್ಟೇ ವೃದ್ದಾಪ್ಯ.

“ವಯಸ್ಸಲ್ಲಿ ಕತ್ತೆಯೂ ಚಂದ”, “ಮೂವತ್ತಕ್ಕೆ ಮುದುಕಿಯಾದೆ…”, “ನಾಲ್ಕು ಕತ್ತೆ ವಯಸ್ಸಾಯ್ತು”, “ಅರವತ್ತಕ್ಕೆ ಅರುಳು ಮರುಳು”, “ವಯಸ್ಸಿಗೆ ತಕ್ಕಂತೆ ವರ್ತನೆಯಿರಬೇಕು” ಅಂತೆಲ್ಲ ವಯಸ್ಸಿಗೆ ಸಂಬಂಧಿಸಿದ ಮಾತುಗಳನ್ನು ನೀವು ಕೇಳಿರುತ್ತೀರಿ. ಈ ನುಡಿಗಳು ಇವತ್ತು ಸ್ವಲ್ಪ ಬದಲಾವಣೆ ಕಂಡಿವೆ.ಈ ನಾಣ್ಣುಡಿಗಳನ್ನು ಈಗಿನ ಕಾಲದಲ್ಲಿ ಎಲ್ಲ ರೀತಿಯಲ್ಲಿ ವಿರೋಧಿಸಿ ನಮಗಿನ್ನೂ ವಯಸ್ಸಿದೆ, ಆರೋಗ್ಯವಿದೆ, ಮತಿಯಿದೆ, ಬದುಕನ್ನು ಅನುಭವಿಸುವ ಇಚ್ಚೆಯಿದೆ ಎನ್ನುವ ಮಧ್ಯವಯಸ್ಸಿನ ಜನರ ಕಾಲವಿದು.

ಅದಕ್ಕೆ ಪುಷ್ಟಿಕೊಡಲು ದೊಡ್ಡ ಉದ್ಯಮಗಳೇ ಹುಟ್ಟಿಕೊಂಡಿವೆ. ಬರಿಯ ಯೌವನಿಗರಿಗೆ ಮಾತ್ರ ಸೀಮಿತವಾಗಿದ್ದ ಮಾರುಕಟ್ಟೆಯನ್ನು ಈಗ ಕಿರಿಯ ಮತ್ತು ಹಿರಿಯ ಮಧ್ಯವಯಸ್ಕರು ಕೂಡ ಕಬಳಿಸುತ್ತಿದ್ದಾರೆ. ಇವರ ದೈಹಿಕ ಬದಲಾವಣೆಗಳನ್ನು ಮರೆಮಾಚಲು, ಇವರ ತುಡಿತಗಳಿಗೆ ಮಿಡಿತವಾಗಿ ಬಿಲ್ಲಿಯನ್ನುಗಟ್ಟಲೆ ಮಾರುಕಟ್ಟೆ ಬೆಳೆದು ನಿಂತಿದೆ. ಮಾನವ ಬದುಕುವ ಕಾಲ ಹೆಚ್ಚಾಗಿರುವುದರಿಂದ ಅವರ ಆರೋಗ್ಯ ವಿಚಾರ ಮತ್ತು ಆರೈಕೆಯ ವಿಚಾರಗಳು ಎಲ್ಲ ಕೈಗಾರೀಕರಣ ಹೊಂದಿದ ದೇಶಗಳಲ್ಲಿ ಹೊಸ ಆಯಾಮವನ್ನೇ ಮಧ್ಯವಯಸ್ಸಿನವರಿಗೆ ತೆರೆದಿದೆ. ಮಧ್ಯವಯಸ್ಸಿನ ಮಾಪನವನ್ನು ಹಿಗ್ಗಿಸಿದೆ.

ಬದುಕಿನಲ್ಲಿ ‘ಗೋಲ್ಡನ್ ಏಜ್’ ಎಂದರೆ ವಿದ್ಯಾರ್ಥಿ ಜೀವನ ಅಂತ ಹೇಳುವ ಕಾಲವೊಂದಿತ್ತು. ಈಗ ವಿದ್ಯಾರ್ಥಿಯ ಅವಸ್ಥೆಯನ್ನು ನಾವು ಯಾವಾಗ ಬೇಕಾದರೂ ಆಲಂಗಿಸಲು ಅವಕಾಶವಿರುವುದರಿಂದ ‘ಬದುಕಿನ ಬಂಗಾರದ ಕಾಲ’ ಎಂದರೆ ಯೌವನ ಅಥವಾ ಕಿರಿಯ ಪ್ರೌಡಾವಸ್ಥೆ ಅಂತ ಧಾರಾಳವಾಗಿ ಹೇಳಬಹುದು.
ಯೌವನದಲ್ಲಿ ನಮಗೆ ಮನೆ, ಊಟ, ಬಟ್ಟೆ, ವಿದ್ಯಾಭ್ಯಾಸ ಎಲ್ಲಕ್ಕು ಹಿರಿಯರ ಆಸ್ಥೆ ಇರುವುದರಿಂದ ಇದೊಂದು ನಿರಾಳ ಕಾಲ. ಓದುವುದು, ಬದುಕನ್ನು ರೂಪಿಸಲು ಬೇಕಾದ ವಿದ್ಯೆಗಳನ್ನು ಕಲಿಯುವುದು ಇಂತವನ್ನು ಬಿಟ್ಟರೆ ಜವಾಬ್ದಾರಿಗಳಿಂದ ಮುಕ್ತವಾಗಿರುವ ಕಾಲವಿದು. ದೇಹದಲ್ಲಿ ಅದಮ್ಯ ಉತ್ಸಾಹ, ಶಕ್ತಿ, ಚೈತನ್ಯ ಎಲ್ಲ ದಂಡಿಯಾಗಿರುವ ಕಾಲವೂ ಹೌದು. ಅರೋಗ್ಯವೂ ಚೆನ್ನಾಗಿರುತ್ತದೆ. ಬಾಲ್ಯ, ಅಪ್ರಾಪ್ತ ವಯಸ್ಸು ಮತ್ತು ಹದಿಹರೆಯದಿಂದ ಶುರುವಾಗಿ ‘ವಯಸ್ಕರು’ ಅನ್ನುವಲ್ಲಿಗೆ ಬಹಳಷ್ಟು ಬದಲಾವಣೆಗಳು ಸಂಭವಿಸುತ್ತವೆ. ಈ ಹರಿವಿನಲ್ಲಿ ನಡೆವ ಎಲ್ಲ ಬೌತಿಕ ಕ್ರಿಯೆಗಳು ಒಬ್ಬ ವ್ಯಕ್ತಿಯನ್ನು ರೂಪಿಸುವ ಸೃಜಾನತ್ಮಕ ಬೆಳವಣಿಗೆಯಾಗಿ ಮೂಡುತ್ತವೆ. ಹಾಗಾಗಿ ಇಲ್ಲಿ ಪಾಸಿಟಿವ್ ಅಥವಾ ಗುಣಾತ್ಮಕ ಬೆಳವಣಿಗೆಯಾಗುತ್ತದೆ.

ಕಿರಿಯ ಮದ್ಯವಯಸ್ಸಿನಲ್ಲಿ ಈ ಉತ್ತುಂಗ ಸ್ಥಿತಿ ಮತ್ತೊಂದು ದಶಕದ ಕಾಲ ಉಳಿದರೂ ನಂತರದ ಇಳಿತ ಶುರುವಾಗುತ್ತದೆ. ಮಧ್ಯವಯಸ್ಸು ಬದುಕಿನ ಬಂಗಾರದ ಕಾಲವಲ್ಲದಿದ್ದರೂ ಬದುಕಿನ ಅತಿ ಮುಖ್ಯ ಕಾಲ. ಈ ವಯಸ್ಸಿನಲ್ಲಿ ಮದುವೆಯ ಕಾರಣದಿಂದ, ಮಕ್ಕಳ ಕಾರಣದಿಂದ ಕುದುರುವ ನಾನಾ ಸಂಬಂಧಗಳ ಜೊತೆ ಇನ್ನೂ ಹಲವು ಸಂಬಂಧಗಳು ಬದುಕಲ್ಲಿ ಹಾಸುಹೊಕ್ಕಾಗಿ ಬೆಳೆಯುತ್ತವೆ. ಬೆಳೆಯುತ್ತಿರುವ ಮಕ್ಕಳ, ಬೆಳೆದ ಮಕ್ಕಳ, ಮದುವೆಯಾದ ಮಕ್ಕಳ ಮತ್ತು ಇವರಿಂದ ಉಂಟಾಗುವ ಹೊಸ ಸಂಬಂಧಗಳೊಂದಿಗೆ ನಾವು ಹೊಂದಾಣಿಕೆ ಮಾಡಿಕೊಳ್ಳುತ್ತ ಸಾಗುತ್ತೇವೆ. ಇದರೊಂದಿಗೆ ವಯಸ್ಸಾದ ತಂದೆ –ತಾಯಿ ಮತ್ತು ಇತರೆ ಸಂಬಂಧಗಳೊಡನೆಯೂ ನಮ್ಮ ಹೊಂದಾಣಿಕೆ ಮುಂದುವರೆಯುತ್ತದೆ. ಬದಲಾವಣೆಗಳಿಲ್ಲದಿದ್ದರೆ ಬದುಕಿಗೆ ಬೋರು ಹೊಡೆಯುತ್ತದೇನೋ ಎಂಬಂತೆ.

ಸಾಮಾಜಿಕವಾಗಿ ಕೂಡ ನಮ್ಮ ವಿಸ್ತಾರ ಅಧಿಕವಾಗುವ ಕಾಲ ಅಂದರೆ ನಡುವಯಸ್ಸಿನದೇ ಮೇಲುಗೈ. ಕೆಲಸಗಳಿಗಾಗಿ ಜಾಗಗಳನ್ನು, ನಾಡನ್ನು, ದೇಶವನ್ನು ಬಿಟ್ಟು ಪ್ರಯಾಣ ಮಾಡುವ ಕಾಲವಿದು. ಕೆಲಸ ಮಾಡುವ ಜಾಗಗಳನ್ನು ಬದಲಾಯಿಸುವ ಕಾರಣ, ನೆರೆ ಹೊರೆಯವರು ಬದಲಾಗುವ ಕಾರಣ, ಹೊಸದಾದ ಜಾಗಗಳಲ್ಲಿ ಹೊಸ ಸಂಬಂಧಗಳ ಜೊತೆ ನಮ್ಮ ಬದುಕನ್ನು ಅಲ್ಪ ಸ್ವಲ್ಪ ಬದಲಯಿಸಿಕೊಳ್ಳುತ್ತಾ, ಹಂಚಿಕೊಳ್ಳುತ್ತ ನಡೆವ ಈ ಕಾಲದಲ್ಲಿ ಬದುಕು ವೇಗವಾಗಿ ಸಾಗುತ್ತದೆ.

ಧುಮ್ಮಿಕ್ಕುವ ಜಲಪಾತದಂತಹ ಉತ್ಸಾಹದಲ್ಲಿ ಹೊಳೆಗಳನ್ನು ಈಜಿದ್ದು, ಬೆಟ್ಟಗಳನ್ನು ಹತ್ತಿದ್ದು, ಕಾಡುಗಳನ್ನು ಅಲೆದದ್ದು ಎಲ್ಲವೂ ಮಧ್ಯವಯಸ್ಸಿನಲ್ಲಿ ನೆನಪುಗಳಾಗುತ್ತ ಸಾಗುತ್ತವೆ. ಕೈಕಾಲುಗಳ ಕೀಲುಗಳಲ್ಲಿ ನಿಧಾನವಾಗಿ ನೋವು, ಕಣ್ಣಿಗೆ ಚಾಲೀಸು, ಬರುವ ಕಾಲ ಮಧ್ಯವಯಸ್ಸಿನದು.

ಏನನ್ನು ಬೇಕಾದರೂ ತಿಂದು ಅರಗಿಸಿಕೊಳ್ಳುವ ಅವಸ್ಥೆ ಕಳೆದು, ಅಂಥದ್ದು ಆಗಲ್ಲ-ಇಂಥದ್ದು ಸೇರಲ್ಲ ಅಂತ ದೇಹಾರೋಗ್ಯ ತಕರಾರು ಮಾಡಲು ಶುರುಮಾಡುವ ಕಾಲವಿದು. ಮೊದಲೆಲ್ಲ ಅವೇ ಖಾದ್ಯ ಪದಾರ್ಥಗಳನ್ನು ತಿಂದು ತೇಗಿದ್ದರೂ ಈ ಮದ್ಯವಯಸ್ಸಿನಲ್ಲಿ ಅವು ತಟ್ಟಂತ ತಕರಾರು ತೆಗೆದು ರಾಗ ಹಾಡಲು ಶುರು ಮಾಡಿಬಿಡುತ್ತವೆ. ದೇಹದ ಬಳಲಿಕೆ, ಮಾನಸಿಕ ಒತ್ತಡಗಳು ಎಲ್ಲದರ ಕಾಳಜಿಗಳು ಮೂಡತೊಡಗುತ್ತವೆ. ಜೊತೆ ಜೊತೆಯಲ್ಲೆ ವಿಕಸನವಾಗಿ ಬೆಳೆವ ಬುದ್ಧಿ ಎಲ್ಲವನ್ನೂ ಅಳೆದು ಸುರಿದು ನಂತರ ಅಂಗೀಕರಿಸುವ ಪ್ರೌಢತೆಯನ್ನು ಬೆಳೆಸಿಕೊಂಡಿರುವ ಕಾರಣ, ನಿಧಾನವನ್ನು ಎಲ್ಲ ಕಲಿಯುತ್ತ ಎಚ್ಚರಿಕೆಯ ಘಂಟೆಯನ್ನು ಸದಾ ಸಿದ್ಧವಾಗಿ ಇಟ್ಟುಕೊಳ್ಳುವ ಕಾಲವಿದು. ಮನಸ್ಸು ಸಾಗುವ ವೇಗದಲ್ಲಿ ಶರೀರ ತೊಡಗಲು ಈ ಮಧ್ಯವಯಸ್ಸಿನಲ್ಲಿ ಸಾದ್ಯವಲ್ಲದಿದ್ದರೂ, ಒಂದಿಲ್ಲ ಒಂದು ರೀತಿಯಲ್ಲಿ ಸಂಭಾಳಿಸಿಕೊಳ್ಳುವ ಕಾಲವಿದು.

ಈ ಎಚ್ಚರಿಕೆಗಳ ಉಮೇದು ಕೂಡ ಹೋಗಿ “ದೇವರು ಇಟ್ಟಂತೆ ಆಗಲಿ…” ಅಂತಲೋ, “ಅಯ್ಯೋ ನನ್ನ ವಯಸ್ಸಿನ ಬದಲಾವಣೆಗಳಿಂದ ನಮ್ಮ ಸ್ಥಾನ ಮನೆಯಲ್ಲಿ, ಸಮಾಜದಲ್ಲಿ ಬದಲಾಗಿಬಿಟ್ಟಿದೆ. ಹಾಗಾಗಿ, ನಮ್ಮನ್ನು ಕೇಳುವವರು ಯಾರು?” ಅಂತ ಆತಂಕ ಮೂಡುವ ಹೊತ್ತಿಗೆ ನಮಗೆ ವಯಸ್ಸಾಗಿರುತ್ತದೆ!

ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಜಗತ್ತಿನ ಬಗ್ಗೆ ತಿಳಿಯುತ್ತ ಸಾಗಿ, ನಮಗೆ ಈ ಜಗತ್ತು ಹೀಗೆ ನಡೆಯುತ್ತಿದೆ ಅಂತ ಅರಿತುಕೊಳ್ಳುವವರೆಗಿನದು ಮಧ್ಯವಯಸ್ಸಿನ ಕಾಲ. ನಾವು ಅಲ್ಲಿಯವರೆಗೆ, ಕಲಿತದ್ದು, ಕೇಳಿದ್ದು, ನಮಗೆ ತಿಳಿದಿದ್ದು ಎಲ್ಲವೂ ಬದಲಾಗುವ ವೇಳೆಗೆ ನಮಗೆ ವಯಸ್ಸಾಗಿಬಿಟ್ಟಿರುತ್ತದೆ. ಕಾಲದಲ್ಲಿ ಹೊಸ ಚಿಗುರು ಟಿಸಿಲೊಡೆದಿರುತ್ತದೆ.

ವಯಸ್ಸಲ್ಲಿ ಹಂದಿಯೂ ಚೆನ್ನವಂತೆ!

ಮಧ್ಯವಯಸ್ಸಿನಲ್ಲಿ ಯೌವನದವರೆಗೆ ಏರಿ ನಿಂತಿದ್ದ ದೇಹದ ಆರೋಗ್ಯ-ಅಂದ-ಚೆಂದ, ಸೌಂದರ್ಯ ಮತ್ತು ಮೈಕಟ್ಟುಗಳು ಬದಲಾಗುತ್ತ ಸಾಗುತ್ತವೆ. ಇವಕ್ಕೆಲ್ಲ ಹೆಚ್ಚು ಕಾಳಜಿ ಇರುವ ಹೆಂಗಸರಲ್ಲೆ ಇದು ಕ್ಷಿಪ್ರವಾಗಿ ಆಗಿಬಿಡುತ್ತದೆ. ಇದೊಂದು ವಿಪರ್ಯಾಸವೋ ಅಥವಾ ಅದಕ್ಕೆಂದೇ ಹೆಂಗಸರು ಹೆಚ್ಚು ಕಳಜಿ ವಹಿಸುತ್ತಾರೋ ಅನ್ನುವುದು ಚರ್ಚೆಗೆ ಆಸ್ಪದ ನೀಡುವ ವಿಚಾರ.

ಬಹುತೇಕ ಮಧ್ಯವಯಸ್ಕರಲ್ಲಿ ಎಲ್ಲ ಸಂಕೀರ್ಣ ಕೆಲಸಗಳನ್ನು ಸಂಪೂರ್ಣವಾಗಿ ಮಾಡಬಲ್ಲ ದೈಹಿಕ ಬಲವಿರುವ ಕಾಲ ಮಧ್ಯವಯಸ್ಸಿನದು. ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯ ಇನ್ನೂ ಹತೋಟಿಯಲ್ಲಿರುವ ಉತ್ತಮ ಜೀವಿತ ವಯೋಮಾನವಿದು. ಮಧ್ಯವಯಸ್ಕರಲ್ಲಿ ಅರಿವಿನ ಲಕ್ಷಣಗಳು ಅನುಭವಗಳ ಮೂಲಕ ಬೆಳೆಯುತ್ತವೆ.
ಮಧ್ಯವಯಸ್ಕರಲ್ಲಿ ಎಳೆತನದ ಸಹಜ, ವೇಗವಾದ ದೈಹಿಕ ಚಲನವಲನಗಳು ನಿಧಾನವಾಗಿ ಕಡಿಮೆಯಾಗುತ್ತವೆ. ಆದರೂ, ಇದು ಅಷ್ಟಾಗಿ ಕಾಣ ಬರುವುದಿಲ್ಲ. ಕಾರಣ, ಮಧ್ಯವಯಸ್ಕರಲ್ಲಿನ ಮಾಗಿದ ಪರಿಪಕ್ವ ಬುದ್ಧಿಶಕ್ತಿ. ಅನುಭವ, ಓದು, ಪ್ರವಾಸ ಹಲವರ ನಿಕಟ ಸಂಪರ್ಕಗಳೊಂದಿಗೆ ಅವರಲ್ಲಿ ಶೇಕರವಾಗಿರುವ ಅಪಾರವಾದ ಬುದ್ಧಿಮತ್ತೆ ದೈಹಿಕವಾಗಿ ಕುಂದುವ ಅದೆಷ್ಟೋ ವಿಚಾರಗಳನ್ನು ಮರೆ ಮಾಚಿ, ಒಂದು ರೀತಿಯ ಸಮತೋಲನವನ್ನು ಬದುಕಿನಲ್ಲಿ ನೀಡುತ್ತದೆ ಎನ್ನುವುದೇ ಸಮಾಧಾನಕರವಾದ ವಿಚಾರ. ಅದರಿಂದಲೇ ಮಧ್ಯ ವಯಸ್ಕರು ಕಿರಿಯರನ್ನೂ ಜೊತೆಗೆ ಹಿರಿಯರನ್ನೂ ಸಂಭಾಳಿಸುವ ಚತುರತೆಯನ್ನು ಹೊಂದಿರುತ್ತಾರೆ. ಅವರ ಸೌಂದರ್ಯದಲ್ಲೂ ಇನ್ನೂ ಒಂದು ಮಾಧುರ್ಯ ಹೊಸೆದಿರುತ್ತದೆ.

ಮಧ್ಯ ವಯಸ್ಸು ಎನ್ನುವುದು ಪರಿಭ್ರಮಿತ ಸ್ಥಿತಿಯಿಂದ ಭ್ರಮನಿರಸನಕ್ಕೆ ತಿರುಗುವ ಕಾಲವೇ?

ನನಗಂತೂ ಇದು ನಿಜವೆನಿಸುತ್ತದೆ.

ಯೌವನವೆಂಬುದು ಒಂದು ರೀತಿಯ ವಸಂತ ಕಾಲ. ಪ್ರಕೃತಿಯು ಹೊಸ ರೂಪ ಧರಿಸಿ ನಳ ನಳಿಸುವಂತೆ ದೇಹವೂ ಹೊಸ ರೂಪ ಧರಿಸಿ ಹರೆಯದ ಉತ್ಸಾಹ ಚಿಮ್ಮಿಸುತ್ತದೆ. ಇದೊಂದು ಪರಿಭ್ರಮಣೆಯ ಕಾಲ. ಎಲ್ಲವೂ ಚೆನ್ನಾಗಿ ಕಾಣುವ, ಯಾವುದೂ ಅಸಾದ್ಯವಲ್ಲದ, ಇಡೀ ಲೋಕವೆ ತಮ್ಮ ದೇಹದ ತಣಿವಿಗಿರುವಂತೆ ಅನ್ನಿಸುವ ಕಾಲ.

ಮಧ್ಯವಯಸ್ಸು ಈ ಪರಿಭ್ರಮಣೆಯಿಂದ ಹೊರಬಂದು ಭ್ರಮನಿರಸನಕ್ಕೆ ತಿರುಗುವ ಕಾಲ. ಆದರೆ ಇದು ನಿಧಾನವಾಗಿ 45-65ರವರೆಗೆ ನಡೆವ ಕ್ರಿಯೆ. ಮುನ್ನಾರ್ಧದಲ್ಲಿ ಅರಿವಿನ ತೀಕ್ಷ್ಣತೆ ಹೆಚ್ಚುತ್ತದೆ. ಸಂಸಾರವೆಂದರೆ ಏನು? ತಮ್ಮ ತಂದೆ ತಾಯಿಯರ ಪರಿಸ್ಠಿತಿ ಏನಿತ್ತು? ಅವರು ನಮ್ಮನ್ನು ಬೆಳೆಸುವಲ್ಲಿ ಪಟ್ಟ ಪಾಡೇನು? ಯಾರು ಹೆಚ್ಚಿನ ಪ್ರೀತಿಪಾತ್ರರು ?ಸಮಾಜ ಅಂದರೆ ಏನು? ಅದು ಯಾರಿಗೆ ಮಣೆ ಹಾಕುತ್ತದೆ? ರಾಜಕೀಯ ಏನು?ಮನುಷ್ಯನಾಗಿ ಅದನ್ನು ಬದಲಿಸಲು, ಉಪಯೋಗಿಸಿಕೊಳ್ಳಲು ನಮಗಿರಿವ ಬಲವೇನು? ಚಾಣಕ್ಷತೆ ಏನು? ಲಾಭ ಎಲ್ಲಿದೆ? ಮಾಧ್ಯಮಗಳ ಬಲವೇನು? ಹಣದ ಮಹಿಮೆಯೇನು? ಯಾವುದು ಸುರಕ್ಷಿತ? ನಮ್ಮ ಗುರಿಗಳನ್ನು ತಲುಪಲು ಏನು ಮಾಡಬೇಕು? ಇತ್ಯಾದಿ ವಿಚಾರಗಳು ಈ ಕಾಲದಲ್ಲಿ ಹೊಳೆಯುತ್ತ, ತಿಳಿಯುತ್ತ ಹೋಗುತ್ತೇವಲ್ಲವೇ?

ಹೆಂಡತಿ ಮಕ್ಕಳ ಬಗೆಗಿನ ವ್ಯಾಮೋಹ ಇನ್ನೂ ದಟ್ಟವಾಗಿರುವ ಕಾಲ ಈ ಕಿರಿಯ ಪ್ರೌಢಾವಸ್ಥೆ. ಶರೀರಕ್ಕಿನ್ನೂ ಬಹಳಷ್ಟು ಶಕ್ತಿಯಿರುವ ಕಾಲವಿದು. ಈ ಪರಿಭ್ರಮಿತ ಸ್ಥಿತಿಯಿಂದ ಹೊರಬಂದು ನಿಧಾನವಾಗಿ ನಿಜಗಳು ಅರಿವಿಗೆ ಬರುತ್ತಾ ಹೋಗುವ. ಅನುಭವ ದಟ್ಟವಾಗುವ ಕಾಲ ಹಿರಿಯ ಪ್ರೌಢಾವಸ್ಠೆ. ಒಟ್ಟಿನಲ್ಲಿ ಅರ್ಧ ಈಜಿದ ಜೀವನ ಕಾಲದಲ್ಲಿ, ಮುಂದಿನ ದಾರಿ ಬಿಟ್ಟರೆ ಹಿಂದಿನದೆಲ್ಲ ನಿಧಾನವಾಗಿ ಮಸುಕಾಗಿ ಮಂಜಂತೆ ಕರಗುತ್ತಾ ಹೋದಂತೆ ತಟ್ಟನೆ ನಮ್ಮ ಮನಸ್ಥಿತಿಗಳು, ದೇಹದ ರಾಸಾಯಾನಿಕ ಕ್ರಿಯೆಗಳು ಎಲ್ಲವೂ ಹದಗೊಳ್ಳುತ್ತಾ ಒಂದು ಸಮಾಧಾನದ ಘಟ್ಟಕ್ಕೆ ಬರುವಾಗಾಗಲೇ ನಾವು ಮುಂದಿನ ಜೀವನ ಘಟ್ಟವನ್ನು ತಲುಪಿರುತ್ತೇವೆ! ವ್ಯವಸಾಯ, ಕೈಗಾರೀಕರಣ ಯುಗಗಳ ನಂತರದ ಬಂದಿರುವ ಮಾಹಿತಿ ತಂತ್ರ ಯುಗವಿದು. ಈ ಯುಗದಲ್ಲಿ ಎಲ್ಲ ಮಾಹಿತಿಗಳು ಜನರಿಗೆ ವೇದ್ಯ ವಾಗಿರುವ, ಕೈಗೆಟುಕುವ ವಿಚಾರಗಳೇ. ಹಾಗಿರುವಾಗ ವಯಸ್ಸಿಗೆ ತಕ್ಕಂತೆ ದೇಹದಲ್ಲಿ ಆಗುವ ಬದಲಾವಣೆಗಳು ಮತ್ತು ಅವುಗಳ ಪ್ರಾಮುಖ್ಯತೆ, ಸಹಜತೆಯ ಬಗ್ಗೆ ಎಲ್ಲರಿಗೂ ಅರಿವು ಬರುತ್ತಿದೆ. ವಯಸ್ಸನ್ನು ತೋರಗೊಡದಂತೆ ಅನೇಕ ಸೌಂದರ್ಯ ಪ್ರಸಾದನಗಳು, ಸರ್ಜರಿಗಳು, ಚಿಕಿತ್ಸೆಗಳು ಬರುತ್ತಿವೆ.

ಕಿರಿ ಪ್ರೌಢಾವಸ್ಥೆ ಮುಗಿಯುವ ವೇಳೆಗೆ, ಪ್ರಕೃತಿಯ ರಿ ಸೈಕಲ್ ಚಕ್ರ, ಒಂದುರುಳು ಉರುಳಿ ನಮ್ಮನ್ನು ಮುಂದಿನ ಕ್ರಿಯೆಗೆ ಅಣಿಯಾಗಿಸಿರುತ್ತದೆ.

ಹಿರಿಯ ಪ್ರೌಢಾವಸ್ಥೆಯಲ್ಲಿ ಈ ಪರಿಭ್ರಮಣೆಯ ಕಾಲ ಭ್ರಮನಿರಸನಕ್ಕೆ ತಿರುಗುತ್ತದೆ. ಅಷ್ಟೊಂದು ಆರೈಕೆ ಮಾಡಿದ ದೇಹವೇ ನಿಯಂತ್ರಣ ತಪ್ಪಿ ವಯಸ್ಸಿಗೆ ಸಂಬಂಧಪಟ್ಟ ಖಾಯಿಲೆಗಳಿಗೆ ತುತ್ತಾಗುತ್ತದೆ. ಚಾಳೀಸು, ನೆರಿಗೆಗಳು, ಕಿವಿ ಮಂದ, ಕೈ ಕಾಲಾಡುವುದು ನಿಧಾನವಾಗುತ್ತ ನಿರಾಶೆಯನ್ನು, ಭಯಗಳನ್ನು ತರುತ್ತವೆ. ಡಯಾಬಿಟಿಸ್, ರಕ್ತದೊತ್ತಡ ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತವೆ. ಇತ್ತ ಬದುಕೆಲ್ಲ ದುಡಿತ ಎಂಬಂತೆ ನಮ್ಮ ಶಕ್ತಿಯನ್ನೆಲ್ಲ ಬಸಿದ ಕೆಲಸ ನಿವೃತ್ತಿಯ ಹಂತವನ್ನು ತಲುಪುತ್ತದೆ! ಪ್ರಾಣಕ್ಕೆ ಪ್ರಾಣ ಕೊಟ್ಟು ಬದುಕಿನ ಎಲ್ಲ ಚಾಕಚಕ್ಯತೆಗಳನ್ನು ಬಳಸಿ ಬೆಳೆಸಿದ ಮುದ್ದಿನ ಮಕ್ಕಳು ರೆಕ್ಕೆ ಬೆಳೆಸಿ, ಬೇರನ್ನು ತೊರೆದು ಹಾರಿ ಬಿಡುತ್ತಾರೆ! ಬಹಳ ನಿಗೂಢವಾಗಿ ಕಾಣಿಸುತ್ತಿದ್ದ ಬದುಕು ಕಣ್ಣ ಮುಂದೆ ನಗ್ನವಾಗಿ ನಿಲ್ಲುತ್ತದೆ!

ನಾವು ಕಾಣುವ, ಕೇಳುವ, ಓದುವ ಜಗತ್ತು ಯಾವ ಇಂಧನದ ಮೇಲೆ ನಡೆಯುತ್ತದೆ ಎಂದು ಅರಿವಾಗಿ ಎಲ್ಲ ಕುತೂಹಲಗಳು ಬಹುಮಟ್ಟಿಗೆ ‘ಠುಸ್ಸೆ’ನ್ನುತ್ತವೆ!

“ಬದುಕಿನ ಸುಖಗಳೆಲ್ಲ ಯಾಕೆ?” ನೀವು ಮುದುಕರು ಎಂಬಂತೆ ಮಕ್ಕಳು ಮತ್ತು ಸಮಾಜ ವರ್ತಿಸತೊಡಗುತ್ತದೆ. ಮಾಡುವ ಕೆಲಸಕ್ಕೆಲ್ಲ “ಹಿರಿಯರು ಮಾಡಿದ್ದು, ಹಳೇ ಕಾಲದ್ದು” ಅಂತ ಹೆಸರಿಟ್ಟು ನಮ್ಮನ್ನು ಜೀವಂತ ಪಳಯುಳಿಕೆಗಳನ್ನಾಗಿ ಮಾಡಿಬಿಡುತ್ತಾರೆ. ಬದುಕೆಲ್ಲ ದುಡಿದು, ಪ್ರತಿ ರೂಪಾಯಿಯನ್ನು ಮಿಗಿಸಿ ಕಟ್ಟಿಸಿದ ಮನೆಯನ್ನು “ನಿಮಗೆ ಇನ್ನೂ ಯಾಕೆ ಈ ದೊಡ್ಡ ಮನೆ, ಆಸ್ತಿ, ದುಡ್ಡು?” ಅಂತ ಕೇಳತೊಡಗುವ ಸಂಬಂಧಿಗಳು ಒಂದೊಂದಾಗಿ ಬಾಣಗಳನ್ನು ಎಸೆದು ನಲುಗಿಸುತ್ತಾರೆ. ಆಷ್ಟೇಕೆ, ಸೊಗಸಾದ್ದನ್ನು ಕೈಯಿಂದ ಮುಟ್ಟಿದರೆ ಕೆಲಸ ಮಾಡಿ ದಪ್ಪಗಾದ, ಸುಕ್ಕಲುಗಟ್ಟಿದ ಚರ್ಮ ಮೊದಲು ಅನುಭವಿಸಿದ ಅನುಭವವನ್ನು ಮಿದುಳಿಗೆ ರವಾನಿಸುವುದನ್ನು ನಿಲ್ಲಿಸಿ ತಗಾದೆ ತೆಗೆಯುತ್ತದೆ. ತಿಂದದ್ದು ಮೊದಲಿನಷ್ಟು ರುಚಿಸುವುದಿಲ್ಲ. ಹೀಗಾಗಿ ನಾವೂ ಮಣಿಯಬೇಕಾಗುತ್ತದೆ. ಅರೋಗ್ಯವೂ ವಿರೋಧವನ್ನು ಒಡ್ಡುತ್ತದೆ.

ಕಾಲದ ಜೊತೆ ದೇಹ ಪ್ರಕೃತಿ ಬದಲಾಗುತ್ತದೆ. ಅದರಂತೆ ದೇಹದಲ್ಲಿ ಆಗುವ ಬದಲಾವಣೆಗಳ ಬಗ್ಗೆ ವೈಜ್ಞಾನಿಕ ವಿಚಾರಧಾರೆಗಳು ಕೂಡ ಜನರಿಗೆ ತಿಳಿಯಬೇಕು. ಜನರು ಅದನ್ನು ನಿಧಾನಗೊಳಿಸಲು ಬಯಸಿದರೆ ಅದು ಅವರ ವೈಯಕ್ತಿಕ ಆಯ್ಕೆ. ವಯಸ್ಸನ್ನು ಬಂದಂತೆ ಆವಾಹಿಸಿ ಒಪ್ಪಿಕೊಳ್ಳುವ ಜನರನ್ನು ಕೂಡ ಸಮಾಜ ಗೌರವದಿಂದ ಕಾಣಬೇಕು. ಇವತ್ತಿನ ಸೆಲೆಬ್ರಿಟಿ ಪ್ರಪಂಚದಲ್ಲಿ ವಯಸ್ಸನ್ನು ಮುಚ್ಚಿಡುವ ಪ್ರಯತ್ನ ಅವಿರತವಾಗಿ ನಡೆಯುತ್ತಿದೆ. ಪ್ರಪಂಚದಲ್ಲಿ ಪ್ರತಿ ಕಾಲ ಮಾನಗಳು ಬದಲಾದಂತೆ ಬದುಕು ಹೊಸ ರೂಪ ಪಡೆದುಕೊಂಡು ಹೊಸ ನೀತಿಗಳನ್ನು ಅಳವಡಿಸಿಕೊಳ್ಳುತ್ತ ಸಾಗಿದೆ.

ಅರೋಗ್ಯದ ಬಗ್ಗೆಯೂ ಕಾಳಜಿ ಬೆಳೆದಂತೆ, ಜೀವನಶೈಲಿ ಕೂಡ ಬದಲಾಗುತ್ತಿವೆ. ಊಟ, ವ್ಯಾಯಾಮ ಮತ್ತು ಕೆಟ್ಟ ಚಟಗಳು ಇಳಿಯುತ್ತಿವೆ. ಹೀಗಾಗಿ ಬದುಕುವ ಕಾಲವೂ ಹೆಚ್ಚಾಗುತ್ತಿದೆ. ಕೈಗಾರೀಕರಣ ಚೆನ್ನಾಗಿ ಆಗಿರುವ ದೇಶಗಳಲ್ಲಂತೂ ಹೆಚ್ಚು ಕಾಲ ಬದುಕುವ ಹಿರಿಯರ ಸಂಖ್ಯೆಯೂ ಬೆಳೆಯುತ್ತಿವೆ. ಹೀಗಾಗಿ ಅವರಲ್ಲಿ ಮಧ್ಯಮ ವಯಸ್ಸಲ್ಲಿ ಚೆನ್ನಾಗಿ ಬದುಕನ್ನು ಅನುಭವಿಸುವ ಹಂಬಲಗಳು ಬೆಲೆಯುತ್ತಲೇ ಇವೆ. ಹಿರಿಯ ವಯಸ್ಸಿನವರು ಸಮಾಜದ ಎಲ್ಲ ಘಟಕಗಳಲ್ಲಿ ಅತಿ ಮುಖ್ಯವಾದ ವ್ಯಾಪಾರವನ್ನೂ, ಕೊಡುಗೆಗಳನ್ನೂ, ಪ್ರವಾಸಿಗರನ್ನೂ ಸೃಷ್ಟಿಸಿದ್ದಾರೆ.

ಮಕ್ಕಳು, ಮರಿ, ಸಮಾಜ, ಕೆಲಸ, ಸ್ನೇಹಿತರು ಎಲ್ಲರಿಗೂ ಒಂದಷ್ಟು ಸೇವೆ ಮಾಡಿದ ನಂತರ ತಮ್ಮ ಬದುಕಲ್ಲಿ ಸುಖ ಕಾಣುವ, ನಿಧಾನವಾಗುವ ದೇಹವನ್ನು ಸಂಭಾಳಿಸಿಕೊಳ್ಳುವ ಕಾಳಜಿ ಹಿರಿಯ ವಯಸ್ಸಿನವರಲ್ಲಿ ಮೂಡಿದೆ. ಇವರ ನಿಕಟವರ್ತಿಗಳೆಲ್ಲ ಜೊತೆಯಲ್ಲಿ ನಿಂತು ಅವರ ಬದುಕನ್ನು ಈ ಕಾಲದಲ್ಲಿ ಹಸನಾಗಿಸಿದರೆ ಅವರಿಗೆ ಅಷ್ಟೇ ಸಂತೋಷ.

ಮಿಡ್ ಲೈಫ್ ಕ್ರೈಸಿಸ್ ಎನ್ನುವುದಿದೆಯೇ?

ಹರೆಯದಲ್ಲಿದ್ದಂತೆ, ಎಳೆಯ ಮಧ್ಯವ್ಯಸ್ಕರಂತೆ ತಟಕ್ಕನೆ ದುಡುಕಿ ಮಾಡುವ ಕೆಲಸಗಳನ್ನು ಹಿರಿಯ ಮಧ್ಯ ವಯಸ್ಕರು ಮಾಡುವುದಿಲ್ಲ. ಯಾಕೆಂದರೆ, ಇವರಲ್ಲಿ ವೈವಾಹಿಕ ಜೀವನ, ಮಕ್ಕಳು, ದುಡಿಮೆ ಎಲ್ಲ ಒಂದು ಬಗೆಯ ತಹಬದಿಗೆ ಬಂದಿದ್ದರೂ, ಇತರೆ ಸಂಬಂಧಗಳು ಈ ಕಾಲದಲ್ಲಿ ಸಂಕೀರ್ಣವಾಗುತ್ತ ಸಾಗುತ್ತವೆ.

ಮಾಡುವ ಕೆಲಸ ಯಾವುದೇ ಇರಲಿ, ಆ ಕೆಲಸಗಳಲ್ಲಿ ಉಛ್ರಾಯ ಸ್ಥಿತಿಯನ್ನು ತಲುಪುವ ಕಾಲವಿದು. ಹಾಗಾಗಿ ತಮ್ಮ ಮೊದಲ ಹಂತದಲ್ಲಿ ಕಂಡ ಎಲ್ಲ ಕನಸುಗಳನ್ನು, ಅಭಿಲಾಷೆಗಳನ್ನು ಪೂರ್ಣಗೊಳಿಸಿಕೊಳ್ಳುವ ಕಾಲವಿದು.

ವೈಯಕ್ತಿಕ ಬದುಕು ಮತ್ತು ಕೆಲಸ ಎರಡರಲ್ಲೂ ಸ್ಥಿರತೆಯನ್ನು ಹಲವರು ಈ ಹಂತದಲ್ಲಿ ಅನುಭವಿಸುತ್ತಾರೆ. ಅಷ್ಟೇ ಅಲ್ಲ, ಈ ಮಧ್ಯವಯಸ್ಸಿನಲ್ಲಿ ಹಲವರು ಬದುಕಿನ ಬಗ್ಗೆ ಹಿನ್ನೋಟವನ್ನು ಹರಿಸುತ್ತಾರೆ. ತಮ್ಮ ಗುರಿಗಳನ್ನು ಮತ್ತೆ ಗುರುತಿಸಿಕೊಳ್ಳುತ್ತಾರೆ. ಅಭಿಲಾಷೆಗಳನ್ನು ನೆರವೇರಿಸಿಕೊಳ್ಳುತ್ತಾರೆ. ನೈತಿಕತೆಯ ಜಾಗೃತಿಯ ಹರಹನ್ನು ಬಲಗಳಿಸಿಕೊಳ್ಳುತ್ತಾರೆ. ಎಲ್ಲಕ್ಕೂ ಸಮಯ ಮಾಡಿಕೊಳ್ಳುತ್ತಾ ಸಮಾಜ ಕಟ್ಟಿದ ಬದುಕನ್ನು ನಿಜವಾಗಿ ಬದುಕುತ್ತಾರೆ. ಈ ರೀತಿಯ ಹಲವು ಮಿಡಿತಗಳನ್ನು ಹೊಂದಿದ ಮಧ್ಯವಯಸ್ಸಿನ ವಯಸ್ಕರಲ್ಲಿ ‘ಮಿಡ್ ಲೈಫ್ ಕ್ರೈಸಿಸ್’ ಇದೆ ಎಂಬುದು ಪೂರಾ ಸುಳ್ಳು ಎನ್ನುತ್ತದೆ ಮನೋ ವಿಜ್ಞಾನ.

ಮಧ್ಯವಯಸ್ಕರಲ್ಲಿ ಬದುಕು ಸಮಾಧಾನಕರ, ಹಿತಕರ ಮತ್ತು ಶಾಂತಿಯುತವಾದ ಮನಃಸ್ಥಿತಿಯನ್ನು ಹೊಂದಿರುತ್ತದೆ. ಮಧ್ಯವಯಸ್ಕರಲ್ಲಿ ತಾವು ಶುರುಮಾಡಿದ ಬದುಕಿನ ಯಾನದ ಮುಖ್ಯ ಭಾಗದ ಹುಟ್ಟುಹಾಕುವಿಕೆಯಲ್ಲಿ ಸಂಪೂರ್ಣ ನಿರತವಾಗಿರುವ ಕಾರಣ ಇವರಲ್ಲಿ ಸಮಾಜಕ್ಕೆ ಹಿತ ತರುವಂತಹ, ಅದರೊಡನೆ ಹೊಂದಿ ನಡೆವ, ತಮ್ಮೊಡನೆ ಅಂಟಿಕೊಂಡ ಸಂಭಂಧಗಳ ಜೊತೆ ಒಡಂಬಡುವ ಮನೋಗುಣವಿರುತ್ತದೆ. ಸಮಾಜಕ್ಕೆ, ಸಂಸಾರಗಳಿಗೆ ಧಕ್ಕೆ ತರುವ ಭಾವನೆಗಳು ಇವರಲ್ಲಿ ಕಡಿಮೆ. ಸಂಸಾರದ ಸುರಕ್ಷಿತ ಕವಚದಲ್ಲಿ ಬದುಕು ನಡೆಸುವ ಹಂಬಲ ಇರುವ ಇವರಲ್ಲಿ ಕ್ರಿಮಿನಲ್ ಗುಣಗಳು ಕಡೆಮೆಯಿದ್ದು ಇತರರನ್ನು ಅರ್ಥ ಮಾಡಿಕೊಳ್ಳುವ ಸ್ವಭಾವವಿರುತ್ತದೆ. ಹಾಗಾಗಿ ಇವರಿಂದ ಸಮಾಜದಲ್ಲಿ ಫಲಪ್ರದವಾದ ಇನ್ನೊಂದು ಅಧ್ಯಾಯ ಶುರುವಾಗುತ್ತದೆ.

ಜನ ಹುಟ್ಟುತ್ತಾರೆ, ಬೆಳೆಯುತ್ತಾರೆ, ಬದುಕುತ್ತಾರೆ ಮತ್ತು ಸಾಯುತ್ತಾರೆ. ಇದು ಸಹಜ ಮತ್ತು ಪ್ರಕೃತಿ ನಿಯಮ. ಈ ವಯಸ್ಸಾಗುವಿಕೆ, ಭ್ರಮನಿರಸನ, ದೈಹಿಕ ಸಾಮರ್ಥ್ಯದ ಕುಸಿತ ಇವೆಲ್ಲ ಸಹಜ ಕ್ರಿಯೆಗಳು. ಹಿರಿಯ ಮಧ್ಯಾವಸ್ಥೆಯ ಬದಲಾವಣೆಗಳನ್ನು ಘನಘೋರ ಚಿತ್ರ ಅಂತ ಮೂಗು ಮುರಿಯುವ ಆಗತ್ಯವಿಲ್ಲ. ಮಧ್ಯವಯಸ್ಕರರು ಬದುಕಿನಲ್ಲಿ ಎದುರಿಸುವ ತಾಕಲಾಟಗಳನ್ನು ಕ್ರೈಸಿಸ್ ಅಥವಾ ಸಂಕಷ್ಟ ಅಂತ ಕರೆಯದೆ, ಮಧವಯಸ್ಸಿನವರ ಮಿಡಿತಗಳೆಂದು ತಿಳಿದರೆ ಅದು ಹೆಚ್ಚು ಸೂಕ್ತವಾಗಬಲ್ಲದೇನೋ. ಪ್ರಕೃತಿ ನಿಯಮದಂತೆ 45-60 ವಯಸ್ಸಿನವರ ದೇಹ 20-30ರ ವಯಸ್ಸಿನಲ್ಲಿ ಕೆಲಸ ಮಾಡಬಲ್ಲದೇ? ಹಾಗೆ ಮಾಡಬೇಕೆಂದರೆ ಅದು ಪ್ರಕೃತಿಗೆ ವಿರೋಧವಾದ ನಿರೀಕ್ಷೆಯಾಗಿಬಿಡುತ್ತದೆ! ಇದನ್ನೇ ಈ ಕಾಲದವರ ರೀತಿ ಹೇಳಬಹುದಾದರೆ, ದೇಹ ತನ್ನ ಪ್ರತಿ ವಯಸ್ಸಾಲ್ಲೂ ನಿರ್ದಿಷ್ಟ ರೀತಿಯಲ್ಲಿ ಕೆಲಸ ಮಾಡುವಂತೆ ಪ್ರೋಗ್ರಾಂ ಆಗಿರುವ ಯಂತ್ರ. ಮಿದುಳು ಸೆಂಟ್ರಲ್ ಪ್ರೊಸೆಸ್ಸರ್ ತರಹ ದೇಹವನ್ನು, ನೆನಪುಗಳನ್ನು, ಯೋಚನೆಗಲನ್ನು ನಿಯಂತ್ರಿಸುವ ಅಂಗ. ಮಿದುಳು ಕೂಡ ಪ್ರಕೃತಿ ನಿಯಮಕ್ಕನುಸಾರವಾಗಿ ಕೆಲಸ ಮಾಡುತ್ತದೆ. ಪ್ರಯತ್ನದಿಂದ ನಾವು ಅಲ್ಪ ಸ್ವಲ್ಪ ವ್ಯತ್ಯಾಸಗಳನ್ನು ಮಾಡಿ ಜಗತ್ತನ್ನು ಬೆರಗುಗೊಳಿಸ ಬಹುದಾದರೂ ಪರ್ಕೃತಿ ನಿಯಮವನ್ನು ಸಂಪೂರ್ಣ ತಡೆಗಟ್ಟಲಾರದು. ಇದು ವಿಜ್ಞಾನ, ಅಧ್ಯಾತ್ಮ ಮತ್ತು ನಿತ್ಯ ಸತ್ಯ!

ಮಧ್ಯವಯಸ್ಸು ಬಹಳ ಸಂದಿಗ್ಧತೆಗಳನ್ನು ಸೃಷ್ಟಿಸಿ, ಜೀವನದ ಸಂಕೀರ್ಣ ಭಾಗದಲ್ಲಿ ನಡೆವ ಸಮಯ. ಇಲ್ಲಿ ಉಂಟಾಗುವ ತಳಮಳಗಳು ಇದನ್ನು ಸಂಕಷ್ಟಕರ ಎನ್ನುವಂತೆ ಮಾಡಿದರೂ ಅದು ಕೂಡ ಸೃಷ್ಟಿಯ ಅಲಿಖಿತ ನಿಯಮವೇ. ಹಾಗಾಗಿ ಇದು ಸಹಜ ಕೂಡ. ಹೀಗಾಗಿ ‘ಕ್ರೈಸಿಸ್’ ಎನ್ನುವ ಪದವನ್ನು ವೈಜ್ಞಾನಿಕ ಲೋಕ ಒಪ್ಪುವುದಿಲ್ಲ.

ಈ ಕಾಲದಲ್ಲಿ ನಡೆವ ದೈಹಿಕ ಬದಲಾವಣೆಗಳು ನಮ್ಮ ಗ್ರಂಥಿಗಳು ಸ್ರವಿಸುವ ಜೀವ ರಾಸಾಯನಿಕಗಳಿಂದಲೇ ಬದಲಾಗುವುದು. ಕಾಮನೆಗಳು ಕೂಡ. ಮಾನಸಿಕ ಸ್ಥಿತಿ ಮಾತ್ರ ಅವರವರು ಬದುಕನ್ನು ರೂಪಿಸಿಕೊಂಡಂತೆ ಬೇರೆ-ಬೇರೆಯಾಗಿರಬಹುದು. ಜನರ ಮಧ್ಯೆ ಹಲವು ಭಿನ್ನತೆಗಳಿರಬಹುದು.

ಮಧ್ಯವಯಸ್ಸು ಸಂಕಷ್ಟದ್ದಲ್ಲ. ಈ ವಯಸ್ಸಲ್ಲಿ ಗಂಡಸು ಮತ್ತು ಹೆಂಗಸಿನ ದೇಹ ಪೂರ್ಣ ಪ್ರಬುದ್ಧತೆಯನ್ನು ಗಳಿಸಿರುತ್ತದೆ. ಮಿದುಳು ತನ್ನ ಎಲ್ಲ ಚಟುವಟಿಕೆಗಳನ್ನು ಸಮತೋಲದಲ್ಲಿ ಉಳಿಸಿಕೊಂಡಿರುವ ಕಾಲವಿದು. ಬದುಕಿನ ಅತ್ಯಂತ ಫಲಪ್ರದವಾದ ಕಾಲ ಅಂದರೆ ಅದು ಮಧ್ಯ ವಯೋಮಾನದ್ದು. ಮಿದುಳು ಈ ಕಾಲದಲ್ಲಿ ತನ್ನ ಗರಿಷ್ಟ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತದೆ.

ಕಾಲಕ್ರಮೇಣವಷ್ಟೆ ನಮ್ಮ ದೇಹದಲ್ಲಿ ಟೆಸ್ಟೋಸ್ಟೀರೋನ್, ಆಂಡ್ರೋಜನ್ ಗಳಂತಹ ಜೀವ ರಾಸಾಯನಿಕಗಳು ಕಡಿಮೆಯಾವುದು. ಇದರ ಜೊತೆ ನಮ್ಮ ದೈಹಿಕ ಚಟುವಟಿಕೆಗಳು ಕೂಡ. ಇದನ್ನು ಒಪ್ಪಿಕೊಳ್ಳಲು ಹೆಣಗುವ, ವಿರೋಧಿಸುವ ಮಂದಿಯಷ್ಟೆ ನಿರಾಕರಣೆಯಲ್ಲಿ ಪ್ರಕೃತಿಯನ್ನು ತಿರಸ್ಕರಿಸುವುದು.

ಇಂದಿನ ಮಧ್ಯವಯಸ್ಕರ ಮಿಡಿತಗಳು ಭಿನ್ನವೇ?

ಇವತ್ತಿನ ಮಕ್ಕಳ ತುಡಿತಗಳು ಹಿಂದಿನ ತಲೆಮಾರಿನ ಮಕ್ಕಳಿಗಿನ್ನ ಭಿನ್ನ. ಯೌವನಿಗರಿಗೂ ಇದೇ ಅನ್ವಯವಾಗುತ್ತದೆ. ಹೀಗೆಂದ ಮೇಲೆ ಮಧ್ಯ ವಯಸ್ಸಿನವರ ನಿಲುವೂ ಬದಲಾಗುತ್ತಿರುವ ಕಾಲವಿದು. ಬದಲಾಗುವುದು ಕೂಡ ಕಾಲ ನಿಯಮವೇ ಅಲ್ಲವೇ? ಹಾಗಾಗಿ ಮಧ್ಯ ವಯಸ್ಸಿನವರ ಮಿಡಿತಗಳೂ ಬದಲಾಗುತ್ತಿವೆ.

ಇವತ್ತಿನ ಮಧ್ಯವಯಸ್ಕರು ಕೆಲಸದಲ್ಲಿ ಒಂದು ಹಂತ ತಲುಪುತ್ತಿದ್ದಂತೆ ತಮ್ಮ ಬದುಕಿನ ಬಗ್ಗೆ ಹಿನ್ನೋಟ ಹರಿಸುವುದು ಸಾಮಾನ್ಯವಾಗಿದೆ. ವ್ಯಾಯಾಮ, ಊಟ, ತೂಕ ಎಲ್ಲದರಲ್ಲೂ ಸಮತೋಲನ ಕಾಣಲು ಇವರು ಹಾತೊರೆಯುತ್ತಿದ್ದಾರೆ. ಹೆಚ್ಚಿನ ಸಾಹಸ ಕ್ರೀಡೆಗಳಲ್ಲಿ ತೊಡಗಿ ಕೊಳ್ಳುತ್ತಿದ್ದಾರೆ. ತಮ್ಮ ಕನಸುಗಳನ್ನು ಬೆಂಬತ್ತಿ ಹೋಗುತ್ತಿದ್ದಾರೆ. ಹೆಚ್ಚು ಪ್ರವಾಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಸೌಂದರ್ಯಕ್ಕೆ, ಮೈಕಟ್ಟಿಗೆ ಮತ್ತು ಅರೋಗ್ಯಕ್ಕೆ ಇನ್ನಿಲ್ಲದ ಕಾಳಜಿಯನ್ನು ತೋರುತ್ತಿದ್ದಾರೆ.

ಮಧ್ಯವಯಸ್ಸಿನ ನಮ್ಮ ಜೀವಿತ ಕಾಲ ಅತಿ ಮುಖ್ಯವಾದ್ದು. ಸಂಕೀರ್ಣವೂ ಹೌದು. ಮಧ್ಯವಯಸ್ಸಿನವರಿಗಾಗಿ ಮತ್ತೊಂದು ಹಬ್ಬವನ್ನು ಉದ್ಯಮಗಳು ಹುಟ್ಟುಹಾಕುವ ಅಗತ್ಯವಿಲ್ಲದಿದ್ದರೂ, ಸಮಾಜದಲ್ಲಿ, ದೇಶಗಳಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಹಿಂದಿನ ಮತ್ತು ಮುಂದಿನ ಪೀಳಿಗೆಗಳಿಗೆ ಕೊಂಡಿಗಳಾಗಿ ಮಧ್ಯವಯಸ್ಸಿನವರ ಪಾತ್ರ ನಿರಂತರವಾಗಿ ಸಾಗಿದೆ ಎಂದೇ ನನಗನಿಸುತ್ತದೆ.

ಡಾ. ಪ್ರೇಮಲತ ಬಿ

ದಂತವೈದ್ಯೆ. ಕಳೆದ 15 ವರ್ಷಗಳಿಂದ ಇಂಗ್ಲೆಂಡಿನಲ್ಲಿ ವಾಸ. ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ. ಹಲವಾರು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ. ಕಥೆ, ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನಿತರು.

Share

Leave a comment

Your email address will not be published. Required fields are marked *

Recent Posts More

 • 6 days ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 7 days ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 7 days ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 1 week ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  6 days ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  3 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  3 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...